ಬೆಳಕು
ಹರಿದ ಮೇಲೆ
ಸೂರ್ಯನಿಗೆ ಎದುರಾಗಿ
ಒಬ್ಬೊಂಟಿ ’ವಾಕಿಂಗು’
ಪೂರ್ವದ ಹಳ್ಳಿಯೆಡೆಗೆ

ಮಿರ ಮಿರ ಮಿಂಚುವದು
ಗುಳಿಬಿದ್ದ ಕರಿಟಾರು ರಸ್ತೆ
ಸೂರ್ಯಕಿರಣದಿ ತೊಯ್ದು
ಬಿದ್ದು
ಮೊಣಕಾಲು ಒಡೆದುಕೊಂಡ
ಹುಡುಗ

ರಸ್ತೆ ಹಾಕಿದ್ದು
ನಿನ್ನೆ ಮೊನ್ನೆ

ಹಾದಿಯ ಇಬ್ಬದಿಗೆ ನಿಂತ
ಲೈಟು ಕಂಬಗಳು
ಎಲ್ಲಿಂದ ಎಲ್ಲಿಗೋ ಹರಿದ
ತಂತಿಗಳು
ಬೆಳಕು ಯಾರಿಗೆ?
ಸುಳಿ ಕಡಿದ
ನೆಡು ತೋಪು ಕೆಳಗೆ
ಚಿಗುರು ಚಾಚುವದೆಲ್ಲಿಗೆ?

ಅನ್ನವರಸಿ
ಹಕ್ಕಿ
ಗೂಡು ಬಿಟ್ಟಂತೆ
ಹಿಂಡು ಹಿಂಡು ಹಳ್ಳಿಯಿಂದ
’ಡಿಲ್ಲಿ’ ಕಡೆಗೆ
ಕೂಲಿಯರಸಿ ಕೂಸು
ಕುನ್ನಿಯ ಜೊತೆ ಅವ್ವಂದಿರು
ಅಪ್ಪಂದಿರು

ಸೈಕಲ್ಲು ಹ್ಯಾಂಡಲಿಗೆ ತೂಗುಬಿದ್ದ
ನಾಟಿಕೋಳಿ
ಈಗಲೂ ಮೊಸರು ಮಾರುವ
ಮುದುಕಿ
ಕಟುಕ ಇಮಾಂಸಾಬಿ
ಯ ಲೂನಾ ಏರಿ ಹೊರಟ

ಮರಿ ಕುರಿ
ನಿತ್ಯ ಜೀವನದ ’ಕ್ಯಾನ್‌ವಾಸ್’
ನೊಳಗಣ ಮಾಸದ ಬಣ್ಣಗಳು

ಬಿಸಿಯೂಟದ ಆಸೆಗೆ
ಶಾಲೆಯತ್ತ ಪಾಟಿಚೀಲ ಹೊತ್ತು
ಬರಿಗಾಲ ಹುಡುಗರು
ಚಿತ್ತ ಹೊರಳುವದು ಭಾರಹೊತ್ತ
ಕತ್ತೆಯತ್ತ

ಇಲ್ಲ
ಮೊದಲಿನಂತೆ ಇಲ್ಲಿ
ಕಾಗೆ ಗುಬ್ಬಿ ಕಬ್ಬಕ್ಕಿ

ಹೊಲದ ಯಾವ ಮೂಲೆಯಲ್ಲೂ
ಯರೆನೆಲದ ಬಿರುಕಿಗೆ
ಖಾಲಿ ಆಕಾಶದ ಮೌನವೇ
ಉತ್ತರ

ನಡೆದದ್ದು ಸಾಕು
ಹಿಂತಿರುಗಬೇಕು
ಬಂದ ದಾರಿಯಲೆ ತಲೆ
ಸುಡುತ್ತಿತ್ತು ಬೆನ್ನೇರಿದ ಬಿಸಿಲು
ಮೇಲೇರಿ ಬಣ್ಣ ಬದಲಿಸಿದ್ದ
ಸೂರ್ಯ
*****