
ಹಿಂದೊಮ್ಮೆ ನಾ ನುಡಿದ ಹಾಡ ಪಲ್ಲವಿಯ
ಮುಂದೆ ಸಡಗರದಿಂದ ಬರುತಿರುವ ಕವಿಯ
ಪದಕಿರಿಸಿ ಇನ್ನೊ೦ದು ಮಾತು ಹೇಳುವೆನು
ಇಂಥ ಕವನಗಳನ್ನ ಕಟ್ಟಿ ಬಾಳುವೆನು.
-ವಿನಾಯಕ
“The green young creeper of this life,
Upon the blood-red streams of Time
Has yet float, till from this strife,
Some Hand plucks it in its prime”
-V. K. G.
ಸೆಳವು
(ಮೊದಲು ಮಾತು)
ಈ ಕವನವನ್ನು ನಾನು ಬರೆದಿದ್ದು ೧೯೩೦ ನೆ. ಇಸ್ವಿಯ ಮೊದಲು ತಿಂಗಳಲ್ಲಿ. ಅಂದಿನ ನಮ್ಮ ಸಮಾಜದ ಸ್ಥಿತಿಯನ್ನೂ ಉಳಿದ ಕೆಲವು ಮಾತುಗಳನ್ನೂ ಅನುಲಕ್ಷಿಸಿ ಬರೆದ ಕವಿತೆಯಿದು. ಅಜ್ಞಾನ, ಅನ್ಯಾಯ, ದುರ್ಬಲತೆ, ಘೋರ ಸಂಕಟ ಇವೆಲ್ಲ ಜೀವಿತದಲ್ಲಿ ಕಾಣುವ ಪ್ರತಿಕೂಲ ಪಾಶಗಳು. ಇವೆಲ್ಲವುಗಳ ಮೂರ್ತಿಯೇ ಪ್ರಕೃತಿ, ಶಕ್ತಿ, ಸೆಳವು. ಜೀವನದಲ್ಲಿ ಬೆರೆತುಕೊಂಡು ಸಮರಸವಾಗಲಿರುವ ಜೀವವನ್ನು ಇವು ಹೆದರಿಸುವವು, ಬೆದರಿಸುವವು. ಜೀವವೇ ವ್ಯಕ್ತಿ, ಪುರುಷ. ಸೆಳವಿನ ಮಧ್ಯದಲ್ಲಿಯೂ ಸ್ಥಿರವಾಗಿ ನಿಂತು ತನ್ನ ವ್ಯಕ್ತಿತ್ವವನ್ನು ಸಂರಕ್ಷಿಸಿಕೊಳ್ಳುವದೇ ಪುರುಷ ಲಕ್ಷಣವೆಂದು ತಿಳಿದ ವ್ಯಕ್ತಿಯು ಶಕ್ತಿಯೊಡನೆ ಬೆಳೆಸಿದ ಸಂವಾದವು ಇಲ್ಲಿ ವರ್ಣಿತವಾಗಿದೆ. ಈ ಮೂಲ ಕಲ್ಪನೆಗಾಗಿ ಉದಾಹರಣೆಗಳೆಂದು ಸಾಮಾಜಿಕ ಇಲ್ಲವೆ ವೈಯಕ್ತಿಕ ಜೀವನದಿಂದ ಕೆಲವು ಸನ್ನಿವೇಶಗಳನ್ನು ಆಯ್ದು ಕೊಂಡಿದೆ; ಇಷ್ಟೆ. ಮೊದಲನೆಯ ಭಾಗದಲ್ಲಿ ಸಂವಾದವು ಸಾಮಾಜಿಕ ಜೀವನದಿಂದ ಪ್ರಾರಂಭವಾಗಿ ವೈಯ್ಯಕ್ತಿಕ ಜೀವನಪ್ರಾಂತವನ್ನು ಪ್ರವೇಶಿಸುವದು. ಎರಡನೆಯ ಭಾಗದಲ್ಲಿ ಶಕ್ತಿಯು ಹೇಗೆ ಪ್ರತಿಕೂಲವಾಗಬಹುದೆಂಬುದನ್ನು ವ್ಯಕ್ತಿಯು ತನ್ನ ಅನುಭವದ ಮೇಲಿಂದ ಬಣ್ಣಿಸುತ್ತಾನೆ. ಮೂರನೆಯ ಭಾಗದಲ್ಲಿಯ ಸನ್ನಿವೇಶವು ಕೇವಲ ಸಮಾಜಿಕವಾಗಿದೆ.
ಸಂವಾದಾತ್ಮಕವಾದ ಈ ಗೀತೆಯನ್ನು ಬರೆಯುವಾಗ ಟಿನಿಸನ್ ಕವಿಯ ‘The Two Voices’ (ಎರಡು ಧ್ವನಿಗಳು) ಹಾಗು ಬೇಂದ್ರೆಯವರ ‘ಕನಸಿನಲ್ಲೊಂದು ಕಣಸಿ’ನ ರಚನಾಪದ್ಯತಿಯು ನನ್ನ ಮನಸ್ಸಿನಲ್ಲಿದ್ದಿತು.
ಸ್ವತಃ ನನಗೆ ಮೊದಲನೆಯ ಭಾಗದಲ್ಲಿ ಶಕ್ತಿಯು ಹೇಳುವ ಕೊನೆಯ ಮಾತುಗಳೂ ಎರಡನೆಯ ಭಾಗದಲ್ಲಿ ಅನೇಕ ಸಾಲುಗಳೂ ರಮ್ಯವಾಗಿವೆಯೆಂದೆನಿಸಿದೆ. ಈ ಕವಿತೆಯನ್ನು ಬರೆದಾಗ ನನ್ನ ಶೈಲಿಯು ಇನ್ನೂ ಅಷ್ಟೊ೦ದು ಸಮನಾಗಿ ಪಾಕಕ್ಕೆ ಇಳಿದಿರಲಿಲ್ಲ. ಆದಷ್ಟು ಮಟ್ಟಿಗೆ ಅಲ್ಲಲ್ಲಿ ತಿದ್ದಿದ್ದೇನೆ. ಇದು ಜಯಕರ್ಣಾಟಕದಲ್ಲಿ ಅಚ್ಚಾದಾಗ ಕೆಲವು ಜನ ಮಹನೀಯರು ಮನಸಾರೆ ನನ್ನನ್ನು ಅಭಿನಂದಿಸಿದರು. ಆದರೆ ಒಬ್ಬಿಬ್ಬ ಗೆಳೆಯರು ಈ ಹೊಸ ಸಂಗ್ರಹದಲ್ಲಿ ಮುದ್ರಿಸಲು ‘ಸೆಳವು’ ಯೋಗ್ಯವಾಗಿಲ್ಲೆಂದು ಅಭಿಪ್ರಾಯಪಟ್ಟರು. ಈ ಮಾತೆಲ್ಲ ನಿರ್ಣಯವಾಗಲೆಂದೇ ಇದನ್ನು ಜನತೆಯ ಮುಂದಿಟ್ಟಿದ್ದೇನೆ.
ಪುಣೆ
೧೦-೧೧-೩೪ ವಿನಾಯಕ
ಸೆಳವು
(ಶಕ್ತಿ ವ್ಯಕ್ತಿಗಳ ಸಂಘರ್ಷದ ಒಂದು ಕವಿತೆ)
ಭಾಗ ೧
ಶಕ್ತಿ:
ಚಂಡ ಪ್ರಚಂಡ ತಾಂಡವವು ನಡೆದಿಹುದು;
ಅಂಡಜನ ಸೃಷ್ಟಿಯೇ ತಡವರಿಸುತಿಹುದು!
ವ್ಯಕ್ತಿ:
ಆವ! ನೀನಾವ! ನನ್ನನು ಕಾವ ದೇವ?
ರುದ್ರರೂಪವ ತಳೆದಿತೇ ನಿನ್ನ ಭಾವ?
ಶಕ್ತಿ:
ಛಿನ್ನ ವಿಚ್ಛಿನ್ನಲೋಕದ ಮೃತ್ಯು ನಾನು;
ಬಿನ್ನಹದ ಬಿನ್ನಾಣ ನಿನ್ನಲ್ಲಿದೇನು?
ವ್ಯಕ್ತಿ:
ಅಲ್ಲ! ಬಿನ್ನಹವಲ್ಲವಿದು ಅಮಿತ ಶಕ್ತಿ!
ಸಲ್ಲದೆನಗೀಗ ನಿನ್ನಲ್ಲಿ ಅನುರಕ್ತಿ!
ನೀನೇನಿರುವೆ ಹೇಳಿ ನೀ ಮುಂದೆ ಸಾಗು;
ನನಗೆ ಬೇಸರವಿಹುದು ಈ ನಿನ್ನ ಸೋಗು.
ಶಕ್ತಿ:
ಜನತೆಯನು ಜೀವರಂಗದಿ ಕುಣಿಸುತಿಹೆನು;
ವನಿತೆಯರ ನೋಟದಿಂದವರ ಮಣಿಸುವೆನು.
ಅವರ ಭಾಗ್ಯೋದಯದ ರವಿ ಚಂದ್ರ ನಾನು;
ಅವರ ದುರ್ಭಾಗ್ಯಕಿರುತಿಹ ರಾಹು ನಾನು!
ವ್ಯಕ್ತಿ:
ಅರಿತೆ ನಿನ್ನಯ ಬಲವ ಘನಘೋರ ಶಕ್ತಿ!
ಇನ್ನು ನನ್ನಯ ವಿಮೋಚನೆಗೇನು ಯುಕ್ತಿ?
ಶಕ್ತಿ:
ಜನರು ಪೂಜಿಸುವ ಹನುಮಂತ ನಾನಹುದು;
ನನ್ನಿಂದ ಅವರಿಗತಿಯಾದ ಬಲವಿಹುದು
ವಿಧಿಲಿಖಿತಜನ್ಯದುಃಖದ ದೂರು ಕೇಳಿ
ಮೊರೆಯಿಡುವ ಮಾನವರ ಅಭಿಮಾನ ತಾಳಿ
ತುಸುವಾದರೂ ಕಳೆವೆನವರ ಕ್ಲೇಶವನು;
ಶಿಥಿಲಗೆಯ್ವೆನು ಅವರನೆಳೆವ ಪಾಶವನು.
ಕೇರಿಕೇರಿಯ ಗುಡಿಗಳಲಿ ದುರ್ಗೆಯಾಗಿ
ವಾಸಿಸುವೆನವರ ಭದ್ರತೆಗೆಂದು ಹೋಗಿ.
ಹಳ್ಳಿ ಪಳ್ಳಿಯ ಜನರು ಆನಂದದಿಂದ
ಪೂಜಿಸುವರೆನ್ನ ನತಿ ಭಯಭಕ್ತಿಯಿಂದ!
ನಗರವಾಸಿಗಳೆನ್ನ ಮೆರವಣಿಗೆ ತೆಗೆದು
ಮನ್ನಿಸುವರೆನ್ನ ನಾ ಬೇಕೆಂದು ಬಗೆದು!
ಶಕ್ತಿ:
ಮೂಢ ಚೈತನ್ಯವೇ! ನೀನೆನಗೆ ಬೇಡ!
ಬಲ್ಲೆನೀ ಬಲೆಯಲ್ಲಿ ಸಿಕ್ಕವನ ಪಾಡ!
ಗಾವಿಲರ ಗುರುವಾಗಿ ಮೆರೆಯುತಿಹೆ ನೀನು;
ನಿನಗೆ ಮತ್ತೆಲ್ಲಿ ಮನ್ನಣೆ ಸಿಕ್ಕದೇನು?
ಶಕ್ತಿ:
ಸಿರಿಯೆಂದು ಧ್ಯಾನಿಪರು ಶ್ರೀಮಂತರಿಹರು;
ಸರಸತಿಯ ಕಾಂಬುವರು ಧೀಮಂತರಿಹರು.
ನಿನ್ನೆ ಸಾಕುವು ತಾನೆ ಅರಸಾಗಲಿಲ್ಲೆ?
ಮೊನ್ನೆ ರಸಿಯದ ಝಾರ ತಾ ಜಾರಲಿಲ್ಲೆ?
ಇದು ಎಲ್ಲ ನಾನು ಹೂಡಿರುವಾಟವು;
ಇದು ನನ್ನ ಮಂತ್ರ ಮಾಡಿದ ಮಾಟವು!
ದೇಶದೇಶಗಳಿಗಿಹ ದಿಗ್ವಿಜಯ ನಾನು;
ರಾಜ್ಯಗಳಿಗಿಹ ಧೂಮಕೇತುವೇ ನಾನು;
ಭಾಷೆಭಾಷೆಗಳಲಿಹ ಒಳಜಗಳ ನಾನು!
ಪಿಂಡಾರಿಗಳು ಇತ್ತರೆನಗೆ ಮನ್ನಣೆಯ;
ಆಂಗ್ಲೇಯರೀವರೀಗೆನಗೆ ಕಾಣಿಕೆಯ;
ನಾನಿತ್ತೆ ರಸಿಯರಿಗೆ ಅವರ ಹೂಣಿಕೆಯ!
ಜೀವಿಸಲು ನೀ ಬಾಗು; ನನ್ನೆದುರು ಬಾಗು!
ಇಲ್ಲದಿದ್ದರೆ ಹೋಗು; ಪ್ರಾಣವನು ನೀಗು!
ವ್ಯಕ್ತಿ:
ಆರು ನೀನೆಲೆ ಶಕ್ತಿ! ಇಂತು ಬಲುಮೆಯನು
ಮಾಡುತಿಹೆ ಪಡೆಯುವದಕೆನ್ನ ಒಲುಮೆಯನು?
ವ್ಯಕ್ತಿ ಸಮುದಾಯವೇ ರಾಜ್ಯ, ಸಾಮ್ರಾಜ್ಯ;
ಅಂದ ಮೇಲೆಂತು ಸರಿಯಿದು ನಿನ್ನ ವ್ಯಾಜ್ಯ?
ನಾವು ಮಾಡಿದುದನ್ನೆ ರಾಜ್ಯ ಮಾಡುವದು;
ನಾವು ಹಾಡಿದುದನ್ನೆ ದೇಶ ಹಾಡುವದು;
ದೇಶಕ್ಕೆ ಕೇಡಾದ ಅರಸನೀಡಾದ
ಮರಣದೆಳತಕ್ಕೆ! ನಾವ್ ನಮಗೆ ಬೇಡಾದ
ಮಾರ್ಗವನು ತಿಳಿದರೂ ಏಕೆ ತುಳಿಯುವೆವು?
ವ್ಯಕ್ತಿಸ್ವಾತಂತ್ರ್ಯವಿದೆ; ಹೇಗೆ ಅಳಿಯುವೆವು?
ಶಕ್ತಿ:
ಹಾಗಲ್ಲ! ಕೆಚ್ಚೆದೆಯ ಕನ್ನಡಿಗ ವೀರ!
ಅರಿತೆ ನಿಚ್ಚಳವಾಗಿ; ನೀನಹುದು ಧೀರ,
ಆದರೀ ಸ್ವಾತಂತ್ರ್ಯ ಮಾನವನಿಗಿಹುದೆ?
ಈ ತರಹದಪರಿಮಿಂತ ಶಕ್ತಿ ಅವಗಿಹುದೆ?
ನನ್ನ ಬಲೆಯಲಿ ಸಿಕ್ಕು ಬಿದ್ದ ಮಾನವನು
ನಿರುಪಾಯನಾಗಿ ಬಳಲುವನು; ಸಾಯುವನು!
ನಿತ್ಯವಿಹುದವಗೆ ಈ ಗೂಗೆಗಳ ಶಕುನ,
ಹಲ್ಲಿಗಳ ಸ್ವರವು, ಕಾಗೆಗಳ ಅಪಶಕುನ,
ಹುಚ್ಚು ಹಿಡಿಸುವ ಶಕ್ತಿ ಔಷಧದಲಿಹುದು;
ನನ್ನ ಅದ್ಭುತ ಮಂತ್ರ ತಂತ್ರಗಳಲಿಹುದು,
ನಾನು ಹೇಳಿದ ಹಾಗೆ ದೆವ್ವ ಕುಣಿಯುವದು;
ನನ್ನೆದುರು ಪೈಶಾಚಗಣವು ಮಣಿಯವದು.
ಇವು ಎಲ್ಲಿ ಮಾನವಗೆ ರಿಪು ಸೈನ್ಯವಲ್ಲೆ?
ನರಜನ್ಮವೆಂದಿಗೂ ನನ್ನ ಸೆರೆಯಲ್ಲೆ?
ಮಾರೆಮ್ಮ ತರುವ ತರತರದ ಬೇನೆಗಳು
ನನ್ನವಿವೆ. ಮುಂದೆ ಬರಲಿರುವ ಸೇನೆಗಳು
ನನ್ನವೇ! ಮತ್ತೆನ್ನ ಮೋಡಿಯ ತುತೂರಿ
ಘೋಷಿಸಲು ಆಗುವದು ನರಜನ್ಮ ಸೂರಿ!
ನನಗೆಲ್ಲ ತುತ್ತಾಗಿ, ಸಂಘಟನೆಯಾಗಿ.
ಹೋಗುವದು ನಿಮ್ಮ ಜಗವೆಲ್ಲ ಬಯಲಾಗಿ!
ಯಾವ ಕ್ಷಣದಲಿ ನಿನಗೆ ಸಾವೆಂಬುದರಿಯೆ;
ಇಂತಿರ್ದು ನೀನು ಆರ್ಭಟಿಸುವದು ಸರಿಯೆ?
ನನ್ನ ವಾಣಿಯ ವೀಣೆ ನುಡಿಯುತಿಹುದು;
ಅದರಿಂದ ನಿನ್ನಾಟ ನಡೆಯುತಿಹುದು!
ವಶವಾಗು ನನಗಿಂದು ಇದನ್ನೆಲ್ಲ ತಿಳಿದು;
ಬಾರಯ್ಯ! ನನ್ನೆಡೆಗೆ ಅಭಿಮಾನವಳಿದು.
ಆ ಬಳಿಕ ನಿನಗೀವೆ ಸುಖವ ಸಂಪದವ,
ತೊಳೆ ನನ್ನ ಪಾದಗಳ ತ್ಯಜಿಸುತ್ತ ಮದವ!
ವ್ಯಕ್ತಿ:
ಹಾಗಲ್ಲ ಶಕ್ತಿಯೇ! ಇನಿತು ತೊಂದರೆಯ
ಸಹಿಸಿ ನುಸುಳಲು ಬೇಕೆ ಈ ನಿನ್ನ ಸೆರೆಯ?
ಎಲ್ಲ ಅಣುಗಳ ಕೂಡ ಒಂದು ಅಣುವಾಗಿ
ನನ್ನ ಜೀವನವೆಲ್ಲ ನಿನ್ನ ಋುಣವಾಗಿ
ನಾನಿರಲು ನಿನ್ನ ಐಸಿರಿಯೇಕತಹುದು?
ಕುರಿಯ ಜನ್ಮಕದೆಂತು ಬೇಸರಿಯಬಹುದು?
ಸುಖದ ಸಂಪತ್ತಿಹುದು ಘನತರ ವಿಪತ್ತು
ನಾನಿರಲು ನಿನ್ನ ಕಟ್ಟಾಣತಿಗೆ ತುತ್ತು.
ಶಕ್ತಿ:
ತಿಳಿಯಿತೆನಗೀಗೆಲೆವೊ! ನಿನ್ನ ಒಳಸಂಚು;
ಈ ಕಲ್ಪನೆಯು ಕ್ಷಣಿಕವಿಹ ಮಿಂಚಿನಂಚು!
ನನ್ನನರಿಯದರು ದುರ್ಭಾಗ್ಯರಿರುತಿಹರು;
ನನ್ನನರಿತವರೆಲ್ಲ ಸಿರಿವಂತರಿಹರು;
ನನ್ನ ವಂಚಿಸುವವರು ಹಂಚಿ ಹೋಗುವರು!
ನಾನು ಕವಿಪುಂಗವನ ಕವಿವಂಥ ಮೋಡ;
ಈ ದುರಾಗ್ರಹವೆಂದಿಗೂ ನಿನಗೆ ಬೇಡ;
ನೀನಿನ್ನು ಅರಿತಿಲ್ಲವೆಲೇ! ಇದರ ಪಾಡ!
ದಾರಿದ್ರ್ಯದುರಿಯಲ್ಲಿ ನಾನಿನ್ನ ಸುಡುವೆ.
ಘೋರ ಯಾತನೆಗಳಲಿ ನಿನ್ನ ಕೊಳೆಯಿಡುವೆ!
ಸರ್ವಧಾ ಬೇಡಯ್ಯ! ನಂಜಿನ ಪರೀಕ್ಷೆ;
ಸಾಕು ಮಾಡಿನ್ನು, ಹಿಡಿ ಈ ನನ್ನ ದೀಕ್ಷೆ!
ವ್ಯಕ್ತಿ:
ಸಿರಿಯೇನು ಹಿರಿದಲ್ಲ ಹೋಗೆಲವೊ! ಶಕ್ತಿ!
ಅರಿತೆನಡಿಯಾಗಿಂದು ನಿನ್ನೀ ಕುಯುಕ್ತಿ.
ಸಿರಿಯು ಇರಬಹುದು ಇಲ್ಲದೆಯೇ ಇರಬಹುದು;
ಸತ್ಯಜೀವನವೊಂದೆ ತಾ ನಿತ್ಯವಿಹುದು.
ಪೂರ್ಣಯೋಗದ ಗುರಿಯೆ ನಿಜವಾದ ಗುರಿಯು;
ಅದಕೆ ಬೆಂಬಲವಾಗಿ ಇಹುದಿಹದ ಸಿರಿಯು.
ಸಿರಿಯ ಸೆರೆಯಾಳಾಗಿ ನಾನಿರಲು ಒಲ್ಲೆ,
ನಿನ್ನ ಸಂಪರ್ಕವಿಲ್ಲದೆ ಇರಲು ಬಲ್ಲೆ!
ಶಕ್ತಿ:
ಅಲ್ಲವೋ! ಹವೆಯಂತೆ ನಾ ಸರ್ವವ್ಯಾಪಿ!
ನನಗೆ ಶರಣಾಗದಿಹ ನರನೆಂಥ ಪಾಪಿ!
ನಿನಗಿನ್ನು ಈ ಜಗದ ಅನುಭವವ ಕೊಡುವೆ;
ಭವ್ಯ ಭವಸಾಗರದಿ ಬಿಡುವೆ! ನಿನ್ನೀಸು
ತೋರಿಸುವೆನೆಲೆ! ಖಂಡಖಂಡಗಳ ಚೆಲುವ,
ಪ್ರಕೃತಿ ಸೌಂದರ್ಯವನು; ಪಡೆಯನ್ನ ಒಲವ!
ಮುನ್ನೀರಿನಾಳವನು ನೀನು ಅರಿತಿಲ್ಲ
ಭಿನ್ನ ಕಲ್ಪನೆಗಳಲಿ ಇನ್ನು ಬೆರೆತಿಲ್ಲ.
ನಿನಗೆ ಮೆರೆವಾಂಗ್ಲದೇಶದ ಚೆಲುವ ತೋರಿ
ಅಲ್ಲಿ ಸಾರುವೆನಂತೆ ನಿನ್ನ ಜಯಭೇರಿ!
ಆಂಗ್ಲ ನುಡಿಗಿರುವ ಮಾಂಗಲ್ಯವನು ನೋಡಿ
ಬರುವಿಯಂತೆಲವೊ! ಮಗು! ನೀ ಕುಣಿದು ಹಾಡಿ!
ಸೃಷ್ಠಿ ಕರ್ತನ ಎಲ್ಲ ಮಿರುಗು ಬೆರಗು
ನೋಡಿದೊಡೆ, ಕಾಣುವದು ತಾಯ ಸೆರಗು.
ಈ ನಿನ್ನ ಕೂಪದಲಿ ಮೂರು ಚಿಕ್ಕೆಗಳು;
ಮುಗಿಲ ಮೇಲ್ತೋರ್ವವೀ ತೆರದ ರೆಕ್ಕೆಗಳು
ವ್ಯಕ್ತಿ:
ಬೇಡಯ್ಯ! ನನಗಾಂಗ್ಲ ನಾಡಿನಾ ಹಾಡು!
ಸಾಕಿಹುದು ನನಗೆ ಈ ನಮ್ಮ ತಾಯ್ನಾಡು.
ಪ್ರಕೃತಿದೇವಿಯ ಜೆಲುವು ಎಲ್ಲಕಡೆಗೊಂದೆ;
ಅದಕಂತೆ ನೀನಾದರೂ ಇಲ್ಲಿ ಬಂದೆ!
ಎಲ್ಲಿಯೂ ಅವಳ ವರಕುಸುಮಗಳ ಗಂಧ;
ಎಲ್ಲಿಯೂ ಅವಳ ಆ ಗುಣ ರೂಪದಂದ!
ನಾ ತಿರುಗಲಾರೆ ಮನೆ ಮನೆ ನಿನ್ನನರಸಿ,
ಸಾಧಕನೆ ಇರಲು ಎಲ್ಲಿರಲೇನು ಹೇಳು?
ಬಾಧೆಯನು ತರಲಾರದವಗಾವ ಗೋಳು.
ಆಕಾಂಕ್ಷೆಗಳಿಗೇನು ಸೀಮೆಯಿದೆಯೆ?
ಅವಳೆ ವಶವಾದವಗೆ ಶಾಂತಿಯಿದೆಯೆ?
ಶಕ್ತಿ:
ನಕ್ಷತ್ರದಂತೆ ಹೊಳೆ ಹೊಳೆವಂಥ ಲಲನೆ,
ಅಕ್ಷಯ್ಯವಾಗಿರುವ ಮೃದುಹಾಸವದನೆ,
ಕಂಗೊಳಿಪುದವಳಿಂದ ನಿನ್ನರಮನೆ!
ಶಾಂತಿಯಹುದವಳೋರ್ವಳೀ ನಿನ್ನ ಮನಕೆ;
ಕಾಂತಿಯಹುದವಳೋರ್ವಳೀ ಈ ನಿನ್ನ ಬನಕೆ;
ನಿನ್ನ ಕಲ್ಪನೆಯೊರೆದ ನವ ಚೈತ್ರವನಕೆ!
ಆಗಸದ ಕುಂಕುಮರಿಶಿಣವಿರುವ ರವಿಯು,
ನಿಶೆಯ ನಿಶಿಯಲಿ ನಿಂತು ನಟಿಸುತಿಹ ಕವಿಯು,
ಅವಳೆಂದಿಗೂ ನಿನ್ನ ಜೀವನದ ಸವಿಯು!
ನಿನ್ನಾತುಮಕೆ ಬುದ್ಧಿ ಮನಪ್ರಾಣಗಳಿಗೆ
ಬಂದ ವೇದನೆಯುಸಿರು ನಿನ್ನ ಅರಗಿಳಿಗೆ!
ವ್ಯಕ್ತಿ:
ಬೇಡ! ನಿನ್ನುಸಿರೆನಗೆ ಸಾವೆಲ್ಲವೊ! ಕೇಳು,
ಇಂಥ ಹ೦ಬಲವೆಲ್ಲ ನನಗೆ ಬರಿಗೋಳು.
ತಾಯ್ ತಂದೆಗಳ ತೊರೆದು ಅವರೊಲವ ತ್ಯಜಿಸಿ
ಹೊಸದಾಗಿ ಒಂದು ಹೊಸ ಸೃಷ್ಟಿಯನೆ ಸೃಜಿಸಿ
ಅವಳನ್ನು ಅದರೊಡತಿಯನ್ನಾಗಿ ಮಾಡಿ
ಇರಲಾರೆ ನಿಂತಕಟ! ನಾ ಕಾಡಿ ಬೇಡಿ!
ದೇವ ತಾನಾಗಿತ್ತ ಕುಲತಿಲೋತ್ತಮೆಯು
ಆಗಲಾರಳೆ ನನ್ನ ಐಸಿರಿಯ ರಮೆಯು?
ನೀನು ರತುನವನಿತ್ತರೂ ಕರುಣಿಸೆನಗೆ
ಅದಕೆ ಸರಿಯಾದುಂಗುರವು ದೊರೆಯದೆನಗೆ,
ನಿನಗೆ ಶರಣೆಂದು ಇಹಸಿರಿಯನ್ನು ತಂದು
ಕಳೆದುಕೊಳಲಾರೆನೆಲೆ! ಒಳತಿರುಳನಿಂದು!
ನನ್ನ ತೃಷೆಗನುಸರಿಸಿ ನನಗೀವನವನು;
ಉಲ್ಲಂಘಿಸುವದೆಂತು ದೇವನಾಜ್ಞೆಯನು?
ಶಕ್ತಿ:
ದೇವನೆಲ್ಲಿಯ ದೇವನೆಲೆ ಮೂಢ ಕೇಳು!
ಇ೦ಥ ನಂಬುಗೆಯಿ೦ದ ನಿಮ್ಮ ಮನೆ ಹಾಳು.
ನಿನ್ನ ಭಾಗ್ಯವು ನಿನ್ನ ಕೈಯಲಿರುತಿಹುದು.
ನೀನು ಮಾಡಿದುದನ್ನೆ ವಿಧಿಯು ಮಾಡುವದು.
