ಮೂಲ: ಟಿ ಎಸ್ ಎಲಿಯಟ್

ಕ್ಯುಮಿಯಾದ ಸಿಬಿಲ್‌ ಬುದ್ದಲಿಯೊಂದರಲ್ಲಿ ನೇಣಿನಲ್ಲಿ ತೂಗಿದ್ದ ನಾನೇ ಕಂಡೆ. ಸುತ್ತ ಹುಡುಗರ ತಂಡ, ಕೇಳಿತು. ಅವಳನ್ನು “ಹೇಳೇ ಹೇಳು ಸಿಬಿಲ್ ನಿನಗೇನು ಬೇಕು?” ಸಿಬಿಲ್ ಹೇಳಿದಳು: “ನನಗೆ ಸತ್ತರೆ ಸಾಕು.”೧

ಉತ್ತಮ ಕೆತ್ತನೆಗಾರ
ಎಜ್ರಾಪೌಂಡನಿಗೆ೨

I ಸತ್ತವರನ್ನು ಹೂತದ್ದು೩

ಏಪ್ರಿಲ್ ಅತ್ಯಂತ ಕ್ರೂರಮಾಸ. ಅದು
ಗೊಡ್ಡುನೆಲದಿಂದ ಲೈಲಾಕ್ ಹೂವ ಮೊಳೆಸುತ್ತ೪
ನೆನಪು ಬಯಕೆಗಳನ್ನು ಕಲೆಸುತ್ತ, ಒಣಬೇರನ್ನು
ವಸಂತವೃಷ್ಟಿಯ ಸುರಿಸಿ ಕೆದಕುತ್ತದೆ.
ಮರೆಸುವ ಮಂಜಿನ ತೆರೆಯ ನೆಲಕ್ಕೆಲ್ಲ ಹೊದಿಸುತ್ತ
ಒಣಗೆಣಸನ್ನಿತ್ತು ಕೊಂಚ ಜೀವ ಉಣಿಸುತ್ತ
ಬೆಚ್ಚಗಿಟ್ಟಿತು ನಮ್ಮ ಚಳಿಗಾಲ.
‘ಸ್ಟ್ಯಾನ್‌ಬರ್ಗರ್ ಸೀ’೫ ಮೇಲೆ ತುಂತುರು ಮಳೆಯನ್ನು ಹನಿಸಿ
ಹಾದು ಬಂದಿತು ಗ್ರೀಷ್ಮ ಬೆರಗು ಕವಿಸಿ;
ಸಾಲುಮರಗಳ ಕೆಳಗೆ ಕೊಂಚ ನಿಂತೆವು, ಮತ್ತೆ ಬಿಸಿಲಲ್ಲಿ ನಡೆದು
ರಸ್ತೆಬದಿ ಹಾಫ್‌ಗಾರ್ಟನ್‌೬ನಲ್ಲಿ ಕೂತು
ಕಾಫಿ ಕುಡಿದೆವು ಇಡೀ ತಾಸು ಮಾತಾಡಿದೆವು
ಬಿನ್ ಗಾರ್ ಕೀನೆ ರಸಿನ್ ಸಮಾಸ್ ಲಿತೌನ್ ಎಖ್ಚ್ ಡ್ಯೂಯಿಚ್
(ನಿಜದಲ್ಲಿ ಜರ್ಮನ್ ನಾನು, ರಷ್ಯನ್ ಅಲ್ಲವೇ ಅಲ್ಲ,
ಲಿಥುವೇನಿಯಾದಿಂದ ಬಂದವಳು).೭
ಮಕ್ಕಳಿದ್ದಾಗ ನಾವು ಆರ್ಚಡ್ಯೂಕ್‌ನಲ್ಲಿ ಭಾವನ ಜೊತೆಯೇ ತಂಗಿದ್ದಾಗ
ಜಾರುಬಂಡಿಯ ಮೇಲೆ ಭಾವ ನನ್ನನ್ನು ಹೊರಗೆ ಕರೆದೊಯ್ದರು,
ನನಗೆ ಭಯವೋ ಭಯ, ಭಾವ ಹೊರಗೊಯ್ದರು ನನ್ನ,
ಗಟ್ಟಿ ಹಿಡಿ ಮೇರೀ೮ ಗಟ್ಟಿ ಹಿಡಿ. ನಾವು ಕೆಳಗೆ ಇಳಿದೆವು ಜಾರಿ.
ಮಲೆ ಕಣಿವೆಗಳ ನಡುವೆ, ಅಲ್ಲಿ ಎಲ್ಲ ನಿರಾಳ.
ನಾನು ಓದುವುದೆಲ್ಲ ಬಹಳಷ್ಟು ರಾತ್ರಿಯೇ
ಚಳಿದಿನಗಳಲ್ಲಿ ದಕ್ಷಿಣದ ಕಡೆ ಹೋಗುವೆ.೯

ಯಾವ ಬೇರುಗಳು ಇಲ್ಲಿ ನೆಲ ಕಚ್ಚಿಯಾವು. ಯಾವ ಕೊಂಬೆಗಳು
ಈ ಕಲ್ಲುನೆಲದಲ್ಲಿ ಚಾಚಿ ಬೆಳೆದಾವು? ಹೇಳು ಮನುಪುತ್ರ೧೦
ನೀ ಹೇಳಲಾರೆ, ಅಥವಾ ಊಹಿಸಲಾರೆ,
ನಿನಗೆ ಗೊತ್ತಿರುವುದೆಲ್ಲ ಭಗ್ನ ಪ್ರತಿಮೆಗಳ ರಾಶಿ.
ಬರಿದೆ ಉರಿಯುವ ಸೂರ್ಯ, ನೆರಳಿರದ ಸತ್ತಮರ
ನೆಮ್ಮದಿ ಕೊಡದ ಜೀರುಂಡೆ೧೧ ನೀರ ಸಪ್ಪಳ ಕೂಡ ಇರದ ಬರುಬಂಡೆ.
ಈ ಕೆಂಪುಬಂಡೆ ಬುಡದಲ್ಲಿ ಮಾತ್ರ ನೆರಳಿದೆ,೧೨
(ಕೆಂಪುಬಂಡೆಯ ಬುಡದ ನೆರಳಲ್ಲಿ ನಿಲ್ಲು ಬಾ),೧೩
ಮುಂಜಾನೆ ನಿನ್ನ ಬೆನ್ನಿಗೆ ಬೆಳೆದ ನೆರಳಿಂದ
ಸಂಜೆ ನಿನ್ನನ್ನು ಸಂಧಿಸಲು ನಿನ್ನೆದುರಿಗೇ ಬೆಳೆದ ನೆರಳಿಂದ
ಭಿನ್ನವಾದದ್ದೊಂದ ನಿನಗೆ ತೋರಿಸುವೆ;
ಒಂದು ಹಿಡಿ ಮಣ್ಣಲ್ಲಿ ಭಯವ ತೋರಿಸುವೆ.೧೪
ಫ್ರೆಷ್ ವಿತ್ ದೆರ್ ವಿಂಡ್
ದೆರ್ ಹೈಮತ್ ಸೂ
ಮೈನ್ ಐರಿಷ್ ಕಿಂಡ್
ವೋ ವೈಲಸ್ಟ್ ದೂ?
(ಶಾಂತ ಗಾಳಿ ಬೀಸುತ್ತಿದೆ೧೫
ತಾಯ್ನಾಡಿನ ಕಡೆಗೆ
ಹೇಳು ಐರಿಷ್ ಪ್ರಿಯೆ ಎಲ್ಲಿ
ಕಾಯುತಿರುವೆ ನನಗೆ?)
“ಹಯಸಿಂಥ್ ಹೂಗಳನ್ನು೧೬ ನೀ ಮೊದಲು ಕೊಟ್ಟೆ
ಒಂದು ವರ್ಷದ ಹಿಂದೆ ನನಗೆ;”
ನನ್ನ ಕರೆದರು ಅವರು ಹಯಸಿಂಥ್ ಹುಡುಗಿಯೆಂದೆ
ಆದರೂ ನಾವು ಹಯಸಿಂಥ್ ತೋಟಬಿಟ್ಟು ತಡವಾಗಿ ಹಿಂದಿರುಗಿದಾಗ,
ನಿನ್ನ
ತೋಳು ತುಂಬಿತ್ತು, ಕೂದಲು ಒದ್ದೆಯಾಗಿತ್ತು೧೭
ಮಾತೇ ಹೊರಡದೆ, ನನ್ನ ಕಣ್ಣು ಕತ್ತಲಿಟ್ಟಿತು,
ಬದುಕಿಲ್ಲ, ಸತ್ತಿಲ್ಲ, ಏನೂ ತಿಳಿಯುತ್ತಿಲ್ಲ ಎನ್ನಿಸಿದ ಗಳಿಗೆ.೧೮
ಬೆಳಕಿನ ಹೃದಯಮೌನದಲ್ಲಿ ನೋಟವ ನೆಟ್ಟು ನಿಂತ ಹಾಗೇ.೧೯
ಯೋರ್ ಉಂಡ್ ಲೇರ್ ದಸ್ ಮೇ‌ರ್
(ವಿಸ್ತಾರ ಸಾಗರ ಖಾಲಿಯೆ ಇದೆ).೨೦

ಮದಾಂ ಸೊಸಾಸ್ತ್ರಿಸ್ ಖ್ಯಾತ ಭವಿಷ್ಯಗಾರ್ತಿ,೨೧
ಕೆಟ್ಟ ಶೀತದ ಬಾಧೆ ಅವಳಿಗೆ, ಆದರೂ
ಯೂರೋಪಿನಲ್ಲೇ ಭಾರಿ ವಿವೇಕವಂತೆ ಎಂದು,
ಕಣಿನುಡಿವ ಗಂಜೀಪಿನಲೆಯ ಪ್ಯಾಕು ಇರುವ೨೨ ಹಣ್ಣು ಎಂದು
ಸುತ್ತ ಹೆಸರಾದವಳು, ಹೇಳಿದಳು : ಇಗೊ ಇದು
ನಿಮ್ಮ ಗಂಜೀಪಿನೆಲೆ, ನೀರು ಪಾಲಾದ ಫಿನೀಷಿಯದ ನಾವಿಕ,
(ಅಗೊ ಅವನ ಕಣ್ಣು ಈಗ ಮುತ್ತಾಗಿವೆ!)೨೩
ಇದೋ ನೋಡಿ ಬೆಲಡೋನ.೨೪ ಬಂಡೆಗಳ ನಾರಿ,
ಸಂದರ್ಭಗಳ ನಾರಿ.
ಮೂರು ಮರಗಾಲುಗಳ ವ್ಯಕ್ತಿ ಇವ, ಇದು ಚಕ್ರ,
ಇಲ್ಲಿದ್ದಾನೆ ನೋಡಿ ಒಕ್ಕಣ್ಣ ವರ್ತಕ,೨೫ ಇದು ನೋಡಿ ಖಾಲಿ ಎಲೆ
ಇದರಲ್ಲಿರುವುದನ್ನೆ ಹೊತ್ತಿದ್ದಾನೆ ಆತ ಬೆನ್ನಮೇಲೆ,
ಅದೇನು ಎಂದು ನಾನು ನೋಡುವಂತಿಲ್ಲ.
ಕಾಣುತ್ತಿಲ್ಲ ನನಗೆ ನೇಣು ಹಾಕಿದ ವ್ಯಕ್ತಿ. ನೀರಿಂದ ಮರಣಭಯ.
ಜನದ ಗುಂಪುಗಳು ವೃತ್ತಾಕಾರ ಸುತ್ತುತ್ತ ನಡೆಯುವುದು ಕಾಣುತಿದೆ.
ನಮಸ್ಕಾರ ಬರುತ್ತೇನೆ. ಶ್ರೀಮತಿ ಎಕ್ವಿಟೋನ್ ಸಿಕ್ಕಲ್ಲಿ
ನಾನೆ ಜಾತಕ ತರುತ್ತೇನೆಂದು ತಿಳಿಸಿಬಿಡಿ :
ಈ ದಿನಗಳಲ್ಲಿ ಬಹಳ ಎಚ್ಚರಿರಬೇಕಷ್ಟೆ

ಇದು ಅವಾಸ್ತವ ನಗರ,೨೬
ಮಾಗಿ ಬೆಳಗಿನ ಕಂದು ಮಂಜಿನೊಳಗೆ
ಲಂಡನ್ ಸೇತುವೆ ಮೇಲೆ ಸರಿದು ಹೋಯಿತು ಜನದ ಭಾರಿ ಹಿಂಡು,೨೭
ಅಷ್ಟೊಂದು ಜನರನ್ನು ಸಾವು ಕೆಡಿಸಿತ್ತೆಂದು ನನಗೆ ಗೊತ್ತಿರಲಿಲ್ಲ.೨೮
ಆಗೀಗ ಸಣ್ಣ ನಿಟ್ಟುಸಿರ ಹೊರಚೆಲ್ಲುತ್ತ೨೯
ಒಬ್ಬೊಬ್ಬನೂ ತನ್ನ ಹೆಜ್ಜೆ ಮುಂದೇ ಕಣ್ಣ ಕೀಲಿಸಿದ್ದ.
ಒಂಬತ್ತನೆಯ, ಕಡೇ ಗಂಟೆ ಬಾರಿಸಿತು
ಮಂದಿ ಸಾಗಿತು ಗುಡ್ಡ ಹತ್ತಿ, ಕಿಂಗ್ ವಿಲಿಯಂ ಮಾರ್ಗವಾಗಿ
ಕಾಲವನ್ನು ಸೂಚಿಸುವ ಸೇಂಟ್ ಮೇರಿ ವೂಲ್ನಾತ್ ಇರುವ ಕಡೆಗೆ೩೦
ಅಲ್ಲೊಬ್ಬ ಹಳೆಗುರುತಿನವನನ್ನು ಕಂಡೆ, ಕೂಗಿ ತಡೆದೆ :
“ಏನೊ ಏ ಸ್ಟೆಟ್‌ಸನ್,! ಮಿಲೇ ಹಡಗುಗಳಲ್ಲಿ ನನ್ನ ಜೊತೆಗಿದ್ದವನೆ೩೧
“ಹೋದವರ್ಷ ನಿನ್ನ ತೋಟದಲ್ಲಿ ಹೆಣವೊಂದ ನೆಟ್ಟಿದ್ದೆಯಲ್ಲ೩೨
“ಚಿಗುರುತ್ತಿದೆಯ ಅದು? ಅರಳೀತೆ ಈ ವರ್ಷ? ಅಥವಾ ಹಠಾತ್ತನೆ
“ಸುರಿದ ಮಂಜಿನ ಸೋನೆ ಅದರ ಪಾತಿಯನ್ನೆಲ್ಲ ಕದಡಿಬಿಟ್ಟಿದೆಯೊ?
“ಮನುಷ್ಯರಿಗೆ ಮಿತ್ರ ಕಣೊ ನಾಯಿ, ಅದನ್ನು ಸ್ವಲ್ಪ ದೂರದಲ್ಲಿಟ್ಟಿರು,
“ಇಲ್ಲದಿದ್ದರೆ ತನ್ನ ಉಗುರಿನಿಂದ ಮತ್ತೆ ಅದನ್ನು ಅಗೆದುಬಿಟ್ಟೀತು!೩೩
ಇಪೋಕ್ರೀತ್ ತೆಕ್ಕೂರ್ – ಮೋ ಸಾಂಬ್ಲಬಿಲ್ – ಮೋ ಫ್ರೇರ್
(ಏ ಕಪಟಿ ಓದುಗನೆ, ನನ್ನ ಪ್ರತಿರೂಪನೇ – ಒಡಹುಟ್ಟಿದವನೇ!)೩೪

II ಚದುರಂಗದಾಟ೩೫

ಅಮೃತಶಿಲೆ ಮೇಲೆ ಹೊಳಪಿಟ್ಟ ಸಿಂಹಾಸನದ ಹಾಗೆ೩೬
ಜ್ವಲಿಸಿತು ಅವಳು ಕುಳಿತ ಪೀಠ;
ಫಲ ಹೊತ್ತ ಬಳ್ಳಿಗಳ ಕಡೆದ ರತ್ನಸ್ತಂಭ ಹೊತ್ತು ನಿಂತಿದ್ದವು ದರ್ಪಣಗಳ
ಅದರ ಮರೆಯಿಂದ ಇಣುಕುತ್ತಿದ್ದನೊಬ್ಬ ಸ್ವರ್ಣಮದನ
(ಮತ್ತೊಬ್ಬ ಅವನ ರೆಕ್ಕೆ ಹಿಂದೆ ತನ್ನ ಮುಖಮರೆಸಿದ)
ಸಪ್ರಮುಖದಾಕೃತಿಯ ದೀಪಗುಚ್ಛದ ಜ್ವಾಲೆ ದರ್ಪಣಕ್ಕೆ ಬಿದ್ದು ಇಮ್ಮಡಿಸಿ
ಟೇಬಲ್ಲಿನ ಮೇಲೆ ಪ್ರತಿಫಲಿಸಿತ್ತು, ಅವಳ
ಒಡವೆಗಳ ಕಾಂತಿ ಅದರೊಡನೆ ಸ್ಪರ್ಧಿಸಿತು.
ಸ್ಯಾಟಿನ್‌ ಕೇಸುಗಳಿಂದ ಬೆಳಕಿನ ಹೊಳೆ ಹರಿಯಿತು;
ಬಿರಡೆ ತೆಗೆದಿಟ್ಟ ಬಣ್ಣದ ಗಾಜುಗಳ ಮತ್ತು ದಂತದ ಕೋಶಗಳಿಂದ
ಹೊರ ಹೊಮ್ಮುತ್ತಿದ್ದ ಅವಳ ಅಪರಿಚಿತ ಕೃತಕ
ಪರಿಮಳಗಳು, ಚೂರ್ಣ ಲೇಪನಗಳು
ದಿಕ್ಕೆಡಿಸಿ ಕಾಡಿ ಗೊಂದಲಗೊಳಿಸಿ ಅರಿವನ್ನು ವಾಸನೆಗಳಲ್ಲಿ
ಮುಳುಗಿಸಿಬಿಟ್ಟವು;
ಕಿಟಕಿಯಿಂದ ಒಳಬಂದ ತಂಗಾಳಿಯನ್ನೇರಿ
ಮೋಂಬತ್ತಿ ಉರಿಯ ನೀಳಜ್ವಾಲೆಗಳ ದಟ್ಟಯಿಸಿ
ಛಾವಣಿ ಭಿತ್ತಿಯಲ್ಲಿ ಕಡೆದ ವಿನ್ಯಾಸಗಳ ಕದಡಿದವು ಹೊಗೆ ತೂರಿ೩೭
ತಾಮ್ರಸಾರವ ಹೀರಿ ಬೆಳೆದ ಕಡಲಿನ ಸಸ್ಯ
ಹಸಿರು ಕಿತ್ತಳೆಯಾಗಿ ಉರಿದಿತ್ತು, ಆ ಖಿನ್ನ
ಕಾಂತಿಯಲ್ಲಿ ಈಜುತ್ತಿತ್ತು ಕೆತ್ತಿದ್ದ ಡಾಲ್ಫಿನ್.
ಬಲು ಹಳೆಯ ಬೆಂಕಿಗೂಡಿನ ಮೇಲೆ ತೂಗಿದ್ದ ದೊಡ್ಡ ಚಿತ್ರ
ಕಿಟಕಿ ತೋರಿಸುವಂತೆ ಹೊರಗಿನ ಅರಣ್ಯದೃಶ್ಯವನ್ನು೩೮
ಕಿರಾತ ನಡತೆಯ ದೊರೆಯ ಪಶು ಬಲಾತ್ಕಾರಕ್ಕೆ
ಬಲಿಯಾಗಿ ಫಿಲೊಮೇಲ ಪಡೆದ ರೂಪಾಂತರವ ಬಣ್ಣಿಸಿತ್ತು;೩೯
ಅಲ್ಲೆ ಆ ಮರುಭೂಮಿ ತುಂಬ ನೈಟಿಂಗೇಲ್
ಭಂಗಿಸಲಾಗದ ನಾದವನ್ನು ತುಂಬಿತ್ತು
ಮತ್ತೂ ಗೋಳಿಟ್ಟಳವಳು, ಮತ್ತೂ ಬೆನ್ನಟ್ಟಿತ್ತು ಲೋಕ ಅವಳನ್ನು,
‘ಜಗ್ ಜಗ್’ ನಾದ ಕೊಳಕು ಕಿವಿಗಳನ್ನು ತುಂಬಿತ್ತು.
ಕಾಲದ ಅವಶೇಷಗಳು ಎಷ್ಟೋ ಇದ್ದುವು ಇನ್ನೂ ಗೋಡ ಮೇಲೆ
ದಿಟ್ಟಿಸುವ ರೂಪಗಳು ಕಟ್ಟಿನಿಂದ ಹೊರಬಾಗುತ್ತ,
ಮುಪ್ಪೆಂದು ಎಚ್ಚರಿಸಿ ಮೌನ ನೆಲೆಗೊಳಿಸಿದವು ಕೊಠಡಿಯಲ್ಲಿ.
ಮಹಡಿ ಮೆಟ್ಟಿಲ ಮೇಲೆ ಹೆಜ್ಜೆ ತೂರಾಡಿದವು
ಬೆಂಕಿಬೆಳಕಿನ ಕೆಳಗೆ, ಬಾಚಣಿಗೆಯ ಬುಡಕ್ಕೆ
ಉರಿಕಿರಣಗಳ ಹಾಗೆ ಹರಡಿದ ಅವಳ ಕೇಶ
ಶಬ್ದಗಳಾಗಿ ಮಿಂಚಿ, ಸ್ತಬ್ಧವಾಗುತ್ತಿತ್ತು ಘೋರವಾಗಿ.

“ಇವತ್ತು ರಾತ್ರಿ ಮನಸ್ಸಿಗೇನೋ ಬಲು ಕಿರಿಕಿರಿ, ಹೌದು ಬರಿ ಕಿರಿಕಿರಿ.೪೦
ಇದ್ದು ಬಿಡು ಜೊತೆಗೆ.
“ಮಾತಾಡು. ಯಾಕೆ ನೀ ಮಾತೆ ಆಡೊಲ್ಲ? ಮಾತಾಡು.
“ಏನು ಯೋಚಿಸ್ತಿದೀ, ನೀನು? ಯಾವ ಯೋಚನೆ? ಏನು?
“ನೀ ಏನು ಯೋಚಿಸ್ತೀಯೋ ನಂಗಂತೂ ತಿಳೀತಿಲ್ಲ. ಯೋಚಿಸು”

ಸತ್ತೋರು ಮೂಳೆ ಕಳಕೊಂಡ ಇಲಿಬಿಲದಲ್ಲಿ೪೧
ನಾವಿದ್ದೇವೆ ಅಂತ ಅನ್ನಿಸ್ತಿದೆ ನನಗೆ.

“ಏನು ಆ ಸದ್ದು?”
ಬಾಗಿಲ ಬುಡದ ಗಾಳಿ,೪೨
“ಈಗಾದ ಸದ್ದು? ಗಾಳಿ ಏನ್ಮಾಡ್ತಿದೆ?”
ಈಗ್ಲೂ ಏನೂ ಇಲ್ಲ. ಏನೇನೂ ಇಲ್ಲ.
“ಏನೂ ಗೊತ್ತಿಲ್ವ ನಿನಗೆ? ಏನೂ ಕಾಣ್ತಿಲ್ವ?
ಏನೂ ನೆನಪಾಗೊಲ್ವ?”
ನೆನಪಾಗ್ತಿದೆ
ಅವನ ಕಣ್ಣುಗಳೀಗ ಮುತ್ತಾಗಿವೆ.೪೩
“ನೀ ಬದುಕಿದ್ದೀಯಾ? ನಿನ್ನ ತಲೆ ಖಾಲಿಯಾ?”
ಓ ಹೋ ಹೋ ಹೋ ಆ ಷೇಕ್ಸ್‌ಪೆಹರಿಯನ್ ಕಗ್ಗ೪೪
ಅದೆಷ್ಟು ಚಂದ
ಅದೆಷ್ಟು ಸೂಕ್ಷ್ಮ
“ಏನ್ ಮಾಡ್ಲಿ ಈಗ? ಏನ್ ಮಾಡ್ಲಿ ನಾನು?”
“ಈಗಿರೋ ಹಾಗೇನೇ ಹೊರಗೋಡಿ ಹೋಗ್ತಿನಿ,
“ಕೂದ್ಲು ಇಳೀಬಿಟ್ಕೊಂಡು ಬೀದೀಲ್ನಡೀತೀನಿ, ಏನ್ಮಾಡೋಣ ನಾಳೆ?
“ಯಾವಾಗ್ಲೇ ಆಗ್ಲಿ ಏನ್ಮಾಡೋಣ ಹೇಳು?”
ಹತ್ತಕ್ಕೆ ಬಿಸಿನೀರು
ಮಳೆ ಬಂತು ಅಂದ್ರೆ ನಾಲ್ಕಕ್ಕೆ ಮುಚ್ಚಿದ ಕಾರು
ಆ ನಂತ್ರ ಒಂದಾಟ ಚದುರಂಗ ಆಡೋಣ,೪೫
ರೆಪ್ಪೆ ಇಲ್ದಿರೋ ಕಣ್ಣನ್‌ ಒತ್ ಹಿಡೀತ ಮತ್ತು ಬಾಗ್ಲು ಬಡಿಯೋ ಸದ್ದು ಕಾಯ್ತ.೪೬
ಲಿಲ್‌ನ ಗಂಡಂಗೆ ಸೈನ್ಯದಿಂದ ಬಿಡುಗಡೆ ಆಗಿ
ಊರಿಗೇಂತ ಹೊರಟ್ನಲ್ಲ, ಆಗ ನಾನ್ ಹೇಳ್ದೆ
ನೇರ ಮಾತ್ನಲ್ಲೆ ಹೇಳ್ದೆ, ಖುದ್ದು ನಾನೇ ಅವ್ಳ ಮುಖಕ್ಕೇನೇ ಹೇಳ್ದೆ,
ದಯವಿಟ್ಟು ಮುಗಿಸಿ ಸಮಯ ಆಯ್ತು೪೭
ಆಲ್ಬರ್ಟ್ ಬರ್ತಿದಾನೆ, ಚೆನ್ನಾಗಿ ಕಾಣೋ ಥರ ಮಾಡ್ಕೊಳ್ಳೆ ಅಂದೆ.
ಹಲ್ಲಿನ್ ಸೆಟ್ ಕೊಳ್ಳೋಕೆ ಕೊಟ್ಟಿದ್ ದುಡ್ಡನಾಯ್ತು ಅಂತ ಕೇಳ್ತಾನೆ.
ನಾನೇ ಇದ್ನಲ್ಲ ಅವನು ನಿಂಗೆ ದುಡ್ಕೊಟ್ಟಾಗ.
ಹಲ್ಲೆಲ್ಲ ತೆಗ್ಸಿಬಿಡು, ಒಳ್ಳೆ ಸೆಟ್ ಕೊಂಡ್ಕೊ,
ನೋಡೋಕಾಗಲ್ಲ ನಿನ್ನ ಅಂದ, ನನ್ನಾಣೆಗೂ.
ನಾನೂ ನೋಡ್ಲಾರೆ ಕಣೊ ಅಂತಂದೆ ನಾನೂ, ಪಾಪ ಆಲ್ಬರ್ಟ್ ಬಗ್ಗೆ
ಸ್ವಲ್ಪ ಯೋಚ್ನೆಮಾಡು. ಅವನು ಸೈನ್ಯ ಸೇರಿ ನಾಕು ವರ್ಷ ಆಗೋಯ್ತು,೪೮
ಏನೋ ಖುಷಿಯಾಗಿ ಕಾಲ ಕಳೀಬೇಕೂಂತ ಆಸೆಯಿಂದಿರ್ತಾನೆ
ನೀನೇನಾದ್ರೂ ಅವ್ನಿಗೆ ಅದನ್ನ ಕೊಡ್ದೆ ಇದ್ರೆ ಬೇರೆಯೋರು ಕೊಡ್ತಾರೆ ಅಂದೆ.
ಓಹೋ ಹಾಗಾ ಅಂದ್ಳು, ಅಂಥದ್ದೇನೋ ಆಗತ್ತೆ ಅಂದೆ.
ಹಾಗಿದ್ಮೇಲೆ ನಾನು ಯಾರಿಗೆ ಥ್ಯಾಂಕ್ಸ್ ಹೇಳ್ಬೇಕು ಗೊತ್ತಾಯ್ತು ಅಂದ್ಳು
ಹಾಗ್ಹೇಳಿ ನನ್ನನ್ನೇ ದಿಟ್ಟಿಸಿ ನೋಡಿದ್ಳು.
ದಯವಿಟ್ಟು ಮುಗಿಸಿ ಸಮಯ ಆಯ್ತು
ನಿಂಗೆ ಇಷ್ಟವಾಗ್ದಿದ್ರೂ ಹೇಗೋ ನಿಭಾಯ್ಸು ಅಂದೆ.
ನಿಂಗೆ ಆಗ್ದೆ ಹೋಯ್ತೋ ಬೇರೇವ್ರು ಗಂಟ್‌ ಬೀಳ್ತಾರೆ
ಆಲ್ಬರ್ಟ್ ಏನಾದ್ರೂ ಹೊರಗ್ಹೋದ್ರೆ ಅದು ನಿಂಗೆ
ತಿಳಿಸ್ದೆ ಇದ್ದದ್ರಿಂದ ಅಲ್ಲ.
ಇಷ್ಟೊಂದು ವಯಸ್ಸಾಗಿ ಕಾಣೋಕೆ ನಿಂಗೆ ನಾಚಿಕೆ ಆಗ್ಬೇಕು ಅಂದೆ
(ಅವ್ಳಿಗೆ ಬರಿ ಮೂವತ್ತೊಂದು)
ನಾನೇನ್ ಮಾಡ್ಲೆ ಅಂದ್ಳು, ಜೋಲ್ಮುಖ ಹಾಕ್ಕೊಂಡು;
ಎಲ್ಲ ಆ ಗುಳಿಗೇ ಫಲ, ತೆಗೆಸೋಕೆ ನುಂಗಿದ್ದು ಅಂದ್ಳು.
(ಈಗಾಗ್ಲೇ ಐದು. ಜಾರ್ಜ್ ಹರಿಗೇಲಂತೂ ಮುಗಿದೇ ಹೋಗಿತ್ತು ಕಥೆ)
ಎಲ್ಲ ಸರಿಹೋಗತ್ತೆ ಅಂತ ಕಾಂಪೌಂಡರ್ ಹೇಳಿದ್ರೂ
ಮತ್ತೆ ಮುಂಚಿನ ಹಾಗೆ ಆಗ್ಲೇ ಇಲ್ಲ ಅಂದ್ಲು.
ನೀನೊಂದು ಪೆದ್ದು ಕಣೆ,
ಹೋಗ್ಲಿ ಆಲ್ಬರ್ಟ್ ನಿನ್ನನ್ನ್ ನಿನ್ನ್ ಪಾಡಿಗೆ ಬಿಡದಿದ್ರೆ
ಆದ್ಹಾಗಾಗತ್ತೆ ಬಿಡು. ಮಕ್ಳು ಬೇಡವಾಗಿದ್ರೆ ಮದ್ವೆ ಯಾಕಾಗ್ತೀರಿ ಅಂದೆ
ದಯವಿಟ್ಟು ಮುಗಿಸಿ ಸಮಯ ಆಯ್ತು
ಇರಲಿ, ಆ ಭಾನ್ವಾರ ಆಲ್ಬರ್ಟ್ ಮನೇಲಿದ್ದ.
ಹಂದಿ ಮಾಂಸದ್ದು, ಒಳ್ಳೇ ಗಮ್ಮತ್ತು ಅಡಿಗೆ,
ನನ್ನೂ ಕರೆದಿದ್ರು ಅದರ ಬಿಸಿರುಚಿ ನೋಡೋಕೆ.
ದಯವಿಟ್ಟು ಮುಗಿಸಿ ಸಮಯ ಆಯ್ತು
ದಯವಿಟ್ಟು ಮುಗಿಸಿ ಸಮಯ ಆಯ್ತು
ಗೂನೈಟ್ ಬಿಲ್, ಗೂನೈಟ್ ಲೂ. ಗೂ ನೈಟ್ ಮೇ. ಗೂ ನೈಟ್
ಟಾ ಟಾ. ಗೂನೈಟ್, ಗೂನೈಟ್.
ಗುಡ್ ನೈಟ್ ಮಹಿಳೆಯರೆ, ಗುಡ್‌ ನೈಟ್ ಪ್ರಿಯ ಮಹಿಳೆಯರೆ, ಗುಡ್‌ ನೈಟ್, ಗುಡ್ ನೈಟ್.೪೯
III ಅಗ್ನಿಪ್ರವಚನ

ನದಿಡೇರೆ ಮುರಿದಿದೆ : ಎಲೆಯ ತುದಿಬೆರಳು
ಒದ್ದೆದಂಡೆಯ ಕಚ್ಚಿ ಅದರೊಳಕ್ಕೆ ಇಳಿದಿವೆ.
ಗಾಳಿ ಸದ್ದಿಲ್ಲದಂತೆ ಕಂದುಬಣ್ಣದ ನೆಲವ ಹಾಯುತ್ತಿದೆ.
ಹೊರಟುಹೋಗಿದ್ದಾರೆ ಜಲಕನ್ನಿಕೆಯರೆಲ್ಲ.೫೦
ಓಡು ಮೆಲ್ಲಗೆ ನಾನು ಹಾಡುಮುಗಿಸುವವರೆಗೆ ನನ್ನ ಪ್ರಿಯ ಥೇಮ್ಸ್.೫೧
ಖಾಲಿ ಸೀಸೆಗಳಿಲ್ಲ, ಸ್ಯಾಂಡ್ ವಿಚ್ ಪೇಪರ್ ಇಲ್ಲ ನದಿಯ ಬದಿಯಲ್ಲಿ
ರೇಷ್ಮೆ ಕರವಸ್ತ್ರಗಳು, ರಟ್ಟಿನ ಪೆಟ್ಟಿಗೆಗಳು, ಸಿಗರೇಟು ತುಂಡುಗಳು
ಬೇಸಿಗೆ ರಾತ್ರಿಯ ಗುರುತು ಯಾವುವೂ ಇಲ್ಲ.
ಹೊರಟು ಹೋಗಿದ್ದಾರೆ ಜಲಕನ್ನಿಕೆಯರೆಲ್ಲ.
ಅವರ ಗೆಳೆಯರು, ನಗರ ನಿರ್ದೇಶಕರ ಬೀದಿಯಲೆವ ಹಕ್ಕುದಾರರು
ಹೊರಟು ಹೋಗಿದ್ದಾರೆ ವಿಳಾಸಗಳ ಬಿಡದೆ.
ಲೆಮಾನ್ ಜಲದಂಡೆಯಲ್ಲಿ ಕುಳಿತು ರೋದಿಸಿದೆ ನಾನು….೫೨
ಓಡು ಮೆಲ್ಲಗೆ ನಾನು ಹಾಡು ಮುಗಿಸುವವರೆಗೆ ನನ್ನ ಪ್ರಿಯ ಥೇಮ್ಸ್
ಓಡು ಮೆಲ್ಲಗೆ ಥೇಮ್ಸ್, ಮಾತಾಡಲಾರೆ ನಾ ಜೋರಾಗಿ ಅಥವಾ
ಹೆಚ್ಚುಕಾಲ
ಬೆನ್ನ ಹಿಂದೆ ಏನೋ ಥಣ್ಣನೆಯ ಸ್ಫೋಟ, ಮೂಳೆಗಳ ತಾಕಲಾಟ
ಕಿವಿಯಿಂದ ಕಿವಿತನಕ ಬಾಯ್ದೆರೆದು ನಕ್ಕ ನಗೆ.
ಜಾರು ಹೊಟ್ಟೆಯನ್ನು ಮೆಲ್ಲಗೆಳೆದೆಳೆದು ಇಲಿಯೊಂದು ತೆವಳಿತು
ಸಸ್ಯಗಳ ನಡುವೆ ತೀರದಲ್ಲಿ
ನನ್ನ ಸೋದರ ದೊರೆಯ ವಿನಾಶವನ್ನು ಇನ್ನೂ
ಹಿಂದೆ ಘಟಿಸಿದ್ದ ತಂದೆ ಮಹಾರಾಜನ ಸಾವನ್ನು೫೩
ಚಿಂತಿಸುತ್ತ ಕೂತಿದ್ದಾಗ ಗ್ಯಾಸ್ ಹೌಸ್ ಹಿಂದೆ ಚಳಿದಿನದ ಸಂಜೆ
ಮೀನು ಹಿಡಿಯುತ್ತ ಬತ್ತಿದ್ದ ಕಾಲುವೆಯಲ್ಲಿ.
ತಗ್ಗಿನ ಒದ್ದೆ ನೆಲದಲ್ಲಿ ಬೆತ್ತಲೆ ಬಿಳಿಯ ದೇಹಗಳೂ
ತಗ್ಗಿನ ಒಣ ಅಟ್ಟದಲ್ಲಿ ಚೆಲ್ಲಾಡಿದ್ದ ಮೂಳೆಗಳೂ
ಇಲಿ ಹೆಜ್ಜೆಯಿಂದಾಗಿ ಲಟಲಟಿಸಿದವು, ಪ್ರತಿವರ್ಷವೂ.
ಆದರೂ ಆಗಾಗ್ಗೆ ಕೇಳಿಸುತ್ತದೆ ನನಗೆ ಬೆನ್ನ ಹಿಂದೆ೫೪
ಸ್ವೀನಿಯನ್ನು ಶ್ರೀಮತಿ ಪೋರ್ಟರಳ ಬಳಿಗೆ
ಕರೆತರುವ ಕಾರುಗಳ ಹಾರನ್ನು ಸದ್ದು ವಸಂತದಲ್ಲಿ೫೫
ಆಹಾ! ಬೆಳಗಿದ ಚಂದ್ರ ಪ್ರಕಾಶಮಾನವಾಗಿ ಶ್ರೀಮತಿ ಪೋರ್ಟರಳ ಮೇಲೆ೫೬
ಅವಳ ಮಗಳ ಮೈಮೇಲೆ,
ಅವರು ಕಾಲ್ತೊಳೆಯುವುದು ಸೋಡಾ ನೀರಲ್ಲೆ
ಎ ವೋ ಸ ವಾ ದಾನ್ಫಾ ಶಾಂತಾ ದಾ ಲ ಕ್ಯುಪೋಲ್!
(ಗೋಪುರದಿಂದ ಹೊಮ್ಮಿ ಬೀಸಿಬರುತಿರುವ ಹಸುಗಳೆಗಳ ದನಿಗಳೆ!)೫೭
ಟುವೀ ಟುವೀ ಟುವ್ವೀ
ಜಗ್ ಜಗ್ ಜಗ್‌‌ ಜಗ್ ಜಗ್೫೮
ಎಷ್ಟೊಂದು ಒರಟಾಗಿ ಬಲಾತ್ಕರಿಸಿ ಮಣಿಸಿದ್ದು
ಟೇರೂ

ಇದು ಅವಾಸ್ತವ ನಗರ
ಮಾಗಿ ಮಧ್ಯಾಹ್ನದ ಕಂದುಮಂಜಿನೊಳಗೆ
ಶ್ರೀಮಾನ್ ಯೂಜಿನೈಡಿಸ್ ಸಿ.ಐ.ಎಫ್. ಲಂಡನ್ :
ಕಣ್ಣೆದುರೇ ದಾಖಲೆ ಪತ್ರ,
ಕ್ಷೌರವಿಲ್ಲದ ಮುಖದ, ಬೀಜವಿಲ್ಲದ ದ್ರಾಕ್ಷಿ ಕಿಸೆ ತುಂಬ ತುಂಬಿರುವ
ಸ್ಮಿರ್ನಾದ ವರ್ತಕ೫೯
ಕ್ಯಾನನ್ ಸ್ಟ್ರೀಟ್ ಹೊಟೇಲಲ್ಲಿ ಮಧ್ಯಾಹ್ನದೂಟಕ್ಕೆ
ಮೆಟ್ರೊಪೋಲ್‌ನಲ್ಲಿ ವಾರಾಂತ್ಯ ವಿಶ್ರಾಂತಿಗೆ೬೦
ಆಹ್ವಾನಿಸಿದ ನನ್ನನ್ನು ಹೊಲಸು ಫ್ರೆಂಚಿನಲ್ಲಿ೬೧
ನೇರಳೆಬೆಳಕಿನ ಹೊತ್ತು, ಕುರ್ಚಿಯಲ್ಲಿ ಕೂತವರ ಕಣ್ಣು ಬೆನ್ನುಗಳು
ಹೊರಳಿ ನೋಡುತ್ತ ಸಮಯ ನಿರೀಕ್ಷಿಸುವ ಹೊತ್ತು;
ತುಡಿಯುತ್ತ ಕಾದಿರುವ ಟ್ಯಾಕ್ಸಿಯಂತೆ
ಮನುಷ್ಯಯಂತ್ರ ಕಾದು ಚಡಪಡಿಸುವ ಹೊತ್ತು.
ನಾನು ಟೈರೀಸಿಯಸ್, ಸುಕ್ಕುಗಟ್ಟಿರುವ ಹೆಣ್ಣುಮೊಲೆ ಮುದುಕ,
ಕುರುಡನಾದರು ಕೂಡ, ಎರಡು ಬಾಳಿನ ನಡುವೆ ತುಡಿಯುವವನು
ಕಾಣಬಲ್ಲೆ ನೇರಳೆ ಬೆಳಕಿನ ಹೊತ್ತನ್ನು,
ಕಡಲಿಂದ ಮನೆಕಡೆಗೆ ನಾವಿಕನನ್ನು ಸೆಳೆದು
ಮನೆಗೆ ಅವಸರಿಸುವ ಸಂಜೆ ಹೊತ್ತನ್ನು. ಆಗ
ಸಂಜೆಯೂಟಕ್ಕೆ ಮನೆ ಸೇರಿ ಬೆಳಗಿನ ತಿಂಡಿಮುಸುರೆ ತೆಗೆದು
ಸ್ಟವ್ ಹಚ್ಚಿ ಡಬ್ಬಿಯಿಂದ ಊಟ ತೆಗೆದಿಡುತ್ತಾಳೆ ಟೈಪಿಸ್ಟ್.
ಒಣಹಾಕಿರುವ ಅವಳ ಜೋಡಿ ಒಳಬಟ್ಟೆಗಳು ಸಂಜೆ ಸೂರ್ಯನ ಕಿರಣ ತಾಗಿ
ಕಿಟಕಿಯಾಚೆಗೆ ಆಪತ್ಕಾರಿಯಾಗಿ ಹರಡಿವೆ.
ಕಾಲುಚೀಲ ಬಾಡಿ ಕುಪ್ಪಸಗಳು
(ರಾತ್ರಿ ಶಯ್ಯೆಯೂ ಆದ) ದಿವಾನದ ಮೇಲೆ ಬಿದ್ದಿವೆ.
ನಾನು ಟೈರೀಸಿಯಸ್, ಸುಕ್ಕುಮೊಲೆಗಳ ಮುದುಕ೬೨
ದೃಶ್ಯವನ್ನೀಕ್ಷಿಸಿ ಉಳಿದ ಭವಿಷ್ಯ ನುಡಿದೆ,
ಬರಲಿದ್ದ ಅತಿಥಿಗೆ ನಾನೂ ಸಹ ಕಾದೆ.
ಅಗೋ ಬರುತ್ತಿದ್ದಾನೆ ಮೊಡವೆ ಮುಖದ ಯುವಕ
ಚಿಕ್ಕ ಮನೆದಲ್ಲಾಳಿಯ ಗುಮಾಸ್ತ, ದಿಟ್ಟ ನೋಟದವ,
ಬ್ರಾಡ್‌ಫರ್ಡ್ ಕೋಟೀಶ್ವರನ ತಲೆಮೇಲೆ ಮಂಡಿಸಿದ ಸಿಲ್ಕ್ ಹ್ಯಾಟಿನಂತೆ೬೩
ಭರವಸೆ ಕೂತ ಮುಖದ ಹೀನ.
ಅವನ ಅಂದಾಜಿನಂತೆ ಅನುಕೂಲ ಸಮಯ ಇದು.
ಊಟ ಮುಗಿದಿದೆ, ಅವಳಿಗೆ ಏನೋ ಬೇಸರ ದಣಿವು,
ಆಸೆಪಡದಿದ್ದರೂ, ಆಕ್ಷೇಪವೇನಿರದ ರತಿಕಲಾಪದಲ್ಲಿ
ಅವಳ ತೊಡಗಿಸಲು ಆತ ಹವಣಿಸುತ್ತಾನೆ.
ಉದ್ರೇಕಗೊಂಡು, ನಿರ್ಧರಿಸಿ, ಹಠಾತ್ತನೆ ಮೇಲೆ ಎರಗುತ್ತಾನೆ ;
ಹುಡುಕುತ್ತಿರುವ ಕೈಗೆ ಯಾವ ತಡೆಯೂ ಇಲ್ಲ ;
ಅವನ ಹಮ್ಮಿಗೆ ಪ್ರತಿಸ್ಪಂದನವೆ ಬೇಕಿಲ್ಲ,
ಸ್ವಾಗತಿಸುತ್ತಾನೆ ಅವನು ಉದಾಸೀನವನ್ನೆ,
(ನಾನು ಟೈರೀಸಿಯಸ್, ಇದೇ ದಿವಾನದ ಮೇಲೆ, ಇದೇ ಶಯ್ಯೆಯ ಮೇಲೆ
ನಡೆದ ಎಲ್ಲವನ್ನೂ ಮೊದಲೆ ಕಂಡು ವ್ಯಥೆಪಟ್ಟವನು.
ಥೀಬ್ಸ್ ಗೋಡೆಯ ಕೆಳಗೆ ಕೂತು, ಸತ್ತವರಲ್ಲಿ
ಅತಿ ಕೆಳಗಿನವರ ಜೊತೆ ಓಡಾಡಿದವನು)೬೪
ಕೊನೆಯ ಅನುಗ್ರಹಕರ ಮುತ್ತೊಂದನ್ನು ಕರುಣಿಸಿ ಅವನು ಹೊರಡುತ್ತಾನೆ,
ದೀಪವಿಲ್ಲದ ಮಹಡಿ ಮೆಟ್ಟಲಿನ ಬಳಿ ತನ್ನ
ದಾರಿ ತಡಕುತ್ತಾನೆ…..

ತೆರಳಿದ ಪ್ರಿಯಕರನ ಪರಿವೆಯೇ ಇರದ ಅವಳು
ಹೊರಳಿ ತನ್ನನ್ನು ನೋಡಿಕೊಳ್ಳುತ್ತಾಳೆ ಕನ್ನಡಿಯಲ್ಲಿ;
ತಲೆಗೆ ಹಾಯುತ್ತದೆ ಅರೆಬೆಳೆದ ಆಲೋಚನೆ :
“ಅಂತೂ ಎಲ್ಲ ಆಯ್ತಲ್ಲ ಮುಗಿದದ್ದು ಸಂತೋಷ”
ಚೆಲುವೆ ಅವಿವೇಕಕ್ಕೆ ಬಾಗಿ ಏಕಾಂಗಿಯಾಗಿ೬೫
ಮತ್ತೊಮ್ಮೆ ರೂಮಿನಲ್ಲಿ ಅತ್ತಿತ್ತ ನಡೆವಾಗ
ತಲೆಗೂದಲನ್ನು ಯಾಂತ್ರಿಕವಾಗಿ ಕೈಯಿಂದ ನೀವಿಕೊಳ್ಳುತ್ತಾಳೆ
ಗ್ರಾಮಾಫೋನಿನಲ್ಲಿ ರೆಕಾರ್ಡು ಹಚ್ಚುತ್ತಾಳೆ.

“ನೀರಿನಲೆ ಮೇಲೆ ಈ ಸಂಗೀತ ನನ್ನಿಂದ ತೆವಳುತ್ತ ಸಾಗಿತು”೬೬
ತೀರದುದ್ದಕ್ಕೂ ರಾಣಿ ವಿಕ್ಟೋರಿಯಾ ರಸ್ತೆ ತನಕ.

ಓ ನಗರವೇ ನಗರವೇ
ಲೋಯರ್ ಥೇಮ್ಸ್ ರಸ್ತೆಯ ಬಾರಿನ ಬದಿಯಲ್ಲಿ,
ಬೆಸ್ತರು ಮಧ್ಯಾಹ್ನ ಹೊತ್ತು ಕಳೆವಲ್ಲಿ.
ಅಯೋನಾದ ಅವರ್ಣನೀಯ ಶ್ವೇತ ಸ್ವರ್ಣವೈಭವವ
ಮ್ಯಾಗ್ನಸ್ ಮಾರ್ಟರ್ ಭಿತ್ತಿ ಎತ್ತಿ ಹಿಡಿದಿರುವಲ್ಲಿ೬೭
ಕೇಳುವುದು ಕೆಲವು ಸಲ – ಒಳಗಿನಿಂದ
ಮ್ಯಾಂಡಲಿನ್ನಿನ ದನಿಯ ಇಂಪು, ಜೊತೆಗೆ
ಮಾತುಕತೆ ಸಲ್ಲಾಪ ಕಲಕಲ.

ಎಣ್ಣೆ ಟಾರುಗಳನ್ನು
ನದಿಯು ಬೆವರುತ್ತದೆ೬೮
ತಿರುಗುವಲೆಗಳ ಹತ್ತಿ
ದೋಣಿ ತೆರಳುತ್ತವೆ,
ಕೆಂಪು ಪಟ ಅರಳಿ
ಗಾಳಿಮರೆಗಾಗಿ
ಕೂವೆ ದಿಮ್ಮಿಯ ನೆಮ್ಮಿ
ಅತ್ತ ತುಯ್ಯುತ್ತವೆ.
ಐಲ್ ಆಫ್ ಡಾಗ್ಸ್ ದಾಟಿ
ಗ್ರೀನ್‌ವಿಚ್‌ ಕಡೆಗೆ
ತೇಲುವ ತೊಲೆಗಳನ್ನು
ದೋಣಿ ತೊಯಿಸುತ್ತವೆ.೬೯

ಲೇಲಾಲಿ ಲೇಸೋ ಲೇಲಾಲಿ ಲೋ
ಲೇಲಾಲಿ ಲೇಸೋ ಲೇಲಾಲಿ ಲೋ

ಎಲಿಜಬೆತ್ ಮತ್ತು ಲೆಸ್ಟರ್
ಹುಟ್ಟು ಹಾಕುತ್ತಿರಲು೭೦
ಕೆಂಪು ಹೊಂಬಣ್ಣಗಳ
ಮಿರುಗುಡುವ ಚಿಪ್ಪು
ದೋಣಿ ಹಿಂಭಾಗ.
ಉಕ್ಕಿ ಬಂದಿತು ನೆರೆ,
ಎರಡು ದಡವನ್ನೂ
ಮುದ್ದಿಸಿದ ಕಿರು ಅಲೆ೭೧
ನೈರುತ್ಯ ಮಾರುತ ಪ್ರವಾಹದುದ್ದಕ್ಕೂ
ಎತ್ತಿಕೊಂಡೊಯ್ದಿತು ಕಿಂಕಿಣಿ ನಿನಾದದ
ಬಿಳಿಯ ಗೋಪುರಗಳನ್ನು

ಲೇಲಾಲಿ ಲೇಸೋ ಲೇಲಾಲಿ ಲೋ
ಲೇಲಾಲಿ ಲೇಸೋ ಲೇಲಾಲಿ ಲೋ

“ಟ್ರಾಮುಗಳು ಹಾಗೂ ಧೂಳಿಡಿದ ಮರಗಳು,
ಹೈಬರಿ ನನ್ನನ್ನು ಹಡೆಯಿತು. ರಿಚ್‌ಮಂಡ್ ಮತ್ತು ಕ್ಯೂ
ನನ್ನನ್ನು ಕೆಡಿಸಿದವು.೭೨ ಇಕ್ಕಟ್ಟು ದೋಣಿಯಲ್ಲಿ ನಾನು ಅಂಗಾತ ಮಲಗಿ
ಕಾಲನ್ನೆತ್ತಿದೆ ಕಡೆಗೆ ರಿಚ್‌ಮಂಡ್ ಹತ್ತಿರ”

“ಮೂ‌ರ್‌ಗೇಟ್‌ನಲ್ಲಿವೆ ನನ್ನ ಪಾದ,೭೩ ಹೃದಯ
ಪಾದದಡಿಗೇ ಇದೆ, ಘಟನೆ ಮುಗಿದ ಮೇಲೆ
ಅವನು ಅತ್ತ. `ಹೊಸನಾಂದಿ’ಯೊಂದಕ್ಕೆ ಮಾತುಕೊಟ್ಟ
ಏನೂ ಹೇಳಲಿಲ್ಲ ನಾನು. ಯಾಕೆ ಬೇಸರ ಪಡಲಿ?”
“ಮಾರ್ಗೆಟ್೭೪ ಉಸುಬಿನ ದಿನ್ನೆಯಲ್ಲಿ.
ಯಾವುದಕ್ಕೆ ಯಾವುದನ್ನೂ ಕೂಡಿಸಲಾರೆ.
ಕೊಳಕು ಹಸ್ತದ ಒಡೆದ ಬೆರಳಿನುಗುರುಗಳು.
ನನ್ನ ಜನ ಬಡಪಾಯಿ ಜನರು, ಯಾವ ನಿರೀಕ್ಷೆ
ಇಲ್ಲದವರು.”

ಲಾಲಾ
ಆಮೇಲೆ ನಾ ಬಂದ ಕಾರ್ತೇಜಿಗೆ೭೫

ಉರಿಯುತ್ತ ಉರಿಯುತ್ತ ಉರಿಯುತ್ತ ಉರಿಯುತ್ತ೭೬
ಓ ಪ್ರಭೋ ನೀ ನನ್ನ ಹೊರಗೆಳೆದು ಹಾಕು
ಓ ಪ್ರಭೋ ನೀ ನನ್ನ ಹೊರಗೆಳೆದು ಹಾಕು೭೭
ಉರಿಯುತ್ತ

IV ನೀರಿನಿಂದ ಸಾವು೭೮

ಫಿನೀಷಿಯದ ಫ್ಲೆಬಾಸ್ ಹದಿನೈದು ದಿನ ಹಿಂದೆ ಸತ್ತ ವ್ಯಕ್ತಿ
ಕಡಲ ಹಕ್ಕಿಯ ಕೂಗು, ಆಳಕಡಲಿನ ಭರತ,
ಲಾಭ ನಷ್ಟ ಎಲ್ಲ ಮರೆತ.
ಕಡಲಡಿಯ ಸುಳಿಯೊಂದು
ಅವನ ಮೂಳೆಗಳನ್ನು ಪಿಸುದನಿಯಲ್ಲಿ ಹೆಕ್ಕಿತು
ಏಳುತ್ತ ಬೀಳುತ್ತ ಮುಪ್ಪು ಪ್ರಾಯದ ಹಂತ ದಾಟಿಬಿಟ್ಟ ಅವನು
ಸುಳಿಗೆ ಸಿಕ್ಕಿ
ಯೆಹೂದ್ಯನೊ ಕ್ರೈಸ್ತನೊ
ಚಕ್ರ ತಿರುಗಿಸುವವನೆ೭೯ ಎಲರ ಹಾಯಿಸುವವನೆ
ಹಿಂದೊಮ್ಮೆ ನಿನ್ನಂತೇ ನೀಳ ಸುಂದರಕಾಯ
ನಾಗಿದ್ದ ಫ್ಲೆಬಾಸ್‌ ನನ್ನು ಪರಿಗಣಿಸು.

V ಗುಡುಗು ಹೇಳಿದ್ದು೮೦

ಬೆವರಿದ ಮುಖಗಳ ಮೇಲೆ ಪಂಜುಬೆಳಕಿನ ಕೆಂಪು
ತೋಟಗಳ ನಡುವೆ ಹೆಪ್ಪಾದ ಮೌನ೮೧
ಕಲ್ಲು ನೆಲದಲ್ಲಿ ಯಮಯಾತನೆ ಆಮೇಲೆ
ಸೆರೆಮನೆ ಅರಮನೆಗಳ ಬೊಬ್ಬೆ ಚೀತ್ಕಾರ
ದೂರಗಿರಿಗಳ ಮೇಲೆ ಋತುವಸಂತದ ಮೇಘನಾದದನುರಣನ.
ಹಿಂದೆ ಬದುಕಿದ್ದವನು ಈಗ ಸತ್ತಿದ್ದಾನೆ,
ಹಿಂದೆ ಬದುಕಿದ್ದ ನಾವು ಸಾಯುತ್ತಿದ್ದೇವೆ ಈಗ
ಕೊಂಚ ತಾಳ್ಮೆಯಿಂದ.

ಇಲ್ಲಿ ನೀರಿಲ್ಲ ಬರಿಯ ಬಂಡೆ೮೨
ಬಂಡೆಯಿದೆ ನೀರಿಲ್ಲ ಮರಳ ದಾರಿ
ಮೇಲೇರುತ್ತದೆ ದಾರಿ ಸುತ್ತಿ ಬೆಟ್ಟಗಳಲ್ಲಿ
ಬೆಟ್ಟಗಳೊ ನೀರಿರದ ಬಂಡೆರಾಶಿ
ನೀರಿದೆಯೊ ನಾವಲ್ಲಿ ನಿಲ್ಲಬೇಕು ನಿಂತು ಕುಡಿಯಬೇಕು
ಬಂಡೆಗಳ ನಡುವೆ ನಿಲ್ಲುವಂತಿಲ್ಲ ಚಿಂತಿಸುವಂತಿಲ್ಲ
ಬೆವರು ಆರಿದೆ, ಹೆಜ್ಜೆಗಳು ಮರಳಿನಲ್ಲಿವೆ
ಬಂಡೆ ನಡುವೆ ಬರಿ ನೀರೇ ಇದ್ದಿದ್ದರೆ
ಸತ್ತ ಪರ್ವತಗಳ ಹುಳುಕು ಹಲ್ಲುಗಳ ಉಗುಳಲಾಗದ ಬಾಯಿ
ನಿಲ್ಲುವಂತಿಲ್ಲ ಮಲಗುವಂತಿಲ್ಲ ಕೂರುವಂತಿಲ್ಲ
ಮೌನ ಸಹ ಇಲ್ಲ ಪರ್ವತಗಳಲ್ಲಿ
ಮಳೆಯಿರದ ಬರಿ ಶುಷ್ಕ ಬಂಜೆಗುಡುಗು
ಏಕಾಂತವೂ ಇಲ್ಲ ಗಿರಿಗಳಲ್ಲಿ
ಬಿರುಕು ಗೋಡೆಯ ಮಣ್ಣಮನೆ ಬಾಗಿಲುಗಳಿಂದ
ಕೆಂಪು ಉರಿಮೋರೆಗಳು ಜರಿದು ಗುರುಗುಟ್ಟುವುವು

ನೀರು ಇದ್ದಿದ್ದರೆ
ಬಂಡಯಿರದೆ
ಬಂಡೆ ಇದ್ದು ನೀರು
ಇದ್ದಿದ್ದರೆ
ನೀರು
ಕಾರಂಜಿ
ಬಂಡೆ ಬಳಿ ಒಂದು ಕೊಳ
ನೀರ ದನಿಯಾದರೂ ಇದಿದ್ದರೆ
ಜೀರುಂಡೆ ದನಿಯಲ್ಲ
ಒಣಹುಲ್ಲಿನ ಹಾಡಲ್ಲ
ಪೈನ್‌ ಮರಗಳಲ್ಲಿ ಸನ್ಯಾಸಿ ಹಕ್ಕಿ ಹಾಡುವ ಕಡೆ, ಬಂಡೆ ಮೇಲೆ
ತೊಟತೊಟ ಪಟಪಟ ತೊಟತೊಟ೮೩
ನೀರಿನ ಸಪ್ಪಳ ಕೊಂಚ ಇದ್ದಿದ್ದರೆ
ಇಲ್ಲ ನೀರಿಲ್ಲ ಅಲ್ಲಿ

ನಿನ್ನ ಬದಿಯಲ್ಲೇ ಸದಾ ನಡೆಯುತ್ತ ಬರುವ ಆ ಮತ್ತೊಬ್ಬ ಯಾರು?೮೪
ಎಣಿಕೆ ಮಾಡಿದರೆ ನಾನು ನೀನು ಇಬ್ಬರೇ
ಮುಂದಿರುವ ಬಿಳಿದಾರಿಯತ್ತ ನೋಡಿದರೆ
ಕಂದುಬಣ್ಣದ ಗೊಂಗಡಿ ತೊಟ್ಟು ಜೊತಗೆ
ಬೇರೆ ಯಾರೋ ಸದಾ ಚಲಿಸುತ್ತಿದ್ದಾರೆ
ಹೆಣ್ಣೋ ಗಂಡೋ ಎಲ್ಲ ಅಸ್ಪಷ್ಟ, ಆದರೆ
ಯಾರು ಅದು ನಿನ್ನ ಆಚೆ ಬದಿಗೆ?

ಮೇಲೆ ಆಕಾಶದಲ್ಲಿ ಅದೇನು ಶಬ್ದ?೮೫
ತಾಯ ಅಳಲಿನ ಏನೊ ಮುಳುಮಳು ದನಿ
ಯಾವುದವು ಗಡಿಯಿರದ ದೂರ ಬಯಲುಗಳಲ್ಲಿ
ಹಿಂಡಾಗಿ ಹಾಯ್ವ ಗೊಂಗಡಿಯ ತಂಡ?
ಚಪ್ಪಟೆ ದಿಗಂತವಷ್ಟೆ ಸುತ್ತುಗಟ್ಟಿರುವ
ಬದುಕೊಡೆದ ಭೂಮಿಯಲ್ಲಿ ಮುಗ್ಗರಿಸುವವರು?
ಯಾವುದಾ ನಗರ, ಬೆಟ್ಟಗಳ ಮೇಲೆ ನೀಲಿಹವೆಯಲ್ಲಿ
ಸಿಡಿಯುವುದು ಕೂಡುವುದು ತಿರುಗಿ ಸ್ಫೋಟಿಸುವುದು?
ಯಾವುದವು ಕೆಳಗೆ ಕುಸಿಯುತ್ತಿರುವ ಗೋಪುರ
ಜೆರೂಸಲೆಮ್ ಅಥೆನ್ಸ್ ಅಲೆಕ್ಸಾಂಡ್ರಿಯಾ
ವಿಯೆನ್ನಾ ಲಂಡನ್
ಎಲ್ಲವೂ ಅವಾಸ್ತವ

ಹೆಂಗಸೊಬ್ಬಳು ತನ್ನ ನೀಳ ಕರಿಕೂದಲನ್ನು ಬಿಗಿದು ಕಟ್ಟಿದಳು
ಆ ತಂತಿಗಳ ಬಿಗಿದು ಪಿಸುದನಿಯ ಸಂಗೀತ ಮೂಡಿಸಿದಳು
ನಗುಮುಖದ ಬಾವಲಿ ನೀಲಿಬೆಳಕಿನಲ್ಲಿ
ಸಿಳ್ಳು ಹಾಕತ್ತ ರೆಕ್ಕೆ ಪಟಪಟನೆ ಬಡಿದುವು
ಕರಿಗೋಡೆ ಮೇಲಿಂದ ತಲೆಕೆಳಗು ತೆವಳಿದುವು
ಆಕಾಶದಲ್ಲಿ ತಲೆಕೆಳಗಾದ ಶಿಖರಗಳು
ಬತ್ತಿದ ಬಾವಿಗಳಿಂದ ಖಾಲಿ ತೊಟ್ಟಿಗಳಿಂದ
ಹಾಡುವ ದನಿಗಳಿಗೆ ನೆನಪಿನ ಗಂಟೆ ನುಡಿಸಿದುವು.

ಬೆಟ್ಟಗಳ ಮಧ್ಯೆ ಈ ಪಾಳುಬಿಲದಲ್ಲಿ
ಮಂಕುಬೆಳುದಿಂಗಳಲ್ಲಿ ಚಾಪೆಲ್ ಸುತ್ತ
ಹುಲ್ಲು ಹಾಡುತ್ತಿದೆ ಉರುಳಿರುವ ಗೋರಿಗಳ ಮೇಲೆ.
ಖಾಲಿಯಾದ ಚಾಪೆಲ್‍೮೬ ಬರಿ ಗಾಳಿ ತುಂಬಿರುವ ಮನೆ
ಕಿಟಕಿಗಳೆ ಇಲ್ಲ, ತೂಗುತಿವೆ ಬಾಗಿಲು,
ಒಣ ಎಲುಬುಗಳು ಯಾರಿಗೂ ಕೇಡು ಮಾಡವು.
ಚಾವಣಿ ತೊಲೆಯ ಮೇಲೆ ಹುಂಜವೊಂದೇ ನಿಂತು
ಕೊಕ್ಕೊಕ್ಕೋ ಕೊಕ್ಕೊಕ್ಕೋ೮೭
ಬೆಳಗಿದ ಮಿಂಚಿನಲ್ಲಿ ಕೂಡಲೇ ಮಳೆ ತರುವ
ತಣ್ಣನೆಯ ಕಾರ್ಗಾಳಿ
ಗಂಗೆ ಇಂಗಿದಳು,೮೮ ಒಣಗಿದೆಲೆ ಕಾದವು
ಮಳೆಗಾಗಿ, ಬಲು ದೂರದಲ್ಲಿ ಹಿಮವಂತನ
ನೆತ್ತಿಯಲ್ಲಿ ಕಾರ್ಮುಗಿಲು ಒಟ್ಟುಗೂಡಿದುವು,
ಕಾಡು ಮುದುರಿತ್ತು ಮೌನದಲ್ಲಿ.
ಗುಡುಗು ನುಡಿಯಿತು ಆಗ

ದತ್ತ:೮೯ ಏನು ಕೊಟ್ಟಿದ್ದೇವೆ ನಾವು? ಗೆಳೆಯ,
ನೆತ್ತರು ಕಲಕುತ್ತ ನನ್ನ ಹೃದಯವನ್ನು
ಬುದ್ದಿವಂತಿಕೆಯ ಬಾಳು ಮತ್ತೆ ತರಲಾಗದ
ಕ್ಷಣದ ಶರಣಾಗತಿಯ ಭೀಮಧೈರ್ಯ.
ಇದರಿಂದಲೇ, ಮತ್ತು ಇದರಿಂದ ಮಾತ್ರವೇ ನಾವು ಉಳಿದಿದ್ದೇವೆ
ಕಾಣಸಿಗದಿದು ನಮ್ಮ ಮೃತ್ಯುವಾರ್ತೆಗಳಲ್ಲಿ
ಧಾರಾಳಿ ಜೇಡ ಕವಿದ ನಮ್ಮ ನೆನಪುಗಳಲ್ಲಿ೯೦
ಬಡಕಲು ವಕೀಲ ಮುರಿಯುವ ಖಾಲಿಕೋಣೆಗಳ
ಬಾಗಿಲಿನ ಬೀಗದ ಮುದ್ರೆಯಡಿಯಲ್ಲಿ

ದಯಧ್ವಮ್: ಕೀಲಿಕೈ ಬಾಗಿಲೊಳಗೆ ಒಂದು ಸಲ ತಿರುಗಿದ್ದು೯೧
ಒಂದುಸಲ ಮಾತ್ರವೇ ತಿರುಗಿದ್ದು ಕೇಳಿಸಿದೆ.
ಸೆರೆಮನೆಯೊಳಗೆ ನಿಂತು ಚಿಂತಿಸುತ್ತೇವೆ ಕೀಲಿಕೈ ಕುರಿತು೯೨
ಚಿಂತಿಸುತ್ತ ಅದನ್ನೇ ನಾವು ಪ್ರತಿಯೊಬ್ಬರೂ
ಸೆರೆಮನೆಯ ಇರುವಿಕೆಯ ದೃಢಪಡಿಸುತ್ತೇವೆ
ಇರುಳಲ್ಲಿ ಮಾತ್ರವೇ ಬಾನಿನ ವದಂತಿಗಳು
ಪುನರುಜ್ಜೀವಿಸುತ್ತವೆ ಭಗ್ನ ಕೊರಿಯೊಲೇನಸನನ್ನು೯೩
ಒಂದು ಕ್ಷಣ ಮಾತ್ರ.

ದಾಮ್ಯತ : ಹಾಯಿ ಹುಟ್ಟುಗಳನ್ನು ಬಲ್ಲ ಕೈಕೌಶಲಕ್ಕೆ ಸ್ಪಂದಿಸಿತು ದೋಣಿ
ಶಾಂತವಾಗಿತ್ತು ಕಡಲು, ನಿನ್ನ ಹೃದಯ
ಖುಷಿಯಿಂದ ಆಹ್ವಾನವೊಪ್ಪಿ ನಿಯಂತ್ರಿಸುವ ಕೈಗೆ
ವಿಧೇಯವಾಗಿ ನಡೆದು ಪಡಿಮಿಡಿಯಬಹುದಿತ್ತು೯೪

ಕುಳಿತೆ ದಡದಲ್ಲಿ
ಗಾಳವ ಎಸೆದು ನೀರಲ್ಲಿ,೯೫ ಬೆನ್ನ ಹಿಂದೆ
ಹರಡಿರುವ ಬರಡುನೆಲ, ಹೋಗಲಿ ಕಡೇ ಪಕ್ಷ
ನನ್ನ ನೆಲವನ್ನೊಂದು ಕ್ರಮಕ್ಕೆ ಒಳಪಡಿಸಲೆ?೯೬
ಕುಸಿಯುತಿದೆ ಕುಸಿಯುತಿದೆ ಕುಸಿಯುತಿದೆ ಕೆಳಕ್ಕೆ
ಲಂಡನ್ ಸೇತುವೆ

ಪ್ವಾ ಸಸ್ಕೋಸೆ ನೆಲ್ ಪೊಕೊ ಚೆ ಗ್ಲಿ ಅಫೀನ
ಕ್ವಾಂದೊ ಫಯಮ್ ಉತಿ ಚೆಲಿದೋನ್ – ಓ ಸ್ವಾಲೋ ಸ್ವಾಲೋ
ಲೆ ಪ್ರಿನ್ಸ್ ದಿ ಅಕಿತೇನ್ ಅ ಲ ತೂರ್ ಅಬೊಲೀ
(ಶುದ್ಧಿಕಾರಕ ಅಗ್ನಿಯಲ್ಲಿ ಮರೆಯಾದ ಅವನು೯೭
ನಾನೆಂದು ಆ ಸ್ವಾಲೋ ಹಕ್ಕಿಯಂತೆ ಅದೇನು೯೮
ಸ್ವಾಲೋ ಓ ಸ್ವಾಲೋ ನೀನಲ್ಲಿ ನೀನೆಲ್ಲಿ?
ಅಕ್ವಿಟೇನ್‌ ರಾಜಕುಮಾರ ಪಾಳುಗೋಪುರದಲ್ಲಿ)೯೯
ಈ ಭಗ್ನವಸ್ತುಗಳನ್ನು ನನ್ನ ಪಾಳ್ನೆಲದಲ್ಲಿ ನಾನೇ ಜೋಡಿಸಿದ್ದೇನೆ
ನಿನ್ನ ಕೃತ್ಯಕ್ಕೆ ತಕ್ಕದ್ದ ಮಾಡುತ್ತೇನೆ
ಹೀರೋನಿಮೋ ಮತ್ತೆ ಹುಚ್ಚನಾಗಿದ್ದಾನೆ.೧೦೦
ದತ್ತ. ದಯಧ್ವಮ್, ದಾಮ್ಯತ.
ಶಾಂತಿಃ ಶಾಂತಿಃ ಶಾಂತಿಃ೧೦೧
*****
೧೯೨೨

೧. ಕ್ಯುಮಿಯಾದ ಸಿಬಿಲ್ ….. ನನಗೆ ಸತ್ತರೆ ಸಾಕು : ಈ ಅವತರಣಿಕೆಯನ್ನು ಕ್ರಿ.ಶ ಒಂದನೆಯ ಶತಮಾನದಲ್ಲಿದ್ದ ಪೆಟ್ರೋನಿಯಸ್ ಎಂಬ ಲೇಖಕನ ‘ಸೆಟರಿಕಾನ್’ ಎಂಬ ಗದ್ಯಗ್ರಂಥದಿಂದ ತೆಗೆದುಕೊಳ್ಳಲಾಗಿದೆ. ಸಿಬಿಲ್‌ಗಳು ಗ್ರೀಸ್‌ ದೇಶದ ಪ್ರಾಚೀನ ಹೆಣ್ಣು ದೇವತೆಗಳು, ಮಂತ್ರವಾದಿನಿಯರು ಮತ್ತು ಜಗತ್ತಿನ ಭವಿಷ್ಯ ಹೇಳಬಲ್ಲವರು. ಇಲ್ಲಿ ಬರುವ ಕ್ಯುಮಿಯಾ ಪ್ರದೇಶದ ಸಿಬಿಲ್‌ ಅಂಥವರಲ್ಲಿ ತುಂಬ ಪ್ರಸಿದ್ಧಳು. ಸಿಬಿಲ್ ಗ್ರೀಕ್ ದೇವತೆಯಾದ ಅಪಾಲೋನ ಮೆಚ್ಚಿಗೆಗೆ ಪಾತ್ರಳಾದವಳು. ಅವಳನ್ನು ಮಾಟಮಾಡಿ ಬಂಧಿಸಿ ಒಂದು ಪಂಜರದಲ್ಲಿ ಇಡಲಾಯಿತು. ಒಂದು ಹಿಡಿಮಣ್ಣಿನಲ್ಲಿ ಎಷ್ಟು ಕಣಗಳಿರುತ್ತವೆಯೋ ಅಷ್ಟು ವರ್ಷಗಳ ಆಯುಷ್ಯವನ್ನು ಅಪಾಲೋ ಅವಳಿಗೆ ದಯಪಾಲಿಸಿದ್ದ. ಆದರೆ ಜೀವಿಸಿರುವಷ್ಟು ಕಾಲವೂ ತಾನು ಯುವತಿಯಾಗಿಯೇ ಉಳಿಯಬೇಕೆಂದು ಕೇಳಲು ಅವಳು ಉಪೇಕ್ಷೆ ಮಾಡಿದಳು. ಫಲವಾಗಿ ವಯಸ್ಸಾದಂತೆ ಅವಳ ಶಕ್ತಿಯೂ ಇಳಿಮುಖವಾಗುತ್ತ ಹೋಯಿತು. ಸಿಬಿಲ್ ದಾರಿಯಲ್ಲಿ ಹೋಗುವ ಜನರನ್ನೆಲ್ಲ ಕೂಗಿ ಕರೆದು ಅವರಿಗೆ ಭವಿಷ್ಯದ ಪುಸ್ತಕ ತೆರೆದು ಓದುತ್ತಿದ್ದಳು. ಅವಳ ಸುತ್ತ ಸದಾ ಮುತ್ತಿರುತ್ತಿದ್ದ ಹುಡುಗರು ಅವಳನ್ನು ಕೀಟಲೆ ಮಾಡುತ್ತ “ಸಿಬಿಲ್, ಸಿಬಿಲ್ ನಿನಗೆ ಏನು ಬೇಕು?” ಎಂದರೆ “ನನಗೆ ಸಾಯುವುದು ತುಂಬ ಇಷ್ಟ” ಎನ್ನುತ್ತಿದ್ದಳು. ಶಕ್ತಿ ತೀರಿದರೂ ಬದುಕಿ ಉಳಿದಿದ್ದ ಅವಳಿಗೆ ಸಾವು ಇಷ್ಟವಾಗಿತ್ತು. ಜೀವನದಲ್ಲಿ ಸೇರಿಕೊಂಡಿರುವ ಸಾವಿನ ಸಂಕೇತವಾಗಿ ಸಿಬಿಲ್ ಇಲ್ಲಿ ಬಳಕೆಯಾಗಿದ್ದಾಳೆ.

೨. ಉತ್ತಮ ಕೆತ್ತನೆಗಾರ ಎಜ್ರಾಪೌಂಡನಿಗೆ : ಮೂಲದಲ್ಲಿ ಇಟ್ಯಾಲಿಯನ್ ಭಾಷೆಯಲ್ಲಿರುವ ಈ ಅಂಕಿತಕ್ಕೆ ‘ನನಗಿಂತ ಉತ್ತಮ ಕಲೆಗಾರನಾದ’ ಎಂದು ಅರ್ಥ. ಅದರ ಅಕ್ಷರಶಃ ಅನುವಾದ ‘ಉತ್ತಮ ಅಕ್ಕಸಾಲಿಗೆ’ (Better Artisan) ಎಂದಾಗುತ್ತದೆ. ಈ ಪದಬಂಧವನ್ನು ಡಾಂಟೆಯ ‘ಡಿವೈನ್ ಕಾಮೆಡಿ’ಯಿಂದ (ಪರ್ಗೆಟೋರಿಯೊ XXVI, ೧೧೭) ತೆಗೆದುಕೊಂಡಿದೆ. ಅಲ್ಲಿ ಕವಿಯೊಬ್ಬರು ಪ್ರಸಿದ್ಧನಾದ ಆರ್ನಾಟ್ ಡೇನಿಯಲ್ ಬಗ್ಗೆ ಹೇಳುವಾಗ ಈ ಮಾತನ್ನು ಬಳಸುತ್ತಾನೆ. ಕಾವ್ಯಕರ್ಮದ ವಿಷಯದಲ್ಲಿ ತನಗೆ ಎಜ್ರಾಪೌಂಡ್ ನಿಂದ ದೊರೆತ ನೆರವನ್ನು, ಅದರಲ್ಲಿಯೂ ‘ಬಂಜೆಭೂಮಿ’ ಕವನದ ಅಂತಿಮ ಪರಿಶೀಲನೆಯಲ್ಲಿ ಅವನು ನೀಡಿದ ಸಹಾಯವನ್ನು ಎಲಿಯಟ್ ಈ ಅಂಕಿತದ ಮೂಲಕ ಕೃತಜ್ಞತೆಯಿಂದ ಸ್ಮರಿಸಿದ್ದಾನೆ.

ಸತ್ತವರನ್ನು ಹೂತದ್ದು

೩. ಸತ್ತವರನ್ನು ಹೂತದ್ದು : ಪುರಾಣಗಳಲ್ಲಿ ಮತ್ತು ಧಾರ್ಮಿಕ ವಿಧಿಗಳಲ್ಲಿ ದೇವತೆಯೊಬ್ಬನನ್ನು ಹೂಳುವ ಮತ್ತು ಆ ಮೂಲಕ ಆ ದೇವತೆಯ ಪುನರುಜ್ಜೀವನ ಮಾಡುವ ನಂಬಿಕೆಯಿದೆ. ಈ ಶೀರ್ಷಿಕೆ ಅದನ್ನು ಧ್ವನಿಸುತ್ತದೆ.

೪. ಗೊಡ್ಡು ನೆಲದಿಂದ ಲೈಲಾಕ್ ಹೂವ ಮೊಳೆಸಿ : ವಸಂತಕಾಲವನ್ನು ಕ್ರೂರವೆಂದು ಕರೆದಿರುವುದು ಎಲಿಯಟ್ ಗಿಂತ ಮುಂಚೆ ಇದ್ದ ಜಾರ್ಜಿಯನ್ ಕಾವ್ಯದ ದೃಷ್ಟಿಯಿಂದ ಅಸಂಗತವಾಗಿ ಕಾಣಬಹುದು. ಆದರೆ ಮುಂದಿನ ಐದು ಸಾಲುಗಳಲ್ಲಿ ಬರುವ ನಿಸರ್ಗ ವ್ಯಾಪಾರದ ವರ್ಣನೆಯ ಹೊಸತನದಲ್ಲಿ ಅದರ ಅರ್ಥೌಚಿತ್ಯವಿದೆ. ಒಣಗಿದ ನೆಲದಿಂದ ಲೈಲಾಕ್ ಹೂವು ಹೊಮ್ಮುತ್ತದೆ. ಏಪ್ರಿಲ್ ಮಾಸದ ವಿಶಿಷ್ಟತೆಯೆಂದರೆ ಇಡೀ ವಾತಾವರಣ ಮಾದಕವಾಗುತ್ತದೆ; ಹಳೆಯ ಮಧುರ ಘಟನೆಗಳ ಸ್ಮೃತಿಗಳು ಮತ್ತು ಒಳಗೆ ಹುದುಗಿರುವ ಬಯಕೆಗಳು ತೀವ್ರಗೊಳ್ಳುತ್ತವೆ. ವಸಂತದ ಮಳೆ ಜಡಗೊಂಡಿದ್ದ ಬೇರಿಗೆ ನೀರು ಉಣಿಸಿ ಅದನ್ನು ಕೆಣಕಿ ಜೀವಂತಗೊಳಿಸುತ್ತದೆ. ಹೀಗೆ ಜೀವದ ದಾಹವನ್ನು ಕೆದಕಿ ಏಪ್ರಿಲ್ ಕ್ರೂರವಾಗುತ್ತಿದೆ.

೫. ‘ಸ್ಟ್ಯಾನ್ ಬರ್ಗರ್ ಸೀ’ ಮೇಲೆ : ‘ಸ್ಟ್ಯಾನ್‌ಬರ್ಗರ್ ಸೀ’ ಎನ್ನುವುದು ಮ್ಯೂನಿಚ್ ಬಳಿ ಇರುವ ಒಂದು ಸರೋವರ; ಪ್ರವಾಸ ಸ್ಥಳ. ೧೯೧೧ರ ಆಗಸ್ಟ್‌ನಲ್ಲಿ ಎಲಿಯಟ್ ಇಲ್ಲಿಗೆ ಬಂದು ಹೋಗಿದ್ದ.

೬. ಹಾಫ್‌ ಗಾರ್ಟನ್‌ನಲ್ಲಿ ಕೂತು : ಹಾಫ್‌ಗಾರ್ಟನ್ ಎಂಬ ಪದಕ್ಕೆ ಜರ್ಮನ್ ಭಾಷೆಯಲ್ಲಿ ಕೆಫೆ ಎಂದು ಅರ್ಥ. ಇಲ್ಲಿ ನಿರ್ದೇಶಿಸಿರುವ ಕೆಫೆ ಬಹುಶಃ ಮ್ಯೂನಿಚ್‌ನಲ್ಲಿ ಸಾರ್ವಜನಿಕ ಉದ್ಯಾನವೊಂದರಲ್ಲಿನ ಒಂದು ಪ್ರಸಿದ್ಧವಾದ ಕೆಫೆ.

೭. ನಾನು ವಾಸ್ತವವಾಗಿ ಜರ್ಮನ್…. ಬಂದವಳು: ರಷ್ಯನರಿಂದ ಬಹಳ ಕಾಲ ಆಳಲ್ಪಟ್ಟ ಲಿಥುವೇನಿಯಾ ಈ ಕವನದ ಕಾಲಕ್ಕೆ ಸ್ವತಂತ್ರವಾಗಿತ್ತು. ಸ್ಟೀಫನ್‌ಸನ್ ಈ ಸಾಲನ್ನು ತುಂಡು ಇಂಗ್ಲೀಷಿನಲ್ಲಿ ಹೀಗೆ ಅನುವಾದಿಸುತ್ತಾನೆ Am no Russian, come from Lithuania, genuine German.

೮. ಗಟ್ಟಿ ಹಿಡಿ ಮೇರೀ ಗಟ್ಟಿ ಹಿಡಿ : ರೋಮನ್ ಕವಿ ಓವಿಡ್‌ನ ಭಾಗವೊಂದನ್ನು ವ್ಯಾಖ್ಯಾನಿಸುತ್ತ ಎಲಿಯಟ್ ‘ಎಲ್ಲ ಹೆಂಗಸರೂ ಮೂಲದಲ್ಲಿ ಒಬ್ಬ ಹೆಂಗಸೇ’ ಎನ್ನುತ್ತಾನೆ. ಆ ಹೇಳಿಕೆಯ ಮೂಲಕ ಅವನು ಇಲ್ಲಿ ಬರುವ ಮೇರಿ, ಈ ಕವನದಲ್ಲೇ ಮುಂದೆ ಬರುವ ‘ಹಯಸಿಂಥ್ ಹುಡುಗಿ’ (೧-೩೬), ‘ಸಂದರ್ಭಗಳ ನಾರಿ’ (೧-೫೦) ಮತ್ತು ಎರಡನೆಯ ಭಾಗವಾದ ‘ಚದುರಂಗದಾಟ’ದಲ್ಲಿ ಬರುವ ಹೆಣ್ಣುಗಳು – ಇವರನ್ನು ಒಂದೇ ವ್ಯಕ್ತಿತ್ವದ ಭಿನ್ನ ರೂಪಗಳೆಂದು ನಿರ್ದೇಶಿಸುತ್ತಾನೆ.

೯. ನಾನು ಓದುವುದೆಲ್ಲ ಬಹಳಷ್ಟು ರಾತ್ರಿಯೇ…. ದಕ್ಷಿಣದ ಕಡೆ ಹೋಗುವೆ : ಚಳಿಗಾಲಕ್ಕೆ ಮುಂಚಿನ ಶಾಲಾವಧಿಯ ದಿನಗಳಲ್ಲಿ ರಾತ್ರಿಯೆಲ್ಲ ಓದಿ, ಚಳಿಗಾಲದಲ್ಲಿ ವಿಶ್ರಾಂತಿಗೆಂದು ದಕ್ಷಿಣದ ಸ್ಪೇನ್ ಮತ್ತು ಇಟಲಿಗಳಿಗೆ ಹೋಗುವುದು ಆಂಗ್ಲರಲ್ಲಿ ರೂಢಿ.

೧೦. ಈ ಕಲ್ಲುನೆಲದಲ್ಲಿ….ಹೇಳು ಮನುಪುತ್ರ : ದೇವರು ಇಜ್ಹಕಿಲ್‌ನನ್ನು ಮನುಷ್ಯನ ಮಗ’ ಎಂದು ಸಂಬೋಧಿಸುತ್ತಾನೆ. ಮುಂದುವರಿದು ದೇವರು ಅವನಿಗೆ ಹೇಳುವ ಮಾತು ಇದು. “ನಿನ್ನನ್ನು ನಾನೊಂದು ಬಂಡೆದ್ದ ರಾಷ್ಟ್ರಕ್ಕೆ ಕಳಿಸಿಕೊಡುತ್ತೇನೆ. ಅಲ್ಲಿಯ ಜನ ಮತ್ತು ಅವರ ಪಿತೃಗಳು ನನ್ನನ್ನು ಮೀರಿ ನಡೆದಿದ್ದಾರೆ (ಇಜ್ಹಲ್ II-೧).

೧೧. ಅಲ್ಲಿ ಉರಿಯುವ ಸೂರ್ಯ…..ಜೀರುಂಡೆ : ಎಕ್ಸಿಸಿಯಾಸ್ಟಸ್ X-೧೧, ೫ರಲ್ಲಿ ಬರುವ ಉಪದೇಶಕನು ಶಾಪದಿಂದ ಜರ್ಝರಿತವಾದ, ನೀರಿಲ್ಲದ ನಿರ್ಜನ ಬಂಜೆಭೂಮಿಯೊಂದನ್ನು ಕುರಿತು ಮಾತಾಡುತ್ತಾನೆ.

೧೨. ಈ ಕೆಂಪು ಬಂಡೆ ಬುಡದಲ್ಲಿ ಮಾತ್ರ ನೆರಳಿದೆ: ಈಸಾಯ (XXX : ೨) ಒಬ್ಬಪ್ರವಾದಿಯ ಆಗಮನದ ಬಗ್ಗೆ ಭವಿಷ್ಯ ಹೇಳುತ್ತಾನೆ. “ಆ ಪ್ರವಾದಿಯು ಒಣನೆಲಕ್ಕೆ ನದಿನೀರಿನಂತೆ, ದಣಿದ ನೆಲದಲ್ಲಿ ನೆರಳು ಕೊಡುವ ಭಾರಿ ಬಂಡೆಯಂತೆ ಇರುತ್ತಾನೆ.”

೧೩. (ಕೆಂಪುಬಂಡೆಯ ಬುಡದ ನೆರಳಲ್ಲಿ ನಿಲ್ಲುಬಾ) : ಈ ಸಾಲು ಮತ್ತು ಮುಂದಿನ ನಾಲ್ಕು ಸಾಲುಗಳು ಎಲಿಯಟ್ ಮುಂಚೆಯೇ ಬರೆದಿದ್ದ The Death of Saint Narcissus ಎಂಬ ಪದ್ಯದ ಕೆಳಗಿನ ಸಾಲುಗಳನ್ನು ಆಧರಿಸಿ ರೂಪುಗೊಂಡಿದೆ.

Come under the shadow of this grey rock-
Come in under the shadow of this grey rock
And I will show you something different from either
Your shadow sprawling over the sand at daybreak, or
Your shadow leaping behind the fire against the red rock…

ಎಲಿಯಟ್ ಹಿಂದೆಯೇ ಬರೆದಿದ್ದು ಪ್ರಕಟಿಸದೆ ಹೋದ ಬೇರೆ ಕೆಲವು ಪದ್ಯಗಳ ಸಾಲೂ ಬಂಜೆಭೂಮಿಯಲ್ಲಿ ಸೇರಿವೆ. ಮೇಲಿನದು ಅದಕ್ಕೆ ಒಂದು ಉದಾಹರಣೆ.

೧೪. ಒಂದು ಹಿಡಿ ಮಣ್ಣಲ್ಲಿ ಭಯವ ತೋರಿಸುವೆ: ಜೋಸೆಫ್ ಕಾರ್ನಾಡನ Youth ಎಂಬ ಕಥೆಯಲ್ಲಿ ಮಾರ್ಲೋ, ಒಂದು ಹಿಡಿ ಮಣ್ಣಿನಲ್ಲಿ ಜೀವಶಕ್ತಿಯ ಪ್ರಖರಶಾಖ ತನಗೆ ಗೋಚರಿಸಿದ್ದನ್ನು ನೆನೆಸಿಕೊಳ್ಳುತ್ತಾನೆ. ಬೈಬಲ್ಲಿನ ಪ್ರಕಾರವೂ ಮಣ್ಣು ಶರೀರದ ನಶ್ವರತೆಯನ್ನು ಸೂಚಿಸುವ ಸಂಕೇತ. “ಅನಂತರ ಮಣ್ಣು ಭೂಮಿಗೆ ಅದು ಹಿಂದೆ ಇದ್ದ ರೀತಿಯಲ್ಲಿ ಹಿಂತಿರುಗುತ್ತದೆ” ಎಕ್ಸಿಸಿಯಾಸ್ಟಸ್‌ (XII:೭), ಎಲಿಯಟ್ ಇಲ್ಲಿ ಮಣ್ಣಿನ ಮರೆಗಿರುವ ಚೈತನ್ಯವನ್ನು ಕುರಿತು ಮಾತಾಡುತ್ತಿರುವಂತಿದೆ. ನೋಡಿ ಟಿಪ್ಪಣಿ ೧.

೧೫. ಶಾಂತ ಗಾಳಿ ಬೀಸುತಿದೆ…. ಕಾಯುತಿರುವ ನನಗೆ? : ೩೮ರಿಂದ ೫೨ರ ವರೆಗಿನ ಸಾಲುಗಳಲ್ಲಿ ಮೂರು ಬೇರೆ ಬೇರೆ ಸಂದರ್ಭಗಳ ಪ್ರಣಯಾನುಭವ ವ್ಯಕ್ತವಾಗಿದೆ. (೧) ವ್ಯಾಗ್ನರ್‌ ‘ಟ್ರಿಸ್ಡನ್ ಮತ್ತು ಇಸ್ರೇಲ್ಡ್’ ಎಂಬ ಅಪೇರಾದಿಂದ ಇಲ್ಲಿ ಉದ್ಧರಿಸಲಾಗಿರುವ ಹಾಡಿನ ನಾಲ್ಕು ಸಾಲುಗಳಲ್ಲಿ ಯಾವ ಬಂಧನವೂ ಇರದ ಯುವಕ ನಾವಿಕನೊಬ್ಬನು ಐರ್ಲೆಂಡಿನಲ್ಲಿರುವ ತನ್ನ ಪ್ರಿಯೆಯನ್ನು ಕುರಿತು ಹಡಗಿನಲ್ಲಿ ಹಾಡುತ್ತ ಸಂಭ್ರಮಿಸುವುದು. (೨) ಹಯಸಿಂಥ್ ತೋಟದಲ್ಲಿ ಘಟಿಸಿದ ವಿಫಲ ಪ್ರಣಯ. (೩) ಟ್ರಿಸ್ಟನ್ ಇಸೋಲ್ಡಳಲ್ಲಿ ಇಟ್ಟ ಗಾಢವಾದ, ಆದರೆ ದುಃಖ ನೋವುಗಳಲ್ಲಿ ಕೊನೆ ಕಂಡ ಪ್ರೀತಿ.

೧೬. ಹಯಸಿಂಥ್ ಹೂಗಳನ್ನು : ‘ಹಯಸಿಂಥಸ್’ ಗ್ರೀಕ್ ಪುರಾಣದಲ್ಲಿ ಬರುವ ಒಬ್ಬ ಬಾಲಕ; ಸ್ಪಾರ್ಟಾ ದೇಶದ ದೊರೆಯ ಮಗ; ಅಪಾಲೋ ದೇವನಿಗೆ ಬಹಳ ಪ್ರಿಯನಾದವನು. ಪಶ್ಚಿಮಮಾರುತಗಳ ದೇವನಾದ ಸೆಫೈರಸ್ ಎನ್ನುವವನಿಗೂ ಹಯಸಿಂಥಸ್‌ ಬಹಳ ಮೆಚ್ಚಾದವನು, ಸೆಫೈರಸ್‌ನ ಅಚಾತುರ್ಯದಿಂದಾಗಿ ಅವನು ಎಸೆದ ಕಬ್ಬಿಣದ ಬಳೆ ತಲೆಗೆ ಬಡಿದು ಪಯಸಿಂಥಸ್ ತಲೆಯೊಡೆದು ಸತ್ತ. ತಲೆಯಿಂದ ರಕ್ತದ ಹನಿಗಳು ನೆಲಕ್ಕೆ ಬಿದ್ದಾಗ ಅಪಾಲೋದೇವ ಅವುಗಳನ್ನು ಸುಂದರ ಪುಷ್ಪಗಳನ್ನಾಗಿ ಪರಿವರ್ತಿಸಿದ. ಅಂದಿನಿಂದ ಅವುಗಳಿಗೆ ಹಯಸಿಂಥ್ ಪುಷ್ಪಗಳೆಂದೇ ಹೆಸರಾಯಿತು. (ಓವಿಡ್ : ಮೆಟಮಾರ್ಫಸಿಸ್ X) ಈ ಹೂವು ಇಲ್ಲಿ ಪ್ರೇಮದ ಸಂಕೇತವಾಗಿ ಬಳಕೆಯಾಗಿದೆ. ತನ್ನ ಪ್ರಿಯಕರ ತನಗೆ ಕೊಟ್ಟ ಆ ಹೂವುಗಳನ್ನು ಮುಡಿದಿದ್ದರಿಂದ ಇಲ್ಲಿ ಬರುವ ಹುಡುಗಿಯನ್ನು ಹಯಸಿಂಥ್ ಹುಡುಗಿ ಎಂದು
ಕರೆಯಲಾಗಿದೆ.

೧೭. ತೋಳು ತುಂಬಿತ್ತು, ಕೂದಲು ಒದ್ದೆಯಾಗಿತ್ತು; ಇಲ್ಲಿ ನೀರು ಮತ್ತೊಮ್ಮೆ ಫಲವಂತಿಕೆಯ ಸಂಕೇತವಾಗಿ ಪ್ರಸ್ತಾಪಗೊಂಡಿದೆ.

೧೮. ಬದುಕಿಲ್ಲ ಸತ್ತಿಲ್ಲ….ಎನ್ನಿಸಿದ ಗಳಿಗೆ : ಕೈಯಲ್ಲಿ ಹಯಸಿಂಥ್ ಹೂವು ಹಿಡಿದು ಸ್ವಾಗತಿಸುತ್ತಿರುವ ಪ್ರಿಯೆಯನ್ನು ಫಲವತಿಯನ್ನಾಗಿ ಮಾಡುವ ಶಕ್ತಿಯನ್ನೇ ನಾಯಕ ಕಳೆದುಕೊಂಡಿದ್ದಾನೆ. ಅವನಿಗೆ ಏನೂ ತೋಚುತ್ತಿಲ್ಲ. ಮೇಲಿನ ಸಾಲು ಸೃಷ್ಟಿಸುವ ಪ್ರತಿಧ್ವನಿಯೊಂದಿದೆ. ಡಾಂಟೆಯ ‘ಡಿವೈನ್ ಕಾಮೆಡಿ’ ಕಾವ್ಯದ ಇನ್‌ಫರ್ನೊ (ನರಕ)ದಲ್ಲಿ ಕಟ್ಟಕಡೆಯ ವೃತ್ತದಲ್ಲಿ ಭಯಂಕರ ಚಳಿಯಲ್ಲಿ ಸೇಟನ್ ಕಾಣಿಸಿಕೊಳ್ಳುತ್ತಾನೆ. ಅಲ್ಲಿ ಬರುವ ಸಂದರ್ಭಕ್ಕೆ ಈ ಮಾತು ತಳುಕು ಹಾಕಿಕೊಂಡಿದೆ.

೧೯. ಬೆಳಕಿನ ಹೃದಯಮೌನದಲ್ಲಿ : ಕಾನ್ರಾಡನ Heart of Darkness ಕೃತಿಯ ಶೀರ್ಷಿಕೆಯನ್ನೇ ಎಲಿಯಟ್ heart of light ಎಂಬುದಾಗಿ ಮಾಡಿಕೊಂಡಂತಿದೆ.

೨೦. ವಿಸ್ತಾರ ಸಾಗರ ಖಾಲಿಯೆ ಇದೆ : ಈ ಸಾಲೂ ವ್ಯಾಗ್ನರ್‌ನ ಅಪೇರಾದಿಂದಲೇ (III, Verse 24) ಉದ್ದರಿಸಿದ್ದು. ಗಾಯಗೊಂಡು ಸಾವಿನ ಅಂಚಿನಲ್ಲಿರುವ ಟ್ರಿಸ್ಟನ್ ಸಾಗರದಾಚೆಯ ಕ್ಯಾಸೆಲ್‌ನಲ್ಲಿ ಮಲಗಿದ್ದಾನೆ; ತನ್ನ ಪ್ರಿಯೆ ಇಸೋಲ್ಡಳನ್ನು ಹೊತ್ತು ತರುವ ಹಡಗಿಗಾಗಿ ಪ್ರತಿಗಳಿಗೆ ಕಾಯುತ್ತಿದ್ದಾನೆ. ಇಸೋಲ್ಡ್ ತನ್ನ ಗಂಡನಾದ ಮಾರ್ಕ್ ದೊರೆಯನ್ನು ತ್ಯಜಿಸಿ, ಅರಮನೆಯಿಂದ ಪಲಾಯನ ಮಾಡಿ ಟ್ರಿಸ್ಟನ್ನನನ್ನು ಸೇರಲು ಹಡಗಿನಲ್ಲಿ ಬರಬೇಕಾಗಿದೆ. ಹಡಗು ಬರುವುದನ್ನು ಕಾದು ನೋಡುತ್ತಿರುವ ಸೇವಕ ಟ್ರಿಸ್ಟನ್ನನ ಬಳಿ ಬಂದು ‘ಇಡೀ ಸಾಗರ ಖಾಲಿಯಿದೆ, ಯಾವ ಹಡಗೂ ಕಾಣುತ್ತಿಲ್ಲ’ ಎಂಬ ಅಪ್ರಿಯವಾದ ಸುದ್ದಿ ಕೊಡುತ್ತಾನೆ. ಬಂಜೆಭೂಮಿಯ ನಾಯಕ ಮತ್ತು ಹ್ಯಾಸಿಂಥ್ ಹುಡುಗಿಯ ವ್ಯರ್ಥಪ್ರೇಮವನ್ನು ಧ್ವನಿಸಲು ಈ ಪ್ರಸಂಗ ಬಂದಿದೆ.

೨೧. ಮದಾಂ ಸೊಸಾಸ್ತ್ರಿಸ್ ಖ್ಯಾತ ಭವಿಷ್ಯಗಾರ್ತಿ : ಆಲ್ಡಸ್ ಹಕ್ಸ್ಲಿಯ Come Yellow (೧೯೨೧) ಕಾದಂಬರಿಯಲ್ಲಿ ಮಿಸ್ಟರ್ ಸ್ಕೋಗನ್ ಎಂಬ ಬ್ಯಾಂಕ್ ಮ್ಯಾನೇಜರನ ಪಾತ್ರ ಬರುತ್ತದೆ. ಅವನು Madame Sesostris ಎಂಬ ಹೆಸರಿಟ್ಟುಕೊಂಡ ಒಬ್ಬ ವೇಷಧಾರಿ ಭವಿಷ್ಯಕಾರ. ಈ ಕಾದಂಬರಿಯನ್ನು ಅದು ಪ್ರಕಟವಾದ ಕೂಡಲೇ ಓದಿದ್ದುದಾಗಿಯೂ ಸೊಸಾಸ್ತ್ರಿಸ್ ಎಂಬ ಹೆಸರನ್ನು ತಾನು ಅಲ್ಲಿಂದಲೇ ಅಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡಿರಬೇಕೆಂದೂ ಎಲಿಯಟ್ ಹೇಳುತ್ತಾನೆ. ಅವನು ಓದಿ ಗುರುತು ಮಾಡಿರುವ ಆ ಕಾದಂಬರಿಯ ಪ್ರತಿ ಲಭ್ಯವಿದೆ. ಎಲಿಯಟ್ ಅದನ್ನು ಎಷ್ಟು ವಿವರವಾಗಿ ಓದಿದ್ದನೆನ್ನುವುದು ಅದರಿಂದ ತಿಳಿಯುತ್ತದೆ.

೨೨. ಕಣಿನುಡಿವ ಗಂಜೀಪಿನಿಲೆಯ ಪ್ಯಾಕು…. ಫಿನೀಷಿಯದ ನಾವಿಕ : (ಸಾಲು ೫೪-೬೫) ಈ ಮಾತುಗಳು ‘ಟ್ಯಾರಟ್ ಡೆಕ್ ಆಫ್ ಕಾರ್ಡ್’ಗೆ ಸಂಬಂಧಿಸಿ ಬಂದಿವೆ. ಹಿಂದೆ ಪೂರ್ವ ದೇಶಗಳ ಭವಿಷ್ಯ, ಮಂತ್ರಜಾಲಗಳಲ್ಲಿ ಬಳಕೆಯಾಗುತ್ತಿದ್ದು ಇದಕ್ಕೆ ಗೌರವದ ಸ್ಥಾನ ಇತ್ತು. ಈಗ ಕೆಳದರ್ಜೆಯ ಕಣಿಗಾರರಿಂದ ಬಳಕೆಯಾಗುತ್ತಿದೆ. ಎಲಿಯಟ್ ಈ ಬಗ್ಗೆ ಹೀಗೆ ಹೇಳುತ್ತಾನೆ. “ನನಗೆ ಈ ಪ್ಯಾಕಿನ ಸ್ವರೂಪ ಮತ್ತು ಅದನ್ನು ಬಳಸುವ ರೀತಿಗಳ ಬಗ್ಗೆ ಖಚಿತವಾಗಿ ಗೊತ್ತಿಲ್ಲ. ನನ್ನ ಅನುಕೂಲಕ್ಕೆ ಹೊಂದಿಕೆಯಾಗುವಂತೆ ಅದನ್ನು ಪದ್ಯದಲ್ಲಿ ಬಳಸಿಕೊಂಡಿದ್ದೇನೆ. ನೇಣಿನಲ್ಲಿರುವ ಮನುಷ್ಯ (hanged man) ನನ್ನ ಉದ್ದೇಶಕ್ಕೆ ಎರಡು ರೀತಿಯಲ್ಲಿ ಬಳಕೆಯಾಗಿದ್ದಾನೆ. ಅವನನ್ನು ಫ್ರೆಜ್ಹರ್ ಹೇಳುವ, ನೇಣಿನಲ್ಲಿರುವ ದೇವರ ಜೊತೆಯಲ್ಲಿ ಮತ್ತು ಮುಂದೆ (ಈ ಕವನದ ಐದನೆಯ ಭಾಗದಲ್ಲಿ) ಎಮ್ಮಾಸ್‌ಗೆ ಪ್ರಯಾಣ ಹೊರಟ ಕ್ರಿಸ್ತಭಕ್ತರೊಂದಿಗೆ ಕಾಣಿಸಿಕೊಳ್ಳುವ, ಗೊಂಗಡಿ ತೊಟ್ಟ ಅಪರಿಚಿತ ವ್ಯಕ್ತಿಯ ಜೊತೆಯಲ್ಲಿ ಸಮೀಕರಿಸಿಕೊಂಡಿದ್ದೇನೆ. ಫಿನೀಷಿಯದ ನಾವಿಕ ಮತ್ತು ವರ್ತಕ ಇಬ್ಬರೂ (ಕವನದಲ್ಲಿ) ಮುಂದೆ ಬರುತ್ತಾರೆ. ಮೂರು ಮರಗಾಲುಗಳ ವ್ಯಕ್ತಿಯನ್ನು ಫಿಷರ್ ರಾಜನಿಗೆ ಸಂಬಂಧಿಸಿ ಬಳಸಿದ್ದೇನೆ.”

೨೩ (ಅಗೋ ಅವನ ಕಣ್ಣು ಈಗ ಮುತ್ತಾಗಿವೆ) : ಷೇಕ್ಸ್‌ಪಿಯರನ ಟೆಂಪೆಸ್ಟ್‌ ನಾಟಕದಲ್ಲಿ (೧ ನೆಯ ಅಂಕ ೨ನೆಯ ದೃಶ್ಯ) ಏರಿಯಲ್ ಹೇಳುವ ಹಾಡಿನಲ್ಲಿ ಬರುವ ಸಾಲು ಇದು. ಏರಿಯಲ್ ಫರ್ಡಿನಾಂಡನನ್ನು ಮಿರಾಂಡಳ ಬಳಿಗೆ ಕರೆದೊಯ್ಯುತ್ತಾನೆ. ಅಲಾನ್ಸೊ (ಫರ್ಡಿನಾಂಡನ ತಂದೆ) ಅಪಘಾತದಿಂದ ಪಾರಾಗಿ ಉಳಿದಿದ್ದರೂ ಅದು ಫರ್ಡಿನಾಂಡನಿಗೆ ಗೊತ್ತಿಲ್ಲ. ಅವನು ಸತ್ತಿದ್ದಾನೆಂದೇ ಫರ್ಡಿನಾಂಡ್ ಭಾವಿಸಿದ್ದಾನೆ. (Setting on a back / Weeping again the king my father’s wreck / This music crept by me upon the waters). ಸತ್ತ ಅಥವಾ ವಂಚಿತನಾದ ತಂದೆಯ ವಿಷಯ `ಬಂಜೆಭೂಮಿ’ ಕವನದಲ್ಲಿ ಮತ್ತೆ ಮತ್ತೆ ಉಕ್ತವಾಗುತ್ತದೆ. ಮೇಲಿನ ಸಂದರ್ಭನಿರ್ದೆಶನ ಮುಳುಗಿಹೋದ ಫಿನೀಷಿಯನ್ ನಾವಿಕನ (೧-೪೭) ಮತ್ತು (ಈ ಕವನದ ನಾಲ್ಕನೆಯ ಭಾಗದಲ್ಲಿ ಬರುವ) ‘ಫ್ಲೆಬಾಸ್‌’ನ ವಿಷಯಕ್ಕೂ ಸಂಗತವಾಗುತ್ತದೆ.

೨೪. ಇದೊ ನೋಡಿ ಬೆಲಡೋನಾ : `ಬೆಲಡೋನಾ’ ಎನ್ನುವುದು ಒಂದು ಜಾತಿಯ ಸಸ್ಯವನ್ನು ಸೂಚಿಸುವ ಇಟ್ಯಾಲಿಯನ್ ಪದ. ಈ ಸಸ್ಯದಲ್ಲಿ ಬಿಳಿಯ ಹೂವುಗಳೂ (ವಿಷಮಯವಾದ) ಕಪ್ಪು ಕಾಯಿಗಳೂ ಬಿಡುತ್ತವೆ. ಬೆಲಡೋನಾ ಎಂಬ ಶಬ್ದಕ್ಕೆ ‘ಸುಂದರಿಯಾದ ಯುವತಿ’ ಎನ್ನುವುದು ಪದಶಃ ಅರ್ಥವಾಗಿರುತ್ತ ಅದು ‘ವರ್ಜಿನ್‌’ಗೆ ಗುಣವಾಚಕವಾಗಿದೆ. ‘ವರ್ಜಿನ್’ ಸಂಬಂಧದಲ್ಲಿ ರಚಿತವಾದ ಚಿತ್ರಗಳಲ್ಲಿ ಬಹಳ ಪ್ರಸಿದ್ಧವಾದದ್ದು ಲಿಯನಾರ್ಡೊ ಡ ವಿಂಚಿ ರಚಿಸಿದ Virgin of the Rocks ಎಂಬ ಚಿತ್ರ. ಅದು ಇಲ್ಲಿ ಬರುವ Lady of the Rocks ಎಂಬ ಮಾತಿಗೆ ಧ್ವನಿ ನೆಲೆಯಲ್ಲಿ ಸಂಬಂಧಿಸಿಕೊಂಡಿದೆ. ಮುಂದಿನ ಸಾಲಿನಲ್ಲಿ ಬರುವ `ಸಂದರ್ಭಗಳ ನಾರಿ’ ಎನ್ನುವುದು ಈ ಕವನದ ಎರಡನೆಯ ಭಾಗದಲ್ಲಿ ಬರುವ `ಅಪರಿಚಿತ ಕೃತಕ ಪರಿಮಳಗಳ’ ಹೆಣ್ಣನ್ನು ಸೂಚಿಸುತ್ತದೆ. ಅವಳು ಬಳಸುವ ಪರಿಮಳ ಸಾಮಗ್ರಿಗಳಲ್ಲಿ ಕಣ್ಣನ್ನು ಹೊಳಪಾಗಿಸಲು ಬಳಸುವ ಬೆಲಡೋನಾ ಸಸ್ಯದ ಲೇಪನವೂ ಸೇರಿದೆ.

೨೫. ಇಲ್ಲಿದ್ದಾನೆ ನೋಡಿ ಒಕ್ಕಣ್ಣ ವರ್ತಕ: ಇವನ ಮತ್ತೊಂದು ರೂಪಾಂತರ ಶ್ರೀಮಾನ್ ಯೂಜಿನೈಡಿಸ್‌….ಸ್ಮಿರ್ನಾದ ವರ್ತಕ (ಭಾಗ III) ‘ಹೊತ್ತಿದ್ದಾನೆ ಆತ ಬೆನ್ನಮೇಲೆ’ ಹಲವು ಅವ್ಯವಸ್ಥೆಗಳ ಭಾರವನ್ನು.

೨೬. ಇದು ಅವಾಸ್ತವ ನಗರ : ಫ್ರೆಂಚ್ ಕವಿ ಬಾದಿಲೇರ್‌ನ ‘ಫ್ಲೋರ್ ದ ಮಾಲ್’ (ಪಾಪದ ಹೂವುಗಳು) ಕೃತಿಯಲ್ಲಿ ಬರುವ ೯೩ನೇ ಪದ್ಯದ ಆರಂಭದ ಸಾಲುಗಳು. “Swarming city, city filled with dreams/ Where the ghost in full daylight haik the passerby.” ಈ ಸಾಲುಗಳನ್ನು ಬಾದಿಲೇರ್ ಪ್ಯಾರಿಸ್ಸಿನ ಸಂಬಂಧದಲ್ಲಿ ಬರೆಯುತ್ತಾನೆ.

೨೭. ಲಂಡನ್ ಸೇತುವೆ ಮೇಲೆ…. ಭಾರಿ ಹಿಂಡು: ಥೇಮ್ಸ್‌ ನದಿಗೆ ಅಡ್ಡವಾಗಿ ಹಾಕಿರುವ ಸೇತುವೆ. ಇಲ್ಲಿ ಬರುವ ‘ಭಾರಿ ಹಿಂಡು’ ಕಾರ್ಮಿಕರದ್ದು. ಅವರು ಲಂಡನ್ ನಗರದೊಳಗೆ ವ್ಯಾಪಾರ ವ್ಯವಹಾರ ದಟ್ಟವಾಗಿರುವ ಭಾಗಕ್ಕೆ ಹೋಗುತ್ತಿರುವವರು.

೨೮. ಅಷ್ಟೊಂದು ಜನರನ್ನು….. ನನಗೆ ಗೊತ್ತಿರಲಿಲ್ಲ : ಇದು ಡಾಂಟೆಯ ಡಿವೈನ್
ಕಾಮೆಡಿಯ ‘ಇನ್‌ಫರ್ನೊ’ ಭಾಗದಲ್ಲಿ (III ೫೫-೫೭) ಬರುವ ಸಾಲುಗಳ ಅನುವಾದ. ಇನ್‌ಫರ್ನೊದಲ್ಲಿ ನರಕದ ಬಾಗಿಲ ಮೇಲೆಯೇ ‘ಇಲ್ಲಿ ಒಳ ಬರುವವರು ಎಲ್ಲ ಭರವಸೆ ತೊರೆದು ಬನ್ನಿ’ ಎಂಬ ಮಾತುಗಳನ್ನು ಬರೆದಿರುತ್ತದೆ. ಹೇಡಿತನದಿಂದಾಗಿ, (ಒಳ್ಳೆಯದು ಕೆಟ್ಟದು ಯಾವುದನ್ನೂ ಆರಿಸಿಕೊಳ್ಳದೆ ಕೇವಲ) ಉಪಾಯವಾಗಿ ಬದುಕಿದವರು ಸ್ವರ್ಗ ಹಾಗೂ ನರಕ ಎರಡಕ್ಕೂ ಎರವಾದವರು ಎನ್ನುವುದನ್ನು ಡಾಂಟೆ ಈ ಮಾತಿನ ಮೂಲಕ ಸೂಚಿಸುತ್ತಾನೆ. ಇಂಥ ಜನರನ್ನು ಎಲಿಯಟ್ Hollow Men ಕವನದಲ್ಲಿ ತಂದಿದ್ದಾನೆ.

೨೯. ಆಗೀಗ ಸಣ್ಣ ನಿಟ್ಟುಸಿರ ಹೊರಚೆಲ್ಲುತ್ತ : ಡಿವೈನ್ ಕಾಮೆಡಿಯ ‘ಇನ್‌ಫರ್ನೊ’ ಭಾಗದಲ್ಲಿ (V, ೨೫-೨೭ರಲ್ಲಿ ಬರುವ ಮಾತುಗಳ ಪ್ರಭಾವ ಹೊತ್ತ ಸಾಲು ಇದು. ಬೈಬಲ್‌ ಬಗ್ಗೆ ಕೇಳಿಯೇ ಇರದಿದ್ದ ಆದರೂ ಗುಣವಂತರಾಗಿದ್ದ ಜನರು ಅಲ್ಲಿ ನರಕಕ್ಕೆ ಬಂದಿರುತ್ತಾರೆ. ನರಕದ ಆ ನಿರ್ದಿಷ್ಟ ಭಾಗದಲ್ಲಿ ಯಾವ ನೋವೂ ಇಲ್ಲ. ಆದರೆ ಅಲ್ಲಿಂದ ಪಾರಾಗುವ ಭರವಸೆಯೂ ಆ ಜನಕ್ಕೆ ಇಲ್ಲ. ಅವರು ಸದಾ ನಿಟ್ಟುಸಿರುಬಿಡುತ್ತ ಅಲ್ಲಿಯ ನಿರಂತರ ಹವೆ ತಮ್ಮ ತಲ್ಲಣದಿಂದ ಕಂಪಿಸುವಂತೆ ಮಾಡುತ್ತ ನರಕದಲ್ಲಿ ಬಾಳುತ್ತಾರೆ.

