ವಿಜಯ ವಿಲಾಸ – ಅಷ್ಟಮ ತರಂಗ

ವಿಜಯ ವಿಲಾಸ – ಅಷ್ಟಮ ತರಂಗ

ಈಕಡೆ ವೇದವತೀ ನಗರದಲ್ಲಿ ಕಾರಾಗೃಹದಲ್ಲಿದ್ದ ಶೀಲವತೀ ದೇವಿಗೆ ವಿಜಯನ ಪ್ರತಿಜ್ಞೆ ಮತ್ತು ಪ್ರಯಾಣಗಳ ವಿಚಾರವು ಕಾವಲುಗಾರರಿಂದ ತಿಳಿದಿತ್ತು. ಆಕೆಯು, ತನ್ನ ಸುಕುಮಾರನು ಕ್ಷಿಪ್ರದಲ್ಲಿ ವಿಜಯಶಾಲಿಯಾಗಿ ಬಂದು ಸತ್ಯಧರ್ಮಗಳನ್ನು ಆರಿಸಿ ತನ್ನನ್ನು ಮೃತ್ಯುವಿನಿಂದಲೂ ನಿರ್ಬಂಧದಿಂದಲೂ ಬಿಡಿಸುವಂತೆ ಅನುಗ್ರಹಿಸಬೇಕೆಂದು ಸದಾ ಕಾಲದಲ್ಲಿಯೂ ತಮ್ಮ ಕುಲದೇವತೆಯಾದ ಅಂಬಿಕೆಯನ್ನು ಪ್ರಾರ್ಥಿಸುತ್ತ ವಿಜಯಕುಮಾರನ ಸುಖಾಗಮನವನ್ನೇ ಎದುರುನೋಡುತ್ತಿದ್ದಳು. ಸೌದಾಮಿನಿ ಕಾದಂಬಿನಿಯರಾದರೋ ವಿಜಯನು ಹಿಂದಿರುಗದೆ ಹಾಗೆಯೇ ಹಾಳಾಗಿ ಹೋಗಲೆಂದು ಪ್ರತಿಕ್ಷಣದಲ್ಲಿಯೂ ಅವನಿಗೆ ಅಮಂಗಳವನ್ನೆ ಬಯಸುತ್ತಿದ್ದರು. ಆದರೆ ತಾವು ಎಷ್ಟು ಉಪಾಯಗಳನ್ನು ಮಾಡಿ ರಾಜನೊಡನೆ ಎಷ್ಟು ಬೇಳುವೆಯ ಮಾತುಗಳನ್ನಾಡಿದರೂ ಕಾರಾಗೃಹದಲ್ಲಿ ಪುರುಷವೇಷದಿಂದಿದ್ದ ಸರಸಾಂಗಿಗೆ ಮಾತ್ರ ಬಂಧವಿಮೋಚನೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿನ ಕಾವಲುಗಾರರಿಗೆ ಲಂಚವನ್ನು ಕೊಟ್ಟು ತಾವು ಕಿಟಿಕಿಯಿಂದ ರಹಸ್ಯವಾಗಿ ಅವಳೊಡನೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಂಡು ಅವಳಿಗೆ ವಿಧವಿಧವಾದ ಫಲ ಭಕ್ಷಾದಿಗಳನ್ನು ತಂದು ಕೊಡುತ್ತ ಧೈರ್ಯಗೆಡಬೇಡವೆಂದು ಪ್ರೋತ್ಸಾಹಿಸುತ್ತ ಇದ್ದುದಲ್ಲದೆ, ವಿಚಾರಣೆಯ ಸಮಯದಲ್ಲಿ ಶೀಲವತಿಯು ತನ್ನಲ್ಲಿ ಅನುರಕ್ತಳಾಗಿದ್ದಳೆಂದು ರಾಜನೊಡನೆ ಹೇಳುವಂತೆ ಪದೇ ಪದೇ ಒತ್ತಿ ಹೇಳಿ ಕೊಟ್ಟು ಬೆನ್ನು ತಟ್ಟುತ್ತಿದ್ದರು. ಆದರೆ ಅವಳನ್ನು ಮುಂದೆ ರಾಜದಂಡನೆಯಿಂದ ಪಾರುಮಾಡುವುದಕ್ಕೆ ತಕ್ಕ ಉಪಾಯವೇ ಇವರಿಗೆ ಹೊಳೆಯಲಿಲ್ಲ. ಏತಕೆಂದರೆ, ಕಾರಾಗೃಹದ ಬೀಗದ ಕೈಗಳನ್ನು ರಾಜನು ಮಂತ್ರಿಯಾದ ಧುರಂಧರನ ವಶಕ್ಕೆ ಕೊಟ್ಟು ಆತನ ಮೂಲಕವೇ ಅಪರಾಧಿಗಳಿಗೆ ಆಹಾರಾದಿಗಳನ್ನು ಕೊಡಿಸುವಂತೆ ಏರ್ಪಡಿಸಿದ್ದು, ಇದರಿಂದ ಅವಳನ್ನು ಬಿಡುಗಡೆ ಮಾಡಲು ಈ ಠಕ್ಕು ಮಾರಿಯರು ಮಾಡಿದ ತಂತ್ರ ಗಳೆಲ್ಲವೂ ವ್ಯರ್ಥವಾದವು.

ಭಾನುತೇಜ ರಾಜಹಂಸರು ಮಾತ್ರ ವಿಜಯನಿಗೆ ರತ್ನ ಬಾಣವು ದೊರೆಯುವುದು ಅಸಾಧ್ಯವೆಂತಲೂ, ಇನ್ನು ರಾಜ್ಯ ಪಟ್ಟಾಭಿಷೇಕವೂ ವಿದ್ಯಾಧರಿಯ ಪಾಣಿಗ್ರಹಣವೂ ತಮಗೇ ಸ್ಥಿರವಾಯಿತೆಂತಲೂ ಸಂತೋಷ ಪಡುತ್ತಿದ್ದರು; ಆದರೆ ಇವರಲ್ಲಿ ಪ್ರತಿಯೊಬ್ಬನೂ ಮತ್ತೊಬ್ಬನಿಗೆ ಮೋಸ ಮಾಡಿ ತಾನೇ ವಿದ್ಯಾಧರಿಯ ಮನಸ್ಸನ್ನು ತನ್ನಂತೆ ತಿರುಗಿಸಿಕೊಂಡು ಅವಳನ್ನು ವಿವಾಹ ಮಾಡಿಕೊಳ್ಳಬೇಕೆಂದು ಆಂತರ್ಯದಲ್ಲಿ ವಿಧವಿಧವಾದ ಉಪಾಯಗಳನ್ನಾಲೋಚಿಸುತ್ತಿದ್ದರು. ಮತ್ತೆ ಆಗಾಗ ರಹಸ್ಯವಾಗಿ ವಿದ್ಯಾಧರಿಯನ್ನು ಕೆಣಕಿ ಅವಮಾನಪಟ್ಟು ಬರುತ್ತಿದ್ದರು.

