ಮಲ್ಲಿ – ೧೬

ಮಲ್ಲಿ – ೧೬

ಬರೆದವರು: Thomas Hardy / Tess of the d’Urbervilles

ನಾಯಕನು ಬಿಸಿಲು ಮಹಡಿಯಲ್ಲಿ ಶತಪಥಮಾಡುತ್ತಾ ಇದ್ದಾನೆ. ಅವನಿಗೇ ನಗು: “ಆನೆ ಹೊಡೆದಿದ್ದೀನಿ, ಕಾಟಿ ಹೊಡೆದಿ ದ್ದೀನಿ. ಹುಲಿಭುಜತಟ್ಟ ಎಬ್ಬಿಸಿ ಹೊಡೆದಿದ್ದೀನಿ. ಆಗ ಅಳುಕು ಅನ್ನೋದು ಸಾಸುವೆಗಾತ್ರ ಕಾಣಲಿಲ್ಲ. ಈಗ ಈ ಎಳೇ ಮೊಗೀನ ಮೇಲೆ ಗೀಳು ಹಿಡಿದು ತನ್ನ ನೆರಳುಕಂಡು ಬೆಚ್ಚೋ ಕುದುರೆ ಆಗಿದ್ದೀ ನಲ್ಲ. ಮಲ್ಲಣ್ಣಗೆ ಸಾವಿರ ಅಲ್ಲದಿದ್ದರೆ, ಎರಡು ಸಾವಿರ, ಕೊನೆಗೆ ಐದು ಸಾವಿರ ಕೊಟ್ಟಾದರೂ ಕೊಂಡುಕೊಂಡು ಜನಾನಾದಲ್ಲಿ ಕಾಪಾಡಕೋಬೋದಲ್ಲಾ ಈ ಹೆಣ್ಣ ! ಇದಕ್ಕಾಗಿ, ಹೀಗೆ ನವೆ ಯೋದು ಎಲ್ಲಿ ಹಣೇಬರಹ?” ಎಂದು ಅವನಿಗೆ ತನ್ನಮೇಲೆ ಕೋಪ. ಮತ್ತೆ ತನ್ನನ್ನು ಕಂಡರೆ ತನಗೇ ನಗು.

ಆಳು ಮೆಟ್ಟಲಿನಮೇಲೆ ಯಜಮಾನನ ಗಮನವು ತನ್ನಮೇಲೆ ಬಿದ್ದೀತೇನೋ ಎಂದು ಕಾಯ್ದುಕೊಂಡು ನಿಂತಿದ್ದಾನೆ. ಅವನು ಕೈಕಟ್ಟಿ ಕೊಂಡು ನಿಂತು ನಿಂತು ಸಾಕಾಗಿ ಕೊನೆಗೆ ಸಣ್ಣಗೆ ಕೆಮ್ಮಿದನು. ಎದುರಿಗೆ ನಿಂತು ಆನೆಯು ಘೀಳಿಟ್ಟರೆ, ಹುಲಿಯು ಗರ್ಜಿಸಿದರೆ ಅಲುಗದ ನಾಯಕನು ಆ ಸಣ್ಣ ಕೆಮ್ಮು ಕೇಳಿ, ಹಾರಿಬಿದ್ದವನಂತೆ ನಡುಗಿ ಜಾಗ್ರತನಾಗಿ ತಿರುಗಿ ನೋಡಿದನು.

ಆಳು ಅಪಚಾರವಾಯಿತೆಂಬಂತೆ ಹೆದರಿ ಕೈಮುಗಿಯುವ ನೆವದಲ್ಲಿ ಮೊಕನನ್ನು ಮುಚ್ಚಿ ಕೊಂಡನು. ನಾಯಕನು ಯಾವುದೋ ಪ್ರಪಂಚ ದಲ್ಲಿದ್ದು ಬಂದವನಂತೆ, ಎದುರಿಗೆ ಇರುವವನು ತನ್ನ ಆಳು ಎಂದು ಚೆನ್ನಾಗಿ ಕಾಣುತ್ತಿದ್ದರೂ “ಯಾರು?’ ಎಂದನು. ದನಿಯು ಗದರಿಸುವ ಇಷ್ಟವಿಲ್ಲದಿದ್ದರೂ ಗದರಿಸಿದಂತೆಯೇ ಇತ್ತು.

ಆಳು ಮಿದುವಾಗಿ “ನಾನು ಬುದ್ಧಿ ” ಎಂದನು.

” ಏನು? ”

“ಪೋಲೀಸಿನನರು ಬಂದಿದ್ದಾರೆ. ”

“ಏನು? ಇನ್ಸ್ಪೆಕ್ಟರ್ ರಜಾಕ್ ಸಾಬರೇನೋ? ”

“ಔದು ಬುದ್ಧಿ ”

” ಮೊದಲೇ ಬಂದು ಯಾಕೆ ಹೇಳಲಿಲ್ಲ?”

“ಬಂದೆ ಬುದ್ದಿ, ತಾವು ಇತ್ತ ತಿರುಗಲೇ ಇಲ್ಲ ಪಾದ.”

” ಸರಿ ನಡಿ ”

ನಾಯಕನು ಮೆಟ್ಟಿಲಿಳಿದು ಆಳಿನ ಹಿಂದೆಯೇ ಬಂದನು. ಇನ್ಸ್ಪೆ ಕ್ಟರು ಮೊದಲಿನ ತೊಟ್ಟಯ ದಿವಾನಖಾನೆಯಲ್ಲಿ ಕುಳಿತಿದ್ದರು. ನಾಯಕನು ಬಂದು “ಇನ್ಸ್ಪೆಕ್ಟರ್ ಸಾಹೇಬರು ಮಾಫಿ ಕೊಡಬೇಕು. ಏನೋ ಕೆಲಸದಲ್ಲಿದ್ದೆ” ಎಂದನು.

