ಗೊದೋವಿಗಾಗಿ ಕಾಯುತ್ತ

ಗೊದೋವಿಗಾಗಿ ಕಾಯುತ್ತ

The idea of a destination or final end
is a covert form of social control.
– Theodor Adorno, Aesthetic Theory

ಸಾಮ್ಯುವೆಲ್ ಬೆಕೆಟ್‌ನ ‘ಗೊದೋವಿಗಾಗಿ ಕಾಯುತ್ತ’ (Waiting for Godot) ಎಂಬ ಪ್ರಸಿದ್ಧ ನಾಟಕದ ವಸ್ತುವನ್ನು ಅತ್ಯಂತ ಸಂಕ್ಷಿಪ್ತವಾಗಿ ಹೇಳುವುದಾದರೆ: ಎಸ್ಟ್ರಗನ್ (ಗೋಗೋ) ಮತ್ತು ವ್ಲಾಡಿಮರ್ (ದೀದೀ) ಎಂಬ ಅಲೆಮಾರಿಗಳಿಬ್ಬರು ಗೊದೋ ಎಂಬ ಇನ್ನೊಬ್ಬ ವ್ಯಕ್ತಿಗಾಗಿ ಕಾಯುವುದು. ಎರಡಂಕಗಳ ಈ ನಾಟಕದ ಒಂದೊಂದು ಅಂಕದ ಕೊನೆಯಲ್ಲೂ ಹುಡುಗನೊಬ್ಬ ಬಂದು ಗೊದೋ ಈ ದಿನ ಬರುವುದಿಲ್ಲ ಎಂಬ ಸಂದೇಶ ನೀಡಿ ಹೋಗುತ್ತಾನೆ. ಎರಡೂ ಅಂಕಗಳ ನಡುವಿನ ವ್ಯತ್ಯಾಸ ತೀರ ಕಡಿಮೆಯಾದ್ದರಿಂದ ಒಂದು ಇನ್ನೊಂದರ ಮರುಕಳಿಕೆಯಂತೆ ಕಂಡರೆ ಆಶ್ಚರ್ಯವಿಲ್ಲ. ಇಡೀ ಸಾಹಿತ್ಯ ಲೋಕದಲ್ಲಿ ಅಲೆಗಳನ್ನೆಬ್ಬಿಸಿದ ೧೯೫೦ರ ದಶಕದ ಈ ನಾಟಕದ ಅರ್ಥವೇನು, ಉದ್ದೇಶವೇನು ಎಂಬ ಕುರಿತು ಸಾಕಷ್ಟು ಜಿಜ್ಞಾಸೆ ನಡೆದಿದೆ, ಇನ್ನೂ ನಡೆಯುತ್ತಲೂ ಇದೆ.

ಈ ಅಂಕಗಳ ಮರುಕಳಿಕೆಯಲ್ಲೊಂದು ಕಾಲಚಕ್ರದ ಸೂಚನೆಯಿರುವಂತಿದೆ. ಕಾಲಕ್ಕೆ ಬಾಣದಂಥ ಏಕಮುಖವಾದ ಚಲನೆಯೊಂದಿದ್ದರೂ, ಅದು ಚಕ್ರಾಕಾರದಲ್ಲಿ ಆವರ್ತಿಸುತ್ತಲೂ ಇರುತ್ತದೆ. ಸುತ್ತುತ್ತಲೇ ಮುಂದುವರಿಯುವುದೂ, ಮುಂದುವರಿಯುತ್ತಲೇ ಸುತ್ತುವುದೂ ಕಾಲದ ಸ್ವಭಾವ. ಕಾಲಚಕ್ರವೆಂಬ ರೂಪಕ ಕಾಲದ ಈ ಎರಡೂ ಚಲನೆಗಳನ್ನೂ ಸೆರೆಹಿಡಿಯುವಂಥದು. ಬೆಕೆಟ್‌ನ ನಾಟಕದಲ್ಲೂ ಹೀಗಾಗುತ್ತದೆ: ಎರಡನೆಯ ಅಂಕದ ಕಾಲ ಮೊದಲನೆಯ ಅಂಕದ ಮರುದಿನವಷ್ಟೇ ಆದರೂ ಮರದ ಎಲೆಗಳು ಉದುರಿರುತ್ತವೆ, ಮೊದಲನೆಯ ಅಂಕದಲ್ಲಿ ಕಾಣಿಸಿಕೊಂಡ ಇನ್ನೆರಡು ಪಾತ್ರಗಳ (ಲಕ್ಕಿ ಮತ್ತು ಪೋಝೋ) ಜೀವನದಲ್ಲಿ ಸಾಕಷ್ಟು ವ್ಯತ್ಯಾಸಗಳು ಕೂಡಾ ಆಗಿರುತ್ತವೆ. ಈ ವ್ಯತ್ಯಾಸಗಳ ನಡುವೆಯೂ ಎಸ್ಟ್ರಗನ್ ಮತ್ತು ವ್ಲಾಡಿಮರ್ ಕಾಯುವುದರಲ್ಲಿ ಮಾತ್ರ ಏನೂ ಬದಲಾವಣೆ ಉಂಟಾಗಿರುವುದಿಲ್ಲ.

