ಕಟ್ಟುತ್ತಿರುವೆನು ಮಂದಿರವನ್ನು
ಎದೆಯ ಗೂಡಿನಲ್ಲಿ
ರಾಮ ರಹೀಮ ಕ್ರಿಸ್ತ ಅಲ್ಲಮ
ಎಲ್ಲರಿರುವರಲ್ಲಿ ||
ಆಂಜನೇಯನಿಗೂ ಏಸುಕ್ರಿಸ್ತನಿಗೂ
ಬಹಳ ನ್ಯಾಸ್ತವಿಲ್ಲಿ
ಬುದ್ಧ ನಾನಕ ಮಹಾವೀರರು
ಇವರ ಸ್ನೇಹದಲ್ಲಿ
ರಾಮ ಪವಡಿಸಿಹ ಮಸೀದಿಯಲ್ಲಿ
ಕ್ರಿಸ್ತನಾ ಕೋಣೆಯಲ್ಲಿ
ಇದಕೆ ಹೆಸರುಗಳು ಇಗರ್ಜಿ ಬಸದಿ
ನೂರು ಭಾಷೆಯಲ್ಲಿ
ಇಲ್ಲಿಯ ರಾಮ ನುಡಿವನು ಉರ್ದು
ಅಲ್ಲಾ ಸಂಸ್ಕೃತ ಬಲ್ಲ
ಕ್ರಿಸ್ತನಿಗೊ ತೆಲುಗೆಂದರೆ ಪ್ರೀತಿ
ಕನ್ನಡವಿಲ್ಲದೆ ಇಲ್ಲ
ಎಲ್ಲಾ ದೇವರು ಕ್ರಿಕೇಟಾಡುವರು
ಸೋಲು ಗೆಲುವು ಕ್ಷಣಿಕ
ಕಡೆಗೆ ಮಬ್ಬಲಿ ಒಂದೆ ಕ್ಲಬ್ಬಲಿ
ತೋರ್‍ವರೆಲ್ಲ ಪುಲಕ
ಜುಟ್ಟುಗಳಿದ್ದರೆ ಜುಟ್ಟೆಳೆದಾಟ
ಗಡ್ಡಗಳಿದ್ದರೆ ಮುಂಭಾರ
ದೇಹಕೆ ಭಾರ ಆ ಶಿವದಾರ
ಕಡಿಮೆಯಲ್ಲ ಜನಿವಾರ!
ಅವನು ಹೇಳುವನು ಕಿರೀಟ ಭಾರ
ಇವನಿಗೊ ಟೋಪಿಯು ಭಾರ
ಎಲ್ಲರು ಹಾರೈಸಿಹರು ಕ್ರಿಸ್ತಗೆ
ಶಿಲುಬೆಯಿಂದ ಪರಿಹಾರ
ಎಲ್ಲ ಚಾನೆಲಲಿ ಮತ ಮೌಢ್ಯಗಳು
ವಿಜ್ಞಾನಕೆ ಇದು ಥರವೇ
ಕಡೆಗೆ ನಮ್ಮನೂ ಎಳೆದು ತರುವಿರಿ
ನಿಮಗೆ ಇದು ಭೂಷಣವೇ
ಎದೆಯ ಗೂಡಿನಲಿ ರಾಮ ಅಳುವನು
ಪರಿವಾರದ ಜತೆಗೂಡಿ
ತಾಯಿಯ ಗರ್ಭವ ದಾಟಿದ ತಪ್ಪಿಗೆ
ಪ್ರಾಣಿ ಪಕ್ಷಿಗಳ ಕೂಡಿ
*****