ಜಡ್ಡಿನ ಜಾಪತ್ರಿ

ಜಡ್ಡಿನ ಜಾಪತ್ರಿ

ಚಿತ್ರ: ಪಿಕ್ಸಾಬೇ

ಮಳೆ ಧೋ ಧೋ ಎಂದು ಸುರಿಯುತ್ತಿತ್ತು. ನನ್ನ ಹರಕು ಕೊಡೆ ಸತ್ಯಾಗ್ರಹ ಹೂಡಿತ್ತು. ಹೇಗೋ ಒಲುಮೆ ಜುಲುಮೆಗಳಿಂದ ಅದೇ ಕೊಡೆಯ ಆಶ್ರಯದಲ್ಲಿ ಮುಂದೆ ಸಾಗಿದ್ದೆ. ನನ್ನ ಲಂಗೋಟಿ ಗೆಳೆಯನೊಬ್ಬ ತನ್ನದೇ ಆದ ಗಾಂಭೀರ್ಯದಲ್ಲಿ ಮುಂದೆ ಬರುತ್ತಿದ್ದ. ಅಪರಿಚಿತರನ್ನಾಗಲಿ, ಬಹಳ ದಿನಗಳ ಮೇಲೆ ಭೆಟ್ಟಿಯಾದ ಪರಿಚಿತರನ್ನಾಗಲಿ ಮಾತಾನಾಡಿಸುವಂದೆಂದರೆ ನನಗೆ ಜೀವದ ಮೇಲೆ ಬರುತ್ತದೆ. ನಾನು ತಪ್ಪಿಸಿಕೊಳ್ಳಬೇಕೆಂದೆ. ನನ್ನ ಗೆಳೆಯ ಬಂದವನೇ ನನ್ನ ಮುಂಗೈ ಹಿಡಿದ. ನಾನು ದೇಶಾವರಿ ನಗ ನಕ್ಕೆ. ಕೈಯಲ್ಲಿ ಒಬ್ಬರ ಕೈಯನ್ನು ಸಿಕ್ಕಿಸಿಕೊಂಡು ಮುಂದೆ ಸಾಗಲು ಸನದ್ಧರಾದೆವು. “ಇನ್ನೂ ಸತ್ತಿಲ್ಲವಲ್ಲೋ ಮೂರ್ತಿ!” ಎಂದ. ನಾನು ಕೋಪಾವೇಶದಿಂದ ಅಂದೆ “ಇನ್ನೂ ಜೀವಂತವಿದ್ದೇನೆ, ಆದ್ದರಿಂದ ಸತ್ತಿಲ್ಲ.” ನನಗೆ ಕೋಪ ಬಂದದ್ದು ಆತನ ಅಪಶಕುನ ನುಡಿಯಿಂದಲ್ಲ ; ಹಳೆಯ ಹಾಸ್ಯವನ್ನೇ ಮತ್ತೆ ಮತ್ತೆ ಜನರ ಮುಖದ ಮೇಲೆ ಎಸೆಯುವದಂದರೆ ಮಾವಿನ ರಸವನ್ನು ಹೀರಿ ಅದರ ಗೊರಟೆಯನ್ನು ಇನ್ನೊಬ್ಬರ ಅಂಗಳದಲ್ಲಿ ಒಗೆದಂತೆ. ಹಳೆಯ ಹಾಸ್ಯ ಅಪಚನದ ಡೇಗು, ಖಾಲಿ ತಲೆಯ ಚಿನ್ಹ, ರಸಿಕತೆಯ ಒಂದು ಔಂಸೂ ಇಲ್ಲದ ವ್ಯಕ್ತಿಯ ಹೆಗ್ಗುರುತು, ಅಸಂಸ್ಕೃತಿಯ ಪರಾಕಾಷ್ಠೆ, ವ್ಯಕ್ತಿತ್ವದ ಡೊಗ್ಗಾಲೂರಿಕೆ.

ಹೊಸದೆಂದರೆ ನನ್ನ ಮೈ ಉಬ್ಬುತ್ತದೆ. ರಕ್ತ ಕುದಿಯುತ್ತದೆ, ಮಿಂಚಿನ ಸಂಚಾರವಾಗುತ್ತದೆ. ಯಾವಾಗಲೂ ಎಲ್ಲದರಲ್ಲೂ ನವೀನತೆಯನ್ನು ಕಾಣಬೇಕೆಂಬ ಹಿರಿಯಾಸೆ ನನ್ನದು. ಪ್ರಕೃತಿಯಾಗಲಿ, ಸಮಾಜವಾಗಲಿ, ಇದಕ್ಕೆ ಅನುಕೂಲವಾಗಿಲ್ಲ. ಅದಕ್ಕೇನಾದರೂ ದೇವರು ನನಗೆ ಪ್ರತಿಸೃಷ್ಟಿ ನಿರ್ಮಿಸಲು ಅವಕಾಶ ಕೊಟ್ಟರೆ ಇಂದು ಹಸಿರು ಇದ್ದ ಗಿಡ, ಟೆಕ್ಸ್ಟ್ ಬುಕ್ ದೊಳಗಿನ ಚಿತ್ರದಂತೆ ಕೆಂಪಾದೀತು; ಪರ್ವತ ಅಲುಗಾಡೀತು; ಮಾನವ ತನ್ನ ತಲೆಯಿಂದ ನಡೆದಾನು. ಆದರೆ ಇಂದು ಮಾತ್ರ ಆ ಶಕ್ತಿ ಇಲ್ಲದೆ ಒದ್ದಾಡುತ್ತಿದ್ದೇನೆ. “ಎಲ್ಲೆಲ್ಲಿಯೂ ಅದೇ, ಅದೇ” ಮುಂಜಾನೆ ಎದ್ದು ಕಾಲೇಜು ಹಾದಿ ಹಿಡಿದಾಗ-“ಮಾಡರ್ನ್ ಕೆಫೆ”(ಅದು ನನೀನತೆಯ ಹುಚ್ಚಿನ)ಯ ಕರಿ ಚಹಾ, ಅದೇ ಎಣ್ಣಿಗಮಟಿನ ಮಾಣಿ ಭೆಟ್ಟಿಯಾಗುತ್ತಾರೆ. ಆ ಅಪೂರ್ವ ಸ್ವಾಗತವನ್ನು ಮನಗಂಡು ಕಾಲೇಜಿಗೆ ಹೋದಾಗ ಅದೇ ಒಣಗಿದ ಮುಖಗಳು, ನಿಸ್ತೇಜ ಕಣ್ಣುಗಳು, ಒಳಗೆ ಇಳಿದ ಗಲ್ಲಗಳು, ತಾಂಬೂಲವನ್ನು ಮೆಲ್ಲುತ್ತಿರುವ ತುಟಿಗಳು. ಇವರೇ ನಮ್ಮ ವಿದ್ಯಾರ್ಥಿಗಳೇನು? ಕಾಲೇಜು ವಾತಾವರಣದಿಂದ ಮನೆಗೆ ಮರಳುವಾಗ ಹೊಟೇಲಿಗೆ ಹೋಗುತ್ತೇನೆ, ಮಾಣು ಹೇಳುತ್ತಾನೆ ನಗುತ್ತಾ. “ಫೀರ್ ವಹೀ ಭಾಜಿ ಲಾಯಾ ಹೂಂ.” ನನ್ನ ಹೊಟ್ಟೆ ಹೇಳುತ್ತ್ರದೆ “ಫೀರ್ ವಹಿ ಪೇಟ್ ಲಾಯಾ ಹೂಂ.” ನನ್ನ ಹೊಟ್ಟೆ ಭಾರತೀಯ ಗೃಹಿಣಿಯಂತಿದೆ. ತಾಳ್ಮೆ, ಮೌನ, ಸಹನೆ ಇವುಗಳ ಪ್ರತೀಕವಾಗಿದೆ. My palate has grown insensitive. How cruel! ಹೀಗೆ ಊಟದ ಶಾಸ್ತ್ರ ಮುಗಿಸಿ ರೂಮಿನ ಹಾದಿ ಹಿಡಿದಾಗ, ಕಿವಿಯಲ್ಲಿ ಕೆಕ್ಕರಿಸಿ ಉಗುಳುತ್ತಾಳೆ ರೇಡಿಯೋ ಕುಮಾರಿ. “ಹೇ ಮೇರಾ ಪ್ರೇಮ ಪತ್ರ ಪಢಕರ್ ತುಮ್ ನಾರಾಜ ನಹೋನಾ” ಅದನ್ನು ತಾಳಿಕೊಂಡು ರೂಮಿಗೆ ಬಂದಾಗ ಹಾಸಿಗೆ ನನಗಾಗಿ ಕಾದಿರುತ್ತದೆ. ಅದೇ ಎಣ್ಣೆಗಮಟಿನ ತಲೆದಿಂಬು, ನನ್ನ ಎಷ್ಟೋ ಕನಸುಗಳ ರಾಜ್ಯದಾಡಳಿತದಲ್ಲಿ ಸಿಂಹಾಸನವಾಗಿದ್ದುಂಟು. ಹೀಗೆ ಆತ್ಮವನ್ನೇ ಧ್ವಂಸ ಮಾಡುವ ಬೇಸರಿಕೆಯ ವಾತಾವರಣದಲ್ಲಿ ನಾನು ರಕ್ಕೆ ಬಲಿತ ಹಕ್ಕಿ ಮಹಾರಾಣಿಯ ಪಂಜರದಲ್ಲಿ ಸಿಕ್ಕು ವಿಲವಿಲನೆ ಒದ್ದಾಡಿದಂತೆ.

ನಾವೀನ್ಯದ ನಾಗರಿಕನಾಗಬೇಕೆನ್ನುವ ನಾನು ದೇವರಿಂದ ವರವನ್ನು ಪಡೆದು ಬಂದಿದ್ದೇನೆ. “ನಿನ್ನ ಜನನ ಮರಣಗಳ ನಡುವೆ ಮಧ್ಯಂತರ-ಜಡ್ಡಿನ ರಾಜ್ಯದಲ್ಲಿ ವಿಹರಿಸು.” ನಾನು ಶಿರಸಾ ವಹಿಸಿದೆ. ಇದೂ ನವೀನ ರಾಜ್ಯ ನನಗೆ. ಒಂದು ಸಾರೆ ವಿಶ್ವವಿದ್ಯಾಲಯದ ಪರೀಕ್ಷೆಯೊಂದನ್ನು ಮುಗಿಸಿ ಊರ ಹಾದಿ ಹಿಡಿದೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ. ನಾನು ಬಂದ ನಾಲ್ಕು ದಿನಗಳಲ್ಲಿ ಹಾಸಿಗೆ ಹಿಡಿದೆ. ಅನಿವಾರ್ಯವಾಗಿ ಡಾಕ್ಟರರ ಭೆಟ್ಟಿಯಾಯಿತು. (ನಾನು ಡಾಕ್ಟರರನ್ನು ಭೆಟ್ಟಿಯಾಗುವದು ಹಾಸಿಗೆಯ ಮೇಲೆಯೇ) ಡಾಕ್ಟರ ಮುಖ ಕಳೆಗುಂದಿತು; ಮಾತು ನಿಂತವು. ಅವರಿಗಾಗಿ ಇನ್ನೆಲ್ಲಿ ಆಸನ ಕಲ್ಪಿಸಬೇಕೋ. ನನ್ನ ಮೈಮೇಲಿನ ಗುರುಳೆಗಳು ಅವರ ಮಹಾಜ್ಞಾನದ ಯಾವ ಪುಟದಲ್ಲಿಯೂ ಮೂಡಿರಲಿಲ್ಲ. ಅವರ ಸಂಕಟದಿಂದ ನಾನು ಹಿಗ್ಗಿ ಹೀರೇಕಾಯಿಯಾದೆ. ರೋಗಿಗೆ ಚಲ್ಲಾಟ, ಡಾಕ್ಟರನಿಗೆ ಪ್ರಾಣ ಸಂಕಟ. ವಿಶ್ವವಿದ್ಯಾಲಯದ ಮೆಡಲನ್ನು ಪಡೆದ ಡಾಕ್ಟರರಿಗೂ ಮಣಿಯದ ನವೀನ ಜಡ್ಡನ್ನು ಹೊತ್ತು ತಂದ ನನ್ನ ಮೊಗದಲ್ಲಿ, ಜೀವನದಲ್ಲಿ ಮಹತ್ತನ್ನು ಬೃಹತ್ತನ್ನು ಸಾಧಿಸಿದ ಮಹಾತ್ಮನ ಅಸ್ಪಷ್ಟ ಮುಗುಳ್ನಗೆಯಿತ್ತು. ಇನ್ನೊಬ್ಬ ಡಾಕ್ಟರರು ತಿಂಗಳ ಆರೈಕೆಯ ನಂತರ ಭೆಟ್ಟಿಕೊಟ್ಟಾಗ ಅಂದರು. “ಇಂತಹ ಜಡ್ಡನ್ನು ನಾನು ಅಮೆರಿಕೆಯಲ್ಲಿ ನೋಡಿದ್ದೆ.” ನಾನು ಮನಸ್ಸಿನಲ್ಲಿ ಆಂದೆ “ಅಮೆರಿಕಕ್ಕೆ ಏಕೆ ಹೋಗಿದ್ದಿ ಮೂಢಾ-ನನಗೆ ಬಂದು ಭೆಟ್ಟಿಯಾಗಬೇಕಿತ್ತು, ಜಡ್ಡಿನ ಖನಿಯನ್ನೇ ಕಾಣುತ್ತಿದ್ದಿ.”

ಹೀಗೆ ಜಡ್ಡಿನಲ್ಲಿ ಡಾಕ್ಟರರ ಪ್ರಾಣ ಸಂಕಟವನ್ನಷ್ಟೇ ಕಾಣುವ ಭಾಗ್ಯವಲ್ಲದ ಮನೆಯವರ ಅಪಾರ ಕರುಣೆ, ಪ್ರೀತಿ, ಅನುಕಂಪಗಳಿಗೆ ಪಾತ್ರನಾಗುತ್ತೇನೆ. ತಾಯಿ ಬಂದು ಹಣೆ ಒತ್ತುತ್ತಾಳೆ. ಆದರೆ ಅದೇ ನಾರ್ಮಲ್ ಇದ್ದಾಗ ಚಹ ಮಾಡಲು ಅವಳಿಗೆ ಕೇಳಿದರೆ ಅನ್ನುತ್ತಾಳೆ-ಮಾಡಿಕೂಂಡು ಕುಡಿಯಪ್ಪಾ! ನಮ್ಮ ಚಹಾ ನಿನಗೆ ಮನಸ್ಸಿಗೆ ಬರುವುದಿಲ್ಲ-“. ಈಗ ಬಂದು, ಹತ್ತು ನಿಮಿಷಕ್ಕೊಮ್ಮೆ ಚಹಾ ತರುತ್ತಾಳೆ; ಜುಲುಮೆಯಿಂದ ಕುಡಿಸುತ್ತಾಳೆ; ತಂಗಿ-ತಮ್ಮಂದಿರು ಸುತ್ತು ನೆರೆಯುತ್ತಾರೆ. ಸಣ್ಣ ತಮ್ಮನೊಬ್ಬ ಕಿಸೆಯಲ್ಲಿಯ ಜಿಬುಟಾದ ಪೆಪ್ಪರಮಿಂಟೊಂದನ್ನು ತೆಗೆದು ನನ್ನ ಬಾಯಿಯಲ್ಲಿ ಹಾಕಿ ನನ್ನ ಮೊಗವನ್ನು ಮಿಕಿ ಮಿಕಿ ನೋಡುತ್ತಾನೆ. ತಂದೆಯವರು ಸಿಟ್ಟಿಗೆ ಬಂದಾಗ ಅ ಮುಖದ ರೌದ್ರತೆಯನ್ನಾಗಲಿ, ಅವರ ಮಾತಿನ ಕಿಡಿಯಲ್ಲಾಗಲಿ ಸಿಕ್ಕು ಬಿರುಗಾಳಿಗೆ ಸಿಕ್ಕ ಬಳ್ಳಿಯ ಹಾಗೆ ನಡುಗಿ ಹೋಗುತ್ತೇನೆ. ಆದರೆ ಜಡ್ಡಿನಲ್ಲಿ ಅವರ ಪ್ರೀತಿಯನ್ನು ನೋಡಿದಾಗ ಈ ವ್ಯಕ್ತಿಯೂ ಅದೆಷ್ಟು ಪ್ರೇಮರಸವನ್ನು ತುಂಬಿಕೊಂಡಿದ್ದಾನಲ್ಲ ಎಂದು ಕೃತಜ್ಞತೆಯಿಂದ ಬಾಗಿ ಹೋಗುತ್ತೇನೆ.

ಅಂದು, ಓ ಆ ಅಂದು-ನೆನಪಿನ ಮೂಲೆಯಲ್ಲಿ ಕುಳಿತು ನನ್ನ ರಕ್ತವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಆ ದಿನಗಳನ್ನು ಮರೆಯಲಾರೆ. ನನ್ನ ತಂದೆ ದಾಸರ ಕೀರ್ತನೆಗಳನ್ನು, ವಚನಕಾರರ ವಚನಗಳನ್ನು, ಲಾವಣಿಕಾರರ ಲಾವಣಿಗಳನ್ನು, ಹಾಸ್ಯಚಟಾಕಿಗಳನ್ನು ಸುರಿಸಿಯೇ ಸುರಿಸಿದರು. ಅದೆಲ್ಲ ನನ್ನ ಜಡ್ಡಿನ ನೋವನ್ನು ಮರೆಸಲು, ತಮಗಾದ ದುಃಖವನ್ನು ಒತ್ತರಿಸಲು ಹಾಡಿಯೇ ಹಾಡಿದರು. ಅದರ ನೆನಹು ನನ್ನ ಚಿತ್ತ ಬಿತ್ತಿಯ ಮೇಲೆ ಅಚ್ಚಳಿಯದೆ ಮೂಡಿ ನಿಂತಿದೆ. ನನಗೆ ಇಂದಿಗೂ ಅನಿಸುತ್ತದೆ. ಅಂದು ಅವರು ನನ್ನನ್ನು ವಾತ್ಸಲ್ಯದ ತೊಟ್ಟಲಲ್ಲಿ ಹಾಕಿ ಜೋಗುಳ ಹಾಡಿದರು. ಈ ಮುದಿಗೂಸು ಜೋಗುಳಕ್ಕಾಗಿ ಕಾತರಿಸಿತ್ತು. ಪ್ರೇಮದ ಹಾಲಿಗಾಗಿ ಬಾಯಿ ಬಾಯಿ ಬಿಡುತ್ತಿತ್ತು. ನನ್ನ ಬಾಯಿಗೆ ಅಮೃತದ ಭಾಂಡವನ್ನೇ ಹಚ್ಚಿದಂತಾಗಿತ್ತು; ಸಾವಿನ ಮುಖದಲ್ಲಿಯೂ ಜೀವಿಸಬೇಕು ಎಂದು ದೃಢವಾಗಿ ನಿರ್ಧರಿಸಿದೆ.

ಯಾರೋ ಹೇಳಿದ್ದಾರೆ-ಸಾವಿನ ಮುಖ ನೋಡದಿರುವವರಿಗೆ ನಿಜವಾದ ಜೀವನವನ್ನೇ ಮಾನವ ಬಾಳಿರುವುದಿಲ್ಲ. ಅದರಂತೆ ಜಡ್ಡಿನ ಮುಖ ಕಾಣದ ವ್ಯಕ್ತಿ ಪ್ರೇಮದ ಬೆಲೆಯೆಷ್ಟು ಎಂದು ಅರಿಯಲಾರ, ತನ್ನ ಜೀವದ ಮಹಿಮೆಯನ್ನು ತಿಳಿಯಲಾರ, ತನ್ನ ವ್ಯಕ್ತಿತ್ವದ ಆಳವನ್ನು ಗುರುತಿಸಲಾರ, ಹೆಚ್ಚಾಗಿ ತನ್ನನ್ನು ತಾನು ಕಂಡುಕೊಳ್ಳಲಾರ.

ಏನೋ ಮನಸ್ಸಿಗೆ ಹುರುಹುರು ಎನ್ನಿಸಿದಾಗ, ವಿಶ್ರಾಂತಿಯಿಲ್ಲದ ಗಾಣದ ಎತ್ತಿನಂತೆ ಕೆಲಸದ ಚಕ್ರದಲ್ಲಿ ಸಿಲುಕಿ ಬೇಸರ ಆದಾಗ, ಮನಸ್ಸು ಕಡಿವಾಣವಿಲ್ಲದೆ ಅತ್ತಿತ್ತ ಹಸಿರು ಹುಲ್ಲಿಗಾಗಿ ಬಾಯಿಯನ್ನು ಹಾಕಿದಾಗ, ಅಂತೂ ನನ್ನ ಮೇಲೆ ನನಗೆ ನಿಯಂತ್ರಣವಿರದೆ ಹೋದಾಗ ನಾನು ಜಡ್ಡಿಗೆ ಆಮಂತ್ರಣ ಕೊಡುತ್ತೇನೆ. ಪ್ರಾಸ್ಟೆರೋನ ಕೈಯಲ್ಲಿ ಕೆಲಿಬಾನ್ ಇದ್ದಹಾಗೆ ನನ್ನ ಕೈಯಲ್ಲಿ ಜಡ್ಡು ಇದೆ, ಅದಕ್ಕಾಗಿ ಪೂರ್ವ ತಯಾರಿಯೂ ಅಷ್ಟು ಬೇಕಾಗಿಲ್ಲ. ವಾಯರಲೆಸ್ ಇಂಟಿಮೇಶನ್ ಕೊಟ್ಟುಬಿಡುತ್ತೇನೆ; ಜಡ್ಡು ನನ್ನ ಮನೆಯ ಬಾಗಿಲಿಗೆ ಬಂದು ಸ್ವಾಗತ ಸಿಗುವುದೋ ಇಲ್ಲವೋ ಎಂದು ಅನುಮಾನಿಸುತ್ತ ನಿಲ್ಲುತ್ತದೆ. ನಾನೇ ಅದರ ಬರುವಿಕೆಗಾಗಿ ಶಬರಿ ರಾಮನಿಗಾಗಿ ಕಾದಿರುವಂತೆ ಕಾದಿರುತ್ತೇನೆ. ಎಂದು ಬರುವನೋ ನನ್ನ ನಲ್ಲ ಜಡ್ಡಿಂಗರಾಯ ಎಂದು ಕಾತರಿಸುತ್ತೇನೆ. ಮನೆಯಲ್ಲಿ ಅದರ ಪ್ರವೇಶವೆಂದರೆ ವಾತಾವರಣವೇ ಬದಲಾಯಿಸಿಬಿಡುತ್ತದೆ.

ಆಗ ಸ್ಕಾರ್ಫು ಬಿಗಿಯಾಗಿ ಉದ್ದನ್ನ ಕಿವಿಗಳನ್ನು ಮುಚ್ಚಿರುತ್ತದೆ. ರಗ್ಗು ಮುಖದವರೆಗೂ ಬಂದು ಮುಟ್ಟಿರುತ್ತದೆ. ಹಳೆಯ ಮ್ಯಾಗಝೀನ್ನುಗಳು ಕಾಲಬಳಿಯಲ್ಲಿಯೇ ಬಿದ್ದಿರುತ್ತವೆ. ಕಾದಂಬರಿಗಳಂತೊ ಸರಿಯೇ ಸರಿ. ಬಿಸ್ಕೀಟು, ಗೋಡಂಬಿ, ಪೇಪರಮೆಂಟ್, ಚಿಕ್ಕವನಾಗಿಯೇ ಏಕೆ ಉಳಿಯಲಿಲ್ಲವೆಂದು ಮನಸ್ಸಿಗೆ ಕಳವಳವನ್ನುಂಟು ಮಾಡಿಸುವ ತಿಂಡಿಗಳು, ಹಸ್ತದ ಆಚೆಗೆ ತೆರೆದಿರುತ್ತವೆ. ಕಹಿ ಔಷಧ ಬೇಕಾದರ ಅದೂ ಇಲ್ಲಿಯೇ ಇದೆ. ಇಲ್ಲ, ಗುಳಿಗೆಗಳು ಬೇಕೇ? ನಾಲಿಗೆಯ ಅಂಗಳದಲ್ಲಿ ಇಟ್ಟರೆ ಸೀದಾ ನಮ್ಮ ಹೊಟ್ಟೆಯ ಅಡುಗೆಯ ಮನೆ ಸೇರುತ್ತವೆ. “ನೀ ನುಂಗಿದ ಗುಳಿಗೆಗಳ ಲೆಕ್ಕ! ಶಿವಾ ನೋಡಿ ನಕ್ಕಾ.” ನೋವಾಗದಂತೆ ಇಂಜೆಕ್ಷನ್ ಆಗುತ್ತದೆ. ನಿದ್ರೆ ಮತ್ತು ಜಾಗೃತ ಅವಸ್ಥೆಗಳ ಮಧ್ಯದ ಸುಷುಪ್ತಿಯ ಮಬ್ಬನ್ನು ಅದೇನು ವರ್ಣಿಸಲಿ? ಸ್ವಪ್ನ-ಸ್ವರ್ಗದ ಬಾಗಿಲಿನಲ್ಲಿ ವಿಹರಿಸುತ್ತಲೂ ಈ ಜಗದ ಮಣ್ಣಿನ ವಾಸನೆ ಮೂಗಿಗಿರುತ್ತದೆ. ಈ ಸೌಭಾಗ್ಯ ಜಡ್ಡಿಗೆ ಬಿದ್ದವನಿಗಲ್ಲದೆ ಇನ್ನಾರಿಗೆ ತಿಳಿದೀತು? ಹೊರಗೆ ತಂಗಾಳಿ ಬೀಸುತ್ತಿದ್ದಾಗ, ಮಳೆ ಬಿಟ್ಟುಬಿಡದೆ ಕೂಸಿನ ಚೀರಾಟದಂತೆ, ಹೆಣ್ಮಕ್ಕಳ ನಾಲಿಗೆಯಂತೆ ಸಾಗಿಯೇ ಸಾಗಿರುವಾಗ, ಉಳಿದವರೆಲ್ಲ ತಮ್ಮ ತಮ್ಮ ಕೆಲಸಗಳಿಗಾಗಿ ಸೈಕಲ್ಲೇರಿ ಭರ್ರನೆ ಹೋಗಿಬಿಟ್ಟಾಗ, ಚಿಕ್ಕಮಕ್ಕಳ ಹಾಲಿನಲ್ಲಿ ಪಾಲು ಕೇಳಿ ತಾಸು ಅರ್ಧತಾಸಿಗೊಮ್ಮೆ ಕಾಫಿಯನ್ನು ಹೀರುತ್ತ, ಗುಳಿಗೆಗಳನ್ನು ನುಂಗುತ್ತ, ಪೇಪರಮೆಂಟನ್ನು ಚೀಪುತ್ತ, ಗೋಡಂಬಿಗಳನ್ನು ಮೆಲ್ಲುತ್ತ ಮುಖದವರಗೆ ರಗ್ಗನ್ನು ಮುಚ್ಚಿ ಹಳೆಯ ಮ್ಯಾಗಝೀನ್ನುಗಳ ಪುಟಗಳನ್ನು ತಿರುವುತ್ತಿರುವುದು ಎಲ್ಲರೂ ಬೇಡಿ ಬಂದ ಭಾಗ್ಯವಲ್ಲ; ಅದು ನನ್ನಂತಹ ಸುಖಪುರುಷರು ಬೇಡಿಬಂದ ವರ.

ಡಾಕ್ಟರರ ದವಾಖಾನೆಗೆ, ದೇವಾಲಯಕ್ಕೆ ಹೋಗುವ ಶ್ರದ್ದೆಯಿಂದ ಹೋಗುತ್ತೇನೆ. ನಿಸ್ತೇಜ ಮುಖಗಳ ಮಧ್ಯೆ ನೀಲಕಂಠನಂತೆ, ಕುಳಿತಿರುವ ಡಾಕ್ಟರ್, ಶಿವನ ಅವತಾರವಲ್ಲದೆ ಮತ್ತೇನು? ಇಂಚೆಕ್ಷನ್ ತ್ರಿಶೂಲವಾದರೆ ಸ್ಟೆಥಾಕ್ಕೋಪು ಬುಸುಗುಟ್ಟುವ ಹಾವು. ಗುಳಿಗೆ ಔಷಧಿಗಳ ಕಪಾಟೆಂದರೆ ಸುಡುಗಾಡಿನ ಬೂದಿ. ಸುಡುಗಾಡು ಶಿವನ ತವರ್ಮನೆಯಾದರೆ ಡಾಕ್ಟರರು ಸುಡುಗಾಡಿನ ಏಜೆಂಟರು. ಆ ಮುಗುಳ್ನಗೆ, ಆ ಹೊಳೆಯುವ ಕಣ್ಣುಗಳು, ಆ ಕರುಣಾಮಯ ಮುಖ ಸ್ತ್ವಾಗತಿಸುತ್ತವೆ. ನನ್ನ ಸರತಿ ಬರುವವರೆಗೂ ಕಾದಿರುತ್ತೇನೆ. ರೋಗಿಗಳ ನರಳುವಿಕೆ ಒಂದು ಕಡೆ. ಡಾಕ್ಟರರಿಗೆ ರೋಗಿಗಳು ಕೇಳುವ ಮುಗ್ಧ ಅಜ್ಞಾನದ ಪ್ರಶ್ನೆಗಳು ಇನ್ನೊಂದು ಕಡೆ. ಡಾಕ್ಟರರು ಕೊಡುವ ತಾಳ್ಮೆಯ ಉತ್ತರಗಳು ನನಗೆ ಸುಂದರವಾದ ನಾಕಲೋಕವನ್ನೇ ತರೆದಿಡುತ್ತವೆ. ಒಂದು ಸಲ ನನ್ನ ನೋವನ್ನು ಮರೆತು ಪ್ರೇಕ್ಷಕನಾಗಿ ಈ ನಾಟಕವನ್ನು ನೋಡುತ್ತ ಇರುತ್ತೇನೆ. ನಗುವನ್ನು ತಾಳಿಕೂಂಡು ಸಾಕಾಗಿ ಹೋಗುತ್ತದೆ. ನನ್ನ ಸರತಿ ಬಂತೆಂದರೆ ಆ ನಾಟಕದ ದೃಶ್ಯಕ್ಕೆ ಮುಕ್ತಾಯ. ಆಗ ನನ್ನ ‘ಕಂಪ್ಲೇಟ್ಸ್’ ಹೇಳುತ್ತೇನೆ. ನನ್ನ ದೈಹಿಕ ಸ್ಥಿತಿಯ ಬಗ್ಗೆ ಆತ್ಮವಿಮರ್ಶೆ ಮಾಡುತ್ತೇನೆ. ನನ್ನ ಗೋಳನ್ನು ಹೊಯ್ದುಕೊಳ್ಳುತ್ತೇನೆ. ಡಾಕ್ಟರರು ಇದನ್ನೆಲ್ಲಿ ಕೇಳಿ ನೀವು ಹರ್ಕ್ಯುಲಸ್ ಇದ್ದ ಹಾಗೆ ಇದ್ದೀರಿ, You are quite normal ಎಂದಾಗ ನನ್ನ ಬೆನ್ನನ್ನು ನಾನೇ ಚಪ್ಪರಿಸಿಕೊಳ್ಳುವೆ. ಇಂಥ ಪ್ರಶಂಸೆ ಬಂದದ್ದೇ ಇಡಿಯ ಜನ್ಮದಲ್ಲಿ ಒಂದು ಸಲ. ಇನ್ನೊಮ್ಮೆ ಇನ್ನೊಬ್ಬರಿಂದ ಬರುವ ಲಕ್ಷಣವಿಲ್ಲ. ಆದ್ದರಿಂದ ಇದು ನಿಜವಿರಲಿಕ್ಕೇಬೇಕೆಂದು ಆ ಮಾತನ್ನೇ ಎಷ್ಟೋ ಸಂಜೆ ಮೆಲುಕಾಡಿಸುತ್ತ ಇರುತ್ತೇನೆ. ಕನ್ನಡಿಯ ಮುಂದೆ ನಿಂತು ಮೀಸೆ ತಿರುವುತ್ತೇನೆ. ಡಾಕ್ಟರರಿಗೆ ಯಮನ ಏಜೆಂಟರೆಂದು ಅನ್ನುವವರು ಶುದ್ಧ ಆವಿವೇಕಿಗಳು. ಡಾಕ್ಟರರನ್ನು ಕೂಲೆಗಡುಕರೆಂದು ಕರೆದುದು ‘ಬರ್ನಾಡ್ ಶಾ’ ಮಾಡಿದ ಹಲವು ತಪ್ಪುಗಳಲ್ಲಿ ಒಂದು.

ಹೀಗೆ ನನ್ನ ಮಟ್ಟಿಗೆ ಜಡ್ಡೆಂದರೆ ಪರಮಾತ್ಮನ ಕೃಪೆಯೆಂದೇ ತಿಳಿಯುತ್ತೇನೆ. ಕೂಸು ತಾಯಿಗೆ ತನ್ನ ಆಸ್ತಿತ್ವದ ಅರಿವನ್ನುಂಟುಮಾಡಲು ಚೀರುತ್ತದಂತೆ, ನಾನು ಜಡ್ಡಿನ ಆಶ್ರಯದಲ್ಲಿ ನರಳುತ್ತ ದೇವನಿಗೆ ನನ್ನ ಮಹಿಮೆಯನ್ನು ವರ್ಣಿಸುತ್ತೇನೆ. ಜಡ್ಡಿನ ಅವಧಿಯೆಂದರೆ ವಿಶ್ರಾಂತಿಯ ಅವಧಿ. ಬೇಸರದ ಮೋಡ ಸರಿದು ಬಿಸಿಲು ಬಿದ್ದಾಗಿನ ಅಮೃತಗಳಿಗೆ. ದಿನವೆಲ್ಲ ಬಿಸಿಲು ಗಾಳಿಯಲ್ಲಿ ತಿರುಗಾಡಿದ ವ್ಯಕ್ತಿಯು ಉಪವನದ ಸುಗಂಧ ಗಾಳಿ ಸೇವಿಸುತ್ತಿರುವ ಅವಕಾಶ. ಆತ್ಮವಿಮರ್ಶೆಗೆ ವಿಧಿಯು ತಂದೊಡ್ಡಿದ ಕಾಲ. ತನ್ನವರ ಪ್ರೀತಿಯನ್ನು ಒರೆಗಲ್ಲಿಗೆ ಹಚ್ಚುವ ಪರೀಕ್ಷಾ ಸಮಯ. ಆಲಸಿಯಾದ ನನ್ನಂಥವರಿಗೆ ಹಗಲೇ ರಾತ್ರಿಯಾಗಿ, ರಾತ್ರಿಯೇ ಹಗಲಾಗುವ ಸುಧಾ ಸನ್ನಿವೇಶ. ಜೀವಿಸಬೇಕನ್ನುವ ವೀರ-ಸಂಕಲ್ಪಿಗೆ ಯುದ್ಧಕಾಲ. ವಿಜಯ ಯಾರದಾದರೇನಂತೆ! ಸಾವಿನಂತಹ ಶಕ್ತಿಯೊಡನೆ ಸೆಣಸಿ ನಿಂತ ಕೆಚ್ಚು ಸಣ್ಣದೇ? ಮನುಷ್ಯನ ದೇಹವನ್ನು ಮನೆಗೆ ಹೋಲಿಸಬಹುದು. ಮನೆಯನ್ನು ರಿಪೇರಿ ಮಾಡುತ್ತ ಹೋಗುವುದು ಮನೆಯ ಯಜಮಾನನ ಕರ್ತವ್ಯಗಳಲ್ಲಿ ಒಂದು. ಅದರಂತೆ ದೇಹದ ರಿಪೇರಿ ಮಾಡುತ್ತ ಹೋಗುವುದು. ಮನುಷ್ಯನ ದೇಹ ನಡೆದಷ್ಟು ದಿನ ನಡೆಯುತ್ತದೆ. ಅದೊಂದು ಗಾಡಿಯೆಂದುಕೊಂಡು ಸಾಗುವುದೇ ಜೀವನಕಲೆ. ಈ ದೇಹವೆಂಬ ಮನೆಗೆ ಜಡ್ಡುಗಳೇ ಅತಿಥಿಗಳು. ನಾನು ಅವಕ್ಕೆ ಹೃತ್ಪೂರ್ವಕ ಸ್ಥಾಗತ ಬಯಸಿದ್ದುದರಿಂದ ಅವು ಕೆಲಕಾಲ ತಳವೂರಿ ನಿಲ್ಲುತ್ತವೆ. ನಾನು ಅವುಗಳನ್ನು ಆಪ್ತಸಂಬಂಧಿಕರನ್ನು ಕಾಣುವ ಹಾಗೆ ನಿರ್ಲಕ್ಷ್ಯಭಾವದಿಂದ ಎಂದು ಕಾಣುತ್ತೇನೋ ಅಂದೇ ಅತಿಥಿಗಳು ಜಾರುವಂತೆ ಜಡ್ಡುಗಳು ಸಾಗಿಬಿಡುತ್ತವೆ. ಅತಿಥಿಗಳು ಬಂದಾಗ ಖರ್ಚಿಗೆ ಹೆದರಿ ನಿಲ್ಲುವ ಆಧುನಿಕ ಗೃಹಸ್ಥನಂತೆ ಕೆಲವೊಂದು ಕ್ಷಣ ಭಯಗ್ರಸ್ತನಾಗುತ್ತೇನೆ. ಅದೇ ಕ್ಷಣದಲಿ ಕೇಳುತ್ತೇನೆ-“ನಾನೇನೋ ಕಣೀರು ಸುರಿಸುತ್ತೇನೆ. ಎಲೇ ಜಡ್ಡೆ, ಅದನ್ನು ಒರೆಯಿಸುವ ಶಕ್ತಿನಿನಗಿದೆಯೇ? ಸಾಕಷ್ಟು. ತಾಳ್ಮೆಯಿದೆಯೇ?” ಸಡ್ಡು ಹೊಡೆದು ನಿಂತಾಗ, ಜಡ್ಡು ನಾಗಾಲೋಟದಿಂದ ಕಿಡಕಿಯ ಮೂಲಕ ಓಡುವುದನ್ನು ನೋಡಿ ನಾನು ವಿಜಯೋತ್ಸಾಹದಿಂದ ನೆಗೆದುಬೀಳುತ್ತೇನೆ; ಮತ್ತೆ ಜೀವನಚಕ್ರ ಸಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಯಾಣ
Next post ಗಂಡಾಂತರ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys