ಮುಗಿಲು ನೋಡು ಮಹವ ನೋಡು
ಜಡದ ಮೇಲಿದೆ ಜಂಗಮಾ
ಒಳಗು ನೋಡು ಬೆಳಗು ನೋಡು
ವಿಶ್ವ ಕೂಡಲ ಸಂಗಮಾ

ಕಲ್ಲು ಗುಡ್ಡಾ ಮುಳ್ಳುಗಾಡು
ಮೇಲೆ ಮೌನದ ನೀಲಿಮಾ
ವಿರಸ ಮಾಲೆ ರಸವೆ ಮೇಲೆ
ಶಾಂತ ಸುಂದರ ಪೌರ್ಣಿಮಾ

ಬೇಡ ಜಾಢ್ಯಾ ಬೇಡ ಮೌಢ್ಯಾ
ಆಗು ಸಿಡಿಲಿನ ಜಂಗಮಾ
ನೋಡು ಹಗಲು ನೀಡು ಹೆಗಲು
ಕೂಡು ಕಡಲಿನ ಸಂಗಮಾ

ಆತ್ಮರತಿಯಾ ಗಾನ ಜೇನಿಸು
ಮೌನ ಮೌನಕೆ ಚುಂಬಿಸು
ದಾಟು ಅನ್ನತ ಆಗು ಅಮೃತ
ಶಿವನ ಶಿಲ್ಪವ ತುಂಬಿಸು
*****