ಈ ಕಾಯುವಿಕೆಯ ನಿರ್ದಯತೆಯನ್ನು ಸೂಚಿಸಲೋ ಎಂಬಂತೆ ಎರಡನೇ ಅಂಕದ ಆರಂಭದಲ್ಲೇ ವ್ಲಾಡಿಮರ್ ಹಾಡುವ ಹಾಡೊಂದಿದೆ:

ಕಿಚನಿಗೊಂದು ನಾಯಿ ನುಗ್ಗಿ
ರೊಟ್ಟಿ ಚೂರ ಕದಿಯಲು
ಪಾಕಾಚಾರಿ ಎದ್ದುಬಂದು
ಸೌಟಲಿಕ್ಕಿ ಕೊಲ್ಲಲು

ನಾಯ್ಗಳೆಲ್ಲ ಓಡಿಬಂದು
ಗೋರಿಯೊಂದ ತೆಗೆದುವು
ಶ್ವಾನ ಕುಲಕೆ ಕಾಣುವಂತೆ
ಕಲ್ಲಲಿಂತು ಬರೆದುವು:

ಕಿಚನಿಗೊಂದು ನಾಯಿ ನುಗ್ಗಿ
ರೊಟ್ಟಿ ಚೂರ ಕದಿಯಲು
ಪಾಕಾಚಾರಿ ಎದ್ದು ಬಂದು
ಸೌಟಲಿಕ್ಕಿ ಕೊಲ್ಲಲು

ನಾಯ್ಗಳೆಲ್ಲ ಓಡಿಬಂದು
ಗೋರಿಯೊಂದ ತೆಗೆದುವು-

ನಾಯಿ ತನ್ನ ಬಾಲದ ಸುತ್ತ ಸುತ್ತುವಂಥ ಸ್ವಯಮಾವರ್ತನೆಯೇ ಈ ಹಾಡಿನ ಮುಖ್ಯ ಲಕ್ಷಣ: ಒಡಕು ಗ್ರಾಮಫೋನ್ ರೆಕಾರ್ಡಿನಂತೆ ಅದು ನಿರಂತರವಾಗಿ, ಮತ್ತೆ ಮತ್ತೆ ಸುತ್ತುತ್ತಲೂ ಹೇಳಿದ್ದನ್ನೇ ಹೇಳುತ್ತಲೂ ಇರುತ್ತದೆ. ಎಸ್ಟ್ರಗನ್ ಮತ್ತು ವ್ಲಾಡಿಮರ್‌ರ ಕಾಯುವಿಕೆಯೆಂದರೆ ಈ ರೀತಿಯದು; ಇನ್ನೇನು ಬದಲಾವಣೆಗಳಾದರೂ ಅವರಿಗೆ ಕಾಯುವುದು ಮಾತ್ರ ತಪಿದ್ದಲ್ಲ.