ಇನ್ಸ್ಪೆಕ್ಟರ್ ನಾಯಕನ ಮೊಕನೋಡಿ “ಬುದ್ಧಿಯೋರು ಬಹಳ ಕೆಲಸದಲ್ಲಿದ್ದ ದಣಿದಿರೋ ಹಂಗದೆ” ಎಂದನು.

ನಾಯಕನು ಏನು ಹೇಳಬೇಕು? ಮಲ್ಲಿಯ ಯೋಚನೆಯಲ್ಲಿ ಮುಳುಗಿದ್ದೆ ಎನ್ನಲಾದೀತೆ? ಅದರಿಂದ ಲೋಕಾಭಿರಾಮವಾಗಿ, “ಏನು ಮಾಡೋದು? ತಾವು ಕಾಣದ್ದು ಏನದೆ? ಇದ್ದೇ ಅದೆ. ಬೇಡ ಅಂದರೆ ಬಿಟ್ಟೀತಾ? ಪಡಕೊಂಡು ಬಂದದ್ದು!” ಎಂದನು.

ಇನ್ಸ್ಪೆಕ್ಟರು ಅದನ್ನು ಅರ್ಥಮಾಡಿಕೊಂಡಂತೆ, “ಮಾದೇ ಗೌಡರದು ತಾನೇ? ತಾವು ಅಷ್ಟು ಯೋಚಿಸಬೇಕಾಗಿಲ್ಲ. ನಾನು ಡಿ. ಎಸ್. ಪಿ. ಯವರಿಗೆ ಹೇಳಿದ್ದೀನಿ. ಅವರು ಡಿ. ಸಿ. ಅವರ ತಾವ ಹೇಳಿದ್ದಾರೆ. ಅಲ್ಲಿಂದ ಅಮಲ್ದಾರ್ರಿಗೆ ಯಾದಿ ಬರುತ್ತದೆ. ಎಲ್ಲಾ ಸರಿಹೋಗುತ್ತದೆ. ಮಾದೇ ಗೌಟರು ಮೊದಲಿನಂಗೆ ತಮ್ಮ ಮಾತು ಮೀರದೇನೆ ಇರೋ ಹಂಗೇ ಆಗ್ತದೆ. ?

” ಹಾಗಾದರೆ, ಡಿ. ಸಿ. `ಸಾಹೇಬರವನರೆಗೂ, ಮುಟ್ಟಿತೋ ಅವರ ಸುದ್ದಿ? ನೋಡಿ, ಎಲ್ಲೋ ಬಿದ್ದಿದ್ದೊನ್ನ ತಂದು ಹೆಣು ಕೊಟ್ಟದ್ದಕ್ಕೆ ಅವನ ಪ್ರತಾಪ ನೋಡಿ” ಅವನಿಗೆ ಈಗ ಹತ್ತು ಎಕರೆ ತರೀ, ಇಪ್ಪತ್ತು ಎಕರೆ ಹೊಲ, ನಾಕು ಜೊತೆ ಎತ್ತು, ಆಳುಕಾಳು ಮೊದಲುಗೊಂಡು ಎಲ್ಲಾ ಕೊಟ್ಟರು ನಮ್ಮ ತಂದೆ. ಆ ಹೆಣ್ಣೂ ಹೋಯಿತು. ಈಗ ಮತ್ತೆ ನಮ್ಮ ಕಡೆ ಹತ್ತು ಸಾವಿರ ಕೊಡುತೀನಿ ಅಂತಿದ್ದರು. ಅದು

ಕೊಡಿ ಅಂತ ತಗಾದೆ. ಹೋಗಲಿ, ನೇರವಾಗಿ ಆದರೂ ಇದ್ದಾನಾ? ಶುದ್ಧ ಜುವ್ವಾಕೋರ. ಆ ಜಮೀನೆಲ್ಲಾ ಮಕ್ಕಳ ಹೆಸರಿನಲ್ಲಿ ಇದ್ದರೂ ಅದರಮೇಲೂ ಸಾಲಾಮಾಡಿದ್ದಾನೆ. ನಾವು ಕೊಟ್ಟರೂ ದಕ್ಕಿಸಿ ಕೊಂಡೀತಾ ಮುಕ್ಕ? ನಮ್ಮನ್ನ ದಾವಾ ಮಾಡುತೀನಿ ಅಂತ ಹೆದರಿ ಸಿದ. ನಮಗೆ ರಿಜಿಸ್ಟ್ರಿ ನೋಟೀಸ್ ಕೊಡಿಸಿದ. ಅವೊತ್ತು ಅವನ್ನ ಬಂದೂಕು ತಕೊಂಡು ಹೊಡೆದು ಬಿಡೋವಾ ಅನ್ನೋಷ್ಟು ಕೋಪ ಬಂದುಬುಟ್ಟಿತ್ತು. ನಮ್ಮ ಜನಾನಾ “ಎಷ್ಟೇ ಆಗಲಿ, ಜೊತೇಲಿ ಒಂದೇ ತಣಿಗೇಲಿ ಕೃತೊಳೆದೋರು ಬುದ್ದಿ” ಅಂತ ಆಣೆಯಿಟ್ಟು ತಪ್ಪಿಸಿದರು. ಇಂಥಾ ತುಂಟನಾಗವ್ನಲ್ಲಾ ಇವ!”

“ಹೋಗಲಿ, ಬುಡಿ, ನಾಯಕರೆ ಕೋರ್ಟಿಗೆ ಹೋದರೆ, ಎವಿಟೆನ್ಸ್ ಬೇಡ್ವಾ! ಕೋರ್ಟನೋರು ಬರಿ ಬಾಯಿಮಾತಿನಲ್ಲಿ ಡಿಕ್ರಿ ಕೊಟ್ಟಾರಾ? ಕೇಸ್ ಡಿಸ್ಮಿಸ್ ಆಗಿಹೋಗ್ತದೆ. ಅವರೇ ನಷ್ಟಾನೂ ಕೊಡಬೇಕಾಗ್ತದೆ.”

