ಉಣ್ಣಾಕ್ಕೆತೆ ಉಡಾಕೈತೆ ತಿನ್ನಾಕೈತೆ ತೊಡಕೈತೆ
ಏನೋ ಬೇಡ್ತಾದ ಜೀವಾ ಸಾಲ್ದು ಅಂತಾದ ಜೀವಾ ||

ನೋಡಾಕೈತೆ ಕೂಡಾಕೈತೆ ಮುಟ್ಟಾಕೈತೆ ಮೂಸಾಕೈತೆ
ದುಡಿಯಾಕೈತೆ ಪಡೆಯಾಕೈತೆ ಇಡಾಕೈತೆ ಕೊಡಾಕೈತೆ
ಗಟ್ಟಿ ಮುಟ್ಟಾ ಗೂಳ್ಯಂಗೈತೆ ಸ್ವತಂತ್ರೈತೆ ಗಾಳ್ಯಂಗೈತೆ
ನಕ್ಕೂ ನಕ್ಕೂ ಅರಳತೈತೆ ಅತ್ತು ಅತ್ತು ಮಂಚಗೊಂತೈತೆ || ಏನೋ ||

ಓದಾಕೈತೆ ತಿಳಕೊಂದೈತೆ ವಾದಕ್ಕೈತೆ ಬೋಧಕೈತೆ
ಬಂಧು ಬಳ ಎಲ್ಲಾ ಐತೆ ಒಳ್ಳೆಕೆಟ್ಟ ಗೆಳೆತಾನೈತೆ
ಚೆಂದ ಚೆಲ್ಲಿ ಹರವ್ಯಾಡೈತೆ ಅಂದದ ಗಾನಾ ಹರದಾಡೈತೆ |
ಆಡಾಕ್ ನೂರಾರಾಟಾ ಐತೆ ಓಡಾಕ ಬಟ್ಟಂಬಯಲೇ ಐತೆ ||  ಏನೋ ||

ಇಳಿಯಾಕ್ ಸಾಗರದಾಳಾ ಐತೆ ಏರಾಕಾಕಾಶ್ ತೆರೆದೇ ಐತೆ
ಓಕುಳಿಯಾಡೋ ಬಣ್ಣಾ ಐತೆ ಬಣ್ಣಾ ಬಣ್ಣದ ಬಟ್ಟೆ ಐತೆ
ಕಣ್ಣು ಮಿಟುಕಿ ಕರಿತೈತೆ ಹೂವು ಬಣ್ಣಾ ಉಕ್ಕಿ ಕರಿತೈತೆ ಹಣ್ಣು
ತುಂಬಿದ ಮೈಯಿ ತುಳಿಕ್ಕಾಡೈತೆ ಎಳ್ಡೂ ಸೇರಿ ಟಳಕಾಡೈತೆ || ಏನೋ ||

ಮ್ಯಾಲೆ ಕುಂದ್ರೋ ಗದ್ಗೀ ಐತೆ ಆಳೋ ಗೀಳೋ ದಂಡ ಐತೆ
ಸೇವಾ ಮಾಡೋ ಕೈಕಾಲೈತೆ ಬೇಡಿದ್ದೆಲ್ಲಾ ಬಗಲಾಗೈತೆ
ಲೆಕ್ಕಾ ಇಲ್ದಂಗೆ ಚಿಕ್ಕೀ ಐತೆ ಚಂದ್ರಾ ಸೂರ್ಯ ಕಣ್ಣಿಡತೈತೆ
ಎಲ್ಲಕ್ಹಾಸ್ಗಿ ಭೂಮಿ ಐತೆ ನಂದೂ ಅಂಬೋ ಸೀಮಿ ಐತೆ

ಸತ್ರೂ ಕೂಡಾ ಏನೋ ಐತೆ ಮತ್ತೆ ಮತ್ತೆ ಜನುಮ ಐತೆ
ಬೇಕಾದಷ್ಟು ದೇವ್ರು ಐತೆ ನಡೆಯಾಕೆಷ್ಟೊ ಧರ್ಮಾ ಐತೆ || ಏನೋ ||
*****