ನೆಲ ಅಪ್ಪಿ ಹರಿಯಬೇಕು, ಸಂದುಗೊಂದುಗಳಲ್ಲಿ
ನುಗ್ಗಿ ತುಂಬಿಸಬೇಕು, ತಡೆದರೂ ಬಡಿದರೂ
ಹಿರಿಬಂಡೆಗಳ ನಡುವೆ ಮೊರೆದು ತೂರಿರಬೇಕು,
ದಂಡೆ ಮಣ್ಣನ್ನೊತ್ತಿ ತಂಪನ್ನೂಡಿ ಗಿಡಮರದ
ಸಾಲಿಗೆ ಉಣಿಸಬೇಕು; ನಡುವೆ ಸಿಕ್ಕುವ ಹಳ್ಳ,
ತೊರೆಯ ತೆಕ್ಕಗೆ ಸೆಳೆದು ತನ್ನದಾಗಿಸಬೇಕು;
ಒಮ್ಮೊಮ್ಮೆ ಮೈಬಿಚ್ಚಿ ದಡದಿನ್ನೆಗಳ ಕೊಚ್ಚಿ
ಹುಚ್ಚೇರಿ ಭೋರ್ಗರೆದು ಅಬ್ಬಾ! ಎನ್ನಿಸಬೇಕು;
ಎದುರು ಬರುವರು ಗಂಗೆ ಯಮುನೆ, ನಮ್ರತೆಯಿಂದ
ಬಾಗಿ, ಒಂದಾಗಿ ಸಾಗರಕೆ ಧಾವಿಸಬೇಕು;
ಅಷ್ಟೆಲ್ಲ ಕಂಡರೂ ಉಂಡರೂ ಹಮ್ಮುಗಳ
ತೊರೆದು, ಶರಧಿಯ ನೆರೆದು ಇಲ್ಲದೆಯೆ ಇರಬೇಕು.

ಹೀಗೆ ನೆಲ ಒಪ್ಪಿ ಬಾಳಿದ ಸತ್ವ ಮುಗಿಲಾಗಿ ಮೇಲಕೇರುವುದು
ಎಷ್ಟೆ ಮೇಲಿದ್ದರೂ ಮಳೆಯಾಗಿ ಕೆಳಗಿಳಿದು ನೆಲಕ್ಕೆ ಸೇರುವುದು.
*****