ಇಷ್ಟೊಂದು ದೊಡ್ಡ ಬಯಲಲ್ಲಿ
ನಾನು ಒಂದು ನಕ್ಷತ್ರ ನೀನು
ಒಂದು ನಕ್ಷತ್ರ. ನಾವಿಬ್ಬರೂ
ನಮ್ಮಿಬ್ಬರಿಗೆ ಮಾತ್ರ ಗೊತ್ತು.
ಬೆಳಕನ್ನು ಲಕ್ಕ ಮಾಡೋಣ.
ಮುಕ್ಕಾಲು ಚಂದ್ರನನ್ನು ಎಬ್ಬಿ
ಕಾಫೀ ಬಟ್ಟಲಿಗೆ ಹಾಕಿಕೊ, ತಣ್ಣಗಿರುತ್ತದೆ.

ಇಣುಕಿನೋಡು ಏನೇನು ಕಾಣುತ್ತದೆ-

ತೆಂಗಿನ ಮರಗಳು ಸುಮ್ಮನೆ ನಿಂತಿವೆ.
ಮೀನು ಕಣ್ಣಿನ ಹುಡುಗಿ
ಮಡಕೆಯಲ್ಲಿ ನೀರು ತಂದು
ಮೇಕೆಯ ಜೊತೆಯಲ್ಲಿ ಅಡುತ್ತಿದ್ದಾಳೆ.
ಬಯಲಲ್ಲಿ ಒಂದು ದನ ಮೇಯುತ್ತಿದೆ.
ಸಿಂಹವನ್ನು ಕ೦ಡರೆ ಭಯವೋ
ಚೇಳನ್ನು ಕಂಡರೆ ಭಯವೋ ?

ಚಂದ್ರ ಕರಗಿ ಹೋದನೇನು ನೋಡು.

ಹಸುವಿನಂಥವನು ನಾನು.
ನನ್ನ ಈಜು ಕೊಳಕ್ಕೆ ಬಂದ ಮೀನು
ತನ್ನ ಯಜ್ಞಕ್ಕೆ ನನ್ನ, ಬಲಿ ಏಕೆ ಬಯಸಿದ್ದು?
ಮಾತಿನ ಕುಟುಕಿಗೆ ಹೆದರಿ ನುಣುಚಿಕೊಂಡದ್ದು?

ನಿನ್ನ ಸಾಲದ ಬೆಳೆಕನಲ್ಲಿ ಅವರು ಇವರು
ನನ್ನ ಮುಖ ನೋಡಬೇಕಾಗಿಲ್ಲ.
ನನ್ನ ಸಿಂಹಾಸನಕ್ಕೆ ಮೂವತ್ತೆರಡು ಮೆಟ್ಟಲಿವೆ.
ಒಂದೊಂದು ಮೆಟ್ಟಲಿಗೂ ಒಂದೊಂದು ಬೊಂಬೆ
ನನ್ನ ಒಂದೊಂದು ಕಥೆ ಹೇಳುತ್ತದೆ, ಬಂದು ನೋಡು,
ನನ್ನ ಮನಸ್ಸಿಗೆ ಸಾವಿರ ಮುಖ ಇದೆ,
ಬೆಳಕಿಗೆ ಸಾವಿರ ದಾರಿ ಇದೆ.

ರುಚಿಯಾದ ಮಾತಿನಲ್ಲಿ ನನ್ನ ಕತೆ ಹೇಳಲಾರೆ.
ನಿನ್ನ ಭಾಷೆಯಲ್ಲಿ ನನ್ನ ಅರ್ಥ ನನ್ನ ಇಷ್ಟದ ಹಾಗೇ
ಉಳಿದೀತೇನು ?

ಬೆಳೆಗಿನ ಜಾವದ ರೈಲು ಕೂಗುತ್ತಿದೆ. ನಕ್ಷತ್ರಕ್ಕೂ
ನಕ್ಷತ್ರಕ್ಕೂ ತುಂಬ ದೂರ……….
*****