ಸುಮತೀಂದ್ರ ನಾಡಿಗರ “ದಾಂಪತ್ಯ ಗೀತ”

ಸುಮತೀಂದ್ರ ನಾಡಿಗರ “ದಾಂಪತ್ಯ ಗೀತ”

ಸ್ವಾತಂತ್ರ್ಯಪೂರ್ವದಲ್ಲಿ ಬದುಕಿನಲ್ಲಿ ತುಂಬಿದ್ದ ಆದರ್ಶ ಭರವಸೆ ಕನಸುಗಳು ಅಂದಿನ ಕಾವ್ಯಮಾರ್ಗವಾದ ನವೋದಯ ಕಾವ್ಯದಲ್ಲಿ ಪ್ರತಿಬಿಂಬಿಸಿದವು. ಆದರೆ ಸ್ವಾತಂತ್ರ್ಯಾನಂತರ ಬದುಕಿನಲ್ಲಿ ಕಂಡುಬಂದ ಹುಸಿತನ, ಭೀಭತ್ಸತೆ, ಭ್ರಷ್ಟತೆ ಇವು ನವ್ಯಕಾವ್ಯದಲ್ಲಿ ಒಡಮೂಡಿ ಒಂದು ಬಗೆಯ ಸಿನಿಕತನವನ್ನು ಹರಡುತ್ತಿದ್ದಂತೆ ನವ್ಯಕಾವ್ಯದ ಕಾಲ ಆರಂಭವಾಯಿತು. ಸಮೂಹ ಪ್ರಜ್ಞೆಯಿಂದ ಹೊರಬಂದು ವೃಷ್ಟಿಪ್ರಜ್ಞೆಯನ್ನು ಬೆಳೆಸಿಕೊಂಡ ನವ್ಯಕವಿಗಳು ಕನ್ನಡ ಭಾಷೆಗೆ ಒಂದು ಹೊಸ ಮೆರುಗನ್ನು ನೀಡಿದರು. ಕಾವ್ಯವು ನವೋದಯದ ಛಂದಸ್ಸು ಮತ್ತು ಪ್ರಾಸಗಳಿಂದ ಹೊರಬಂದಿತು. ಶಬ್ದಗಳ ಬಳಕೆ ಮಿತವಾದಂತೆಲ್ಲ ಕಾವ್ಯಕ್ಕೆ ಒಂದು ಬಿಗಿ ಚೌಕಟ್ಟು ಬಂದಿತು. ಅದರಿಂದಾಗಿ ಹೇಳುವುದನ್ನು ಗಂಭೀರವಾಗಿ ಹೇಳುವುದು ಸಾಧ್ಯವಾಯಿತು. ಇವೆಲ್ಲಾ ನವ್ಯಕಾವ್ಯದ ಗುಣಾತ್ಮಕ ಅಂಶಗಳಾದರೆ ಇವೇ ಕಾರಣಗಳಿಂದಾಗಿ ಅದು ಸಾಮಾನ್ಯ ಜನರಿಂದ ದೂರ ಸರಿಯಿತು, ಅಲ್ಪಸಂಖ್ಯಾತರ ಕ್ಷೇತ್ರವಾಯಿತು. ನವ್ಯಕಾವ್ಯದ ನೇತಾರರಾದ ಗೋಪಾಲ ಕೃಷ್ಣ ಅಡಿಗರು ತಮ್ಮ ಪೀಳಿಗೆಯ ಮೇಲೆ ತಮ್ಮ ನಂತರದ ಪೀಳಿಗೆಯ ಮೇಲೆ ಬೀರಿದ ಪ್ರಭಾವ ಅಪಾರವಾದುದು. ಆ ಪ್ರಭಾವಲಯದಲ್ಲಿಯೇ ಉಳಿದುಕೊಂಡವರು ಕವಿಗಳಾಗಿ ನಾಮಾವಶೇಷವಾದರು. ಆ ಪ್ರಭಾವಕ್ಕೆ ಒಳಗಾಗಿಯೂ ಅದರಿಂದ ಬಿಡಿಸಿಕೊಂಡು ತಮ್ಮದೇ ಛಾಪನ್ನು ಉಳಿಸಿದವರು ಕೇವಲ ಬೆರಳೆಣಿಕೆಯಷ್ಟು. ಅವರಲ್ಲಿ ಸುಮತೀಂದ್ರ ನಾಡಿಗರ ಹೆಸರು ಮುಖ್ಯವಾದುದು.

“ಕಪ್ಪು ದೇವತೆ”ಯಿಂದ “ಜಡ ಮತ್ತು ಚೇತನ”ದ ವರೆಗೆ “ನಿಮ್ಮ ಪ್ರೇಮ ಕುಮಾರಿಯ ಜಾತಕ”, “ಉದ್ಘಾಟನೆ”, “ಭಾವಲೋಕ”, “ಕುಹೂಗೀತ” ಮೊದಲಾದ ಸಂಕಲನಗಳ ಮೂಲಕ ಬೆಳೆಯುತ್ತಾ ಬಂದ, “ಪಂಚಭೂತಗಳು” ಮತ್ತು “ದಾಂಪತ್ಯ ಗೀತ”ದಂತಹ ವಿಶಿಷ್ಟ ಕಾವ್ಯಗಳನ್ನು ಸೃಷ್ಟಿಸಿದ ಸುಮತೀಂದ್ರ ನಾಡಿಗರು ನವ್ಯ ಕವಿ ಮಾತ್ರವಲ್ಲದೇ ನುರಿತ ವಿಮರ್ಶಕರೂ ಹೌದು. ಬೇಂದ್ರೆ ಮತ್ತು ಅಡಿಗರಂತಹ ಮಹತ್ವದ ಕವಿಗಳನ್ನು ಕುರಿತ ವಿಮರ್ಶೆ, ಎಸ್‌.ಎಲ್‌. ಭೈರಪ್ಪನವರ ಕೃತಿಗಳ ವಿಮರ್ಶಾ ಗ್ರಂಥದ ಸಂಪಾದನೆ, ಇವರ ಮಹತ್ವದ ಹೆಜ್ಜೆಗಳು, ಇವಲ್ಲದೇ “ಗಿಳಿ ಮತ್ತು ದುಂಬಿ”, “ಕಾರ್ಕೋಟಕ”, “ಸ್ಥಿತಪ್ರಜ್ಞ”, “ಮಿಸ್ ಜೂಲಿ”, “ಸಾಹಸ” ಮೊದಲಾದ ಕತೆ-ಕಾದಂಬರಿಗಳನ್ನೂ, “ಸೃಜನಶೀಲ ಬದುಕಿಗಾಗಿ ಶಿಕ್ಷಣ”, “ಬಂಗಾಳಿ ಕತೆಗಳು”, “ಹಕ್ಕಿಗಳು”, “ಸಿಂಧೀ ಸಾಹಿತ್ಯ ಚರಿತ್ರೆ” ಮೊದಲಾದ ಅನುವಾದಗಳನ್ನೂ, “ಹೀಗೊಂದು ಸಾಹಿತ್ಯ ಚರಿತ್ರೆ”, “ಇನ್ನೊಂದು ಸಾಹಿತ್ಯ ಚರಿತ್ರೆ” ಎಂಬ ಪ್ರಬಂಧ ಸಂಕಲನಗಳನ್ನೂ ಪ್ರಕಟಿಸಿರುವ ಸುಮತೀಂದ್ರ ನಾಡಿಗರು “ತಮಾಷೆ ಪದ್ಯಗಳು”, “ಡಕ್ಕಣಕ ಡಕ್ಕಣ”, “ಗಾಳಿಪಟ”, “ಇಲಿ ಮದುವೆ”, “ಗೂಬೆಯ ಕತೆ” ಮೊದಲಾದ ಶಿಶು ಸಾಹಿತ್ಯವನ್ನೂ ರಚಿಸಿದ್ದಾರೆ.

“ದಾಂಪತ್ಯ ಗೀತ”ವು, ಅವರ ಕಾವ್ಯ ಕೃಷಿ ಪಳಗಿ ಹದಗೊಂಡ ನಂತರದ ರಚನೆ. ಇದು ೧೯೮೬ರಲ್ಲಿ ಪ್ರಕಟವಾದ ೭೧ ಪುಟಗಳ ಅಚ್ಚುಕಟ್ಟಾದ ಪುಸ್ತಕ. ೨೦೦೪ರ ಮರುಮುದ್ರಣದಲ್ಲಿ ಕೆಲವು ಟಿಪ್ಪಣಿಗಳು ಮತ್ತು ರೇಖಾಚಿತ್ರಗಳು ಹೊಸದಾಗಿ ಸೇರಿವೆ. ಇದನ್ನು ಅತ್ಯಂತ ಸಹಜವಾಗಿ ಮತ್ತು ಸಾರ್ಥಕವಾಗಿ ಮಾಲತಿ ಅವರಿಗೆ ಅರ್ಪಿಸಲಾಗಿದೆ. ಅವರೇ ಇದಕ್ಕೆ ಬೆನ್ನುಡಿಯನ್ನೂ ಬರೆದಿದ್ದಾರೆ. ಯು.ಆರ್. ಅನಂತಮೂರ್ತಿಯವರ ಆರು ಪುಟಗಳ ಮುನ್ನುಡಿಯೂ ಇದಕ್ಕಿದೆ. ಅವರು ಇಲ್ಲಿ ಇದಮಿತ್ಥಂ ಎಂದು ಏನೂ ಹೇಳದೆ ಇದರ ಗುಣಾತ್ಮಕ ಅಂಶಗಳನ್ನು ಗುರುತಿಸಲಾಗದೆ ಸೋತಿದ್ದಾರೆ. ಪಂಪನ ಚಂಪಕಮಾಲಾ ವೃತ್ತದ ಛಂದಸ್ಸಿನ ಒಂದು ಸಾಲನ್ನು ಎರಡಾಗಿ ತುಂಡು ಮಾಡಿ ಇಲ್ಲಿ ಪ್ರಯೋಗಿಸಲಾಗಿದೆ. ಮಧ್ಯೆ ಒಂದು ಸಾಂಗತ್ಯವೂ ಇದೆ. ಆದರೂ ಮಾತ್ರೆಯ ಲಯ ಇಲ್ಲಿ ಪ್ರಧಾನವಾಗುವುದಿಲ್ಲ. ಇದು ಕಥನ ಕವನ ಮತ್ತು ಮುಕ್ತಛಂದಸ್ಸಿನ ಕಸಿಯಂತೆ ತೋರುತ್ತದೆ.

ಅದೇಕೋ ದಾಂಪತ್ಯ ಗೀತೆ ಎಂದೊಡನೇ ಬೇಂದ್ರೆಯವರ “ಸಖೀಗೀತ”ವೇ ನೆನಪಾಗುತ್ತದೆ. ೧೯೩೨ರಲ್ಲಿ ಪ್ರಕಟವಾದ “ಸಖೀಗೀತ”ವು ಬೇಂದ್ರೆಯವರ ಪ್ರಮುಖ ರಚನೆಗಳಲ್ಲಿ ಒಂದು. ಹದಿನೇಳು ವರ್ಷಗಳ ದಾಂಪತ್ಯದ ಬಗೆಗೆ ಬರೆದ ಬೇಂದ್ರೆಯವರಿಗೆ ಅಲ್ಲಿ ಕತೆ ಮುಖ್ಯವಾಗಿರಲಿಲ್ಲ. ಅವರ ಉಳಿದೆಲ್ಲಾ ಕವಿತೆಗಳಂತೆ ಅದೂ ವರ್ಣನಾ ಪ್ರಧಾನವೇ ಆಗಿತ್ತು. “ಸಖೀಗೀತ” ಪ್ರಕಟವಾದ ಕಾಲಕ್ಕೆ ಆ ರೀತಿಯ ಕವಿತೆ ಕನ್ನಡದಲ್ಲೇ ಏಕೆ ಭಾರತೀಯ ಭಾಷೆಗಳಲ್ಲೇ ಬಂದಿರಲಿಲ್ಲವಂತೆ. “ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ” ಎಂಬ ಸಾಲುಗಳೊಂದಿಗೆ ಪ್ರತಿಯೊಂದು ಭಾಗವೂ ಅಂತ್ಯವಾಗುವ ಈ ಕವಿತೆಯು “ಪಟ್ಟಪಾಡೆಲ್ಲಾ ಹುಟ್ಟು ಹಾಡಾಗುವ” ಮತ್ತು “ಜೀವಜೀವಕೆ ಉದ್ದೀಪನವಾದುದೆ ಜೀವನ” ಎಂಬ, ನಂತರದಲ್ಲಿ ಬಹು ಜನಪ್ರಿಯ ಕಾವ್ಯ ಸರಣಿಗಳಾದ ಮಾತುಗಳನ್ನೊಳಗೊಂಡಿದೆ. “ಸಖೀ ಗೀತ”ದೊಂದಿಗೆ “ದಾಂಪತ್ಯ ಗೀತ”ವನ್ನು ಹೋಲಿಸುವುದಾದರೆ ಆ ಹೋಲಿಕೆ ಇಲ್ಲಿಗೆ ನಿಲ್ಲುತ್ತದೆ. ಏಕೆಂದರೆ, “ದಾಂಪತ್ಯ ಗೀತ”ವು ಇಪ್ಪತ್ತೈದು ವರ್ಷಗಳ ದಾಂಪತ್ಯದ ಕತೆಯನ್ನು ಹೇಳುತ್ತದೆ. ಇಲ್ಲೂ ರೂಪಕಗಳೂ ವರ್ಣನೆಗಳೂ ಹೇರಳವಾಗಿದ್ದರೂ ಅವು ಹಿನ್ನೆಲೆಗೆ ಸರಿದು ಕತೆಯೇ ಮುಖ್ಯವಾಗುತ್ತದೆ. ವರ್ಣನೆಗಳು ಕತೆಗೆ ಪೂರಕವಾಗಿ ಮಾತ್ರ ದುಡಿಯುತ್ತವೆಯೇ ಹೊರತು ಅಲ್ಲಿಯಂತೆ ತಾವೇ ಪ್ರಧಾನವಾಗುವುದಿಲ್ಲವಾದುದರಿಂದ ಇದು ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ. ಅಡಿಗರು ಹೇಳಿದಂತೆ “ಅನ್ಯರೊರೆದುದನೆ ಒರದೊರೆದು ಬಿನ್ನಗಾಗಿದೆ ಮನವು” ಎಂಬ ಧಾಟಿಯಿಂದಾಗಿ ಇತರ ನವ್ಯರಿಂದ ಬೇರೆಯಾದ ನಾಡಿಗರು ಪ್ರಭಾವಶಾಲಿ, ಪರಿಣಾಮಕಾರಿ ಮಾತುಗಾರಿಕೆಗೆ ಹೆಸರಾದವರು. ಬರೀ ವಾಚಿಕವಲ್ಲದೇ ಆಂಗಿಕ ಆಹಾರಗಳೂ ಕೆಲಸ ಮಾಡುವ ಅವರ ಕವಿತಾವಾಚನದ ಧಾಟಿಯೇ ವಿಶಿಷ್ಟ. ಹೀಗಾಗಿ ಪುನರ್ಜನ್ಮವನ್ನು ನಂಬುವ, ವೈಚಾರಿಕತೆ ಯಿಂದ ದೂರವಾದ, ‘ಸಖೀಗೀತ’ದ ಧಾಟಿಗಿಂತ ಅವರ ‘ದಾಂಪತ್ಯಗೀತ’ದ ಧಾಟಿಯೂ ಬೇರೆ ಯಾಯಿತು. ಹೋಮರಗೆ ವರ್ಜಿಲಗೆ ಡಾಂಟೆ ಮೇಣ್‌ ಮಿಲ್ಬನಗೆ ಕಾಳಿದಾಸ ಫಿರ್ದೂಸಾದ್ಯರಿಗೆ ಎಂದು ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಕುವೆಂಪು ತಮ್ಮ ಮೇಲೆ ಪ್ರಭಾವ ಬೀರಿದವರನ್ನು ನೆನೆಯುವ ರೀತಿಗೆ ನಮ್ಮ ಇಡೀ ಕಾವ್ಯ ಪರಂಪರೆಯಲ್ಲಿಯೇ ಒಂದು ಹಿನ್ನೆಲೆಯಿದೆ. ಪ್ರಾಚೀನ ಕನ್ನಡ ಕವಿಗಳ ಕಾಲ ದೇಶಗಳನ್ನು ಗುರುತಿಸುವಾಗ ನಮ್ಮ ವಿದ್ವಾಂಸರಿಗೆ ತುಂಬಾ ಸಹಾಯ ಮಾಡಿದ ಒಂದು ಸಂಗತಿ ಎಂದರೆ ಪ್ರತಿಯೊಬ್ಬ ಕವಿಯೂ ತನಗಿಂತ ಹಿಂದಿದ್ದ ಪೂರ್ವ ಸೂರಿಗಳನ್ನು ನೆನೆಯುವ ಸತ್ಸಂಪ್ರದಾಯ. ಇದು ಒಂದು ರೀತಿಯಲ್ಲಿ ಸೌಜನ್ಯ, ಇನ್ನೊಂದು ರೀತಿಯಲ್ಲಿ ಋಣ, ಏಕೆಂದರೆ ಅಲ್ಲಮಪ್ರಭು ಹೇಳುವಂತೆ “ಹಿಂದಣ ಹೆಜ್ಜೆಯನರಿತಲ್ಲದೇ ನಿಂದ ಹೆಜ್ಜೆಯನರಿಯಬಾರದು”, “ದಾಂಪತ್ಯ ಗೀತ”ದ ಮೊದಲ ಸಾಲೇ

