ಖಾದಿ ತೊಡದ ರಾಜಕಾರಣಿಗಳು

ರಾಜಕಾರಣಿಗಳು, ಸಿನಿಮಾದವರನ್ನು ಬಿಟ್ಟರೆ ಪ್ರಚಾರಕ್ಕಾಗಿ ಹೆಚ್ಚು ಹಾತೊರೆವ ಮಂದಿ ಎಂದರೆ ಕಾವಿಧಾರಿಗಳು. ಸದಾ ಸುದ್ದಿ ಮಾಧ್ಯಮಗಳನ್ನೇ ಅವಲಂಬಿಸಿರುವ ನಾನಾ ಜಾತಿ ಜಗದ್ಗುರುಗಳು ಪೈಪೋಟಿಗೆ ಇಳಿದಂತೆ ತೋರುತ್ತದೆ. ಅದರಲ್ಲೂ ಉಡುಪಿಯ ಅಷ್ಟಮಠಗಳಂತೂ ಪ್ರಚಾರ ವ್ಯಾಮೋಹ, ರಾಜಕೀಯ ಪ್ರೇಮದಿಂದಾಗಿ ಅನಿಷ್ಟಮಠಗಳಂತಾಗಿ ಬಿಟ್ಟಿವೆ. ರೈತರ ಆತ್ಮಹತ್ಯೆ, ಕೋಮುಗಲಭೆಗಳ ಸಾವುನೋವು, ದಲಿತರ ಮೇಲಿನ ದೌರ್ಜನ್ಯ, ಶ್ರೀ ಸಾಮಾನ್ಯರ ಸಮಸ್ಯೆಗಳತ್ತ ಎಂದೂ ತಲೆಹಾಕದ ಅಷ್ಟಮಠಗಳ ಸುಪ್ರೀಂ ಪವರ್ ಪೇಜಾವರರಂತೂ ರಾತ್ರಿ ಇಡೀ ಶ್ರೀರಾಮ ಮಂದಿರ ಕಟ್ಟುವ ಕನಸು ಕಾಣುತ್ತಾರೆಂಬ ಗುಮಾನಿ ಇದೆ. ದೇಶ ಕಟ್ಟುವ ಕೆಲಸ ಮಾಡದೆ ರಾಮಮಂದಿರ ಕಟ್ಟುವ ಜಪದಲ್ಲೇ ಆಯಸ್ಸನ್ನೆಲಾ ಕಳೆಯುತ್ತಿರುವ ಕಳೆಗುಂದುತ್ತಿರುವ ಈ ಬಡಕಲು ಮನುಷ್ಯ ನಿಜಕ್ಕೂ ಖಾದಿ ತೊಡದ ರಾಜಕಾರಣಿ.

ಒರಿಜಿನಲ್ ರಾಜಕಾರಣಿ ಉಮಾ ಭಾರತಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಗದ್ದುಗೆ ಏರುವ ಸಮಾರಂಭದಲ್ಲಿ ಆಕೆ ಪಕ್ಕದಲ್ಲಿ ಕೂತು ಆನಂದ ತುಂದಿಲರಾಗುವಷ್ಟು ಚೆಡ್ಡಿ ಪ್ರಿಯರು. ಇದ್ದಕ್ಕಿದ್ದಂತೆ ದೆಹಲಿಗೆ ಓಡಿ ಪುಟ್ಟ ಪುಟ್ಟ ಹೆಜ್ಜೆ ಇಡುವ ಪ್ರಧಾನಿ ಹಿಂದೆ ಹಿಗ್ಗಿನಿಂದ ಹರಿದಾಡುವ ಪೇಜಾವರ ಮಹಾಸಾಮಿಗಳ ರಾಜಕೀಯ ‘ಶೋಕಿ’ ಅವರ್ಣನೀಯ. ಶೂದ್ರನೊಬ್ಬ ಬರೆದ ಗೀತೆ, ನಾಡಗೀತೆಯಾದದ್ದನ್ನು ಸಹಿಸದೆ ಮಧ್ವರ ಹೆಸರು ಬಿಟ್ಟುಹೋಯಿತೆಂದು ಪ್ರಾಣ ಬಿಡುವಂತಾಗಿ ಅತ್ತು ಕರೆದು ಔತಣಕ್ಕೆ ಹೇಳಿಸಿಕೊಂಡಂತೆ ಕಡೆಗೂ ಸರ್ಕಾರ ಮಧ್ವರ ಹೆಸರನ್ನು ತೂರಿಸಿದ ಕೂಡಲೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರ ಮನೆಗೇ ತೂರಿ ಕೃಷ್ಣನ ಪೂಜೆ ಮಾಡಿ ಮುಂದಿನ ಮುಖ್ಯಮಂತ್ರಿ ತಾವೇ ಎಂದು ಗಿಳಿಶಾಸ್ತ್ರ ಹೇಳಿದ ಪೇಜಾವರರ ಇಂತಹ ದೇಶಾವರಿ ದೊಂಬರಾಟಗಳು ಮುಂದಿನ ಚುನಾವಣೆಯಲ್ಲಿ ಅದೆಷ್ಟು ತರಾವರಿ ರೂಪಗಳನ್ನು ತಾಳುತ್ತದೋ ಉಡುಪಿವಲ್ಲಭನೇ ಬಲ್ಲ ! ಈಗಲೂ ಕನಕನನ್ನು ಬಯಲಲ್ಲಿ ಕಬ್ಬಿಣದ ಪಂಜರದಲ್ಲಿರಿಸಿರುವ ಭೂಪರು ಮೊನ್ನೆ ಸಮಾನತೆಯ ಬಗ್ಗೆ ಅಣಿಮುತ್ತುಗಳನ್ನು ಉದುರಿಸುತ್ತ ದಲಿತರಿಗೆ ಮಧ್ವಮತದ ದೀಕ್ಷೆ ನೀಡಲು ರೀಸೆಂಟಾಗಿ ಕಚ್ಚೆಕಟ್ಟಿ ನಿಂತಿದ್ದುಂಟು. ಇದೆಲ್ಲಾ ಢೋಂಗಿಬಿಟ್ಟು ನಮ್ಮಲ್ಲೇ ಡೀಸೆಂಟಾಗಿರುವ ಅರ್ಹ ದಲಿತನೊಬ್ಬನನ್ನು ಆರಿಸಿ ವೇದಾಧ್ಯಯನ ನೀಡಿ ತಮ್ಮ ಪೀಠಾಧಿಪತಿಯನ್ನಾಗಿ ಮಾಡಿದರೆ ಅದು ಸಾಹಸ ಮಿಕ್ಕಿದ್ದೆಲ್ಲಾ ಪ್ರಯಾಸವಷ್ಟೆ.

ಬ್ರಾಹ್ಮಣಯತಿಗಳದೊಂದು ಹಾದಿಯಾದರೆ ವೀರಶೈವ ಗುರುವಿರಕ್ತರುಗಳದ್ದು ಭಿನ್ನಹಾದಿ. ಆಲೋಚನೆಗಳಲ್ಲಿ ಸಣ್ಣತನ ತೋರಿದರೂ ಎತ್ತರದ ಪೀಠಗಳಲ್ಲಿ ವಿರಾಜಿಸುವ ಪಂಚ ಪೀಠಾಧೀಶರು ನೆಪಮಾತ್ರಕ್ಕೆ ಕಾವಿತೊಟ್ಟರೂ ಕನಕಾಭರಣಗಳಿಂದಲಂಕೃತರಾಗಿರುವುದರಿಂದ ಕಾವಿಗಿಂತ, ಕನಕವೇ ಅವರಿಗೇ ಹೆಚ್ಚು ಪ್ರಿಯ ಎಂಬಂತಾಗಿದೆ. ಬಸವಣ್ಣನೆಂದರೇನೇ ಅಲರ್ಜಿ. ಆತನನ್ನು ವಿರಕ್ತ ಮಠದವರು ‘ಗುರು’ ಎಂದರೆ ಇವರುಗಳು ‘ಗುರ್’ ಅನ್ನುತಾರೆ ! ತಮ್ಮ ಗುರುವರ್ಯರುಗಳೆಲ್ಲಾ ದೇವರ ಪಂಚಮುಖಗಳಿಂದ ಉದುರಿದವರೆಂದೇ ನಂಬಿರುವ ಅಥವಾ ಭಕ್ತಾದಿಗಳನ್ನು ವೈಜ್ಞಾನಿಕ ಯುಗದಲ್ಲೂ ನಂಬಿಸಲೆತ್ನಿಸುವ ಇವರುಗಳಾರು ದೇವರನ್ನು ನೋಡಿದವರಲ್ಲ. ಅದಕ್ಕೆಂದೇ ತಾವೇ ದೇವರುಗಳೆಂದು ಭಾವಿಸಿದಂತಿದೆ. ಕಂಟೆಸಾ ಪ್ರವಾಸ ಬೇಸರವಾದಾಗ, ಬಂಗಾರದ ಪಾಲ್ಲಕ್ಕಿಗಳಲ್ಲಿ ಕೂತು ಸವಾರಿ ಹೊರಡುವ ಇವರೆಂದೂ ವಿರಕ್ತಸ್ವಾಮಿಗಳಂತೆ ಐಲಾಗಿ ಅಥವಾ ಗಿಮಿಕ್‌ಗಳಿಗೆ ಇಳಿಯದ ಏನಿಶಿಯೆಂಟ್‌ ಥಿಂಕಿಂಗ್ ಟ್ಯಾಂಕ್ಗಳು. ಧರ್ಮದಲ್ಲಿ ರಾಜಕೀಯ ಬೆರೆಸದೆ ಜಾತಿಮತ ಮೌಢ್ಯಗಳನ್ನು ಧಿಕ್ಕರಿಸದೆ ತಮ್ಮದೇ ಜಾತಿಯಲ್ಲಿನ ಮತ ಪಂಗಡಗಳ ಒಗ್ಗೂಡುವಿಕೆಗೆ ಕಿಂಚಿತ್ತೂ ಕಾರ್ಯಸನ್ನದ್ಧರಾಗದೆ ಕನಸಿನಲ್ಲೂ ದೀನದಲಿತರ ಬಗ್ಗೆ ಆಲೋಚಿಸದೆ ಕೇವಲ ಕನಕ ಸಿಂಹಾಸನದಲ್ಲಿ ಕೂತು ಗೊಡ್ಡು ಪ್ರವಚನಗಳನ್ನು ನೇಯುತ್ತಾ ವೈಚಾರಿಕತೆ ಬಗ್ಗೆ ಜಿದ್ದು ಬೆಳಸಿಕೊಂಡು ಮಾನವೀಯವಾಗಿ ಕೊಂಚವೂ ಬೆಳೆಯದ ಪಂಚಪೀಠಗಳು ಸುಪೀರಿಯಾರಿಟಿ ಕಾಂಪ್ಲೆಕ್ಸ್ನಿಂದ ನರಳುತ್ತಿವೆ.

ಇಂತಹ ಗುರು-ವಿರಕ್ತರನ್ನು ನಂಬಿದ ಭಕ್ತಾದಿಗಳೀಗ ತಾವು ವೀರಶೈವರೋ ಲಿಂಗಾಯಿತರೊ ಎಂದು ತಿಳಿಯದೆ ಜಿಜ್ಞಾಸೆಗೆ ತುತ್ತಾಗಿದ್ದಾರೆ! ವೀರಶೈವ ಧರ್ಮ ಲಿಂಗಾಯಿತ ಧರ್ಮಗಳ ಒಡಕನ್ನು ಒಂದುಗೂಡಿಸಲು ಶ್ರಮಿಸಬೇಕಾದ ಸ್ವಾಮಿಗಳೊಬ್ಬರು ಜಾತಿಗೊಬ್ಬ ಸ್ವಾಮಿಯನ್ನು ಸೃಷ್ಟಿಮಾಡುತ್ತಿದ್ದು ಅವರೆಲ್ಲಾ ತಮ್ಮ ಕಬ್ಜಾದಲ್ಲಿಯೇ ಇರಲೆಂಬಂತೆ ‘ಬಸವ’ ಮುದ್ರೆಯನ್ನು ಪ್ರತಿ ಜಾತಿಯ ಸ್ವಾಮಿಯ ನಾಮಾಂಕಿತದ ಹಿಂದೆ ಒತ್ತುತ್ತಿದ್ದಾರೆ. ಅಲ್ಲದೆ ಪ್ರತಿಯೊಬ್ಬ ಸ್ವಾಮಿಯನ್ನು ಆತನ ಜಾತಿಯಿಂದಲೇ ಗುರುತಿಸುವ ಅನಿಷ್ಠಪದ್ಧತಿ ಜಾರಿಗೆ ತರುತ್ತಿದ್ದಾರೆ. ಬಸವಣ್ಣನವರ ಕಾಲದಲ್ಲಿ ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಮೇದಾರ ಕೇತಯ್ಯ, ಮಡಿವಾಳ ಮಾಚಯ್ಯ ಇತ್ಯಾದಿ ಶರಣರನ್ನು ಅವರ ಕಾಯಕದಿಂದಲೇ ಗುರುತಿಸಿ ಗೌರವಿಸುವ ಪರಿಶುದ್ಧ ಪದ್ಧತಿಯನ್ನು ತಿರುಚಿದ ಹಿನ್ನಲೆಯ ಔಚಿತ್ಯ ಪ್ರಶ್ನಾಹಣಿ ಇದು. ಯಾವ ಸೀಮೆಯ ಬಸವತತ್ವದ ಪರಿಪಾಲನೆಯೋ, ಶಿವಮೂರ್ತಿ ಶರಣರೇ ಹೇಳಬೇಕು. ೨೫ ವರ್ಷಗಳ ಹಿಂದೆಯೇ ತಾವು ಪಟ್ಟಕ್ಕೆ ಬಂದಿದ್ದರೆ ಆದಿ ಚುಂಚನಗಿರಿ ಮಠ ಮತ್ತು ಕನಕಪೀಠ ‘ಲಿಂಗಾಯಿತ ಪರಂಪರೆಯ ಕಕ್ಷೆ’ ಯಲ್ಲಿರುತ್ತಿದ್ದವೆಂದು (ದಿನಾಂಕ ೦೮-೦೨-೨೦೦೪ ರ ವಿಜಯ ಕರ್ನಾಟಕ) ಬಾಯಿ ನೀರು ಸುರಿಸಿರುವ ಚಿತ್ರದುರ್ಗ ಬೃಹನ್ಮಠದ ಶರಣರ ಆಸೆಗೂ ಒಂದು ಮಿತಿ ಇರಬೇಕಲ್ಲವೆ ? ಜಾತಿಗೊಬ್ಬ ಸ್ವಾಮಿ ಮಾಡಿ ಬೋರ್ ಹೊಡೆಯಹತ್ತಿದ ಶರಣರು ಇನ್ನುಮುಂದೆ ದಲಿತರ ಮಠಕ್ಕೆ ಸವರ್ಣಿಯಸ್ವಾಮಿ, ಸವರ್ಣಿಯ ಮಠಕ್ಕೆ ದಲಿತ ಸ್ವಾಮಿಗಳನ್ನು ಮಠಾಧಿಪತಿಗಳನಾಗಿ ನೇಮಿಸುವ ಹೊಸ ಆಟ ಕಟ್ಟುವರಂತೆ. ಇಷ್ಟೆಲ್ಲಾ ದ್ರಾವಿಡ ಪ್ರಾಣಾಯಾಮ ಮಾಡುವ ಬದಲು ಒಬ್ಬ ಅರ್ಹ ವಿದ್ಯಾವಂತ ದಲಿತನನ್ನು ಆರಿಸಿ ದೀಕ್ಷೆ ನೀಡಿ ಉತ್ತರಾಧಿಕಾರಿಯನಾಗಿ ಈಗಿನಿಂದಲೇ ಬೆಳಸಿ ತಮ್ಮ ಬೃಹನ್ಮಠದ ಮುಂದಿನ ಮಠಾಧಿಪತಿಯನಾಗಿ ನೇಮಿಸಿಕೊಂಡರೆ ಮಾತ್ರ ಅವರೀಗ ಕೈಗೊಳ್ಳುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೆ ಒಂದು ಸ್ಪಷ್ಟತೆ ದೊರೆಯುತ್ತದೆ. ಅರ್ಥಪೂರ್ಣವೆನಿಸುತ್ತದೆ. ಇಲ್ಲವಾದರೆ ಈವರೆಗಿನ ಶ್ರಮ ಕೇವಲ ಪ್ರಚಾರದ ಅಲೆಯಲ್ಲಿ ಕೊಚ್ಚಿಹೋದೀತೆಂಬುದನ್ನು ಆದಷ್ಟು ಬೇಗ ಮನಗಾಣಬೇಕಿದೆ. ಜಾತಿಯನ್ನೇ ಬಿಟ್ಟ ಬಸವಣ್ಣನೆಲ್ಲಿ ಜಾತಿಯಾಧಾರಿತ ಮಠಕಟ್ಟಿಕೊಂಡ ಸ್ವಾಮಿಗಳೆಲ್ಲಿ ? ಶ್ರೀ ಶಿವಮೂರ್ತಿ ಶರಣರ ಬಗ್ಗೆ ಯಾರೇ ಅವಹೇಳನಕಾರಿ ಮಾತುಗಳನಾಡಿದರೆ ಹೇಳಿಕೆಕೊಟ್ಟರೆ ಅಂಥವರು ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆಂದು ದಾವಣಗೆರೆಯಲ್ಲಿನ ಮಠದ ಸ್ವಾಮಿ ಪತ್ರಿಕಾ ……….. ನಿದರ್ಶನವಲ್ಲವೆ ? ಇಂತಹ ಮಾತು ಬಸವಧರ್ಮಿಯರಾದವರಿಗೆ ಶೋಭೆತರುವಂತದ್ದಲ್ಲ.

