ಒಂದೇ ಸಮನೆ
ಸುರಿಯುತ್ತಿದೆ
ಮಸಲಧಾರೆ.
ಅಬ್ಬರವೇನು? ಆರ್ಭಟವೇನು?
ಎಲ್ಲಿ ಅಡಗಿತ್ತೋ
ಬೆಟ್ಟ ಗುಡ್ಡಗಳ ನಡುವೆ
ಎಷ್ಟು ದಿನಗಳಾದವೋ
ಕಾದು ಕುಳಿತ ಕಣ್ಣುಗಳು
ಮಂಜಾಗಿ ಮರೆಯಾದವು
ಯಾರು ದಬ್ಬಿದರೋ ಕಾಣೆ
ದಿಢೀರನೆ ಬಿತ್ತು
ಸುಮ್ಮನೆ ಬಂದರೆ ಕೇಳಿ
ಬರುವಾಗಲೆ ದೊಡ್ಡ ಪ್ರಚಾರ
ಗಾಳಿ ಗುಡುಗು ಸಿಡಿಲು ಮಿಂಚು
ಎದೆಯೊಡೆದು ಸಾಯಬೇಕು.
ಒಡಲೊಳಗೆ ಕುದ್ದು ಕುದ್ದು
ಮೋಡದೊಳಗೆ ಮಡುಗಟ್ಟಿ
ತಣ್ಣಗೆ ತಂಪಾಗಿ ಆಲಿಕಲ್ಲು
ಸರಿದ ರಭಸಕ್ಕೆ
ಬೆಚ್ಚಿ ಕಣ್ಣು ಬಿಟ್ಟವು ಲೋಕ
ಎಷ್ಟು ಸುರಿದರೇನು?
ಕಡಲು ತು೦ಬಿದರೇನು?
ಒಡಲು ತಂಪಾದರೇನು?
ಭೂಮಿ ತಣಿಯಲಿಲ್ಲ
ಹಸಿರು ಉಸಿರಾಗಲಿಲ್ಲ
ಭ್ರಮಾಧೀನ ಬದುಕಲ್ಲಿ
ಎಲ್ಲವೂ ಶೂನ್ಯ.
*****