ಆ ದನಿಯನ್ನೊಮ್ಮೆ ಹೇಳಹೆಸರಿಲ್ಲದಂತೆ
ಹೂಳಿಬಿಡಬೇಕು ನೆಲದೊಳಕ್ಕೆ
ಇಳಿಯುವಂತೆ ರಸಾತಳಕ್ಕೆ
ಪತ್ತೆ ಹತ್ತದ ಭೂಗರ್ಭ ಕೇಂದ್ರಕ್ಕೆ

ಅಪ್ಪಿತಪ್ಪಿಯೂ ಕೇಳೀತು ನೋಡು!
ಅದರಲ್ಲಿ ಮೈ ಹಣ್ಣಾಗುವ ಮದ್ದಿದೆ
ಹದ್ದುಗಣ್ಣು ಕೆಕ್ಕರಿಸುವ ಮೋಡಿ ಇದೆ
ಮಣ್ಣ ಮುಕ್ಕಿಸುವ ಮಾಟವಿದೆ

ಬಂದೀತು ಗವಿಯೊಳಗಿಂದ
ಸೂಜಿಮೊನೆಯ ಮೂಲಕ
ರೇಶ್ಮೆ ದಾರ ಏರಿ ಬರುವಂತೆ
ಮೇಲೆ ಬಂದರೆ ಸುತ್ತೀತು ನಿನ್ನ
ಹೆಬ್ಬಾವಾಗಿ

ಆದ್ದರಿಂದ ಆ ಅನಾದಿ ಮೂಳ ದನಿಯ
ಚಿಗುರಿನಲ್ಲೇ ಹಿಚುಕಿ
ಒಳಗೊತ್ತಿ ಹೂಳಿಬಿಡು
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)