ಟಿಪ್ಪುಸುಲ್ತಾನ ಅಂದ್ರೆ ಭಾರತೀಯರಿಗೆ ಎಲ್ಲಿಲ್ಲದ ಅಭಿಮಾನ. ನಾಟಕ ಲಾವಣಿ ಸೀರಿಯಲ್ಲು ನಾವೆಲ್ಲು ಎಲ್ಲಾ ಮಾಡವರೆ. ಆವಯ್ಯ ಹುಲಿ ಜೊತೆನಾಗೂ ಫೈಟಿಂಗ್ ಮಾಡಿದ್ಕೆ ‘ಮೈಸೂರು ಹುಲಿ’ ಅಂತ್ಲೂ ಖುಸಿಪಡ್ತಾರೆ. ಅಂಥ ವೀರನ ಬಗ್ಗೆ ಶಂಕ್ರಮೂತ್ರಿ ಸೆಟ್ಟಿ ತನ್ನ ತಕ್ಕಡಿಯಾಗೆ ತೂಗಿ ಟಿಪ್ಪು ಕನ್ನಡ ದ್ರೋಹಿ ಅಂದು ಬಿಟ್ಟವ್ನೆ. ಹಿಂದುಗುಳ್ನೆಲ್ಲಾ ಹಿಡ್ಕಂಡು ಸುನ್ನಿ ಮಾಢ್ಸಿ ಸಾಬನ ಮಾಡವ್ನೆ. ಪರ್ಸಿಯನ್ ಭಾಸೆನಾ ಆಡಳಿತ ಭಾಸೆ ಮಾಡ್ಕೊಂಡು ಕನ್ನಡಾನಾ ಮೂಲೆಗೆ ತಳ್ಳವ್ನೆ ಅಂತ ಶಂಕ್ರಮೂತ್ರಿ ಹೊಡ್ಕಂಡ ಶಂಖ ಕೇಳಿ ಸಾಬರು ಹಿಂದೂಗಳೂ ಒಟ್ಟಾಗಿ ತಿಕ ಬಡ್ಕಂಡು ನಗಲಿಕತ್ತಾರ್ರಿ. ನಮ್ಮ ಗ್ಯಾನಪೀಠದ ಸಾಯ್ತಿಗೋಳಾದ ಕನಾಡು ಅನಂತು ಮಳ್ಳುಸಿದ್ದಪ್ಪ ಜಿಕೆ ಗೋವಿಂದ ಬಿಕೆ ಚಂದ್ರಸೇಕರರು ಅಗ್ದಿ ರಾಂಗ್ ಆಗಿ ಸೆಟ್ಟಿ ಹೇಳಿದ್ದು ಖರೆ ಅಂದ್ರೆ ಸುಳ್ಳು. ಟಿಪ್ಪು ಕನ್ನಡ್ದಾಗೂ ಲೆಟರ್ ಕರ್ಸೆಪಾಂಡೆನ್ಸ್ ಮಾಡಿದ್ಕ ಸಿಂಗೇರಿ ಮಠಕ್ಕೆ ಬರೆದ ಲ್ವೆಟಸೇ ಸಾಕ್ಷಿ ಅವೆ. ನಂಜನಗೂಡಿನಲ್ಲಿದ್ದ ದೇವರಿಗೆ ಹಕೀಮ ನಂಜುಂಡ ಅಂತ ಟೈಟ್ಲು

ಕೊಟ್ಟೋನೇ ಟಿಪ್ಪು. ಬ್ರಾಂಬ್ರಾ ಪೂರ್ಣಯ್ಯನ ಬಗಲಿನಾಗೇ ಇಕ್ಕಂಡೇ ದರ್ಬಾರ ಮಾಡಿದ ಸೆಕ್ಯೂಲರ್ ಪಸನ್ನು. ಹಿಂದೂ ದೇವಸ್ಥಾನಗಳಿಗೆ ಸಕತ್ ಆಗಿ ದತ್ತಿದಾನ ಕೊಟ್ಟಾನೆ. ಅಂಥೋನ್ನ ಈ ಸೆಟ್ಟ ಅದೆಂಗೆ ಕನ್ನಡ ದ್ರೋಹಿ ಅಂದ? ಹಿಸ್ಟರಿ ನೆಟ್ಟಗೆ ಓದದ ಶಂಕ್ರಿಯ ಓಲ್ಡ್ ಹಿಸ್ಟರಿ ತುಂಬಾ ಸೀಮೆ ಎಣ್ಣೆ ವಾಸ್ನೆ ಹೊಡಲಿಕತ್ತದೆ. ಬೇಕಾರೆ ನಾವೂ ಇಚಾರ ಸಂಕಿರಣ ಮಡಗ್ತೀವಿ. ಧಂ ಇದ್ದರೆ ಸೆಟ್ಟಿ ಬಂದು ಸ್ಪೀಚ್ ಮಾಡ್ಲಿ ಅಂತ ಸವಾಲ್ ಹಾಕ್ಯಾರೆ.