೩೦. ಒಂಬತ್ತನೆಯ ಕಡೇ ಗಂಟೆ….ಸೇಂಟ್ ಮೇರಿ ವೂಲ್ನಾತ್ ಇರುವ ಕಡೆಗೆ: ‘ಸೆಂಟ್ ಮೇರಿ ವೂಲ್ನಾತ್’ ಲಂಡನ್ನಿನಲ್ಲಿರುವ ಒಂದು ಹಳೆಯ ಚರ್ಚು. ಹದಿನೆಂಟನೆಯ ಶತಮಾನದ ಮೊದಲ ಭಾಗದಲ್ಲಿ ಸರ್ ಕ್ರಿಸ್ಟೋಫರ್ ರೆನ್ ಎಂಬಾತ ಇದರ ಜೀರ್ಣೋದ್ದಾರ ಮಾಡಿಸಿದ. ಅಲ್ಲಿ ಒಂಬತ್ತನೆಯ ಕಡೆಯ ಗಂಟೆ ಬಡಿಯುವುದರ ಮಹತ್ವ ಸ್ಪಷ್ಟವಾಗಿಲ್ಲ. ಮ್ಯಾಥ್ಯ (XXVII)ನಲ್ಲಿಯೇನೊ ಗಂಟೆ ಒಂಬತ್ತರ ಪ್ರಸ್ತಾಪ ಬರುತ್ತದೆ, ಶಿಲುಬೆಗೇರಿಸಲ್ಪಟ್ಟ ಜೀಸಸ್ ‘ದೇವರೇ ದೇವರೇ ಯಾಕೆನ್ನ ಕೈಬಿಟ್ಟೆ’ ಎಂದು ದೊಡ್ಡದನಿಯಲ್ಲಿ ಕೂಗಿದಾಗ ಸುಮಾರು ‘ಒಂಬತ್ತು ಗಂಟೆಯ ಸಮಯ’.

೩೧. ಏನೋ ಏ ಸೈಟ್‌ಸನ್‌! ಮಿಲೇ ಹಡಗುಗಳಲ್ಲಿ ನನ್ನ ಜೊತೆಗಿದ್ದವನೆ : ಡಾಂಟೆಯ ಡಿವೈನ್ ಕಾಮೆಡಿ ಕಾವ್ಯದ ‘ಇನ್‌ ಫರ್ನೊ’ (ನರಕ) ಭಾಗವನ್ನು ನೆನಪಿಸುವ ಪ್ರಸ್ತಾಪ. ಡಾಂಟೆ ನರಕದಲ್ಲಿ ತಾನು ಕಾಣುವ ಪ್ರೇತಗಳ ಗುಂಪಿನಲ್ಲಿ ತನ್ನ ಸ್ನೇಹಿತರನ್ನು ಗುರುತಿಸಿ ಕರೆಯುತ್ತಾನೆ. ಇಲ್ಲಿ ಆಧುನಿಕ ಲಂಡನ್ ನಗರದಲ್ಲಿ ರಸ್ತೆಯಲ್ಲಿ ಸಾಗುತ್ತಿರುವ ಮಂದಿಯಲ್ಲಿ ಪರಿಚಿತನೊಬ್ಬನನ್ನು ಗುರುತಿಸಿ ಕರೆಯುತ್ತಿರುವುದರ ಪ್ರಸ್ತಾಪವಿದೆ. ಇಲ್ಲಿ ಬರುವ ‘ಮೈಲೇ’ ಎನ್ನುವ ಪದ ಕ್ರಿ.ಪೂ. ೨೬೦ರಲ್ಲಿ ನಡೆದ ಮ್ಯೂನಿಕ್ ಯುದ್ಧದ ನೌಕಾಕಾಳಗವೊಂದನ್ನು ಸೂಚಿಸುತ್ತದೆ. ಅದನ್ನು ನಮ್ಮ ಕಾಲದ ಮಹಾಯುದ್ಧದ ಜೊತೆ ಸಮೀಕರಿಸಲಾಗಿದೆ. ಮಹಾಯುದ್ಧದಲ್ಲಿ ಹೋರಾಡಿದ ‘ಸೈಟ್‌ಸನ್’ ಎಂಬ ವ್ಯಕ್ತಿಯನ್ನು ಗುರುತು ಹಿಡಿದು ಕರೆಯುತ್ತಿರುವುದರ ಚಿತ್ರ ಇಲ್ಲಿದೆ. ಎಲಿಯಟ್ ಕಾಲದೇಶಗಳ ಅಂತರವನ್ನು ಅಳಿಸಿ ಎರಡೂ ಯುದ್ಧಗಳನ್ನು ಒಂದೆಂಬಂತೆ ಕಲೆಸಿ ಮಾತಾಡುತ್ತಾನೆ.

೩೨. ಹೋದ ವರ್ಷ ನಿನ್ನ ತೋಟದಲ್ಲಿ ಹೆಣವೊಂದ ನೆಟ್ಟಿದ್ದೆಯಲ್ಲ: ಮೊದಲ ವಿಭಾಗದ ಕಡೆಯಲ್ಲಿ ಬರುವ ಈ ಸಾಲು (`ಸತ್ತವರನ್ನು ಹೂತದ್ದು’ ಎಂಬ) ಈ ವಿಭಾಗದ ಶೀರ್ಷಿಕೆಯನ್ನು ನಮ್ಮ ನೆನಪಿಗೆ ತರುತ್ತದೆ.

೩೩. ಮನುಷ್ಯರಿಗೆ ಮಿತ್ರ ಕಣೊ… ಅಗೆದುಬಿಟ್ಟಿತು : ಜಾನ್ ವೆಬ್‌ಸ್ಟರ್‌ನ ‘ದಿ ವೈಟ್ ಡೆವಿಲ್’ ನಾಟಕದಲ್ಲಿ(೫ನೆಯ ಅಂಕ ೪ನೆಯ ದೃಶ್ಯದಲ್ಲಿ ಬರುವ ಮಾತು. ‘But keep the wolf far thence, That’s foe to men,/ For with this nails he’ll dig them up again.’ ಈ ಸಾಲುಗಳು ದುಃಖ ತಾಯಿಯೊಬ್ಬಳು ಹೇಳುವ ಹಾಡಿನಲ್ಲಿ ಬರುತ್ತವೆ. ಅವಳ ಮಗ (ತಾನೇ ಕೊಂದ) ತನ್ನ ಸೋದರನನ್ನು ಹೂಳುವ ಸಂದರ್ಭ ಅದು. ಎಲಿಯಟ್ foe ಎನ್ನುವಲ್ಲಿ friend ಎಂಬ ಪದವನ್ನೂ wolf ಎನ್ನುವಲ್ಲಿ dog ಎಂಬ ಪದವನ್ನೂ ಬಳಸಿದ್ದಾನೆ. Dog ಪದದ ಮೊದಲಕ್ಷರ ದೊಡ್ಡಕ್ಷರ ಆಗಿರುವುದರಿಂದ ಅದು Dog star ಎಂದು ಸೂಚಿತವಾಗಿದೆ. ಸಿರಿಯಸ್ ಎಂಬ Dog star ತನ್ನ ಯಜಮಾನನಾದ ಓರಿಯಾನ್ (orion)ನನ್ನು ಸ್ವರ್ಗದುದ್ದಕ್ಕೂ ವಿಧೇಯವಾಗಿ ಹಿಂಬಾಲಿಸುತ್ತದೆ. ಅಲ್ಲದೆ ಫ್ರೇಜ್ಹರ್ ಹೇಳುವಂತೆ ಪೌರ್ವಾತ್ಯ ಪುರಾಣಗಳ ಪ್ರಕಾರ ಸಿರಿಯಸ್‌ನೇ ನೈಲ್‌ ನದಿಯಲ್ಲಿ ವರ್ಷವರ್ಷವೂ ಸಂಭವಿಸುವ ಪ್ರವಾಹದ ಉಬ್ಬರಕ್ಕೆ ಕಾರಣ. ಈ ಉಬ್ಬರದ ಘಟನೆ ಫಲವಂತಿಕೆ ಮತ್ತು ಪುನರುತ್ಥಾನಗಳಿಗೆ ಸಂಬಂಧಿಸಿಕೊಂಡದ್ದು.

ಆದರೆ ಬೈಬಲ್ಲಿನ ಪ್ರಕಾರ ನಾಯಿ ಮನುಷ್ಯನಿಗೆ ಮಿತ್ರ ಅಲ್ಲ. Deliver my soul from the sword, my darling from the power of dog (psalms XXII-೨೦) ಎಂಬ ಮಾತನ್ನೂ Beware of dogs, beware of evil workers….. (Phillipians-III-೨) ಎಂಬ ಹೇಳಿಕೆಯನ್ನೂ ಗಮನಿಸಿ.

೩೪. ಏ ಕಪಟಿ ಓದುಗನೆ…..ಒಡಹುಟ್ಟಿದವನೆ : ಬಾದಿಲೇರ್ ಕವಿಯ ‘ಪಾಪದ ಹೂವುಗಳು’ ಎಂಬ ಕೃತಿಯಲ್ಲಿ ಕವಿ ಓದುಗನಿಗೆ ಬರೆದ ಬರೆಹದ ಕೊನೆಯ ಮಾತು.

ಚದುರಂಗದಾಟ

೩೫. ಚದುರಂಗದಾಟ: ಥಾಮಸ್‌ ಮಿಡ್ಲ್‌ಟನ್ ೧೯೨೪ರಲ್ಲಿ ರಚಿಸಿದ A Game of Chess ಎಂಬ ನಾಟಕವನ್ನು ಇಲ್ಲಿ ಧ್ವನಿಸಲಾಗಿದೆ. ಈ ನಾಟಕ ರಾಜಕೀಯ ಲಾಭಕ್ಕಾಗಿ ಆದ ರಾಜಮನೆತನದ ವಿವಾಹವೊಂದನ್ನು ವಿಂಡಬಿಸುತ್ತದೆ.

ಎಲಿಯಟ್ ಕವನದ ಈ ಭಾಗಕ್ಕೆ ಮೊದಲು In the Cage ಎಂಬ ಶೀರ್ಷಿಕೆ ಕೊಟ್ಟಿದ್ದ. ಅದು ಕ್ಯುಮಿಯಾದ ಸಿಬಿಲ್‌ಗೆ ಸಂಬಂಧಿಸಿ ಯೋಚಿಸಿದ್ದ ಶೀರ್ಷಿಕೆ.

೩೬. ಅಮೃತಶಿಲೆ ಮೇಲೆ ಹೊಳಪಿಟ್ಟ ಸಿಂಹಾಸನದ ಹಾಗೆ: ಷೇಕ್ಸ್‌ಪಿಯರನ Antony and Cleopatra ನಾಟಕ ನೋಡಿ (II, ೧.೧, ೧೯೦). ಎಲಿಯಟ್ ಇಲ್ಲಿ ಬಳಸುವ ಭಾಷೆ ಕ್ಲಿಯೋಪಾತ್ರಳು ನೌಕೆಯೊಂದರಲ್ಲಿ ಕುಳಿತು ಮೊದಲಬಾರಿಗೆ ಆಂಟೊನಿಯನ್ನು ಸಂಧಿಸಲು ಹೊರಟ ಸಂದರ್ಭವನ್ನು ನೆನಪಿಸುತ್ತದೆ.

೩೭. ಮೋಂಬತ್ತಿಉರಿಯ….ಕದಡಿದವು ಹೊಗೆ ತೂರಿ: ಈನಿಯಡ್ ಕಾವ್ಯದಲ್ಲಿ ಬರುವ ವರ್ಣನೆಯೊಂದನ್ನು ಇಲ್ಲಿ ಕೆಲಮಟ್ಟಿಗೆ ಬಳಸಿಕೊಂಡಿದೆ. ಆ ಕಾವ್ಯದ ನಾಯಕನಾದ ಈನಿಯಸ್ ಕಾರ್ತೇಜಿಗೆ ಬಂದಾಗ ಅಲ್ಲಿ ರಾಣಿ ಡೈಡೊ ಅವನಿಗೆ ನೀಡಿದ ಭೋಜನಕೂಟ ಈ ವರ್ಣನೆಯಿಂದ ನೆನಪಾಗುತ್ತದೆ. ಡೈಡೊ ಈನಿಯಾಸ್‌ನನ್ನು ಗಾಢವಾಗಿ ಪ್ರೀತಿಸುತ್ತಾಳೆ. ಅವನು ತನ್ನನ್ನು ಬಿಟ್ಟು ಹೊರಟಾಗ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

೩೮. ಕಿಟಕಿ ತೋರಿಸುವಂತೆ ಹೊರಗಿನ ಅರಣ್ಯದೃಶ್ಯ: ಅರಣ್ಯದೃಶ್ಯ (Sylvan scene) ಎಂಬ ಪದಪುಂಜ ಮಿಲ್ಟನ್ನನ ‘ಪ್ಯಾರಡೈಸ್ ಲಾಸ್ಟ್’ ಮಹಾಕಾವ್ಯದ (ಭಾಗ IV, ಸಾಲು ೧೪೦ರಲ್ಲಿ) ಈಡನ್ ತೋಟದ ವರ್ಣನೆಯಲ್ಲಿ ಬಂದಿದ್ದು ಆ ಸಂದರ್ಭ ಇಲ್ಲಿ ನೆನಪಾಗುತ್ತದೆ. ಈಡನ್ ಮುಗ್ಧ ಪ್ರೇಮದಲ್ಲಿದ್ದ ಆಡಂ ಮತ್ತು ಈವ್ ಇದ್ದ ಸ್ಥಳ. ಈವ್‌ಳನ್ನು ಭ್ರಷ್ಟಳನ್ನಾಗಿಸಲು ಸೇಟನ್ ಈಡನ್ನಿನ ಗಡಿಭಾಗಕ್ಕೆ ಬರುತ್ತಿರುವಾಗ ಈ ವರ್ಣನೆ ಬರುತ್ತದೆ. ಆ ಕಾವ್ಯದಲ್ಲಿ ಮುಂದೆ ಮುಗ್ಧ ಜೀವವೊಂದರ ಮೇಲೆ ನಡೆಯುವ ಆಕ್ರಮಣ ಇಲ್ಲಿ ಮುಂದಿನ ಸಾಲುಗಳಲ್ಲಿ ಬರುವ ಮುಗ್ಧ ಹೆಣ್ಣಿನ (ಫಿಲೋಮೇಲಳ) ಮೇಲೆ ನಡೆಯುವ ಅತ್ಯಾಚಾರದಲ್ಲಿ ಧ್ವನಿತವಾಗುತ್ತದೆ.

೩೯. ಫಿಲೋಮೇಲ…..ಬಣ್ಣಿಸಿತ್ತು : ಓವಿಡ್ ಕವಿಯ ‘ಮೆಟಮಾರ್ಫಸಸ್’ ಕೃತಿಯಲ್ಲಿ ಬರುವ ಪ್ರಸಂಗ. ಟೇರೂ ಎಂಬ ರಾಜ ತನ್ನ ಹೆಂಡತಿಯ ಸೋದರಿಯಾದ ಫಿಲೊಮೇಲಳನ್ನು ಬಲಾತ್ಕರಿಸಿ ಭೋಗಿಸಿದ. ಅವಳು ಮಾತಾಡದಂತೆ ಮಾಡಲು ನಾಲಿಗೆಯನ್ನೇ ಕತ್ತರಿಸಿದ. ಟೇರೂ ಮೇಲೆ ಸೇಡು ತೀರಿಸಿಕೊಳ್ಳಲು ಅವನ ಹೆಂಡತಿ (ಫಿಲೊಮೇಲಳ ಸೋದರಿ) ರಾಜನ ಮಗನನ್ನು ಕೊಂದು ಅವನ ಹೃದಯವನ್ನೇ ತಿನ್ನಲು ಬಡಿಸಿದಳು. ದೇವತೆಗಳು ಸೋದರಿಯರಿಬ್ಬರನ್ನೂ ಕಾಪಾಡಲು ಅವರನ್ನು ಹಕ್ಕಿಗಳಾಗಿ ರೂಪಾಂತರಿಸಿದರು. ಫಿಲೊಮೇಲ ನೈಟಿಂಗೇಲ್ ಪಕ್ಷಿಯಾಗಿ ಮತ್ತು ಅವಳ ಸೋದರಿ ಸ್ವಾಲೋ ಹಕ್ಕಿಯಾಗಿ ಪರಿವರ್ತನೆಗೊಂಡರು. ‘ಬಂಜೆಭೂಮಿ’ ಯ ಕೊನೆಯಲ್ಲಿ ಸ್ಟಾಲೋ ಹಕ್ಕಿಯ ಪ್ರಸ್ತಾಪವಿದೆ.

೪೦. ಇವತ್ತು ರಾತ್ರಿ ಮನಸ್ಸಿಗೇನೋ ಬಲು ಕಿರಿಕಿರಿ: ‘ದಿ ಡಯಲ್’ ಎಂಬ ಪ್ರಸಿದ್ಧ ಸಾಹಿತ್ಯ
ಪತ್ರಿಕೆಯಲ್ಲಿ ಪ್ರಕಟವಾದ ಡಿ.ಎಚ್. ಲಾರೆನ್ಸನ ಸಣ್ಣ ಕಥೆಯೊಂದರಲ್ಲಿ ಮೂರು ಪಾತ್ರಗಳು ನಡೆಸುವ ಸಂವಾದದಲ್ಲಿ ಇದೇ ಬಗೆಯ ಮಾತುಗಳು ಬರುತ್ತವೆ. ಮಾತಿನ ಧಾಟಿಯು ಇದನ್ನೇ ಹೋಲುತ್ತದೆ. ಇಲ್ಲಿ ಮುಂದೆ ಬರುವ ಗಾಳಿಯ ಸದ್ದೂ ಅಲ್ಲಿ ಪ್ರಸ್ತಾಪವಾಗುತ್ತದೆ. ಎಲಿಯಟ್ ಡಯಲ್ ಪತ್ರಿಕೆಯ ಚಂದಾದಾರನಾಗಿದ್ದು ಅದರ ಬರಹಗಳನ್ನು ಗಮನಿಸುತ್ತಿದ್ದ. ಅವನು ‘ಬಂಜೆಭೂಮಿ’ ಕವನ ಬರೆಯುತ್ತಿದ್ದ ಕಾಲ ಅದು. ಕಥೆ ಪ್ರಕಟವಾದದ್ದು ೧೯೨೧ರಲ್ಲಿ ಕವನ ಪ್ರಕಟವಾದದ್ದು ೧೯೨೨ರಲ್ಲಿ.

೪೧. ಸತ್ತೋರು….ಇಲಿ ಬಿಲದಲ್ಲಿ: ಇಲಿ ಬಿಲ ಎನ್ನುವುದು ಮೊದಲ ಮಹಾಯುದ್ಧದಲ್ಲಿ ಸೈನಿಕರು ಕಂದಕಗಳಿಗೆ ಬಳಸುತ್ತಿದ್ದ ಗ್ರಾಮ್ಯ ಶಬ್ದ. ಈ ಕಂದಕಗಳಲ್ಲಿ ಕೆಲವೊಮ್ಮೆ ಭಯಂಕರವಾದ ಹೆಗ್ಗಣಗಳು ಸೇರಿಕೊಂಡಿರುತ್ತಿದ್ದವು. ಮಹಾಯುದ್ಧದಲ್ಲಿ ಸೈನ್ಯದ ಮುಂಚೂಣಿಯಲ್ಲಿ ಹೋರಾಡುತ್ತಿದ್ದ ತನ್ನ ಭಾವಮೈದುನ ಮಾರಿಸ್ ಹೇ-ವುಡ್‌ನ ಅನುಭವವನ್ನು ತನ್ನ ತಾಯಿಗೆ ತಿಳಿಸಿ ಬರೆದ ಪತ್ರದಲ್ಲಿ ಎಲಿಯಟ್ ಮುಂದಿನ ಮಾತು ಬರೆದಿದ್ದಾನೆ : “What he talks about rats and vermin is incredible. Northren France is swarming, and the rats are as big as cats.”

೪೨. ಏನೆ ಆ ಸದ್ದು? ಬಾಗಿಲ ಬುಡದ ಗಾಳಿ: ಜಾನ್ ವೆಬ್‌ಸ್ಟರ್ ಬರೆದ ‘ದಿ ಡೆವಿಲ್ಸ್‌ ಲಾ ಕೇಸ್’ ಎಂಬ ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ಕಾಂಟಾರಿನೊ ಎಂಬ ಡ್ಯೂಕ್ ರೊಮೇಲಿಯೊ ಎಂಬ ವ್ಯಕ್ತಿಗೆ ತಾನು ತೀರಿಕೊಂಡ ಮೇಲೆ ಸ್ವಲ್ಪ ಹಣ ಸಂದಾಯವಾಗುವಂತೆ ಉಯಿಲು ಬರೆದಿರುತ್ತಾನೆ. ಡ್ಯೂಕ್ ಬೇಗ ಸಾಯಲಿ ಎಂದು ರೊಮೇಲಿಯೋ ಅವನ ಮೈಮೇಲೆ, ಮುಂಚೆ ಒಂದು ಗಾಯವಿದ್ದ ಜಾಗದಲ್ಲೇ ಚೂರಿಯಿಂದ ತಿವಿಯುತ್ತಾನೆ. ಗಾಯದ ಕೀವು ಹೊರಬಂದು, ಸಾಯುವ ಬದಲು ಡ್ಯೂಕ್ ಬದುಕಿ ಉಳಿಯುತ್ತಾನೆ. ಅವನಿಗೆ ಚಿಕಿತ್ಸೆ ನಡೆಸಿದ ಸರ್ಜನ್ ಆಶ್ಚರ್ಯದಿಂದ `ಬಾಗಿಲಲ್ಲಿನ್ನೂ ಗಾಳಿಯಾಡುತ್ತಿದೆಯೆ?’ ಎಂದು ಕೇಳುತ್ತಾನೆ.
ಜಾನ್ ವೆಬ್ ಸ್ಟರ್ ನೇ ಬರೆದ ಇನ್ನೊಂದು ನಾಟಕ ‘ದಿ ವೈಟ್ ಡೆವಿಲ್’ ನಲ್ಲಿ ಕೊಲೆಗಾರನೊಬ್ಬ, ತಾನು ಕೊಲ್ಲಲಿರುವ ವ್ಯಕ್ತಿಗೆ ‘ಏನು ಯೋಚಿಸುತ್ತಿರುವೆ?’ ಎಂದು ಕೇಳುತ್ತಾನೆ. ಅವನು ‘ಇಲ್ಲ, ಏನೂ ಇಲ್ಲ ಏನೂ ನೆನಪಾಗೊಲ್ಲ’ ಎನ್ನುತ್ತಾನೆ. ಈ ಸಂದರ್ಭಗಳು ಎಲಿಯಟ್ ನ ಮನಸ್ಸಿನಲ್ಲಿರುವಂತೆ ತೋರುತ್ತದೆ.

೪೩. ಅವನ ಕಣ್ಣುಗಳೀಗ ಮುತ್ತಾಗಿವೆ : ಷೇಕ್ಸ್‌ಪಿಯರನ ‘ಟೆಂಪೆಸ್ಟ್’ ನಾಟಕದಲ್ಲಿ ಏರಿಯಲ್ ಹೇಳುವ ಹಾಡಿನಲ್ಲಿ ಬರುವ ಸಾಲು, ಅಲ್ಲಿನ ಫರ್ಡಿನಾಂಡ್ ಮತ್ತು ಮಿರಾಂಡರ ನಡುವಿನ ಮುಗ್ಧಪ್ರೇಮವನ್ನು ಈ ಕವನದ ವೇಸ್ಟ್‌ಲ್ಯಾಂಡಿನ ಮೊದಲನೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಹಯಸಿಂಥ್ ಹೂದೋಟದ ಸಂಗಾತಿಯೊಂದಿಗೆ ಮತ್ತು ಈ ಭಾಗದ, ಪಾಪಪ್ರಜ್ಞೆಯಿಂದ ಕೂಡಿದ ಲೈಂಗಿಕ ಸಂಗತಿಗೆ ತಳುಕು ಹಾಕಲಾಗಿದೆ.

೪೪. ಓ ಹೋ ಹೋ ಹೋ…. ಕಗ್ಗ: ಸುಮಾರು ೧೯೧೨ರ ಹೊತ್ತಿಗೆ ‘ಷೇಕ್ಸ್‌ಪಿಯರ್ ಕಗ್ಗ’ (Shakespeherian rag) ಎಂಬ ಗೀತೆ ಬಹಳ ಜನಪ್ರಿಯವಾಗಿತ್ತು. ವಾಸ್ತವವಾಗಿ ಅದೊಂದು ಅಗ್ಗದ ಅಭಿರುಚಿಯ ರಚನೆ; ಷೇಕ್ಸ್‌ಪಿಯರನನ್ನು ಕಳಪೆ ರೀತಿಯಲ್ಲಿ ಬಳಸಿಕೊಂಡ ಪದ್ಯ. ಅಗ್ಗದ ಜನಪ್ರಿಯ ಸರಕಿಗೆ ಸಂಕೇತವಾಗಿ ಅದು ಇಲ್ಲಿ ಪ್ರಸ್ತಾಪಿತವಾಗಿದೆ. ಆ ಪದ್ಯದ ಹೆಸರನ್ನು ಇಲ್ಲಿ ಹೇಳುವವಳು ಮಾನಸಿಕ ಕ್ಷೋಭೆಗೊಳಗಾದ ವ್ಯಕ್ತಿಯಾದದ್ದರಿಂದ ‘ಷೇಕ್ಸ್‌ಪೆಹರಿಯನ್’ ಎಂಬ ಉಚ್ಚಾರಣೆಯನ್ನು ಇಲ್ಲಿ ಬಳಸಲಾಗಿದೆ.

೪೫. ಹತ್ತಕ್ಕೆ ಬಿಸಿ ನೀರು….ಆಡೋಣ : ಹೇಗಾದರೂ ಕಾಲಹರಣ ಮಾಡಲು ಬೆಳಿಗ್ಗೆ ತಡವಾಗಿ ಏಳುವುದು, ಮಧ್ಯಾಹ್ನ ಮಳೆ ಸುರಿಯುವಾಗ ಕಾಲಹರಣ ಮಾಡಲು ಮುಚ್ಚಿದ ಕಾರಿನಲ್ಲಿ ಗುರಿಯಿಲ್ಲದೆ ಅಲೆಯುವುದು-ಇವು ಬೇಸರ ತುಂಬಿದ ಬದುಕನ್ನು ಸೂಚಿಸುವ ಕ್ರಿಯೆಗಳಾಗಿ ಇಲ್ಲಿ ಬಂದಿವೆ.

೪೬. ಮತ್ತು ಬಾಗಿಲು ಬಡಿಯೋದನ್ನ ಕಾಯುತ್ತ: ಥಾಮಸ್ ಮಿಡ್ಲ್‌ಟನ್ ಬರೆದ ‘ವಿಮೆನ್ ಬಿವೇರ್ ವಿಮೇನ್’ ನಾಟಕದ ಎರಡನೇ ಅಂಕದ ಎರಡನೇ ದೃಶ್ಯದಲ್ಲಿ ಬರುವ ಚದುರಂಗದಾಟ ಇಲ್ಲಿ ಧ್ವನಿತವಾಗಿದೆ. ಅತ್ತೆಯನ್ನು ಚದುರಂಗದಾಟದಲ್ಲಿ ತೊಡಗಿಸಿಕೊಂಡು, ಒಳಗೆ ಬೇರೊಂದು ಕೊಠಡಿಯಲ್ಲಿ ಸೊಸೆಯನ್ನು ಕಡಿಸಲಾಗುತ್ತದೆ. ಬಾಗಿಲ ಬಡಿತ ಅದು ಮುಗಿಯಿತೆನ್ನುವುದನ್ನು ಸೂಚಿಸುವ ಸಂಕೇತ.

೪೭. ದಯವಿಟ್ಟು ಮುಗಿಸಿ ಸಮಯ ಆಯ್ತು: ‘ಬಾಗಿಲು ಬಡಿಯೋದನ್ನ ಕಾಯುತ್ತ’ ಎಂಬ ಸಾಲು ಧ್ವನಿಸುವ ಕೆಟ್ಟ ಘಟನೆಗೆ ಸಂಬಂಧಿಸಿಕೊಳ್ಳುವ ಸಾಲು. ಬ್ರಿಟಿಷ್ ಬಾ‌ರ್‌ಗಳಲ್ಲಿ ಕೆಲಸ ಮಾಡುವ ಸೇವಕ ಬಾರಿನ ವ್ಯವಹಾರದ ಕಾಲ ಮುಗಿಯಿತು ಎಂದು ಕೊಡುವ ಸೂಚನೆ ಇದರ ನೇರ ಅರ್ಥ. ಈ ಸಾಲು ಮುಂದೆ ಈ ವಿಭಾಗದ ಉದ್ದಕ್ಕೂ ಒಂದು ರುದ್ರಗಂಭೀರ ಪಲ್ಲವಿಯತೆ ಮತ್ತೆ ಮತ್ತೆ ಬರುತ್ತದೆ.

೪೮. ಅವನು ಸೈನ್ಯ ಸೇರಿ ನಾಕುವರ್ಷ ಆಗ್ಹೋಯ್ತು: ಮೊದಲ ಮಹಾಯುದ್ಧದ ಅವಧಿ
೧೯೧೪-೧೯೧೮

೪೯. ಗುಡ್ ನೈಟ್ ಮಹಿಳೆಯರೆ….ಗುಡ್ ನೈಟ್ : ಷೇಕ್ಸ್‌ಪಿಯರನ ‘ಹ್ಯಾಮ್ಲೆಟ್’ ನಾಟಕದಲ್ಲಿ (೪ನೆಯ ಅಂಕ, ೫ನೆಯ ದೃಶ್ಯ) ಈ ಮಾತು ಬರುತ್ತದೆ. ಹ್ಯಾಮ್ಲೆಟ್ ಬಗ್ಗೆ ಒಫೀಲಿಯಳಿಗಿದ್ದ ಪ್ರೇಮ ಫಲಿಸದೆ ಹೋಗುತ್ತದೆ; ಅವಳ ತಂದೆಯ ಕೊಲೆಯಾಗುತ್ತದೆ. ಇದೆಲ್ಲದರ ಫಲವಾಗಿ ಅವಳಿಗೆ ಹುಚ್ಚು ಹಿಡಿಯುತ್ತದೆ. ಆ ದೃಶ್ಯದ ಕೊನೆಯಲ್ಲಿ ಒಫೀಲಿಯಾ ಡೆನ್ಮಾರ್ಕ್ ದೊರೆಯ ಆಸ್ಥಾನದ ಮಹಿಳೆಯರಿಗೆ ಹೇಳುವ ಬೀಳ್ಕೊಡುಗೆ ರೀತಿಯ ಮಾತುಗಳು ಇವು.

ಅಗ್ನಿಪ್ರವಚನ

೫೦. ಹೊರಟು ಹೋಗಿದ್ದಾರೆ ಜಲಕನ್ನಿಕೆಯರೆಲ್ಲ: ಪ್ರಾಯದ ಗಂಡುಗಳ ಜೊತೆ ಕ್ರೀಡೆಗೆ ಬಂದ ‘ಆಧುನಿಕ ಜಲಕನ್ನಿಕೆಯರು’.

೫೧. ಓಡು ಮೆಲ್ಲಗೆ ನನ್ನ…ಪ್ರಿಯ ಥೇಮ್ಸ್ ನದಿಯೆ : ಇದು ಸ್ಪೆನ್ಸರ್ ಕವಿಯ ‘ಪ್ರೋತಲಾಮಿಯನ್’ (೧೫೯೬) ಪದ್ಯದ ಒಂದು ಸಾಲು. ಥೇಮ್ಸ್‌ ನದಿಯ ಮೇಲೆ ನಡೆಯುವ ಜಲಕನ್ನಿಕೆಯರ ವಿವಾಹವನ್ನು ಮುಗ್ಧ ಮನೋಹರವೆಂಬಂತೆ ವರ್ಣಿಸುವ ಕವಿತೆಯೊಂದರ ಪಲ್ಲವಿಯಾಗಿ ಈ ಸಾಲು ಬರುತ್ತದೆ.

೫೨. ಲೆಮಾನ್ ಜಲದಂಡೆಯಲ್ಲಿ ಕುಳಿತು ರೋದಿಸಿದೆ ನಾನು : ದೇಶಭ್ರಷ್ಟರಾದ ಯಹೂದಿಗಳು ಅಪರಿಚಿತ ನೆಲದಲ್ಲಿ ಭಗವಂತನ ಸ್ತೋತ್ರ ಹಾಡಲಾರದೆ ಬ್ಯಾಬಿಲೋನಿನ ನದಿದಂಡೆಯ ಬಳಿ ಕುಳಿತು ರೋದಿಸಿದರು (Psalms – CXXXVII: ೧,೪). (ಇಲ್ಲಿ ಬಂದಿರುವ ‘ಲೆಮಾನ್’ ಎಂಬ ಪದ ಜಿನೀವಾ ಸರೋವರಕ್ಕೆ ಇರುವ ಸ್ವಿಸ್ ಹೆಸರು.) ಷೇಕ್ಸ್‌ಪಿಯರನ ಕಾಲದಷ್ಟು ಹಿಂದೆ ಲೆಮಾನ್ ಶಬ್ದಕ್ಕೆ ಜೊತೆಗಾತಿ ಎಂಬ ಅರ್ಥವಿತ್ತು; ಕೆಲವು ಸಲ ಉಪಪತ್ನಿ, ಬೆಲೆವೆಣ್ಣು ಎಂಬ ಅರ್ಥದಲ್ಲಿಯೂ ಬಳಕೆಯಾಗುತ್ತಿತ್ತು. ಲೆಮಾನ್ ಜಲ (Waters of Leman) ಎಂಬ ಮಾತು ಕಾಮದ ಜ್ವಾಲೆ ಎಂಬ ಅರ್ಥಕ್ಕೂ ತಾಗಿಕೊಂಡಿದೆ.

೫೩. ನನ್ನ ಸೋದರ ದೊರೆಯ ವಿನಾಶವನ್ನು….ತಂದೆ ಮಹಾರಾಜನ ಸಾವನ್ನು: ಟೆಂಪೆಸ್ಟ್ ನಾಟಕದ ಒಂದು ಸಂದರ್ಭ. ಈ ಹಿಂದೆ ಬಂದಿರುವ ೨೩ನೆಯ ಟಿಪ್ಪಣಿ ನೋಡಿ.

೫೪. ಆದರೂ ಆಗಾಗ್ಗೆ…ಬೆನ್ನ ಹಿಂದೆ: ಮಾರ್ವೆಲ್ ಕವಿಯ ‘ಟು ಹಿಸ್ ಕಾಯ್ ಮಿಸ್ಟ್ರೆಸ್’ ಪದ್ಯದ ಎರಡು ಸಾಲುಗಳು (೨೧-೨೨), ‘ನನ್ನ ಬೆನ್ನ ಹಿಂದೆ ಕಾಲರಥ ರೆಕ್ಕೆ ಬೀಸಿಕೊಂಡು ಹಾರಿಬರುತ್ತಿರುವ ಶಬ್ದ ಸದಾ ನನಗೆ ಕೇಳುತ್ತಿರುತ್ತದೆ’ ಎನ್ನುವುದು ಆ ಸಾಲುಗಳ ಅರ್ಥ.

೫೫. ಕರೆತರುವ ಕಾರುಗಳ ಹಾರನ್ನು ಸದ್ದು ವಸಂತದಲ್ಲಿ : ಜಾನ್ ಡೇ ಕವಿಯ ‘ಪಾರ್ಲಿಮೆಂಟ್ ಆಫ್ ಬೀಸ್’ (೧೬೦೭) ಎಂಬ ಅಲಿಗರಿ ಕವಿತೆಯ ಒಂದು ಸಂದರ್ಭ. ಡಯಾನಾ ದೇವತೆ ನಗ್ನಳಾಗಿ ಸ್ನಾನ ಮಾಡುತ್ತಿರುವುದನ್ನು ಆಕ್ಟೇನ್ ಕದ್ದು ನೋಡುತ್ತಾನೆ. ಫಲವಾಗಿ ಇದ್ದಕ್ಕಿದ್ದಂತೆ ಒಂದು ಜಿಂಕೆಯಾಗಿ ರೂಪಾಂತರ ಹೊಂದಿ ತನ್ನ ಬೇಟೆ ನಾಯಿಗಳಿಂದಲೇ ಕೊಲ್ಲಲ್ಪಡುತ್ತಾನೆ.

೫೬. ಆಹಾ! ಬೆಳಗಿದ ಚಂದ್ರ…..ಶ್ರೀಮತಿ ಪೋರ್ಟರಳ ಮೇಲೆ : “ಈ ಸಾಲುಗಳಿರುವ ಲಾವಣಿಯ ಮೂಲ ನನಗೆ ಗೊತ್ತಿಲ್ಲ. ಆಸ್ಟ್ರೇಲಿಯಾದ ಸಿಡ್ನಿಯಿಂದ ನಾನು ಈ ಬಗ್ಗೆ ಕೇಳಿದ್ದೇನೆ” ಎಂದು ಎಲಿಯಟ್ ಹೇಳುತ್ತಾನೆ. ಇದು ಅಮೆರಿಕದಲ್ಲಿ ಜನಪ್ರಿಯವಾಗಿರುವ ‘ರೆಡ್‌ವಿಂಗ್’ ಹಾಡು, ‘ಆಹಾ ಬೆಳಗಿದ ಚಂದ್ರ ಪ್ರಕಾಶಮಾನವಾಗಿ ಮುದ್ದು ರೆಡ್‌ವಿಂಗಳ ಮೈಮೇಲೆ’ ಎನ್ನುವುದು ಆ ಹಾಡಿನ ಪಲ್ಲವಿ. ಮೊದಲ ಮಹಾಯುದ್ಧದ ಸೈನಿಕರ ಬಿಡಾರಗಳಲ್ಲಿ ಬಳಕೆಯಲ್ಲಿದ್ದ ಲೈಂಗಿಕ ಹಾಡುಗಳಲ್ಲಿ (ಕೈರೋ ಪಟ್ಟಣದಲ್ಲಿ ಒಂದು ವೇಶ್ಯಾವಾಟಿ ನಡೆಸುತ್ತಿದ್ದ) ಶ್ರೀಮತಿ ಪೋರ್ಟರಳನ್ನು ಕುರಿತ ಹಾಡೂ ಇತ್ತು. ಶ್ರೀಮತಿ ಪೋರ್ಟರ್ ತನ್ನ ಮಗಳನ್ನು ಜೊತೆಮಾಡಿಕೊಂಡು ಆಸ್ಟ್ರೇಲಿಯಾದ ಸೈನಿಕ ತಂಡಗಳಿಗೆ ಲೈಂಗಿಕ ರೋಗಗಳನ್ನು ರವಾನಿಸುವುದರಲ್ಲಿ ಪ್ರಸಿದ್ಧವಾಗಿದ್ದವಳು. ಮೇಲೆ ಹೇಳಿದ ಲಾವಣಿಗೆ ಹಲವು ಪಾಠಗಳಿವೆ. ಎಲಿಯಟ್ ಇದ್ದುದರಲ್ಲಿ ಅತ್ಯಂತ ಸಭ್ಯವಾದುದನ್ನೇ ಬಳಸಿದ್ದಾನೆ. ಇಲ್ಲಿಗೆ ಸಂಬಂಧಿಸಿರುವ ಸಾಲುಗಳು ಮೂಲದಲ್ಲಿ ಹೀಗಿವೆ:
O the moon shines bright on Mrs. Porter
And on the daughter of Mrs. Porter
And they both wash their feet in soda water
And so they oughter
To keep them clean.

ಇಲ್ಲಿಯ ಸೋಡಾ ನೀರು ಸಾಮಾನ್ಯವಾಗಿ ಬಳಸುವ ಸೋಡಾ ಅಲ್ಲ, ಅದು ಬೈಕಾರ್ಬೊನೇಟ್ ಸೋಡಾ ದ್ರಾವಣ ಎನ್ನುವುದನ್ನು ಎಲಿಯಟ್ ಮುಂದೊಮ್ಮೆ ಸ್ಪಷ್ಟಪಡಿಸಿದ.

೫೭. (ಗೋಪುರದಿಂದ ಹೊಮ್ಮಿ……ದನಿಗಳೆ!) : ಫ್ರೆಂಚ್ ಕವಿ (೧೮೪೪-೯೬)
ವೆರ್ಲೆನ್‌ನ ಪದ್ಯವೊಂದರ ಸಾಲು. ಎ ವೋ ಸೆ ವಾ….. ಕ್ಯುಪೋಲ್ ಎಂಬ ಸಾಲಿನ ಅನುವಾದ. ವರ್ಲೆನನ ಪದ್ಯದಲ್ಲಿ ಬರುವ ‘ಪಾರ್ಸಿಫಾಲ್‌’ ಎಂಬಾತ ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿರುವಾಗ ತನ್ನನ್ನು ದುರ್ಮಾರ್ಗಕ್ಕೆಳೆಯಲು ಕುಂದ್ರೆ ಎಂಬ ವ್ಯಭಿಚಾರಿಣಿ ಒಡ್ಡುವ ಎಲ್ಲ ಪ್ರಲೋಭನೆಗಳನ್ನೂ ಜಯಿಸುತ್ತಾನೆ. ಕುಂದ್ರೆ ಸೋತು, ವಿನೀತಳಾಗಿ ಪಾರ್ಸಿ ಫಾಲ್‌ನ ಪಾದಗಳನ್ನು ತೊಳೆಯುತ್ತಾಳೆ. ಆಗ ಈ ಸಾಲು ಬರುತ್ತದೆ. ಹಿಂದೆ ಜಾರೆಯೊಬ್ಬಳು ಕ್ರಿಸ್ತನ ಪಾದಗಳನ್ನು ತೊಳೆದದ್ದನ್ನು ನೆನಪಿಸುವ ಸಂಗತಿ ಇದು. (ಲ್ಯೂಕ್ VII:೩೭-೩೮) ಶ್ರೀಮತಿ ಪೋರ್ಟರ್ ಮತ್ತು ಅವಳ ಮಗಳ (ಸೋಡಾ ನೀರಿನಲ್ಲಿ ಕಾಲು ತೊಳೆಯುವ) ಅಭ್ಯಾಸ ಇದಕ್ಕೆ ವಿರುದ್ಧವಾಗಿದೆ.

೫೮. ಟುವೀ ಟುವ್ವೀ…ಜಗ್ ಜಗ್ : ಹಳೆಯ ಪುರಾಣ ಕಥೆಗಳ ಪ್ರಕಾರ ಟೇರೂ ಎಂಬ ರಾಜನ ಬಲಾತ್ಕಾರಕ್ಕೆ ಸಿಕ್ಕ ‘ಫಿಲೊಮೇಲ’ ಎಂಬ ಹೆಣ್ಣು ನೈಟಿಂಗೇಲ್ ಪಕ್ಷಿಯಾಗಿ ಮಾರ್ಪಡುತ್ತಾಳೆ. ಆ ನೈಟಿಂಗೇಲ್ ತನಗೊದಗಿದ್ದ ದಾರುಣ ವ್ಯಥೆಯನ್ನು ನೆನೆಸಿಕೊಳ್ಳುವಂತೆ ‘ಟೇರೂ’ ಎಂದು ಕೂಗುತ್ತದೆ. ಎಲೆಜಬೆತನ್ ಕಾವ್ಯದ ದಿನಗಳಲ್ಲಿ ಅದಕ್ಕೆ ‘ಜಗ್’ ಎಂಬ ಪದವೂ ಸೇರಿಕೊಂಡಿತು. ಜಗ್ ಎನ್ನುವುದು ಜಗ್ಲರ್ ಎಂಬ ಪದದಿಂದ ಬಂದದ್ದು. ಆ ಪದ ಎಲಿಜಬೆತನ್ ಯುಗದಲ್ಲಿ ಅಸಭ್ಯವಾದ ಅರ್ಥವೊಂದನ್ನು ಸೂಚಿಸುವಂಥದ್ದಾಗಿತ್ತು.

೫೯. ಬೀಜವಿಲ್ಲದ ದ್ರಾಕ್ಷಿ…ಸ್ಮಿರ್ನಾದ ವರ್ತಕ: ಇದಕ್ಕೆ ಎಲಿಯಟ್ ಕೊಡುವ ಟಿಪ್ಪಣಿ.”The currants were quoted at a price carriage and insurance free to London; and the Bill of Lading, ete., were to be handed to the Buyer upon payment of the sight draft”. ‘ಸ್ಮಿರ್ನಾ’ ಎಷ್ಯಾಮೈನರ್‌ನ ಒಂದು ದೊಡ್ಡವ್ಯಾಪಾರ ಕೇಂದ್ರ.

೬೦. ಮೆಟ್ರೋಪೋಲ್‌ನಲ್ಲಿ ವಾರಾಂತ್ಯ ವಿಶ್ರಾಂತಿ: ಮೆಟ್ರೋಪೋಲ್ ಲಂಡನ್ನಿನಿಂದ ದಕ್ಷಿಣಕ್ಕೆ ಅರವತ್ತು ಮೈಲಿ ದೂರದಲ್ಲಿರುವ ಭವ್ಯವೂ ಸುಸಜ್ಜಿತವೂ ಆದ ಹೋಟೆಲ್. ಬ್ರೈಟನ್‌ನಲ್ಲಿ ವಾರಾಂತ್ಯ ವಿಶ್ರಾಂತಿಗೆ (‘ಹೊಲಸು ಫ್ರೆಂಚಿನಲ್ಲಿ) ನೀಡುವ ಆಹ್ವಾನವೆಂದರೆ ಲೈಂಗಿಕ ಸುಖಾಹ್ವಾನಕ್ಕೆ ನೀಡುವ ಕರೆಯೆಂದೇ ಅಲ್ಲಿ ಭಾವಿಸಲಾಗುತ್ತದೆ. ಈ ಮಾತಿನಲ್ಲಿ ಸಲಿಂಗರತಿಯ ಧ್ವನಿಯೊಂದು ತಂತಾನೇ ಹುಟ್ಟಿಕೊಳ್ಳುತ್ತದೆ. ಈ ಬಗ್ಗೆ ಹಲವರು ವಿಮರ್ಶಕರು ಮಾಡಿರುವ ಅರ್ಥ ತನಗೆ ಮುಂಚೆ ಹೊಳೆದಿರಲಿಲ್ಲವೆಂದು ಎಲಿಯಟ್ ಹೇಳಿದ.

೬೧. ಆಹ್ವಾನಿಸಿದ ನನ್ನನ್ನು ಹೊಲಸು ಫ್ರೆಂಚಿನಲ್ಲಿ ಹೊಲಸು ಫ್ರೆಂಚ್: (Demotic French. Demos ಎಂದರೆ ಜನ ಎಂದರ್ಥ. Demotic ಎಂಬ ಪದಕ್ಕೆ ಗ್ರಾಮ್ಯ (ಕೀಳು) ಎಂಬ ಅರ್ಥವೂ ಅಂಟಿದೆ. ವ್ಯಾಪಾರ ಸಂಬಂಧವಾಗಿ ಪ್ರವಾಸ ಮಾಡುವ ವರ್ತಕ ಹೆಕ್ಕಿಕೊಳ್ಳುವ ಗ್ರಾಮ್ಯ ಫ್ರೆಂಚ್ ಡಯಲೆಕ್ಟ್ ಎಂದರ್ಥ.

೬೨. ನಾನು ಟೈರೇಸಿಯಸ್….ಸುಕ್ಕುಮೊಲೆಗಳ ಮುದುಕ: ಟೈರೇಸಿಯಸ್ ಒಂದು ಪುರಾಣ ಪಾತ್ರ. ಈ ಕವನದಲ್ಲಿ ಮಾತ್ರ ಒಂದು ಪಾತ್ರವಲ್ಲ, ಬಹಳ ಮುಖ್ಯನಾದ ಒಬ್ಬ ಸಾಕ್ಷಿವ್ಯಕ್ತಿ. ಕವನದ ಎಲ್ಲ ಭಾಗಗಳನ್ನೂ ಕೂಡಿಸಿಕೊಡುವ ಕೇಂದ್ರಬಿಂದು, ಇವನು ಕವನದಲ್ಲಿ ಬರುವ ಒಕ್ಕಣ್ಣ ವರ್ತಕನ ಮತ್ತು ಫೀನೀಷಿಯನ್ ನಾವಿಕನ ಪಾತ್ರದಲ್ಲಿ ಸೇರಿಹೋಗುತ್ತಾನೆ. ಈ ನಾವಿಕ ನೇಪಲ್ಸ್‌ನ ರಾಜಕುಮಾರನಾದ ಫರ್ಡಿನಾಂಡ್ ಗಿಂತ ಪೂರ್ತಿ ಭಿನ್ನನೇನಲ್ಲ. ಅದೇರೀತಿ ಇಲ್ಲಿ ಬರುವ ಹೆಣ್ಣುಗಳೆಲ್ಲವೂ ಒಂದೇ ಕೇಂದ್ರದಿಂದ ಮೂಡಿದವರು. ಈ ಗಂಡು ಹೆಣ್ಣುಗಳೆಲ್ಲ ಟೈರೇಸಿಯಸ್‌ ನಲ್ಲಿ ಸಂಧಿಸುತ್ತವೆ. ಟೈರೇಸಿಯಸ್ಸಿಗೆ ಸಂಬಂಧಿಸುವ, ಓವಿಡ್‌ ಕವಿಯ ಮೆಟಮಾರ್ಫಸಸ್ ಎಂಬ ಲ್ಯಾಟಿನ್‌ ಕಾವ್ಯದ ಹತ್ತೊಂಬತ್ತು ಸಾಲುಗಳ ಒಂದು ದೀರ್ಘ ಭಾಗವನ್ನೇ ಎಲಿಯಟ್ ತನ್ನ ಟಿಪ್ಪಣಿಯಲ್ಲಿ ಕೊಡುತ್ತಾನೆ (ಮೆಟಮಾರ್ಫಸಸ್, III, ೩೨೦-೩೩೮). ಅದರ ಒಟ್ಟುಕಥೆ ಹೀಗಿದೆ. ಕಾಡಿನಲ್ಲಿ ಭೋಗದಲ್ಲಿದ್ದ ಎರಡು ದೊಡ್ಡ ಸರ್ಪಗಳನ್ನು ಒಮ್ಮೆ ಟೈರೇಸಿಯಸ್ ತನ್ನ ದಂಡದಿಂದ ಬಲವಾಗಿ ಹೊಡೆದ ಕೂಡಲೇ ಅವನು ಹೆಣ್ಣಾಗಿ ರೂಪಾಂತರಗೊಂಡ. ಎಂಟು ವರ್ಷಗಳ ನಂತರ ಟೆರೇಸಿಯಸ್ ಮತ್ತೆ ಅದೇ ಸರ್ಪಗಳನ್ನು ಕಂಡಾಗ, ತಾನು ಮೊದಲಿನಂತಾಗಬೇಕೆಂದು ಬಯಸಿ ಪುನಃ ಅವುಗಳನ್ನು ಹೊಡೆದ; ಕೂಡಲೇ ತನ್ನ ಮೊದಲಿನ ಗಂಡುರೂಪ ಪಡೆದ. ಹೀಗೆ ಅವನು ಗಂಡು ಹೆಣ್ಣು ಎರಡೂ ಆಗಿ ಬಾಳಿ ಅನುಭವವಿದ್ದವನು. ಒಮ್ಮೆ ಜೋವ (ಜ್ಯೂಪಿಟರ್) ದೇವನು ಜೂನಾ (ಹೀರಾ) ದೇವಿಯ ಜೊತೆ ಪ್ರೇಮಾನುಭವದ ವಿಷಯವಾಗಿ ಮಾತನಾಡುತ್ತ ಗಂಡು ದೇವತೆಗಳು ಹೆಣ್ಣುದೇವತೆಗಳಿಂದ ಪಡೆಯುವ ಲೈಂಗಿಕ ಸುಖಾನುಭವ ಹೆಚ್ಚು ತೀವ್ರವಾದದ್ದು ಎಂದು ವಾದಿಸಿದ. ಟೈರೇಸಿಯಸ್ ಗಂಡು ಹೆಣ್ಣು ಎರಡೂ ಆಗಿದ್ದು ಇಬ್ಬರ ಅನುಭವವನ್ನೂ ತಿಳಿದವನಾದ್ದರಿಂದ ಸತ್ಯವಾದ ವಿಷಯ ಏನೆಂದು ಅವನನ್ನು ಕೇಳಲಾಯಿತು. ಟೈರೇಸಿಯಸ್, ಜೋನ್ ಹೇಳಿದ ಮಾತು ಸತ್ಯವೆಂದು ತಿಳಿಸಿದ. ಇದರಿಂದ ಮುಜುಗರಗೊಂಡ ಜೂನೋದೇವಿ ಟೈರೇಸಿಯಸ್ ಗೆ ಕುರುಡನಾಗಿ ಹೋಗು ಎಂದು ಶಾಪ ಕೊಟ್ಟಳು. ಒಬ್ಬದೇವತೆ ಕೊಟ್ಟಶಾಪವನ್ನು ಇನ್ನೊಬ್ಬ ದೇವತೆ ನಿವಾರಿಸುವಂತಿಲ್ಲ. ಬೇರೆ ಪರಿಹಾರ ಕೊಡಬಹುದು, ಅಷ್ಟೆ. ಆದ್ದರಿಂದ ಸರ್ವಶಕ್ತನಾದ ಜೋವ್ ಟೈರೇಸಿಯಸ್ಸಿಗೆ (ಕಣ್ಣಿರುವವರಿಗೂ ಕಾಣದ) ಭವಿಷ್ಯವನ್ನು ತಿಳಿಯುವ ಶಕ್ತಿ ದಯಪಾಲಿಸಿದ. ಇತರ ಪುರಾಣಕಾವ್ಯಗಳಲ್ಲಿ ಕೂಡಾ ಟೈರೇಸಿಯಸ್ ಭವಿಷ್ಯಜ್ಞಾನಿಯಾಗಿ ಕಾಣಿಸಿಕೊಂಡದ್ದಿದೆ. ಎಲಿಯಟ್ ಟೈರೇಸಿಯಸ್‌ ನನ್ನು ಎಲ್ಲ ಬಗೆಯ ಮಾನವಾನುಭವಗಳನ್ನು ಬಲ್ಲ ಒಬ್ಬ ವ್ಯಾಖ್ಯಾನಕಾರನಂತೆ, ಒಂದು ಸಾಕ್ಷಿಪ್ರಜ್ಞೆಯಂತೆ ಬಳಸಿಕೊಳ್ಳುತ್ತಾನೆ.

೬೩. ಬ್ರಾಡ್‌ಫರ್ಡ್ ಕೋಟೀಶ್ವರನ…..ಸಿಲ್ಕ್ ಹ್ಯಾಟಿನಂತೆ : ವೆಸ್ಟ್‌ಯಾರ್ಕ್‌ಶೈರಿನಲ್ಲಿ, ಲೀಡ್ಸ್ ಬಳಿ ಇರುವ ಬ್ರಾಡ್‌ಫರ್ಡ್ ಎಂಬ ಸ್ಥಳ ವಾಣಿಜ್ಯೋದ್ಯಮದಲ್ಲಿ ಹಠಾತ್ ಸುಗ್ಗಿಯನ್ನು ಕಂಡ ಪ್ರದೇಶ. ಇದ್ದಕ್ಕಿದ್ದಂತೆ ಶ್ರೀಮಂತನಾಗಿ ವಿವೇಕ ಮರೆತು ಮೆರೆಯುವವನನ್ನು ಸೂಚಿಸಲು ಆ ಪ್ರದೇಶದ ಹೆಸರು ಬಳಸಲಾಗಿದೆ.

೬೪. ನಾನು ಟೈರೇಸಿಯಸ್…..ಓಡಾಡಿದವನು: ಥೀಬ್ಸ್ ಎನ್ನುವುದು ಪ್ರಾಚೀನ ಈಜಿಪ್ಟಿನ ನಗರವೊಂದಕ್ಕೆ ಇದ್ದ ಗ್ರೀಕ್ ಹೆಸರು. ಟೈರೇಸಿಯಸ್ಸನು ಥೀಬ್ಸ್‌ನ ಗೋಡೆಗಳ ಬದಿಯ ಜನಭರಿತ ಮಾರುಕಟ್ಟೆಯ ಬಳಿ ಕುಳಿತು ಅನೇಕ ವರ್ಷಕಾಲ ಭವಿಷ್ಯ ಹೇಳಿದ. ಥೀಬ್ಸ್ ನಾಶವಾದಾಗ ಅವನೂ ಸತ್ತ. ನಂತರ ಅವನು ಹೇಡ್ಸ್‌ನಲ್ಲಿ (ನರಕದಲ್ಲಿ) ಇದ್ದಾಗ ಯೂಲಿಸಿಸ್ ಮುಂದಾಗುವುದನ್ನು ತಿಳಿಯಲು ಅವನ ಬಳಿ ಹೋಗಿದ್ದ.

೬೫. ಚೆಲುವೆ ಅವಿವೇಕಕ್ಕೆ ಬಾಗಿ, ಏಕಾಂಗಿಯಾಗಿ: ಆಲಿವರ್ ಗೋಲ್ಡ್‌ ಸ್ಮಿತ್ತನ ‘ದಿ ವಿಕಾರ್ ಆಫ್ ದಿ ವೇಕ್ ಫೀಲ್ಡ್ (೧೭೬೬) ಕಾದಂಬರಿಯಲ್ಲಿ ಬರುವ ಹಾಡಿನ ಮೊದಲ ಸಾಲು. ಮೋಸಹೋದ ಕನ್ನಿಕೆ ತನ್ನ ಅಪರಾಧದಿಂದ ಮುಕ್ತವಾಗಲು ಇರುವ ದಾರಿ ಸಾಯುವುದೆಂದೇ ಎಂದು ಆ ಪದ್ಯ ಹೇಳುತ್ತದೆ. ಪದ್ಯದಲ್ಲಿ ಇಲ್ಲಿಗೆ ಸಂಬಂಧಿಸುವ ಸಾಲುಗಳು ಹೀಗಿವೆ.

When lovely woman stoops to folly
And finds too late that men betray
What charm can soothe her meloncholy?
What art can wash her guilt away?
The only art her guilt to cover
To hide her shame from every eye
To give repentance to her lover
And ring his bosom is to die.

೬೬. ನೀರಿನ ಮೇಲೆ…..ತೆವಳುತ್ತ ಸಾಗಿತ್ತು: ಈ ಮುಂಚೆಯೇ ಬಂದ ಟೆಂಪೆಸ್ಟ್‌ ನಾಟಕದ ಸಂದರ್ಭ; ಏರಿಯಲ್ ಹೇಳುವ ಹಾಡು.