“ಅಲ್ರಿ, ನಾಯಕರ ವಂಶದವನು ಕೋರ್ಟಿನಲ್ಲಿ ಸಾದಾ ಜನದ ಹಂಗೆ ಹೋಗಿ ನಿಂಶುಕೊಂಡರೆ ಏನಾಯಿತು ನಮ್ಮ ಘನತೆ? ಮನುಷ್ಯ ಬದುಕೋದು ಮಾನಕ್ಕೆ. ಅಡಕೇಗೆ ಹೋದ ಮಾನ ಆನೆ ಕೊಟ್ಟರೂ ಬರೋಲ್ಲ ಅನ್ನೋದು ಕಾಣರಾ? ಆದ್ನ ಅವನೂ ಬಲ್ಲ. ಅದಕ್ಕೆ ಅಂಜೋರಮೇಲೆ ಕಪ್ಪೆ ಇಟ್ಟಂಗೆ ನಮ್ಮನ್ನಂಜಿಸೋದು ಈಗ, ನಾವೂ ಭಂಡಬಿದ್ದು ನಡೀ ಕೋರ್ಟಿಗೆ ಅಂದರೆ ಕೆಟ್ಟಾ : ಈಗ ಆ ಎರಡು ಎಕ್ರೆ ತೋಟಕ್ಕೆ ನೋಡಿ ಎಷ್ಟು ಮಾಡವ್ನೆ! ಬೆಲೆ ನೋಡಿದಕರೆ ಆ ಮುಕ್ಕನಿ ಗೋಸ್ಕರ ನಾವು ಡಿ. ಸಿ. ಸಾಹೇಬರ ಕಚೇರಿ ಹತ್ತಬೇಕಾ ಅನ್ನಿಸ್ತದೆ. ಆದರೆ, ಕಟ್ಟೇಲಿ ಮೊಳೆ ಕಂಡಂಗೆ ಆದೀತು ಅಂತ ಈಗಲೇ ಉಷಾರಿ ಮಾಡಿರೋದು. ”

“ಬಹಳ ಸರಿ. ತಾ ಮಾಡಿದ್ದು ಬಹಳ ಸರಿ. ನಮ್ಮ ಹತ್ತಿರ ಹೇಳೋದೂ ಒಂದೇ! ಅದ್ಮೀಗೆ ಕೈಕೋಳ ಹಾಕೋದೂಒಂದೆ !?

“ನೋಡಿ, ನಾವೇ ಮಾಡಿಕೊಂಡದ್ದು. ಸರಕಾರದವರು ರಾವ್ ಬಹದ್ದೂರ್ ಬಿರುದು ಕೊಟ್ಟರು : ಮಹಾರಾಜರು ತುಂಬಿದ ಸಭೆಯಲ್ಲಿ ‘ರಾಜಸೇವಾ ಪರಾಯಣ’ ಆಂತ ಬಿರುದುಕೊಟ್ಟು, ಜೋಡಿಶಾಲು ಹೊದಿಸಿದರು. ಇನ್ನು ಪಟೇಲಿ ಬಾರದು ಅಂತ ‘ಇರಲಿ, ನಮ್ಮೋನಲ್ಲಾ ಅಂತ ಇವನಿಗೆ ಪಟೀಲಿ ಮಾಡಿಸಿಕೊಟ್ಟರೆ’ ನಮ್ಮ ಬುಡ್ಕೇ ನೀರುತಿ ದ್ದೋಕೆ ಬರತಾನಲ್ಲ!”

“ನಾನೇ ಬಂದೋ ಬಸ್ತು ಮಾಡಬಹುದು. ಆದರೂ ಅಲ್ಲಿಂದ ಬರಲಿ ಅಂತ ನಾನೇ ಡಿ. ಎಸ್. ಪಿ ಅವರಿಗೆ ಹೇಳಿ ಅಲ್ಲಿಂದ ಡಿ. ಸಿ. ಯವರಿಗೆ ಹೇಳಿಸಿದ್ದೇನೆ. ಅದು ಬಿಡಿ. ಇನ್ನೊಂದು ಸಮಾಚಾರ ಇತ್ತಲ್ಲಾ?”

“ಏನು ಆ ಮೊಗಿಂದು ? ಏನಾದರೀ ಪತ್ತೆ ಆಯಿತೋ? ”

“ಅರರೇ, ನಾಯಕಸಾಬ್ರು ಹೇಳಿದ ಮೇಲೆ ಅದೇನ್ ಮಾತೋ ಮಷ್ಗಿರಿಯೋ ? ನಾನು ಆಗಲೇ ತಲಾಷ್ ಮಾಡಿಸಿದೆ, ಈ ಮಧ್ಯೆ ಸರಕಾರದವರು ನಮ್ಮನ್ನು ಧಾರವಾಡಕ್ಕೆ ಹೋಗಿ ಬಾ ಅಂತ ಕಳುಹಿಸಿಬಿಟ್ಟರು. ಅದರಿಂದ, ಅಲ್ಲಿಂದ ಬರೋದು ತಡ ಆಯಿತು. ಯಾಕೆ, ತಮಗೆ ಗೊತ್ತಲ್ಲ ನಾವು ಮೂರು ತಿಂಗಳು ರಜಾದ ಮೇಲೆ ಇದ್ದದ್ದು?”