ಶಂಕ್ರಿಗೆ ಗಾಬರಿಯಾಗೋತು. ಇದು ನನ್ನ ಪರ್ಸನಲ್ ಒಪೀನಿಯನ್ ಪಾರ್ಟಿದಲ್ಲ ಅಂತ ಹಾಕೆ ಆನ್ಸರ್ ಕೊಟ್ಟ. ನೀನು ಮಂತ್ರಿ ಕಣಲೋ ಕಂತ್ರಿ. ನಿನಗೆಲ್ಲೆ ಪರ್ಸನಲ್ಲು? ಮನೆಯಾಗೆ ತೆಲಗು ಮಾಟ್ಲಾಡ್ತಾವು. ಇಧಾನಸೌಧದಾಗೆ ಇಂಗ್ಲೀಸು, ಡೆಲ್ಲಿಗೋದ್ರೆ ಹಿಂದಿ, ಟೈಂ ಸಿಕ್ಕಾಗ ಕನ್ನಡದಾಗೆ ಮಾತಾಡತ್ತಿ. ಹಂಗಾರೆ ನೀನೂ ಕನ್ನಡ ದ್ರೋಹಿಯೆ. ನೀನೇನ್ ಅಡ್ವಾಣಿಗೆ ಲೆಟರ್ ಬರಿಬೇಕಾರೆ ಕನ್ನಡಾಗ ಬರೀತಿ? ತೆಗ್ದು ಒಗೆಯಲಾ ರಾಜಿನಾಮೆಯಾ ಅಂತ ಬೆನ್ನು ಹತ್ಕೊಂಡೋರು ವಾಟಾಳ್ ಅಂಡ್ ಪಾರ್ಟಿ. ಸಂದಿಮೂಲೆನಾಗ್ಳ ಊನಾಗೂ ಪ್ರತಿಭಟನೆ ಶುರುವಾದ್ವೆ. ದೇಶಕ್ಕೆ ಎಂಥ ಸಮಸ್ಯೆ ಬಂದಾಗ್ಲೂ ತಮಗೆ ಸಂಬಂಧವೆ ಇಲ್ಲ ಅನ್ನಂಗೆ ಸುಮ್ಗಿರ್ತಿದ್ದ ಸಾಬರೂ ಈ ಸಲ ಬೀದಿಗಿಳಿದರು. ಸೆಟ್ಟಿ ಚೆಡ್ಡಿ ಒದ್ದೆಯಾಗೋತು. ನೇನು ಹಿಸ್ಟರಿಲೋ ಎಕ್ಸ್ಪಟ್ ಕಾದು. ಹಿಸ್ಟರಿ ಅಂಟೆ ಓನ್ಲಿ ಕ್ಯೂರಿಯಾಸಿಟಿ ನಂಡಿ, ನೇನು ಸಂಸೋಧಕನೂ ಕಾದು. ಅಬ್ಬೇಪಾರಿಯಾದ ನೇನು ನಾ ಪರ್ಸನಲ್ ಒಪಿನಿಯನ್ ಚೆಪ್ಪೆನಂಡಿ. ಇಂತಕು ಎವರ್ರಿಕೈನಾ ಫೀಲಾಗಿದ್ರೆ ನನ್ಗೂ
ಫೀಲಾಗೇತಿ… ಸೋ ಐಯಾಮ್ ಸಾರಿ ಫಾರ್ ದಟ್ ಅಂತ ಸೆಟ್ಟಿ ತಿಪ್ಪೆ ಸಾರಿಸಿದ. ಸೆಟ್ಟಿಗಿಂತ ಮುಂಚೆನೇ ಮಣ್ಣಿನ ಮಗ ಗೋಡ್ರು ಇತಿಹಾಸಕಾರರಿಗಿಂತ್ಲೂ ಸೆಟ್ಟಿಮ್ಯಾಗೆ ಕೆಂಡಕಾರಿ ಕ್ಸಮಾಪ್ಣೆ ಕೇಳಿಬಿಡೋದೆ! ಟಿಪ್ಪು ಎಂಥ ಫೈನ್ ಮನುಷ್ಯಾ ಗೊತ್ತೇನ್ರಿ? ನನ್ನಂಗೆ ಆತ್ನೆಂದೂ ಮಕ್ಕಳ ರಕ್ಷಣೆಗೆ ನಿಲ್ಲಿಲ್ಲ. ಟಿಪ್ಪು ಮಕ್ಕಳು ಇನ್ನೂ ಎಳೆವಿದ್ದು ಒತ್ತೆ ಇಟ್ಟ. ನನ್ನೋವು ಧಡಿಯರಾದ್ರೂ ಸಿಕ್ಕ ಅಧಿಕಾರ ದಕ್ಕಿಸಿಕೊಳ್ದೆ ಡೇಬೈಡೇ ಹಗರಣ್ದಾಗೆ ಸಿಕ್ಕಿ ಹಾಕಂತಿವೆ. ನಾನು ಈಗ್ಲೂ ಮೌನವ್ರತ ಹಿಡ್ಕೊಂಡು ಕುಂತ್ರೆ ಕೋಮುವಾದಿ ಬಿಜೆಪಿ, ಅವಕಾಶವಾದಿ ಕಾಂಗ್ರೆನ್ನೋರು ಅಡ್ಡಡ್ಡ ನುಂಗಿ ಹಾಕಿ ಬಿಡ್ತಾರ್ರಿ….. ಅದಕ್ಕಾಗಿ ನನ್ನ ಮಕ್ಕಳನ್ನ ಸೇವ್ ಮಾಡೋದಕ್ಕೆ ಹೊಂಟೀನಿ. ಇದರಲ್ಲಿಯೇ ಕರ್ನಾಟಕದ ಯೋಗಕ್ಷೆಮ ಅಡಗಿದೆ ನನ್ನ ಸ್ವಾರ್ಥ ಅಡಗಿಲ್ಲ ತಿಳ್ಕೊಳಿ.

ಗೋಡ್ರು ಯಾವಾಗ ಉಲ್ಟ ಹೊಡೆದ್ರೋ ಸೆಟ್ಟಿ ತಣ್ಣಗಾಗಿ ಹೋದ. ಆದರೆ ಬೆದೆ ಹತ್ತಿದ ನಾಯಿಗಳಂತೆ ಸಾಯ್ತಿಗಳು ಬಿಡಬೇಕಲ್ಲ. ಸಾಬರ ಗಡ್ಡಕ್ಕೆ ಬೆಂಕಿ ಬಿದ್ದಾಗ ಯಾವನೋ ಬೀಡಿ ಹಚ್ಕಂಡ ಅನ್ನಂಗೆ ಮಾತಿನ ವರಸೆ ಸುರು ಹಚ್ಕಂಡ್ವು. ಕಿಳ್ಳೆಕ್ಯಾತ ಸಾಯ್ತಿ ಮಿಸ್ಟರ್ ಭೈರ್ ಹೆಂಗೆ ಸುಮ್ಗಿದ್ದಾನು? ಕರ್ನಾಡು, ಅನಂತೂಗಿಂತ ಹಿಸ್ಟರಿನಾಗೆ ನಾನು ಹೆಡ್ಡು. ಟಿಪ್ಪುನ ಅರೆದು ಕುಡಿದಿದೀನಿ. ಅವನು ಫೈಟ್ ಮಾಡಿದ್ದು ತನ್ನ ಪ್ರಾಣ ಉಳಿಸ್ಕೊಂಬೋಕಾಗಿ. ಮಕ್ಕಳಿಬ್ಬರನ್ನು ಬ್ರಿಟೀಷರ್ತಾವ ಒತ್ತು ಮಡಗಿದ್ದು ಮಾಡಿದ ಸಾಲ ತೀರಸಲಿಕ್ಕಾದ ಸೆಲ್ಫ್ ಪ್ರಾಬ್ಲಂನಿಂದ ಅಂತೆಲ್ಲಾ ವಿ.ಕ. ದಾಗೆ ಪುಟಗಟ್ಲೆ ವಿಕಾರವಾಗಿ ಕಾರಿದ. ಇತ್ತ ಹರಕು ಬಾಯಿ ಚಂಪಾ ಟಿಪ್ಪು ಪರವಾಗಿಯೂ ಮಾತಾಡ್ದೆ ಸೆಟ್ಟಿ ಸೈಡಿಗೂ ನಿಲ್ಲದೆ ತನ್ನ ಮನಸ್ಸಿನಾಗೆ ಕರ್ನಾಡು ಅನಂತಿ ಬಗ್ಗೆ ಇದ್ದ ಹಳೆದ್ವೇಸ ಕಾರೋಕೆ ಚಾನ್ಸು ತಕ್ಕಂಡ್ನೆ! ಇವರು ಬರೆದಿರೋದ್ರಾಗೆಲ್ಲಾ ಆಂಗ್ಲ ಸಾಹಿತ್ಯದ ಇನುಫ್ಲೂ‌ಎಂಜಾ ಐತ್ರಿ. ಇವರೇ ವರ್ತಮಾನದ ಕನ್ನಡದ ಗ್ರೇಟ್ ವಿಲನ್ಸ್ ಅಂತ ಸಂಸೋಧ್ನೆ ಮಾಡ್ತನಿಯಪ್ಪಾ. ಕನ್ನಡ ಶಾಸ್ತೀಯ ಭಾಷೆ ಮಾಡೋಕೆ ನಾನ್ ಹೊಂಟ್ರೆ, ಅದರ ಜರೂರತ್ತು ಏನೈತೆ ಅಂತ ಲೇವಡಿ ಮಾಡ್ಯಾರ್ರಿ ಮತ್ತ ಎಂದು ಹುಚ್ಚುಪ್ಯಾಲೆನಂಗೆ ಬಡಬಡಿಸಿಲಿಕತ್ತಿದ. ಈ ಮಧ್ಯೆ ಎಂಟ್ರಿ ತಗಂಡ ಚಿದಾನಂದಮೂತ್ರಿ ಎಂಬ ತಾತ, ನನ್ನ ಮಾತೂ ವಸಿ ಕೇಳ್ರಪಾ. ಟಿಪ್ಪು ದೇಸದ್ರೋಹಿ ಅಂತ ಸಾಬೀತು ಮಾಡ್ಲಿ ಅಂತ್ಲೆ ಹಂಪಿ ಇರೂಪಾಕ್ಷ ಆಯಸ್ಸು ಕೊಟ್ಟಿರೋದು. ಇಲ್ಲದಿದ್ದರೆ ಎಂದೋ ತುಂಗಾನದಿನಾಗೆ ಹೆಣವಾಗಿ ತೇಲಿ ಬಿಡೋನಿದ್ದೆ ಅಂತ ಬೊಂಬ್ಡಿ ಹೊಡಲಿಕತ್ತದೆ.

ಅಲ್ರಿ ಟಿಪ್ಪು ಯುಗ ಮುಗಿದು ಮುನ್ನೂರು ವಸ ಆಗೋತು. ಈಗ ಆತನ್ನ ಹಿಡ್ಕೊಂಡು ಪೋಸ್ಟ್‌ಮಾರ್ಟಂ ಮಾಡೋ ನೆಸೆಸಿಟಿ ಏನೈತೇಳ್ರಿ! ಈಟು ಸಾಲ್ದು ಅಂತ ಸಿಟಿ ರವಿ ಎಂಬ ಬಾಲಕ ಮೈತ್ರಿ ಸರ್ಕಾರ ಚಲೋ ಇರಬೇಕಂದ್ರೆ ಸೋಬ್ನರಾತ್ರಿ ಮಾಡದೆ ಸೋಭಾಯಾತ್ರೆ ಮಾಡ್ತೀನಂತ ಹೊಂಟಾನೆ. ಹಂಗೆಲ್ಲಾರ ಮಾಡಿದ್ರೆ ದೋಸ್ತಿ ಖತಂ ಅಂತ ಗೋಡ ವಾನಿಂಗ್ ಕೊಟ್ಟಾನೆ. ಕೊಟ್ಕೊಳ್ಳಿ ಬಿಡ್ರಿರೀ. ಹೂ ಈಸ್ ಹಿ? ನಮ್ಮ ದೋಸ್ತಿ ಏನಿದ್ರು ಕೊಮಾರಂತಾವ್ರಿ ಅಂತಾನೆ ಡೆಲ್ಲಿ ವಕ್ತಾರ ರವಿಶಂಕ್ರ ಪರಸಾದ. ನೀವೇನಂತೀರಿ ಕೊಮಾಸಾಮಿ ನಿಮ್ಮ ಫಾದರ್ ಹಿಂಗಂತಾರಲ್ಲ ಅಂತ ಕೊಚ್ಚನ್ ಮಾಡಿದ್ರೆ ಈವಯ್ಯ ಏಟ್ಲೂ ಸಿಗಲ್ಲ ಪೋಟಿಗೂ ಸಿಗಲ್ಲ. ನಮ್ಮ ಫಾದರ್ ಮಾತ್ನ ಮಿಸ್ಟೇಕ್ ಮಾಡ್ಕೋಬ್ಯಾಡಿ ಬ್ರದರ್. ಅವಗೆ ಸಾಬರ ಮ್ಯಾಗೆ ಬೋತ್ ಮೊಬ್ಬತ್. ಮುಂದಿನ ಜನ್ಮದಾಗೆ ‘ಹುಟ್ಟದರೆ ಸಾಬರ ಜಾತೀಲಿ ಹುಟ್ಟಬೇಕು’ ಅಂತ ಸಾಂಗ್ ಹೇಳಿದ್ನೆ ನೀವು ಮರೆತಂಗೆ ಕಾಣ್ತದೆ. ವಯಸ್ಸಾಗೈತೆ ಹೋರಾಟ ಮಾಡೋ ತಾಕತ್ತಿಲ್ಲ. ತಮ್ಮ ಫೀಲಿಂಗ್ಸ್‌ನಾ ಹಿಂಗೆ ಆಗಾಗ ತೋಡಿಕ್ಯಂತಾರಷ್ಟೆ. ಇನ್ನು ಸೋಭಾಯಾತ್ರೆ ಮಾಡಿದ್ರೆ ಅದು ನಮ್ಮ ಸರ್ಕಾರದ ಸ್ಯವಯಾತ್ರೆ ಆಗೋಯ್ತದೆ ಅಂತ ತಿಳಿದಿರೋ ಕಾಲಜ್ಞಾನಿ ಅವರು. ಅವರ ಮಾತ್ನ ಸೀರಿಯಸ್ ಆಗಿ ತಗೊಳ್ದೆ ಎಲ್ಲರೂ ಸೀರಿಯಸ್ ಆಗಿ ಕೆಲಸ ಮಾಡಿ ಸರ್ಕಾರ ಉಳಿಸಿ ಅಂಬೋದೇ ಕಾರ್ಯಕರ್ತರಲ್ಲಿ ನನ್ನ ಮನವಿ. ನಾನು ಹಳ್ಳಿಹಳ್ಳಿಗೂ ವಿಸಿಟ್ ಕೊಡ್ತೀನಿ. ನಮ್ಮ ಯಡೂರಿ ಸ್ಲಂ ಸ್ಲಂಗೂ ವಿಸಿಟ್ ಹಾಕ್ಕಂಡಾರೆ ಬೆಳಗಾವಿನಾಗೆ ಅಧೀವೇಸ್ನ ಮಾಡಿ ಉತ್ತರ ಕರ್ನಾಟಕದ ಮಂದಿನಾ ಮಳ್ಳು ಮಾಡೀವಿ. ಚಾಮುಂಡೇಶ್ವರಿ ಕ್ಷೇತ್ರದಾಗೆ ಉಂಡು ಅಲ್ಲೆ ಮಕ್ಕಂಡು ದಲಿತರ ಮನ ಗೆದ್ದಿದೀವಿ. ಅಲ್ಲಿನಿತ್ಕಂಡ್ರೆ ಸಿದ್ರಾಮು ಶ್ರೀ ರಾಮನಂಗೆ ವನವಾಸಕ್ಕೆ ಹೋಗೋದು ಗ್ಯಾರಂಟಿ ಬ್ರದರ್, ಗೋಡ್ರ ಪಾದದಾಣೆ. ಭಾಸ್ಣನೆ ಬಿಗಿತಾನೆ ಕೊಮಾರರಾಮ!

ಬೆಳಗಾವಿ ಅಧಿವೇಸ್ನದಾಗೆ ಅರಣ್ಯ ಭೂಮಿಯ ಪರಭಾರೆ ಅಕ್ರಮಕ್ಕೆ ಸಂಬಂಧಪಟ್ಟಂಗೆ ೮೦ ಕೋಟಿ ಪ್ರಕರಣದ ಸಿಡಿ ಒಂದನ್ನ ಗ್ರೇಹೇರ್ ಪಾಟೀಲು ಹೊರಾಗ್ ಬಿಟ್ಟಾನರಲ್ರಿ ಸರಾ ಅಂದ್ರೆ ಕೊಮಾರ ನಗೆ ಆಡ್ತಾನೆ. ರೆಡ್ಡಿ ಸಿಡಿ, ತೆಲಗಿ ಸಿಡಿ ಹಳ್ಳ ಹಿಡಿದಂಗೆ ವೆಂಕ್ಟೇಶನ್ ಫೋಟೋನೂ ನೆಗ್ದು ಬಿದ್ದೋತಲ್ರಿ. ಗಣಿ ಪ್ರಾಬ್ಲಂನಾ ಅದಿರ್ನಾಗೆ ಮುಚ್ಚಿ ಸಮಾಧಿ ಮಾಡಿದ್ದಾತು. ನೈಸ್ ಖೇಣಿ ಎಲ್ಲಿ ಬಿದ್ದಿದ್ದಾನೊ ಗೊತ್ತಿಲ್ಲ. ನಾನು ನಮ್ಮಪ್ಪ ಸರ್ಕಾರನಾ ಹೆಂಗಾರ ಮಾಡಿ ಉಳಿಸೋಕೆ ಕಸರತ್ ಮಾಡ್ತಿವೆ. ಇವರೆಷ್ಟು ದಡ್ಡರು ಅದಾರಂದ್ರೆ ಕೂತ್ಕಂಡ ಕೊಂಬೆನೇ ಕಡೆಯೋ ಪೈಕಿ ಬ್ರದರ್. ನಿಟ್ಟುಸಿರುಬಿಡ್ತಾನೆ ಮಣ್ಣಿನ ಮಗನ ಮಗ ಮೊಮ್ಮಗ. ಬೆಳಗಾವಿಯಾಗೆ ಅಧಿವೇಸ್ನ ಆಗಿದ್ದೊಂದು ಸಮಾಧಾನ ಬಿಟ್ರೆ ಸೈಡ್ ಎಫೆಕ್ಟ್ ಭಾಳ ಅವೆ. ಮುಂದಿನ ವಾರ ಮೀಟ್ ಆಗೋಣ್ರಿಯಪಾ.
*****
( ದಿ. ೧೨-೧೦-೨೦೦೬)