ವಿದ್ಯಾಧರಿಯ ಮನಸ್ಸು ಮಾತ್ರ ವಿಜಯನಲ್ಲಿಯೇ ಲೀನವಾಗಿ, ಅವಳು ಸದಾ ವಿಜಯನ ವಿಜಯವನ್ನೇ ಬಯಸಿ ಅವನ ಸುಖಾಗಮನಕ್ಕಾಗಿ ತ್ರಿಕಾಲದಲ್ಲಿಯೂ ಸರ್ವಮಂಗಳೆಯನ್ನಾ ರಾಧಿಸುತ್ತಿದ್ದಳು. ಇವಳ ತಂದೆಯಾದ ಧುರಂಧರನಿಗೂ, ವಿಜಯನು ಮಹಾಪರಾಕ್ರಮಿಯೆಂಬ ನಂಬಿಕೆಯಿದ್ದುದರಿಂದಲೂ, ಅವನು ಯತ್ನಿಸಿದ ಕಾರ್ಯಗಳಲ್ಲಿ ತಪ್ಪದೆ ಜಯವನ್ನು ಪಡೆದುಬರುವನೆಂದು ದೈವಜ್ಞರು ಅವನ ಜಾತಕರೀತಿಯನ್ನು ನೋಡಿ ಹೇಳಿದ್ದುದರಿಂದಲೂ, ಅವನು ಅವಧಿಯೊಳಗಾಗಿ ಕಾರ್ಯವನ್ನು ಸಾಧಿಸಿ ಕೊಂಡು ಬಂದೇ ಬರುವನೆಂಬ ನಂಬಿಕೆಯು ಬಹಳವಾಗಿತ್ತು.

ಚಂದ್ರಸೇನರಾಜನಿಗಾದರೋ, ವಿವೇಕಿಯೂ ಯುಕ್ತಿ ಚಾತುರ್ಯಗಳಿಂದೊಪ್ಪುವ ಪರಾಕ್ರಮಶಾಲಿಯೂ ಆದ ವಿಜಯನ ನಿಜಸ್ಥಿತಿಯು ಮನಸ್ಸಿಗೆ ಬಾರದೆ ಇದ್ದುದರಿಂದಲೂ, ಶೀಲವತಿಯು ದುರ್ಮಾರ್ಗ ಗಾಮಿನಿಯಾದಳೆಂಬ ವ್ಯಥೆಯಿಂದಲೂ ಸಹ ಆತನು ವಿಜಯನ ಆಗಮನದ ವಿಷಯದಲ್ಲಿ ಉದಾಸೀನನಾಗಿಯೇ ಇದ್ದನು. ಹದಿನಾಲ್ಕು ದಿನಗಳನಂತರ ಶೀಲವತಿಯ ಶಿರಚ್ಛೇದನವನ್ನು ಮಾಡಿಸಿ, ಅಂತಃಪುರ ಪ್ರವೇಶ ಮಾಡಿದ್ದ ಅಪರಾಧಿಯಾದ ಪುರುಷನ ವಿಚಾರಣೆಯನ್ನು ನಡೆಯಿಸಿ ಅವನಿಗೂ ತಕ್ಕ ಶಿಕ್ಷೆಯನ್ನು ವಿಧಿಸುವಾತುರದಲ್ಲಿಯೇ ಇದ್ದನು.

ಈ ವರೆಗೆ ಹದಿಮೂರು ದಿನಗಳು ಕಳೆದವು. ವಿಜಯನು ಇನ್ನು ಜಯಶಾಲಿಯಾಗಿ ಬರುವುದಿಲ್ಲವೆಂಬುದೇ ಎಲ್ಲರ ಮನಸ್ಸಿನಲ್ಲಿಯೂ ನಿರ್ಧರವಾಯಿತು. ಸ್ವಕಾರ್‍ಯ ಧುರಂಧರೆಯರಾದ ಕಾದಂಬಿನಿ ಸೌದಾಮಿನಿಯರು ರಾಜನನ್ನು ಪ್ರೋತ್ಸಾಹಿಸಿ, ಭಾನುತೇಜನಿಗೆ ರಾಜ್ಯ ಪಟ್ಟಾಧಿಕಾರವನ್ನು ಕೊಡಲು ನಿರ್ಧರಿಸುವಂತೆಯೂ, ರಾಜಹಂಸನಿಗೆ ವಿದ್ಯಾಧರಿಯನ್ನು ತಂದು ಕ್ಷಿಪ್ರದಲ್ಲಿ ವಿವಾಹಮಾಡುವಂತೆ ಕೇಳಿಕೊಂಡರು. ಅವಧಿಯೊಳಗೆ ವಿಜಯನು ಬಾರದಿದ್ದರೆ ಅದರಂತೆಯೇ ಮಾಡುವೆನೆಂದು ರಾಜನು ವಾಗ್ದಾನ ಮಾಡಿದನು. ಮಾರನೆಯ ದಿನವೇ ಮಂತ್ರಿಯೊಡನೆ ಮಾತನಾಡಿ ವಿದ್ಯಾಧರಿಯನ್ನು ರಾಜಹಂಸನಿಗೆ ಕೊಡಲು ಆತನನ್ನು ಒಪ್ಪಿಸಿ ಲಗ್ನ ನಿಶ್ಚಯಮಾಡಬೇಕೆಂದು ನಿರ್ಧರಮಾಡಿಕೊಂಡರು. ಮಾರನೆಯ ದಿನ ಮಧ್ಯಾಹ್ನ ಹನ್ನೆರಡು ಘಂಟೆಯಾಯಿತು. ವಿಜಯನು ಬರಲಿಲ್ಲ. ಅವನು ಎಲ್ಲಿಯೋ ಕಾಡುಮೃಗಗಳ ಪಾಲಾದನೋ ಅಥವಾ ಕಾರ್ಯವನ್ನು ಸಾಧಿಸಲಾರದೆ ಅವಮಾನದಿಂದ ಮತ್ತೆ ಹಿಂದಿರುಗಿದರೆ ಅನರ್ಥವಾಗುವುದೆಂದು ದೇಶಭ್ರಷ್ಟನಾಗಿ ಹೋದನೋ, ಎಂದು ತರ್ಕಿಸಿ ರಾಜನೂ ಸೌದಾಮಿನಿ ಕಾದಂಬಿನಿಯರೂ ಸಹ ಭೋಜನವಾದ ನಂತರ ಮಂತ್ರಿಯಾದ ಧುರಂಧರನನ್ನು ಕರೆಯಿಸಿ ವಿವಾಹ ವಿಚಾರವಾಗಿ ಪ್ರಸ್ತಾಪಿಸಿದರು. ಮತಿವಂತನಾದ ಧುರಂಧರನು, ರಾಜನನ್ನು ನೋಡಿ “ರಾಜೇಂದ್ರಾ, ಈ ಸೇವಕನ ವಿಜ್ಞಾಪನೆಯನ್ನು ಶಾಂತಮನಸ್ಕರಾಗಿ ಲಾಲಿಸಬೇಕು, ವಿಜಯಕುಮಾರನಿಗೆ ನಿಶ್ಚಿತಳಾಗಿರುವ ಕನ್ಯೆಯನ್ನು, ವಿಜಯನು ಪ್ರಾಣದಿಂದಿರುವವರೆಗೂ ಮತ್ತೊಬ್ಬರಿಗೆ ಕೊಡಲು ನಿಶ್ಚಯಿಸುವುದು ಉಚಿತವೆಂದು ನನಗೆ ತೋರುವುದಿಲ್ಲ. ಅಲ್ಲದೆ ಆತನು ಹಿಂದಿರುಗಿ ಬರಲು ಇನ್ನೂ ಈ ದಿನ ಸೂರ್‍ಯಾಸ್ತಮಯ ಸಮಯದವರೆಗೂ ಅವಧಿಯಿರುವುದು. ಆತನು ಜಯಶಾಲಿಯಾಗಿ ಬಂದರೆ ಬೇರೆ ಆಲೋಚನೆಯನ್ನೇ ಮಾಡಬೇಕಾಗುವುದಿಲ್ಲ. ಬಾರದಿದ್ದರೆ, ಅಥವಾ ಕಾರ್‍ಯವನ್ನು ಸಾಧಿಸದೆ ಬಂದರೆ, ನಾಳಿನ ದಿನ ಕಾರಾಗೃಹದಲ್ಲಿರುವ ರಾಜ್ಞಿಯವರ ಅಪರಾಧ ವಿಚಾರಣೆಯು ನಡೆಯಬೇಕಾಗುವುದು. ಅವರ ಪರಿಣಾಮವು ಮಂಗಳಕರವಾಗುವದೋ ಅಥವಾ ಅನ್ಯಥಾ ಆಗುವುದೋ ತಿಳಿಯದು; ಇಂತಹ ಸಂಧಿಕಾಲದಲ್ಲಿ ವಿದ್ಯಾಧರಿಯ ವಿವಾಹ ನಿಶ್ಚಯವು ಸಮಯೋಚಿತವೆಂದು ನನ್ನ ಮನಸ್ಸಿಗೆ ಕಾಣುವುದಿಲ್ಲ. ಇದು ಕೇವಲ ಸಲಿಗೆಯಿಂದಲೂ ಸ್ವಾಮಿಭಕ್ತಿಯಿಂದಲೂ ನಾನು ವಿಜ್ಞಾಪನೆ ಮಾಡಿಕೊಂಡಿರುವ ವಿಚಾರವು ; ಚಿತ್ತದಲ್ಲಿ ಸಾವಧಾನವಾಗಿ ಆಲೋಚಿಸಿ ಹೇಗೆ ಅಪ್ಪಣೆ ಮಾಡಿದರೆ ಅದರಂತೆ ನಡೆಯಿಸಲು ಸಿದ್ಧನಾಗಿರುವೆನು” ಎಂದನು. ಚಂದ್ರಸೇನರಾಜನಿಗೆ ಮಂತ್ರಿಯ ಮಾತು ವಿವೇಕಯುಕ್ತವಾದುದೆಂದು ತೋರಿತು. ಆದರೂ ಆ ಮಾಯಾಂಗನೆಯರಿಬ್ಬರೂ ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಬೇಕೆಂಬಾತುರದಿಂದ, ರಾಜನನ್ನು ಕುರಿತು “ಪ್ರಿಯಾ, ನಾಳಿನ ವಿಚಾರವು ಮಂಗಳಕರವೋ ಅಮಂಗಳಕರವೋ ನಮಗೆ ಯಾರಿಗೂ ತಿಳಿಯದು. ಆದರೆ ಪ್ರಕೃತ ಸಂಭವದಲ್ಲಿ ವಿಜಯನು ನಾಳೆ ಬೆಳಗಾಗುವುದರೊಳಗಾಗಿ ರತ್ನ ಬಾಣವನ್ನು ತರುವುದು ಅಸಾಧ್ಯವೇ ಸರಿ. ಆದುದರಿಂದ ಅವನು ಬಾರದಿದ್ದರೆ ವಿದ್ಯಾಧರಿಯನ್ನು ರಾಜಹಂಸನಿಗೆ ಕೊಡುವಂತೆ ಮಂತ್ರಿಯನ್ನೊಪ್ಪಿಸಲೇ ಬೇಕು; ಏತಕ್ಕೆಂದರೆ, ಅನಂತರ ಆತನ ಮನಸ್ಸು ಬೇರೆಯಾದೀತು. ಆದುದರಿಂದ ವಿವಾಹವು ಇನ್ನು ಎಷ್ಟು ದಿನಗಳಿಗಾದರೂ ನಡೆಯಲಿ; ಕನ್ಯಾದಾನದ ವಾಗ್ದಾನವು ಆತನಿಂದ ನಮಗೆ ಲಭಿಸಿದರೆ ಸಾಕು” ಎಂದು ಹಠ ಹಿಡಿದರು. ರಾಜನು ಕಿರಿಯ ಹೆಂಡಿರಮಾತಿಗೆ ಕಿವಿಜೋಲು ಹಾಕಿದನು. ಸ್ವಲ್ಪ ಹೊತ್ತು ಚರ್ಚೆಯು ನಡೆದಮೇಲೆ ಮಂತ್ರಿಯಾದ ಧುರಂಧರನು, “ವಿಜಯನು ಬಾರದೆ ಹೋದರೆ ವಿದ್ಯಾಧರಿಯನ್ನು ರಾಜಹಂಸನಿಗೆ ಕೊಡುವೆನು” ಎಂದು ಒಪ್ಪಿದನು. ವಿಜಯನು ಬಾರದಿದ್ದರೆ ಭಾನುತೇಜನಿಗೆ ಯುವ ರಾಜಪಟ್ಟವನ್ನು ಕಟ್ಟಲು ರಾಜನ ವಾಗ್ದಾನವು ಮೊದಲೇ ಆಗಿರುವುದಷ್ಟೆ! ಆದುದರಿಂದ ಆ ಮೋಸಗಾತಿಯರಿಬ್ಬರೂ ಸಂತೋಷದಿಂದ ನಲಿದು ತಮ್ಮ ಕುಮಾರರಿಬ್ಬರಿಗೂ ಈ ವಿಚಾರಗಳನ್ನು ತಿಳಿಸಿ, ಅವರ ಮನಸ್ಸುಗಳನ್ನು ಸಂತೋಷಪಡಿಸಿ ತಾವೂ ಆನಂದಮಗ್ನರಾದರು.

ಈ ವಿಚಾರವೆಲ್ಲವೂ ವಿದ್ಯಾಧರಿಗೆ ತಂದೆಯ ಮುಖದಿಂದ ತಿಳಿದು ಆಕೆಯ ಮನಸ್ಸು ಬಹಳ ಚಿಂತೆಗೀಡಾಯಿತು. ಕಡೆಗೆ ವಿಜಯನು ಬಾರದಿದ್ದರೆ ವಿವಾಹವಿಲ್ಲದೆಯಾದರೂ ಕಾಲವನ್ನು ಕಳೆಯುವೆನಲ್ಲದೆ ತಾನು ರಾಜಹಂಸನನ್ನು ವರಿಸಲೊಲ್ಲೆನೆಂದು ಆಕೆಯ ತಂದೆಯ ಪಾದಕ್ಕೆರಗಿ ಬಿನ್ನವಿಸಿಕೊಂಡಳು. ಧುರಂಧರನು ದಿಕ್ಕು ತೋರದೆ ಚಿಂತಾಮಗ್ನ ನಾದನು.

