Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

|| ಓಮ್ ||


ಪರಮನೆ ನಿನ್ನ ಪರಿಯನು ಪರಿಕಿಸೆ
ಬರಿಸಿದೆ ಬಾರದ ಭವಗಳಲಿ
ತಿರೆಯಲಿ ಮೆರೆಯಲು ತನವನು ತರಿಸಿದೆ
ಅರಿಯದ ಜನನಿಯ ಜಠರದಲ್ಲಿ


ಆಗುವದೆಲ್ಲವು ಆಗಲಿದೇವನೆ
ಭೋಗಿಪ ಕರ್ಮವಭೋಗಿಸುವೆ
ನೀಗದ ದುಗುಡವ ಬೆಂಕೊಂಡಾಡಲಿ
ಭೋಗಿಪ ಕರ್ಮವ ಭೋಗಿಸುವೆ


ಕೇಸುವಿನೆಲೆಗಳ ಮೇಲೆಯ ಬೀಳುವ
ನೀರದು ಜಾರುವ ತೆರದಿಂದೆ
ಹೊಸಹೊಸ ಸಂಕಟ ಸಂಚಯವೆರಗುತ
ಮು೦ಕೊ೦ಡೋಡಲಿ ಮನದಿಂದೆ


ಟೊಂಗೆಯ ಮೇಲಣ ಮಂಗನತೆರದಲಿ
ಲಂಘನ ಗೆಯ್ಯುವ ಮನವನ್ನು
ಮೂಡಣಗೂಳಿಯ ಮೂಗಿನದಾಣದ
ತಿರುಗಿಸು ನಿನ್ನಡಿದಾವರೆಗೆ


ಕಾರುಣಾಂಬುಧಿ ಕನಿಕರ ತೋರೆಲೊ
ಕರಗುವ ಕರುಳಿನ ನಿಲಯಕ್ಕೆ
ಬಾಳಿನ ಬೆಳಕದು ಸಾಲದೆ ಸಾಗಿದೆ
ಕೇಳುವೆ ಶಾಂತಿಯ ಕುಡುದೊರೆಯೆ


ತಾಯಿಯು ನೀನೇ ತಂದೆಯ ನೀನೇ
ಬ೦ಧುವು ನೀನೇ ಬಳಗಗಳು
ನೀನೇ ದೇವನೆ ಜನತೆಯು ನೀನೇ
ಸರ್ವವು ನೀನೇ ಜಗದೀಶ


ಮಕ್ಕಳ ಮುದ್ದಿನ ಮಾತಿಂದಳಲುತೆ
ಬಿಕ್ಕುತ ಕೇಳುವೆ ದರುಶನವ
ಸತಿಪತಿ ಮಿಥುನದ ವಿರಹದ ಸರದೊಳು
ತೀಡುತ ಬೇಡುವೆ ಭೆಟ್ಟಿಯನು


ತಾಯಿಯೆ ಆದರೆ ತ೦ದೆಯೆ ಆದರೆ
ಪತಿನೀನಾದರೆ ಕಾಡುವೆಯ
ತಾಯಿಯ ತಂದೆಯ ಪಾಶದ ಪರಿಯನು
ಸತಿಪತಿ ಸಲುಗೆಯು ನೀ ನರಿಯ


ಕಾಡುವೆ ಯಾತಕೊ ಕಾಡಿಸಿ ಕಾಡಿಸಿ
ನೋಡುವೆ ಯಾತಕೊ ಪೊಡವಿಪನೆ
ಜೇಡನ ಹುಳುವಿನ ಬೀಡೊಳು ಬೀಳಿಸಿ
ಕಾಡಿಪ ಗಾಡಿಯದೇನಯ್ಯ

೧೦
ನಿಧಿಯನು ಬೇಡೆನು ಪದವಿಯ ಬೇಡೆನು
ಪದುಳದೆ ಬೇಡುವೆ ದರುಶನವ
ಹೃದಯದೆ ಕದಲದ ಬಕುತಿಯ ಬೆಳ್ಗೊಡೆ
ಬೇಡುವೆ ಕೇಳೆನು ಪರತನ್ನು

೧೧
ನಶಿಸದ ನಾಕದ ನಿ್ಧಿಯನು ಹೊಂದೆನು
ಜನಪದ ಸದನವು ಸೊರಗುತಿರೆ
ಜನುಮಾಂತರಗಳ ಜನಪದ ಸೇವೆಯ
ಜನುಮವ ನೀಡೈ ಪರಮೇಶ

೧೨
ದೇಹದ ದಾರ್ಢ್ಯವು ದಾಟುತಲೋಡುವ
ಮುನ್ನಮೆ ಸನ್ನುತ ಪರಮನನು
ಭವಸಂಸಾರದ ಬವರದ ಬಳಿವಿಡಿ
ದಾಡುತ ಪಾಡೆಲೆ ಒಡಲೊಡೆಯ

೧೩
ಕಾಣದ ವಿಶ್ವವು ಕಾಣುತಲೆದ್ದಿತು
ದೇವನ ಲೀಲಾ ಮಾತ್ರದಲಿ
ಲೀಲೆಯದೆಂತೋ ಬಾಲಕವೃಂದದ
ಗುರಿಗೊತ್ತಿಲ್ಲದ ಚೇಷ್ಟೆಯದೊ ?

೧೪
ಹುಡುಗರ ತ೦ಡವು ಹೂವಿನ ಮೇಲಿನ
ಹುಳಿಹುಪ್ಪಡಿಗಳ ಹಿಡಿಹಿಡಿದು
ಕಾಡುತ ನಲಿನಲಿದಾಡುತ ನೋಡುತ
ಪೀಡಿದ ನೀತಿಯಿದೇನಯ್ಯ

೧೫
ಭವಸಂಸಾರದ ಬವರದ ಬವಣೆಯ
ಬೇಳೊಳು ಪುಟಕಿಕ್ಕೇಳದಿರೆ
ಭುವನದ ಜೀವಿಯ ಬವಣೆಯನರಿಯುತ
ಬಗೆಹರಿಸುವ ಬಗೆ ತಾನರಿಯ

೧೬
ಜಾತಿಮತಂಗಳ ಕಲಹದ ಕೊಳೆಯಲಿ
ನೀತಿಯ ದೇವನ ಕಾಣದಿಹೆ
ಮಾತಿಗೆ ಮಾತಿಗೆ ಜಾತಿಯನೆತ್ತುವ
ಪಾಪಿ ಜನಗಳ ಕಾಣುತಿಹೆ

೧೭
ನೀತಿಯ ನುಳಿದಿಹ ಜಾತಿಯದೆಂತೋ
ಭೀತಿಯ ಬಿತ್ತುವ ಬವಣೆಯದು
ಹಿಂದುವನೆಲ್ಲವ ಕೊಂದಿಹ ಜಾತಿಯ
ಬಂಧನ ಬಿಡಿಸೈ ಜಗದೀಶ

೧೮
ಓಮಕ್ಷರದಾ ನಾಮದೆ ನೆನೆಸುವ
ಸೀಮೆಯ ದೇವನೆ ಎಲ್ಲಿಹೆಯೋ
ನಾಮದ ಮಾತ್ರದೆ ನರರಿಗೆ ಕಾಣುವ
ನೇಮವನೆಲ್ಲಿಯು ಕಾಣದಿಹೆ

೧೯
ಭೇದವ ತಿಳಿಯನಭೇದವ ತಿಳಿಯೆನು
ವಾದದ ಭೂಮಿಗೆ ಬೀಳದಿಹೆ
ಮೋದವು ತುಂಬಿರೆ ಹೃದಯವೆ ಭೇದಾ
ಭೇದದ ಬವಣೆಯ ನಾನರಿಯೆ

೨೦
ಮುಗಿಲಿನ ಮಡಲಲಿ ಮಿಡಿಮಿಡಿದಾಡುವ
ಮೋಡದ ಗಾಡಿಗೆ ಮೈಮರೆವೆ
ಎಲ್ಲಿಹೆ ದೇವನೆ ನಿಲ್ಲದೆ ಬಾರೆಲೊ
ಲಲ್ಲೆಯಮೆಲ್ಲುಲಿಸಲಿಗೆಯಲಿ

೨೧
ಬಾರೆಲೊ ದೇವನೆ ಆ೦ಬರದಿಂಬಿನ
ವಿವರದ ಲಂಬಿಸಿ ಚುಂಬಿಸುವ
ವನಪಿನ ಮೋಹದ ಮಗಿಲಿನ ಮೊನೆಯದು
ಮನವನು ಮಾರಿಸಿ ಕುಣಿಸುತಿದೆ

೨೨
ತೇಜದೆ ಬೆಳಗುವೆ ತೇಜವ ಕೊಡುನೀ
ವೀರ್ಯಕೆ ಇರ್ಕೆಯು ನೀನಿರುವೆ
ವೀರ್ಯವ ಕೊಡುನೀ ಒಲವನು ಕೊಡುನೀ
ಬಲವಂತನು ನೀನಾಗಿರುವೆ

೨೩
ಓಜವ ಕೊಡುನೀ ಓಜವು ನೀನೇ
ಮನ್ಯುಗೆ ಮನೆ ನೀನಾಗಿರುವೆ
ಮನ್ಯುವ ಕೊಡುನೀ ಸಹನವ ಕೊಡುನೀ
ಸಹನದ ಸೀಮಾಪುರುಷನಿಹೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...