ಕೋಜಾ ಸರ್ಕಾರಕ್ಕೀಗ ಕೋಳಿ ಜ್ವರ

ಕೋಜಾ ಸರ್ಕಾರ ಅಂದಾಕ್ಷಣ ಗಾಬರಿಯಾಗಬೇಕಾಗಿಲ್ಲ ಬಿಡ್ರಿ. ಕಾಂಗ್ರೆಸ್ನೋರು ಅಧಿಕಾರ ಕಳ್ಕೊಂಡು ಸಿಡಿಲು ಬಡಿದೋರಂಗಾಗಿ ನಾಲಿಗೆ ಮ್ಯಾಗೆ ಹಿಡಿತಾನೇ ಕಳ್ಕೊಂಡು ಸರ್ಕಾರನಾ ‘ಕೋಜಾ’ ಅಂತ ಲೇವಡಿ ಮಾಡಿದ್ರೂ ಅಂಥ ಸೀರಿಯಸ್ ಆಗಿ ತಗಬೇಕಿಲ್ಲೇಳಳ್ರಿ. ಅವರು ಆಡಿದ್ರಾಗೆ ಅಂಥ ತಪ್ಪೇನಿಲ್ಲ. ‘ಕೋ’ ಎಂದರೆ ‘ಕೋಮುವಾದಿ’, ‘ಜಾ’ ಎಂದರೆ ‘ಜಾತ್ಯಾತೀತ’ ಅಂದ್ಕಂಡ್ರಾತ್ರಪ್ಪ . ಧರ್ಮಸಿಂಗರಂತೂ ಧರ್ಮಕ್ಕೆ ಎಳ್ಳು ನೀರು ಬಿಟ್ಟು ಅಸಲಿ ಸಿಂಹದಂಗೆ ಘರ್ಜಿಸ್ಲಿಕತ್ತಿರೋದು ಭಾಳ ಮಜಾಕೊಡ್ತದೆ. ಅವರಂತಾರೆ, ನಾನು ೨೦ ತಿಂಗಳು ಸಾಂತವಾಗಿ ಸರ್ಕಾರ ಆಳ್ತೀನಿ. (ಆಗ ಗೋಡ್ರು ದಿನವೂ ೨೦ ತಿಂಗಳು ಸಾಂತವಾಗಿ ಸರ್ಕಾರ ಆಳೀನಿ.) ಆಗ ಗೋಡ್ರು ದಿನವೂ ಬೆದರಿಕೆ ಪುತ್ರವಾ ಲವ್ ಲೆಟರ್ ಹೆಸರ್ನಾಗೆ ಬರೆಯೋರ್ರಿ. ಮೆಟ್ರೋ ರೈಲ್ ಬಗ್ಗೆ ಬಾಯಿ ಬಡ್ಕೊಂಡು ಅಸಮಾಧಾನ ತೋಡಿಕ್ಕಂತಿದ್ದರು. ಅದೇ ಮಗ ಕುಮಾರ ಡೆಲ್ಲಿಗೆ ಹೆಂಡ್ರ ಜೊತೆ ಹೋಗಿ ಅದೇ ಮೆಟ್ರೋ ರೈಲು ಹತ್ತಿ ಮಜಾ ತಗೋಳದ್ನ ಟಿವಿನಾಗೆ ನೋಡಿ ಸ್ವಾಟೆ ಓರೆ ಮಾಡಿ ಸ್ಮೈಲಿಂಗ್ ಕೊಡ್ಲಿಕತ್ತಾರೆ! ಐಟಿಬಿಟಿನೋರ್ಗೆ ಕೈ ತೊಳ್ಕಂಡು ಬೆನ್ನು ಹತ್ತಿ ಹೈದರಾಬಾದ್ನ ರೆಡ್ಡಿಗೆ ಅದರ ಲಾಭ ಸಿಗಂಗೆ ಮಾಡಿದ ಗೋಡಪ್ಪ, ಈಗ ಅದೇ ಮಗ ಮಾಹಿತಿ ತಂತ್ರಜ್ಞಾನ ಕೈ ತಪ್ಪಿದ ಬಗ್ಗೆ ಡೆಲ್ಲಿಗೆ ಓಡಿ ಹೋಗಿ ದೊಗ್ಗು ಸಲಾಂ ಹೊಡದ್ರೂ ನೊ ಕಾಮೆಂಟರ್ರಿ! ಒಳಮೀಸಲಾತಿ ಬಗ್ಗೆನೂ ಪತ್ರ ಗೀಚಿದ್ದೇ ಗೀಚಿದ್ದು. ನಾನಂತೂ ಈಗೋರಿ ಸರ್ಕಾರಿ ಆಜ್ಞೆಗಳನ್ನು ಓದಿದ್ಕಿಂತ ಈಯಪ್ಪನ ಲವ್ ಲೆಟರ್ ಓದೋದ್ರಾಗೆ ಆಯಸ್ಸು ಅಧಿಕಾರ ಎಲ್ಲನೂ ಕಳ್ಕೊಂಡೋನ್ರಿ. ಉಸಿರಾಡ್ಲಿಕ್ಕೂ ಬಿಡ್ದಂಗೆ ‘ಲೆಟರ್ ವಾರ್’ ನೆಡೆಸ್ತಿದ್ದ ಗೋಡಪ್ಪ ಮಗನಿಗ್ಯಾಕ ಲೆಟರ್ ಬರಿವಲ್ಲ? ಲೆಟರ್ ಪ್ಯಾಡ್ ಮುಗುದಾವೇನು? ಬೇಕಾರೆ ನಾ ಪ್ರಿಂಟ್ ಹೊಡ್ಸಿ ಕೊಡ್ಲಿಕ್ ತಯಾರ್ ಅವ್ನಿ. ಆಗಿನ ದಿನದಾಗೆ ಈವಯ್ಯನ ಲೆಟರ್ ಓದಿ ತೆಲಿಕೆಟ್ಟು ಯಾತಾವಾನ ಡಿಸ್ಕಸ್ ಮಾಡಾನ ಅಂದ್ರೆ ನಮ್ಮ ಪಕ್ಷದಾಗಾರ ನನ್ನ ಕಡಿ ಯಾವನಿದಾನ್ರಿ? ಹೊರಗಡೆ ಎನಿಮೀಸು ಒಳಗಡೆ ಕ್ರಿಮಿನಲ್ಸು. ಒಂದಿನಾರ ನೆಟ್ಗೆ ನಿದ್ದೆ ಮಾಡಿಲ್ರಿ ನಾ ಅಂತ ಧರ್ಮಸಿಂಗು ಮೊನ್ನೆ ಬೀದರ್ನಾಗ ಭಾಳ ದಿನದ ಮ್ಯಾಗೆ ತವರುಮನಿಗೋದ ಹೆಣ್ಣುಮಗಳಂಗೆ ದೂರು ಹೇಳ್ಕೊಂಡು ಅತ್ತಿದ್ದೂ ಅತ್ತಿದ್ದೆ.

ಈಗ ನೋಡಿದ್ರೆ ಜೆಡಿ‌ಎಸ್ ನಾಗೂ ಒಡಕು ಬಿಜೆಪಿನಾಗೆ ಬಿರುಕು ಸಿದ್ರಾಮುದೊಂದು ಜೆಡಿ‌ಎನ್ನು, ಕುಮಾರುಂದೆ ಬ್ಯಾರೆ ಗೋಡಂದೇ ಬ್ಯಾರೆ! ಇನ್ನು ಬಿಜೆಪಿನಾಗೆ ಯಡೂರಿದೊಂದು ಗ್ರೂಪು ಅನಂತಿದೊಂದು ಗ್ರೂಪು ಚಂದ್ರೂದು ಒಂದು ಗ್ರೂಪಾದ್ರೂ ಆತೆ. ಮಂತ್ರಿಮಂಡಲ ವಿಸ್ತರಣೆಯಾಗುತ್ಲು ಈಗ ಒಳಗಿರೋ ಕೋಳಿಜ್ವರ ಹೊರಾಗ್ ಬಿದ್ದು ಸರ್ಕಾರದ ಲಿವರು ಹಾಲ್ಟು ಕಿಡಣಿ ಎಲ್ಲಾ ಫೆಲೂರ್ ಆದ್ರೇರೇನೂ ಅಚ್ಚರಿಯಿಲ್ಲ ಬಿಡ್ರಿ. ಮೊನ್ನೆನಾಗ ಕೇಂದ್ರ ಸರ್ಕಾರ ಆಮೆರಿಕಾದ ಬುಷ್ಗೆ ಕರೆದು ಉಣ್ಣಾಕೆ ಇಕ್ಕಿದ್ರೂ ಬಿಜೆಪಿನೋರು ಕಮಕ್ ಕಿಮಕ್ ಅನ್ನಲಿಲ್ಲ. ಯಾಕಂದ್ರೆ ಬುಷ್ ಎಂಬ ರಾಕ್ಷಸ ಸಾಬರ ವಂಶಾನೇ ನಿರ್ವಂಶ ಮಾಡಾಕೇ ಹುಟ್ಟಾನೆ ಅಂಬೋ ಸಂತೋಸ. ಅದ್ವಾನೆದ್ದು ಮೂಲೆ ಸೇರಿದ ಅಡ್ವಾಣಿ ಬುಷ್ ಜೊತೆ ಬ್ರೇಕ್ ಫಾಸ್ಟ್ ಗೆ ಕುಂತಿದ್ದು ನೋಡಿ ಅಂಗಾರಾದ ಗೋಡ ತನ್ನ ಜೊತೆನಾಗಿರೋ ಸಾಡೇಸಾಥಿಗುಳ ಸಂಗಡ ಧರಣಿ ಕುಂತಿದ್ದೂ ಸುದ್ದಿಯಾತು. ಹಂಗೆ ಬುಷ್, ಮನಮೋಹನ ಸಿಂಗ್ ಮೋಡಿಗೆ ಮಳ್ಳಾಗಿ ಅಣು ಪರಮಾಣು ಒಪ್ಪಂದ, ವ್ಯಾಪಾರ್ದಾಗೂ ಬಂಡವಾಳ ಹಾಕ್ತೀನಿ ಅಂತ ಪ್ರಾಮಿಸ್ ಮಾಡಿದ್ದರಿಂದ ಆದ ಪರಮಾನಂದಕ್ಕಿಂತ; ಪಾಕ್ ಗೆ ಹಾರಿ ಮುಷರಫ್ನತಾವ ರಫ್ ಅಂಡ್ ಟಫ್ ಆಗಿ ನೆಡ್ಕೊಂಡಿದ್ದು ಸುದ್ಧಿಯಾದಾಗ ಆದ ಆನಂದದ ಮಜಾನೇ ಬ್ಯಾರೆ. ಇಂತಿಪ್ಪ ಬುಷ್ಗ ನಮ್ಮ ಪೊಪೆಟ್ ಪ್ರಧಾನಿ ಸಿಂಗು ಕೋಳಿ ಕುಯ್ದು ಚಿಕನ್ ಪಲಾವ್, ಚಿಕನ್ ಕಬಾಬ್, ಚಿಕನ್ ಫ್ರೈ, ಚಿಕನ್ ಕರಿ, ಚಿಕನ್ ಚಿಲ್ಲಿ, ತಂದೂರಿ ಚಿಕನ್, ಬಿರಿಯಾನಿ ಚಿಕನ್, ಪಕೋಡಾ, ಎಗ್ ಫ್ರೈಡ್ ರೈಸು, ಎಗ್ ಬುರ್ಜು ಆಮ್ಲೆಟ್ ಎಗ್ ಪಪ್ಪ್ಸು ಹಿಂಗೆ ನಾನಾ ನಮೂನಿ ಚಿಕನ್ ಐಟಮ್ಸ್ ಮಾಡ್ಸಿ ಉಣ್ಣಾಕಿಕ್ಸಿ ಕಳ್ಸಿ ನಮ್ಮ ದೇಸದಾಗೆ ಕೋಳಿ ಜ್ವರ ಇಲ್ಲ ಕಣ್ರಪ್ಪಾ ಅಂತ ಸಂದೇಸನಾ ಪೇಪರ್ನಾಗೆ ಕೊಟ್ರೂ ಯಾಕೋ ಮಂದಿ ಕೋಳಿ ನೋಡಿದ್ರೆ ಗ್ರೇನೇಡ್ ಬಾಂಬ್ ಕಂಡೋರಂಗೆ ತೆಳ್ಳಗೆ ಮೋಶನ್ ಮಾಡ್ಲಿಕತ್ತಾರ್ರಿ. ಇದನ್ನ ಕಂಡ ಕೋಳಿ ಯಾಪಾರಿಗುಳು ಕೋಳಿ ಪಾರಂನೋರೂ ಅಬ್ಬೆಪಾರಿಗಳಾಗಿ ಕೋಳಿರೇಟು ಡೌನ್ ಮಾಡಿದ್ರೂ ಮಂದಿ ಕೇಳ್ದಂಗೆ ಆದಾಗ ಕೋಟಿಗಟ್ಟಲೆ ಆಗೋ ಲಾಸು ತಪ್ಪಿಸ್ಕೊಂಬಾಕೆ “ಚಿಕನ್ ಮೇಳಾ”ನೇ ಸುರುಮಾಡಿ ಪುಗಸಟ್ಟೆ ಬಂದು ಉಂಡು ಹೋಗ್ರಪಾ ಅಂತ ಆಫರ್ ಕೊಟ್ಟರು. ಮಸಾಲೆ ವಾಸ್ನೇ ತಡಿಲಾರ್ದ ಮಂದಿ ಸತ್ತರೆ ಎಲ್ಲರೂ ಸಾಮೂಹಿಕವಾಗಿ ಸಾಯೋಣ ಚಿಕನ್ ತಿಂದೇ ಸಾಯೋಣವೆಂದು ಶಪಥ ಮಾಡಿ ಸಾವಿರಾರು ಮಂದಿ ಕೂಡಿ ಚಿಕನ್ ಮೇಳದತ್ತ ನುಗ್ಗಲಾಗಿ ಅಲ್ಲೂ ತಾರತಮ್ಯ ಕಾಣ್ತು. ಮೊದ್ಲು ಆಧಿಕಾರಿಗಳಿಗೆ ನೇವೇದ್ಯ ಅವರ ಫ್ಯಾಮಿಲಿಗೆ ಪಾರ್ಸೆಲ್ಲು. ಇದನ್ನ ನೋಡಿದ ಮಿಡ್ಲ್ ಕ್ಲಾಸ್ ಮಂದಿ ಶಾಮಿಯಾನ ಕಿತ್ತಾಕಿ ನುಗ್ತು. ಪುಗಸಟ್ಟೆ ಮಿಂಡ ಹೊಟ್ತುಂಬಾ ಉಂಡ ಅಂಭೋಗಾದೆ ನಿಜವಾಯ್ತು. ಕೆಲವರಂತೂ ಬೋಟಿ ತಿನ್ನೋಕೆ ಹೋಗಿ ಲಾಠಿ ಏಟು ತಿಂದದ್ದೂ ನ್ಯೂಸ್ ಆತು. ಹಿಂಗಾರೆ ನಮ್ಗೇನೂ ಉಳಿಯಂಗಿಲ್ಲ. ನಾವೇನ್ ರೆಕ್ಕೆಪುಕ್ಕ ತಿನ್ನಬೇಕೆ ಎಂದು ರಾಂಗ್ ಆದ ಫೋಲಿನ್ನೋರು ಗೋಲಿಬಾರ್ ಮಾಡೇವು ಹುಷಾರ್ ಅಂತ ಮಂದಿಗೆ ಧಂಕಿನೊ ಹಾಕಿದ್ರಂತೆ. ಹಿಂಗಿರೋವಾಗ ಕೋಳಿ ಮೇಳಕ್ಕೆ ಹಾಜರಾಗಿಯೂ ಟೇಸ್ಟ್ ನೋಡದ ಪಾಪಿಯೂ ಉಂಟೆ ಜಗದೋಳು ಅಂತ ಕೇಳ್ತಿರಾ ಸ್ವಾಮಿ? ಉಂಟು ಮಾಸ್ವಾಮಿ. ಮೇಳ ಉದ್ಘಾಟಿಸಿದ ಪಶುಸಂಗೋಪನಾ ಖಾತೆ ಸಚಿವ ಡಾ. ವಿ.ಎಸ್. ಆಚಾರಿ, ತನ್ನ ಪಿಲೇಟ್ನ ಸ್ಯಾಸಕ ಜಯಪ್ರಕಾಸ ಹೆಗ್ಡೆ ಕೈಗೆ ಕೊಟ್ನಂತೆ! ಹಂಗೆ ನಮ್ಮ ಡಿಸಿ‌ಎಂ ಯಡೂರೀದು ಮತ್ತೊಂದು ಟೈಪು. ದುಡ್ಡು ದಬಾಯಿಸಿ ಬಾಚೋ ಅಬ್ಕಾರಿ ಖಾತೆ ತನ್ನ ತಾವೆ ಮಡಿಕ್ಕಂಡೊ ಅಟ್ಟ್‍ಲೀಸ್ಟ್ ಒಂದು ಡ್ರಾಪೂ ಕುಡಿಯದ ರೇರ್ ಪರ್ಸನ್ನು! ಖಾತೆಗಳ ಒಳಸುಳಿ ಒಳರುಚಿಯೇ ತಿಳೀದ ಅಬ್ಬೆಪಾರಿಗಳೆಲ್ಲಾ ಮುಂದೆ ಖಾತೆನಾ ಹೆಂಗೆ ಡೀಲಿಂಗ್ ಮಾಡ್ತಾರೋ ಅಂಬೋ ಡವಟು ಕಾಂಗ್ರಸ್ನೋವ್ಕೆ. ಕೋಟಿಗೇಟು ಸೊನ್ನೆ ಹಾಕಬೇಕು ಅಂಬೋ ಗ್ಯಾನ, ಅನುಭವನೇ ಇಲ್ಲದ ಯಡೂರಿ ಬಡ್ಜೆಟ್ ಹೆಂಗೆ ಪ್ರಸೆಂಟ್ ಮಾಡ್ತೇನೆ ಅನ್ನೋ ಕ್ಯೂರಿಯಾಸಿಟಿ ಖುದ್ ಬಿಜೆಪಿನೋವ್ಕೇ ಉಂಟಾಗೇತ್ರಿ. ನಾನು ಫಾಸ್ಟ್, ಆಫೀಸರ್ಸು ಸ್ಲೋ ಅಂತ ಒಂದು ತಿಂಗಳು ಸ್ಲೋಮೋಶನ್ನಾಗೇ ಕಳೆದ ಕೋಮಾರರಾಮ ಮುಂದಾರ ಸರ್ಕಾರಿ ಕುದುರೆಗೆ ಸ್ಪೀಡ್ ಕೂಡ್ತಾನೋ ಹೆಂಗೋ ಅಂಬೋದೂ…. ನೋ ಗ್ಯಾರಂಟಿ. ಒಟ್ಟಾಗೆ ದೇಸದ ಹೆಲ್ತ್ ಕಂಡಿಸನ್ನೇ ಅಬ್‍ನಾರ್ಮಲ್ ಆಗೇತ್ರಿ….. ಒಂದ್ಕಡೆ ಮೆಂಟಲ್ ಪೇಷಂಟ್ ಹುಸೇನಜ್ಜಂಗೆ ಕಾಮಜ್ವರ, ಇನ್ನೊಂದ್ಕಡೆ ಪೈಗಂಬರ್ನ ಕಾರ್ಟೂನ್ ಜ್ವರ ಗುಜರಾತ್ನಾಗೀಗ ಅಂಥ್ರಾಕ್ಸ್ ಜ್ವರ. ಜೊತೆನಾಗೆ ಎಲ್ಲೆಲ್ಲು ಕೋಳಿಜ್ವರ. ಸರ್ಕಾರಕ್ಕೂ ಈಗ ಸ್ಯಾಸಕರೆಂಬ ಕೋಳಿಗಳೆಲ್ಲಿ ಕೈ ಕೂಟ್ಟಾವೋ ಎಂಬೋ ಕೋಳಿಜ್ವರ ಬಂದು ಬಡ್ಕಂಡೇತೆ. ಮುಂದ ಸ್ಯಾಸಕರ ಸ್ಟೋರಿನಾ ಮಂತ್ರಿಮಂಡ್ಲದ ವಿಸ್ತರಣೆ ಟೇಂನಾಗೆ ನೋಡಿ ಆನಂದಿಸಿರಿ.
*****
( ದಿ. ೨೦-೦೩-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೬೫
Next post ಆಯುಷ್ಯ

ಸಣ್ಣ ಕತೆ

 • ಮೇಷ್ಟ್ರು ರಂಗಪ್ಪ

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಬೋರ್ಡು ಒರಸುವ ಬಟ್ಟೆ

  ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…