ವಿಶ್ವಕೋಶಗಳ ರಾಣಿ ಎನ್‌ಸೈಕ್ಲೋಪೇಡಿಯಾಬ್ರಿಟಾನಿಕಾ

ವಿಶ್ವಕೋಶಗಳ ರಾಣಿ ಎನ್‌ಸೈಕ್ಲೋಪೇಡಿಯಾಬ್ರಿಟಾನಿಕಾ

೧೯೯೨ರಲ್ಲಿ ವೈಕಿಂಗ್ ಪೆಂಗ್ವಿನ್ ಪಕಾಶನ The Treasury of the Encyclopedia Britanica (ಬ್ರಿಟಾನಿಕಾ ವಿಶ್ವಕೋಶ ನಿಧಿ) ಎಂಬ ಗ್ರಂಥವೊಂದನ್ನು ಕ್ಲಿಫ್ಟನ್ ಫದಿಮನ್ ಸಂಪಾದಕತ್ವದಲ್ಲಿ ಪ್ರಕಟಿಸಿತು. ಸಾಮಾನ್ಯವಾಗಿ ಶಾಲೆ ಕಾಲೇಜಿಗೆ ಹೋದ ಯಾರೂ ಈ ಬ್ರಿಟಾನಿಕಾ ವಿಶ್ವಕೋಶದ ಬಗ್ಗೆ ಕೇಳಿಯೇ ಕೇಳಿರುತ್ತಾರೆ. ಇದು ಇಂಗ್ಲಿಷ್ ಭಾಷೆಯಲ್ಲಿದ್ದರೂ ಇದರ ಪ್ರಭಾವ ಭಾಷೆಯನ್ನು ಮೀರಿ ಇಡೀ ಜ್ಞಾನಲೋಕವನ್ನು ವ್ಯಾಪಿಸಿರುವಂಥದು. ೧೭೬೮ರಲ್ಲಿ ಎಡಿನ್ಬರೋದ (ಸ್ಕಾಟ್ಲೆಂಡ್) ಇಬ್ಬರು ಮಹನೀಯರು-ಕೆತ್ತನೆ ಚಿತ್ರ ಕಲಾವಿದನಾದ ಆಂಡ್ರ್ಯೂ ಬೆಲ್ ಮತ್ತು ಮುದ್ರಕನಾಗಿದ್ದ ಕೋಲಿನ್ ಮೆಕ್‌ಫಾರ್ಕರ್ – ಒಂದು ಲಹರಿಯಲ್ಲಿ ಸುರುಮಾಡಿದ ಯೋಜನೆ ಈ ಎನ್‌ಸೈಕ್ಲೋಪೇಡಿಯಾಬ್ರಿಟಾನಿಕಾ. ಇವರ ಊರವನೇ ಆದ ವಿಲಿಯಮ್ ಸ್ಮೆಲ್ಲಿ ಎಂಬ ಸ೦ಪಾದಕನನ್ನು ಇದರ ಕೆಲಸಕ್ಕೆ ನೇಮಿಸಿಕೊಂಡರು. ನಿಯತಕಾಲಿಕವಾಗಿ ಪತ್ರಿಕಾರೂಪದಲ್ಲಿ ಪುರವಣಿಗಳನ್ನು ತಂದು ನಂತರ ಇವನ್ನು ಒಟ್ಟಿಗೆ ಸೇರಿಸಿ ಪುಸ್ತಕ ಮಾಡುವುದು ಇವರ ಯೋಜನೆಯಾಗಿತ್ತು. ಅದಕ್ಕಾಗಿ ಅವರು ಊರವರಿಂದ ಚಂದಾ ಎತ್ತಿ ಯೋಜನೆ ಸುರುಮಾಡಿದರು. ಆರಂಭದಲ್ಲಿ ಈ ವಿಶ್ವಕೋಶ ಒಂದು ಉನ್ನತ ರೀತಿಯ ನಿಘಂಟುವಿನಂತೆ ಕಲ್ಪಿತವಾದದ್ದು, ಆದ್ದರಿಂದ ದೊಡ್ಡ ಲೇಖನಗಳ ಜತೆ ಜತೆಗೇ ಶಬ್ದಾರ್ಥ ಮಟ್ಟದ ಸಣ್ಣ ದಾಖಲೆಗಳಿಗೂ ಇದರಲ್ಲಿ ಎಡೆಯಿತ್ತು; ಆದರೆ ಜೀವನ ಚರಿತ್ರೆಯನ್ನು ಒಳಗೊಳ್ಳಲಿಲ್ಲ, ಅದು ಜ್ಞಾನಕೋಶಕ್ಕೆ ಸೇರುವಷ್ಟು ಘನವಾದುದಲ್ಲ ಎಂಬ ಕಾರಣಕ್ಕೆ! ಈ ಎರಡೂ ಕೊರತೆಗಳನ್ನು ಮುಂದೆ ಸರಿಪಡಿಸಿಕೊಂಡೇ ಬ್ರಿಟಾನಿಕಾ ಬೆಳೆದುದು. ಮಾತ್ರವಲ್ಲ, ಸ್ಮೆಲ್ಲಿಯ ಕಾಲದಲ್ಲಿ ಆಗಲೇ ಪ್ರಕಟವಾದ ಬರಹಗಳನ್ನಷ್ಟೇ ಕೋಶಕ್ಕೆ ಅಳವಡಿಸಿಕೊಳ್ಳುವುದು ಸಾಧ್ಯವಾದುದು. ನಂತರ ಆಯಾವಿಷಯದಲ್ಲಿ ಪರಿಣತರಾದ ವಿದ್ವಾಂಸರಿಂದ ಲೇಖನಗಳನ್ನು ಆಹ್ವಾನಿಸಿ ಸೇರಿಸಿಕೊಳ್ಳುವ ಕ್ರಮವನ್ನು ರೂಢಿಸಿಕೊಳ್ಳಲಾಯಿತು.

ಆರಂಭದ ೧೭೬೮-೭೧ರ ಮೂರು ಆವೃತ್ತಿಗಳು ಮೂರು ಸಂಪುಟಗಳಷ್ಟಿದ್ದರೆ, ೧೯೭೪ರ (ಎಂದರೆ ಎರಡು ಶತಮಾನಗಳ ನಂತರದ) ಹದಿನೈದನೆಯ ಆವೃತ್ತಿ ೩೨ ಸಂಪುಟಗಳು! ಇದರಲ್ಲಿ ೩೨,೦೦೦ ಪುಟಗಳು; ೪೪ ಮಿಲಿಯನ್ ಶಬ್ದಗಳು; ೧೯,೦೦೦ ಚಿತ್ರಗಳು. ೧೯೭೪ರ ಆವೃತ್ತಿಗೆ ತಗಲಿದ ಖರ್ಚು (ಮುದ್ರಣದ ಹೊರತಾಗಿ) ೩೨ ಮಿಲಿಯ ಡಾಲರುಗಳು; ೧೯೮೫ರ ಸುಧಾರಿತ ಆವೃತ್ತಿಗೆ ೨೪ ಮಿಲಿಯ ಡಾಲರುಗಳು. ಬ್ರಿಟಾನಿಕಾ ಎಂದೂ ಒಂದು ಲಾಭದಾಯಕ ಉದ್ಯಮವಾಗಿರಲಿಲ್ಲ. ಈಗ ಅದು ಅಮೇರಿಕದ ಕಂಪೆನಿಯೊಂದರ ಸಹಯೋಗತ್ವದಲ್ಲಿ ಪ್ರಕಟವಾಗುತ್ತಿದೆ. ೧೯೪೩ರಿಂದ ಬ್ರಿಟಾನಿಕಾ ಅಮೇರಿಕದ ಯುನಿವರ್ಸಿಟಿ ಆಫ್ ಚಿಕಾಗೋ ಜತೆ ಕೈಜೋಡಿಸಿದ್ದನ್ನೂ ಇಲ್ಲಿ ನೆನೆಯಬಹುದು. ನಂತರದ ಆವೃತ್ತಿಗಳೆಲ್ಲವೂ ಈ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಬಂದಂಥವು. ಆದರೂ ಬ್ರಿಟಾನಿಕಾದ ಮೂಲ ಬ್ರಿಟಿಷ್ ಗುಣವನ್ನು ಹಾಗೆಯೇ ಕಾಪಾಡಿಕೊಂಡಿರುವುದು ಒಂದು ಗೌರವದ ಸ೦ಗತಿ. ಯಾಕೆಂದರೆ ಬ್ರಿಟನಿನ ಆಕ್ಸ್‌ಫರ್ಡ್, ಕೇಂಬ್ರಿಜ್, ಎಡಿನ್ಬರೋ ವಿಶ್ವವಿದ್ಯಾಲಯಗಳಂತೆ ಎನ್‌ಸೈಕೆತ್ಲೀಪೇಡಿಯಾಬ್ರಿಟಾನಿಕಾ ಕೂಡಾ ಕಳೆದ ಎರಡು ಶತಮಾನಗಳಿಂದ ಬೆಳೆದುಬಂದಿರುವುದು ಒಂದು ವಿದ್ಯಾಸಂಸ್ಥೆಯ ಹಾಗಲ್ಲದೆ ಕೇವಲ ಮಾರಾಟ ಪುಸ್ತಕವಾಗಿ ಅಲ್ಲ.

ಈ ಎರಡೂಕಾಲು ಶತಮಾನಗಳ ನಿರಂತರ ಚಟುವಟಿಕೆಗಳನ್ನು ಕೊಂಡಾಡುವುದಕ್ಕೆಂದೇ ‘ಬ್ರಿಟಾನಿಕಾ ವಿಶ್ವಕೋಶ ನಿಧಿ’ ಎಂಬ ಪುರವಣಿಯನ್ನು ಪ್ರಕಟಿಸಿದ್ದು. ಇದರ ಆರಂಭದಲ್ಲಿ ಲೈಬ್ರರಿ ಆಫ್ ಕಾಂಗ್ರೆಸ್‌ನ ಡೇನಿಯಲ್ ಬೂರ್ಸಿನ್ ಹೇಳುವ ಈ ಮಾತುಗಳು ಇವು: ‘ಪ್ರತಿಯೊಂದು ಗ್ರಂಥಾಲಯವೂ ಹಳೆ ಮಾಹಿತಿಯ ಸಂಗ್ರಹವಾಗಿರುತ್ತದೆ; ಜ್ಞಾನವೆಂದು ಸದ್ಯ ಪರಿಗಣಿಸಲ್ಪಡದ್ದನ್ನೇ ಅದು ಹೆಚ್ಚಾಗಿ ನೀಡಿ, ಬೇಕಾದ್ದನ್ನು ಆರಿಸಿಕೊಳ್ಳಲು ನಮ್ಮನ್ನು ಬಿಟ್ಟುಬಿಡುತ್ತದೆ. ಆದರೆ ಶ್ರೇಷ್ಠವಾದ ವಿಶ್ವಕೋಶವೊಂದು ಅದಕ್ಕಿಂತಲೂ ಹೆಚ್ಚಿನದನ್ನು ಮಾಡಬೇಕು. ನಮ್ಮ ಕಾಲದ ಜ್ಞಾನದ ಸ್ಥಿತಿಯನ್ನು ನಮಗೆ ಕಾಣಿಸುವುದರಲ್ಲಿ ಅದು ನಮಗೆ ಸಹಾಯ ಮಾಡಬೇಕು, ಅಜ್ಞಾನದಿಂದಲೂ, ಐತಿಹ್ಯದಿಂದಲೂ, ಮೂಢನ೦ಬಿಕೆಗಳಿಂದಲೂ ಅರಿವನ್ನು ಹೆಕ್ಕಿ ತೆಗೆದು. ಸಮಕಾಲೀನ ಎನ್‌ಸೈಕ್ಲೋಪೇಡಿಯಾಬ್ರಿಟಾನಿಕಾ ಹೊಂದಿದವನೊಬ್ಬ ಯಾವುದೇ ಪ್ರಶ್ನೆಗೆ ಅಧಿಕೃತ ಮತ್ತು ಆಧುನಿಕ ಉತ್ತರಕ್ಕಾಗಿ ಅದರತ್ತ ಹೊರಳಿದಾಗ, ಆತನಿಗೆ ಗೊತ್ತಿರುವುದಿಲ್ಲ ತಾನೊಂದು ಸಂಶೋಧನೆಯ ಮಹಾ ಮನುಷ್ಯ ಸಾಹಸದಲ್ಲಿ ಭಾಗವಹಿಸುತ್ತಿದ್ದೇನೆಂದು. ಜ್ಞಾನದ ಹುಡುಕಾಟ ನಿರಂತರವಾಗಿ ಮುಂದುವರಿದಿದೆ- ಹಲವೊಮ್ಮೆ ಆಘಾತಕರ ಪರಿಣಾಮಗಳೊಂದಿಗೆ – ಈವ್ ಸೇಬು ಹಣ್ಣನ್ನು ತಿನ್ನಲು ಆದಮಿಗೆ ಒತ್ತಾಯಿಸಿದ ಲಾಗಾಯ್ತಿನಿಂದಲೂ. ಬ್ರಿಟಾನಿಕಾ ಇಂಗ್ಲಿಷ್ ಮಾತಾಡುವ ದೇಶಗಳಲ್ಲೂ ಇತರೆಡೆಗಳಲ್ಲೂ ಎರದು ಶತಮಾನಗಳಿಂದ ಈ ಹುಡುಕಾಟದ ನೇತೃತ್ವ ವಹಿಸಿದೆ.’

ಈ ಸಂಗಹಕ್ಕೆ ಅವತರಣಿಕೆ ಬರೆದ ಸಂಪಾದಕ ಕ್ಲಿಫ್ಟನ್ ಫದಿಮನ್ ಬ್ರಿಟಾನಿಕಾದ ಬಗ್ಗೆ ಹೇಳುತ್ತ, ಇದರ ಯಾವ ಸಂಪುಟದ ಯಾವುದೇ ಪುಟ ತೆರೆದು ಓದಿದರೂ ಓದುಗರಿಗೆ ಉಪಯೋಗವಾಗುತ್ತದೆ ಎಂದು. ವಾಸ್ತವದಲ್ಲಿ ಇದನ್ನು ಸುರುಮಾಡಿದ ಸ್ಕಾಟಿಶ್ ಆಯೋಜಕರದ್ದೂ ಇಂಥ ಉಪಯೋಗವೇ ಮುಖ್ಯ ಉದ್ದೇಶವಾಗಿತ್ತು. ಸಂತ ಆಗಸ್ಟಿನ್ ಮಿಲಾನಿನ ತನ್ನ ಕೈದೋಟದಲ್ಲಿ ಸುಮ್ಮನೆ ಅಡ್ಡಾಡುತ್ತಿರುವಾಗ ಎಲ್ಲೋ ಒಂದು ಮಗು tolle, lege ‘ತೆಗೆದು ಓದು’ ಎನ್ನುವುದು ಕೇಳಿಸುತ್ತದೆ; ಕೂಡಲೇ ಅವನು ಮನೆಗೆ ಹೋಗಿ ಬೈಬಲಿನ ಹೊಸ ಒಡಂಬಡಿಕೆಯ ಪುಟವೊಂದನ್ನು ಯಾದೃಚ್ಛವಾಗಿ ತೆಗೆದು ನೋಡುತ್ತಾನೆ; ಆಗಸ್ಸೀನ್‌ನ ಮುಂದಿನ ಜೀವನದ ಗತಿ ಅಲ್ಲಿಂದ ಹೀಗೆ ಆಕಸ್ಮಿಕವೆಂಬಂತೆ ಆರಂಭವಾಗುತ್ತದೆ. ಇದೇ ರೀತಿ ಬ್ರಿಟಾನಿಕಾದ ಪುಟ ತೆರೆಯುವುದೆಂದರೆ ಓದುಗ ತನ್ನನ್ನು ತಾನು ತೆರೆದುಕೊಂಡಂತೆ. ಫದಿಮನ್ ತನ್ನದೇ ಉದಾಹರಣೆ ಕೊಡುತ್ತ ತಾನು ಹೇಗೆ ಯಾವುದೋ ಒಂದು ಸಂಪುಟ ತೆರೆದಾಗ ಅದರಲ್ಲಿರುವ ಬರಹ ತನ್ನ ಮೇಲೆ ಪರಿಣಾಮ ಬೀರಿತು ಎನ್ನುತ್ತಾನೆ: ‘೧೯೬೯ರಲ್ಲಿ ಸ್ವಿಸ್-ಜನಿತ ಮನೋವೈದ್ಯೆ ಎಲಿಸಬೆತ್ ಕೂಬ್ಲರ್-ರೋಸ್ ಜನ ತಮ್ಮ ಅಂತಿಮ ಕಾಯಿಲೆಯನ್ನು ಎದುರಿಸುವುದನ್ನು ಐದು ಹಂತಗಳಾಗಿ ಕಲ್ಪಿಸಿದಳು: ನಿರಾಕರಣೆ, ಸಿಟ್ಟು, ವಾಗ್ದಾದ, ಖಿನ್ನತೆ, ಮತ್ತು ಸ್ವೀಕಾರ.’ ಎಂಬತ್ತೆಂಟರ ತನ್ನ ವಯಸ್ಸಿನಲ್ಲಿ ಇದು ಫದಿಮನ್‌ಗೆ ಅರ್ಥಪೂರ್ಣ ಎನಿಸುತ್ತದೆ. ಇದೇ ರೀತಿ ಇನ್ನೊಂದು ಪುಟ ತೆರೆದಾಗ ಅಲ್ಲಿ Ectropion ಎಂಬ ಉಲ್ಲೇಖ ಕಾಣಿಸುತ್ತದೆ. ಎಕ್ಟ್ರೋಪಿಯನ್ ಎಂದರೆ ‘ಕೆಳ ರೆಪ್ಪೆ ಕಣ್ಣ ಪಾಪೆಯಿಂದ ದೂರ ಜೋಲುವುದು.’ ಮೊದಲಿಗೆ ಈ ಉಲ್ಲೇಖಕ್ಕಾಗಿ ತಾನು ಯಾಕೆ ಕೃತಜ್ಞನಾಗಿರಬೇಕು ಎಂದುಕೊಳ್ಳುತ್ತಾನೆ. ಆದರೆ, ಇಡೀ ಲೇಖನ ಓದುತ್ತಿದ್ದಂತೆ, ಅಲ್ಲಿ ಹೇಳಲಾಗಿರುವ ರೋಗಲಕ್ಷಣಗಳಲ್ಲಿ ಕೆಲವು ತನ್ನ ತಮ್ಮ ಅನುಭವಿಸುತ್ತಿರುವಂಥವೇ ಎನ್ನುವುದು ಅರಿವಾಗುತ್ತದೆ. ಏನಿಲ್ಲದಿದ್ದರೂ ಆತನಿಗೋಸ್ಕರ ಹೇಗೆ ಅನುಕಂಪಿಸುವುದೆಂದು ಈಗ ನನಗೆ ಗೊತ್ತಾಗಿದೆ, ಹಿಂದಿಗಿಂತ ಸ್ವಲ್ಪ ಹೆಚ್ಚು ಅರಿವಿನಿಂದ,’ ಎನ್ನುತ್ತಾನೆ ಫದಿಮನ್. ಆದರೂ ಸರ್ವಜ್ಞತೆಯ ಹಂಬಲವನ್ನೂ ಫದಿಮನ್ ಒಂದು ವ್ಯಸನವೆಂದು ಕರೆಯುತ್ತಾನೆ; ಅಜ್ಞಾನಕ್ಕೂ ಬದುಕಿನಲ್ಲಿ ಒಂದು ಸ್ಥಾನವಿದೆ. ಆದ್ದರಿಂದ ಇಂಥ ವಿಶ್ವಕೋಶಗಳನ್ನು ಓದಲೇಬೇಕೆಂದು ಮೊದಲಿಂದ ಕೊನೆತನಕ ಓದುವ ಚಟವನ್ನು ಅವನು ಬೆಂಬಲಿಸುವುದಿಲ್ಲ.

ಒಂದು ವಿಶ್ವಕೋಶವೆಂದರೆ ಅದೊಂದು ಅರಿವಿನ ಬಂಡಾರವೇ ಸರಿ. ಈ ಮಾತು ಹದಿನೆಂಟನೇ ಶತಮಾನದ ಪ್ರಸಿದ್ಧ ಫ್ರೆಂಚ್ ಎನ್‌ಸೈಕ್ಲೋಪೇಡಿಸ್ಟ್ ಡಿಡೆರೋ (Diderot)ನ ಜೀವನದ ಮೂಲಕ ಕಟುವಾಗಿ ಸಾಧಿತವಾಗಿದೆ. ಡಿಡೆರೋನ ವಿಶ್ವಕೋಶ ಯೋಜನೆ ಫ್ರಾನ್ಸಿನ ಅಧಿಕಾರರೂಢ ರಾಜಕೀಯ ಮತ್ತು ಪುರೋಹಿತ ವರ್ಗದವರನ್ನು ಎಷ್ಟೊಂದು ನಲುಗಿಸಿತೆಂದರೆ ಅವರದನ್ನು ಮಟ್ಟುಗೊಳಿಸಲು ಶತಪ್ರಯತ್ನ ನಡೆಸಿದರು. ಡಿಡಿರೋ ವೈಯಕ್ತಿಕವಾಗಿ ಸಾಕಷ್ಟು ಕಷ್ಟ ನಷ್ಪ ಅನುಭವಿಸಬೇಕಾಯಿತು. ಆತನ ಸ್ಫೂರ್ತಿಯಲ್ಲಿ ರೂಪುಗೊಂಡ ಬ್ರಿಟಾನಿಕಾದ ಅನುಭವದಲ್ಲೂ ಇಂಥ ಹಲವಾರು ಪ್ರಸಂಗಗಳಿವೆ. ಆರಂಭದಿಂದಲೇ ಈ ಸಂಪುಟಗಳನ್ನು ಬ್ರಿಟನಿನ ದೊರೆಗೆ ಅರ್ಪಿಸುವ ಸಂಪ್ರದಾಯವೊಂದನ್ನು ಬ್ರಿಟಾನಿಕಾ ರೂಢಿಸಿಕೊಂಡಿತು. (ಈಗ ಈ ಅರ್ಪಣೆಯಲ್ಲಿ ಅಮೇರಿಕದ ಹಾಲಿ ಅಧ್ಯಕ್ಷರನ್ನೂ ಸೇರಿಸಿಕೊಳ್ಳಲಾಗುತ್ತದೆ.) ಮೊದಲ ಆವೃತ್ತಿಯ ಸಂಪುಟಗಳು ಅರ್ಪಿತವಾದದ್ದು ‘ಹುಚ್ಚರಸ’ನೆಂದೇ ಪ್ರಸಿದ್ಧನಾದ ಮೂರನೇ ಜಾರ್ಜ್‌ಗೆ. ಈ ಆವೃತ್ತಿಯಲ್ಲಿದ್ದ ‘ಸೂಲಗಿತ್ತಿತನ’ (Midwifery) ಅರ್ಥಾತ್ ಹೆರಿಗೆಯ ಬಗೆಗಿದ್ದ ಸಚಿತ್ರ ಲೇಖನವನ್ನು ನೋಡಿ ದೊರೆಯೋ ಅಥವಾ ಆಸ್ಥಾನದ ಮುಖ್ಯಸ್ಥರೋ ಸಿಟ್ಟಿಗೆದ್ದು ಆ ಪುಟಗಳನ್ನು ಹರಿದು ಹಾಕಲು ಆಜ್ಞೆ ಹೊರಡಿಸಿದ್ದಿದೆ! ಜನ ಜ್ಞಾನವಂತರಾಗುವುದು ಆಳುವ ವರ್ಗಕ್ಕೆ ಬೇಕಾಗಿರುವುದಿಲ್ಲ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ ಮಾತ್ರ.

ಬ್ರಿಟಾನಿಕಾ ವಿಶ್ವಕೋಶ ನಿಧಿ

ಈ ವಿಶ್ವಕೋಶದ ಇನ್ನೂರು ವರ್ಷಗಳ ಪಕಟಣೆಗಳಿಂದ ಆಯ್ದ ಕೆಲವು ಪ್ರಾತಿನಿಧಿಕ ಸಣ್ಣ ದೊಡ್ಡ ಲೇಖನಗಳನ್ನು ಒಳಗೊಂಡಿದೆ. ತಂತಮ್ಮ ಕ್ಷೇತ್ರಗಳಲ್ಲಿ ಮೂಲಭೂತ ಕೊಡುಗೆಗಳನ್ನು ನೀಡಿದಂಥವರು ಖುದ್ದಾಗಿ ಬರೆದ ಲೇಖನಗಳು ಇದರಲ್ಲಿ ಅಡಕವಾಗಿವೆ. ಉದಾಹರಣೆಗೆ, ಐನ್‌ಸ್ಪೈನ್ ಸ್ಥಳ ಮತ್ತು ಕಾಲದ ಕುರಿತು; ಫ್ರಾಯ್ಡ್ ಮನೋವಿಶ್ಲೇಷಣೆಯ ಕುರಿತು; ಮೇರಿ ಕ್ಯೂರಿ ರೇಡಿಯಮ್ ಕುರಿತು; ವೈಟ್‌ಹೆಡ್ ಗಣಿತದ ಕುರಿತು; ಜೂಲಿಯನ್ ಹಕ್‌ಸ್ಲಿ ಜೀವವಿಕಸನದ ಕುರಿತು. ಈ ವಿಷಯಗಳ ಬಗ್ಗೆ ಆಯಾಕಾಲದಲ್ಲಿ ಇವರಿಗಿಂತ ಹೆಚ್ಚು ಅಧಿಕಾರಯುತವಾಗಿ ಬೇರೆ ಯಾರೂ ಬರೆಯಲು ಸಾಧ್ಯವಿರಲಿಲ್ಲ. ನನ್ನನ್ನು ವಿಶೇಷವಾಗಿ ಆಕರ್ಷಿಸಿದ ಇತರ ಲೇಖನಗಳಲ್ಲಿ ಒಂದು “ಮಧ್ಯಾಹ್ನಕ್ಕೇ ಕತ್ತಲು” (Darkness at Noon) ಕಾದಂಬರಿ ಖ್ಯಾತಿಯ ಆರ್ಥರ್ ಕೆಸ್ಲರ್ ಬರೆದ ‘ನಗೆ’ಯ ಕುರಿತಾದ ಸಮಗ್ರವೂ ಸ್ವಾರಸ್ಯಕರವೂ ಆದ ಲೇಖನ. ಬಹುಶ್ರುತನೂ ಬುದ್ಧಿವಂತನೂ ಆದ ಈ ಜ್ಯೂಯಿಶ್ ಲೇಖಕ ನಂತರ ತನ್ನ ಜೀವವನ್ನು ತಾನೇ ಬಲಿತೆಗೆದುಕೊಂಡ ಎನ್ನುವುದು ಮನನೋಯಿಸುವ ಸ೦ಗತಿ. ಭಾರತದ ಇಂಗ್ಲಿಷ್ ಖ್ಯಾತಿಯ ಮೆಕಾಲೆ ಸಾಮ್ಯುವೆಲ್ ಜಾನ್ಸನ್ ಬಗ್ಗೆ ಬರೆದ ಲೇಖನ ಇನ್ನೊಂದು. ನಮಗೆ ಈ ಡಾಕ್ಟರ್ ಜಾನ್ಸನ್‌ನ ಬಗ್ಗೆ ಹೆಚ್ಚಾಗಿ ಗೊತ್ತಿರುವುದು ಅವನ ಒಡನಾಡಿಯಾಗಿದ್ದ ಬಾಸ್‌ವೆಲ್ ಬರೆದ ಜೀವ ಚರಿತ್ರೆಯಿಂದ. ಆದರೆ ಮೆಕಾಲೆಯ ಈ ಲೇಖನವಿನ್ನೂ ಸ್ಚಾರಸ್ಯಪೂರ್ಣವಾಗಿದೆ. ಇಂಗ್ಲಿಷ್ ಸಾಹಿತಿಗಳಲ್ಲಿ ಜಾನ್ಸನ್ ಒಬ್ಬನಿಗೇ ಡಾಕ್ಬರ್ ನಾಮಧೇಯ ಅಂಟಿಕೊಂಡಿರುವುದು. ಇದಕ್ಕೆ ಆತನ ಅಗಾಧ ಪಾಂಡಿತ್ಯವೊಂದು ಕಾರಣವಾದರೆ, ಬಡತನದ ಕಾರಣ ತನ್ನ ಆಕ್ಸ್ಫರ್ಡ್ ವಿದ್ಯಾರ್ಥಿ ದೆಸೆಯ ಮೂರನೆಯ ವರ್ಷದಲ್ಲಿ ಪದವಿಯಿಲ್ಲದೆ ವಿದ್ಯಾಭ್ಯಾಸ ಬಿಡಬೇಕಾಗಿಬಂದ ಈತನಿಗೆ ನಂತರ ಇದೇ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದುದು ಇನ್ನೊಂದು ಕಾರಣ. ಇಂಗ್ಲಿಷ್ ಭಾಷೆಯಲ್ಲಿ ಮೊತ್ತ ಮೊದಲಿನ ನಿಘಂಟು ಕಾರ್ಯವನ್ನು ಯಾರ ಸಹಾಯವೂ ಇಲ್ಲದೆ ಕೈಗೊಂಡವನು ಈ ಜಾನ್ಸನ್. ಅದು ಎಷ್ಟೇ ಟೀಕೆಗೊಳಗಾದರೂ, ಎಷ್ಟೇ ಅಸಮರ್ಪಕ ಎನಿಸಿದರೂ, ಇಂಗ್ಲಿಷ್ ಭಾಷೆಯ ಪ್ರಮಾಣೀಕರಣಕ್ಕೆ ದಾರಿಮಾಡಿಕೊಟ್ಟಿತು. ಹುಟ್ಟಿನಿಂದ ಸಾವಿನ ತನಕ ದಾರಿದ್ರ್ಯದಲ್ಲೇ ಬದುಕಿಯೂ ನಾಗರಿಕ ಜೀವನಕ್ಕೆ ದೊಡ್ಡ ಕೊಡುಗೆ ನೀಡಿದ ಜಾನ್‌ಸನ್‌ನ ಬಗೆಗಿನ ಈ ಲೇಖನ ಯಾವುದೇ ಅತಿರೇಕಗಳಿಲ್ಲದೆ ಮನ ಕರಗಿಸುವಂತಿದೆ. ಬ್ರಿಟಾನಿಕಾ ವಿಶ್ವಕೋಶ ನಿಧಿಯಲ್ಲಿ ಥಾಮಸ್ ಮಾಲ್ತೂಸ್ ಜನಸಂಖ್ಯಾ ನಿಯಂತ್ರಣದ ಬಗ್ಗೆ ಬರೆದ ಲೇಖನದ ಒಂದು ಭಾಗವೂ ಸೇರಿದೆ. ಅರ್ಥಶಾಸ್ತ್ರ ಓದುವ ವಿದ್ಯಾರ್ಥಿಗಳಿಗೆಲ್ಲ ಮಾಲ್ತೂಸ್ ಪರಿಚಿತ. ಜನಸಂಖ್ಯೆಯ ಬಗ್ಗೆ ಮೊತ್ತ ಮೊದಲ ಸೈದ್ಧಾಂತಿಕ ಪುಸ್ತಕ (Essay on the Principle of Population) ಬರೆದವನು ಈತ. ಜನಸಂಖ್ಯೆ ಗುಣಿತ ಕ್ರಮದಲ್ಲಿ(geometric) ಬೆಳದರೆ ಆಹಾರ ಗಣಿತ (arithmetic) ಕ್ರಮದಲ್ಲಿ ಬೆಳೆಯುತ್ತದೆ; ಪರಿಣಾಮವಾಗಿ ಅಭಾವ ಹಾಗೂ ಸಂಕಷ್ಟಗಳಿಂದ ಜನ ಸಾಯುವ ಮೂಲಕ ಜನಸಂಖ್ಯೆ ನಿಯಂತ್ರಣಗೊಳ್ಳುತ್ತದೆ ಎನ್ನುವುದು ಮೊತ್ತದಲ್ಲಿ ಮಾಲ್ತೂಸನ ಸಿದ್ಧಾಂತ. ಆದರೆ ಸುಮಾರು ಇಪತ್ತು ವರ್ಷಗಳ ನಂತರ ಬರೆದ ಲೇಖನದಲ್ಲಿ ಮಾಲ್ತೂಸ್ ತನ್ನ ನಿಲುವನ್ನು ಸ್ವಲ್ಪಮಟ್ಟಿಗೆ ಮಿದುವಾಗಿಸಿದ್ದು ಕಂಡುಬರುತ್ತದೆ.

ಇಂದಿನ ಇಲೆಕ್ಟ್ರಾನ್ ಯುಗದಲ್ಲಿ ೩೨ ಸಂಪುಟಗಳ ಇಂಥ ವಿಶ್ವಕೋಶದ ಗತಿಯೇನು ಎಂದು ಕೇಳಬಹುದು. ಅಂತರ್ಜಾಲ ಉಪಯೋಗಿಸುವವರಿಗೆ ವಿಕಿಪೀಡಿಯಾ ಎಂಬ ಕೋಶದ ನೆನಪಾಗುತ್ತದೆ. ಬ್ರಿಟಾನಿಕಾ ಕೂಡಾ ಅಂತರ್ಜಾಲದ ಅನೇಕ ಆವೃತ್ತಿಗಳನ್ನು ತಂದಿದೆ. ಬ್ರಿಟಾನಿಕಾದ ಸಮಾನಾಂತರವಾಗಿ ಬಂದ ಎನ್‌ಸೈಕ್ಲೋಪೇಡಿಯಾ‌ಅಮೇರಿಕಾನಾವೂ ಅಂತರ್ಜಾಲದಲ್ಲಿ ಇಂದು ಲಭ್ಯ. ಬ್ರಿಟಾನಿಕಾ ಮತ್ತು ಅಮೇರಿಕಾನಾ ಎರಡೂ ವಿಕಿಪೀಡಿಯಾಕ್ಕಿಂತ ಅಧಿಕೃತವಾದುವು ಎಂದು ಮಾತ್ರ ಹೇಳಬಹುದು. ಪುಸ್ತಕಗಳೇ ಇಲ್ಲದಾದ ಕಾಲದಲ್ಲಿ ಬ್ರಿಟಾನಿಕಾವೂ ಅನಿವಾರ್ಯವಾಗಿ ಇಲ್ಲದಾಗಬಹುದು; ಅಲ್ಲೀವರೆಗೆ ಅದು ಕೋಶಗಳ ರಾಣಿಯಂತೆ ಮೆರೆಯಲಿ ಎನ್ನುವುದು ಹಲವರ ಹಾರೈಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್‍ಯ
Next post ಬೆತ್ತಲೆ ಮಗುವು

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys