ಬ್ರಹ್ಮಾಂಡದ ದನಿಗಳು

ಬೆಳಕಿನ ಹನಿಗಳ ಮಂಡಲಕ್ಕೆ ಸನ್ನೆಕೋಲು
ಹಾಕಿ ಮೀಟಿ ತೆಗೆದಿಟ್ಟುಕೊಳ್ಳಬೇಕು ಅನ್ನಿಸುತ್ತದೆ
ಒಂದಿಷ್ಟು ಹಳತಾಗದ ಅದನ್ನೊಯ್ದು
ನೆತ್ತಿಯ ಗೋಡೆಗೆ
ಅಂಟಿಸಿಕೊಂಡರೆ ಚೆನ್ನ
ಜ್ಞಾನದ ಗುಡಾರದ ಧ್ವನಿಯೊಂದರ ಮರ್ಮರ.

ಮನೆ ಮುಂದಿನ ಚಪ್ಪರ ಬಿರುಗಾಳಿಗೆ ಬಿದ್ದು
ನೆಲಪಾಲಾದ ಕಸಗಳನ್ನೆಲ್ಲಾ ಎತ್ತಿ ಬಿಸಾಡಿದರೂ
ಕಂಬನೆಟ್ಟ ಕುಣಿ ಅರೆತೆರೆದುಕೊಂಡು ಹಾಗೇ ಬಿದ್ದಿದೆ
ಮಣ್ಣು ಕಲ್ಲುಗಳ ತುಂಬಿ ತಗ್ಗು ಮುಚ್ಚುಲೇ?
ಎನ್ನುತ್ತಿದ್ದಾನೆ- ಕೆಲಸದ ಮಂಕಾಳು.

ಸಿದ್ಧಾಂತ ತತ್ವ ಆದರ್ಶಗಳು ಜಪಕ್ಕಾಗಿ
ವಾದ ಪ್ರತಿವಾದ ಆಶಯಗಳು ನೆಪಕ್ಕಾಗಿ
ಹೀಗೆ ಪರಸ್ಪರ ವೈರುಧ್ಯಗಳ ಬಿಸಿನೀರು
ತುಂಬಿಕೊಂಡ ಹಂಡೆ
ಬೋರಲಾಗಿ ಬಿದ್ದರೆ, ಆ ನೆಲ ಹಸಿರುಕ್ಕಿಸಲಾರದು
ಎನ್ನುತ್ತಿದ್ದಾರೆ ಪ್ರೊಫೆಸರ್ರೊಬ್ಬರು.

ಭಾವ ಚಿಗುರುವುದು ಎದೆಯಲ್ಲಿ
ಮೆದುಳು ಮೀಯಬೇಕು ಸತ್ಯಂ ಶಿವಂ ಸುಂದರಂ
ಈ ಚುಕ್ಕಿ ಹೊಳಹನ್ನು
ಭಾಷ್ಯವಾಗಿಸುವುದೇ ಕಾಯಕವಾದ
ಗುರುಗಳ ಕೈಲಿಡಿದ ಬಳಪ ನೋಡುತ್ತ,
ಅದನ್ನೆ ಚೀಪುವ ಆಸೆಯುಕ್ಕಿ
ಬೆನ್ನಿಗೆ ಹೊಟ್ಟೆಯಂಟಿಸಿಕೊಂಡ ಹುಡುಗ
ಎಣ್ಣೆಗಾಣದ ಒಣಗೂದಲ ಕೆರೆದುಕೊಳ್ಳುತ್ತಾನೆ.
ಬಿಸಿಯೂಟದ ಘಮಘಮ ಬರುತ್ತಿಲ್ಲವೇ?
ಪಕ್ಕದ ಹುಡುಗನಿಗೆ ತಿವಿದು ಕೇಳುತ್ತಿದ್ದಾನೆ.

ಶತಶತಮಾನಗಳಿಂದ ಉರಿಬಿದ್ದ
ಬೆಂಕಿಯ ಮನೆಯ
ತಣ್ಣಗಾಗಿಸಲೆಂದು ಇದ್ದಿಲನ್ನು ಸುರಿಯುತ್ತಿದ್ದಾರೆ
ಆಚೀಚೆಯ ಮನೆಯವರು
ಆ ಮನೆಹೊಕ್ಕ ಇದ್ದಿಲು ಕ್ಷಣದಲ್ಲಿ
ನಿಗಿ ನಿಗಿಕೆಂಡವಾಗುತ್ತ
ವ್ಯಾಪಿಸಿಕೊಳ್ಳುತ್ತಿದೆ ಇನ್ನರ್ಧ ಜಾಗೆಯನ್ನು ಬಿಡದೆ
ನೆಲವೂ ಧಗಧಗನೇ ಉರಿಯಲಾರಂಭಿದರೆ ಮುಂದೇನು?
ಕಂಗಾಲಾಗಿ ಕೇಳುತ್ತಿದ್ದಾರೆ ನೆರೆಹೊರೆಯವರು.

ಸಮನ್ವಯತೆ ಫಲಕ ಧರಿಸಿದ ವಿಭಜಕ ಕಂಬಕ್ಕೆ
ಡಿಕ್ಕಿಹೊಡೆದ ಪಾರಿವಾಳವೊಂದು
ಸತ್ತೇ ಹೋಯಿತು
ಪರಿತಪಿಸುತ್ತಿದ್ದಾಳೆ ಹೆಣ್ಣೊಬ್ಬಳು

ಹತ್ತಾರು ರಾಗಗಳು ಗಿರಕಿ ಹೊಡೆಯುತ್ತವೆ
ಒಂದೇ ಮಂಡಲದಲ್ಲಿ ತಾರಕಕ್ಕೇರುತ್ತಿದೆ.
ಬ್ರಹ್ಮಾಂಡ ಜ್ಞಾನದ ಆಲಾಪಗಳಂತೆ
ಮುಖ ಎದೆ ಹೊಟ್ಟೆ ತುಂಬಾ ನೆರಿಗೆಗಳ
ಆಭರಣ ಧರಿಸಿದ ಸಾಧುವೊಬ್ಬ ಮುಗುಳ್ನಗುತ್ತಾನೆ.

ಬೆಂಕಿ ಮುಳ್ಳುಗಳನ್ನೆಲ್ಲಾ ಜಾಡಿಸಿ ಗುಡಿಸಿ
ಸೆಳೆದೊಯ್ಯುವಂತಹ ಮಳೆ ಬರುವ ಸುಣುಕು
ಆ ಹೊಸ ಸೋನೆ ಹನಿಯಲ್ಲಿ ಇವರೆಲ್ಲರೆಲ್ಲರೂ
ಅಪಾದಮಸ್ತಕ ನೆನೆಯಲಿ
ಮುದಗೊಳ್ಳಲಿ ದೇವರೇ..
ಕನಸುತ್ತೇನೆ ನಾನು…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವಲು
Next post ವಿಜಯ ವಿಲಾಸ – ಅಷ್ಟಮ ತರಂಗ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…