ಮೂಲ: ನಜರುಲ್ ಇಸ್ಲಾಂ
ಅಯ್ಯೋ ಪೆದ್ದಣ್ಣ
ಯಾರು ಹೇಳಿದ್ದೊ ನೀ ಕಳ್ಳ ಅಂತ?
ಖದೀಮ ಅಂತ ?
ನೋಡು ಇಲ್ಲಿ
ಸುತ್ತ ಕೂತಿದೆ ಹೇಗೆ
ಮೆತ್ತೆ ಪೀಠದ ಮೇಲೆ ಅಸಲುಗಳ್ಳರ ತಂಡ!
ರಾಜ್ಯಸೂತ್ರವ ಹಿಡಿದು ರಕ್ತ ಹೀರಿದೆ ಹೇಗೆ
ಎಲ್ಲರಿಗು ಮೇಲೆ ಅತಿ ಭಂಡ!
ಯಾರಪ್ಪ ಡೇನಿಯಲ್, ಎಲ್ಲಿದ್ದಾನೆ ಹೇಳು
ಗುಟ್ಟು ಹೊರತೆಗೆವಂಥ ಧೀರ ಈ ಠಕ್ಕಿಗರ ಹೊಟ್ಟೆ ಸೀಳಿ?
ಯಾರಪ್ಪ ನಿಷ್ಕಳಂಕ.
ಯಾರ ಮನೆಯಯ್ಯ ಗುಡಿ?
ದಪ್ಪ ಹೇಗಾದಾರು ಇಷ್ಟು, ನುಂಗದೆ ಇವರು ಬಡವರನ್ನ?
ಎಷ್ಟು ದೊಡ್ಡದೊ ಲೂಟಿ, ಎಷ್ಟು ದೊಡ್ಡದೊ ಚಾಟಿ
ಅಷ್ಟೆ ದೊಡ್ಡದೊ ಅಣ್ಣ ವಿಶ್ವಸಂಸ್ಥೆಗಳಲ್ಲಿ ಇವರ ದನಿ ಧಾಟಿ.
ತುಳಿದು ಮಣ್ಣಾದವನ ಹೀರಿ ಏರಿದ ಮಹಲು,
ಲಕ್ಷ ಕುಲುಮೆಯ ಮೆಟ್ಟಿ ಎದ್ದಿದೆಯೊ ಕಾರ್ಖಾನೆ ತಡೆದು ಬಿಸಿಲು.
ನರಮಾಂಸ ಉಂಡು ಬೆಳೆಯುವ ದೈತ್ಯಯಂತ್ರ ಇದು ಯಾವುದಯ್ಯ,
ಯಾವುದಯ್ಯಾ ಗೆಳೆಯ? ಯಾವುದಯ್ಯಾ ಒಳಗೆ
ಹರಿವ ಪ್ರಾಣದ ಹೊಳೆಯ ಹೀರಿ ಕಬ್ಬಿನ ಸಿಪ್ಪೆ
ಮಾಡಿ ಎಸೆಯುವ ತಂತ್ರ?
ಲಕ್ಷ ಲಕ್ಷ ಕುಟುಂಬ ದುಡಿದು ತುಂಬುತ್ತವೋ
ಕಳ್ಳಿ ಕರಿಸಿರಿಯ ಬಸಿರು.
ನೆನಪಿದೆಯ, ಅಲ್ಲಿ ಗ್ಯಾರೇಜು ಸಾಲಿರುವ ಕಡೆ
ಚಳಿಮಳೆಗೆ ತಡೆ ನಿಂತ
ಅಷ್ಟಿಷ್ಟು ಹರಿದ ಕೊಡೆ ಥರದ ಗುಡಿಸಲ ಸಾಲು ಇದ್ದದ್ದು?
* * *
ನಿಜ ಕಣೋ, ಈ ಗ್ರಹ
ವ್ಯಾಪಾರಿ ಠಕ್ಕು ರೂಪಾಯಿ ಮಾಟಕೆ ಮೆಚ್ಚಿ
ಕಟ್ಟಿಸಿದ ವೇಶ್ಯಾಗೃಹ.
ಖುಷಿಹತ್ತಿ ಸೈತಾನ ತುಟಿ ಬಳಿಗೆ ತಂದು
ಬಗ್ಗಿಸುತ್ತಿದ್ದಾನೆ ಮಧುಬಟ್ಟಲ.
ಆಸೆ ಎಲ್ಲಿದೆ? ಎಲ್ಲಿ ಅನ್ನ? ಭರವಸೆ? ಭಾಷೆ
ಮೋಸ ಗೆದ್ದಿತೊ ಅಣ್ಣ ಭವಿಷ್ಯವನ್ನ.
ಬಳಗವಿದೆ ಕಳ್ಳರಿಗೆ
ಬಲಗಳಿವೆ ಠಕ್ಕರಿಗೆ
ಭೋಳೆರಾಮರು ನೀವು ಹೊಕ್ಕ ಜೈಲಿನ ಸುತ್ತ
ಕಳ್ಳರದ ತಂಡವಿದೆ ಹಗಲಿರುಳ ಗಸ್ತಿಗೆ!
* * *
ಯಾರು ಕರೆದರೊ ನಿನ್ನ ಕಳ್ಳ ಅಂತ,
ಖದೀಮ ಅಂತ?
ತೆಗೆದಿದ್ದರೂ ಪಾಪ! ಮಹಲ ಮಾಳಿಗೆಯಿಂದ
ಒಂದೆರಡು ಲೋಟ
ನಾಲ್ಕು ನಾಣ್ಯ
ಹಸಿದ ಮಧ್ಯಾಹ್ನಕ್ಕೆ ಪಾವು ಧಾನ್ಯ.
ಇರಿಯಲಿಲ್ಲಲ್ಲ ನೆರೆಯವನನ್ನ ಬೆನ್ನಲ್ಲಿ?
ಬರೆಯಲಿಲ್ಲಲ್ಲ ಅದ ಹೊಗಳಿ ಪುಸ್ತಕದಲ್ಲಿ?
ಯಾಕೆ ಕೊರಗುವೆ ತಮ್ಮ?
ನಿನ್ನ ತಪ್ಪೆಲ್ಲವೂ ಬರಿಯ ಕತ್ತಲ ಗುಮ್ಮ.
ಯಾರಿಗಾಗಿಯೊ ದುಡಿದ, ಹೊಡದ, ತಲೆಗಳನೊಡೆದ
ವಾಲ್ಮೀಕಿಗಾದಂತೆ ಸ್ಥಿತ್ಯಂತರ
ಸಿಕ್ಕ ಪಕ್ಷಕ್ಕೆ ನಿಜವಾದ ಮಾನವನೊಬ್ಬ
ಆಗದಿರುವುದೆ ನಿನಗು ಸ್ಥಾನಾಂತರ?
*****
















