ನನ್ನ ಮನೆಯ ಒಡತಿ ನೀನು,
ನನ್ನ ಮಕ್ಕಳ ತಾಯಿ ನೀನು,
ಮೌನವಾಗಿ ತಲೆ ತಗ್ಗಿಸಿ
ಎಲ್ಲರ ಸೇವೆ ಮಾಡುವ ನಿನಗೆ
ಸ್ವರ್ಗ ಲೋಕದಲ್ಲಿ ಸ್ಥಾನ ಭದ್ರ
ಮರಿಯಮ್, ಖತೀಜಾ ಹಾಗೂ
ಬೀವಿ ಫಾತೀಮಾರಂತೆ
ನಾವು ಮಾಡಿದ ಕಟ್ಟಳೆಗಳನ್ನು
ನೀನೂ ತಲೆ ಮೇಲಿಟ್ಟು ಪಾಲಿಸು,
ಇಂತಹ ಕಾನೂನು ಮಾಡಿದ
ನಮ್ಮ ಉಪಕಾರಕ್ಕೆ ಪ್ರತಿಯಾಗಿ
ಎರಡು ರಕಾತ ಶುಕ್ರಿಯಾ
ನಮಾಜ್ ಮಾಡಿ ಹರಸು,
ಒಂಟಿಯಾಗಿ ಹೊರಗೆ
ಹೋಗುವೆಯಾ ಜೋಕೆ!
ಜನ ನಿನ್ನ ರಸ್ತೆಯಲಿ
ದುರುಗುಟ್ಟಿ ನೋಡಿಯಾರು,
ನಿನ್ನ ನಾಜೂಕು ದೇಹಕ್ಕೆ
ಜನರ ದೃಷ್ಟಿಯಾದೀತು!
ಮನೆತನದ ಮರ್ಯಾದೆ
ನಡುಬೀದಿಯಲಿ ಜನರೆದುರು
ನೀಲಾಮು ಆದೀತು
ನಿನ್ನ ಮಾನ ರಕ್ಷಣೆಯ ಹೊಣೆ
ತಂದೆ, ಪತಿ, ಸುತರು-
ಹೊತ್ತಿರುವಾಗ ನಿನಗೇಕೆ ಪ್ರತ್ಯೇಕ ಸ್ವಾತಂತ್ರ್ಯ
ಅಸ್ತಿತ್ವಗಳ ಜ೦ಜಾಟ?
*****