೬೭. ಶ್ವೇತ ವರ್ಣ ವೈಭವದ ಮ್ಯಾಗ್ನಸ್ ಮಾರ್ಟಿರ್ ಭಿತ್ತಿ ಎತ್ತಿ ಹಿಡಿದಿರುವಲ್ಲಿ: “ಸೇಂಟ್ ಮ್ಯಾಗ್ನಸ್ ಮಾರ್ಟಿರ್ ಚರ್ಚಿನ ಒಳಭಾಗ ಒಂದು ಅದ್ಭುತ ದೃಶ್ಯ ಎನ್ನುವುದು ನನ್ನ ಅನಿಸಿಕೆ.” ಎಂದು ಎಲಿಯಟ್ ಹೇಳುತ್ತಾನೆ. ಲಂಡನ್ ಬ್ರಿಡ್ಜ್‌ ಬಳಿ, ಥೇಮ್ಸ್‌ ನದಿಯ ಕೆಳಬದಿಯಲ್ಲಿ ಹಬ್ಬಿರುವ ಬೆಸ್ತರ ಬಾಳಿನ ನಡುವಿನಿಂದ ಎದ್ದು ನೇರವಾಗಿ ಮೇಲೆ ಸಾಗುವ ಅದರ ಉತ್ತುಂಗ ಗೋಪುರ, ಕ್ರಿಸ್ಟೋಫರ್ ರನ್‌ನ ಒಂದು ಅಸಾಮಾನ್ಯ ನಿರ್ಮಿತಿ.

೬೮. ಎಣ್ಣೆ ಕಾರುಗಳನ್ನು ನದಿಯು ಬೆವರುತ್ತದೆ : ಥೇಮ್ಸ್ ನದಿಯ ಮೂವರು ಪುತ್ರಿಯರ ಗೀತೆ ಇಲ್ಲಿ ಆರಂಭವಾಗುತ್ತದೆ. ೩೧೫ನೆಯ ಸಾಲಿನಿಂದ ೩೨೮ನೆಯ ಸಾಲುಗಳವರೆಗೆ ಅವರು ಒಬ್ಬರಾದ ಮೇಲೆ ಒಬ್ಬರು ಒಂದೊಂದು ಭಾಗವನ್ನು ಹಾಡುತ್ತಾರೆ. ಎಲಿಯಟ್ ಈ ಗೀತಭಾಗದಲ್ಲಿ ಜರ್ಮನ್ ಸಂಗೀತಗಾರ ಮತ್ತು ಗೀತರಚನಕಾರನಾದ ವ್ಯಾಗ್ನರ್‌ನ (ಅಪೆರಾವೊಂದರಲ್ಲಿ ಬರುವ ರೈನ್ ನದಿ ಪುತ್ರಿಯರ) ಗೀತೆಯ ಪಲ್ಲವಿಯೊಂದನ್ನು ಬಳಸುವುದಲ್ಲದೆ, ಆ ಗೀತೆಯ ಲಯವನ್ನು ಇಲ್ಲಿ ಅನುಕರಿಸುತ್ತಾನೆ. ರೈನ್-ಪುತ್ರಿಯರು ತಾವು ಕಾಪಾಡಿಕೊಂಡು ಬಂದಿದ್ದ ನಿಧಿಯೊಂದನ್ನು ಕಳೆದುಕೊಂಡಿದ್ದಾರೆ. ಅದರ ಜೊತೆಯೇ ಅವರ ಜೀವನಸಂತೋಷ ಮತ್ತು ನದಿಯ ಸೌಂದರ್ಯಗಳೆರಡೂ ಮರೆಯಾಗಿವೆ. ಅದನ್ನು ಮತ್ತೆ ದೊರಕಿಸಿಕೊಡುವಂತೆ ಅವರು ನಾಟಕದ ನಾಯಕನಲ್ಲಿ ಮೊರೆಯಿಡುತ್ತಾರೆ.

೬೯. ಐಲ್ ಆಫ್ ಡಾಗ್ಸ್ ದಾಟಿ….ತೊಯಿಸುತ್ತವೆ : ಆಧುನಿಕ ಲಂಡನ್ ನಗರದೊಂದಿಗೆ ಸಂಬಂಧಿಸಿದ ಈ ಸ್ಥಳನಾಮಗಳು ಈಗಿನ ಥೇಮ್ಸ್ ನದಿಯ ಸ್ಥಿತಿಗೂ, ಸ್ಪೆನ್ಸರ್ ವರ್ಣಿಸಿರುವ, ಅವನ ಕಾಲದ ಥೇಮ್ಸ್ ನದಿಯ ಸ್ವರೂಪಕ್ಕೂ ಇರುವ ವೈದೃಶ್ಯವನ್ನು ಧ್ವನಿಸುತ್ತವೆ. (ಹಿಂದಿನ ಥೇಮ್ಸ್ ನದಿಯ ಸೌಂದರ್ಯ ಈ ಬಂಜರು ಭೂಮಿ ಕವನದ ೧೮೩-೧೯೬ ಸಾಲುಗಳಲ್ಲಿ ಸೂಚಿತವಾಗಿದೆ.)

೭೦. ಎಲಿಜಬೆತ್ ಲೆಸ್ಟರ್ ಹುಟ್ಟುಹಾಕುತ್ತಿರಲು: ಎಲಿಜಬೆತ್ ರಾಣಿಗೆ ಸರ್ ರಾಬರ್ಟ್ (ಆರ್ಲ್ ಆಫ್ ಲೆಸ್ಟರ್) ಬಗ್ಗೆ ಇದ್ದ ಪ್ರೀತಿ ಮತ್ತು ಅದು ವಿಫಲವಾದದ್ದರ ಬಗ್ಗೆ ಎಲಿಯಟ್ ಈ ಟಿಪ್ಪಣಿ ಬರೆಯುತ್ತಾನೆ. (ಅವನು ಕೊಡುವ ಮಾಹಿತಿ ಸ್ಪೇನಿನ ಫಿಲಿಪ್ ಎಂಬಾತನಿಗೆ ಅವನ ಸ್ನೇಹಿತ De Quadra ಬರೆದ ಮುದ್ರಿತ ಪತ್ರವೊಂದರಿಂದ ಸಂಗ್ರಹಿಸಿದ್ದು. ಆ ದಿನ ಮಧ್ಯಾಹ್ನದ ಹೊತ್ತು ನಾವು ಒಂದು ದೋಣಿಯಲ್ಲಿ ಕುಳಿತು ನದಿಯ ಮೇಲೆ ನಡೆಯುತ್ತಿದ್ದ ಕ್ರೀಡೆಗಳನ್ನು ಗಮನಿಸುತ್ತಿದ್ದೆವು. ರಾಣಿಯು ಲಾರ್ಡ್ ರಾಬರ್ಟನ ಜೊತೆ ಏಕಾಂತದಲ್ಲಿ ಮಾತನಾಡುತ್ತಿದ್ದಳು. ನಾನು ಅಲ್ಲೇ ಹತ್ತಿರದಲ್ಲಿದ್ದೆ. ಮಾತು ಏನೇನೋ ಅಸಂಬದಕ್ಕೆ ಹೊರಳಿತು. ಅದು ಯಾವ ನೆಲೆಗೆ ಹೋಯಿತೆಂದರೆ ರಾಣಿಗೆ ಸಂತೋಷವಾಗುವಂತಿದ್ದರೆ ತಾವಿಬ್ಬರೂ ವಿವಾಹವಾಗದಿರಲು ಯಾವ ಕಾರಣವೂ ಇಲ್ಲವೆಂದು ಲಾರ್ಡ್ ರಾಬರ್ಟ್ ಹೇಳಿದ.”

ಎಲಿಜಬೆತ್ ಮತ್ತು ಲೆಸ್ಟರ್ ನಿಜವಾಗಿ ಪರಸ್ಪರ ಪ್ರೀತಿಯಲ್ಲಿ ಇದ್ದವರಲ್ಲ. ಅಧಿಕಾರ ಉಳಿಸಿಕೊಳ್ಳಲು ಇಬ್ಬರೂ ಆಡುತ್ತಿದ್ದ ಆಟ ಅದು, ಲೆಸ್ಟರ್ ಜೊತೆ ತಾನು ತೋರಿಸುವ ಪ್ರೀತಿಯ ವ್ಯವಹಾರ (ಇದನ್ನೆಲ್ಲ ನೋಡುತ್ತ ತಮ್ಮ ಮಾತನ್ನಾಲಿಸುತ್ತಿರುವ De Quadraನ ಮೂಲಕ) ಸ್ಪೇನಿನ ದೊರೆ ಫಿಲಿಪ್ಪನ ಕಿವಿ ತಾಗಿ, ಅವನಲ್ಲಿ ಅಸೂಯೆ ಹುಟ್ಟಿಸುವುದೆಂದು ಎಲಿಜಬೆತ್ತಳಿಗೆ ಗೊತ್ತು. ಪದ್ಯದಲ್ಲಿ ಇವರಿಬ್ಬರ ಪ್ರಸ್ತಾಪ ಮೇಲು ನೋಟಕ್ಕೆ ಅನುರ್ಕತರ ಭಾವವೈಭವದಂತೆ ಕಂಡರೂ, ಕೇವಲ ನಾಟಕವಾಗಿರುವುದರಿಂದ ಅದು ಈ ಮುಂಚೆ ಚಿತ್ರಿತವಾದ ಗುಮಾಸ್ತ ಮತ್ತು ಟೈಪಿಸ್ಟಳ ನಡುವಿನ ಪ್ರಣಯದಂತೆಯೇ ಟೊಳ್ಳು. ಇದೇ ಅಲ್ಲಿಯ ಧ್ವನಿ ಎಂದು ವಿಮರ್ಶಕ ಮೆಥಿಯಿಸನ್ ವ್ಯಾಖ್ಯಾನಿಸುತ್ತಾನೆ.

೭೧. ಎರಡು ದಡವನ್ನೂ ಮುದ್ದಿಸಿದ ಕಿರು ಅಲೆ : ಈ ಸಾಲಿಗೆ ಹಿಂದಿನ ಐದು ಸಾಲುಗಳಲ್ಲಿ, ಕ್ಲಿಯೋಪಾತ್ರಾಳ ನೌಕೆಯ ವರ್ಣನೆಗೆ ಷೇಕ್ಸ್‌ಪಿಯರ್ ಬಳಸಿದ ಕೆಲವು ಮಾತುಗಳು ಹೊಳಲುಗೊಡುತ್ತವೆ. ಎಲಿಜಬೆತ್ ಮತ್ತು ಲೆಸ್ಟರ್ ನಡುವಿನ ನಯವಾದ ಪ್ರಣಯವನ್ನೂ ಕ್ಲಿಯೋಪಾತ್ರಾ ಮತ್ತು ಆಂಟೊನಿಯ ನಡುವಿನ ಧೀರೋದಾತ್ತ ಪ್ರಣಯವನ್ನೂ ಆಧುನಿಕ ಜೀವನದ ಎರಡು ಲೈಂಗಿಕ ಪ್ರಸಂಗಗಳ ಜೊತೆ ತಂದು ಎಲಿಯಟ್ ಅವುಗಳನ್ನು ಹೋಲಿಕೆಗೊಡ್ಡುತ್ತಾನೆ.

೭೨. ಹೈಬರಿ ನನ್ನನ್ನು ಹಡೆಯಿತು…. ನನ್ನನ್ನು ಕೆಡಿಸಿದುವು : ಎಲಿಯಟ್ ಈ ಸಾಲಿಗೆ ‘ಪರ್ಗೆಟೋರಿಯೋ’ದ ರೆಫರೆನ್ಸ್ ಕೊಡುತ್ತಾನೆ. ಡಾಂಟೆಯ ಡಿವೈನ್ ಕಾಮೆಡಿಯ ಪರ್ಗೆಟೋರಿಯೋ ಭಾಗದಲ್ಲಿ ಬರುವ (V. ೧೩೩) ಇಟ್ಯಾಲಿಯನ್ ಸಾಲುಗಳ ಇಂಗ್ಲಿಷ್ ಅನುವಾದ ಹೀಗಿದೆ: “Remember me who am La pia/ Siena made me, Maremma unmade me.” ಡಾಂಟೆಯ ಪರ್ಗೆಟೋರಿಯೋದಲ್ಲಿ ‘ಪಿಯಾಡೆ’ಯನ್ನು ಭೇಟಿ ಮಾಡುತ್ತಾನೆ. ಅವಳು `ಸಿಯೆನಾ’ದವಳು. ಅವಳ ಗಂಡ ‘ಮಾರೆಮ್ಮಾ’ದಲ್ಲಿ ಅವಳನ್ನು ಕೊಲೆ ಮಾಡುತ್ತಾನೆ. ಎಲಿಯಟ್ ಈ ಭಾಗದಲ್ಲಿ ಲಂಡನ್ನಿನ ಅಪ್ರಸಿದ್ಧ ‘ಹೈಬರಿ’ ಯಿಂದ ಬಂದ ಹೆಣ್ಣೊಂದನ್ನು ಕುರಿತು ಹೇಳುತ್ತಿದ್ದಾನೆ. ‘ರಿಚ್‌ಮಂಡ್’ ಮತ್ತು ‘ಕ್ಯೂ’ಗಳಲ್ಲಿ ಅವಳ ಕತೆ ಮುಗಿಯುತ್ತದೆ. ಈ ಸ್ಥಳಗಳು ಜನಪ್ರಿಯವಾದ ಭೋಗಮಂದಿರಗಳು. ರಿಚ್‌ಮಂಡ್ ಪಟ್ಟಣದಲ್ಲಿ ದೊಡ್ಡ ಉದ್ಯಾನವೊಂದಿದ್ದು ಅಲ್ಲಿ ನೌಕಾವಿಹಾರಕ್ಕೆ ಬೇಕಾದ ಸೌಕರ್ಯಗಳಿವೆ.

೭೩. ಮೂ‌ರ್ ಗೇಟಿನಲ್ಲಿವೆ ನನ್ನ ಪಾದ : ಮೂರ್‌ಗೇಟ್ ಹಿಂದೆ ಲಂಡನ್ ಗೋಡೆಯ ಹೆಸರಾಗಿತ್ತು. ಈಗ ಅದು ಒಂದು ಕೊಳೆಗೇರಿ. ಈ ಸಾಲುಗಳನ್ನು ಹೇಳುತ್ತಿರುವವಳು ಥೇಮ್ಸ್ ಪುತ್ರಿಯರಲ್ಲಿ ಎರಡನೆಯವಳು.

೭೪. ಮಾರ್ಗೇಟ್ ಉಸುಬಿನ ದಿನ್ನೆಯಲ್ಲಿ : ಲಂಡನ್ನಿಗೆ ಹೋಗುವ ಪ್ರವಾಸಿಗರಿಗೆ ‘ಮಾರ್ಗೇಟ್’ ಸಮುದ್ರದ ಬದಿಯ ವಿಹಾರ ಮಂದಿರ. ಇದು ಕೆಂಟ್‌ನಲ್ಲಿ ಡೊವರ್ ಹತ್ತಿರ ಇದೆ. ಥೇಮ್ಸ್‌ ಪುತ್ರಿಯರಲ್ಲಿ ಮೂರನೆಯವಳನ್ನು ಕೆಡಿಸುವ ಸ್ಥಳ.

೭೫. ಆಮೇಲೆ ನಾ ಬಂದ ಕಾರ್ತೇಜಿಗೆ : (ಸೇಂಟ್ ಅಗಸ್ಟೀನನ ಕನ್‌ಫೆಷನ್ಸ್ V) “ಅನಂತರ ನಾನು ಕಾರ್ತೆಜಿಗೆ ಬಂದೆ. ಅಲ್ಲಿ ಅಪವಿತ್ರ ಕಾಮಗಳು ನನ್ನ ಕಿವಿಯಲ್ಲಿ ಹಾಡತೊಡಗಿದವು.” ದೈವದ ಕಲ್ಪನೆ ಇಲ್ಲದ ಕಾರ್ತೇಜ್ ಎಲ್ಲ ಬಗೆಯ ಇಂದ್ರಿಯ ಭೋಗಗಳ ನೆಲೆಯಾಗಿತ್ತು. ಅಗಸ್ಟಿನ್ ಮುಂದಿನ ಮಾತುಗಳಲ್ಲಿ ತನ್ನ ಪಾಪಕೃತ್ಯಗಳ ತಪ್ಪೋಪ್ಪಿಗೆ ಮಾಡಿಕೊಳ್ಳುತ್ತಾನೆ. “ಭಗವತ್ ಪ್ರೇಮದ ಅರಿವಿಲ್ಲದೆ, ಇಂದ್ರಿಯ ವ್ಯಾಮೋಹಕ್ಕೆ ಬಿದ್ದು ಸ್ನೇಹಜಲವನ್ನು ಕೊಳೆಯಿಂದ ಅಶುದ್ಧಗೊಳಿಸಿದೆ. ಅದರ ಪಾವಿತ್ರ್ಯವನ್ನು ಕಾಮಪಿಪಾಸೆಯಿಂದ ಕಲುಷಿತಗೊಳಿಸಿದೆ.” (ಕನ್ಫೆಷನ್ಸ್ III, ೧).

೭೬. ಉರಿಯುತ್ತ ಉರಿಯುತ್ತ ಉರಿಯುತ್ತ: ಹೆನ್ರಿ ಕ್ಲಾಕ್ ವಾರೆನ್ ಬರೆದ Buddism in Translation ಎಂಬ ಪುಸ್ತಕದಿಂದ ಈ ಪದಗಳನ್ನು ತೆಗೆದುಕೊಳ್ಳಲಾಗಿದೆ. ಇಂದ್ರಿಯಗಳು ಕಾಮ, ಕ್ರೋಧ, ದ್ವೇಷಗಳ ಉರಿಯಲ್ಲಿ ತಪ್ಪಿಸುತ್ತಿವೆ. ಈ ಉರಿಯಿಂದ ಪಾರಾದಾಗಲೇ ಹೊಸ ಜನ್ಮ ಎಂದು ಬುದ್ಧ ಹೇಳಿದ.

೭೭. ಓ ಪ್ರಭೋ ನೀ ನನ್ನ ಹೊರಗೆಳೆದು ಹಾಕು : ಇದೂ ಸಹ ಸೇಂಟ್ ಅಗಸ್ಟೀನನ ತಪ್ಪೊಪ್ಪಿಗೆಯಿಂದ (ಕನ್‌ಫೆಷನ್ಸ್) ಉದ್ದರಿಸಿದ್ದು. ಪೂರ್ವಪಶ್ಚಿಮಗಳೆರಡರ ವೇದಾಂತ ವಿಚಾರಗಳು ಹೊಂದಿ ಬಂದಿರುವ ಈ ಮಾತುಗಳು ಈ ಕವನ ಭಾಗದ ತುದಿಯಲ್ಲಿ ಕಾಣಿಸಿಕೊಂಡಿರುವುದು ಕೇವಲ ಆಕಸ್ಮಿಕವಾಗಿಯಲ್ಲ ಎಂದು ಎಲಿಯಟ್ ತನ್ನ ಟಿಪ್ಪಣಿಯಲ್ಲಿ ಹೇಳುತ್ತಾನೆ. ಅಗಸ್ಟೀನನ ಪೂರ್ತಿ ಮಾತು ಹೀಗಿದೆ : `ಓ ಪ್ರಭೋ ನೀನು ನನ್ನನ್ನು ಉರಿಯಿಂದ ಹೊರಗೆಳೆದು ಹಾಕು.’

ನೀರಿನಿಂದ ಸಾವು

ಎಲಿಯಟ್ 1918ರಲ್ಲಿ Dans le Restaurent ಎಂಬ ಫ್ರೆಂಚ್ ಪದ್ಯ ಬರೆದಿದ್ದ. `ನೀರಿನಿಂದ ಸಾವು’ ಎಂಬ ಈ ಭಾಗ ಆ ಪದ್ಯದ ಕಡೆಯ ಏಳು ಸಾಲುಗಳನ್ನು ಆಧರಿಸಿ ಬರೆದದ್ದು. ಫ್ರೆಂಚ್ ಪದ್ಯದ ಆ ಸಾಲುಗಳ ಗದ್ಯಾನುವಾದ ಹೀಗಿದೆ.

Phlebas the Phenician, a fortnight drowned, forgot the cry of gulls and the swell of the Cornish seas, and the Profit and the loss, and the cargo of tin. An undersea current carried him far, took him back through the ages of his past. Imagine it- a terrible end for a man once so handsome and tall.

ಹೋಮ‌ರ್ ತನ್ನ ಒಡೆಸ್ಸಿ ಕಾವ್ಯದಲ್ಲಿ, ಕಡಲಲ್ಲಿ ಮುಳುಗಿ ಸತ್ತ ಒಬ್ಬ ವ್ಯಾಪಾರಿಯ ಕಥೆ ಹೇಳುತ್ತಾನೆ. ಆತ ಒಬ್ಬ ಶ್ರೀಮಂತ, ಧೂರ್ತ. ಒಡಿಸ್ಯೂಸನಿಗೆ ದ್ರೋಹವೆಣಿಸಲು ಯೋಚಿಸಿದವನು. ಅವನು ಒಡಿಸ್ಯೂಸನ ಜೊತೆ ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ ದೊಡ್ಡ ಬಿರುಗಾಳಿ ಬೀಸಿ ಹಡಗು ಒಡೆದು ಒಳಗಿದ್ದ ಎಲ್ಲರೂ ನೀರಿನಲ್ಲಿ ಮುಳುಗಿಹೋಗುತ್ತಾರೆ. ಒಡಿಸ್ಯೂಸ್ ಮಾತ್ರ ಹಡಗಿನ ಪಟದ ಕಂಬ ಹಿಡಿದು ತೇಲುತ್ತಾ ದಡಮುಟ್ಟುತ್ತಾನೆ. ಆದರೆ ಈ ಕಥೆಗೂ ಇಲ್ಲಿಯ ಫ್ಲೆಬಾಸ್‌ನಿಗೂ ಸಂಬಂಧವಿರುವಂತೆ ತೋರುವುದಿಲ್ಲ. ಇಬ್ಬರೂ ಫಿನೀಷಿಯನ್ನರು, ವ್ಯಾಪಾರಿಗಳು ಅಷ್ಟೆ.

೭೮. ನೀರಿನಿಂದ ಸಾವು ಈ ಶೀರ್ಷಿಕೆ ‘ಜೀವಜಲ’ವನ್ನು ನೆನಪಿಸುತ್ತದೆ. (ಜಾನ್IV:೫-೪೧) ನೀರು ಫಲವಂತಿಕೆಯ ಪೇಗನ್ ಸಂಕೇತವಾಗಿತ್ತು. ದೇವತೆಗಳಿಗೆ ಸಂಬಂಧಿಸಿದ ವಿಧಿಗಳಲ್ಲಿ ಅದರ ಪವಿತ್ರೀಕರಣ ನಡೆಯುತ್ತಿತ್ತು. ನೆಲದ ಮತ್ತು ಜನದ ಫಲವಂತಿಕೆಯನ್ನು ಹೆಚ್ಚಿಸಲು ದೇವರನ್ನು ನೀರಿನಲ್ಲಿ ಮುಳುಗಿಸಲಾಗುತ್ತಿತ್ತು. ಮತ್ತು ಚಳಿಗಾಲದಲ್ಲಿ ನೀರಿನಲ್ಲಿ ಸಮಾಧಿಮಾಡಿ ವಸಂತದಲ್ಲಿ ಅವನನ್ನು ಪುನರಜ್ಜೀವಿಸಲಾಗುತ್ತಿತ್ತು. ಈ ಕವನದಲ್ಲಿ ಎಲಿಯಟ್ ಫಿನೀಷಿಯನ್ನನಾದ ಫೆಬಾಸ್‌ನನ್ನು ಕವನದ ಎರಡನೇ ಭಾಗದಲ್ಲಿ ಬರುವ ಫರ್ಡಿನಾಂಡನ ಜೊತೆ ಸಂಬಂಧಿಸಿ ನಿಲ್ಲಿಸಿದ್ದಾನೆ. ಹಾಗೆಯೇ ಕವನದ ಮೂರನೇ ಭಾಗದಲ್ಲಿ ಬರುವ ವರ್ತಕನಾದ ಯೂಜಿನೈಡ್ಸ್‌ನ ಜೊತೆಯೂ ಸೇರಿಸಿದ್ದಾನೆ.

೭೯. ಯೆಹೂದ್ಯನೊ, ಕ್ರೈಸ್ತನೊ ಚಕ್ರ ತಿರುಗಿಸುವವನೆ: ಚಕ್ರ ತಿರುಗಿಸಿ ದಾರಿಗೆ ಹಚ್ಚುವ ಚುಕ್ಕಾಣಿಗ ಅಥವಾ ಕರ್ಣಧಾರ ಎನ್ನುವುದು ಸಾಮಾನ್ಯವಾದ ಅರ್ಥ.’ಕಡಲ ಸುಳಿ’ಯ ಚಕ್ರವನ್ನೂ ಗಮನಿಸಬೇಕು. ಗಂಜೀಪಿನೆಲೆಗಳ (Tarat pack of cards) ಸಂದರ್ಭದಲ್ಲಿ ‘ಚಕ್ರ’ ದ ಪ್ರಸ್ತಾಪವಿದೆ. ಗಂಜೀಪಿನೆಲೆ ಎರಡು ಶಕ್ತಿಗಳನ್ನು ಸಂಕೇತಿಸುವುದೆಂದು ಹೇಳಲಾಗಿದೆ. ಈಜಿಪ್ಟನ್ ದೇವತೆಯಾದ ಅನುಬಿಸ್ ಇವುಗಳಲ್ಲಿ ಒಬ್ಬ ಅವನು ಸತ್ತವರನ್ನು ನೋಡಿಕೊಳ್ಳುವವನು. ಗ್ರೀಕರ ಟೈಥೂನು ಇನ್ನೊಬ್ಬ. ಇವನು ಎಲ್ಲವನ್ನೂ ನುಂಗಿ ಹಾಕುವ ದೈತ್ಯ. ಹೀಗೆ ಈ ಸಂಕೇತ ಕಾಲದ ನಿರಂತರತೆಯಲ್ಲಿ ಮನುಷ್ಯನ ಪಾಡಿನ ಸ್ವರೂಪವನ್ನು ಸಂಕೇತಿಸುತ್ತದೆ.

ಗುಡುಗು ಹೇಳಿದ್ದು

೮೦. ಗುಡುಗು ಹೇಳಿದ್ದು: ಈ ವಿಭಾಗದ ಆರಂಭದಲ್ಲಿ ಮೂರು ವಿಷಯಗಳು ತಳುಕು ಹಾಕಿಕೊಂಡಿವೆ. ಎಮ್ಮಾಸ್‌ಗೆ ಪ್ರಯಾಣ, ಚಾಪೆಲ್ ಪೆರಿಲಸ್, ಪೂರ್ವ ಯುರೋಪಿನ ಸದ್ಯದ ಅವನತಿ (೧) ಕ್ರಿಸ್ತನನ್ನು ಶಿಲುಬೆಗೇರಿಸಿದ ಮೂರನೆಯ ದಿನ ಎಮ್ಮಾಸ್‌ಗೆ ಪಯಣಿಸುತ್ತಿರುವ ತನ್ನ ಶಿಷ್ಯರಲ್ಲಿ ಇಬ್ಬರಿಗೆ ಕಾಣಿಸಿಕೊಂಡು ಕ್ರಿಸ್ತ ತನ್ನ ಪುನರುತ್ಥಾನವನ್ನು ದೃಢೀಕರಿಸಿದ್ದು. (೨) ಶ್ರದ್ದೆಯ ಸಂಕೇತವಾದ ಗ್ರೇಲ್ ತಟ್ಟೆಯನ್ನು ಪಡೆಯಲು ಚಾಪೆಲ್ ಪೆರಿಲಸ್‌ನಲ್ಲಿ ಅಂತಿಮ ಅಗ್ನಿದಿವ್ಯ ನಡೆದಿದ್ದು. (೩) ನಾಗರಿಕತೆಯ ಪತನಕ್ಕೆ ಸಾಕ್ಷಿಯೆಂಬಂತೆ ಕ್ರೈಸ್ತದರ್ಶನಗಳಲ್ಲಿ ಶ್ರದ್ಧೆ ಕಳೆದುಕೊಂಡು ಬಾಳುತ್ತಿರುವುದು.

೮೧. ತೋಟಗಳ ನಡುವೆ ಹೆಪ್ಪಾದ ಮೌನ : ಇಲ್ಲಿ ಪ್ರಸ್ತಾಪವಾಗಿರುವ ತೋಟಗಳು ಎರಡು. ಮೊದಲಿನದು ‘ಗೆತ್ ಸೆಮೇನ್’ ತೋಟ. ಇದು ಕ್ರಿಸ್ತ ಅಂತಿಮ ಪ್ರಲೋಭನೆ ಎದುರಿಸಿದ, ಪ್ರಾರ್ಥನೆ ಸಂಕಲ್ಪಗಳಲ್ಲಿ ನಿಂತ ಸ್ಥಳ. ಇನ್ನೊಂದು ಗೊಲ್ಲೊಥಾ ತೋಟ, ಇಲ್ಲಿ ಗುಡ್ಡದ ಮೇಲೆ ಕ್ರಿಸ್ತನನ್ನು ಶಿಲುಬೆಗೇರಿಸಲಾಯಿತು. ಇಲ್ಲಿಯೇ ಶಿಷ್ಯರು ಅವನ ಕಳೇಬರವನ್ನು ಹೊಸ ಸಮಾಧಿಯಲ್ಲಿ ಇಟ್ಟರು. ಈ ಭಾಗ ಕ್ರಿಸ್ತನ ಪ್ರೇಮ, ಯಾತನೆ, ಅವನಿಗಾದ ದ್ರೋಹ. ಅವನ ಸೆರೆ, ವಿಚಾರಣೆ, ಶಿಲುಬೆ ಶಿಕ್ಷೆ ಮತ್ತು ಸಮಾಧಿ ಈ ಎಲ್ಲ ವಿಷಯಗಳ ಸ್ಮರಣೆ ತರುತ್ತದೆ.

೮೨. ಇಲ್ಲಿ ನೀರಿಲ್ಲ ಬರಿಯ ಬಂಡೆ: ಇಲ್ಲಿಂದ ಮುಂದಿನ ಮೂವತ್ತಾರು ಸಾಲುಗಳು ಎಮ್ಮಾಸ್‌ಗೆ ಮಾಡಿದ ಪ್ರಯಾಣಕ್ಕೆ ಸಂಬಂಧಿಸುತ್ತವೆ. ಕ್ರಿಸ್ತನ ಶಿಷ್ಯರು ಅವನನ್ನು ಕಳೆದುಕೊಂಡವೆಂಬ ವ್ಯಥೆಯಿಂದ, ತಬ್ಬಲಿಗಳಂತೆ ಮಾಡಿದ ಪ್ರಯಾಣದ ಕ್ಲೇಶ ಇಲ್ಲಿ ಸಮರ್ಥವಾಗಿ ಬಂದಿದೆ.

೮೩. ತೊಟತೊಟ ಪಟಪಟ ತೊಟತೊಟ: ಎಲಿಯಟ್ ಈ ‘ನೀರು ಹನಿಯುವ ಹಾಡ’ನ್ನು ತನ್ನ ಟಿಪ್ಪಣಿಯಲ್ಲಿ ಪ್ರಸ್ತಾಪಿಸುತ್ತಾನೆ. ಕ್ವಿಚೆನ್ ಪ್ರಾಂತ್ಯದಲ್ಲಿ ತಾನು ಈ ಅನುಭವ ಪಡೆದದ್ದಾಗಿ ಹೇಳುತ್ತಾನೆ.

೮೪. ನಿನ್ನ ಬದಿಯಲ್ಲೇ… ಆ ಮತ್ತೊಬ್ಬ ಯಾರು?: ದಕ್ಷಿಣ ಧ್ರುವಕ್ಕೆ ನಡೆದ ಶೋಧಯಾತ್ರೆಯ ಕಥನವೊಂದನ್ನು ಕವಿ ಓದಿದ್ದು, ಅದರ ನೆನಪಿನಿಂದ ಪ್ರಚೋದಿತವಾದ ಸಾಲು ಇದು. ಪ್ರವಾಸಿಗರು ಬಳಲಿ ಬೆಂಡಾದ ಹೊತ್ತಿನಲ್ಲಿ ಎಣಿಸಿದ ಜನಕ್ಕಿಂತ ಒಬ್ಬ ವ್ಯಕ್ತಿ ತಮ್ಮ ಗುಂಪಿನಲ್ಲಿ ಹೆಚ್ಚಾಗಿ ಇದ್ದಾನೆಂಬ ಒಂದು ಭ್ರಮಾಲಹರಿಗೆ ಸಿಕ್ಕಿ ಬಿದ್ದಿದ್ದರು ಎಂದು ಎಲಿಯಟ್ ಟಿಪ್ಪಣಿ ಬರೆಯುತ್ತಾನೆ. ಕ್ರಿಸ್ತನನ್ನು ಶಿಲುಬೆಗೆ ಹಾಕಿದ ನಂತರ ದುಃಖ, ಹತಾಶೆಗಳಿಂದ ಬಳಲಿದ ಅವನನ್ನು ಇಬ್ಬರು ಶಿಷ್ಯರು ‘ಎಮ್ಮಾಸ್’ಗೆ ಪ್ರಯಾಣ ಮಾಡುವಾಗ ಮಧ್ಯೆ ಅವರಿಗೆ ಒಬ್ಬ ದಾರಿಹೋಕ ಸಿಕ್ಕಿದ. ಅವನನ್ನು ಗುರುತಿಸಲು ಅವರಿಗೆ ಆಗಲಿಲ್ಲ. ಶಿಲುಬೇರಿದ ವ್ಯಕ್ತಿ ಈ ಹಿಂದೆ ಧರ್ಮಗ್ರಂರ್ಥಗಳಲ್ಲಿ ಉಕ್ತನಾದ ಅವತಾರ ಪುರುಷನೇ ಹೌದು ಎಂದು ಈ ದಾರಿಹೋಕ ವಾದಿಸಿದ. ಕಡೆಗೆ ಛತ್ರವೊಂದನ್ನು ತಲುಪಿ ಆಹಾರ ತೆಗೆದುಕೊಳ್ಳುವ ಹೊತ್ತಿನಲ್ಲಿ ಆ ವ್ಯಕ್ತಿ ಯಾರೆಂದು ಅವರಿಗೆ ಹೊಳೆಯಿತು. ಆ ಕ್ಷಣವೇ ಅವನು ಅದೃಶ್ಯನಾದ. (ಲ್ಯೂಕ್ XX IV,೧೩-೧೪)

೮೫. ಮೇಲೆ ಆಕಾಶದಲ್ಲಿ ಅದೇನು ಶಬ್ದ : ಇಲ್ಲಿಂದ ಮುಂದಕ್ಕೆ ಇರುವ ಹನ್ನೊಂದು ಸಾಲುಗಳು ೧೯೧೭ ರಲ್ಲಿ ರಷ್ಯಾದಲ್ಲಿ ನಡೆದ ಕ್ರಾಂತಿಯ ಸಂಬಂಧವಾಗಿ ಕೇಡಿನ ಮುನ್ಸೂಚನೆಗಳನ್ನು ನೀಡುತ್ತವೆ. ಹರ್ಮನ್ ಹಸ್ ಎಂಬ ಲೇಖಕನ “Blick ins Chaos’ ಎಂಬ ಜರ್ಮನ್ ಗ್ರಂರ್ಥದಲ್ಲಿ ಯೂರೋಪಿನ ಅರ್ಧಭಾಗ, ಕಡೆಯಪಕ್ಷ ಪೂರ್ವಯೂರೋಪಿನ ಅರ್ಧಭಾಗ ಒಂದು ಹುಚ್ಚು ಆನಂದಾವೇಶದಲ್ಲಿ ಪತನದ ಮಹಾ ಕಂದರದತ್ತ ಕಾಲು ಹಾಕುತ್ತಿದೆಯೆಂಬ ಮಾತಿದೆ.

೮೬. ಚಾಪೆಲ್ ಸುತ್ತ ಹುಲ್ಲು ಹಾಡುತ್ತಿದೆ…..ಖಾಲಿಯಾದ ಚಾಪೆಲ್: ಗ್ರೇಲ್ ಪುರಾಣದಲ್ಲಿ ಬರುವ ಚಾಪೆಲ್ ಪೆರಿಲಸ್‌ ಶೂರನೊಬ್ಬ ಪ್ರಯಾಣ ಮಾಡುತ್ತಾನೆ. ದಾರಿಯಲ್ಲಿ ಒದಗುವ ಎಲ್ಲ ಸಂಕಷ್ಟಗಳನ್ನು ಎದುರಿಸಿ ಹೋಗುವುದಾದರೆ ಅವನಿಗೆ ಗ್ರೇಲ್ (ಕ್ರಿಸ್ತನ ಭೋಜನ ಪಾತ್ರೆ) ಸಿಗಬಹುದೆಂಬ ಸೂಚನೆಗಳಿರುತ್ತವೆ. ಆ ಸಾಹಸಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಕಷ್ಟಗಳನ್ನೆಲ್ಲ ದಾರಿಯಲ್ಲಿ ಎದುರಿಸಿ ಗೆದ್ದು ಬರುತ್ತಾನೆ. ಆದರೆ ಆ ಹೊತ್ತಿಗೆ ಚಾಪೆಲ್ ಹಾಳು ಬಿದ್ದು ಖಾಲಿಯಾಗಿರುತ್ತದೆ.

೮೭. ಕೊಕ್ಕೋಕ್ಕೋ ಕೊಕ್ಕೊಕ್ಕೋ: ಪೀಟರ್ ತನ್ನ ಪ್ರಭುವನ್ನು ಮೂರು ಸಲ ನಿರಾಕರಿಸಿ ನಡೆದ. ಜೀಸಸ್ ಮುಂಚೆಯೇ ಹೇಳಿದ್ದಂತೆ, ಕೂಡಲೇ ಹುಂಜ ಕೂಗಿತು. (ಮ್ಯಾಥ್ಯ X XVI, ೩೪-೭೪)

೮೮. ಗಂಗೆ ಇಂಗಿದಳು : ಇಲ್ಲಿಯ ಗಂಗೆ ನಮ್ಮ ದೇಶದ ಗಂಗಾನದಿ.

೮೯. ದತ್ತ: ಈ ಪದವನ್ನು `ದತ್ತದಯಧ್ವಮ್ ದಾಮ್ಯತ’ ಎಂಬ, ಬೃಹದಾರಣ್ಯಕ ಉಪನಿಷತ್ತಿನ ಮಂತ್ರವಾಕ್ಯದಿಂದ ತೆಗೆದುಕೊಂಡಿದೆ. ದಾನಮಾಡು, ದಯೆತೋರು. ನಿಗ್ರಹಿಸಿಕೊ, ಎನ್ನುವುದು ಈ ವಾಕ್ಯದ ಮೂರು ಪದಗಳ ಅರ್ಥ.

೯೦. ಧಾರಾಳಿ ಜೇಡ ಮುಸುಕಿದ ನಮ್ಮ ನೆನಪುಗಳಲ್ಲಿ: ವೆಬ್‌ಸ್ಟರ್‌ನ ‘ದಿ ವೈಟ್ ಡೆವಿಲ್’ ನಲ್ಲಿ (V.VI) ಬರುವ ಸಾಲುಗಳ ಅನುವಾದ. “ಹುಳು ನಿನ್ನ ಚಳಿ ಹೊದಿಕೆಯನ್ನು ತೂತು ಹೊಡೆಯುವ ಮುಂಚೆ, ಜೇಡ ನಿನ್ನ ಸಮಾಧಿಗೆ ತೆಳು ಹೂದಿಕೆ ರಚಿಸುವ ಮುಂಚೆ ಮರುಮದುವೆಯಾಗುತ್ತಾರೆ ಅವರು.” (ಇದು ಎಲಿಯಟ್ ಕೊಟ್ಟಿರುವ ಟಿಪ್ಪಣಿ).

೯೧. ಕೀಲಿಕೈ ಬಾಗಿಲೊಳಗೆ ಒಂದು ಸಲ ತಿರುಗಿದ್ದು: ಡಾಂಟೆಯ ಡಿವೈನ್ ಕಾಮೆಡಿಯಲ್ಲಿ (ಇನ್‌ಫರ್ನೊ XXX III ೪೬) ಬರುವ ಸಾಲುಗಳ ಅನುವಾದ. ‘ನಾನಿದ್ದ ಜಾಗದ ಕೆಳಭಾಗದಲ್ಲಿದ್ದ ಭೀಕರ ಗೋಪುರ ಗೃಹದ ಬಾಗಿಲ ಬೀಗ ಹಾಕಿದ್ದು ನನಗೆ ಕೇಳಿಸಿತು.’ ಡಾಂಟೆ ನರಕದಲ್ಲಿ ಸಾಗುತ್ತಿರುವಾಗ, ದ್ರೋಹಿಯಾದ, ಪೀಸಾದ ಕೌಂಟ್ ಯುಗಲಿನೊ ಅವನಿಗೆ ಹೇಳಿದ ಕಥೆಯೊಂದರಲ್ಲಿ ಈ ಮಾತು ಬರುತ್ತದೆ. ಕೌಂಟ್ ಯುಗಲಿನೊ, ಆರ್ಚ್ ಬಿಷಪ್ ರುಗ್ಗೇರಿಯು ಯುಗಲಿನೊನನ್ನು ಅವನ ನಾಲ್ಕು ಜನ ಮಕ್ಕಳ ಜೊತೆಯಲ್ಲಿ ಸೆರೆಗೆ ಹಾಕಿ ಅವರೆಲ್ಲ ಉಪವಾಸ ಸಾಯುವಂತ ಮಾಡುತ್ತಾನೆ.

೯೨. ಸೆರೆಮನೆಯೊಳಗೆ ನಿಂತು ಚಿಂತಿಸುತ್ತೇವೆ ಕೀಲಿಕೈ ಕುರಿತು: ಮೇಲಿನ ಟಿಪ್ಪಣಿಯಲ್ಲಿ ಹೇಳಿದ ಡಾಂಟೆಯ ಕಥಾಭಾಗಕ್ಕೆ ಸಂಬಂಧಿಸಿ ಎಲಿಯಟ್ ಎಫ್. ಎಚ್. ಬ್ರಾಡ್ಲೆಯ ‘ಅಪಿಯರೆನ್ಸ್ ಅಂಡ್ ರಿಯಾಲಿಟಿ’ ಪುಸ್ತಕದಿಂದ (೧೮೯೬,, ಪುಟ ೩೪೬) ಕೆಳಗಿನ ಉದ್ದರಣವನ್ನು ಕೊಡುತ್ತಾನೆ. “ನನ್ನ ವಿಚಾರ ಭಾವನೆಗಳಷ್ಟೇ ನನ್ನ ಬಾಹ್ಯ ಇಂದ್ರಿಯ ಸಂವೇದನೆಗಳೂ ತೀರಾ ಖಾಸಗಿಯಾದವು. ಈ ಎರಡರ ಸಂಬಂಧವಾದ ಅನುಭವಗಳೂ ನನ್ನ ವೈಯಕ್ತಿಕ ವರ್ತುಲದೊಳಕ್ಕೆ ಬರುತ್ತವೆ. ಈ ವೈಯಕ್ತಿಕ ವರ್ತುಲ ಹೊರ ಜಗತ್ತಿಗೆ ಮುಚ್ಚಿಹೋದಂಥದು…. ಇಡೀ ಜಗತ್ತು ಒಂದೊಂದು ಚೇತನಕ್ಕೂ ಅದಕ್ಕೆ ತಕ್ಕಂತೆ ವಿಶಿಷ್ಟವಾದದ್ದು ಮತ್ತು ಖಾಸಗಿಯಾದದ್ದು’.

೯೩. ಪುನರುಜ್ಜೀವಿಸುತ್ತದೆ ಭಗ್ನ ಕೊರಿಯೊಲೇನಸನನ್ನು : ಕೊರಿಯೊಲೇನಸ್ ಕ್ರಿ.ಪೂ. ಎರಡನೆಯ ಶತಮಾನದಲ್ಲಿದ್ದ ಒಬ್ಬ ಪ್ರಸಿದ್ಧ ರೋಮನ್ ಸೇನಾಧಿಪತಿ, ಪ್ಲೂಟಾರ್ಕ್ ಬರೆದ ಪ್ರಸಿದ್ಧರ ಜೀವನ ಚರಿತ್ರೆಯಲ್ಲಿರುವ ಅವನ ಕಥೆಯನ್ನಾಧರಿಸಿ ಷೇಕ್ಸ್‌ಪಿಯರ್ ಕೊರಿಯೊಲೇನಸ್ ಎಂಬ ನಾಟಕ ಬರೆದಿದ್ದಾನೆ. ಒಮ್ಮೆ ರೋಮ್ ಹಸಿದ ಜನರ ಗಲಭೆಗೆ ಸಿಕ್ಕಾಗ, ದೇಶದ ಖಜಾನೆ ಬಳಸಿ ಬಡವರಿಗೆ ಆಹಾರ ಒದಗಿಸಬೇಕೆಂದು ಕೊರಿಯೊಲೇನಸ್ ಸೂಚಿಸಿದ. ಇದಕ್ಕಾಗಿ ಅವನನ್ನು ದೇಶಭ್ರಷ್ಟನನ್ನಾಗಿ ಮಾಡಲಾಯಿತು. ದೇಶದ ಹೊರಗಿದ್ದಾಗ ಅವನು ವೋಲ್ಷಿಯನ್ ಜನರ ಹಿರಿಯ ನಾಯಕನಾದ. ಆ ಜನರನ್ನು ಜೊತೆ ಮಾಡಿಕೊಂಡು ರೋಮ್ ವಿರುದ್ಧ ದಾಳಿ ಮಾಡಿದ. ರೋಮನ್ನರು ಕೊರಿಯೊಲೇನಸ್ಸಿಗೆ ಪ್ರಿಯರಾಗಿದ್ದ ಜನರನ್ನೂ ಮತ್ತು ಅವನ ತಾಯಿ, ಹೆಂಡತಿ, ಮಗ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಿ ರೋಮ್ ದೇಶವನ್ನು ಉಳಿಸಬೇಕೆಂದು ಪ್ರಾರ್ಥಿಸಿದರು. ಕೊರಿಯೊಲೇನಸ್‌ ಕಡೆಯಲ್ಲಿ ಅದಕ್ಕೆ ಒಪ್ಪಿದ. ಆದರೆ ಅವನು ತಮ್ಮ ಹಿತಾಸಕ್ತಿಗಳನ್ನು ಕಡೆಗಣಿಸಿದ ಎಂದು ವೋಲ್ಷಿಯನ್ನರು ಅಸಂತುಷ್ಟರಾದರು. ಅವರ ಸೇನಾಧಿಪತಿ ಕೊರಿಯೊಲೇನನನ್ನು ಒಂದು ಸಾರ್ವಜನಿಕ ಸ್ಥಳದಲ್ಲಿ ಕೊಂದ. (ಎಲಿಯಟ್ ಬರೆದ ಎರಡು ‘ಕೊರಿಯೊಲಾನ್’ ಪದ್ಯಗಳನ್ನು ಮತ್ತು ‘ಎ ಕುಕಿಂಗ್ ಎಗ್’ ಎಂಬ ಪದ್ಯವನ್ನು ನೋಡಿ.)

೯೪. ನಿಯಂತ್ರಿಸುವ ಕೈಗೆ… ಪಡಿಮಿಡಿಯಬಹುದಾಗಿತ್ತು: ನೋಡಿ; ‘ನೀರಿನಿಂದ ಸಾವು’ ಎಂಬ ಭಾಗ. ನಿಯಂತ್ರಿಸುವ ಕೈಗೆ ವಿಧೇಯನಾಗಿ ವರ್ತಿಸಿ ಪ್ರತಿಸ್ಪಂದಿಸದೇ ಹೋಗುವ ವ್ಯಕ್ತಿತ್ವ ಕವನದಲ್ಲಿ ಈ ಹಿಂದೆ ಬಂದ ಹಲವು ಅಂಥ ಪ್ರತಿಮೆಗಳ ಜೊತೆ ಧ್ವನಿನೆಲೆಯಲ್ಲಿ ಕೂಡಿಕೊಳ್ಳುತ್ತದೆ. ಸಂಯಮಹೀನವಾದ ಬದುಕಿನ ಪಾಡನ್ನು ಕುರಿತು ಕವಿ ಇಲ್ಲಿ ಚಿಂತಿಸುತ್ತಿದ್ದಾನೆ.

೯೫. ಕುಳಿತೆ ದಡದಲ್ಲಿ ಗಾಳವ ಎಸೆದು ನೀರಲ್ಲಿ: ಜೆ.ಎಲ್. ವೆಸ್ಟನ್ ಪ್ರಕಟಿಸಿದ “ಫ್ರಮ್ ರಿಚುಯಲ್ ಟು ರೊಮಾನ್ಸ್” ಗ್ರಂಥದಲ್ಲಿ ಬರುವ ‘ಫಿಶರ್ ಕಿಂಗ್ ಮಿಫ್’ ಇಲ್ಲಿ ಪ್ರಸ್ತಾಪವಾಗಿದೆ. ಅದು ‘ಗ್ರೇಲ್ ಲೆಜೆಂಡ್’ಗಳಲ್ಲಿ ಸಿಗುವ ಕಥೆ. ಮತ್ಸ್ಯರಾಜನೊಬ್ಬನ ರಾಜ್ಯದಲ್ಲಿ ದುರ್ಭಿಕ್ಷ ಕಾಣಿಸಿಕೊಂಡು ಜನರೆಲ್ಲ ಸಾಯಲಾರಂಭಿಸುತ್ತಾರೆ. ಇದಕ್ಕೆ ಕಾರಣ ಅರಸನ ನಿರ್ವೀಯ್ರತೆ ಎಂದು ತಿಳಿಯುತ್ತದೆ. ಅವನ ರಾಜ್ಯ ಕ್ರಮೇಣ ಯಾವ ಬೆಳೆಯೂ ಹುಟ್ಟದ ಬಂಜೆಭೂಮಿಯಾಗುತ್ತದೆ. ಈ ದುಸ್ಥಿತಿಯಿಂದ ರಾಜ್ಯ ಪಾರಾಗಬೇಕಾದರೆ ಹಿಂದೆ ಏಸುಕ್ರಿಸ್ತ ಊಟಮಾಡಿದ ಗ್ರೇಲ್ ತಟ್ಟೆಯನ್ನು ಆ ನಾಡಿಗೆ ತರಬೇಕು. ಆಗ ರಾಜ ಮತ್ತೆ ವೀರ್ಯವಂತನಾಗುತ್ತಾನೆ; ನಾಡು ಸಮೃದ್ಧವಾಗುತ್ತದೆ. ಈ ಕಥೆಯೇ ವೇಸ್ಟ್‌ಲ್ಯಾಂಡ್‌ ಕವಿತೆಗೆ ಪ್ರಧಾನ ಹಿನ್ನೆಲೆಯಾಗಿರುವುದರಿಂದ ಫಿಶರ್‌ಕಿಂಗ್‌ ನ ಪ್ರಸ್ತಾಪ, ಗ್ರೇಲ್ ತಟ್ಟೆಯ ಪ್ರಸ್ತಾಪ ಮತ್ತು ಅದನ್ನು ಶೋಧಿಸಿ ತರಲು ಹೊರಟು ಅನೇಕ ವಿಪತ್ತುಗಳನ್ನು ಸಾಹಸದಿಂದ ಎದುರಿಸಿದ ಸರದಾರರ ಪ್ರಸ್ತಾಪ ‘ಬಂಜರುಭೂಮಿ’ ಕವನದಲ್ಲಿ ವಿಶೇಷವಾಗಿ ಬರುತ್ತದೆ.

೯೬. ನನ್ನ ನೆಲವೊಂದನ್ನು ಕ್ರಮಕ್ಕೆ ಒಳಪಡಿಸಲೆ? : ಪ್ರಭು ಹೇಳಿದ, “ನಿನ್ನ ಮನೆಯನ್ನು ಒಂದು ಕ್ರಮಕ್ಕೊಳಪಡಿಸು: ಏಕೆಂದರೆ ನೀನು ಸಾಯುತ್ತೀಯೆ, ಬದುಕುವುದಿಲ್ಲ”
(Isaiah XXXVIII-೧೦).

೯೭. ಶುದ್ಧಿಕಾರಕ ಅಗ್ನಿಯಲ್ಲಿ ಮರೆಯಾದ ಅವನು : ಡಾಂಟೆ ಶುದ್ದಿಲೋಕದಲ್ಲಿ ಡೇನಿಯಲ್‌ನನ್ನು ಕಾಣುತ್ತಾನೆ. ತನ್ನ ಹಿಂದಿನ ವಿಷಯಲಾಲಸೆಯಿಂದಾಗಿ ಆರ್ನಾಟ್ ದುಸ್ಥಿತಿಯಲ್ಲಿದ್ದಾನೆ. ಡಾಂಟೆಗೆ ಅವನು ಹೇಳುವ ಮಾತು ಇದು : “ಇಲ್ಲಿಗೆ ನಿನ್ನನ್ನು ಕರೆತಂದ ಒಳ್ಳೆಯತನದ ಸಾಕ್ಷಿಯಾಗಿ ನಿನ್ನನ್ನು ಪ್ರಾರ್ಥಿಸುತ್ತಿದ್ದೇನೆ. ನೀನು ಮುಂದೆ ತಕ್ಕ ಸಂದರ್ಭದಲ್ಲಿ ನನ್ನ ಯಾತನೆಯ ಬಗ್ಗೆ ಯೋಚಿಸು.” ಹೀಗೆ ಹೇಳಿ ಅವನು ಶುದ್ಧಿಕಾರಕ ಅಗ್ನಿಜ್ವಾಲೆಯಲ್ಲಿ ಮರೆಯಾದ.

೯೮. ನಾನೆಂದು ಆ ಸ್ವಾಲೋ ಹಕ್ಕಿಯಂತೆ ಆದೇನು? : ‘ಪರ್ವೆಜಿಲಿಯಮ್ ವೆನರಿಸ್’ ಎಂಬ ಲ್ಯಾಟಿನ್ ಪದ್ಯದಿಂದ ತೆಗೆದ ಸಾಲು ಇದು. ಇದನ್ನು ಬರೆದ ಕವಿ ಯಾರೋ ಗೊತ್ತಿಲ್ಲವಾದರೂ ಕ್ರಿ.ಶ. ಎರಡನೆಯ ಶತಮಾನದಲ್ಲಿ ಈ ಪದ್ಯ ರಚಿತವಾದದ್ದು ತಿಳಿಯುತ್ತದೆ. ಲ್ಯಾಟಿನ್ ಪದ್ಯದಲ್ಲಿ ಬರುವ, ಇಲ್ಲಿಗೆ ಸಂಬಂಧಿಸಿದ ಮಾತಿನ ಅರ್ಥ ಹೀಗಿದೆ. “ನಾನೆಂದು ಆ ಸ್ವಾಲೋ ಹಕ್ಕಿಯಂತೆ ಆದೇನು?” “ಈ ಮೂಕ ವ್ಯಥೆಯಿಂದ ಎಂದು ಪಾರಾದೇನು?” ಎಂಬ ಸಾಲೂ ಮೂಲ ಲ್ಯಾಟಿನ್ ಪದ್ಯದಲ್ಲಿ ಮೇಲಿನ ಸಾಲಿನ ನಂತರವೇ ಬರುತ್ತದೆ.

೯೯. ಅಕ್ವಿಟೇನ್ ರಾಜಕುಮಾರ ಪಾಳುಗೋಪ್ಪರದಲ್ಲಿ : `ಗೆರಾರ್ಡ್ ಡೆ ನರ್ವಲ್’ ಎಂಬ ಫ್ರೆಂಚ್ ಕವಿಯ ಸಾನೆಟ್ಟೊಂದರಲ್ಲಿ ಬರುವ ಸಾಲಿನ ಅನುವಾದ ಇದು. ಈ
ಮಾತನ್ನು ಹೇಳುವ ವ್ಯಕ್ತಿಯನ್ನು `ಸಂತೈಸಲಾಗದ, ಶೋಕದ ನೆರಳು ಕವಿದ ಒಬ್ಬ ವಿಧುರನನ್ನಾಗಿ ಪದ್ಯ ಚಿತ್ರಿಸುತ್ತದೆ.

೧೦೦. ಹಿರೋನಿಮಾ ಮತ್ತೆ ಹುಚ್ಚನಾಗಿದ್ದಾನೆ : ಇದು ಥಾಮಸ್ ಕಿಡ್ ಬರೆದ ಒಂದು ಸ್ಪ್ಯಾನಿಷ್ ದುರಂತ ನಾಟಕದ ಶೀರ್ಷಿಕೆ (Hieronymo is mad Again). ಎಲಿಜಬೆತ್‌ ಯುಗದಲ್ಲಿ ಸೆನೆಕನ್‌ ಪರಂಪರೆಯಲ್ಲಿ ಬಂದ ಒಂದು ಉದ್ದೀಪಕ ನಾಟಕ ಅದು. ಅದರಲ್ಲಿ ಹಿರೋನಿಮಾ ತನ್ನ ರಾಜನ ಕೋರಿಕೆಯು ಒಂದು ನಾಟಕ ಬರೆಯುತ್ತಾನೆ. ನಾಟಕದಲ್ಲಿ ತಾನೂ ಒಂದು ಪಾತ್ರವಾಗಿ ಅಭಿನಯಿಸಿ ತನ್ನ ಮಗನನ್ನು ಕೊಂದವರನ್ನು ಸಾಯಿಸುತ್ತಾನೆ; ಕೂಡಲೇ ತನ್ನನ್ನೂ ಅಲ್ಲಿ ಕೊಂದುಕೊಳ್ಳುತ್ತಾನೆ.

೧೦೧. ಶಾಂತಿಃ ಶಾಂತಿಃ ಶಾಂತಿಃ : ವೇದಗಳ ಭಾಗವಾದ ಉಪನಿಷತ್ತುಗಳಲ್ಲಿ ಸಾಮಾನ್ಯವಾಗಿ ಶಾಂತಿಪಾಠದ ಕೊನೆಯಲ್ಲಿ ಬರುವ ಮಾತು. ಎಲಿಯಟ್ ಇದಕ್ಕೆ The peace which passeth understanding ಎಂದು ಅರ್ಥ ಮಾಡುತ್ತಾನೆ. ಅವನ ಈ ಅನುವಾದ ಪಾಲ್ (Paul) ತನ್ನ ಪತ್ರಗಳಲ್ಲಿ ತರುವ ವಂದನಾಪೂರ್ವಕ ಮಾತುಗಳನ್ನು ಮತ್ತು ಆಶೀರ್ವಚನಗಳನ್ನು ಸ್ಮರಣೆಗೆ ತರುತ್ತದೆ. ಉದಾ. “And the peace of God which passeth all understanding, shall keep your hearts and minds through Jesus Christ.” (Philippians IV:೭)