“ಹೌದು. ನಾವೂ ಹಕೀಂನ ಕಳೀಸಿದ್ದೋ! ಅವ ಬಂದು ಸಾಹೇಬರು ರಜಾ ಹೋಗವ್ರೇ! ಅವರಿರೋ ತಾನೇ ಗೊತ್ತಿಲ್ಲ ಅಂದ!”

“ಹೌದು. ನಾನು ತಲಾಷ್ಗೆ ಹೋಗುವಾಗ ಹಂಗೇ ಹೋಗೋದು. ಬೇದಿರಸ್ನಲ್ಲಿ, ಫಕೀರ್ ಹಂಗೆ ಭಿಕಾರಿ ಹಂಗೆ ಪರದೇಸೀ ಹಂಗೆ ಹೋಗೋದು.”

“ಅದೇನು?”

“ಓ! ಅದು ಬೋ ದೊಡ್ಡಕತೆ ನಾಯಕ್ಸಾಬ್ ! ನೋಡಿ, ಕಲ್ಕತ್ತ ಕೇಳಿದ್ದೀರಲ್ಲ. ಅದು ಇರೋದು ಬಂಗಾಳಾದಲ್ಲಿ. ಅಲ್ಲಿ ರಾಣೀ ಸರ್ಕಾರದವರು ಬಂಗಾಳಾ ಎರಡು ಪಾಲು ಮಾಡಿ, ಅದೇ ಬೇರೆ ಇದೇ ಬೇರೆ ಅಂತ ಮಾಡಿತ್ತು. ಆ ಬಂಗಾಳಿ ಜನ ಕೊಂಚ ಬೇಗ ರೇಗೋ ಜಾತಿ, ಅವರೆಲ್ಲ ಮಸಲತ್ ಮಾಡಿ ದಂಗೆ ಎದ್ದು ಬಿಟ್ಟರು. ಅಲ್ಲಿ ಬಿಪಿನ್ ಚಂದ್ರಪಾಲ್, ಅವರು ಇನರು ಯಾರು ಯಾಕೋ ಗಲಾಟೆಯೋ ಗಲಾಟಿ ಮಾಡಿ ಬಿಟ್ಟ್ರು : ಅದಕ್ಕೆ ತಕ್ಕಂಗೆ ಪೂನಾದಿಂದ ಬಾಲಗಂಗಾಧರ್ ತಿಲಕ್ರು ಗಲಾಟೆ ಮಾಡಿದರು. ಅಲ್ಲಿ ಪಂಜಾಬ್ನಿಂದ ಲಾಲಾ ಲಜಪತ್ರಾಯ್ ಗಲಾಟೆ ಮಾಡಿ ದರು. ಈ ಗಲಾಟೆನೆಲ್ಲ ನೋಡಿ ರಾಣಿ ಸರ್ಕಾರ ಕೂಡ ಹೆದರಿ : ಬಿಟ್ಟು ಬಂಗಾಳ ಒಂದು ಮಾಡಿ ಬಿಡ್ತು. ಆಮೇಲೆ ಅಲ್ಲಿ ಪರಮಹಂಸ ಅನ್ನೋರು ಇದ್ದರಲ್ಲ, ಅವರ ಸಿಸ್ಯ ವಿವೇಕಾನಂದರು ಅಮೇರಿಕಾಕ್ಕೆ ಹೋಗಿ ಬಂದು ಈ ಕಿರಿಸ್ತಾನರ ಗುರುಗಳನ್ನೆಲ್ಲ ಹೆದರಿಸಿ ಬಿಟ್ಟರು. ಈಗ, ಅವರ ಕಡೆ ಸನ್ಮಾಸಿಗೋಳು ಈ ರಾಣಿ ಸರ್ಕಾರದ ಮೇಲೆ ಫಿತೂರಿ ಮಾಡೋಕೆ ಸುತ್ತುತಾ ಇದ್ದಾರೆ. ನೋಡೋಕೆ ಸನ್ಯಾಸಿ, ಕಪನಿ ಹಾಕ್ಕೊಂಡು. ಕೇಳಿದರೆ ರಾಮೇಶ್ವರ್ ಜಾತಾಹುಂ, ಹರಿದ್ವಾರ್ ಜಾತಾಹುಂ ಅಂತ ತಿರುಗತಾ ದೇಶಂನ್ನೆಲ್ಲಾ ಹರಾಂ ಮಾಡುತಾ ಅವ್ರೆ !”

“ಅಂಯ್

! ಬುಡಿ, ಇನ್ಸ್ಪೆಕ್ಟರೆ, ಸನ್ಯಾಸಿಗಳು ಪಾಪ ದೇಶಾನೇನು ಹರಾಂ ಮಾಡಾರು ! ”

“ಇಲ್ಲ ನಾಯಕ್ಸಾಬ್, ಅವೋನು ಮಾಡುತಾರೆ ಗೊತ್ತು? ಈ ನೌಜವಾನ್ಗಳಿರುತಾರಲ್ಲ ಅವರಿಗೆ ಹೇಳೋದು, ನೋಡಿ, ಇಂಗ್ಲೀಷಿನೋರು ನಮ್ಮನ್ನೆಲ್ಲಾ ತುಳಿದಿದ್ದಾರೆ. ನಮ್ಮ ದೇಶದಲ್ಲಿ ನಮ್ಮನ್ನೆೇ ಗುಲಾಮರನ್ನ ಮಾಡಿದ್ದಾರೆ, ಮೊದಲು ಇವರ್ನ ಓಡಿಸ ಬೇಕು ಅನ್ನೋದು. ಬೋಲೋ ವಂದೇಮಾತರಂ ಅನ್ನೋದು. ಅವರ ತಲೆ ಕೆಡಿಸೋದು.”

” ವಂದೇಮಾತರಂ ಅಂದರೆ?”

