ಸೂಟಿಯಲ್ಲಿ ಸುಬ್ಬು ಹೊರಟ
ಜಾತ್ರೆ ನೋಡಲು
ರೊಟ್ಟಿ ಗಂಟು ಕೈಲಿ ಹಿಡಿದ
ಹೊಟ್ಟೆಗೆ ಹಾಕಲು
ಅಂದವಾದ ಬಂಡಿಯೊಂದು
ಸಿದ್ಧವಾಯಿತು
ದಂಡಿಯಾಗಿ ಮಕ್ಕಳೆಲ್ಲ
ಹತ್ತಿಕುಳಿತರು
ಜಾತ್ರೆಗ್ಹೊರಟ ಬಂಡಿಯಲ್ಲಿ
ಸುಬ್ಬು ಹತ್ತಿದ
ಗೆಳೆಯರೆಲ್ಲರನ್ನು ಕಂಡು
ಮನದಿ ಹಿಗ್ಗಿದ
ದಾರಿಯಲ್ಲಿ ಹಾಡುಕುಣಿತ
ಎಲ್ಲ ನಡೆದವು
ಎತ್ತು ಎರಡು ಇದನು ಕೇಳಿ
ದಣಿವ ಮರೆತವು
ಭಾರಿ ಜನರು ಸೇರಿಕೊಂಡು
ತೇರು ಎಳೆದರು
ದೇವ ನಮ್ಮ ಹರಸು ಎಂದು
ಬೇಡಿಕೊಂಡರು
ಸುಬ್ಬು ಜಾತ್ರೆ ಬಯಲನ್ನೆಲ್ಲ
ಸುತ್ತು ಹಾಕಿದ
ಏನು ಕೊಳುವುದೆಂದು ಮನದಿ
ಲೆಕ್ಕಹಾಕಿದ
ಪಕ್ಕನೊಂದು ಹಕ್ಕಿಯನ್ನು
ನೋಡಿಬಿಟ್ಟನು
ಪಂಜರದಿ ಅದನು ಕಂಡು
ಮರುಕ ಪಟ್ಟನು
ಇದ್ದ ಕಾಸು ಕೊಟ್ಟು ಪಕ್ಷಿ
ಕೊಂಡು ಕೊಂಡನು
ಅದರ ಆಸೆ ಏನು ಎಂದು
ತಿಳಿದುಬಿಟ್ಟನು
ಮುದ್ದು ಪಕ್ಷಿಗೇಕೆ ಬಂಧ
ಎಂದುಕೊಂಡನು
ಬಾಗಿಲನ್ನು ತೆಗೆದು ಅದನು
ಹಾರಬಿಟ್ಟನು
ಪಕ್ಷಿ ಹಾರಿ ಮರದ ಮೇಲೆ
ಕುಳಿತು ಕೊಂಡಿತು
ಸುಬ್ಬುವಿಗೆ ಧನ್ಯವಾದ
ಹೇಳಿಬಿಟ್ಟಿತು.
*****