ಬೆಕೆಟ್‌ನ ನಾಟಕ ರಚಿತವಾಗುವ ಸುಮಾರು ಒಂದು ದಶಕದಷ್ಟು ಹಿಂದೆ, ೧೯೪೨ರಲ್ಲಿ, ಸುಪ್ರಸಿದ್ಧ ಫ್ರೆಂಚ್ ಸಾಹಿತಿ ಮತ್ತು ದಾರ್ಶನಿಕ ಜಾನ್-ಪಾಲ್ ಸಾರ್ತೃ L’etfre et neant (Being and nothingness `ಇರುವಿಕೆ ಮತ್ತು ಇಲ್ಲದಿರುವಿಕೆ’) ಎಂಬ ಅಸ್ತಿತ್ವವಾದೀ ಮಹತ್ವದ ತಾತ್ವಿಕ ಕೃತಿಯೊಂದನ್ನು ಪ್ರಕಟಿಸಿದ್ದ. ಇದರಲ್ಲೂ “ಕಾಯುವಿಕೆ”ಯ ಚರ್ಚೆ ಬರುತ್ತದೆ. ನಾವು ವರ್ತಮಾನದಲ್ಲಿ ಯಾವುದನ್ನು ಮುಕ್ತ ಆಯ್ಕೆಯೆ೦ದುಕೊಳ್ಳುತ್ತೇವೋ ಅದಕ್ಕೆ ಅರ್ಥ ಬರುವುದು ಭವಿಷ್ಯದಲ್ಲಿ ಎನ್ನುತ್ತಾನೆ ಸಾರ್ತೃ. ಉದಾಹರಣೆಗೆ, ತಾರುಣ್ಯದಲ್ಲಿ ಧಾರ್ಮಿಕ ಘಟ್ಟವೊಂದನ್ನು ಹಾದು ಹೋಗುವವರು ವಯಸ್ಸಾದ ಮೇಲೆ, ತಾವೊಂದು ‘ಬೆಳವಣಿಗೆಯ ಸಂಧಿಕಾಲ’ದಲ್ಲಿದ್ದೆವು ಎಂದು ಅದನ್ನು ತಿರಸ್ಕರಿಸಬಹುದು; ಅಥವಾ ಧಾರ್ಮಿಕತೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತ, ಹಿಂದಣ ಘಟ್ಟವನ್ನೊಂದು ಪ್ರಥಮ ಹೆಜ್ಜೆಯಾಗಿ ಕಾಣಬಹುದು. ಇವೆರಡೂ ಮೊದಲಿನ ಆಯ್ಕೆಗೆ ಅರ್ಥ ತರುವಂಥವೇ. ಆದರೆ ಸಮಸ್ಯೆಯೆಂದರೆ, ಅರ್ಥ ಬರುವ ವೇಳೆಗೆ ಅಂದಿನ ವರ್ತಮಾನ ಕಳೆದು ಹೋಗಿ ಭೂತಕಾಲದಲ್ಲಿ ಸೇರಿಹೋಗಿರುತ್ತದೆ; ಹಾಗೂ ಅದೇ ಮನುಷ್ಯರೀಗ ಸದ್ಯತೆಯ ಆಯ್ಕೆಯಲ್ಲಿ ನಿರತರಾಗಿರುತ್ತಾರೆ. ಹೀಗೆ ಮನುಷ್ಯರ ಸಂದಿಗ್ಧತೆಯೆಂದರೆ ಯಾವಾಗಲೂ ತಮಗೋಸ್ಕರವೇ ಕಾಯಬೇಕಾಗಿರುವುದು. ನಮ್ಮ ಜೀವನವೆಂದರೆ ಅದೊಂದು ಸುದೀರ್ಘವಾದ ಕಾಯುವಿಕೆ: ಮೊದಲು ನಮ್ಮ ಗುರಿಗಳ ಸಾಧನೆಗೆ, ಮತ್ತು ಮುಖ್ಯವಾಗಿ ನಮಗೋಸ್ಕರವೆ ಎನ್ನುವುದು ಸಾರ್ತೃವಿನ ಅಭಿಪ್ರಾಯ. ಅವನ ಪ್ರಕಾರ ಜನ ಮನುಷ್ಯರಾಗಿರುವುದು ತಾವು ಎಷ್ಟರಮಟ್ಟಿಗೆ ‘ಸಮಯೀಕರಿಸಬಹುದು’, ಎಷ್ಟರಮಟ್ಟಿಗೆ ತಮ್ಮ ಕತೆಗಳನ್ನು ಹೇಳಬಹುದು ಎನ್ನುವುದರ ಮೇಲೆ ಅವಲಂಬಿಸಿದೆ.’ ಆದ್ದರಿಂದ ನಮ್ಮ ಬದುಕು ಕಾಯುವಿಕೆಗಳಿ೦ದ ಮಾತ್ರವೇ ಅಲ್ಲ, ಕಾಯುವಿಕೆಗಳಿಗಾಗಿ ಕಾಯುವ ಕಾಯುವಿಕೆಗಳಿಂದಲೂ ಮಾಡಿದ್ದೆಂದು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ. ಸಾರ್ತವಿನ ಪ್ರಕಾರ ಮನುಷ್ಯರು ಸದಾ ತಾತ್ಕಾಲಿಕ ಪಾತ್ರಗಳನ್ನಷ್ಟೇ ವಹಿಸಿಕೊಂಡಿದ್ದು, ಎಂದಿಗೂ ತಮ್ಮನ್ನು ತಾವೇ ಸೇರಿಕೊಳ್ಳುವುದು ಅಸಾಧ್ಯವಾಗುತ್ತದೆ. ‘ಈ ಕಾಯುವಿಕೆಗಳೆಲ್ಲವೂ ಇನ್ನು ಯಾವುದಕ್ಕೂ ಕಾಯದೆ, ಆದರೆ ಕಾಯಲ್ಪಡುವ ಅಂತಿಮ ಪದವೊಂದರ ಸೂಚನೆಯನ್ನು ಒಳಗೊಂಡಿವೆ. ಇರುವಿಕೆಯಾಗುವ ಒಂದು ವಿರಾಮ ಮತ್ತು ಇರುವಿಕೆಗೆ ಇನ್ನು ಕಾಯುವುದಲ್ಲ. ಇಡೀ ಸರಣಿ ಈ ಅಂತಿಮ ಪದದಿಂದ ನೇತುಹಾಕಿರುವಂಥದು ಹಾಗೂ ಈ ಪದವಾದರೆ ತತ್ವಶಃ ಯಾವತ್ತೂ ದತ್ತವಾಗಿರುವುದಲ್ಲ ಹಾಗೂ ನಮ್ಮ ಇರುವಿಕೆಯ ಮೌಲ್ಯವಾಗಿರುವಂಥದು.’ (These watings evidently all include a reference to a final term which would be wanted for waiting for anything more. A repose which would be being and no longer a waiting for being. The whole series is suspended from this final term which on principle is never given and which is the value of our being.)

ಯಾವತ್ತೂ ಭವಿಷ್ಠದಲ್ಲಿದ್ದು ಎಷ್ಟೇ ಕಾದರೂ ಮನುಷ್ಯರಿಗೆ ಎಂದೂ ಸಿಗದಂಥ ಯಾವುದೀ ‘ಪರಮ ಪದ’? ದೇವರು? ಅಥವಾ ಗೊದೋ? ಬೆಕೆಟ್‌ನ ನಾಟಕವನ್ನು ಸಾರ್ತೃವಿನ ತಾತ್ವಿಕ ಕೃತಿಯ ಜತೆ ಓದುವ ವಿಮರ್ಶಕರಿಗೆ ಎಸ್ಟ್ರಗನ್ ಮತ್ತು ವ್ಲಾಡಿಮರ್‌ನ ಕಾಯುವಿಕೆ, ಮನುಷ್ಯರ ಈ ಕಾಯುವಿಕೆಯ ಒಂದು ನೀತಿಕತೆಯಾಗಿ ಕಾಣಿಸುತ್ತದೆ. ಹೀಗೆ ನೋಡಿದರೆ God ಮತ್ತು Godot ಎಂಬಲ್ಲಿನ ಅಕ್ಷರಸಾಮ್ಯ ಅಕಾರಣವಾಗಿ ಉಪಯೋಗಿಸಿದ್ದಾಗಿರಲಾರದು ಎಂದು ಕೂಡಾ ಎನಿಸುತ್ತದೆ. ಇದು ಕೇವಲ ದೇವರೆಂದರೆ ಗೊದೋ (God=Godot)ಎಂಬ ಸರಳ ಸಮೀಕರಣವೂ ಅಲ್ಲ ಎನ್ನುತ್ತಾನೆ ಈ ಸಾಮ್ಯವನ್ನು ಗುರುತಿಸುವ ಲಾನ್ಸ್ ಸೈಂಟ್ ಜಾನ್ ಬಟ್ಳರ್ ಎಂಬ ವಿಮರ್ಶಕ; ಯಾಕೆಂದರೆ ದೇವರಿಲ್ಲ, ಆದ್ದರಿಂದ ಗೊದೋ ಕೂಡಾ ಇಲ್ಲ! ಅರ್ಥಾತ್ ನಾವು ಮಾತಾಡುತ್ತಿರುವುದು ದೈವೋತ್ತರ (ಅಥವಾ ಜಗತ್ತಿನ ಕುರಿತು. ‘ಗೊದೋವಿಗಾಗಿ ಕಾಯುತ್ತ’ ನಾಟಕದಲ್ಲಿ ಕ್ರೈಸ್ತನ ಬಗ್ಗೆ, ದೇವರ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆಯಾದರೂ, ಅಲ್ಲಿನ ಪಾತ್ರಗಳನ್ನು ದೈವವಿಶ್ವಾಸಿಗಳೆಂದು ಕರೆಯುವ೦ತಿಲ್ಲ; ಅದೇ ರೀತಿ, ಗೊದೋವಿಗಾಗಿ ಕಾಯುವವರಿಗೆ ಸ್ವತಃ ಗೊದೋವಿನ ಕುರಿತು ವಿವರಗಳಾಗಲಿ ಖಚಿತತೆಯಾಗಲಿ ಇವೆಯೆಂದು ಹೇಳಲಾಗದು. ಒಂದು ವೇಳೆ ಗೊದೋ ಬಂದರೂ ಸಹಾ ಅವರು ಗೊದೋನನ್ನು ಗುರುತಿಸಲಾರರು.

