ತಾಯಿಯ ಕರೆ

ತಾಯಿಯ ಕರೆ

ಚಿತ್ರ: ಪಿಕ್ಸಾಬೇ
ಚಿತ್ರ: ಪಿಕ್ಸಾಬೇ

ಮನೋಜ್ ಇಂಡಿಯಾದಿಂದ ಬಂದಿದ್ದಾನೆ ಅಂತಾ ಗೊತ್ತಾದ ಕೂಡಲೆ ಅವನನ್ನು ನೋಡಲು ಆತುರದಿಂದ ಹೊರಟ ಸಾವಂತ, ಮನೋಜ್ ಇಂಡಿಯಾಕ್ಕೆ ಹೋಗಿ ತಿಂಗಳಾಗಿತ್ತು. ಗೆಳಯನಿಲ್ಲದೆ ಆ ಒಂದು ತಿಂಗಳು ಹೇಗೆ ಕಳೆದನೋ ತನ್ನೊಬ್ಬನನ್ನೇ ಬಿಟ್ಟು ತನ್ನವರನ್ನು ನೋಡಲು ಹೋಗಿದ್ದ ಮನೋಜ್ ಈ ಬಾರಿ ಮದುವೆ ಮುಗಿಸಿಕೊಂಡು ಪತ್ನಿ, ತಾಯಿಯೊಂದಿಗೆ ಬರುವೆನೆಂದು ಹೇಳಿದಾಗ ಮನೋಜನ ಬಗ್ಗೆ ಕೊಂಚ ಈರ್ಷೆ ಮೂಡಿದ್ದಂತೂ ನಿಜ. ಇಷ್ಟು ದಿನ ಜೊತೆಯಲ್ಲಿ ಇದ್ದುದಾಯಿತು. ಇನ್ನುಮುಂದೆ ಅವನ ಜೊತೆಯಲ್ಲಿರುವುದು ಸರಿಯಲ್ಲವೆಂದು ಬೇರೆ ವಾಸ್ತವ್ಯ ಹೂಡಿದ್ದ. ಒಂಟಿತನ ಕಾಡುತ್ತಿದ್ದರೂ, ತನ್ನವರೊಂದಿಗೆ ಸಂತಸದಿಂದಿರುವ ಗೆಳೆಯನಿಗೆ ಡಿಸ್ಟರ್ಬ್ ಮಾಡಬಾರದೆಂದು ಫೋನ್ ಕೂಡ ಮಾಡಿರಲಿಲ್ಲ. ಅವನೂ ಕೂಡ ಇಂಡಿಯಾದಿಂದ ಸಂಪರ್ಕಿಸಿರಲಿಲ್ಲ.

ಈಗ ಧಿಡೀರೆಂದು ಇಷ್ಟು ಬೇಗೆ ಮದ್ವೆ ಮುಗಿಸಿಕೊಂಡು ಬಂದು ಒಬ್ಬನೇ ತನಗೂ ಒಂದು ಫೋನ್ ಕೂಡ ಮಾಡದೆ ಮದುವೆ ಮಾಡಿಕೊಂಡು ಬಂದು ಬಿಟ್ಟನೆ. ಇನ್ನೂ ಎರಡು ತಿಂಗಳು ರಜೆ ಇತ್ತಲ್ಲ. ಏಕೆ ಇಷ್ಟು ಬೇಗ ಬಂದ, ಮನಸ್ಸಿನೊಳಗೆ ಮೂಡುತ್ತಿದ್ದ ನೂರೆಂಟು ಪ್ರಶ್ನೆಗಳಿಗೆ ಉತ್ತರಕ್ಕಾಗಿ ಎಷ್ಟು ಬೇಗ ಮನೋಜನನ್ನು ನೋಡುತ್ತೇನೋ ಎಂದು ಕಾತುರದಿಂದ ತಾನು ಮೊದಲು ಮನೋಜ್ ಜೊತೆ ಇದ್ದ ಮನೆಗೆ ಬಂದ ಸಾವಂತ, ಬಂದವನೇ ದಿಗ್ಭ್ರಾಂತನಾದ.

ಒಂದು ತಿಂಗಳಲ್ಲಿ ಈ ಬದಲಾವಣೆಯೇ? ಸದಾ ಸೊಗಸುಗಾರನಂತಿರುತ್ತಿದ್ದ ಮನೋಜನ ಮುಖದಲ್ಲಿ ತಿಂಗಳ ಕಳೆ. ದಾಡಿ ಬೆಳೆದು ರೋಗಿಯಂತೆ ಕಾಣುತ್ತಿದ್ದಾನೆ. ಸಾವಂತ ಬಂದಿದ್ದು, ಅವನನ್ನು ಅವಲೋಕಿಸುತ್ತಿರುವುದು ಇದಾವುದರ ಅರಿವೂ ಅವನಿಗಿದ್ದಂತಿಲ್ಲ. ಕೈಯಲ್ಲಿದ್ದ ಬ್ಯಾಗಿನತ್ತ ಬಿಗಿಯಾಗಿ ಅಪ್ಪಿಕೊಂಡು ಏನೋ
ಮಿಣಮಿಣಿಸುತ್ತಿದ್ದಾನೆ.

“ಮನೋಜ್” ಆತಂಕದಿಂದ ಎಚ್ಚರಿಸಿದ.

ಯಾವುದೋ ಲೋಕದಿಂದ ಹೊರಬಂದವನಂತೆ ‘ಓ ಸಾವಂತ, ಯಾವಾಗ ಬಂದೆ ನೀರಸವಾಗಿ ದೃಷ್ಟಿ ಹರಿಸುತ್ತ ಪ್ರಶ್ನಿಸಿದ’.

“ಈಗ ಬರ್ತ್ತಾ ಇದ್ದಿನಿ ನೀನ್ಯಾಕೆ ಹೀಗೆ? ಊರಿನಲ್ಲಿ ಎಲ್ಲಾ ಚೆನ್ನಾಗಿದ್ದಾರಾ? ಅನುಮಾನಿಸುತ್ತಲೇ ಕೇಳಿದ.

ಹಾಗೆಂದ ಕೂಡಲೇ ಸಣ್ಣ ಮಗುವಿನಂತೆ ಅಳಲಾರಂಭಿಸಿದ ಮನೋಜನನ್ನು ಕಂಡು ಸಾವಂತಗೆ ಗಾಬರಿಯಾಯಿತು.

“ಮನೋಜ್ ಏನಾಯ್ತು ಯಾಕೆ ಬೇಗ ಬಂದು ಬಿಟ್ಟೆ, ಪ್ಲೀಸ್ ಇದೇನು ಸಣ್ಣ ಮಗುವಿನಂತೆ, ಅಳಬೇಡ ಸುಮ್ಮನಿರು” ಸಮಾಧಾನಪಡಿಸಲೆತ್ನಿಸಿದ.

ಬ್ಯಾಗಿನತ್ತ ಕೈತೋರಿಸಿ “ಅಮ್ಮಾ ಅಮ್ಮಾ” ಬಿಕ್ಕಳಿಸಿದ. ಕೊಂಚ ಸಾವರಿಸಿಕೊಂಡು.

“ಸಾವಂತ, ಅಮ್ಮಾ ಇಲ್ಲಿದ್ದಾಳೆ ಕಣೋ ನಮ್ಮಮ್ಮ ಇಲ್ಲೇ ಇದ್ದಾಳೆ. ಅವಳ ಕೊನೆಯಾಸೆಯಂತೆ ಅವಳನ್ನು ಕರ್ಕೊಂಡು ಬಂದಿದ್ದೀನಿ. ನಮ್ಮಮ್ಮನ್ನ ನೋಡಬೇಕು ಅಂತ ಇದ್ದೆಯಲ್ಲ, ನೋಡು ಬಂದಿದ್ದಾಳೆ” ಹುಚ್ಚನಂತೆ ಆಡುತ್ತ ಬ್ಯಾಗಿನಿಂದ ಒಂದು ತಂಬಿಗೆಯನ್ನೆತ್ತಿ ತೋರಿಸಿದಾಗ, ಸಾವಂತನಿಗೆ ಎಲ್ಲವೂ ಅರ್ಥವಾಗಿ ಸುಸ್ತಾದವನಂತೆ ಮನೋಜನ ಪಕ್ಕ ಕುಕ್ಕರಿಸಿದ. ಗೆಳೆಯನ ಮಾತೃವಿಯೋಗಕ್ಕಾಗಿ ಶೋಕಿಸುತ್ತ ಆಘಾತ ತಡೆಯಲಾರದೆ ತತ್ತರಿಸುತ್ತಿರುವ ಗೆಳೆಯನನ್ನು ಅನುಕಂಪದಿಂದ ದಿಟ್ಟಿಸುತ್ತ.

“ಸಾರಿ, ಮನೋಜ್ ಸಮಾಧಾನ ಮಾಡ್ಕೋ, ನಮ್ಮ ಕೈಲಿ ಏನಿದೆ ನೀನೆ ಹೀಗೆ ಆಡಿದ್ರೆ ಹೇಗೆ? ನಿಮ್ಮಮ್ಮನ ಅಸ್ತಿನ ಗಂಗೆಗೆ ಬಿಡೋದು ಬಿಟ್ಟು ಇಲ್ಲಿಗ್ಯಾಕೆ ತಂದೆ.”

ವಿಕಟವಾಗಿ ನಗುತ್ತ ಮನೋಜ್ “ಈ ಪಾಪಿ ಮಗನ ಜೊತೆ ಇರಬೇಕು ಅಂತ ಅಲ್ವಾ ನಮ್ಮಮ್ಮ ಸದಾ ಬಯಸ್ತಾ ಇದ್ದದ್ದು, ಅದಕ್ಕೆ ಕರ್ಕೊಂಡು ಬಂದಿದ್ದೀನಿ ಕಣೋ, ಇನ್ಯಾವತ್ತು ನಮ್ಮಮ್ಮನ್ನ ಬಿಟ್ಟಿರೊಲ್ಲ ನಾನು ಸಾಯೋತನಕ ನನ್ನ ಜೊತೇಲೆ ಇರ್ತಾಳೆ.”

ತಾಯಿಯ ಸಾವು ಮನೋಜನ ಬುದ್ಧಿಯನ್ನೆ ವಿಕಲ್ಪಗೊಳಿಸಿತ್ತು. ಮನೋಜ್‌ಗಿದ್ದ ಏಕೈಕ ಬಂಧುವೆಂದರೆ ತಾಯಿಯೊಬ್ಬಳೆ. ಮಗುಗಾಗಿ ಜೀವವನ್ನ ಗಂಧದಂತೆ ತೇಯ್ದಿದ್ದಳು. ಗೆಳೆಯ ಬಂಧು, ಮಗ ಎಲ್ಲವೂ ಆಕೆಗೆ ಮನೋಜ್ ಒಬ್ಬನೇ ಆಗಿದ್ದ. ಅಪಾರ ಬುದ್ಧಿವಂತನಾದ ಮನೋಜ್, ಉನ್ನತ ವ್ಯಾಸಂಗಕ್ಕಾಗಿ ಭಾರತ ಬಿಟ್ಟು ಬಂದಿದ್ದ. ಎರಡು ವರ್ಷವೆಂದು ಬಂದದ್ದು, ಹಿಂತಿರುಗಲು ಮನಸ್ಸಿಲ್ಲದೆ ಮನೊಜ್ ತಾಯಿಯನ್ನೆ ಇಲ್ಲಿಗೆ ಕರೆತರಲು ನಿರ್ಧರಿಸಿದ್ದ. ಮಗನ ಅಗಲಿಕೆ ಸಹಿಸದ ಆ ತಾಯಿ ಹೆತ್ತ ಕರುಳ ಸಾಮೀಪ್ಯಕ್ಕಾಗಿ ಹಾತೊರೆದಿತ್ತು. ಚೆನ್ನಾಗಿ ದುಡಿದು ತಾಯಿಯನ್ನು ರಾಣಿಯ ಥರ ಇಡಬೇಕೆಂದು ಮನೋಜ್ ಶಕ್ತಿ ಮೀರಿ ದುಡಿಯುತ್ತಿದ್ದ. ಇನ್ನೇನು ಸಾಕಷ್ಟು ದುಡಿದಿದ್ದಾಯಿತು. ಸ್ವಂತ ಮನೆ, ಖರ್ಚಿಗೆ ಸಾಕಷ್ಟು ಹಣ, ಕೊರತೆಯೇ ಇಲ್ಲಾ ಮುಂದಿನ ಬದುಕೆಲ್ಲ ಆನಂದಮಯ. ತಾಯಿಗೆ ಸ್ವರ್ಗದ ಬಾಗಿಲನ್ನೆ ತೆರೆಯುವೆ ಎಂದೆಲ್ಲ ಕನಸು ಕಾಣುತ್ತ ಊರಿಗೆ ಹೋಗಿದ್ದ ಮನೋಜ್. ಪಾಪ, ಹೀಗಾಗಬಾರದಿತ್ತು.

“ಅಮ್ಮಾ ನೋಡಿದೆಯಾ ನಿನ್ನ ಮಗನ ಮನೇನಾ…. ಈಗ ನಿಂಗೆ ಸಂತೋಷವಾಗ್ತ ಇದೀಯಾ, ಅಮ್ಮ ಅಮ್ಮ ನೋಡು ಇವನೇ ನನ್ನ ಪ್ರಾಣ ಗೆಳೆಯ, ನಮಸ್ಕಾರ ಮಾಡೋ ಸಾವಂತ, ಅಮ್ಮನಿಗೆ ನಿನ್ನ ಬಗ್ಗೆ ತುಂಬ ಹೇಳಿದ್ದೀನಿ.”

ಈ ಜಗತ್ತಿನಲ್ಲಿನ್ನು ತಾಯಿ ಬದುಕಿದ್ದಾಳೆ ಎಂದೇ ಭ್ರಮಿಸಿ ಮಾತನಾಡುತ್ತಿದ್ದ ಮನೋಜನನ್ನು ಕಂಡಾಗ ದುಃಖ ಉಕ್ಕಿ ಬಂತು.

“ಮನೋಜ್, ಸಾವು ಕಟ್ಟಿಟ್ಟ ಬುತ್ತಿ. ಎಲ್ಲರಿಗೂ ಒಂದಲ್ಲ ಒಂದು ದಿನ ಅದು ಬಂದೇ ಬರುತ್ತದೆ. ನಾನೂ, ನೀನೂ, ಒಂದು ದಿನ ಹೋಗಲೇಬೇಕು. ತಾಯೀನ ಕಳ್ಕೊಂಡಿರೋ ನಿನ್ನ ದುಃಖ ನಂಗೆ ಅರ್ಥವಾಗುತ್ತೆ. ಆದ್ರೆ ನೀ ಹಿಂಗೆಲ್ಲ ಆಡಬಾರದು ಕಣೋ, ಧೈರ್ಯ ತಂದ್ಕೋ. ನಿಮ್ಮಮ್ಮನ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಅಸ್ಥಿನ ವಿಸರ್ಜಿಸು. ಕೊಡು ಅದನ್ನ ಇಲ್ಲಿ” ಎಂದು ಬಲವಂತವಾಗಿ ಅವನ ಕೈಯಲ್ಲಿದ್ದನ್ನು ಕಿತ್ತುಕೊಂಡು, ಮುಂದೇನು ಮಾಡಬಹುದು ಅಂತ ಆಲೋಚಿಸಿದ.
ತಕ್ಷಣವೇ ಡಾಕ್ಟರ್‌ಗೆ ಫೋನ್ ಮಾಡಿದ.

‘ನಮ್ಮಮ್ಮನ್ನ ಕೊಡೊ, ನಮ್ಮಮ್ಮನ್ನ ಕೊಡೊ’ ಎಂದು ಬಡಬಡಿಸುತ್ತಲೇ ಇದ್ದ ಮನೊಜ್.

ತಾಯಿಯ ಸಾವಿನ ದುಃಖ ಮನದೊಳಗೆ ಹೆಪಪ್ಪುಗಟ್ಟಿದ್ದು ಭಾರತ ಬಿಟ್ಟು ಬಂದೊಡನೆ ಈ ರೀತಿ ಆಸ್ಫೋಟಿಸಿರಬಹುದು, ಒಂದೆರಡು ವಾರ ಕಳೆದರೆ ಸರಿಹೋಗ್ತದೆ ಎನ್ನುವ ಭರವಸೆ ವೈದ್ಯರು ನೀಡಿದಾಗ ಸಾವಂತನ ಎದೆ ಭಾರ ಕಳೆದಂತಾಯಿತು. ರಾತ್ರೆಯೆಲ್ಲ ಸಾವಂತಗೆ ನಿದ್ರೆ ಇಲ್ಲದಂತಾಯಿತು. ಕಣ್ಣುಮುಚ್ಚಿದರೆ ಹೆತ್ತವರು ಕಣ್ಮುಂದೆ ನಿಂತಂತಾಗಿ ಬೆಚ್ಚಿ ಎದ್ದು ಕುಳಿತ.

ಭಾರತ ಬಿಟ್ಟು ಬಂದು ಹತ್ತು ವರ್ಷಗಳೇ ಕಳೆದು ಹೋಗಿವೆ. ಅಪ್ಪ ಅಮ್ಮ ಇಲ್ಲಿಗೆ ಬಂದೀರಿ ಅಂದರೆ ನಿರ್ದಾಕ್ಷಿಣ್ಯವಾಗಿ ಪರದೇಶಕ್ಕೆ ಬರಲಾರೆವು ಎಂದು ಬಿಟ್ಟಿದ್ದರು. ಕರ್ತವ್ಯ ಎಂಬಂತೆ ಕರೆದಿದ್ದನಷ್ಟೆ. ಬರಲ್ಲ ಎಂದಾಗ ಯಾವ ಭಾವನೆಯೂ ಕಾಡಿರಲಿಲ್ಲ. ಪ್ರತಿ ತಿಂಗಳು ಕೈತುಂಬ ಹಣ ಕಳಿಸಿ ತನ್ನ ಜವಾಬ್ದಾರಿ ಮುಗಿಯಿತ್ತೆಂದು ನೆಮ್ಮದಿಯಿಂದಿರುತ್ತಿದ್ದ. ಮದುವೆಯ ಬಗ್ಗೆಯೂ ತೀವ್ರತೆ ಕಾಡಿರಲಿಲ್ಲ. ಮದುವೆ ಆದರಾಯಿತು ಎಂದು ಹೆತ್ತವರು ಬಲವಂತಿಸಿದಾಗಲೆಲ್ಲ ಉಡಾಫೆ ಹೊಡೆಯುತ್ತಿದ್ದ.

ಕಳೆದ ಬಾರಿ ಊರಿಗೆ ಹೋಗಿದ್ದಾಗ ಅಮ್ಮ ಹೇಳಿದ್ದು ನೆನಪಾಯಿತು. “ಸಾವಂತೂ, ನಮ್ಗೆ ನಿನ್ನಂತ ಬುದ್ಧಿವಂತ ಮಗ ಹುಟ್ಟಬಾರದಿತ್ತು ಕಣೋ, ನಿನ್ನ ಸ್ನೇಹಿತ ರಂಗಸ್ವಾಮಿ ನೋಡು ದಡ್ಡನಾದ್ರೂ ಹೈಸ್ಕೂಲಿಗೆ ಓದು ಮುಗಿಸಿದರೂ, ತಂದೆ ತಾಯಿ ಕಣ್ಮುಂದೆ ಇದ್ದಾನೆ ನಾವು ನೋಡು ಇರೋ ಒಬ್ಬ ಮಗನ್ನ ಅಷ್ಟು ದೂರ ಕಳಿಸಿ, ಎಷ್ಟೋ ವರ್ಷಕ್ಕೊಮ್ಮೆ ನೋಡೋದು, ಇಂತ ಅದೃಷ್ಟ ನಮ್ಗೆ ಬೇಕಾಗಿತ್ತೆ. ನಿಮ್ಮಕ್ಕ ಇದೇ ದೇಶದಲ್ಲಿದ್ದರೂ, ನೆನಸಿದ ಕೂಡಲೇ ಹೋಗಕಾಗದೆ ಇರೋ ದೂರದಲ್ಲಿದ್ದಾಳೆ. ಯಾರಿಗೋಸ್ಕರ ಬದುಕಬೇಕು ಅನಿಸುತ್ತೇ ಕಣೋ” ಎಂದು ಕಣ್ಣೀರು ಹಾಕಿದಾಗ ಸೆಂಟಿಮೆಂಟ್ಸ್ ಅಂತಾ ಮೂಗು ಮುರಿದಿದ್ದೆ. ಆದರೆ ಇಂದೇಕೊ ತೌರೂರು ಬಹಳಷ್ಟು ಕಾಡ್ತ ಇರೋದು, ಮನೋಜನ ಈ ಸ್ಥಿತಿಯೋ, ತಾನು ಕೂಡ ಮುಂದೆ ಈ ಪಶ್ಚಾತ್ತಾಪದ ದಳ್ಳುರಿಯಲ್ಲಿ ಬೇಯಲಿರುವೆನೇ, ಹೆತ್ತವರು ನನಗಾಗಿ ಹಂಬಲಿಸುತ್ತ ಕೊರಗುತ್ತಿರುವುದು ನಿಜವೇ? ಕೊನೆ ದಿನಗಳಲ್ಲಾದರೂ ನನ್ನ ಸಾಮೀಪ್ಯ ಅವರಿಗೆ ಅನಿವಾರ್ಯವೇ, ನಾ ಕಳಿಸುತ್ತಿರುವ ಹಣ ಅವರನ್ನು ಸುಖಿಯಾಗಿಸುತ್ತಿಲ್ಲವೇ? ಏನೇನೋ ವಿಚಾರಗಳಿಂದ ಸಾವಂತನ ಮನಸ್ಸು ನರಳಿತು. ತನ್ನಂಥ ಪ್ರತಿಭಾವಂತ, ಮೇಧಾವಿ ಮಗನನ್ನು ಪಡೆದರೂ,
ಆ ರಂಗನೇ ನನ್ನ ಮಗನಾಗಬಾರದಿತ್ತೆ! ಎಂದು ಕೊರಗುವಷ್ಟು ಮಟ್ಟಕ್ಕೆ ಅಮ್ಮನ ಮನಸ್ಸು ನೊಂದಿದೆಯೇ, ನಿಜಾ, ಕೈಗೆಟುಕದ ನಕ್ಷತ್ರ ಎಷ್ಟು ಹೊಳೆದರೇನೋ? ಎಷ್ಟು ಪ್ರಜ್ವಲಿಸಿದರೇನು? ಕೆಲಸಕ್ಕೆ ಬರುವ ಕಲ್ಲೆ ವಾಸಿಯಲ್ಲವೇ? ಹೌದು ತಾನೀಗ ಹೊಳೆಯುವ ನಕ್ಷತ್ರವಾಗಿಯೇ ಉಳಿಯಲಿ ಅಥವಾ ಸದಾ ಕೈಗೆಟಕುವ ಕಲ್ಲಾಗಲೇ, ಈ ಸುಂದರ ಭವಿಷ್ಯವನ್ನು ಹೇಗೆ ಒದೆಯುವುದು.

‘ಸಾವಂತು ಸಾವಂತು’ ಅಮ್ಮ ಕರೆಯುತ್ತಲೇ ಕಣ್ಮುಚ್ಚುತ್ತಿರುವಂತೆ ಭಾಸವಾಗಿ ದಿಗಿಲುಗೊಂಡ.

ಬೆಳಗಾಗುತ್ತಲೇ ಮನಸ್ಸು ಒಂದು ದೃಢ ನಿರ್ಧಾರಕ್ಕೆ ಬಂದಿತ್ತು. ಕರುಳಿನ ಕರೆ ಕೈಬೀಸಿ ಕರೆಯಹತ್ತಿತು.

ತಕ್ಷಣವೇ ಭಾರತಕ್ಕೆ ಸುದ್ದಿ ತಿಳಿಸಿದ. ತಾನು ಸದ್ಯದಲ್ಲಿಯೇ ಊರಿಗೆ ಬರುತ್ತಿದ್ದೇನೆ. ನಿಮ್ಮಿಷ್ಟದಂತೆ ಮದುವೆಗೆ ಸಿದ್ಧ. ಮತ್ತೆ ಹಿಂತಿರುಗಿ ಬರುವ ವಿಚಾರವಿಲ್ಲ ಎಂದು ಕೇಳಿದಾಗ ಅಪ್ಪ ಅಮ್ಮನ ಮನಸ್ಸು ಹೇಗೆ ಆನಂದದಿಂದ ಅರಳಿರಬಹುದು ಎಂದು ಊಹಿಸಿ ಸಂತೃಪ್ತಗೊಂಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನೀನು
Next post ಬೋಲ್ತೆ ಅಲಾವಾ ಖೇಲೈ ಚಲೋ ಜಾ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys