ನಮ್ಮ ದೇಶ ಚಿನ್ನ, ನಮ್ಮ ಜಲ ದಿವ್ಯಔಷಧಿ, ನಮ್ಮ ಜನ ರನ್ನರೆಂದು, ನಾನು ಈಗಾಗಲೇ ಬಹಳಷ್ಟು ಸಾರಿ ಹೇಳಿದ್ದೇನೆ ಬರೆದಿದ್ದೇನೆ.
ಈ ಮಾತುಗಳಿಗೆ ಪೂರಕವಾಗಿ ಹೈದ್ರಾಬಾದಿನ ಒಸ್ಮಾನಿಯಾ ವಿಶ್ವವಿದ್ಯಾಲಯ ಹಾಗೂ ಅಣು ಖನಿಜ ನಿರ್‍ದೇಶನಾಲಯ ನಡೆಸಿದ ಜಂಟಿ ಸಂಶೋಧನೆಯಲ್ಲಿ ಶ್ರೀಶೈಲ ಅರಣ್ಯದಲ್ಲಿ ಬೃಹತ್ ಪ್ರಮಾಣದ ಯುರೇನಿಯಮ್ ಅದಿರು ನಿಕ್ಷೇಪ ಇತ್ತೀಚೆಗೆ ಜುಲೈ-೨೦೧೫ ರ ಮಾಹೆಯಲ್ಲಿ ಪತ್ತೆಯಾಗಿರುವುದು.
ಆಂಧ್ರ ಪ್ರದೇಶದ ಕಡಪ ಬಳಿಯ ಶ್ರೀಶೈಲ ಅರಣ್ಯದಲ್ಲಿರುವ ಈ ನಿಕ್ಷೇಪದಿಂದ ಭವ್ಯ ಭಾರತದಲ್ಲಿನ ಪರಮಾಣು ಸ್ಥಾವರಗಳ ಇಂಧನ ಕೊರತೆ ನೀಗುವ ಸಾಧ್ಯತೆ ಬಹಳ ಇದೆಯೆಂದು ಈಗಾಗಲೇ ತಜ್ಞರು ಅಭಿಪ್ರಾಯ ಪಟ್ಟಿರುವರು.
ಈ ಭಾರೀ ನಿಕ್ಷೇಪ ತೆಲಂಗಾಣ ರಾಜ್ಯದಲ್ಲೂ ತೀವ್ರವಾಗಿ ವ್ಯಾಪಿಸಿದೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಇದೊಂದು ತೀರಾ ವಿರಳವಾದ ಖನಿಜವಾಗಿದ್ದು ಇದು ಗುಣಮಟ್ಟದಲ್ಲಿ ಅತ್ಯುತ್ತಮವಾಗಿದ್ದು ಆಸ್ಟ್ರೇಲಿಯಾ ಕೆನಡಾದಲ್ಲಿ ಲಭ್ಯವಿರುವ ಯೂರೇನಿಯಂ ಖನಿಜದ ಗುಣಮಟ್ಟಕ್ಕೆ ಹೋಲಿಸಬಹುದಾಗಿದೆಯೆಂದು ಅಭಿಪ್ರಾಯ ಪಟ್ಟಿರುವರು.
ಇದೇ ರೀತಿ- ಈಗಾಗಲೇ ಮೆಹಬೂಬ್ ನಗರ, ನೆಲಗೊಂಡ. ಗುಂಟೂರುಗಳಲ್ಲೂ ಈ ಮೊದಲು ಯುರೇನಿಯಂ ನಿಕ್ಷೇಪ ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಿರುವರು. ಇಲ್ಲಿನ ಅಧಿಕಾರಿಗಳ ಪ್ರಕಾರ ಈಗ ಕಡಪದಲ್ಲಿ ಪತ್ತೆಯಾಗಿರುವ ನಿಕ್ಷೇಪದಲ್ಲಿ ಸುಮಾರು ೭ ಲಕ್ಷ ಟನ್ ಯುರೇನಿಯಂ ಲಭ್ಯವಾಗುವ ಸಾಧ್ಯತೆ ಇದ್ದು ತೆಲಂಗಾಣ ಪ್ರದೇಶದಲ್ಲಿ ೩ ಲಕ್ಷ ಟನ್ ಇರುವ ಸಾಧ್ಯತೆಯಿದೆಯೆಂದು ಅಂದಾಜಿಸಿರುವರು.
ಈ ಎರಡನ್ನೂ ಸೇರಿಸಿದರೆ ಭವ್ಯ ಭಾರತದ ಒಟ್ಟು ಯುರೇನಿಯಂ ನಿಕ್ಷೇಪದ ೨೫% ಭಾಗದಷ್ಟಾಗಲಿದೆಯೆಂದು ಅಂದಾಜಿಸಿರುವರು.
ಶ್ರೀಕಾಕುಲಂನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಅಣುಶಕ್ತಿ ಕೇಂದ್ರಕ್ಕೆ ಶ್ರೀ ಶೈಲ ನಿಕ್ಷೇಪವೇ ಇಂಧನ ಒದಗಿಸಲಿದೆ. ಆದರೆ ಪರಿಸರವಾದಿಗಳು ಈಗಾಗಲೇ ಶ್ರೀಕಾಕುಲಂನ ಪ್ರಸ್ತಾಪಿತ ಅಣುಶಕ್ತಿ ಕೇಂದ್ರಕ್ಕೆ ತೀವ್ರ ಪ್ರತಿಭಟನೆಗಳನ್ನು ತೀವ್ರಗೊಳಿಸುವ ಸಾಧ್ಯತೆ ಇದೆ.
ಒಂದು ಕಡೆ ಅಭಿವೃದ್ಧಿ, ಇನ್ನೊಂದೆಡೆ ಪರಿಸರದ ಕಾಳಜಿ, ಎರಡನ್ನು ಸಮತೋಲನ ಮಾಡಿಕೊಂಡು ಹೋಗುವುದು ಇಂದಿನ ಸವಾಲುಗಳಲ್ಲಿ ಮುಖ್ಯವಲ್ಲವೇ? ಯಾವುದಕ್ಕೂ ಏನಕ್ಕೂ ಕಾದು ನೋಡೋಣವಲ್ಲವೇ?
*****