ಸಿಕ್ಕವರನ್ನೆಲಾ ಹಿಡಿದುತಂದು ಸ್ವಾಮಿಗಳನ್ನಾಗಿ ನೇಮಿಸಿಕೊಂಡರೆ ಆಗುವ ಅನಾಹುತಗಳಿಗೆ ಉದಾಹರಣೆಯಾಗಿ ಬಂಜಾರದ ಸೇವಾಲಾಲ್ ಸಂಗನ ಬಸವಸ್ವಾಮಿ ಹಣ ದುರುಪಯೋಗದ ಕೇಸ್ ನಲ್ಲಿ ಜೈಲು ಸೇರಿರುವುದೇ ಸಾಕ್ಷಿ . ಈತ ಮುರುಘಾ ಮಠದ ಪ್ರಾಡಕ್ಟ್ ಎಂಬುದನ್ನಿಲ್ಲಿ ಸ್ಮರಿಸಬಹುದು.

ದಾನ, ಧರ್ಮ, ನಿಷ್ಠೆಗಳಿಗೆ ಹಸರಾದ ಸಿದ್ಧಗಂಗಾ ಮಠಕ್ಕೆ ಆರಿಸಿದ್ದ ಕಿರಿಯ ಸ್ವಾಮಿ ಗೌರಿಶಂಕರ ಸಲಿಂಗಕಾಮದ ಕೇಸ್ನಲ್ಲಿ ದಂಡನೆ ತುತ್ತಾಗಿ ತಲೆಮರೆಸಿಕೊಂಡಿದ್ದಾನೆ. ಬಳ್ಳಾರಿ ಜಿಲ್ಲೆಯಲ್ಲಿನ ಸ್ವಾಮೀಜಿಯೊಬ್ಬ ಮಠದ ಅಡವು, ಆಸ್ತಿ ಮಾಡಿಕೊಂಡು ಪರಾರಿಯಾಗಿದ್ದಾನೆ ! ಬಯಲಿಗೆ ಬಾರದೆ ಮಠದಲ್ಲೇ ಕೊಳೆತು ನಾರುತ್ತಿರುವ ಇನ್ನೆಷ್ಟು ಇಂಥ ಜೈಲು ಗಿರಾಕಿಗಳು ಯಾವ ಯಾವ ಮಠದಲ್ಲಿ ಅಡಗಿರುವರೋ ಬಸವೇಶ್ವರನೇ ಬಲ್ಲ.

ಧರ್ಮದಲ್ಲಿ ರಾಜಕಾರಣ ಬೆರೆಸಬಾರದೆಂಬುದು ಕೇವಲ ಪ್ರಾಚಾರದಲ್ಲಿದೆ. ಸಿರಿಗೆರೆ ಬೃಹನ್ಮಠದ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಂತೂ ನೇರವಾಗಿಯೇ ಅಭ್ಯರ್ಥಿಗಳನ್ನು ಆರಿಸಿ ಪ್ರಚಾರಕ್ಕಿಳಿದ ಅಭ್ಯರ್ಥಿಗಳನ್ನು ಗೆಲ್ಲಿಸುವಷ್ಟು ಪ್ರಭಾವಶಾಲಿ, ನಾಡಿನ ಜಗದ್ಗುರುಗಳಿಗೆಲ್ಲಾ ಫಾರಿನ್ ಹುಚ್ಚು ಹಿಡಿಸಿದ ಸದರಿ ಸ್ವಾಮಿಗಳು ಹೈಟೆಕ್ ಜಗದ್ಗುರುಗಳೆಂದೇ ಪ್ರಸಿದ್ಧ. ಇದೀಗ ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠವೂ ಅಪರೋಕ್ಷವಾಗಿ ರಾಜಕೀಯದ ಕೊಚ್ಚೆಯಲ್ಲಿ ಕಾಲಿರಿಸಿದ್ದು , ಮುಂದಿನ ದಿನಗಳ ಆಗುಹೋಗುಗಳನ್ನು ರಜತ ಪರದೆಯ ಮೇಲೆ ನೋಡಬೇಕಿದೆ.

ಪ್ರಬಲ ಕೋಮುಗಳಾದ ವೈದಿಕ, ವೀರಶೈವರ ಮಠಪತಿಗಳ ಹಾವಳಿ, ಪ್ರಭಾವಳಿ, ನಡುವೆಯೂ ಉಳಿದು ಬೆಳೆದಿರುವ ಶೂದ್ರರ ಆಗಿನ ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರ ಮಹಾಸ್ವಾಮಿಗಳ ಸಾಧನೆಯ ಬಗ್ಗೆ ಎರಡು ಮಾತಿಲ್ಲ . ಆದರೆ ತಾವು ಬೆಳೆದಂತೆಲಾ ಬಡಬಗ್ಗರನ್ನು ದೂರವಿಟ್ಟು ಬಡವರ ಭೂಮಿಯನ್ನೇ ಕಬಳಿಸಿ ಅಲ್ಲಿ ಆಸ್ಪತ್ರೆಗಳನ್ನು ಕಟ್ಟುತ್ತಾ ನೆಟ್ಟಗೆ ಪರಿಹಾರ ನೀಡದೆ ತನ್ನ ಜನಾಂಗದ ಬಡವಿದ್ಯಾರ್ಥಿಗಳ ಬಗ್ಗೆ ಕನಿಕರಿಸದೆ ಸಿರಿವಂತ ಭಕ್ತರ ರಾಜಕಾರಣಿಗಳ ಕೈಗೊಂಬೆಯಂತಾದದ್ದು, ಬಾಲಗಂಗಾಧರರ ದುರಂತ ಅಥವಾ ಶೂದ್ರ ಒಕ್ಕಲಿಗರ ಖೊಟ್ಟಿ ಹಣೆಬರಹವೆನ್ನೋಣವೆ? ಜನಾಂಗ, ತಾವೊಬ್ಬರೇ ಜಗದ್ಗುರುಗಳಾಗಬೇಕೆಂದು ಪಣತೊಟ್ಟವರಂತೆ ಕಾಣುವ ಸ್ವಾಮಿಗಳು ಮತ್ತೊಂದು ಮಠದ ಬೆಳವಣಿಗೆಯನ್ನು ಸಹಿಸದಷ್ಟು ಸಿನಿಕರು. ಹಾಗಾದರೆ ಬೇರೆ ಜನಾಂಗಗಳಲ್ಲಿ ಒಬ್ಬರಿಗಿಂತ ಹೆಚ್ಚು ಸ್ವಾಮಿಗಳಿಲ್ಲವೆ, ಇರಬಾರದೆ ? ಸಿರಿಗೆರೆಯ ಸ್ವಾಮಿಗಳಂತೆ ಚುಂಚನಗಿರಿ ಸ್ವಾಮಿಗಳಿಗೂ ವಿಚಿತ್ರ ರಾಜಕೀಯ ಸೆಳೆತ, ಆದರೆ ಸಿರಿಗೆರೆ ಶ್ರೀಗಳಿಗಿರುವ ಯಾವುದೇ ಬದ್ದತೆಗಳಿದ್ದಂತಿಲ್ಲ. ಕಾಂಗ್ರೆಸ್ನವರ ಸೌಖ್ಯದಲ್ಲಿದ್ದುಕೊಂಡೇ ಕೋಮುವಾದಿ ಬಿಜೆಪಿಗಳೊಂದಿಗೆ ಸರಸವಾಡಬಲ್ಲ ‘ಡಬ್ಬಲ್ ಗೇಮ್ ಗೆಟಪ್’ ಇವರಿಗಿದೆ. ‘ಮುಸ್ಲಿಮರಿಗೆ ಕ್ರಿಶ್ಚಿಯನ್ನರಿಗಾಗಿ ಬೇರೆ ದೇಶಗಳಿವೆ. ಹಿಂದೂಗಳಿಗೆ ಹಿಂದೂ ದೇಶ ಬಿಟ್ಟರೆ ಮತ್ತೆಲ್ಲಿ ತಾವಿದೆ ?’ ಎಂದು ಬಾಲಿಶ ಚಿಂತನೆಗಳನ್ನು ಪೂತ್ಕರಿಸುತ್ತ ಕೇಂದ್ರ ಸರ್ಕಾರದ ಚೆಡ್ಡಿಗಳನ್ನು ಓಲೈಸುತ್ತಾ ಮಠವನ್ನು ……………… ಸಿಕೊಳ್ಳುತ್ತಿರುವ ಬಾಲಗಂಗಾಧರರಲ್ಲಿ ಹೃದಯ ಶ್ರೀಮಂತಿಕೆ ಎಲ್ಲಿದೆ ಎಂದೀಗ ಹುಡುಕಬೇಕಿದೆ.

ಇಷ್ಟೆಲಾ ಸರ್ಕಸ್ಗಳನ್ನು ಮಾಡುವುದಕ್ಕಿಂತ ರಾಜಕೀಯ ಅಭಿರುಚಿ ಇರುವ ಎಲಾ ಮಹಾಸ್ವಾಮಿಗಳು ಮುಂಬರುವ ಚುನಾವಣೆಯ ಕಣಕ್ಕಿಳಿದು ತಮ್ಮ ವರ್ಚಸನ್ನೇಕೆ ಒರೆಗೆ ಹಚ್ಚಬಾರದು ? ಕಾವಿಗಳು, ಖಾದಿಗಳ ಸ್ಥಾನಗಳನ್ನು ಏರುವುದರಿಂದ ದೇಶದ ಪ್ರಗತಿ ಆಗುವುದಾದರೆ ದಾರಿದ್ರ್ಯ ತೊಲಗುವುದಾದರೆ ಕೋಮು ಸಾಮರಸ್ಯ ಉಂಟಾಗುವುದಾದರೆ ಇಂತಹ ಒಂದು ಪ್ರಯೋಗವೂ ಆಗಿಬಿಡಲತ್ತ. ಅಬ್ಬಬ್ಬ ಎಂದರೆ ಏನಾದೀತು ! ಐದು ವರ್ಷಕ್ಕೊಮ್ಮೆ ರಾಜಕಾರಣಿಗಳಿಂದ ನಮಸ್ಕಾರಗಿಟ್ಟಿಸುವ ಶ್ರೀ ಸಾಮಾನ್ಯ ಮಠಾಧಿಪತಿಗಳಿಗೆ ತಾನೇ ದೀರ್ಘದಂಡ ನಮಸ್ಕಾರ ಹಾಕಿ ಮತವನ್ನು ಹಾಕಿಯಾನಲ್ಲವೆ. ನಮ್ಮಲ್ಲಿರುವ ಬಹಳಷ್ಟು ಖಾದಿ ತೊಡದ ಕಾವಿರಾಜಕಾರಣಿಗಳಿಗೂ ಒಂದು ಸದಾವಕಾಶವಾದೀತಲ್ಲವೆ. ಈ ದಿಸೆಯಲ್ಲಿ ದೇಶದ ಹಿತದೃಷ್ಟಿಯಿಂದ , ಮಹಾ ಮಹಾ ಸ್ವಾಮಿಗಳು ಮತ್ತು ಅವರ ಅಭಿಮಾನಿ ಭಕ್ತವೃಂದ ಆಲೋಚಿಸಲಿ ಎಂಬ ಮಾತಿನಲ್ಲಿ ವ್ಯಂಗ್ಯವನ್ನರಸದಿರಲಿ ಎಂಬುದೂ ವ್ಯಂಗ್ಯವಾಗದಿರಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೋಸ್ತಿ
Next post ಏನೋ ಬೇಡ್ತಾದ ಜೀವಾ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys