ಆಕಾಶ
ಇಬ್ಬನಿಯ ಹಾಗೆ ಕರಗುತ್ತಲಿದೆ.
ಸೂರ್ಯ
ಬಾವಲಿಯಾಗಿದ್ದಾನೆ.
ಬೆಟ್ಟಗುಡ್ಡ, ಕಣಿವೆ-ಕಂದರಗಳು
ಚಂದಿರನನ್ನು ನುಂಗುತ್ತಲಿವೆ.
ಚುಕ್ಕಿಗಳ ಕಂಗಳಿಗೆ ಪೊರೆ ಬಂದಿದೆ.
ಮೋಡಗಳು ರೆಕ್ಕೆ ಕಟ್ಟಿಕೊಂಡು
ವಲಸೆ ಹೋಗುತ್ತಿವೆ.
ಕಪ್ಪನ್ನು ಹೊದ್ದ ರಸ್ತೆಗಳು
ಮುಸುಕಿನೊಳಗೆ ಬಿಕ್ಕುತ್ತಿವೆ.
ನನ್ನ ಮುದ್ದು ಕವಿತೆಯ
ಕಳೇಬರವನ್ನು ಇರುವೆಗಳು
ಮೆರವಣಿಗೆಯಲ್ಲಿ ಒಯ್ಯುತ್ತಿವೆ.

ಸಹಾಯ! ಹೆದರಿಕೆಯಾಗುತ್ತಿದೆ.


ಪುಟ್ಟ ಹುಡುಗಿ ……ಹೆದರಬೇಡ!
ನಾನಿಲ್ಲಿಯೇ ಇದ್ದೇನೆ.
ನನ್ನೆದೆಯ ಮೇಲೆ ಒರಗಿಕೊ…
ಮೆಲ್ಲಗೆ ತಟ್ಟುತ್ತೇನೆ.
ಹಿತವಾಗಿ ತೆರೆದುಕೊ…
ಸುಂದರ ಕನಸುಗಳನ್ನು ಕರೆಯುತ್ತೇನೆ.
ಬೆಚ್ಚಗೆ ಮಲಗಿಕೊ…
ನಾಳೆಗಳು ಸುಂದರವಾಗಿರುತ್ತವೆ.
ಬೆಚ್ಚಗೆ ಮಲಗಿಕೊ…
ನಾಳೆಗಳು ಸುಗಂಧಮಯವಾಗಿರುತ್ತವೆ.
ಬೆಚ್ಚಗೆ ಮಲಗಿಕೊ…
ನಾಳೆಗಳು ಸುಖಮಯವಾಗಿರುತ್ತವೆ.
ಬೆಚ್ಚಗೆ ಮಲಗಿಕೊ…