ಸಮರದಲಿ ಕಾಲ್ದೆಗೆಯಬೇಡೆಲ್ಲವೊ! ಚೆನ್ನ!
ನಿನ್ನ ಕವಚವೆ ನಾನು; ಬಿಡೆ ನಿನ್ನ ಬೆನ್ನ!
ಮುಂದರಿವುದಕೆ ನಿನ ಕನಸುಗಳನೀವೆ,
ಸುರರ ಶಿರದಲಿ ಮೆರೆವಲಿಚ್ಛಿಸುವ ಹೂವೆ!
ನಿಶೆಯೆ ರೆಕ್ಕೆಗಳಾಗಿ ದಿಶೆಗಳಕ್ಕರೆಯಾಗಿ
ಹಗಲೆ ಹೃದಯದಿ ಬೆಳೆಗುತಿಹ ಕರುಣೆಯಾಗಿ
ಸಾಗುವಂತಹ ಜೀವಿಗಳ ದಿವ್ಯದೇಶ
ಮಾನವನ ಪ್ರೇರಣೆಯ ವಿಮಲತೆಯ ಕೋಶ!
ಆ ನಾಡಿನಲಿ ನಿನ್ನ ಕರೆದೊಯ್ದು ಬಿಡುವೆ;
ಅದರ ಮುಗಿಲಲಿ ತೇಲ್ವ ಕನಸುಗಳ ಕೊಡುವೆ!
ಕಿನ್ನರರ ರಂಭೆಯರ ಕಿನ್ನರಿಯರ,
ಕಿನ್ನರಿಯ ನುಡಿಸುತಿಹ ಸುಂದರಿಯರ,
ಚದರೆಯರು ಕೊಟ್ಟ ಮದಿರೆಯ ಕಡಿದು ಕುಣಿದು
ಕನಸುಗುದುರೆಗಳನ್ನು ಓಡಿಸುತ ದಣಿದು
ಲೀಲಾವಿಲೋಲರಿಹ ಎಳೆಯ ಬಾಲಕರ,
ಕೋಲುನವಿಲಾಟಗಳಲಿಹ ಬಾಲಕಿಯರ,
ಕುಂದದಲೆ ಕಂದದಲೆ ಮೆರೆವ ಕುಸುಮಗಳ
ನಂದದಲೆ ಬೆಳಗುತಿಹ ಅಂದ ಜ್ಯೋತಿಗಳ
ನಾಡಿಗರಸಾಗಿ ಮಾಡುವೆ ನಿನ್ನ ಚೆನ್ನ!
ನಿನ್ನ ಕವಚವೆ ನಾನು; ಬಿಡೆ ನಿನ್ನ ಬೆನ್ನ!
ವ್ಯಕ್ತಿ:
ಸಾಕೆನಗೆ ಈ ನಿನ್ನ ಒಣರಗಳೆ ಶಕ್ತಿ!
ಅರಿತೆನಿಡಿಯಾಗಿಂದು ನಿನ್ನೀ ಕುಯುಕ್ತಿ!
ಕನಸುಗಳ ಸಿರಿಯರಸ ನಾನು, ನೀನಲ್ಲ;
ನನ್ನಾಸೆಗಳನೆಲ್ಲ ದೇವ ತಾ ಬಲ್ಲ!
ಹಂಬಲಿಸಿ ಕನಸುಗಳ ಜೀವನಕೆ ಸೋತು
ನಿನ್ನ ಹಿಂಬಾಲಿಸಲು ನೀನೊರೆವ ಮಾತು
ಸಲ್ಲದದು! ಈ ಸಾವ ನೋವನ್ನ ಸಹಿಸಿ
ಕೊಲ್ಲುತಿಹ ಆಶೆಗಳನೆಲ್ಲ ಸಲೆ ದಹಿಸಿ
ನಾನು ಜೀವಿಸಲು ಕೊಡುವವನಿರುವ ದೇವ!
ಅವನಿತ್ತ ಒಂದು ಕನಸಿನ ದಿವ್ಯಭಾವ
ನೀನೀವ ಕನಸುಗಳನೆಲ್ಲ ಮೀರಿಹುದು.
ಏಕಾಂಗಿಯಾಗಿ ಸತ್ಯವನು ಸಾರಿಹುದು.
ತಾಳ್ಮೆಯಂತಹ ಶಕ್ತಿ ಇನ್ನಾವುದಿಲ್ಲ,
ನಿಜವನರಿತೆನು ಆಲಿಸೆನು ನಿನ್ನ ಸೊಲ್ಲ!
ನಾನೆತ್ತಿ ಹಿಡಿಯೆ ಈ ರತ್ನವಿಹ ಹೆಡೆಯು
ಆಗುವದು ವಿಶ್ವ ವಿಶ್ವಕ್ಕೆಲ್ಲ ಕೊಡೆಯು!
ನನ್ನಾತ್ಮದುನ್ನತಿಯು ನನ್ನದಿಹುದು;
ಕೇಳಿನ್ನು ಶಕ್ತಿ! ನೀ ಸಾಗಬಹುದು!
xxx
ಕೋಪಗೊಂಡಾ ಶಕ್ತಿ ಅಣಕಿಸುವ ನಗೆಯ
ನಕ್ಕು ನಿಂತಿತು, ಇದನು ನನ್ನ ಕಡು ಹಗೆಯ
ಮಾಡಿದೆನು ಎಂದು ನಾ ಕಳವಳಿಸುವಲ್ಲಿ
ರೂಪಗೊಂಡಾ ಶಕ್ತಿ ನಿಜರೂಪ ಚೆಲ್ಲಿ
ಮಂಜಿನಂತೆಲ್ಲ ದಿಶೆಗಳನು ವ್ಯಾಪಿಸಿತು.
ಉಷೆಯ ಚಿನ್ಹವ ಮುತ್ತಿ ಮತ್ತೆ ಕೋಪಿಸಿತು!
ದುಗುಡದಲಿ ನಡೆದೆ ನಾನೆನ್ನ ಮನೆಗೆ,
ಅಕಟ! ಚಿಂತೆಯು ತಪ್ಪಲಿಲ್ಲ ಕೊನೆಗೆ!
ಭಾಗ ೨
ವ್ಯಕ್ತಿ:
ಇಹಳೊರ್ವ ಯುವತಿ; ನನಗಿಹ ಪ್ರಾಣ!
ಆಚ್ಚರಿಯಿದಲೆ! ಅವಳ ರೂಪ ನಿರ್ಮಾಣ
ಯಾವ ದೇವನ ಕೃತಿಯೊ ಆ ದೇವನಹುದು
ಸತ್ಯ! ನಿತ್ಯವು ನಾನವಗೆ ನಮಿಸಬಹುದು.
ಅವನಿತ್ತ ಹೂವ ಪರಿಮಳದಂತೆ ಅವನಿತ್ತ
ಒಂದು ಕನಸಿನ ದಿವ್ಯಭಾವದಂತವನಿತ್ತ
ಚಿನ್ಮಯಾನಂದಂತೆಯೆ ಇದ್ದಳವಳು.
ನಿತ್ಯವೂ ಆ ಲಲನೆ ಹೊಳೆಹೊಳೆಯುತಿಹಳು!
ಇಂಧ ಲಲನೆಯ ಕೂಡ ಕೆಳೆವಾತನಾಡಿ
ನಕ್ಕು ನಿಲಲವಳೆನ್ನ ಸಂತಸದಿ ನೋಡಿ
ನಗುತ ಕಲೆಯುತ ಬಂದಳೆನ್ನ ಮನೆಗೆ;
ನೆಲೆಯಿಲ್ಲದಾನಂದವಾಯಿತೆನಗೆ!
ಸಾವಿಗಿಹ ಮೇವೆಂದು ಜೀವರ೦ಗದಿ ಬಂದು
ಸಹಿಸಲಾರದ ನೋವುಗಳ ಸಹಿಸಿ ಬಲು ನೊಂದು
ಒಲ್ಲೆನೆಂದಳುತಳುತ ನರಜನ್ಮವೆತ್ತಿ
ಮೂರು ಮೂವತ್ತು ಕೋಟಿಯ ತೆರಿಗೆ ತೆತ್ತಿ
ಆಕ್ರೋಶಿಸುತ್ತಿರುವ ಮಾನವನ ಕೋಟಿ,-
ಎ೦ತು ಬರುವದು ಇದರ ಉದ್ದಳತೆ ದಾಟಿ
ಈ ಹೊನ್ನ ಹುಳಕೆ ಆ ಚಿನ್ಮಯ ಚೆಲುವು?
ಈ ದ್ವೇಷದೂಷಣೆಗೆ ಆ ಕೃಷ್ಣನೊಲವು?
ಇಂಥ ಸೊಬಗನು ತಳೆದ ಸು೦ದರಿಯರಿಂದಲ್ತೆ?
ಇಂಥ ಸುಕುಮಾರಿಯರ ನಿಜ ಪ್ರೇಮದಿಂದಲ್ತೆ!
ಹೀಗಿರಲು ನನ್ನ ಸ್ವರ್ಗದ ಸಿರಿಯ ಹೊಕ್ಕು
ಅಕಟ! ಬಂದಿತು ಶಕ್ತಿ! ಗಹಗಹಿಸಿ ನಕ್ಕು:
“ಎಲೆಮೂಢ! ತಿಳಿಯದಲೆ ನೀನೊಸೆದೆಯಿಂದು!
ಕಣ್ತೆರೆದು ಕುಳಿತೆ ಸಿಗಲೆಂದು ಪೂರ್ಣೇಂದು!
ಇಂಥ ಚಾರುವಿಚಾರಿಗಳೇನಕರಿಹರು;
ನಿನ್ನಂತೆಯೇ ಅವರು ಕ್ಲೇಶಪಡುತಿಹರು.
ನನಗೆ ಶರಣಾದವರ ಸಾಲ್ಗೆ ಶರಣೆಂದು
ನಿಂದುದರ ಪ್ರತಿಫಘಲವ ನೀ ಭೋಗಿಸಿಂದು!”
ಹೀಗೆ೦ದು ಒಂದು ವಿಷವಾಕ್ಯವನು ನುಡಿದು
ಹೋಯಿತೆನ್ನಯ ಪ್ರೇಮದಂಕುರವ ಕಡಿದು.
ಆ ಲಲನೆ ಯಿರುತಿಹಳು; ಇಹುದವಳ ರೂಪ;
ಆದರೀಗವಳನ್ನು ನೋಡುವದು ಪಾಪ!
ಒಮ್ಮೆ ಬಯಕೆಯು ಮನವ ಮೀರಿ ನೋಡಿದರೂ
ಅವಳ ದೈವಿಕ ರೂಪವಳಿಸಿ ಹೋಗಿಹುದು!
ಭಾಗ ೩
ವ್ಯಕ್ತಿ:
ನನಗೆ ಪ್ರಿಯತಮವಾದ ವಸ್ತುಗಳ ತಗೆದು
ಮಾಣಿಕ್ಯವನು ಕೋತಿಗೊಗೆವಂತೆ ಒಗೆದು
ನನ್ನ ಸುಖವನ್ನೆಲ್ಲ ವಾಯುವಿಗೆ ತೂರಿ
ಸನ್ನ೦ತರಂಗವನು ಸೂರ್ಯನಿಗೆ ತೋರಿ
ನಿಂತಿರುವೆ! ದಿಶೆದಿಶೆಗಳಲ್ಲಿ ನಿನ್ನ ಯಾನ!
ಮಾನವನು ನಿನ್ನುದಧಿಯಲ್ಲಿರುವ ಮೀನ!
ಎಲೆ ಶಕ್ತಿ! ನಿನಗೆ ಭಾಗ್ಯವನಿತ್ತರಾರು?
ರಾಜ್ಯಸೂತ್ರಗಳನ್ನು ಅರ್ಪಿಸಿದರಾರು?
