ದಾರಿಯುದ್ದಕ್ಕೂ ಚಡಪಡಿಕೆ
ಪಕ್ಕಕ್ಕೆ ಪ್ರಾಕಿನ ಅಜ್ಜ
ದೂರ ಸರಿಯುವ ಬಯಕೆ
ಆತ ನಗುತ್ತಿದ್ದಾನೆ,
ಬೊಚ್ಚು ಬಾಯಗಲಿಸಿ ಮತ್ತದು
ತಂಬಾಕು ಸೋನೆ ವಾಸನೆ
ಕವಳ ಪೀಕು
ಆ ಕಣ್ಣುಗಳಲ್ಲಿ ಹಸಿವು ಪ್ರಾಯದ
ಬಯಕೆ, ಯಯಾತಿಯೇ ಇರಬೇಕು
ಸುಕ್ಕುಗಟ್ಟಿದ ಚರ್ಮದ ಒಳಗೂ
ಕಳವಳ ಕುಲುಕಾಟಕ್ಕೆ,
ಕಸಿವಿಸಿ ಮೈಸ್ಪರ್ಶಕ್ಕೆ.
ವಿಚಿತ್ರ ಹೇಕರಿಕೆ, ವಾಕರಿಕೆ
ನನ್ನಜ್ಜನೂ ಹೀಗೇನಾ?
ಅಪರ ಪ್ರಾಯದ ತಹತಹಕೆ:
ಮರ ಮುಪ್ಪಾ, ಹುಳಿ ಮುಪ್ಪಾ
ಹಸಿದವಗೆ ಹಳಸಿದರೂ ಹಿತವೆ
ಅನಾಹುತವಿದು
ಬುದ್ಧಿ ಹೇಳುವ ಮಂಡೆಗಿಲ್ಲದಿರೆ ಸದ್ಬುದ್ಧಿ.
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.