“ಅದೇ ಇಂಗ್ಲೀಷರ ವೈರಿಗಳು ಮಾಡಿ ಕೊಂಡಿರೊ ಮಂತ್ರ! ತಾವು ಕಾಣಿರಿ. ನಾನು ಮೊನ್ನೆ ಹೋಗಿದ್ದುದು ಒಬ್ಬ ಸನ್ಯಾಸಿ ಹಿಂದೆ. ಅವನು ವಂದೇಮಾತರಂ, ಜಲ, ಫಲ, ಅಂತಾ ಏನೇನೋ ಜಪಮಾಡಿ ವಂದೇಮಾತರಂ ಅಂದರೆ, ಅವನ ಮಾತು ಕೇಳಿದಕ್ಕೆ ಅವನು ಹೇಳೋದೆಲ್ಲ ನಿಜ, ಈ ಯೂನಿಫಾರಂ ಕಿತ್ತು ಎಸೆದು, ಅವನ ಜೊತೇಲಿ ಹೊರಟು ಬಿಡೋಣ ಅನ್ನಿಸೋದು. ಆ ವಂದೇ ಮಾತರಂ ಅದೆಯಲ್ಲ ಬಂಗಾಳಿ ಹಾಡು. ಆನಂದಮಠ ಅಂತೆ ಒಂದು ಕಥೆ. ಸನ್ಯಾಸಿ ದಂಗೆ ಆದಾಗ ಹುಟ್ಟಿದ್ದು. ಅದು ಈಗ ಮತ್ತೆ ಚಾಲ್ತೀಗೆ ಬಂದಿದೆ. ಅಂತೂ ದಿನದಿನ ಬೆಳೀತದೆ. ಇವರೂ ದಬಾ ಯಸ್ತಾ ಇದ್ದಾರೆ. ನೋಡಬೇಕು ಏನಾಯ್ತೆದೋ? ”

” ನೀವು ಸಾವಿರ ಹೇಳಿ ನನ್ನೋರಿಗೆ ಬುದ್ಧಿಯಿಲ್ಲ. ಕಳ್ಳಕಾಕರ ನ್ನೆಲ್ಲ ತಪ್ಪಿಸಿ ಧರ್ಮದಿಂದ ರಾಜ್ಯವಾಳುತ್ತಿದ್ದಾರೆ. ಅವರ ಮೇಲೆ ಕೈ ಮಾಡೋದಾ ? ಮಾಡಿದರೆ, ಬೊಡ್ಡಿ ಮಕ್ತಳೆನ್ನೆಲ್ಲಾ ಗುಂಡು ಹಾಕಿ ಸುಟ್ಟು ಬಿಟ್ಟರೆ? ನಾವು ಹೊಡದಾಡಬೇಕು ಅಂದರ ನಮ್ಮಲ್ಲೇನು ಮದ್ದು ಇದ್ದೀತಾ? ಬಂದೂಕ ಅದೆಯೊ ? ಹಿಂದಿನ ಕಾಲದಂಗೆ ಗಂಡಾಳು ಅದೆಯಾ? ಏನೋ, ಸಾವಿರ ಹೇಳಿ ಅವರ ಧರ್ಮ ಅದೆ. ನನ್ಮೋರು ಆ ಇಂಗ್ಲೀಷ್ನೋರ ರೋಮ ಕೂಡ ಅಲ್ಲಾಡಿಸ ಲಾರರು.”

“ಈಗ ಅದೇ ಈ ಕೆಂಪು ಬಟ್ಟೆ ಜನಾಹೇಳೋದು ಯಾರಾದರೂ ಇಂಗ್ಲೀಷರ್ನ ಭಲೇ ಅಂದಕ್ಕೆ, ನೋಡಿ, ನೋಡಿ, ಇವರೆಲ್ಲ ಗುಲಾಮರು ಅಂತಾರೆ. ಈಗ ಬೊಂಬಾಯಿ, ಪೂನಾ, ಲಾಹೋರು, ಕಾನ್ಪುರ್, ಅಲ್ಲೆಲ್ಲಾ ಬೀದೀಲೆಲ್ಲಾ ಇವರ ಗಲಾಟೆಯೇ ಗಲಾಟೆ. ತಮ್ಮಂಥಾ ದೊಡ್ಡೋರು ಈಚೆ ಬರೋಹಂಗಿಲ್ಲ.?

“ಕೊನೆಗೆ ಏನಾಯ್ತದೋ ? ಹಿಂಗಾದರೆ ?”

“ನೋಡಬೇಕು… ಸರಕಾರಕ್ಕೆ ಕೋಪ ಬಂದದೆ. ಆವರು ಧನ್ಧನ್ ಅಂತ ಗುಂಡು ಹಾಕಿ ಕೊಲ್ತಾರೆ. ಈ ಜನ, ನಮ್ಮ ಜನ ತುಫಾನ್ ಬಂದಾಗ ಅಲೆಬರೋ ದೆಂಗೆ ಮೇಲೆಮೇಲೆ ಬರತಾನೆ ಅವೆ. ಅಬ್ಬಾ! ಕಲ್ಕತ್ತಾದಲ್ಲಿ ನೋಡಬೇಕು. ಅದನ್ನೆಲ್ಲಾ !”

ನಾಯಕನಿಗೆ ಅನೊಂದೂ ಬೇಕಾಗಿಲ್ಲ. ಇನ್ಸ್ಪೆಕ್ಟರ್ನಿಗೆ ಯಾರಿಗೂ ತಿಳಿಯದ ಅಂಶ ತನಗೆ ತಿಳಿದಿದೆಯೆಂದು ಹೇಳಿಕೊಳ್ಳಲು ಆಶೆ. ಆಲ್ ಇಂಡಿಯಾದಲ್ಲಿ ಆರಂಭವಾಗಿರುವ ನ್ಯಾಷನಲ್ ಮೂವ್ ಮೆಂಟ್ ವಿಚಾರ ಹೇಳಬೇಕು ಎಂದು ಹಂಬಲ. ಏನ್ಷಿಯಂಟ್ ಮ್ಯಾರಿನರ್ನಹಾಗೆ ಕೇಳುವವರಿಗೆ ಬೇಕಾಗಲೀ, ಬೇಡವಾಗಲೀ ತಾನು ಹೇಳಬೇಕು ಎಂದಿರುವುದದ್ದು ಹೇಳಿ ತೀರುವ ಚಟ ಆತನಿಗೆ. ನಾಯಕ ನಿಗೆ ಮರ್ಯಾದೆ. ಅವನಿಂದ ತನಗೆ ಒಂದು ಕೆಲಸ ಆಗಬೇಕಾಗಿರುವ ಲೋಭ. “ನನಗೆ ಬೇಕಾದ್ದನ್ನು ಹೇಳಿ ಹೋಗಯ್ಯ. ನಿನ್ನ ಕಣಿ ಯಾರಿಗೆ ಬೇಕು ” ಎನ್ನಲಾರ. ಏನೋ ದಾಕ್ಷಿಣ್ಯ.

ಇನ್ಸ್ಪೆಕ್ಟರನು “ಎಲ್ಲಿ ಹೋದರೂ ಲಾಲ್ ಬಾಲ್ ಪಾಲ್.” ಎಂದು ಮುಂದೆ ಹೊರಟನು.

“ಹಾಗಂದರೆ ?”

“ಲಾಲ್ ಎಂದರೆ ಲಾಲಾ ಲಜಪತ್ರಾಯ್. ಬಾಲ್ ಎಂದರೆ ಬಾಲಗಂಗಾಧರ್ ತಿಲಕ್, ಪಾಲ್ ಎಂದರೆ ಬಿಪಿನ್ ಚಂದ್ರಪಾಲ್. ಒಬ್ಬರು ಲಾಹೋರಿನವರು. ಇನ್ನೊಬ್ಬರು ಪೂನಾದವರು, ಮತ್ತೊಬ್ಬರು ಕಲ್ಕತ್ತಾದವರು. ಈಗೇನಂತೀರಿ ? ಸ್ಕೂಲು ಹುಡುಗರೆಲ್ಲಾ ಮೂರು ಕಾಸು ಕೊಡೋದು, ಒಂದು ಮೂರು ಬೆರಳು ಆಗಲದ ಕಾಗದದಲ್ಲಿ ಅವರ ಮೂರು ಜನರ ಫೋಟೋ ಪ್ರಿಂಟ್ ಮಾಡಿರುತಾರಿ. ಅದನ್ನು ಎದೆಮೇಲೆ ಪಿನ್ ಹಾಕಿಕೊಂಡು ಲಾಲ್, ಬಾಲ್, ಪಾಲ್ಕೀ ಜೈ ಅನ್ನೋದು, ತಿರುಗೋದು.?

ಹೀಗೇ ಸುಮಾರು ಒಂದು ಗಂಟೆಯ ಹೊತ್ತು ತನ್ನ ಪ್ರತಾಪನೆಲ್ಲ ಕೊಚ್ಚಿ ಕೊಂಡ ಮೇಲೆ, ಇನ್ಸ್ಪೆಕ್ಟರನು ನಾಯಕನಿಗೆ ಬೇಕಾದ ವಿಷಯ ವನ್ನೆತ್ತಿದನು. ಅದುವರೆಗೆ ಆಕಳಿಕೆ ಬಂದರೂ ಕೈ ಮುಚ್ಚಿಕೊಂಡು ಆಕಳಿಸುತ್ತ ಕುಳಿತಿದ್ದ ನಾಯಕನು, ಸೋಫಾದಲ್ಲಿ ಸರಿಯಾಗಿ ಕುಳಿತು ಕೊಂಡನು. ಇನ್ಸ್ಪೆಕ್ಟರನು ಕೂಟ್ಟ ನಶ್ಯವನ್ನು ಏರಿಸಿ ಮೈಯೆಲ್ಲಾ ಕಿವಿಯಾಗಿ ಕುಳಿತನು. ಇನ್ಸ್ಪೆಕ್ಟರನು ಹೇಳಿದನು :

“ನೋಡಿ. ನೀವು ಹೇಳಿ ಸುಮಾರು ದಿನ ಆಯಿತು. ನಾನು ಏನು ಮಾಡಿದೆ? ಮಲ್ಲಣ್ಣನ ಹೆಂಡತಿ ಮೊಗ ತಂದದಿವಸದ ಸುಮಾರಿನಲ್ಲಿ ಈ ವೂರಿಗೆ ಬಂದ ದೊಂಬರ ಗುಂಪುಗಳನ್ನೆಲ್ಲಾ ಪೋಲೀಸ್ ಡೈರಿನಲ್ಲಿ ನೋಡಿ ಗುರ್ತು ಹೆಚ್ಚಿಕೊಂಡೆ. ಆಮೇಲೆ ಅವರ್ನ ತಲಾಷ್ ಮಾಡೋಕೆ ಸುರು. ಆ ಗುಂಪು ಎಲ್ಲೆಲ್ಲೋ ಅಲೆ ಕೊಂಡು ಹೋಗಿ, ಎಲ್ಲೋ ಕಳ್ಳತನ ಮಾಡಿ, ಜೈಲ್ ಸೇರಿಬುಡ್ತು. ಅದನ್ನೆಲ್ಲಾ ನೋಡಿಕೊಂಡು, ಅವರು ಯಾವ ಜೈಲಿನಲ್ಲಿದಾರೆ ಅದನ್ನು ಕೊ ಬರೋಕೇ ನಾನು ಮೊದಲು ರಜಾ ತಕ್ಕೊಂಡದ್ದು. ತಾವು ಹೇಳಿದ್ದರಲ್ಲಾ, ಗುಟ್ಟಾಗಿರಬೇಕು ಅಂತ ಅದರಿಂದ ನಾನೇ ಹೋದೆ. ಕೊನೆಗೆ ಅವರು ಹೇಳಿದರು. ಕಾವೇರೀ ನದಿಗೆ ಕೊಂಚದೂರದಲ್ಲಿ ಕೊಳ್ಳೇಗಾಲದ ಆಚೆ ಒಂದು ಮಠ. ಅಲ್ಲಿ ಒಬ್ಬ ಅಯ್ಯ. ಅವನು ಇವರನ್ನು ಕರೆದು “ಈ ಮೊಗಾ ತಕೊಂಡು ಹೋಗಿ ಯಾರಿಗಾದರೂ ಉತ್ತಮರಿಗೆ ಕೊಟ್ಟು ಬಿಡರೋ !” ಅಂತ ಇವರಿಗೆ ಒಂದುನೂರು ರೂಪಾಯಿ, ಆ ಮೊಗಾನೂ ಕೊಟ್ಟ. ಅದು ಆಗ ಐದಾರು ದಿನದ ಬೊಮ್ಮಟೆ. ಆ ಮೊಗದ ಅಮ್ಮ ಕೂಡ, ಬಂದು ಒಂದು ಸೀರೆ ರವಿಕೆ ಕೊಟ್ಟು ಚೆನ್ನಾಗಿ ಕಾಪಾಡೋರಿಗೆ ಕೊಡಿ ಅಂತ ಕಣ್ಣಲ್ಲಿ ನೀರಿಟ್ಟು ಕೊಂಡರು. ದೊಂಬರು ಒಂದು ತಿಂಗಳವರೆಗೂ ಆ ಮೊಗ ಸಾಕಿ ಕೊನೆಗೆ ಮಲ್ಲಣ್ಣನ ಹೆಂಡತಿಗೆ ಕೊಟ್ಟರು. ಮತ್ತೆ ಹೋಗಿ ಮಠದ ಅಯ್ಯನಿಗೆ ಹೇಳಿ ಬಂದರು. ಆ ಮಠ ಕೂಡ ಹೋಗಿ ನೋಡಿಕೊಂಡು ಬಂದೆ. ಆ ಅಯ್ಯ ನಾನು ಹೋಗಿದ್ದಾಗ ಕಾಶೀ ಯಾತ್ರಿ ಹೋಗಿತ್ತು.”

ನಾಯಕನಿಗೆ ಒಂದು ಸಂತೋಷವಾಯಿತು. ಮಲ್ಲಿ ತಾನೆಂದು ಕೊಂಡಿದ್ದಂತೆ ಉತ್ತಮರ ಕುಲದಲ್ಲಿ ಹುಟ್ಟಿದವಳು. ತಿರುಪದವರ ಮನೆಯಲ್ಲಿ ಹುಟ್ಟದವಳಲ್ಲ.

ಇನ್ಸ್ಪೆಕ್ಟರನು ಹೇಳಿದನು :

“ಆ ಅಯ್ಯನ ಹೆಸರು ಶಿವರಾಮಯ್ಯ. ಆ ಮಠವಿರುವುದು ದೇವರ ಹಳ್ಳಿಯಲ್ಲಿ. ಆ ಅಯ್ಯನು ಬಹು ಚೆನ್ನಾಗಿ ಭಾರತ ರಾಮಾಯಣ ಓದುತ್ತಾನೆ. ಹತ್ತು ಜನಕ್ಕೆ ಬೇಕಾದವನು. ಒಂದು ಆಶ್ರಮ ಮಾಡಿಕೊಂಡು ಬಂದವರಿಗೆ ರೋಗರುಜಿನಕ್ಕೆ ಏನಾದರೂ ಮದ್ದು, ಮಂತ್ರ ಮಾಡುತ್ತ ದಿನ ತಳ್ಳುವನು. ಆವನ ಆಶ್ರಮದಲ್ಲಿ ಗಂಡುಸರೂ ಹೆಂಗಸರೂ ಅನಾಥರೂ ಬಂದು ಅಷ್ಟುದಿನ ಇದ್ದು ಹೋಗುತಾರೆ.”

“ಹಾಗಾದರೆ ನೀವು ಅಲ್ಲಿಗೆ ಹೋಗಿ ಎಷ್ಟು ದಿನವಾಯಿತು. ?”

“ನಾನು ಮೊನ್ನೆ ಮೊನ್ನೆ ಹೋಗಿದ್ದೆ. ಈ ತಲಾಸೆಯೆಲ್ಲ ಮುಗಿ ಸಿಕೊಂಡು ಬಂದು ಛಾರ್ಜು ತಕೊಂಡೆ. ಛಾರ್ಜು ತಕೊಂಡು ಹತ್ತು ದಿನ ಆಯಿತು.”

“ಹಂಗಾದರೆ ನಮಗೋಸ್ಕರ ಬೋ ಕಷ್ಟ ಬಿದ್ದಿರಿ!”

“ಅದೇನು ಕಷ್ಟ ಅಂದರೆ ಕಷ್ಟ ! ಆದರೆ ತಾವು ದೊಡ್ಡೊರು. ತಮ್ಮ ಮಾತಿಗೆ ಮಹಾರಾಜಾ ಸಾಹೇಬ್ ಕೂಡ ಬೆಲೆ ಕೊಡುತ್ತೆ. ಅಂತಾದ್ದರಲ್ಲಿ ನಾವು ಬೆಲೆ ಕೊಡದಿದ್ದರೆ ?”

“ಉಂಟಾ ಸ್ವಾಮಿ, ತಾವು ಎಷ್ಟೇ ಆಗಲಿ ಸರಕಾರದ ಆಫೀಸರು. ಪೋಲೀಸ್ ಇನ್ಸ್ಪೆಕ್ಟರ್ ಅಂದರೆ, ಅಮಲ್ದಾರ್ನ ಬಿಟ್ಟರೆ ನೀವೇ ತಾಲ್ಲೋಕು ದಣಿ. ಆಯಿತು. ಈಗ ನೀವು ನಮಗಾಗಿ ಪಟ್ಟ ಕಷ್ಟಕ್ಕೆ ಏನಾದರೂ ಅಷ್ಟೋ ಇಷ್ಟೋ ಕೊಟ್ಟರೆ, ನಾಯಕನ ಜಂಬಾ ನೋಡು, ನಮಗೆ ಲಂಚ ಕೊಟ್ಟು ಅಂದುಬುಡ್ತೀರೊ ಏನೋ ? ನಿಮ್ಮನ್ಮ ಕಂಡರೇನೇ ನಮಗೆ ದಿಗಿಲು.”

“ನೋಡಿ, ನಾಯಕ್ಸಾಬ್, ನಾವಾಗಿ ಕೊಡಿ ಇಲ್ಲದಿದ್ದರೆ ನಿಮ್ಮ ಕೆಲಸಾನೇ ಮಾಡೋಕಿಲ್ಲ, ಅಂತ ಷರತ್ ಹಾಕಿ ತಕೊಂಡರೆ ಅದು ಲಂಚ. ನಮ್ಮ ಖುಷಿಯಿಂದ ನಾವು ಮಾಡಿದ ಕೆಲಸಕ್ಕೆ ನಿಮ್ಮ ಖುಷಿಯಿಂದ ನೀವೇ ನಿಮಗೆ ತೋರಿದ್ದು ಕೊಟ್ಟರೆ ಅದು ಮರ್ಯಾದೆ. ಅದು ಲಂಚ ಅಲ್ಲ.”

“ಹಂಗಾದರೆ ನಾವು ಬದುಕಿದೋ! ದಯವಿಟ್ಟು ಒಂದು ಗಳಿಗೆ ಕುಂತಿರಿ. ಬಂದೆ.”

ನಾಯಕನು ಒಳಕ್ಕೆ ಹೋಗುತ್ತಿರುವಾಗ ದೀಪದ ಬೆಳಕಿನಲ್ಲಿ ಆತನ ಕೈಯಲ್ಲಿದ್ದ ಉಂಗುರಗಳು ಹೊಳೆಯಿತು. ಇನ್ಸ್ಪೆಕ್ಟರನಿಗೆ ಇಂಥಾದ್ದು ಒಂದು ವಜ್ರದ ಉಂಗುರ ಉಂಗುರ ಆದರೂ ಕೊಟ್ಟರೆ ” ಎನ್ನಿಸಿತು. ಜೊತೆಯಲ್ಲಿಯೇ, “ಆತನು ಕೊಟ್ಟರೂ ನಾನೇನು ಹಾಕ್ಕೊಂಡು ತಿರುಗೋಕಾದೀತಾ ? ಬರಿಯ ಆಸೆ ಎನ್ನಿಸಿ, “ಛೇ, ನಾನೇಕೆ ಏನೇನೋ ಆಸೆ ಪಡಲಿ? ನಾಯಕನ ಕೈಯ್ಯಿಂದ ಕೊಡಿಸುವವನು ದೇವರು.” ಎಂದು ಸುಮ್ಮನಾದನು.

ನಾಯಕನು ಎರಡು ತಟ್ಟೆಗಳನ್ನು ಆಳಿನ ಕೈಯಲ್ಲಿ ತೆಗೆಸಿಕೊಂಡು ಬಂದನು. ಒಂದರ ತುಂಬಾ ಸುಮಾರು ನೂರು ರಸಬಾಳೆಯಹಣ್ಣು ಸ ಗಿಡದ ಮೇಲೆಯೇ ಬಲಿತು ಹಣ್ಣಾಗಿ ಪುಟವಿಕ್ಕಿದ ಚಿನ್ನದಿಂದ ಮಾಡಿದಂತಿದೆ. ಇನ್ನೊಂದು ತಟ್ಟೆಯಲ್ಲಿ ಸುತ್ತು ವೀಳ್ಯ-ಅದರ ನಡುವೆ ಕೆಲವು ಹಸಿರು ನೋಟುಗಳು.

ನಾಯಕನು ತಾನೇ ಆತನಿಗೆ ಫಲತಾಂಬೂಲ ಕೊಟ್ಟು “ಇವೊತ್ತು ರಾತ್ರಿ ಇಲ್ಲಿಯೇ ಇರಬೇಕು. ನಾಳೆಯೂ ಇದ್ದರೆ ಇನ್ನೂ ಸಂತೋಷ.” ಎಂದು ವಿಶ್ವಾಸದಿಂದ ಹೇಳಿದನು.

ರಜಾಕ್ ಸಾಹೇಬನು ಉಪಚಾರದ ಮಾತು ಹೇಳಿ ತನಗಾಗಿ ಗೊತ್ತಾಗಿದ್ದ ಎಡೆಗೆ ಹೆೊದನು. ದಾರಿಯಲ್ಲಿಯೇ ಜೇಬಿನಲ್ಲಿಯೇ ಎಣಿಸಿದರೆ, ನೋಟು ಹತ್ತು ಇತ್ತು. ಅವನಿಗೆ ಮತ್ತೆ ಕೈಗೆ ತೆಗೆದು ಕೊಂಡು ಎಣಿಸಬೇಕು ಎಂದು ಬಲವಾದ ಆಸೆ. ಅದರಿಂದ ಬೇಗ ಬೇಗ ಹೊರಟು ಹೋದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿವ ಬೆಳಕು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…