ಸರಿಗೆಯಲಿ ಸಿಲುಕುತಿದೆ
ಹೃದಯಸ್ವರಂ,
ಹೃದಯದಲಿ ಕಲುಕುತಿದೆ
ವಿರಹಜ್ವರಂ;
ಎತ್ತ ನಡೆದವನೆಂದು
ಮತ್ತೆನಗೆ ಬಹನೆಂದು
ಮನಸಿನೋಪಂ,
ಬಾಗಿಲೊಳೆ ನಿಲುಕುತಿದೆ
ನಯನ ದೀಪಂ.
ಮರಳುವೊಸಗೆಯ ಬೀರಿ
ಗುಡುಗು ಮೊಳಗೆ,
ಮನೆಯ ದಾರಿಯ ತೋರಿ
ಮಿಂಚು ತೊಳಗೆ,
ಬಂದರೆಲ್ಲಿದರೆಲ್ಲ,
ನೀನನಿತೆ ಬಂದಿಲ್ಲ
ವೇಕೆ ನಲ್ಲ?
ಮುಗಿಲ ಸಜ್ಜೆಯ ಭೇರಿ
ಕೇಳಿಸಿಲ್ಲ?
ಬಸಿರೊಳೆಮ್ಮಯ ಕೂಸು
ಬಂದಂದಿನಿಂ,
ನವಿಲ ಮದುವೆಯ ಲೇಸು
ಸಂದಂದಿನಿಂ,
ತೆರಳಿನ್ನು ಮರಳಿಲ್ಲ;
ನಿನ್ನೊಸಗೆ ನನಗಿಲ್ಲ
ದೊಲೆವೆನಿಲ್ಲಿ,
ಗೂಡುಬೆಳಕೊಲು ಬೀಸು
ವಿರುಳಿನಲ್ಲಿ.
ಹಾಲನೂಡಿಸೆ ಹುಬ್ಬೆ
ಹಸುಳೆ ತೆನೆಗೆ,
ಬತ್ತಿದೆದೆಯಕಟ್ಟಬ್ಬೆ
ಗಿಹುದೆ ನನಗೆ?
ನುಡಿಗೆ ನುಡಿ ಮೂಡಿಲ್ಲ,
ಮಗುವಿನಡಿ ಕೂಡಿಲ್ಲ
ದನಿತರೊಳಗೆ
ಸೆಳೆದಳದನಿಳೆ ತಬ್ಬೆ
ತನ್ನ ಬಳಿಗೆ.
* * * *
ಎದೆಯ ಬಯಕೆಯ ಗನಿಯೊ
ಳೊಗೆದ ರನ್ನ
ಎವೆಯನೊಲ್ಲದ ಹನಿಯೊ
ಲುದುರಿತೆನ್ನ!
ಇಲ್ಲಿ ನೀನಿರೆ, ನಲ್ಲ,
ಅಂತಾಗುತಿರಲಿಲ್ಲ-
ಇನನಿಲ್ಲದೆ
ಕಮಲಮದು ಕಮಲಿನಿಯೊ
ಳಿರಬಲ್ಲುದೆ?
ಬರದಿ ನೀರಗೆವಲ್ಲಿ
ನಿಧಿಯನೆಟಕಿ
ಪಡೆದಣುಗನೊಗೆದಲ್ಲಿ
ವಿಧಿಯ ಕಟಕಿ
ಗಿಡುಗನೆನೆ ಮರಿಗಿಳಿಯ
ತುಡುಗೆ ನೀನಿರೆ ಬಳಿಯ
ಲಿಂದು, ನಲ್ಲ,
ಚಿಲಿಮಿಲಿವ ಗೂಡಲ್ಲಿ
ಮೌನವಲ್ಲ!
ಬಳ್ಳಿಗೆಲ್ಲವ ಸಲ್ಲಿ
ಸುವಳೆ ಧರಣಿ?
ಬೆಳಕವಳಿಗಕಟೆಲ್ಲಿ
ತರದೆ ತರಣಿ?
ಧರಣಿಯಕ್ಕರೆ ಸವಿಸೆ,
ತರಣಿ ಮೋರೆಯನವಿಸೆ,
ಬಳ್ಳಿ ತಾರೆ,
ತಂದೆ ತಾಯವರಲ್ಲಿ
ಯಾರ ದೂರೆ?
ಕುರುಡನರಗನಸಂತೆ
ಬಗೆದು ಬೇಯೆ,
ಗರಿಮುರಿದ ಖಗದಂತೆ
ನೆಗೆದು ನೋಯೆ,
ನನ್ನ ಬಾಳಕಟಿನಿಸೆ?
ಹಣ್ಣು ಹುಳುವಿನ ತಿನಿಸೆ?
ಎದೆಯ ತಿರುಳು
ಕೊರೆಯೆ ಸೋರುವ ಚಿಂತೆ
ಹಗಲು ಇರುಳು!
* * * *
ಸರಿದೊಮ್ಮೆ ಬರಸಲ್ಲ
ದಲರಿನಳಿವೊ?
ಸರಿದಂತೆ ಬರಬಲ್ಲ
ಉಡುವಿನಿಳಿವೊ?
ಮರುತರಂಗಿಪ ತೆರೆಯೊ?
ಹುಳು ಪತಂಗಿಪ ಸೆರೆಯೊ?
ಮರಳಿ ಚನ್ನ
ಬಹನೆ, ಬಾರನೆ, ನಲ್ಲ,
ಬಸಿರೊಳೆನ್ನ?
ಎಳೆಯೊಳಿಂಗಿದ ಗೀತಿ
ಮಾರುಲಿಸದೆ,
ಸೊಡರೊಳಾರಿದ ಜ್ಯೋತಿ
ಮಾರುರಿಸದೆ,
ಮರುಕಣಿಸಲೆಂತೆರೆಯ?
ಮರಳಿ ಮುದ್ದಿನ ಮರಿಯ
ನಳವೆ ದೊರೆಯೆ?
ಮುತ್ತು ಮೊಳೆವುದೆ ಸ್ವಾತಿ
ಗಿರಿಯೊಳೆರೆಯೆ?
ಕೋರಿಕೆಯೊಳಡಿಮೆಟ್ಟಿ
ಮುಂದೆ ಪಾರೆ,
ಶಂಕೆ ಹಾವಸೆಗಟ್ಟಿ
ಮನಸು ಜಾರೆ,
ಮೇದ ಮೇವನೆ ಮೇವ
ಕಟ್ಟು ಕಂಬದ ಗೋವ
ತೆರದೊಳೆನ್ನ
ನೆನದ ನೆನವೊಳೆ ದಿಟ್ಟಿ
ಗೊಳುವೆ ನಿನ್ನ.
ಬಲೆಯ ನೀರಲಿ ಸುತ್ತ
ಬರುವ ತನ್ನ
ನೆಳಲನಿನೆಯಂ ಗೆತ್ತ
ಮೀನೊಲೆನ್ನ
ಮನದಿ ಸುಳಿಯುವ ನಿನ್ನ
ನೆನವೆ ನೀನೆನುತೆನ್ನ
ದಿನವ ಕಳೆವೆ-
ಕರೆ ಎತ್ತ ತೆರೆಯತ್ತ
ಮರಳದೊಳವೆ?
*****