ಪ್ರಿಯ ಸಖಿ,
ಸಮಾಜವಾದಿಗಳನ್ನು ಸದಾ ಕಾಡುತ್ತಾ ಬಂದಿರುವ ವಿಷಯವೆಂದರೆ ಸಮಾಜ ಸುಧಾರಣೆಯನ್ನು ವ್ಯಕ್ತಿಯಿಂದ ಪ್ರಾರಂಭಿಸಬೇಕೋ, ಸಮುದಾಯದಿಂದ ಪ್ರಾರಂಭಿಸಬೇಕೋ ಎಂಬುದು. ಸಹಜವಾಗೇ ಇದಕ್ಕೆ ಪೂರ್ವಪರವಾದಗಳೂ ಇವೆ. ಸಮುದಾಯದಿಂದ ಸುಧಾರಣೆ ಆಗಬೇಕೆನ್ನುವವರು, ಸಮಾಜದಲ್ಲಿ ಅನೇಕ ಅನಿಷ್ಟಗಳಿವೆ. ಅವುಗಳನ್ನೆಲ್ಲಾ ಸಂಘಟನೆಯ ಮೂಲಕ, ಸಮುದಾಯ ಜಾಗೃತಿಯ ಮೂಲಕ, ಸಿದ್ಧಾಂತಗಳನ್ನು ಅಳವಡಿಸುವ ಮೂಲಕ ಸರಿಪಡಿಸಬೇಕೆನ್ನುತ್ತಾರೆ. ಸಾಮಾಜಿಕ ಕ್ರಾಂತಿಯಿಂದ ಮಾತ್ರ ಸಮಾಜ ಸುಧಾರಣೆಯನ್ನುವುದು ಇವರ ವಾದ. ಆದರೆ ವ್ಯಕ್ತಿ ಸುಧಾರಣೆಯಿಂದ ಮಾತ್ರ ಸಮಾಜ ಸುಧಾರಣೆಯೆಂದು ನಂಬಿರುವವರು ಸಮಾಜದ ಅನಿಷ್ಟಕ್ಕೆ ಇತರರು ಹೇಗೆ ಜವಾಬ್ದಾರರೋ ನಾನೂ ಅಷ್ಟೇ ಜವಾಬ್ದಾರ ಹೀಗಾಗಿ ಮೊದಲು ನಾನು ಸರಿ ಹೋಗಬೇಕು. ನಂತರ ಸಮಾಜವನ್ನು ತಿದ್ದುವ ಪ್ರಯತ್ನ ಎನ್ನುತ್ತಾರೆ.
ಎರಡೂ ವಾದಗಳೂ ಅವರವರ ಮೂಗಿನ ನೇರಕ್ಕೆ ಸರಿಯೆನಿಸಿದರೂ ಎರಡೂ ವಾದಗಳಿಗೂ ತನ್ನದೇ ಆದ ಮಿತಿಗಳೂ ಇವೆ. ಸಾಮಾಜಿಕ ಕ್ರಾಂತಿಯ ಹುಟ್ಟು ಬೀದಿಗಳಲ್ಲಿ ಆಗುವುದಿಲ್ಲ. ಮನೆಗಳಲ್ಲಿ ಆಗಬೇಕು. ಮನಸ್ಸಿನಲ್ಲಿ ಆಗಬೇಕು ಎಂಬುದು ಒಂದು ವಾದವಾದರೆ, ಸಾಮಾಜಿಕ ಕ್ರಾಂತಿಯಿಂದ ಇಡೀ ಸಮುದಾಯವೇ ಒಳಿತಿನತ್ತ, ಸತ್ಯದ ಹಾದಿಯಲ್ಲಿ ನಡೆಯುವಂತಾದಾಗ ಅಲ್ಲಿ ಸಮಷ್ಠಿ ಪ್ರಜ್ಞೆಯೇ ಮುಖ್ಯವಾಗುತ್ತದೆಯೇ ಹೊರತು ವ್ಯಕ್ತಿಯಲ್ಲ ಎನ್ನುತ್ತದೆ ಇನ್ನೊಂದು ವಾದ. ಸಖಿ, ಆದರೆ ಹಲವು ವ್ಯಕ್ತಿಗಳ ಒಂದು ಸಮುದಾಯ ಎಂಬುದನ್ನು ನಾವು ಮರೆಯುವಂತಿಲ್ಲ. ಒಂದು ಸಂಘಟನೆ, ಸಮುದಾಯ ಇಡಿಯಾಗಿ ಹೇಗೆ ನಡೆದುಕೊಂಡರೂ ಅದರಲ್ಲಿನ ವ್ಯಕ್ತಿಗಳು ಭಿನ್ನರೇ. ಅನನ್ಯರೇ. ಎಲ್ಲರಿಗೂ ಅವರದೇ ಆದ ವ್ಯಕ್ತಿತ್ವಗಳಿರುತ್ತವೆ ನಂಬಿಕೆಗಳಿರುತ್ತವೆ. ದೃಷ್ಟಿಕೋನಗಳಿರುತ್ತವೆ. ಕೆಟ್ಟ, ಒಳ್ಳೆಯ ಸ್ವಭಾವಗಳೂ ಇರುತ್ತವೆ.
ತಾನು ಸಂಫಟನೆಯ ಮೂಲಕ ಹೇಳುವ ಸಿದ್ಧಾಂತಗಳಿಗೆ, ತತ್ವಗಳಿಗೆ ಅವನು ವ್ಯಕ್ತಿಯಾಗಿ ತನ್ನ ವೈಯಕ್ತಿಕ ಬದುಕಿನಲ್ಲಿ ಬದ್ಧನಾಗಿದ್ದಾಗ ಮಾತ್ರ ಅವನಿಗೆ ಅದನ್ನು ಇತರರಿಗೆ ಬೋಧಿಸುವ, ಉಪದೇಶಿಸುವ ನೈತಿಕ ಹಕ್ಕಿರುತ್ತದೆ.
ಅದಿಲ್ಲದೆ ನಾನು ನನ್ನ ಇಷ್ಟಬಂದಂತೆ ಬದುಕುತ್ತೇನೆ. ನೀವು ಮಾತ್ರ ಹೀಗೇ ಬದುಕಿ ಎಂದು ಹೇಳಲು ಅವನಿಗೆ ಯಾವ ಅಧಿಕಾರವೂ ಇರುವುದಿಲ್ಲ. ತನ್ನ ಬದುಕಿನಲ್ಲಿ ತತ್ವಗಳಿಗೆ ಬದ್ಧನಾಗಿಲ್ಲದ ವ್ಯಕ್ತಿ ಉಪದೇಶಿಸಲು ನಿಂತಾಗ ಸಮಾಜ ಅವನನ್ನು ನೀನೆಷ್ಟು ಸರಿ? ಎಂದು ಪ್ರಶ್ನಿಸುವುದಿಲ್ಲವೇ?
ನುಡಿದಂತೆ ನಡೆದೂ ತೋರಿದ, ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಸತ್ಯ, ತತ್ವಗಳನ್ನಷ್ಟೇ ಇತರರಿಗೂ ಬೋಧಿಸಿದ, ಬೇಕಿದ್ದರೆ ಪ್ರಾಣ ಬಿಟ್ಟೇನು, ತಾನು ಬದುಕಿನಲ್ಲಿ ನಂಬಿರುವ, ಬದ್ಧನಾಗಿರುವ ತತ್ವಗಳನ್ನಲ್ಲ ಎಂದು ನಂಬಿದ್ದ ಮಹಾತ್ಮಾ ಗಾಂಧಿ ಯಂತಹವರು ಅದಕ್ಕೇ ನಮಗೆ ಇಂದಿಗೂ ಪ್ರಿಯರಾಗುತ್ತಾರೆ ಹಾಗೂ ಪ್ರಸ್ತುತರಾಗುತ್ತಾರೆ.
ಬೀದಿಯಲ್ಲಿ ನಿಂತು ಮೂಢನಂಬಿಕೆಗಳ ವಿರುದ್ಧ ಭಾಷಣ ಬಿಗಿದು, ಘೋಷಣೆ ಕೂಗಿದವನು, ತಾನೇ ಮೂಢನಂಬಿಕೆಗಳ ದಾಸನಾಗಿದ್ದರೆ, ತನ್ನ ಮನೆಯಲ್ಲಿ ತಾಂಡವವಾಡುತ್ತಿರುವ ಮೂಢನಂಬಿಕೆಯ ಒಂದು ಕಡ್ಡಿಯನ್ನೂ ಅಲುಗಿಸಲು ಸಾಧ್ಯವಾಗದಿದ್ದರೆ ಇಂತಹವನ ಮಾತುಗಳನ್ನು ಮಾತ್ರ ಕೇಳಿ ಯಾವ ಕ್ರಾಂತಿಯಾಗುತ್ತದೆ? ಸಖಿ ಸುಧಾರಣೆ ಎಲ್ಲಿಂದ? ಎಂಬುದನ್ನು ಈಗ ನೀನೇ ನಿರ್ಧರಿಸು.
*****
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೮ - February 23, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೭ - February 16, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೬ - February 9, 2021