ಕನ್ನಡವೆ ಸತ್ಯ ಕನ್ನಡವೆ ನಿತ್ಯ
ಕನ್ನಡರೆ ನಿತ್ಯ ಸತ್ಯ
ಕನ್ನಡವ ಮರೆತ ಈ ಕಾವ್ಯ ತುಡಿತ
ಎಷ್ಟಿದ್ದರೂನು ಮಿಥ್ಯ
ಕಣ್ಸೆಳೆದರೇನು ಮಲ್ಲಿಗೆಯ ಮಾಲೆ
ಕನ್ನಡಕು ಅಲ್ಲ ಮಿಗಿಲು;
ನಲ್ವತ್ತ‌ಏಳು ಅಕ್ಷರವ ಆಯ್ದು
ಜೋಡಿಸಲು ಸಾಲು ಸಾಲು!
ಸ್ವರ ಹರಿಸಿದಂತ ಕೋಗಿಲೆಯ ಕೊರಳು
ಕಿವಿಗಳಿಗೆ ಇಂಪು ಅಹುದು;
ಏನಾದರೇನು? ಕನ್ನಡದ ನುಡಿಯ
ಎತ್ತರಕೆ ಮೀರಿ ಬರದು!
ಏನೆಲ್ಲ ಇರಲಿ ಬಹುದೆಲ್ಲ ಬರಲಿ
ಕನ್ನಡವು ಇರದೆ ಶೂನ್ಯ
ಮನೆ ತುಂಬಲೇನು ಸಿರಿ ಮುತ್ತು ರತ್ನ
ಸಮವಹುದೆ ಇದಕೆ ಅನ್ಯ?
*****