ಹಾಡೆ ಹನುಮವ್ವಾ….
ಕತ್ತಲ ಒಳಗೆ ಕರಗಿದೆ ಕೋಗಿಲೆ
ಬೆಳಕಿಗೆ ತಾರವ್ವ
ಹಳ್ಳಾಕೊಳ್ಳಾ
ಹರಿಯೊ ಹಾಗೆ
ಮಾವು ಬೇವೂ
ಚಿಗಿಯೊ ಹಾಗೆ
ರಂಜ ಸುರಗಿ
ಉದುರೊ ಹಾಗೆ
ಜಾಜಿ ಮಲ್ಲಿಗೆ
ಬಿರಿಯೊ ಹಾಗೆ
ಹಾಡೆ ಹನುಮವ್ವಾ…
ಕಾಳಿಯ ಕೆಚ್ಚಲು
ತುಂಬೊ ಹಾಗೆ
ಪಾತರಗಿತ್ತಿ ಕುಣಿಯೊ ಹಾಗೆ
ಆಡೋ ನವಿಲು
ನಲಿಯೊ ಹಾಗೆ
ಹಕ್ಕಿಚುಕ್ಕಿ
ಮರಳೊ ಹಾಗೆ
ಹಗಲು ರಾತ್ರಿ
ಉರುಳೊ ಹಾಗೆ
ಹಾಡೆ ಹನುಮವ್ವಾ…
ಸಾಲದ ಬಡ್ಡಿ
ಸೊರಗೊ ಹಾಗೆ
ಕಾಳು ಬೇಳೆ
ಸುರಿಯೊ ಹಾಗೆ
ಕಟ್ಟಿಗೆ-ಕೆಂಡ
ಉರಿಯೊ ಹಾಗೆ
ನೀರೂ-ಸಾರೂ
ಕುದಿಯೊ ಹಾಗೆ
ಹಸಿವು ದಾಹ
ನೀಗೋ ಹಾಗೆ
ಹಾಡೆ ಹನುಮವ್ವಾ…
ಕಾಸಿನ ಕಾಲು
ನಡುಗೊ ಹಾಗೆ
ಗರುವದ ಗೋಣು
ಮುರಿಯೊ ಹಾಗೆ
ಸೇಡು-ಕೇಡು
ಕರಗೊ ಹಾಗೆ
ಬೇನೆ ಬೇಸರ
ಕಳೆಯೊ ಹಾಗೆ
ಮೇಲು-ಕೀಳೂ
ಅಳಿಯೊ ಹಾಗೆ
ಹಾಡೆ ಹನುಮವ್ವಾ…
ಪ್ರೇಮ-ಕರುಣೆ
ಉಕ್ಕೋ ಹಾಗೆ
ಕನಸೊ ಕಣ್ಣು
ತೆರೆಯೊ ಹಾಗೆ
ದೇಹ-ಜೀವ
ಮಾಗೊ-ಹಾಗೆ
ಮುಕ್ಕಣ್ಣನಿಗೆ
ಮುಟ್ಟೋ ಹಾಗೆ
ಹಾಡೆ ಹನುಮವ್ವಾ…
ಹಾಡ ಕೇಳಿ ಕಣ್ಣಾ ಮುಚ್ಚುವೆ
ಹಾಡಿನ ಹುಚ್ಚವ್ವಾ….
*****