ದೇವರನ್ನು ನಿರಾಕರಿಸಿದ ಜಗತ್ತು ಮನುಷ್ಯ ಜೀವನಕ್ಕೆ ಅರ್ಥ ನೀಡುವಂಥ ಇನ್ನು ಯಾವುದೇ ಮೌಲ್ಕವೊಂದನ್ನು ಕೇಂದ್ರವಾಗಿ ಇರಿಸುವುದು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯೇಳುತ್ತದೆ. ಸಾರ್ತೃ ಹಾಗೂ ಬೆಕೆಟ್‌ನ ಪ್ರಕಾರ ಬಹುಶಃ ಸಾಧ್ಯವಿಲ್ಲ; ಯಾಕೆಂದರೆ ಅಂಥ ಅರ್ಥ ನೀಡುವ ಕೇಂದ್ರವೊಂದು ಇಲ್ಲದ ಶೂನ್ಯತೆಯಲ್ಲಿ ಬದುಕುವುದೇ ನಿಜವಾಗಿಯೂ ಮನುಷ್ಯಾವಸ್ಥೆ. ಹಾಗಿದ್ದರೆ ಮನುಷ್ಯರು ಯಾಕೆ ಮತ್ತು ಹೇಗೆ ಬದುಕಬೇಕು? ಅದರ ಹೊರತಾಗಿ ಬೇರೆ ಮಾರ್ಗವಿಲ್ಲ ಎಂದು ಬೆಕೆಟ್ ಹೇಳುವಂತೆ ತೋರುತ್ತದೆ. ಅವನ ಪಾತ್ರಗಳು ಆತ್ಮಹತ್ಯೆಯ ಬಗ್ಗೆ ಮಾತಾಡುತ್ತವಾದರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಬಹುಶಃ ಅವಕ್ಕೆ ಗೊದೋ ಇಲ್ಲ ಎನ್ನುವುದು ಗೊತ್ತಿಲ್ಲದಿರಬಹುದೇ? ಗೊದೋ ಇದ್ದಾನೆ ಅಥವಾ ಇಲ್ಲ ಎಂಬ ಖಚಿತತೆ ಅವಕ್ಕೆ ಇದ್ದಂತಿಲ್ಲ. ಒಂದು ವೇಳೆ ಗೊದೋ ಇಲ್ಲ ಎನ್ನುವುದು ಗೊತ್ತಾದರೆ ಅವು ಏನು ಮಾಡುತ್ತಿದ್ದುವು? ಗೊದೋವಿನ ಕುರಿತಾದ ಕಲ್ಪನೆಯೊಂದನ್ನು ಸೃಷ್ಟಿಸಿ ಗೊದೋವಿಗಾಗಿ ಕಾಯುವುದು ಅವರ ಲೋಕ ಹುಡುಕಿಕೊಂಡ ಒಂದು ಉಪಾಯವೇ? ಶೂನ್ಯತೆಯ ಅನಂತರದ ಘಟ್ಟದಲ್ಲಿ ಸಾರ್ತೃ ಮಾರ್ಕ್ಸಿಸಮಿನತ್ತ ವಾಲಿದುದನ್ನೂ ಇಲ್ಲಿ ಉಲ್ಲೇಖಿಸಬೇಕು. ಅದೇ ರೀತಿ, ದೇವರನ್ನೂ ಪಂಥೀಯ ಕ್ರಿಶ್ಚಿಯಾನಿಟಿಯನ್ನೂ ಒಟ್ಟಿಗೇ ವಿರೋಧಿಸಿದ ನೀತ್ಸೆ ಮಾನವನಲ್ಲಿ ಪ್ರಕೃತಿದತ್ತ ಅತಿಮಾನವತ್ವದ ಸಾಧ್ಯತೆಯನ್ನು ಕಂಡ. ಯಾಕೆಂದರೆ ಅರ್ಥದ ಭರವಸೆಯಿಲ್ಲದ ಲೋಕದಲ್ಲಿ ಬದುಕುವುದು ಮನುಷ್ಯನಿಗೆ ಅಸಾಧ್ಯವೇ ಸರಿ. ದೇವರಿಲ್ಲದಿರುತ್ತಿದ್ದರೆ ಮನುಷ್ಯರು ದೇವರನ್ನು ಕಂಡುಹಿಡಿಯುತ್ತಿದ್ದರು ಎಂಬ ಮಾತಿನ ಅರ್ಥ ಇದುವೇ.

‘ಮಾತಿನ ಅರ್ಥ’ವನ್ನೇ ಪ್ರಶ್ನಿಸಿದ ಝಾಕ್ ಡೆರಿಡಾನ ನಿರಚನವಾದವೂ ಇಲ್ಲಿ ಪ್ರಸ್ತುತವಾಗುತ್ತದೆ. ಯಾಕೆಂದರೆ ಮಾತಿನ ಅರ್ಥವನ್ನು ನಿರಾಕರಿಸಿದ ತಕ್ಷಣ ಸಾರ್ತೃ ಮತ್ತು ಬೆಕೆಟ್ ನಿರಾಕರಿಸುವ ಜೀವನದ ಅರ್ಥಕ್ಕೂ ಮಾತಿನ ಅರ್ಥಕ್ಕೂ ವಿಚಿತ್ರವಾದ ಸಾಮ್ಯವುಂಟಾಗುತ್ತದೆ. ಮಾತು ಸಾಧ್ಯವಾಗುವುದು ಸಂಜ್ಞೆಗಳ ಮೂಲಕ. ಪ್ರತಿಯೊಂದು ಸಂಜ್ಞೆಗೂ ಅದರದ್ದೇ ಆದ ಮೌಲ್ಯವಿಲ್ಲ, ಆಯಾ ಭಾಷಾವ್ಯವಸ್ಥೆಯ ಇತರ ಸಂಜ್ಞೆಯಿಂದಲೂ ಅದು ಹೇಗೆ ಭಿನ್ನವಾಗಿದೆ ಎನ್ನುವುದೇ ಅದರ ಮೌಲ್ಯ (ಅರ್‍ಥ) ಎಂದು ಆಧುನಿಕ ಭಾಷಾವಿಜ್ಞಾನಕ್ಕೆ ನಾಂದಿ ಹಾಕಿದವನು ಫರ್ಡಿನಾಂಡ್ ದ ಸಸ್ಸ್ಯೂರ್. ಆದರೆ ಸಸ್ಸ್ಯೂರ್‌ ತನ್ನೀ ಸಿದ್ಧಾಂತದ ತಾರ್ಕಿಕ ಪರಿಣಾಮವನ್ನು ಗುರುತಿಸಿರಲಾರ. ಅದನ್ನು ಗುರುತಿಸಿ ಅರ್ಥದ ‘ಅಸಾಧ್ಯತೆ’ಯನ್ನು ಪತಿಪಾದಿಸಿದವನು ಡೆರಿಡ. ಒಂದು ಪದದ ‘ಅರ್‍ಥ’ ಇನ್ನೆಲ್ಲಾ ಪದಗಳ ಅರ್ಥಗಳೊಂದಿಗೆ ಅದಕ್ಕಿರುವ ಭಿನ್ನತೆಯ ಮೇಲೆ ಅವಲಂಬಿಸಿದೆ ಎಂದಾದರೆ, ಆ ಇನ್ನೆಲ್ಲಾ ಪದಗಳ ಅರ್ಥ ತಿಳಿದುಕೊಳ್ಳುವುದಕ್ಕೂ ನಾವು ಇದೇ ನಿರಂತರ ಆವರ್ತನಾ ಚಕ್ರದ ದಾರಿ ಹಿಡಿಯಬೇಕಾಗುತ್ತದೆ. ಹಾಗಾದರೆ ಅರ್ಥದ ಆರ್ಕಿಮಿಡಿಯನ್ ಕೇಂದ್ರವಿರುವುದು ಎಲ್ಲಿ? ಅಂಥದೊಂದು ಕೇಂದ್ರವೇ ಇಲ್ಲ ಎಂದಾಯಿತು. ಆಮೇಲೆ ಅರ್ಥವೂ ಇಲ್ಲ! ಇದರಿಂದ ಡೆರಿಡ ಮಾತಿನ ಅರ್ಥವನ್ನು ಅಲ್ಲಗಳೆಯುತ್ತಾನೆ ಎಂದಾಗಲಿಲ್ಲ; ಮಾತಿಗೆ ಅರ್ಥ ಬರುವುದು ನಾವು ಹಾಗೆ ಅಂದುಕೊಂಡಾಗ ಎನ್ನುವುದು ಅವನ ವಾದದ ತಾತ್ಪರ್ಯ; ಅರ್ಥಾತ್ ಮಾತಿಗೆ ‘ಅತೀತ’ವಾದ ಅರ್ಥವೆನ್ನುವುದಿಲ್ಲ. ಅದೊಂದು ಕಣ್ಕಟ್ಟು. ಆದರೆ ಅರ್ಥವಿಲ್ಲದ ಜಗತ್ತಿನಲ್ಲಿ ಮನುಷ್ಯರು ಬದುಕಲಾರರು; ಆದ್ದರಿಂದ ಅವರು ಅರ್ಥ ಕಲ್ಪಿಸಿಕೊಳ್ಳುವುದಕ್ಕೆ ಬಾಧ್ಯರಾಗುತ್ತಾರೆ. ಅಡೋರ್ನೋವಿನ ಮಾತು ಸೂಚಿಸುವಂತೆ ಎಲ್ಲಾ ಸ್ಥಾಪಿತ ಹಿತಾಸಕ್ತಿಗಳೂ ಸಮಾಜದ ಮೇಲೆ ನಿಯಂತ್ರಣ ಸಾಧಿಸುವುದು ಇಲ್ಲಿಂದಲೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ್ಯ ಸ್ಮರಣೆ
Next post ಸೀನಿಯರ್ ಸಿಟಿಸನ್ಸ್

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…