ಇಷ್ಟು ಹೊತ್ತಿಗೆ ಮಧ್ಯಾಹ್ನ ಮೂರು ಘಂಟೆಯಾಯಿತು. ರಾಜ ಸೇವಕರು ಬಂದು ರಾಜಾಜ್ಞೆಯಾಯಿತೆಂದು ಮಂತ್ರಿಗೆ ತಿಳಿಸಿದರು. ಆ ಕೂಡಲೇ ಮತ್ತೆ ಆತನು ಅರಮನೆಗೆ ಬಂದನು. ಆವರೆಗೆ ರಾಜನು, “ಈ ದಿನ ಸಂಧ್ಯಾಕಾಲಕ್ಕೆ ವಿಜಯನ ಅವಧಿಯು ಪೂರಯಿಸುವ ಕಾರಣ ಅಪರಾಧಿನಿಯಾದ ಶೀಲವತಿಯ ವಿಚಾರಣೆಯನ್ನು ನಡೆಯಿಸಿ ಆಕೆಯ ಶಿರಸ್ಸನ್ನು ಛೇದಿಸಲಾಜ್ಞೆ ಮಾಡಬೇಕು” ಎಂದು ನಿರ್ಧರಿಸಿ ಅರಮನೆಯ ಒಳಭಾಗದ ಅಂಗಳದಲ್ಲಿ ಪತ್ನಿ ಪರಿವಾರಯುಕ್ತನಾಗಿ ಕುಳಿತಿದ್ದನು, ಮಂತ್ರಿಯು ಬಂದೊಡನೆಯೇ ಅಪರಾಧಿನಿಯಾದ ಶೀಲವತಿಯನ್ನು ವಿಚಾರಣೆಗಾಗಿ ಬರಮಾಡಬೇಕೆಂದನು. ಅದರಂತೆ ಧುರಂಧರನು ತಾನೇ ಕಾರಾಗೃಹದ ಬಳಿಗೆ ಹೋಗಿ ಮೊದಲನೆಯ ಅಪರಾಧಿನಿ ಯಾದ ಶೀಲವತಿಯನ್ನು ರಾಜಸೇವಕರ ಪಹರೆಯಿಂದ ಕರೆದುಕೊಂಡು ಬಂದು ರಾಜನ ಮುಂದೆ ನಿಲ್ಲಿಸಿದನು. ಮಹಾಪತಿವ್ರತೆಯಾದ ಶೀಲವತೀ ದೇವಿಯು ಕಾರಾಗೃಹದಲ್ಲಿ ಅವಿಚ್ಛಿನ್ನವಾದ ದುಃಖದಿಂದ ಕೃಶಳಾಗಿ ಜೀವಚ್ಛವದಂತೆ ನಿಂತು ಕಂಬನಿಗಳ ಮಳೆಯನ್ನೇ ಸುರಿಸಿದಳು. ಇದನ್ನು ನೋಡಿ ಸೌದಾಮಿನಿ ಕಾದಂಬಿನಿಯರು ಸಂತೋಷದಿಂದ ಉಬ್ಬಿ ಒಬ್ಬರನ್ನೊಬ್ಬರು ನೋಡಿದರು. ರಾಜನಿಗೆ ಮನಸ್ಸು ಕರಗಿದರೂ ಅಪಕೀರ್ತಿ ಬಂತೆಂಬ ಕ್ರೋಧವು ಅದನ್ನು ಕಠಿನವಾಗಿ ಮಾಡುತ್ತಿತ್ತು. ಆದುದರಿಂದ ಆಡಿದ ಮಾತನ್ನು ನಡೆಯಿಸಿ ರಾಜಧರ್ಮವನ್ನು ಪಾಲಿಸಲೇಬೇಕೆಂದು ಶೀಲವತಿಯನ್ನು ನೋಡಿ, “ಎ, ದುಶೀಲವತೀ! ನಿನ್ನೊಡನೆ ಮಾತನಾಡುವ ಇಷ್ಟವು ನನಗಿಲ್ಲದಿದ್ದರೂ ನಿನ್ನ ಮಗನು ಬಾಣಪ್ರಯೋಗ ಪರೀಕ್ಷೆಯಲ್ಲಿ ಗೆದ್ದವನಾದಕಾರಣ ಅವನಿಗೆ ಕೊಟ್ಟ ವಾಗ್ದಾನವನ್ನುಳಿಸಲು ನಿನ್ನ ವಿಚಾರಣೆಯನ್ನು ಕ್ರಮವಾಗಿ ನಡೆಯಿಸಿ ಅನಂತರ ನಿನಗೆ ಶಿಕ್ಷೆಯನ್ನು ವಿಧಿಸಬೇಕೆಂದಿದ್ದೆನು. ಆದರೆ ಆ ದ್ರೋಹಿಯು ನನ್ನ ರತ್ನ ಬಾಣವನ್ನು ಕದ್ದು, ಅದನ್ನು ಕಳೆದು ಮತ್ತೆ ತರುವೆನೆಂದು ಹೋದವನು ಅವಧಿಯಲ್ಲಿ ಹಿಂದಿರುಗಲಿಲ್ಲವಾದಕಾರಣ ಅವನಿಗೆ ನಾನು ಹೇಳಿದ್ದಂತೆ ನಿನ್ನನ್ನು ಈಗ ಮರಣದಂಡನೆಗೆ ಗುರಿಮಾಡಿರುವೆನು. ಅವನಿಂದ ನಿನ್ನ ಆಯುಸ್ಸು ಹದಿನಾಲ್ಕು ದಿನಗಳು ಹೆಚ್ಚಿತ್ತು. ಇನ್ನು ಮೃತ್ಯುವಿಗೆ ತುತ್ತಾಗು ಹೊರಡು” ಎಂದು ಹೇಳಿ ಬಳಿಯಲ್ಲಿದ್ದ ವಧಕರ ವಶಕ್ಕೆ ರಾಣಿಯನ್ನು ಒಪ್ಪಿಸಿದನು.

ಪ್ರತ್ಯಕ್ಷ ಮೃತ್ಯುಗಳಂತಿದ್ದ ಆ ವಧಕರು ಘೋರಾಯುಧಗಳನ್ನು ಧರಿಸಿ ಆಕೆಯ ಬಳಿಗೆ ಬಂದು ಹೊರಡುವಂತೆ ಗರ್ಜಿಸಿದರು. ಪತಿಯ ಕಡೆಯ ದರ್ಶನವನ್ನು ಮಾಡಿ ಬರುವೆನೆಂದು ಅವರನ್ನು ಕೇಳಿಕೊಂಡು ಶೀಲವತಿಯು ದೀನದೃಷ್ಟಿಗಳಿಂದ ರಾಜನನ್ನು ನೋಡಿ, “ಪ್ರಿಯಾ ಹೋಗಿಬರುವೆನು” ಎನ್ನುವಷ್ಟರಲ್ಲಿ ಸುತ್ತಲಿದ್ದ ಜನಜಾಲವೆಲ್ಲವೂ ಗೊಳ್ಳೆಂದು ಅತ್ತಿತು. ಆದರೂ ಮೃತ್ಯುವಿಗೆ ಕರುಣವೆಲ್ಲಿಯದು! ವಧಕರು ಗರ್ಜಿಸಿ ಆಕೆಯನ್ನು ಮುಂದೆ ಹೊರಡಲು ಬಲಾತ್ಕರಿಸಿದರು. ಶೀಲವತಿಯು ನಾಲ್ಕು ಹೆಜ್ಜೆಗಳನ್ನು ಮುಂದಿಟ್ಟಳು.

“ನಿಲ್ಲಿ ನಿಲ್ಲಿ! ವಧಕರೇ ನಿಲ್ಲಿ!” ಎಂಬ ಗಟ್ಟಿಯಾದ ಶಬ್ದವೂ ಕುದುರೆಯ ಕಾಲುಗಳ ಸಪ್ಪಳವೂ ಆಕಸ್ಮಿಕವಾಗಿ ಕೇಳಿ ಬಂತು, ಎಲ್ಲರೂ ಭ್ರಾಂತರಾಗಿ ನೋಡುತ್ತಿರುವಷ್ಟರಲ್ಲಿ ದಿವ್ಯಾಶ್ವದಮೇಲೆ ಸುಂದರೀ ಮಣಿಯೊಡನೆ ವೀರತರುಣನೊಬ್ಬನು ರತ್ನ ಬಾಣಹಸ್ತನಾಗಿ ಬಂದು ಅಶ್ವವನ್ನಿಳಿದು ರಾಜನಿಗೆ ನಮಸ್ಕರಿಸಿ, ಶರವನ್ನು ಆತನಿಗೆ ಒಪ್ಪಿಸಿದನು. ರಾಜನೂ ರಾಣಿಯರೂ ಮಂತ್ರಿಯೂ ಪರಮಾಶ್ಚರ್ಯದಿಂದ ದೃಷ್ಟಿಸಿ ನೋಡಲು, ಅವನು ವೀರಶಿಖಾಮಣಿಯಾದ ವಿಜಯಕುಮಾರನಾಗಿದ್ದನು. ರಾಜನಿಗೆ ಅತ್ಯಾನಂದವಾಯಿತು, ಇನ್ನು ಕಾರ್‍ಯವು ಮೀರುವುದೆಂದು ವಿಜಯನು ತಂದೆಯನ್ನು ನೋಡಿ, “ಜನಕಾ! ನನ್ನ ಪ್ರತಿಜ್ಞೆಯನ್ನು ನಾನು ನಡೆಯಿಸಿರುವೆನು. ನೀನು ನಿನ್ನ ವಾಗ್ದಾನವನ್ನು ಪಾಲಿಸಬೇಕು. ನಮ್ಮ ತಾಯಿಯ ವಿಚಾರಣೆಯು ಈ ಸಭೆಯಲ್ಲಿ ನಡೆದನಂತರ ನ್ಯಾಯವರಿತು ಆಕೆಗೆ ಶಿಕ್ಷೆಯನ್ನು ವಿಧಿಸಬೇಕು” ಎಂದು ಮತ್ತೆ ನಮಸ್ಕರಿಸಿ ಬೇಡಿಕೊಂಡನು. ರಾಜನು ನಿಜವೆಂದು ಆ ಕೂಡಲೇ ವಧಕರ ವಶಕ್ಕೆ ಒಪ್ಪಿಸಿದ್ದ ಶೀಲವತೀ ದೇವಿಯನ್ನು ಮತ್ತೆ ತನ್ನ ಸನ್ನಿಧಿಗೆ ಕರೆತರುವಂತೆ ಆಜ್ಞೆಮಾಡಲು, ಮಂತ್ರಿಯು ಅದರಂತೆಯೇ ಆಕೆಯನ್ನು ಕರೆಯಿಸಿದನು. ವಿಜಯಕುಮಾರನ ಮುಖವನ್ನು ನೋಡಿದ ಶೀಲವತಿಗೆ, ಹೋಗಿದ್ದ ಪ್ರಾಣವು ಬಂದಂತಾಯಿತು. ಆಗ ತನ್ನ ಮನಸ್ಸಿನಲ್ಲಿ ಅಂಬಿಕೆಗೆ ಮತ್ತೆ ವಂದಿಸಿ ನಿಂತಳು. ರಾಜನು ವಿಜಯನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಶೀಲವತಿಯನ್ನು ನೋಡಿ, “ಎಲೌ ಶೀಲವತೀ, ನಿನ್ನ ಕುಮಾರನು ವಿಜಯ ಶಾಲಿಯಾಗಿ ಬಂದು ನಿನಗೆ ನನ್ನೊಡನೆ ಹೆಚ್ಚಾಗಿ ಮಾತನಾಡಲು ಅವಕಾಶವನ್ನು ಕೊಟ್ಟಿರುವನು. ಆದುದರಿಂದ ನಿನ್ನ ಅಪರಾಧವನ್ನು ಈಗ ವಿವರಿಸಿ ಹೇಳುವೆನು, ಅದಕ್ಕೆ ನೀನು ನಿನ್ನ ಆತ್ಮರಕ್ಷಣೆಗಾಗಿ ಏನಾದರೂ ಹೇಳುವುದಿದ್ದರೆ ತಿಳಿಸು” ಎಂದು ಹೇಳಿ ಭಗವದ್ಗೀತೆಯ ಪುಸ್ತಕನನ್ನಾಕೆಯ ಕೈಗೆ ಕೊಡಿಸಿ, “ಇದನ್ನು ತಲೆಯಮೇಲೆ ಹೊತ್ತು ಸತ್ಯವನ್ನು ಹೇಳು, ನೀನು ಪರಪುರುಷನ ಸ್ನೇಹಮಾಡಿದಂತೆ ನನ್ನ ಕಣ್ಣಿಗೆ ಗೋಚರವಾಗಿರುವುದು. ಇಂತಹ ಅಪರಾಧವನ್ನು ನೀನು ಏತಕ್ಕೆ ಮಾಡಿದೆ? ನಿನ್ನ ಪತಿಯಲ್ಲಿ ಯಾವ ದೋಷವನ್ನು ಕಂಡು ನೀನು ಅನ್ಯಪುರುಷನಲ್ಲಿ ಅನುರಕ್ತಳಾದೆ? ತಿಳಿಸು” ಎಂದು ಪ್ರಶ್ನೆ ಮಾಡಿದನು. ಇದನ್ನು ಕೇಳಿದ ಕೂಡಲೇ ಶೀಲವತಿಯ ಕಿವಿಯಲ್ಲಿ ಕಾಯಿಸಿದ ಸೀಸವನ್ನು ಸುರಿದಂತಾಯಿತು, ಎದೆಗೆ ಶೂಲಗಳಿಂದ ತಿವಿದಂತಾಯಿತು. ಆಗ ಪ್ರಾಣಾಪಾಯ ಸಮಯವೆಂದು ಧೈರ್ಯವನ್ನು ತಂದುಕೊಂಡು, “ಧರ್ಮಪ್ರಭೂ, ಈ ಗೀತಾ ಪುಸ್ತಕವನ್ನು ಶಿರದಲ್ಲಿ ಧರಿಸಿ ಸತ್ಯವಾಗಿ ವಿಜ್ಞಾಪಿಸಿಕೊಳ್ಳುತ್ತೇನೆ. ನಾನು ಈವರೆಗೆ ನನ್ನನ್ನು ಅಗ್ನಿ ಸಾಕ್ಷಿಕವಾಗಿ ಧರ್ಮಪತ್ನಿಯೆಂದು ಪಾಣಿಗ್ರಹಣಮಾಡಿದ ತಮ್ಮೊಬ್ಬರಲ್ಲಿ ಅಲ್ಲದೆ ಇತರ ಪುರುಷರಲ್ಲಿ ಸ್ವಲ್ಪದಲ್ಲಿಯಾದರೂ ಸ್ನೇಹವನ್ನು ಬಯಸಿದ್ದಲ್ಲಿ ಮಹಾರೌರವಾದಿ ನರಕ ಭಾಗಿನಿಯಾಗುವೆನು. ಆದರೆ ತಾವು ಪ್ರತ್ಯಕ್ಷವಾಗಿ ನೋಡಿರುವ ನನ್ನ ಅಪರಾಧವೇನಾದರೂ ಇದ್ದರೆ ಅದನ್ನು ಸ್ಪುಟವಾಗಿ ಅಪ್ಪಣೆ ಕೊಡಿಸಬೇಕು, ನಾನು ಸ್ನೇಹಮಾಡಿರುವಂತೆ ತಮ್ಮ ಕಣ್ಣಿಗೆ ಗೋಚರವಾಗಿರುವ ಪುರುಷನನ್ನು ತಾವು ಸುಮ್ಮನೆ ಬಿಟ್ಟಿರಲಾರಿರಿ. ಆದುದರಿಂದ ಆ ಪುರುಷನನ್ನು ನನ್ನ ಎದುರಾಗಿ ಕರೆಯಿಸಿ ಅವನ ವಿಚಾರಣೆಯನ್ನು ನಡೆಯಿಸಬೇಕು. ಅನಂತರ ನನ್ನ ಅಪರಾಧವು ಸ್ಥಿರಪಟ್ಟರೆ ತಾವು ತಮ್ಮ ಇಚ್ಛಾನುಸಾರ ಶಿಕ್ಷೆಯನ್ನು ವಿಧಿಸಬಹುದು” ಎಂದಳು. ರಾಜನಿಗೆ ಈಕೆಯ ಮಾತಿನಿಂದ ಆಶ್ಚರ್ಯವಾಯಿತು. ಆ ಕೂಡಲೇ ಕಾರಾಗೃಹದಲ್ಲಿರುವ ಅಪರಾಧಿಯನ್ನು ಕರೆತರುವಂತೆ ಮಂತ್ರಿಗಾಜ್ಞೆ ಮಾಡಿದನು. ಈವರೆಗೆ ವಿಜಯ ನಾಗಮನದಿಂದ ಕಿರಿಯ ರಾಣಿಯರಿಬ್ಬರ ಹೊಟ್ಟೆಯಲ್ಲಿಯೂ ಬೆಂಕಿ ಬಿದ್ದಿತ್ತು. ಶೀಲವತಿಯನ್ನು ಮತ್ತೆ ಕರೆಯಿಸಿ ವಿಚಾರಣೆ ಮಾಡಿದ್ದರಿಂದ ಬೆಂಕಿಯು ಉರಿಯಹತ್ತಿತ್ತು. ಅಪರಾಧಿಯನ್ನು ಕರೆಯಿಸುವ ಆಜ್ಞೆಯಾದೊಡನೆಯೇ ಇಬ್ಬರಿಗೂ ಎದೆಗಳು ಝಲ್ಲೆಂದವು. ಆಗ ಮತ್ತೇನನ್ನು ಮಾಡಲೂ ಸಾಧ್ಯವಿಲ್ಲ. ಏನೇನಾಗುವುದೋ ನೋಡಿ ಅನುಭವಿಸಲೇ ಬೇಕು. ಅದರಿಂದ ಇಬ್ಬರೂ ಜೋಲುಮುಖಗಳನ್ನು ಹಾಕಿಕೊಂಡು ಮಿಡುಕುತ್ತ ಕುಳಿತರು. ಅಪರಾಧಿಯನ್ನು ಕರೆತಂದು ರಾಜಸಮುಖದಲ್ಲಿ ನಿಲ್ಲಿಸಿದರು. ರಾಜನು ಶೀಲವತಿಯನ್ನು ನೋಡಿ ಆ ಅಪರಾಧಿ ಪುರುಷನನ್ನು ತೋರಿಸಿ, “ನೀನು ಈವರೆಗೆ ಈತನನ್ನು ನೋಡಿರುವೆಯೋ ಇಲ್ಲವೋ?” ಎಂದು ಪ್ರಶ್ನೆ ಮಾಡಿದನು. ಶೀಲವತಿಗೆ ಈ ಪುರುಷಾಕೃತಿಯನ್ನು ನೋಡಿದೊಡನೆಯೇ ಮುಖವು ಅನೇಕಾವೃತ್ತಿ ನೋಡಿದ್ದಂತೆಯೂ ಪರಿಚಯವು ಇಲ್ಲದಂತೆಯೂ ಭ್ರಾಂತಿಯುಂಟಾಯಿತು. ಸ್ವಲ್ಪ ಆಲೋಚಿಸಿದ ಕೂಡಲೇ ಇವಳು ಪುರುಷವೇಷಧಾರಿಣಿಯಾದ ಸರಸಾಂಗಿಯೆಂಬುದು ಮನಸ್ಸಿಗೆ ದೃಢವಾಯಿತು.
ಶೀಲವತಿ- “ಓಹೋ! ನಾನೀವರೆಗೆ ಈ ವ್ಯಕ್ತಿಯನ್ನನೇಕಾವೃತ್ತಿ ನೋಡಿರುವೆನು.”
ರಾಜ- ಎಲ್ಲಿ ನೋಡಿರುವೆ?
ಶೀಲವತಿ- ನಮ್ಮ ಅರಮನೆಯಲ್ಲಿ!
ರಾಜ- ಅರಮನೆಯಲ್ಲಿಯೋ ಅಂತಃಪುರದಲ್ಲಿಯೇ?
ಶೀಲವತಿ- ಅಂತಃಪುರದಲ್ಲಿಯೂ ನೋಡಿರುವೆನು.
ರಾಜ- ನಿಜ, ಅದನ್ನು ನಾನೇ ನೋಡಿರುವೆನು. ನಿಮ್ಮಿಬ್ಬರಿಗೂ ಸ್ನೇಹವುಂಟಷ್ಟೆ?
ಶೀಲವತಿ- ಕೇವಲ ಸ್ನೇಹವೆಂದು ಹೇಳಲಾಗುವುದಿಲ್ಲ. ರಾಜ್ಞಿದಾಸೀ ಭಾವವುಂಟು.

ಎಂದೊಡನೆಯೇ, ಶೀಲವತಿಯು ವ್ಯಕ್ತಿಯ ಗುರುತನ್ನು ಹಿಡಿದಳೆಂದು ಕಾದಂಬಿನಿ ಸೌದಾಮಿನಿಯರಿಗೆ ಎದೆಯೊಡೆಯಿತು. ರಾಜನಿಗೆ ಮಾತ್ರ ನಿಜಾಂಶವು ತಿಳಿಯಲಿಲ್ಲ.
ರಾಜ- ಎಲೌ, ಹಾಗಾದರೆ ಈತನು ನಿನ್ನ ಬಳಿಯಲ್ಲಿ ಆಗಾಗ ನಿಸ್ಸಂಕೋಚವಾಗಿ ವರ್ತಿಸುತ್ತಿದ್ದುದು ನಿಜವೋ? ಶೀಲವತಿ- ನಿಜ! ಸಂಕೋಚದಿಂದ ವರ್ತಿಸಲು ಕಾರಣವೇ ಇಲ್ಲವಲ್ಲಾ!
ರಾಜ- ಏತಕ್ಕೆ ನಿನಗೆ ಪ್ರಿಯನಾದುದರಿಂದಲೇ ಅಲ್ಲವೇ?
ಶೀಲವತಿ- ಅಲ್ಲ, ಸ್ತ್ರೀಯು ಸ್ತ್ರೀಗೆ ಪ್ರಿಯನಾಗಲು ಸಾಧ್ಯವೇ?
ರಾಜ-ಎಂದರೆ, ಇವನು ಪುರುಷನೆಂದು ನಿನ್ನ ಕಣ್ಣಿಗೆ ಕಾಣುವುದಿಲ್ಲವೋ ಹೇಗೆ?
ಶೀಲವತಿ- ತಮ್ಮ ಕಣ್ಣಿಗೆ ಪುರುಷನಾಗಿ ಕಾಣುತ್ತಿರಬಹುದು. ನನ್ನ ಕಣ್ಣಿಗೆ ಮಾತ್ರ ನಮ್ಮ ಅರಮನೆಯ ಚೇಟಿಯಾದ ಸರಸಾಂಗಿಯು ಪುರುಷ ವೇಷಧಾರಿಣಿಯಾಗಿ ಕಾಣುತ್ತಿರುವಳು.

ಈ ಉತ್ತರವನ್ನು ಕೇಳಿದೊಡನೆಯೇ ರಾಜನು ವಿಭ್ರಾಂತನಾದನು. ಆ ಕೂಡಲೇ ಆ ಪುರುಷವ್ಯಕ್ತಿಯನ್ನು ದುರದುರನೆ ನೋಡಿ, “ಎಲೈ, ಶೀಲವತಿಯು, ನೀನು ಅಂತಃಪುರದ ಚೇಟಿಯಾದ ಸರಸಾಂಗಿಯೆಂದು ಹೇಳುತ್ತಿರುವಳು, ನಿಜಾಂಶವನ್ನು ತಿಳಿಸು; ಇಲ್ಲವಾದರೆ ನಿನ್ನ ತಲೆಯು ಹಾರಿಹೋದೀತು” ಎಂದು ಗರ್ಜಿಸಿದನು. ಭೀತಳಾದ ಸರಸಾಂಗಿಯು ಗಡಗಡನೆ ನಡುಗುತ್ತ ಅಳುತ್ತ ರಾಜನ ಪಾದಗಳ ಮೇಲೆ ಬಿದ್ದು, “ಮಹಾ ಪ್ರಭೂ, ನನ್ನ ಸರ್ವಾಪರಾಧಗಳನ್ನೂ ಮನ್ನಿಸಿ ಕಾಪಾಡಬೇಕು. ನಾನು ಸರಸಾಂಗಿಯೇ ನಿಜ” ಎಂದು ಬೇಡಿಕೊಂಡಳು.

ರಾಜನು ಪರಮಾಶ್ಚರ್ಯಭರಿತನಾಗಿ, “ಹಾಗಾದರೆ ನೀನು ಆ ದಿನ ಅಂತಃಪುರದಲ್ಲಿ ಈ ವೇಷದಿಂದಿರಲು ಕಾರಣವೇನು? ನಿಜಾಂಶವನ್ನು ಮರೆ ಮಾಚದೆ ವಿವರವಾಗಿ ಹೇಳು” ಎಂದನು. ಸರಸಾಂಗಿಯು ಪ್ರಾಣಭೀತಿಯಿಂದ ಸೌದಾಮಿನಿ ಕಾದಂಬಿನಿಯರ ಮುಖವನ್ನು ನೋಡಲು, ಅವರು ಏನು ಹೇಳುವುದಕ್ಕೂ ತೋರದೆ ತಮ್ಮ ಮುಖಗಳನ್ನಾ ಕಡೆಗೆ ತಿರುಗಿಸಿ ಕೊಂಡರು. ಇವರು ನನ್ನನ್ನು ಕೈಬಿಟ್ಟಿರುವಾಗ ನಾನೇತಕ್ಕೆ ನಿಜಾಂಶವನ್ನು ಹೇಳಿಬಿಡಬಾರದೆಂದು ಪ್ರಾಣದಮೇಲೆ ನಿರಾಶಳಾಗಿ ಸರಸಾಂಗಿಯು ರಾಜನಿಗೆ ಕೈ ಮುಗಿದು, “ಮಹಾಪ್ರಭೂ, ನನಗೆ ತಾವು ಯಾವ ಶಿಕ್ಷೆಯನ್ನು ವಿಧಿಸಿದರೂ ನಾನು ಮಾಡಿದ ಅಪರಾಧಕ್ಕಾಗಿ ಅದನ್ನು ನಾನು ಅನುಭವಿಸುವೆನು. ನಾನು ಈ ಅಪರಾಧಮಾಡಲು ಪ್ರೋತ್ಸಾಹಿಸಿದವರನ್ನು ತಾವು ಶಿಕ್ಷಿಸುವುದಿಲ್ಲವೆಂದು ಅಭಯವನ್ನಿತ್ತರೆ ನಿಸ್ಸಂದೇಹವಾಗಿ ಎಲ್ಲವನ್ನೂ ವಿಜ್ಞಾಪಿಸುವೆನು” ಎಂದಳು. ರಾಜನು, ಇದು, ಇವಳು ಬುದ್ಧಿ ಪೂರ್ವಕವಾಗಿ ಮಾಡಿದ ಅಪರಾಧವಲ್ಲವೆಂದು ಊಹಿಸಿ, “ಎಲೌ, ನೀನು ಪರಪ್ರೇರಣೆಯಿಂದೀಕಾರ ಮಾಡಿರುವುದಾದರೆ ನಿನಗಿಂತಲೂ ಅವರೇ ಅಧಿಕವಾದ ಶಿಕ್ಷೆಗರ್ಹರು. ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸದಿರುವುದು ರಾಜಧರ್ಮವಲ್ಲ. ಈಗ ನಿನ್ನ ನಿಬಂಧನೆಗೆ ನಾನು ಒಳಗಾಗತಕ್ಕವನಲ್ಲ. ನಿಜಾಂಶವನ್ನು ಮರೆಮಾಚದೆ ತಿಳಿಸು. ಅನಂತರ ಅಪರಾಧದ ರೀತಿಯನ್ನು ನೋಡಿ ಧರ್ಮವಿರೋಧವಿಲ್ಲದಂತೆ ನಡೆಯುವೆವು” ಎಂದನು. ಆಗ ಸರಸಾಂಗಿಯು, ಬೇರೆ ಉಪಾಯವನ್ನರಿಯದೆ ಕಾದಂಬಿನಿ ಸೌದಾಮಿನಿಯರ ತಂತ್ರವೆಲ್ಲವನ್ನೂ ವಿವರಿಸಿ ಹೇಳಿಬಿಟ್ಟಳು. ಮೋಸಗಾತಿಯರಿಬ್ಬರಿಗೂ ಎದೆಯೊಡೆಯಿತು. ರಾಜನು ಎಲ್ಲವನ್ನೂ ಕೇಳಿದ ಕೂಡಲೇ, ತಾನು, ಅವಿಚಾರನಾಗಿ, ಮಹಾಪತಿವ್ರತೆಯಾದ ಶೀಲವತಿಯಲ್ಲಿ ದೋಷವನ್ನಾರೋಪಿಸಿ ಆ ಸತ್ಯವಂತೆಯನ್ನು ಮೃತ್ಯುವಶಕ್ಕೆ ಒಪ್ಪಿಸಿದ್ದೆನಲ್ಲಾ! ಎಂದು ಬಹಳವಾಗಿ ಪಶ್ಚಾತ್ತಾಪಪಟ್ಟು ಆಕೆಯ ಬಳಿಗೆ ಬಂದು ಕೈಗಳನ್ನು ಹಿಡಿದು ತನ್ನ ಅಪರಾಧಗಳನ್ನು ಮನ್ನಿಸಬೇಕೆಂದು ಬಹಳವಾಗಿ ಕೇಳಿಕೊಂಡು ಆಕೆಯ ಕಣ್ಣೀರನ್ನು ಒರೆಸಿ ಬಳಿಯಲ್ಲಿ ಕುಳ್ಳಿರಿಸಿಕೊಂಡನು. ವಿಜಯಕುಮಾರನನ್ನು ನೋಡಿ, “ಸುಕುಮಾರಾ, ನಿನ್ನಿಂದ ಸತ್ಯವಂತೆಯಾದ ನಿಮ್ಮ ತಾಯಿಯ ಪ್ರಾಣವು ಉಳಿಯಿತು. ನಮ್ಮ ವಂಶದ ಸತ್ಕೀರ್‍ತಿಯು ಸಂರಕ್ಷಿತವಾಯಿತು. ನಾನು ನರಕದಿಂದ ಪಾರಾದೆನು, ನೀನೇ ನನ್ನ ವಂಶಾಲಂಕಾರನಾದ ಸತ್ಪುತ್ರನು” ಎಂದು ಆಲಿಂಗಿಸಿ ಮೂರ್ಧವನ್ನಾಘ್ರಾಣಿಸಿದನು.

ಅನಂತರ ಅಪರಾಧಿನಿಯರಾದ ಸೌದಾಮಿನಿ ಕಾದಂಬಿನಿಯರು ರಾಜ್ಞೀಪದವಿಯಲ್ಲಿರಲು ಅನರ್ಹರೆಂದು ಅವರನ್ನು ಪ್ರತ್ಯೇಕವಾದ ಮಂದಿರಗಳಲ್ಲಿರಿಸಿ, ಅವರ ಸಾಮಾನ್ಯ ಜೀವನಕ್ಕೇರ್ಪಡಿಸಿ, ರಾಜನು ತಾನು ಮತ್ತೆ ಅವರ ಮುಖಾವಲೋಕನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಸರಸಾಂಗಿಯನ್ನು ಅವರ ಪರಿಚರ್ಯಕ್ಕೆ ನೇಮಿಸಿದನು.

ಭಾನುತೇಜ ರಾಜಹಂಸರ ವಿಚಾರಣೆಯಿಂದ ರತ್ನ ಬಾಣವು ವಿಜಯನ ಬತ್ತಳಿಕೆಯಲ್ಲಿ ಸೇರಿದ ವಿಚಾರವೂ ತಿಳಿಯಬಂತು, ಅನಂತರ ಅವರಿಬ್ಬರಿಗೂ ತಕ್ಕ ಬುದ್ದಿವಾದವನ್ನು ಹೇಳಿ, ಅವರು ತಮ್ಮ ಅಣ್ಣನಾದ ವಿಜಯಕುಮಾರನ ಮೇಲುಪಂಕ್ತಿಯನ್ನನುಸರಿಸಿ ಅವನ ಆಜ್ಞೆಯಲ್ಲಿರುವಂತೆ ಏರ್ಪಡಿಸಿದನು.

ಅನಂತರ ವಿಜಯಕುಮಾರನ ಪ್ರಯಾಣಚರಿತ್ರೆಯೆಲ್ಲವನ್ನೂ ಚಂದ್ರಸೇನ ಶೀಲವತಿಯರು ವಿವರವಾಗಿ ಕೇಳಿ ಆಶ್ಚರ್ಯಾನಂದಮಗ್ನರಾದರು. ವಿಜಯನು ಕರೆತಂದಿದ್ದ ಚಂದ್ರಲೇಖೆಯು ತಮ್ಮ ಸೋದರ ಸೊಸೆಯೇ ಎಂಬ ವಿಚಾರವು ಆಕೆಯ ಪೂರ್ವಚರಿತ್ರೆಯಿಂದ ವ್ಯಕ್ತವಾದುದರಿಂದ ಅವರಿಗೆ ಮತ್ತಷ್ಟು ಸಂತೋಷವುಂಟಾಯಿತು.

ವಿಜಯಕುಮಾರನ ವಿಜಯೋತ್ಸವವನ್ನು ಕೇಳಿ ವಿದ್ಯಾಧರಿಯ ಆನಂದವು ಮೇರೆ ಮೀರಿತು. ಧುರಂಧರನ ಸಂತೋಷಕ್ಕೆ ಪಾರವೇ ಇಲ್ಲವಾಯಿತು.

ಅನಂತರ ಶುಭಲಗ್ನವೊಂದನ್ನೇರ್ಪಡಿಸಿ ಚಂದ್ರಸೇನರಾಜನು ವಿಜಯನಿಗೆ ವಿದ್ಯಾಧರಿಯನ್ನು ತಂದು ಚಂದ್ರಲೇಖಾ ವಿಜಯ ವಿದ್ಯಾಧರಿಯರ ವಿವಾಹಮಂಗಳವನ್ನು ಅತಿ ವಿಜೃಂಭಣೆಯಿಂದ ನಡೆಯಿಸಿ ಶೀಲವತೀ ಸಹಿತನಾಗಿ ಆನಂದಸಾಗರದಲ್ಲಿ ಓಲಾಡುತ್ತಿದ್ದನು.

ಅಷ್ಟಮತರಂಗಂ ಸಂಪೂರ್‍ಣಂ
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ರಹ್ಮಾಂಡದ ದನಿಗಳು
Next post ಹಾಡೆ ಹನುಮವ್ವಾ….

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys