ಮಾನ್ಯರಿಗೆ ಶರಣು ಜನ
ಸಾಮಾನ್ಯರಿಗೆ ಶರಣು
ಅನ್ಯರಿಗೆ ಶರಣು ಅನನ್ಯರಿಗೆ ಶರಣು
ಗಣ್ಯರಿಗೆ ಶರಣು ನಗಣ್ಯರಿಗೆ ಬಹಳ ಶರಣು

ಹೊನ್ನೆ ಮರದಡಿ ಕೂತವರಿಗೆ
ಚೆನ್ನೆಯಾಡುವ ಕನ್ನೆಯರಿಗೆ
ಕನ್ನಡದ ಜಾಣೆಯರಿಗೆ
ಕನ್ನಡದ ಜಾಣರಿಗೆ ಬಹಳ ಶರಣು

ಮೊನ್ನೆ ಹೋದವರಿಗೆ
ನಿನ್ನೆ ಬಂದವರಿಗೆ
ಮುನ್ನ ಇದ್ದವರಿಗೆ
ಇನ್ನು ಬರುವವರಿಗೆ ಬಹಳ ಶರಣು

ಅಂಕೆಗಳಲಿ ಸೊನ್ನೆಗೆ
ಸಂಕದಲಿ ದಾರಿ ಬಿಡುವವರಿಗೆ
ತೆಂಕಣ ಗಾಳಿಗೆ
ಮಂಕು ಪರಿಹರಿಸುವ ವಿದ್ಯೆಗೆ ಬಹಳ ಶರಣು

ನಿಂತ ಗಿರಿಗಳಿಗೆ
ಹರಿವ ತೊರೆಗಳಿಗೆ
ತುಂಬಿದ ಕೆರೆಗಳಿಗೆ
ಬೀಳುವ ಮಳೆಹನಿಗಳಿಗೆ ಬಹಳ ಶರಣು

ಕತೆಗೆ ಕತೆ ಹೇಳುವರಿಗೆ
ಕವಿತೆಗೆ ಕವಿತೆ ಕಟ್ಟುವರಿಗೆ
ಸುಖದಂತೆ ವ್ಯಥೆಯ ಹಂಚಿಕೊಳ್ಳುವವರಿಗೆ
ಪೃಥ್ವಿಯೇ ಸ್ವರ್‍ಗವೆಂದು ತಿಳಿದವರಿಗೆ ಬಹಳ ಶರಣು

ಕೋಲಾಟದವರಿಗೆ ಬಯಲಾಟದವರಿಗೆ
ಡೊಳ್ಳುಕುಣಿತದವರಿಗೆ
ಹಲಗೆ ಬಡಿವವರಿಗೆ
ಉಳುವ ರೈತರಿಗೆ ಬಹಳ ಶರಣು

ವೈದ್ಯರಿಗೆ ವಕೀಲರಿಗೆ
ಮದ್ಯ ಕುಡಿಯದವರಿಗೆ
ಗದ್ಯ ಬರೆವವರಿಗೆ ಪದ್ಯ ಓದುವರಿಗೆ
ಸದ್ಯ ದುಡಿವವರಿಗೆ ಬಹಳ ಶರಣು

ದೇಶವನಾಳುವ ಪ್ರಜೆಗಳಿಗೆ
ವೇಷ ಹಾಕುವ ನಟರಿಗೆ
ಕಾಶಾಯವಸ್ತ್ರಧಾರಿಗಳಿಗೆ
ಬೇಸಾಯಗಾರರೆಲ್ಲರಿಗೆ ಬಹಳ ಶರಣು

ದೀನರಿಗೆ ದಲಿತರಿಗೆ
ದಾನ ನೀಡುವ ಉದಾರಿಗಳಿಗೆ
ಜ್ಞಾನಿಗಳಿಗೆ ವಿಜ್ಞಾನಿಗಳಿಗೆ
ಧ್ಯಾನಿಗಳಿಗೆ ಮಹಾಮೌನಿಗಳಿಗೆ ಬಹಳ ಶರಣು

ನಕ್ಷತ್ರಗಳಿಗೆ ಶರಣು
ಸಕಲ ಸಾಕ್ಷಿಗಳಿಗೆ ಶರಣು
ಅಕ್ಷಯ ಕನಸುಗಳಿಗೆ ಶರಣು
ಕನಸ ರಕ್ಷಿಸುವ ಕವಿಗಳಿಗೆ ಬಹಳ ಶರಣು
*****