ಶಕ್ತಿ:
ನಾನರಿಯೆ; ಈ ಗೂಢವೆಲ್ಲ ನನಗರಿದು.
ಅದರ ಮರ್ಮವನೊಂದೆ ಮಾತ್ರ ನಾ ಮರೆದು
ಇರುವೆ ಮದ್ದಾನೆ, ಇಂದ್ರನ ಲೋಕದಾನೆ!
ನನ್ನನ್ನು ಪ್ರಶ್ನಿಸುವರಾರಿಹರು ತಾನೆ?
ನಾನು ಕಾಲೆತ್ತಿದೊಡೆ ಪದುಮಗಳು ಉಡುಗಿ,
ನಾನು ಕಣ್ಣೆತ್ತಿದೊಡೆ ತಾರೆಗಳು ನಡುಗಿ
ಜಲದಲ್ಲಿ ಆಕಾಶದಲ್ಲಿ ಅಡಗುವವು!
ಕರುಣೆ ತೋರೆಂದೆನಗೆ ಮೊರೆಯನಿಡುತಿಹವು.
ನನ್ನೆದುರು ಮೈಮಣಿಯದಂಧವನು ನೀನು
ಈ ನನ್ನ ಹಿರಿಯತನವನು ಮರೆತೆಯೇನು?
ಅಲ್ಲವೋ! ನೀನು ಮದ್ದಾನೆ; ಇದು ಸರಿಯೆ
ಆದರದಕೊರ್ವ ಮಾವುತರಿರುವದರಿಯೆ!
ಅವನ ಅಂಕುಶಕೆ ನೀ ಗೆಯ್ವ ಚೀತ್ಕಾರ
ಅವನ ದರ್ಶನದಿ ನಿನಗಾಗುವ ವಿಕಾರ
ನೀನು ತುಳಿಯುತ ಬಂದ ಯಾವ ಪದುಮಗಳೂ
ಅನುಭವಿಸವೆಂದಿಗೂ, ಯಾವ ಕುಸುಮಗಳು!
ನಿನಗೆ ಈ ಅವಿುತಶಕ್ತಿಯನಿತ್ತ ದೇವ
ನಮ್ಮೆಲ್ಲರಿಗೆ ಜನ್ಮಗಳನಿತ್ತು ಕಾವ!
ನಮ್ಮ ದೂರನು ಕೇಳಿ ಈ ನಮ್ಮ ಜನಕ
ನಿನ್ನ ದಂಡಿಸಲಿಲ್ಲಿ ತಾ ಬರುವತನಕ
ಎಲೆ ಶಕ್ತಿ ನಿನಗೆ ಚಲ್ಲಾಟ! ಕುಣಿದಾಡು;
ನಿನಗೆ ಮನಬಂದಂತೆಯೇ ರಾಜ್ಯಮಾಡು!
ಆದರೀ ನಿನ್ನ ಒಣ ಒಯ್ಯಾರದೊನಪು
ಅಳಿಸದಿರಲೆಂದಿಗೂ ನಾ ಕೊಡುವ ನೆನಪು.
ಮರೆಯದಿರು ನಾನೊರೆಯಲಿರುವೊಂದು ಮಾತು;
ಅದು ನಾಳೆ ನಿನ್ನ ರಾಜ್ಯದ ಧೂಮಕೇತು
ನಿರಪರಾಧಿಗಳನ್ನು ನಿಃಸತ್ತ್ವರಾಗಿ
ಮಾಡಿಟ್ಟ ಈ ನಿನ್ನ ಶವವನ್ನು, ಕಾಗಿ
ಮುಟ್ಟದೆಲೆ! ಧಾರಣಿಯೊಳೆಲ್ಲ ನೀ ಹೋಗಿ
ಮುಗ್ಧ ಮನುಜರ ದಗ್ಧರನ್ನಾಗಿ ಮಾಡಿ
ನೀತಿವಂತರನೆಲ್ಲ ಮಿತಿಮೀರಿ ಕಾಡಿ
ಸ್ಥಾಪಿಸಿದ ನಿನ್ನ ಒಡೆತನ ಒಡಕುತನವು!
ನನ್ನ ಪೌರುಷ ಬರಿಯ ಬಾಯ್ಬಡಕತನವು!
ಪೃಥಿವಿಯಲಿ ಪ್ರತಿ ಜೀವ, ಪ್ರತಿ ಪ್ರಾಣದಲ್ಲಿ
ದೊರಕಬಹುದೆಲೆ! ನಿನಗೆ ದೇವಾಂಶವಲ್ಲಿ.
ಇಂಥದೊಂದಿಡಿಯ ಸಮುದಾಯವನೆ ಸುಟ್ಟು
ಆಳಲೆಳಿಸಿದ ನಿನ್ನ ಪಾತಕಿಯ ಹುಟ್ಟು
ದೇವದೇವಗೆ ತಿಳಿಯದಂತಿರುವ ಗುಟ್ಟು!
ಎಲೆ ಶಕ್ತಿ! ಆಳಿನ್ನು, ಸಾಮ್ರಾಜ್ಯವಾಳು;
ದೂರಿಲ್ಲ ಆಗುವದು ನಿನ್ನ ಮನೆ ಹಾಳು!
x x x x
ಈ ನನ್ನ ನುಡಿ ಕೇಳಿ ಯಾವ ಭಾಷೆಯನು
ಮಾತನಾಡುವನಿವನ ರೂಪರೇಷೆಯನು
ನೋಡಿಕೊಳಿರೆಂದು ತನ್ನಾಳುಗಳಿಗುಸುರಿ
ಮುಂದೆ ಹೋಯಿತು ಶಕ್ತಿ ಕಂಗಳನು ಕೆದರಿ!
ಮಿತಿಯಿದೆಯೆ ಬಲಿತವರ ಕುಡುಕತನಕೆ?
ಕೊನೆಯಿದೆಯೆ ನುರಿತವರ ಕೆಡಕುತನಕೆ?
*****
ಜ್ಯಾನುವರಿ ೧೯೩೦