ದುಂದುಭಿ ಸಂವತ್ಸರೋದ್ಭವನ ಸಗೋತ್ರ
ಬಾಂಧವರ ಪಂಪನ ವೃತ್ತಗತಿ ನೆನಪಾಗಿ
ಎಂದಾದರೂ ಒಬ್ಬ ಆ ವೃಕ್ಷದ ಕೊಂಬೆ
ಎಂದು ಮೆಚ್ಚಾಡಿದರೆ ಅಷ್ಟು ಸಾಕು

ಎನ್ನುವ ಕವಿಯು, ಪಂಪನೇ ಅಲ್ಲದೇ ರನ್ನ, ಕುಮಾರವ್ಯಾಸ, ವೇದ, ಉಪನಿಷತ್ತು ಋಷಿಗಳು, ಪಾಶ್ಚಾತ್ಯ ಕವಿ ನಾಟಕಕಾರರು, ಜೊತೆಗೆ ಅರ್ವಾಚೀನ ಕವಿಗಳಾದ ಲಂಕೇಶ್, ಜಿ‌ಎಸ್‌ಎಸ್‌, ಅಡಿಗ ಇವರೆಲ್ಲರಿಂದ ಪ್ರಭಾವಿತರಾಗಿದ್ದಾರೆ. ಆ ಪ್ರಭಾವದಿಂದ ಬಿಡಿಸಿಕೊಂಡು ತಮ್ಮ ಸ್ವೋಪಜ್ಞತೆಯನ್ನುಳಿಸಿಕೊಳ್ಳುವ ಸಾಮರ್ಥ್ಯವಿರುವುದರಿಂದಲೇ ಆ ಪ್ರಭಾವ ಸಾರ್ಥಕವಾಗಿದೆ.

ಇಲ್ಲಿ ಪಂಪ, ಅಲ್ಲಮ, ವೇದಕಾಲೀನ ಋಷಿಗಳು ಬೇರೊಂದು ರೂಪದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಉದಾಹರಣೆಗೆ :

ನಮ್ಮ ನಲ್ಮೆಗೆ ದಿವ್ಯ ಹಿಡಿದ ಹಾಗೆ

ಎಂಬ ಸಾಲು ಥಟ್ಟನೆ ಪಂಪನ ನೆನಪನ್ನೂ

ಮಾತೆ ಜ್ಯೋತಿರ್‍ಲಿಂಗ
ಎಲ್ಲಿಯದೋ ಕೋಗಿಲೆಯ ಜೊತೆಯಲ್ಲಿ
ಬೆಟ್ಟದಲ್ಲಿ ಬೆಳೆದಿದ್ದ ನೆಲ್ಲಿಕಾಯಿಗೆ ಆಯ್ತು

ಎಂಬ ಮಾತುಗಳು ಅಲ್ಲಮನ ನೆನಪನ್ನೂ ತರುತ್ತವೆ. ವಾಸ್ತವದಲ್ಲಿ ಬದುಕಿನ ಎಷ್ಟೋ ಘಟನೆಗಳು ಎತ್ತಣ ಮಾಮರ ಎತ್ತಣ ಕೋಗಿಲೆಯೇ! ಆಂಧ್ರದ ಅಪ್ಪ, ಮಹಾರಾಷ್ಟ್ರದ ಅಮ್ಮ, ತಮಿಳಿನ ಹೆಂಡತಿ ಈ ಸಹಯೋಗವನ್ನು ಕುರಿತ ಮಾತು ಇದು! ವೇದಕಾಲೀನ ಋಷಿಗಳಂತೂ ಇಲ್ಲಿ ಅನೇಕ ಸಾಲುಗಳಲ್ಲಿ ನುಸುಳುತ್ತಾರೆ. ವೇದ ಉಪನಿಷತ್ತುಗಳನ್ನು ನಾಡಿಗರು ಚೆನ್ನಾಗಿ ಓದಿಕೊಂಡಿರುವ ಸೂಚನೆ ಅವರ ‘ಪಂಚಭೂತ’ಗಳಲ್ಲೇ ಸಿಗುತ್ತದೆ. ಆದ್ದರಿಂದಲೇ ಪುರಾಣಗಳಲ್ಲಿ ಪ್ರತಿಮೆಗಳಾಗಿ ಪರಿವರ್ತಿತವಾದ ವಿವರಗಳು ಅವರಲ್ಲಿ ಸಿಗುವುದಿಲ್ಲ. ಬದಲಾಗಿ ಮೂಲದ ಸ್ಟೋಪಜ್ಞ ವಿವರಗಳೇ ಸಿಗುತ್ತವೆ. ಹೀಗಾಗಿಯೇ

ಸೋಮನಿಂದ ಗಂಧರ್ವನಿಗೆ
ಗಂಧರ್ವನಿಂದ ಅಗ್ನಿಗೆ ಕೊಡಲ್ಪಟ್ಟ
ವಧುವು ವರನಿಗೆ ಸಿಕ್ಕಿದಳು

ಎಂಬ ಋಗ್ವೇದದ ಮಂತ್ರದ ಅರ್ಥವು ಇಲ್ಲಿ ಯಥಾವತ್ತಾಗಿ ಸ್ವೀಕರಿಸಲ್ಪಟ್ಟಿದೆ. ಸೋಮ ಎಂದರೆ ಚಂದ್ರ, ಎಂದರೆ ಸೌಂದರ್ಯ, ಬಾಲ್ಯದಲ್ಲಿ ಹುಡುಗಿ ಸುಂದರಿಯಾಗಿರುತ್ತಾಳೆ ಅಂದರೆ ಚಂದ್ರನೊಂದಿಗಿರುತ್ತಾಳೆ. ಗಂಧರ್ವ ಅಂದರೆ ಕನಸು, ಕಲ್ಪನೆಗಳು, ಇದು ಯೌವನದ್ದು. ಅಲ್ಲಿಂದ ಅಗ್ನಿ ಅಂದರೆ ಕಾಮ ನಂತರ ವರನಿಗೆ ಈ ರೀತಿಯ ಸಾಂಕೇತಿಕ ಅರ್ಥ ತಿಳಿಯದ ಪೆರಿಯಾರ್ ಅಂಥವರು ಸೋಮ, ಗಂಧರ್ವ, ಅಗ್ನಿ ಎಂಬ ಪದಗಳನ್ನು ಪುರುಷ ಸೂಚಕವಾಗಿ ಭಾವಿಸಿ ಹಸಿ ಹಸಿಯಾಗಿ ಅವನ್ನು ಸ್ವೀಕರಿಸಿ ವೇದ ಮಂತ್ರಗಳನ್ನೇ ಖಂಡಿಸಿರುವುದೂ ಉಂಟು.

“ಉಪಮಾ ಕಾಳಿದಾಸಸ್ಯ” ಎಂದು ಕಾಳಿದಾಸನನ್ನೂ “ರೂಪಕ ಸಾಮ್ರಾಜ್ಯ ಚಕ್ರವರ್ತಿ” ಎಂದು ಕುಮಾರವ್ಯಾಸನನ್ನೂ ಕರೆದು ಉಪಮಾ ರೂಪಕಗಳು ಮಹಾಕಾವ್ಯದ ಅವಿಭಾಜ್ಯ ಅಂಗವೂ ಅನಿವಾರ್ಯವೂ ಆದುದನ್ನು ಸಂಸ್ಕೃತ ಕನ್ನಡ ಎರಡೂ ಕಾವ್ಯಗಳ ಇತಿಹಾಸವೂ ಸ್ಪಷ್ಟಪಡಿಸಿವೆ. ಈ ಮಾತು ಪ್ರಾಚೀನ ಸಾಹಿತ್ಯಕ್ಕಿಂತ ಹೆಚ್ಚಾಗಿ ಅರ್ವಾಚೀನ ಸಾಹಿತ್ಯಕ್ಕೂ ಅನ್ವಯಿಸಿದಾಗ ಉಪಮೆಗಿಂತ ರೂಪಕದ ಕೈ ಮೇಲಾಯಿತು. ರೂಪಕದಲ್ಲಿ ಮಾತನಾಡುವುದೇ ಕಾವ್ಯವೆನ್ನಿಸಿತು. ಪಂಪ, ರನ್ನ, ಕುಮಾರವ್ಯಾಸ, ರಾಘವಾಂಕರೆಲ್ಲರೂ ತಮ್ಮ ಕಾವ್ಯದ ಮೊದಲ ಅಧ್ಯಾಯವನ್ನು ಕಾವ್ಯಮೀಮಾಂಸೆಗೆ ಮೀಸಲಿಟ್ಟಿದ್ದಾರೆ. ಇದನ್ನೇ ಜಿ.ಎಸ್. ಶಿವರುದ್ರಪ್ಪನವರು ‘ಕನ್ನಡ ಕಾವ್ಯ ಮೀಮಾಂಸೆ’ ಎಂದು ಕರೆದಿರುವುದು. ತೀನಂಶ್ರೀ ಬರೆದ “ಭಾರತೀಯ ಕಾವ್ಯಮೀಮಾಂಸೆ” ಅಥವಾ ಎಂ.ಎ. (ಕನ್ನಡ) ತರಗತಿಗಳಲ್ಲಿ ಭೋದಿಸುತ್ತಿದ್ದ ಕಾವ್ಯಮೀಮಾಂಸೆ ವಾಸ್ತವದಲ್ಲಿ ಸಂಸ್ಕೃತ ಕಾವ್ಯಮೀಮಾಂಸೆಯೇ. ಅಲ್ಲಿ ಬಂದಿರುವುದೆಲ್ಲಾ ದಂಡಿ, ಭಾಮಹ, ಭಟ್ಟ ತೌತುಕ, ಅಭಿನವಗುಪ್ತ ಆನಂದ ವರ್ಧನರು. ಕನ್ನಡದ ಕಾವ್ಯಮೀಮಾಂಸೆ ರಚಿತವಾದ ಪಕ್ಷದಲ್ಲಿ ಅದರಲ್ಲಿ ಪಂಪನಿಂದ ಹಿಡಿದು ಸುಮತೀಂದ್ರ ನಾಡಿಗರವರೆಗೆ ಅವರವರ ಕಾವ್ಯದ(ಗಳ) ಮೊದಲ ಅಧ್ಯಾಯನವನ್ನು ಗಮನಿಸಿದರೆ ಸಾಕು. ಅಷ್ಟು ಸಮೃದ್ಧವಾಗಿದೆ, ನಮ್ಮ ಕವಿಗಳು ಕಾವ್ಯವನ್ನು ವಿವೇಚಿಸಿರುವ ರೀತಿ.

ಇದು ಶಬ್ದಪಾಕವೋ ಇದು ಅರ್ಥಪಾಕವೋ
ಅನುಭವದ ಪಾಕವೋ ನುರಿಸಿ ನೋಡು

ಎಂದು ಹೇಳುವ ಮಾತುಗಳು ನಮಗೆ ದ್ರಾಕ್ಷಾಪಾಕ, ಕದಳೀಪಾಕ, ನಾರೀಕೇಳ ಪಾಕಗಳ ನೆನಪನ್ನು ತರುತ್ತದೆ. ಹಾಗೇ ‘ಪಾಕ’ ಎನ್ನುವುದಕ್ಕೆ ನಾನು ಸಿದ್ಧಪಡಿಸಿದ್ದು, ನಿನಗೆ ಒಪ್ಪಿಸಿರುವ ನನ್ನ ಬದುಕು ಎಂಬ ಅರ್ಥವೂ ಬರುತ್ತದೆ.

ನೀನು ಶಬ್ದ ಶರೀರೆ ರಸ ಭಾವಾದಿ ಆತ್ಮಳೆ
ನಿನ್ನಧ್ವನಿ ಔಚಿತ್ಯ ರಮಣೀಯವೇ

ಎನ್ನುವಲ್ಲಿ ಪತ್ನಿ=ಕಾವ್ಯ ಎಂಬ ಸಮೀಕರಣವಿದೆ. ಕಾವ್ಯಕ್ಕೆ ಶಬ್ದವು ಶರೀರವಾದಂತೆ ರಸ, ಭಾವ, ಆತ್ಮವಾದಂತೆ ಧ್ವನಿಯು ಔಚಿತ್ಯವಾದಂತೆ ಕೊನೆಗದು ರಮಣೀಯವಾದಂತೆ ಪತ್ನಿಯೂ ಈ ಎಲ್ಲಾ ಅಂಶಗಳನ್ನೂ ಹೊಂದಿರುವವಳು ಎಂಬ ಅರ್ಥ ಹಿಂದಕ್ಕೆ ಸರಿಯುತ್ತದೆ. ಇದನ್ನೇ

ಕಾವ್ಯಕ್ಕೆ ರಸ ಮುಖ್ಯ ನೀನು ಬದುಕಿಗೆ ಮುಖ್ಯ

ಎಂದು ವಾಚ್ಯವಾಗಿಯೂ ಹೇಳಿಬಿಡುತ್ತಾರೆ.

ನೀನು ಮಾದರಿಯಾದೆ ಈ ನನ್ನ ಕಾವ್ಯಕ್ಕೆ
ರತಿಯ ಸ್ಥಾಯಿ ಭಾವ ರಸ ಸಿದ್ಧಿಗೆ

ಎಂಬ ಮಾತಂತೂ ಚಮತ್ಕಾರಿಕವಾಗಿ ರಸ ಸಿದ್ಧಾಂತವನ್ನೂ ಬಳಸಿಕೊಂಡಿದೆ.

ನಿನ್ನ ಮಾತಿಗೆ ಉಂಟು ಸ್ವಭಾವೋಕ್ತಿವಕ್ರೋಕ್ತಿ ಗೊತ್ತ ನಿನಗೆ.

ಎಂಬ ಸಾಲುಗಳು ಉದ್ದೇಶಪೂರ್ವಕವಾಗಿ ಕುಂತಕನ ಸಾಲುಗಳನ್ನು ಬಳಸಿಕೊಂಡು ಲೌಕಿಕಕ್ಕೆ ಗಂಟುಹಾಕುತ್ತವೆ.

ಮೂರನೇ ಅಧ್ಯಾಯದ ವೇಳೆಗೆ ತಮ್ಮ ಕಾವ್ಯಮೀಮಾಂಸೆ ಕುರಿತ ಪ್ರಾರಂಭದ ಹಂತವನ್ನು ಹೇಳುತ್ತಲೇ ತಮಗೊಂದು ಅನನ್ಯತೆ ಬಂದುದನ್ನು ಹೀಗೆ ಗುರುತಿಸುತ್ತಾರೆ.

ಈ ನಡುವೆ ನನ್ನ ಕಾವ್ಯದ ಬಗ್ಗೆ ಅಡಿಗರಾಡಿದ ಮಾತು
ಹೆಬ್ಬಾವು ಹಿಡಿದಂತೆ ನುಂಗುತ್ತಿತ್ತು.
ಪ್ರಜ್ಞೆಯನ್ನು ಹಿರಿದಿದ್ದೆ ಹಾವನ್ನು ಸೀಳಿದ್ದೆ
ಹೊರಬಂದು ಲೋಳೆ ಮೈ ತೊಳೆದುಕೊಂಡೆ

ಎಂಬ ರೂಪಕದಲ್ಲಿ ಮುಗಿಯುತ್ತದೆ. ಕಾವ್ಯರಚನೆಯು ಹೇಗೆ ಪರಕಾಯ ಪ್ರವೇಶ, ಬೇರೊಂದು ಲೋಕವನ್ನು ಹೊಕ್ಕು ಹೊರಬಂದು ಅದರ ಪ್ರಭಾವದಿಂದ ಬಿಡಿಸಿಕೊಂಡು ತಾನು ತಾನೇ ಆಗಿ ಉಳಿಯುವ ಕ್ರಿಯೆ ಇಲ್ಲಿದೆ. ಇಂಥವೇ ಹಲವಾರು ಸೊಗಸಾದ ರೂಪಕಗಳು ಈ ಕಾವ್ಯದ ವಿಶಿಷ್ಟ ಆಸ್ತಿ. ಉದಾಹರಣೆಗೆ ಒಂದೆರಡನ್ನು ಇಲ್ಲಿ ನೋಡಬಹುದು.

ನನ್ನ ಆತ್ಮದ ತೂಬು ತೆರೆದು ಹೋದವು ಕೆಲವು.
ನನ್ನ ನೀರಿನ ಮಟ್ಟ ಕುಸಿಯುತಿತ್ತು
ಮತ್ತೆ ಮಳೆ ಮೂಡುವುದ ಎದುರು ನೋಡುತ್ತಿದ್ದೆ
ವಿಧಿಯು ಜಲ ನಯನಗಳ ತೆರೆಸುತ್ತಿತ್ತು.

ಇಡೀ ವಿಶ್ವದ ವ್ಯಾಪಾರವನ್ನು ಪ್ರತಿಮೆಯಾಗಿಸಿ ತನ್ನ ಬೆಳವಣಿಗೆಯನ್ನು ಸೂಚಿಸುವ ವಿಶಿಷ್ಟ ರೂಪಕ ಇದು.

ದೇವಲೋಕಕ್ಕಾಗಿ ಗಂಧರ್ವರನ್ನೊಲಿಸಿ
ಸೋಮ ಪಡೆಯಲು ಹೊರಟ ವಾಗ್ದೇವಿಯೇ
ನಿನ್ನನ್ನು ಮಾರಿದರು ಗಂಧರ್ವ ಲೋಕಕ್ಕೆ
ಕೆಂಪು ಜಿಂಕೆಯ ಹಾಗೆ ಓಡಿ ಬಂದ.

ಇದೂ ಋಗ್ವೇದದ ಒಂದು ಪ್ರಸಂಗವೇ, ಸರಸ್ವತಿಯು ಸೋಮ ಅಂದರೆ ಹೆಂಡವನ್ನು ಪಡೆಯಲು ಬೆತ್ತಲೆಯಾಗಿ ಹೊರಟ ಒಂದು ಕತೆ ಕುರಿತದ್ದು. ನಾವೆಲ್ಲಾ ಪುರಾಣಗಳ ಮೂಲಕ ಪಾರಂಪರಿಕವಾಗಿ ತಿಳಿದಿರುವಂತೆ ನಮ್ಮ ದೇವಾನುದೇವತೆಗಳೆಲ್ಲಾ ಹೆಂಡ ಕುಡುಕರೇ!

ನೀನು ವ್ಯಂಜನವಾದಿ ನಾನು ವ್ಯಂಜನವಾದೆ
ರುಚಿ ಪರಸ್ಪರ ನಾವು ಕಾಣುತ್ತಿರೆ
ಸ್ಪರ್ಶದ ಪವಾಡಕ್ಕೆ ಕ್ಷಣ ಅನಂತವೇ ಆಯ್ತು
ಅಮರರಾದೆವು ನಾವು ಕಾಲದೊಳಗೆ

‘ವ್ಯಂಜನ’ ಎಂಬ ಪದದ ಹಲವು ಅರ್ಥಗಳನ್ನು ಇಲ್ಲಿ ದುಡಿಸಿಕೊಳ್ಳಲಾಗಿದೆ. ಊಟ ಅಂದರೆ ಅನ್ನ ಸಾರು, ಅನ್ನ ಮಜ್ಜಿಗೆ, ವ್ಯಂಜನ ಅಂದರೆ ಉಪ್ಪಿನಕಾಯಿ. ಊಟಕ್ಕೆ ಉಪ್ಪಿನಕಾಯಿ ಎಂಬಂತೆ, ಊಟ ಮುಖ್ಯ, ಉಪ್ಪಿನಕಾಯಿಗೆ ಎರಡನೇ ಸ್ಥಾನ. ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಬರೀ ವ್ಯಂಜನ ಅಷ್ಟೇ, ಊಟವಲ್ಲ. ಅವರವರ ಅಸ್ತಿತ್ವವೇ ಅವರವರಿಗೆ ಊಟ. ಹಾಗಾದರೆ ಮಾತ್ರ ದಾಂಪತ್ಯದಲ್ಲಿ ರುಚಿ, ಇದು ಅನಾದಿಕಾಲದಿಂದ ನಡೆದುಕೊಂಡು ಬಂದಿರುವ ರೀತಿ, ನಾವೂ ಅದನ್ನೇ ಅನುಸರಿಸುವುದರಿಂದ ನಾವು ಕಾಲದೊಳಗೆ ಸೇರುತ್ತೇವೆ. ಅಂದರೆ ಕಾಲವಶರಾಗುತ್ತೇವೆ. ಆದರೂ ಕಾಲದ ನಿಯಮ ಎಂಬ ಕೊಂಡಿಯನ್ನು ನಾವು ಕಳಚದೇ ಮುಂದುವರೆಸುವ ಕಾರಣದಿಂದ ಅಮರರೂ ಹೌದು. ಇಂತಹ ಅದ್ಭುತ ಅರ್ಥಸಾಧ್ಯತೆಯುಳ್ಳ ಈ ಕಾವ್ಯದ ರೂಪಕಗಳ ಕುರಿತೇ ಒಂದು ಅಧ್ಯಯನ ನಡೆಸಬಹುದಾದ ಸಾಧ್ಯತೆಯಿದೆ ಏಕೆಂದರೆ – ಇವರ ರೂಪಕಗಳ ವೈವಿಧ್ಯ ಹೆಚ್ಚಿನದು. ದಾಂಪತ್ಯವನ್ನು ವಿವರಿಸುತ್ತಾ ಇರುವಾಗ ವೈಜ್ಞಾನಿಕ ವಿವರಗಳು ತಲೆಹಾಕುತ್ತವೆ.

ಪ್ರೇಮಿ ಪ್ರೇಯಸಿ ಸೇರಿ ಕಂಪಾಸು ಎಂದಿದ್ದೆ
ನೀನು ಊರಿದ ಕಾಲು ನಾನು ತಿರುಗುವ ಕಾಲು
ಎಂದಿಗೂ ಸಂಪರ್ಕ ಕಡಿವುದಿಲ್ಲ
ಎಷ್ಟೋ ದೂರದವರೆಗೆ ನಾನು ಚಲಿಸಿದ್ದರೂ
ಆಮೇಲೆ ನಿನ್ನ ಜೊತೆ ಇರುವೆನಲ್ಲ.
ಹೀಗೆ ನಾವಿಬ್ಬರೂ ಕೈವಾರವೆನಲಿದ್ದೆ
ಜಾನ್ ಡನ್ನನಂದದ್ದು ನೆನಪಾಯಿತು.

ಮುಮ್ಮಟನು ತನ್ನ ‘ಕಾವ್ಯ ಪ್ರಕಾಶ’ದಲ್ಲಿ ಕಾವ್ಯದ ಪ್ರಯೋಜನಗಳನ್ನು ಹೇಳುತ್ತಾ

ಕಾವ್ಯಂ ಯಶಸೇ ಅರ್ಥ ಕೃತೇ ಶಿವೇತ ರಕ್ಷತೆಯೇ
ಸಧ್ಯಃ ಪರ ನಿವೃತ್ತಯೇ ಕಾಂತಾ ಸಮ್ಮಿತ ತಯೋಪದೇಶ ಯುಜೇ

ಅನ್ನುತ್ತಾನೆ. ಅಂದರೆ ಕಾವ್ಯವು ಯಶಸ್ಸನ್ನು, ಅರ್ಥ = ಹಣವನ್ನು ಕೊಡುತ್ತದೆ, ಅಮಂಗಳದಿಂದ ಕಾಪಾಡುತ್ತದೆ. ಈ ಇಹಲೋಕದ ಜಂಜಡದಿಂದ ಕೊಂಚ ಕಾಲವಾದರೂ ನಮಗೆ ನಿವೃತ್ತಿ ಕೊಡುತ್ತದೆ. ಕಾಂತೆಯಂತೆ ಉಪದೇಶಿಸುತ್ತದೆ. ಪ್ರಭು ಸಮ್ಮಿತ, ಮಿತ್ರ ಸಮ್ಮಿತ, ಕಾಂತಾ ಸಮ್ಮಿತಗಳಲ್ಲಿ ಮೂರನೆಯದು ಹೆಚ್ಚು ಹಿತವಾದುದು. ಕಾವ್ಯವೂ ಹಾಗೇ. ಕಾವ್ಯಕ್ಕೆ ಅನ್ವಯಿಸುವ ಈ ಮಾತನ್ನು ದಾಂಪತ್ಯಕ್ಕೆ ಅನ್ವಯಿಸಬೇಕಾದರೆ ಕವಿಗೆ ನಿಜವಾಗಿಯೂ ಕಾವ್ಯದಿಂದ ದೊರಕುವ ಸುಖ ದಾಂಪತ್ಯದಿಂದ ದೊರಕಿದೆ ಎಂದರ್ಥ. ದಾಂಪತ್ಯದ ಜಂಜಡಗಳಿಂದ ಪಾರುಮಾಡಲು ಕಾವ್ಯವನ್ನು ಆಶ್ರಯಿಸಬೇಕಾದ ಸಂದರ್ಭಗಳಿರುವಾಗ ಈ ಮಾತು ವಿಶೇಷವಾದದ್ದೇ.

ಉದಯಾಸ್ತಸಮನಾಗಿ ಹಕ್ಕಿಗಳು ಹಾಡಿದವು.
ಬಾನಲ್ಲಿ ಮೂಡಿದುವು ತಾರಾಗಣ
ಸಧ್ಯಪರಃ ನಿವೃತ್ತಿಯು ಸಿಕ್ಕು ನುಣುಚುತ್ತಿತ್ತು.
ಕಾಲ ಕಳೆಯುತ್ತಿತ್ತು ತಿಳಿಯಲಿಲ್ಲ.

ಅಂದರೆ, ಸಾಮಾನ್ಯರಿಗೆ ಕಾವ್ಯ ಕೊಡುವ ನಿವೃತ್ತಿ (ಶಾಂತಿ) ಇಲ್ಲಿ ಇಬ್ಬರಿಗೂ ಸಿಗುತ್ತದೆ, ಪರಸ್ಪರರಿಂದ. ಕಾವ್ಯದ್ದು ಏಕಮುಖ, ಇದು ದ್ವಿಮುಖ. ಇದಕ್ಕಿಂತ ಬೇಕೇ. ದಾಂಪತ್ಯದ ಪ್ರಯೋಜನ?

ಗಾಂಧೀಜಿ ಇಂದು ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವಾಗಿರುವುದರಿಂದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಅವರ ಪ್ರತ್ಯಕ್ಷ ಪರೋಕ್ಷ ಪ್ರಭಾವಕ್ಕೆ ಒಳಗಾದವರೇ. ಆದರೆ ಗಾಂಧಿ ಬಗ್ಗೆ ಇಲ್ಲಿ ಬಂದಿರುವ ವಿವರ ಒಂದು ಸೊಗಸಾದ ಪ್ರತಿಮೆಯಾಗಿದೆ.

ಅಂದು ಸತ್ತವ ಗಾಂಧಿ ಇಂದಿಗೂ ಇದ್ದಾನೆ.
ಆತ್ಮಶೋಧನೆಯಲ್ಲಿ ತೊಡಗಿಸುತ್ತ
ತನ್ನ ದಾಂಪತ್ಯವನ್ನು ಬಿಟ್ಟ ದೇಶಕ್ಕಾಗಿ
ಕಸ್ತೂರಿ ಬಾಳನ್ನು ತೇದು ಇಟ್ಟ

ಗಾಂಧೀಜಿ ಎಂದು ಗೌರವದಿಂದ ಕರೆಯುವ ಈ ದೇಶದಲ್ಲಿ ಯಾವುದೇ ಕಾರಣದಿಂದಲಾದರೂ ಸರಿ, ಗಾಂಧಿ ಎಂದು ಏಕವಚನದಲ್ಲಿ ಕರೆಯುವುದು ಸಾಧ್ಯವಾದರೆ, ಅವರೊಂದಿಗೆ ಹೃದಯ ಸಂವಾದ ಸಾಧ್ಯವಾಯಿತೆಂದೇ ಅರ್ಥ. ಬಹುವಚನ ಗೌರವ ಸೂಚಕವಿರಬಹುದು. ಆದರೆ, ಅದು ನಮ್ಮನ್ನು ದೂರವಿಡುತ್ತದೆ. ಏಕವಚನದಲ್ಲಿ ಸಲಿಗೆಯಿರಬಹುದು. ಅದು ಹತ್ತಿರ ತರುತ್ತದೆ. ಕಸ್ತೂರ ಬಾ ಅವರ ಹೆಸರನ್ನು ಉಪಯೋಗಿಸಿಕೊಂಡಂತೆ ಮಾಡಿ ಗಾಂಧಿಯ ಬಾಳನ್ನೇ, ಸುವಾಸನಾ ದ್ರವ್ಯವಾದ, ತೇಯಲ್ಪಡುವ ಕಸ್ತೂರಿಗೆ ಹೋಲಿಸುತ್ತಾ ಈ ಪ್ರತಿಮೆ ನಮ್ಮೊಂದಿಗೆ ಅನವರತ ಮಾತನಾಡುತ್ತದೆ. ಆಗ ಗಾಂಧಿ ಸಾರ್ವತ್ರಿಕವಾಗುತ್ತಾರೆ.

‘ಅಗಳ’ ಎಂದರೆ ‘ವಿಸ್ತಾರ’ ಎಂದೂ ‘ಕಂದಕ’ ಎಂದೂ ಎರಡರ್ಥವಿರುವ ಪದವನ್ನು ಇಲ್ಲಿ ಚಮತ್ಕಾರವಾಗಿ ದುಡಿಸಿಕೊಳ್ಳಲಾಗಿದೆ.

ಆದರೂ ಈ ದಾರಿ ಪ್ರಪಾತದಂಚಿನ ನಡಿಗೆ
ತಣ್ಣೆಂದರೆ ನನಗೆ ಕಾಲು ನಡುಕ
ನಾನು ಹುಟ್ಟಿದ ಊರು ಕಳಸದಲಿ ಮನೆ ಹಿಂದೆ
ಊರ ನೀರೆಲ್ಲವೂ ಹರಿಯುತ್ತಿತ್ತು
ಮೊದಲ ಕಾಲುವೆ ಹೋಗಿ ತಗ್ಗುಗುಂಡಿಯೇ ಆಗಿ
ಅಗಲಾಗಿ ಬೆಳೆಯುತ್ತ ಅಗಳವಾಯ್ತು.

ತನ್ನ ಮನೆ ತನಗೆ ಕೊಡಬಹುದಾದ ಪ್ರಾಪಂಚಿಕ ಸಂಪತ್ತು, ಸಾಂಸ್ಕೃತಿಕ ವೃದ್ಧಿ, ಉಳಿದ ಪ್ರಪಂಚದೊಂದಿಗೆ ಅದು ಉಂಟುಮಾಡುವ ಕಂದಕ, ಹಾಗೇ ಅದು ತನ್ನ ಬದುಕನ್ನು ವಿಸ್ತರಿಸುವ ರೀತಿ ಈ ರೂಪಕದಲ್ಲಿದೆ.

ನಮ್ಮ ಪ್ರಾಚೀನ ಕಾವ್ಯ ಪರಂಪರೆಯೇ ವೀರ ಕಾವ್ಯಗಳ ಪರಂಪರೆ. “ರಾಮಾಯಣ”, “ಮಹಾಭಾರತ”ಗಳ ಅನುಸೃಷ್ಟಿ, ಮರುಸೃಷ್ಟಿ, ಪುನಃಸೃಷ್ಟಿಗಳೇ ಕನ್ನಡ ಸಾಹಿತ್ಯ ಚರಿತ್ರೆಯ ಹೆಚ್ಚಿನ ಪುಟಗಳನ್ನು ಆಕ್ರಮಿಸುವುದರಿಂದ ನಮ್ಮ ಕವಿಗಳೆಲ್ಲರೂ, ವಿಶೇಷವಾಗಿ ವ್ಯಾಸ ವಾಲ್ಮೀಕಿ ಸೇರಿದಂತೆ ಪಂಪ, ರನ್ನ, ಕುಮಾರವ್ಯಾಸ, ಕುಮಾರ ವಾಲ್ಮೀಕಿ – ಯುದ್ಧವನ್ನು ವಿವರವಾಗಿ ವರ್ಣಿಸುವುದಲ್ಲದೇ ವೈಭವೀಕರಿಸಿಯೂ ಇದ್ದಾರೆ. ಆದರೆ ಇಪ್ಪತ್ತನೇ ಶತಮಾನದಲ್ಲಿ ನಿಂತು ಮತ್ತೆ ಅದೇ ಕತೆಯನ್ನು ಬರೆಯುವ ಕವಿಗೆ ಸಾಮಾಜಿಕ ಜವಾಬ್ದಾರಿಯೂ ಇರುವುದರಿಂದ ಯುದ್ಧವನ್ನು ವೈಭವೀಕರಿಸುವುದಂತೂ ಸಾಧ್ಯವಿಲ್ಲ. ಕತೆಯ ಮೂಲ ಒತ್ತಡ ಇರುವುದರಿಂದ ಅದನ್ನು ವರ್ಣಿಸದೇ ಸುಮ್ಮನೆ ಬಿಡುವಂತೆಯೂ ಇಲ್ಲ. ಹೀಗಾಗಿ “ಮಾಡಿದಂತಿರಬೇಕು ಮಾಡದಂತಿರಬೇಕು” ಎನ್ನುವ ರಾಜೀಸೂತ್ರವನ್ನು ಅನ್ವಯಿಸಿ ಯುದ್ಧವನ್ನು ವರ್ಣಿಸುತ್ತಲೇ ಅದನ್ನು ವಿರೋಧಿಸುವ ಒಳಸೂಕ್ಷ್ಮವನ್ನು ಕುವೆಂಪು, ವೀರಪ್ಪ ಮೊಯಿಲಿ ಮೊದಲಾದ ಕವಿಗಳು ತೋರಿದ್ದಾರೆ. ‘ದಾಂಪತ್ಯ ಗೀತ’ ಸಾಮಾಜಿಕ ವಸ್ತುವುಳ್ಳದ್ದಾದರೂ ಈ ಕತೆ ನಡೆದ ಕಾಲಘಟ್ಟದಲ್ಲಿ ನಡೆದ ಭಾರತದೊಂದಿಗಿನ ಚೀನಾ ಯುದ್ಧ, ಪಾಕಿಸ್ತಾನ ಯುದ್ಧದ ಪ್ರಸ್ತಾಪ ಬಂದಾಗ ಕೇವಲ ಒಂದೆರಡು ವಾಕ್ಯಗಳಲ್ಲಿಯೇ ಅದರ ಬಗೆಗಿನ ವಿರೋಧವನ್ನು ಈ ಕವಿ ಹೀಗೆ ದಾಖಲಿಸಿದ್ದಾರೆ.

ನನಗೆ ದೇಶ ಪ್ರೇಮ ಇಲ್ಲವೆಂದಿನಿಸಿತ್ತು.
ಚೀಣ ಗಡಿ ನುಂಗುತ್ತ ಬರುವ ತನಕ
ಒಳಗೆ ನುಗ್ಗಿದ್ದೆ ತಡ ನನಗೆ ಶುರುವಾಗಿತ್ತು
ಆತಂಕ ದುಗುಡ ತವಕ
ನನ್ನ ಮಕ್ಕಳ ಎದೆಗೆ ಬಯನೆಟ್ಟು ಚುಚ್ಚಿದರೆ
ನಮ್ಮ ಅಪ್ಪನ ತಲೆಗೆ ಗುಂಡಿಟ್ಟರೆ
ನಮ್ಮ ಹೆಂಡಿರ ಎಳೆದು ಮರ್ಯಾದೆ ಕೆಡಿಸಿದರೆ
ಇಂಥಾದ್ದು ನಡೆದರೆ ನನ್ನ ಕಣ್ಣೆದುರೆ
ದೇಶ ಉಳಿಯುವ ಪ್ರಶ್ನೆ ನನ್ನ ಜೀವನದಲ್ಲಿ
ಮೊದಲ ಸಲ ಬಂದಿತ್ತು ಬೊಂಬಾಯಿಯಲ್ಲಿ

ಕೆಲವು ಕಡೆ ರೂಪಕಗಳು ವಾಚ್ಯವಾಗಿ ಬಿಡುವುದೂ ಉಂಟು.

ವಿದ್ಯಾಭ್ಯಾಸದ ಪ್ರಾರಂಭದ ದಿನಗಳಲ್ಲಿ
ಆತ್ಮವಿಶ್ವಾಸವೇ ಆಗ ನನಗಿರಲಿಲ್ಲ.
ನನ್ನ ಶಕ್ತಿಯ ಅರಿವು ನನಗಾಗಲಿಲ್ಲ
ದನಿಯ ಉಪಯೋಗ ತಿಳಿದಿರಲಿಲ್ಲ
ವಾಗ್ಮಿತ್ವ ಬೇಕೆಂದು ಗೊತ್ತಾಗಲಿಲ್ಲ
ವ್ಯಕ್ತಿತ್ವ ಸ್ಥಾಪನೆಯ ರೀತಿ ಕಂಡಿರಲಿಲ್ಲ
ನುಗ್ಗಿ ಕಲಿಯುವುದಕ್ಕೆ ಧೈರ್ಯವಿರಲಿಲ್ಲ
ವಿನಯ ಕೀಳರಿಮೆಗಳ ವ್ಯತ್ಯಾಸ ಗೊತ್ತಿರಲಿಲ್ಲ
ಮಾರ್ಗದರ್ಶಕರು ಸಿಕ್ಕಿರಲೇ ಇಲ್ಲ

ಇಪ್ಪತ್ತೈದು ವರ್ಷಗಳ ದಾಂಪತ್ಯದ ಚಿತ್ರಣ ಎಂದು “ದಾಂಪತ್ಯಗೀತ”ವನ್ನು ನಾವು ಭಾವಿಸಿದರೆ, ಮುಖ್ಯವಾಗಿ ಹೇಳಬೇಕಾದದ್ದನ್ನು ಹೇಳಿದ ನಂತರ ಹಿಂದಕ್ಕೆ ತಿರುಗಿ ನೋಡುವ ಒಂದು ಪ್ರಕ್ರಿಯೆ ೨೬ನೇ ಅಧ್ಯಾಯದಲ್ಲಿದೆ. ಅಂದರೆ ವರ್ತಮಾನದಿಂದ ಹಿಂದಕ್ಕೆ ಹೋಗಿ ಮತ್ತೆ ಮುಂದಕ್ಕೆ ಬರುವ ಪ್ರಕ್ರಿಯೆ. ಈ ಅಧ್ಯಾಯದ ವಿಶೇಷವೇನೆಂದರೆ ಹಿಂದಕ್ಕೆ ಹೋಗುವ ಕ್ರಿಯೆಯಲ್ಲಿ ಕವಿಯ ಮನಸ್ಸು ತಮ್ಮಿಬ್ಬರನ್ನು ರಾಮ ಸೀತೆಯರಿಗೂ, ಅರ್ಜುನ ಪಾಂಚಾಲಿಯರಿಗೂ, ವಾಲಿಯ ಹೆಂಡತಿ ಮತ್ತು ಸುಗ್ರೀವರಿಗೂ, ಯಕ್ಷಕಿನ್ನರರಿಗೂ ಹೋಲಿಸಿಕೊಳ್ಳುವುದು. ಹಾಗಾಗಿ

ನಾವು ಮರೆಯಾದರೂ ಒಂದಲ್ಲ ಒಂದು ದಿನ
ಸಂಪೂರ್ಣ ನಾಶವೇ ಇಲ್ಲ ನಮಗೆ.
ಯಾರ ಉಸಿರೋ ಸೇರಿ ಯಾರ ಬಸಿರೋ ಸೇರಿ
ಕೆಸರಲ್ಲೋ ಹಸಿರಲ್ಲೋ ಹುಟ್ಟು ನಮಗೆ

ಎಂಬ ತಾತ್ವಿಕವಾದ ನಿಲುವಿಗೆ ಬಂದು ನಿಲ್ಲುತ್ತದೆ. ಈ ಮಾತು ಬರೀ ಪುನರ್ಜನ್ಮವನ್ನು ನಂಬುವ ಮಾತಲ್ಲ. ಅದನ್ನೂ ಮೀರಿದ, ಬದುಕಿನ ಸಾತತ್ಯವನ್ನು ಕುರಿತದ್ದು. ಇಂತಹ ಪೂರ್ಣತೆಯ ಅರಿವಿನಿಂದಲೇ ಕವಿಯು ಕಾಲವನ್ನು ಮೀರಬಲ್ಲ.

ಇಡೀ ಕಾವ್ಯವು ಕುಟುಂಬ ವ್ಯವಸ್ಥೆಯನ್ನು ವೈಭವೀಕರಿಸುವ ಧಾಟಿಯಲ್ಲೇನೂ ಇಲ್ಲದಿರುವುದರಿಂದ ನಾಡಿಗರು ಇಲ್ಲಿ ಪ್ರತಿಪಾದಿಸುವ ಕುಟುಂಬ ವ್ಯವಸ್ಥೆ, ಎಲ್ಲರ ಅನುಭವವೂ ಹೌದು. ಅದರ ಬಗ್ಗೆ ಅಂತಿಮವಾಗಿ ತಾತ್ಸಾರವೋ ಜಿಗುಪ್ಸೆಯೋ ಇಲ್ಲದಿರುವುದೇ ಇದರ ಗುಣಾತ್ಮಕ ಅಂಶ. ದಾಂಪತ್ಯವು

ಸಂತಾನ ಉಳಿವುದಕ್ಕೆ ಸಂತಾನ ಬೆಳೆವುದಕೆ
ಹಮ್ಮನ್ನು ತಡೆವ ರಂಗ.

ಎಂದು ವರ್ಣಿಸುತ್ತಾರೆ. ಇಷ್ಟೇ ಆಗಿದ್ದರೆ ವಿಶೇಷವಿರಲಿಲ್ಲ.

ಈ ಸಂತಾನವ, ನಾವು ಚಿರಂಜೀವಿಗಳಲ್ಲವಾದರೂ, ನಮ್ಮ ಚಿರಂತನತೆಯನ್ನು ಕಾಪಾಡುವುದರಿಂದ

ಮೃತ್ಯ ಜೊತೆ ಯುದ್ಧಕ್ಕೆ ಬೀಜಾಕ್ಷರವ ಬಿಡುವ
ದಾಂಪತ್ಯ ದಿವ್ಯ ವ್ಯಂಗ್ಯ.

ಆದ್ದರಿಂದ ದಾಂಪತ್ಯವನ್ನು ಮಾನಸಿಕ ದೂರ (Psychic Distance)ದಲ್ಲಿ ನೋಡುವುದು ಸಾಧ್ಯವಾಗಿದೆ. ಈ ದೂರವಿಲ್ಲದಿದ್ದರೆ ಕಾವ್ಯವು ಆಸ್ವಾದ್ಯವೇ ಅಲ್ಲ ಎಂದು ಕಾವ್ಯಮೀಮಾಂಸೆಯ ಮಾತೇ ಇದೆಯಲ್ಲ!

ಸ್ವಂತದ ವಿಷಯಗಳ ಮಧ್ಯೆ ಗಾಂಧೀ ವಿವೇಕಾನಂದ ಅಂಬೇಡ್ಕರ್ ಎಂದು ಇಡೀ ದೇಶಕ್ಕೆ ಅನ್ವಯಿಸುವ ರೀತಿ ಬಹುಶಃ ಕಾವ್ಯದಿಂದ ಹೊರಚ್ಚಾಗಿ ನಿಲಲುತ್ತಿತ್ತೇನೋ. ಆದರೆ ಕಾವ್ಯದ ಬಂಧವು ಅದನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಆದರೆ ಭಾಗ ೨೦ ರಲ್ಲಿ.

ನಮ್ಮ ನಾಟಕ ನಾವು ಆಡಿ ಮುಗಿಸುತ್ತೇವೆ.
ಇದು ನೀವೇ ಅನುಮೋದಿಸಿದ ಕಟ್ಟು, ದಾಂಪತ್ಯ
ಇದನ್ನು ಕಟ್ಟಲು ನಾವು ಹೆಣಗಿದೆವು
ನಮ್ಮ ನಾಟಕದಲ್ಲಿ ಎಷ್ಟು ಪಥ್ಯ

ಎನ್ನುವ ಮಾತುಗಳು ಸಾರ್ವತ್ರಿಕವಾಗುವ ಪ್ರಯತ್ನ ನಡೆಸಿವೆ.

ಈ ಕಾವ್ಯಕ್ಕೆ ಒಂದು ಕಟ್ಟುವಿಕೆಯ ಚೌಕಟ್ಟಿದೆ. ಪ್ರಾಸ ಲಯಗಳನ್ನು ಸಾಧಿಸುತ್ತಲೇ, ಕಾವ್ಯಮೀಮಾಂಸೆಯ ಮಾತುಗಳನ್ನು ತರುತ್ತಲೇ, ರೂಪಕಗಳನ್ನು ರಾಶಿರಾಶಿಯಾಗಿ ಸುರಿಯುತ್ತಲೇ ಕಾದಂಬರಿಯೊಂದು, ಆತ್ಮಚರಿತ್ರೆಯೊಂದು ಕೊಡಬಹುದಾದ ವಿವರಗಳನ್ನು ಹಂತಹಂತವಾಗಿ ಕೊಡುವ ಈ ಪ್ರಕ್ರಿಯೆ ಈ ಕಾವ್ಯಕ್ಕೆ ಹೊಸತು. ಕಥೆ ಹೇಳುವುದು ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳುವುದು ಇಲ್ಲಿ ಜೊತೆಜೊತೆಯಾಗಿ ನಡೆಯುತ್ತದೆ. ವಿಷಯಗಳನ್ನು ಅಧ್ಯಾಯಗಳಾಗಿ ವಿಂಗಡಿಸುತ್ತಾ ಅಲ್ಲಿಗೇ ನಿಲುಗಡೆ ತರುವಲ್ಲಿ, ಒಂದು ಅಧ್ಯಾಯದ ವಿಷಯವು ಇನ್ನೊಂದು ಅಧ್ಯಾಯದಲ್ಲಿ ಪುನರುಕ್ತಿಯಾಗದ ಹಾಗೆ ನೋಡಿಕೊಳ್ಳುವಲ್ಲಿ, ಕೊನೆಯಲ್ಲಿ ಬರಬಹುದಾದ ಮಾತುಗಳನ್ನು ಸೌಷ್ಠವದ ದೃಷ್ಟಿಯಿಂದ ೫೦ನೇ ಪುಟಕ್ಕೆ ತರುವಲ್ಲಿ ಈ ಕಟ್ಟುವಿಕೆಯ ಕೌಶಲ ವ್ಯಕ್ತವಾಗಿದೆ. ಸೌಧವನ್ನು ಕಟ್ಟುವುದರ ಜೊತೆಗೆ ವೃಕ್ಷವೊಂದು ಆಕಾಶದೆಡೆಗೆ ಕೈಚಾಚುವ ಕ್ರಿಯೆಯಾಗಿ ಮಧ್ಯೆ ಮಧ್ಯೆ ಆಧ್ಯಾತ್ಮವೂ ಸುಳಿಯುತ್ತದೆ. ಆಧ್ಯಾತ್ಮವನ್ನು ಬದುಕಿನಿಂದ ದೂರವಾಗಿ ಬೇರೆಯಾಗಿ ನೋಡಬೇಕಾದ ಕಾಲ ಇದಲ್ಲ. ಇಂದಿನ ಒತ್ತಡದ ಜೀವನವು ಯೋಗ, ಧ್ಯಾನಗಳನ್ನು ಅನಿವಾರ್ಯವಾಗಿಸಿದೆ. ಕಾವ್ಯ ಅಥವಾ ಸಾಹಿತ್ಯಕ್ಕಂತೂ ಆಧ್ಯಾತ್ಮವು ಹತ್ತಿರದ ನಂಟ. ನವ್ಯ ಮತ್ತು ದಲಿತ ಬಂಡಾಯಕ್ಕೆ ಹೊರತುಪಡಿಸಿ ಇನ್ನೆಲ್ಲಾ ಹಂತದ ಕಾವ್ಯಕ್ಕೂ ಈ ಮಾತನ್ನು ಹೇಳಬಹುದು. “ದಾಂಪತ್ಯ ಗೀತ”ವಂತೂ ನವೋತ್ತರದ ಕೊಡುಗೆಯಾಗಿದ್ದು, ಕಥನ ಕವನದ ಧಾಟಿಯನ್ನೇ ಹೋಲುತ್ತಾ ಮಧ್ಯೆ ಮಧ್ಯೆ ಆಧ್ಯಾತ್ಮದ ಎತ್ತರಕ್ಕೆ ಕೈಚಾಚುತ್ತದೆ. ಪಂಪನ ಬಗ್ಗೆ ಹೇಳುತ್ತಾ “ಆ ವೃಕ್ಷದ ಕೊಂಬೆ ನಾನು” ಎಂದು ನಾಡಿಗರು ಹೇಳಿರುವ ಮಾತೂ ಇದಕ್ಕೆ ಪೂರಕವಾಗಿದೆ.

ಅಲ್ಲಿಗೂ ಈ ಕಾವ್ಯದ ಕೊಡುಗೆಯೇನು ಎಂದು ನಾವು ಪ್ರಶ್ನಿಸಿಕೊಳ್ಳುವುದಾದರೆ ಓದಿದ ನಂತರವೂ ಬಹುಕಾಲ ಮನಸ್ಸಿನಲ್ಲಿ ಉಳಿಯುವ, ಕೈಗೆ ಹಿಡಿದದ್ದೇ ಕೆಳಕ್ಕೆ ಇಡದಂತೆ ಓದಿಸಿಕೊಳ್ಳುವ, ಭಾಷೆಗೊಂದು ಲವಲವಿಕೆ ನೀಡುವ, ಮನಸ್ಸನ್ನು ಉಲ್ಲಾಸಗೊಳಿಸುವ ನಂತರ ಚಿಂತನೆಗೆ ಹಚ್ಚುವ ಈ ಗುಣಗಳು ಕಾವ್ಯದ ಉತ್ತಮ ಗುಣಗಳು.
*****
ಸುರಾನಾ ಕಾಲೇಜಿನಲ್ಲಿ ಸುಂದರ ಪ್ರಕಾಶನವು ಸುಮತೀಂದ್ರ ನಾಡಿಗರ ಬಗ್ಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೂರ್‍ಣತೆ
Next post ನೂರು ನೆರಳುಗಳು

ಸಣ್ಣ ಕತೆ

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys