ಇತಿಹಾಸದಲ್ಲಿ ಅದೆಷ್ಟೋ ಮಂದಿ ಸರ್ವಾಧಿಕಾರಿಗಳು ಆಗಿಹೋಗಿದ್ದಾರೆ; ಅವರು ಕ್ರೂರಿಗಳೂ ನಿರಂಕುಶಮತಿಗಳೂ ಆಗಿದ್ದರೆ ಅವರ ಅಧಿಕಾರವ್ಯಾಪ್ತಿಗೆ ಸೇರಿದ ಜನರ ಪಾಡು ಹೇಳತೀರದು. ಚೆಂಗಿಶ್ ಖಾನ್, ಮಹಮ್ಮದ್ ತುಘ್ಲಕ್, ಔರಂಗಜೇಬ್, ಈದಿ ಅಮೀನ್, ಹಿಟ್ಳರ್, ಮುಸೊಲಿನಿ, ಸ್ಟಾಲಿನ್ ಹೀಗೆ ಇವರ ಪಟ್ಟಿಯಲ್ಲಿ ಸಾವಿರಾರು ಹೆಸರುಗಳಿವೆ. ಎಲ್ಲರೂ ಒಂದಲ್ಲ ಒಂದು ಕಾರಣ ನೀಡಿ, ತಮಗಾಗದವರನ್ನು ಕೊಂದವರು. ಆದರೆ ಇಂಥವರಲ್ಲಿ ವೈಯಕ್ತಿಕ ಕೌರ್ಯಕ್ಕೆ ಸ್ಪರ್ಧೆ ನಡೆದರೆ ಮೊದಲ ಬಹುಮಾನ ರೋಮನ್ ಸಾರ್ವಭೌಮನಾದ ಗೈಯುಸ್ ಕಲಿಗುಲನಿಗೆ ದೊರಕುತ್ತದೆ. ಕಲಿಗುಲ ಎಂಬ ಹೆಸರಿಗೂ ಕಲಿಯುಗಕ್ಕೂ ಯಾವ ಸಂಬಂಧವೂ ಇಲ್ಲ; ಆದರೂ ಕಲಿಯುಗದ ಸಕಲ ದುರ್ಗುಣಗಳೂ ಈತನಲ್ಲಿ ಮನೆಮಾಡಿದ್ದುವು! ಕಲಿಗುಲ ಎನ್ನುವುದು ಗೈಯುಸ್ ಜೂಲಿಯಸ್ ಸೀಸರ್ ಜರ್ಮಾನಿಕಸ್‍ನ (ಕ್ರಿ ಶ. ೧೨ – ೪೧) ಅಡ್ಡಹೆಸರು. ಈ ಹೆಸರಿನ ಅರ್ಥ ಪುಟ್ಟ ಮಿಲಿಟರಿ ಬೂಟುಗಳು ಎಂದು. ಮಿಲಿಟರಿ ಕ್ಯಾಂಪಿನಲ್ಲಿ ಬೆಳೆದ ಇವನು ಚಿಕ್ಕಂದಿನಲ್ಲಿ ಇಂಥ ಬೂಟುಗಳಲ್ಲಿ ಓಡಾಡುತ್ತಿದ್ದುದರಿಂದ ಇದೇ ಹೆಸರು ಇವನಿಗೆ ಖಾಯಮಾಯಿತು.
ರೋಮನ್ ಮಿಲಿಟರಿಯಲ್ಲಿ ದೊಡ್ಡ ಸಾಹಸಗಳನ್ನು ತೋರಿಸಿ ಅಪಾರ ಜನಪ್ರಿಯತೆ ಗಳಿಸಿದ ತಂದೆ ಜರ್ಮಾನಿಕಸ್‍ನ ಜನಪ್ರಿಯತೆ ಕಲಿಗುಲ ಅಧಿಕಾರಕ್ಕೆ ಬರುವುದಕ್ಕೆ ಪ್ರಮುಖ ಕಾರಣವಾಯಿತು. ಪಟ್ಟಕ್ಕೆ ಬಂದ ಕಲಿಗುಲ ತನ್ನ ಅಲ್ಪ ಅಧಿಕಾರಾವಧಿಯ ಮೊದಲ ಸುಮಾರು ಎಂಟು ತಿಂಗಳುಗಳ ಕಾಲ ಉತ್ತಮ ಕೆಲಸಗಳನ್ನೇ ಮಾಡಿದ. ಆಟ, ನಾಟಕ, ಉತ್ಸವಗಳಲ್ಲಿ ಆಸಕ್ತಿಯಿದ್ದ ಕಲಿಗುಲ ಹಿಂದಣ ಅರಸ ಟೈಬೀರಿಯಸ್‍ನ ಕಾಲದಲ್ಲಿ ದೇಶಭ್ರಷ್ಟರಾಗಿದ್ದವರನ್ನೆಲ್ಲ ವಾಪಸು ಕರೆಸಿದ. ಹೀಗೆ ಕರೆಸಿದವರಲ್ಲಿ ಅವನದೇ ಅಕ್ಕಂದಿರೂ ಸೇರಿದ್ದರು. ಸೆರೆಮನೆಯಲ್ಲಿದ್ದವರನ್ನು ಬಿಡುಗಡೆಗೊಳಿಸಿದ. ಸುಂಕವಂಚಿತರಾಗಿದ್ದ ಸಾಮಂತರಿಗೆ ಹಿಂದಿನದೆಲ್ಲವನ್ನೂ ಸೇರಿಸಿ ಸ್ವರ್ಣನಾಣ್ಯಗಳನ್ನು ನೀಡಿದ. ಅನೇಕ ಹೊಸ ಕಟ್ಟಡಗಳನ್ನು ನಿರ್ಮಿಸಿದ.
ಆದರೆ ಇದು ಯಾವುದೂ ಅವನ ಒಳಗಿದ್ದ ಕೌರ್ಯವನ್ನು ಹೆಚ್ಚು ಕಾಲ ಹಿಡಿದು ನಿಲ್ಲಿಸಲಿಲ್ಲ. ವಾಸ್ತವದಲ್ಲಿ ಕಲಿಗುಲ ಚಿಕ್ಕಂದಿನಲ್ಲೇ ಹಿಂಸಾಪ್ರಿಯ ವ್ಯಕ್ತಿಯಾಗಿದ್ದ. ತಾನು ರೋಮಿನ ಎದೆಯ ಮೇಲೆ ಸರ್ಪವೊಂದನ್ನು ಸಾಕುತ್ತಿದ್ದೇನೆ ಎಂದು ಅರಸ ಟೈಬೀರಿಯಸ್ ಆಗಾಗ ಹೇಳುವುದಿತ್ತು. ಈ ಅರಸ ಜಡ್ಡುಬಿದ್ದುದಕ್ಕೆ ಕಲಿಗುಲ ಅವನ ಆಹಾರದಲ್ಲಿ ವಿಷ ಬೆರೆಸಿದ್ದೇ ಕಾರಣವಿದ್ದಿರಬಹುದು. ಜಡ್ಡಾಗಿ ಮಲಗಿದ ಅರಸನ ಮುಖಕ್ಕೆ ತಲೆದಿಂಬು ಒತ್ತಿ ಈತ ಕೊಂದಿರಲೂಬಹುದು. ಇದೆಲ್ಲ ಅವನಿಗೆ ಸುಲಭವಾಗಲು ಕಾರಣ ಮಾರ್ಕೋ ಎಂಬ ಅರಮನೆಯ ರಕ್ಷಣಾದಳದ ಮುಖ್ಯಸ್ಥ. ಮಾರ್ಕೋನ ಪತ್ನಿ ಎನ್ನಿಯ ನೆವಿಯ ಎಂಬಾಕೆಯನ್ನು ತಾನು ರಾಜನಾದರೆ ನಿನ್ನನ್ನು ಮದುವೆಯಾಗುತ್ತೇನೆ ಎಂಬುದಾಗಿ ಮಾತುಕೊಟ್ಟು ಬುಟ್ಟಿಗೆ ಹಾಕಿಕೊಂಡಿದ್ದ. ಈ ಮಾತನ್ನೇನೂ ಅವನು ನೆರವೇರಿಸದಿದ್ದರೂ, ಅವಳ ಮೂಲಕ ಮಾರ್ಕೋನ ಮೇಲೆ ಪ್ರಭಾವ ಬೀರಿ ಟೈಬೀರಿಯಸ್‍ನ ರಕ್ಷಣಾಕವಚವನ್ನು ಭೇದಿಸುವುದು ಅವನಿಗೆ ಸಾಧ್ಯವಾಯಿತು. ಕಲಿಗುಲನಿಗೆ ಎಷ್ಟು ಪ್ರದರ್ಶನರತಿ ಇತ್ತೆಂದರೆ, ತನ್ನ ಯಾವ ಕೃತ್ಯಗಳನ್ನೂ ಹೆಚ್ಚು ಕಾಲ ಮುಚ್ಚಿಡುವುದು ಅವನಿಂದ ಆಗುತ್ತಿರಲಿಲ್ಲ. ಅವುಗಳ ಕುರಿತು ಯಾರ ಮುಂದಾದರೂ ಕೊಚ್ಚಿಕೊಳ್ಳದಿದ್ದರೆ ಅವು ನಡೆದೇ ಇಲ್ಲ ಎನ್ನುವಂತಿತ್ತು ಅವನ ಸ್ಥಿತಿ.
ತಾನಿನ್ನೂ ವಯಸ್ಸಿಗೆ ಬರುವ ಮೊದಲೇ ಕಲಿಗುಲ ಅಕ್ಕ ಡ್ರೂಸಿಲಾಳನ್ನು ಹಾಳುಮಾಡಿದ. ನಂತರ ತಾನವಳನ್ನು ಪ್ರೀತಿಸುವುದಾಗಿ ಹೇಳತೊಡಗಿದ. ಮುಂದೆ ಅರಸನಾದ ಮೇಲಂತೂ ಅವನ ಈ ನೈತಿಕ ಅಧಃಪತನಕ್ಕೆ ಕಡಿವಾಣ ಹಾಕುವವರೇ ಇಲ್ಲವಾಯಿತು. ಡ್ರೂಸಿಲಾಳಿಗೆ ಮದುವೆಯಾಗಿದ್ದರೂ, ತಾನೇ ಅವಳನ್ನು ಮದುವೆಯಾಗುವ ಯೋಚನೆ ಹಾಕತೊಡಗಿದ. ಈ ಮಧ್ಯೆ ಡ್ರೂಸಿಲಾ ತೀರಿಕೊಂಡಾಗ, ಇದನ್ನೇ ದೊಡ್ಡ ರಾಷ್ಟ್ರ್‍ಈಯ ಶೋಕವನ್ನಾಗಿ ಇಡೀ ರೋಮನ್ ಸಾಮ್ರಾಜ್ಯದಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಮಾಡಿದ. ಡ್ರೂಸಿಲಾಳನ್ನು ಬಹುಶಃ ಕಲಿಗುಲ ನಿಜಕ್ಕೂ ಪ್ರೀತಿಸಿದ್ದರೂ ಇರಬಹುದು; ಆದರೆ ಅವನ ಅಗಮ್ಯಗಮನಕ್ಕೆ ಅವನೇನೂ ಪ್ರೀತಿಸದಿದ್ದ ಇನ್ನಿಬ್ಬರು ಸೋದರಿಯರೂ ಬಲಿಪಶುಗಳಾದರು. ಈ ಅವನು ತನ್ನ ಗೆಳೆಯರ ಜತೆ ಮಲಗಲೂ ಬಲವಂತಪಡಿಸಿದನಲ್ಲದೆ ಅವರನ್ನು ವೇಶ್ಯೆಯರೆಂದು ಸಾರ್ವಜನಿಕವಾಗಿ ಅವಮಾನಪಡಿಸಿದ. ವೇಶ್ಯಾವಾಟಿಕೆಗೂ ಸೇರಿಸಿದ. ಮದುವೆಯಾಗುವುದು, ವಿಚ್ಛೇದಿಸುವುದು ಅವನಿಗೊಂದು ಮಕ್ಕಳಾಟಿಕೆಯಾಗಿತ್ತು. ಇದರ ಮೇಲೆ, ಆ ಹೊತ್ತಿಗಾಗಲೇ ಮೂರು ಮಕ್ಕಳ ತಾಯಿಯಾಗಿದ್ದ ಕೆಸೊನಿಯಾ ಎಂಬ ಪ್ರೇಯಸಿಯೊಬ್ಬಳೂ ಇದ್ದಳು. ಇವಳಲ್ಲಿ ಮಗಳೊಬ್ಬಳು ಜನಿಸಿದ ಮೇಲೆ ಕೆಸೊನಿಯಾಳನ್ನು ಅವನು ಮದುವೆಯಾದುದು. ಈ ಮಗಳಿಗೆ ಜೂಲಿಯಾ ಡ್ರೆಸೂಲಾ ಎಂದು ಹೆಸರಿಟ್ಟ. ಜೂಲಿಯಾ ತನ್ನದೇ ಮಗಳೆಂದು ಅವನಿಗೆ ಖಚಿತವಾದ್ದು ಆಕೆಯೂ ಅವನಂತೆಯೇ ಕ್ರೂರ ವರ್‍ತನೆಗಳನ್ನು ಪದರ್ಶಿಸಲು ಆರಂಭಿಸಿದಾಗ!
ಕಲಿಗುಲನ ಲೈಂಗಿಕ ಅತ್ಯಾಚಾರಗಳಿಗೆ ಮಿತಿಯೇ ಇರಲಿಲ್ಲ. ಊರ ಚೆಲುವೆಯರನ್ನು ಊಟಕ್ಕೆಂದು ಅರಮನೆಗೆ ಕರೆಸಿ, ಅವರಲ್ಲಿ ಬೇಕಾದವಳನ್ನು ಮಲಗುಮನೆಗೆ ತೆಗೆದೊಯ್ಯುತ್ತಿದ್ದ. ಅಷ್ಟೇ ಅಲ್ಲ, ನಂತರ ಅವಳನ್ನು ಕರೆತಂದು ಜನರ ಮುಂದೆ ಅವಳ ಲೈಂಗಿಕ ‘ಗುಣಾವಗುಣ’ಗಳ ವರ್ಣನೆಗಳನ್ನೂ ಮಾಡುತ್ತಿದ್ದ! ಮದುವೆ ಮನೆಗಳಿಗೆ ಹೋಗಿ ಅಲ್ಲಿಂದ ಮದುಮಕ್ಕಳನ್ನು ಅನಾಮತ್ತಾಗಿ ಅರಮನೆಗೆ ಸಾಗಿಸಿ ಅವರನ್ನು ಹಾಳು ಮಾಡುವುದು ಅವನ ಇನ್ನೊಂದು ಖಯಾಲಿಯಾಗಿತ್ತು. ಹೆಂಗಸರ ಜತೆಗಷ್ಟೆ ಅವನು ಸಂಬಂಧ ಇರಿಸಿಕೊಂಡುದೂ ಅಲ್ಲ; ತನಗಿಷ್ಟವಾದ ಗಂಡಸರ ಜತೆಯೂ ಲೈಂಗಿಕವಾಗಿ ಬೆರೆಯುತ್ತಿದ್ದ. ಆದರೂ ಯಾವ ರೀತಿಯಿಂದಲೂ ಕಲಿಗುಲನಿಗೆ ಹತ್ತಿರವಾಗುವುದೆಂದರೆ ಅದು ಯಮಲೋಕಕ್ಕೆ ತಿಕೀಟು ಖರೀದಿಸಿದ ಹಾಗೇ. ಯಾಕೆಂದರೆ ಏನಾದರೂ ನೆಪದಿಂದ ಕಲಿಗುಲ ಇವರ ಜೀವ ತೆಗೆಯುವುದಕ್ಕೆ ಹೇಸುತ್ತಿರಲಿಲ್ಲ. ಕಲಿಗುಲನಿಗೆ ನ್ಯಾಯಾಂಗ ವಿಚಾರಣೆಯಲ್ಲಿ ನಂಬಿಕೆಯೇ ಇರಲಿಲ್ಲ. ಕೈದಿಗಳನ್ನು ಸಾಲಾಗಿ ನಿಲ್ಲಿಸಿ ಮನಬಂದಂತೆ ಶಿಕ್ಷೆ ವಿಧಿಸುತ್ತಿದ್ದ. ಉದಾಹರಣೆಗೆ, ‘ಆ ಬಕ್ಕತಲೆ ಮತ್ತು ಈ ಬಕ್ಕತಲೆಯ ನಡುವಿನ ಎಲ್ಲ ತಲೆಗಳನ್ನೂ ಕಡಿಯಿರಿ!’ ಎನ್ನುವುದು ಅವನ ವಿಧಾನವಾಗಿತ್ತು. ರೋಮನ್ ರಾಜಕೀಯದಲ್ಲಿ ಮುಖ್ಯರಾಗಿದ್ದ ಸೆನೆಟರನ್ನೂ ಅವನು ಬಿಡಲಿಲ್ಲ. ಅವರನ್ನು ತನ್ನ ಕುದುರೆ ಸಾರೋಟಿನ ಹಿಂದೆ ಓಡಿಬರುವಂತೆ ಆಜ್ಞಾಪಿಸುತ್ತಿದ್ದ. ಊರಿನ ಪ್ರತಿಷ್ಠಿತ ಮನೆತನದ ಗಂಡಸರನ್ನು ಗಣಿಕೆಲಸಕ್ಕೆ, ಮಾರ್ಗ ಕೆಲಸಕ್ಕೆ ತಳ್ಳುತ್ತಿದ್ದ, ಇಲ್ಲವೇ ವನ್ಯ ಜೀವಿಗಳಿಗೆ ಆಹಾರವಾಗಿ ನೀಡುತ್ತಿದ್ದ. ಇನ್ನು ಕೆಲವರನ್ನು ಪಂಜರದೊಳಗೆ ಕೂಡಿಹಾಕುತ್ತಿದ್ದ, ಚತುಷ್ಪಾದಿಗಳಂತೆ ನಡೆಯಲು ಹೇಳುತ್ತಿದ್ದ. ಅಥವಾ ಗರಗಸದಿಂದ ಅವರನ್ನು ಇಬ್ಭಾಗ ಮಾಡುತ್ತಿದ್ದ. ಇಷ್ಟಕ್ಕೆಲ್ಲ ಅವರೇನೂ ಮಹಾಪರಾಧ ಮಾಡಿರಬೇಕಾಗಿರಲಿಲ್ಲ, ಏನೋ ಅಂದರು, ನಕ್ಕರು ಎಂಬ ಕ್ಷುಲ್ಲಕ ಕಾರಣಗಳೇ ಸಾಕಾಗಿದ್ದುವು. ತಮ್ಮ ಮಕ್ಕಳನ್ನು ವಧಿಸುವ ಸಂದರ್ಭದಲ್ಲಿ ತಾಯಿತಂದೆಯರು ಹಾಜರಿರಬೇಕೆಂದು ಅಪ್ಪಣೆ ಮಾಡುತ್ತಿದ್ದ. ಹಾಗೂ ಆ ನಂತರ ತನ್ನ ಜತೆ ಭೋಜನದಲ್ಲಿ ಭಾಗವಹಿಸಿ ನಕ್ಕುನಲಿಯಬೇಕೆಂದು ಪೀಡಿಸುತ್ತಿದ್ದ. ಒಮ್ಮೆ ಒಬ್ಬ ಪ್ರಹಸನಕರ್ತೃ ದ್ವಂದ್ವಾರ್ಥದ ಪದ ಉಪಯೋಗಿಸಿದ್ದಕ್ಕೆ ಅವನನ್ನು ಬಯಲು ರಂಗಮಂದಿರದಲ್ಲಿ ಬೆಂಕಿ ಹಾಕಿ ಉರಿಸಲಾಯಿತು. ಯೋಧನೊಬ್ಬನನ್ನು ಕ್ರೂರ ಮೃಗಗಳಿಗೆ ಎಸೆಯುವ ವೇಳೆ, ಆತ ತಾನು ನಿರಪರಾಧಿಯೆಂದು ಕೂಗಿದ್ದಕ್ಕೆ, ಅವನ ನಾಲಗೆಯನ್ನು ಮೊದಲು ಕತ್ತರಿಸಿ ನಂತರ ಅದೇ ಶಿಕ್ಷೆಯನ್ನು ನೀಡಲಾಯಿತು. ಕಲಿಗುಲನಿಗೆ ವನ್ಯಮೃಗಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಇವಕ್ಕೆ ದಿನವೂ ಮಾಂಸ ನೀಡುವುದಕ್ಕೆ ತಗಲುವ ಖರ್ಚನ್ನು ಉಳಿಸುವುದಕ್ಕೆಂದು ಸೆರೆಮನೆಯಲ್ಲಿದ್ದ ಕೈದಿಗಳನ್ನೇ ಆಹಾರವಾಗಿ ಕೊಡುವಂತೆ ವ್ಯವಸ್ಥೆಮಾಡಿದ. ಸುಮ್ಮನೆ ಜನರಿಗೆ ಪಾಠಕಲಿಸಲೆಂದು ಧಾನ್ಯ ದಾಸ್ತಾನುಮಳಿಗೆಗಳನ್ನು ಮುಚ್ಚಿಸಿದ. ವೇಶ್ಯಾವಾಟಿಕೆಗಳನ್ನು ಪ್ರೋತ್ಸಾಹಿಸಿದ. ಅವನ ಕ್ರಿಯೆಗಳು ಎಷ್ಟು ಅಸಹ್ಯವಾಗಿದ್ದುವೋ ಬಾಯಿ ಮಾತೂ ಅಷ್ಟೇ ಕೆಟ್ಟುದಿತ್ತು. ಈ ರೀತಿ ಕಲಿಗುಲನ ಪ್ರವರ ಹೇಳುತ್ತ ಹೋಗಬಹುದು. ಯಾಕೆಂದರೆ ಈ ಪಟ್ಟಿಗೆ ಕೊನೆಯೇ ಇಲ್ಲ.
ಇಂಥ ದುಷ್ಟ ರಾಜನನ್ನು ಜನ ಸಹಿಸಿದರೇ? ಇಲ್ಲ, ನಾಲ್ಕೇ ವರ್ಷಗಳಲ್ಲಿ ಅವನ ಸೇವೆಯಲ್ಲಿದ್ದವರೇ ಇರಿದು ಕೊಂದರು. ಮೊದಲ ಹೊಡೆತಕ್ಕೆ ಕೆಳಗುರುಳಿದ ಕಲಿಗುಲ ಅಲ್ಲಿಂದಲೇ, ‘ನಾನಿನ್ನೂ ಬದುಕಿದ್ದೇನೆ!’ ಎಂದು ಚೀರಿದನಂತೆ. ಆಮೇಲೆ ಮತ್ತೆ ಅವನನ್ನು ತದಕಿದರು. ಅವನ ಜನನಾಂಗಕ್ಕೂ ಇರಿದರು. ಜನರ ಕ್ರೋಧ ಅವರು ಕಲಿಗುಲನ ಪ್ರೇಯಸಿ ಕೆಸೋನಿಯಾಳನ್ನೂ ಹುಡಿಕಿ ಹಿಡಿದು ಹತ್ಯೆಗೈದರು; ಚಿಕ್ಕ ಜೂಲಿಯಾ ಡ್ರಸಿಲಾಳ ಮಿದುಳನ್ನು ಗೋಡೆಗೆ ಅಪ್ಪಳಿಸಿದರು. ಹೀಗೆ ಕಲಿಗುಲನ ಕತೆ ಮುಗಿಯುತ್ತದೆ.
ಆದರೆ ಇದೆಲ್ಲ ನಮಗಿಂದು ನಂಬುವುದಕ್ಕೇ ಕಷ್ಟವಾಗುವ ವಿಷಯ. ಕಾರಣ, ಎರಡು ಸಾವಿರ ವರ್ಷಗಳ ಹಿಂದಿನ ವಾಸ್ತವ ಇಂದು ಕಟ್ಟುಕತೆಯಂತೆ ಅನಿಸಿದರೆ ಅಚ್ಚರಿಯಿಲ್ಲ; ಮಾತ್ರವಲ್ಲ, ರೋಮಿನಂಥ ಪ್ರಸಿದ್ಧ ದೇಶದ ರಾಜನೊಬ್ಬ ಇಷ್ಟೊಂದು ಕ್ರೂರಿಯಾಗಿ ಇದ್ದಿರುವುದು ಸಾಧ್ಯವೇ? ಎಂದು ಸಂದೇಹವೂ ಆಗುವುದು. ಆದರೆ ಕಲಿಗುಲನ ಈ ಎಲ್ಲ ಕರ್ಮಕಥೆಯೂ ನಮಗಿಂದು ದೊರೆತಿರುವುದು ಅವನ ಮರಣಾನಂತರದ ಒಂದು ತಲೆಮಾರಿನೊಳಗಣ ರೋಮನ್ ಇತಿಹಾಸಕಾರ ಸುವೆಟೋನಿಯಸ್ ಬರೆದ ‘ದ್ವಾದಶ ಸೀಸರರು’ ಎಂಬ ಗ್ರಂಥದಲ್ಲಿ. ಈ ಕೃತಿಯಲ್ಲಿ ಸುವೆಟೋನಿಯಸ್ ಜೂಲಿಯಸ್ ಸೀಸರನಿಂದ ಹಿಡಿದು ಡೊಮಿಟಿಯನ್‍ವರೆಗಿನ ಹನ್ನೆರಡು ಮಂದಿ ಸೀಸರರ ಕುರಿತು ಮಾಹಿತಿ ನೀಡಿದ್ದಾನೆ. ಅವನು ಜೂಲಿಯಸ್ ಸೀಸರನ ಬಗ್ಗೆ ಬರೆದುದನ್ನು ನಾವು ನಂಬುವುದಾದರೆ, ಕಲಿಗುಲನ ಕುರಿತು ಬರೆದುದನ್ನು ನಂಬದಿರುವುದಕ್ಕೆ ಯಾವ ಕಾರಣವೂ ಇಲ್ಲ. ನಮಗೆ ನಂಬಲು ಕಷ್ಟವಾಗುವುದು ಸುವೆಟೋನಿಯಸ್‍ನನ್ನಲ್ಲ, ಕಲಿಗುಲನ ಕ್ರೌರ್ಯವನ್ನು.
ಆಧುನಿಕ ಸಾಹಿತ್ಯಾಸಕ್ತರಿಗೆ ಕಲಿಗುಲ ಪರಿಚಯವಾದ್ದು ನೇರವಾಗಿ ಸುವೆಟೋನಿಯಸ್‍ನ ಬರಹದಿಂದಲ್ಲ; ಇಪ್ಪತ್ತನೆಯ ಶತಮಾನದ ಪರಸಿದ್ಧ ಫ್ರೆಂಚ್ ಕಾದಂಬರಿಕಾರ ಅಲ್ಬರ್ಟ್ ಕಮೂ ಬರೆದ ‘ಕಲಿಗುಲ’ ನಾಟಕದಿಂದ. ೧೯೩೮ರಲ್ಲಿ, ದ್ವಿತೀಯ ಮಹಾಯುದ್ಧಕ್ಕೆ ಸ್ವಲ್ಪ ಮೊದಲೇ, ರಚಿತವಾದ ಈ ನಾಟಕ ರಂಗದ ಮೇಲೆ ಬಂದುದು ಯುದ್ಧಾನಂತರ ೧೯೪೫ರಲ್ಲಿ. ಈ ಅವಧಿಯಲ್ಲಿ ಹಿಟ್ಳರ್ ನಡೆಸಿದ ಜನಾಂಗ ಹತ್ಯೆಯ ಕ್ರೌರ್ಯವನ್ನು ಕಮೂವಿನ ನಾಟಕ ಯಾವುದೋ ಕಾಲಜ್ಞಾನದಲ್ಲಿ ಒಳಗೊಂಡಂತೆ ನಮಗೆ ಕಂಡರೆ ಆಶ್ಚರ್ಯವಿಲ್ಲ. ಕಲಿಗುಲನ ಕುರಿತಾದ ವಸ್ತುವಿವರಗಳಿಗೆ ಕಮೂ ಸುವೆಟೋನಿಯಸ್‍ನ ಮೂಲವನ್ನೇ ಸಂಪೂರ್ಣವಾಗಿ ಆಧರಿಸುತ್ತಾನಾದರೂ, ಕಮೂವಿನ ಕಲಿಗುಲ ಶುದ್ಧಾಂಗ ಅಸ್ತಿತ್ವವಾದಿ ಅಸಂಗತ ನಾಯಕ! ಅರ್ಥಾತ್ ಕಲಿಗುಲ ಇಲ್ಲಿ ‘ಅಸಂಗತ’ ತತ್ವಗಳ ಆದಿಮ ಪ್ರತಿಪಾದಕನಂತೆ ಮೂಡಿಬರುತ್ತಾನೆ. ನಾಟಕ ಆರಂಭವಾಗುವುದು ಡ್ರೂಸಿಲಾಳ ಸಾವಿನಿಂದ. ಇದರಿಂದ ಆಘಾತಗೊಂಡ ಕಲಿಗುಲ ಕೆಲವು ದಿನ ಯಾರಿಗೂ ಹೇಳದೆ ಬರಿಗಾಲಲ್ಲಿ ಊರೂರು ಅಲೆದು ಅರಮನೆಗೆ ಮರಳುತ್ತಾನೆ. ಕಮೂವಿನ ಪ್ರಕಾರ, ಕಲಿಗುಲ ಪ್ರೀತಿಸುತ್ತಿದ್ದ ಈ ತನ್ನ ಸೋದರಿ-ಪ್ರಿಯೆಯ ಅಕಾಲಿಕ ಮರಣವೇ ಅವನ ವರ್ತನೆಯನ್ನು ತಿರುಚಿದ್ದು. ಹೀಗೆ ಮರಳಿದ ಕಲಿಗುಲ ತಾನು ಸತ್ಯವನ್ನು ಕಂಡುಕೊಂಡೆ ಎನ್ನುತ್ತಾನೆ. ಏನೀ ಸತ್ಯ? ‘ಮನುಷ್ಯರು ಸಾಯುತ್ತಾರೆ ಹಾಗೂ ಅವರು ಅಸುಖಿಗಳು’ ಎನ್ನುವುದೇ ಅವನು ‘ಕಂಡುಕೊಂಡ’ ಸತ್ಯ. ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಕಂಡುಕೊಂಡ ಸತ್ಯಕ್ಕೆ ಸರಿಸಮನಾದ ಸತ್ಯ ಇದಾದರೂ, ಗೌತಮನ ಸತ್ಯ ಗೌತಮನನ್ನು ಬುದ್ಧನನ್ನಾಗಿ ಮಾಡಿದರೆ, ಕಲಿಗುಲನ ‘ಸತ್ಯ’ ಕಲಿಗುಲನನ್ನು ಅತ್ಯಂತ ಕ್ರೂರ ನಿರಂಕುಶಮತಿಯನ್ನಾಗಿ ಮಾಡುವುದು ಬಹು ದೊಡ್ಡ ವಿಪರ್ಯಾಸ. ‘ನನಗಾದ್ದು ಸರಳ ಸಂಗತಿ; ಫಕ್ಕನೆ ನನಗೆ ಅಸಾಧ್ಯವಾದ್ದರ ಬಯಕೆ ಉಂಟಾಯಿತು. ಅಷ್ಟೇ. ಸಂಗತಿಗಳು, ಈಗಿರುವಂತೆ, ನನ್ನ ಅಭಿಪ್ರಾಯದಲ್ಲಿ ತೃಪ್ತಿಕರವಾಗಿಲ್ಲ’ ಎನ್ನುತ್ತಾನೆ. ‘ನಾನು ಅಸಾಧ್ಯತೆಯನ್ನು ಉಪಯೋಗಿಸಿಕೊಳ್ಳುತ್ತೇನೆ…. ಎಂದರೆ ಅಸಾಧ್ಯವನ್ನು ಸಾಧ್ಯಗೊಳಿಸುವುದು,’ ಎಂದು ತನ್ನ ಕಾರ್ಯಕ್ರಮವನ್ನು ಘೋಷಿಸುತ್ತಾನೆ. ಯಾರೋ ತನ್ನನ್ನು ದೇವರಿಗೆ ಹೋಲಿಸಿದಾಗ ಕಲಿಗುಲ ಅಸಹನೆಯಿಂದ, ‘ದೇವರಿಗೆ ನಾನು ಸಮನಾಗಬಯಸಲು ಈ ದೇವರಾದರೂ ಯಾರು? ಇಲ್ಲ, ನಾನು ಉದ್ಧೇಶಿಸುವುದು, ಮನಃಪೂರ್ವಕ ಬಯಸುವುದು, ದೇವರುಗಳಿಗಿಂತಲೂ ಬಹಳ ಉನ್ನತವಾದುದು. ನಾನು ಮಾತಾಡುತ್ತಿರುವುದು ಅಸಾಧ್ಯತೆಯೇ ರಾಜನಾಗಿರುವ ರಾಜ್ಯದ ಬಗ್ಗೆ’,
ಎನ್ನುತ್ತಾನೆ.
ಬಾಯಿ ತೆರೆದರೆ ಕಮೂವಿನ ಕಲಿಗುಲ ಅಸ್ತಿತ್ವವಾದೀ ತತ್ವಗಳನ್ನು ಅಣಿಮುತ್ತುಗಳಂತೆ ಉದುರಿಸುತ್ತಾನೆ. ‘ಈ ಜಗತ್ತಿಗೆ ಪ್ರಾಧಾನ್ಯತೆಯಿಲ್ಲ; ಒಮ್ಮೆ ಮನುಷ್ಯನಿಗಿದು ಗೊತ್ತಾದರೆ, ಅವನು ತನ್ನ ಸ್ವಾತಂತ್ರ್ಯ ಗಳಿಸಿಕೊಳ್ಳುತ್ತಾನೆ.’ ಎಂಬ ಅಸ್ತಿತ್ವವಾದಿಗಳಿಗೆ ಪ್ರಿಯವಾದ ಮಾತನ್ನು ಆಡುತ್ತಾನೆ. ‘ನ್ಯಾಯಾಧಿಪತಿಯಿಲ್ಲದ, ಯಾರೂ ಮುಗ್ಧರಾಗಿಲ್ಲದ ಜಗತ್ತಿನಲ್ಲಿ ನನ್ನನ್ನು ತೀರ್ಮಾನಿಸುವವರು ಯಾರು?’ ಎಂಬ ಅಸಂಗತವಾದಿಗಳ ಸವಾಲನ್ನು ಎಸೆಯುತ್ತಾನೆ. ಇದನ್ನೆಲ್ಲ ಕೇಳಿದರೆ, ಕಲಿಗುಲನೆಂದರೆ ನಾವೆಲ್ಲ ತಪ್ಪು ತಿಳಿದಂಥ ಒಬ್ಬ ಪ್ರವಾದಿಯಂತೆ ಕಾಣಿಸುತ್ತಾನೆ; ಹಾಗೂ ನಾವಾದರೂ ಯಾಕೆ ಇಲ್ಲದ ಸತ್ಯ ನ್ಯಯಧರ್ಮ ಮುಂತಾದ ಮೌಲ್ಯಗಳಲ್ಲಿ ನಂಬಿಕೆಯಿರಿಸಿಕೊಂಡು, ಸ್ವಾತಂತ್ರ್ಯವಂಚಿತರಾಗಿರಬೇಕು ಎಂದು ಆಶ್ಚರ್ಯವೆನಿಸುತ್ತದೆ. ಪ್ರತಿಯೊಬ್ಬನೂ ಕಲಿಗುಲನಂತೆಯೇ ಅಸಾಧ್ಯತೆಯ ಬೆನ್ನುಹತ್ತಿದರೆ ಒಳಿತಲ್ಲವೇ? ಆಮೇಲೆ ಅತ್ಯಾಚಾರ, ಅನ್ಯಾಯ, ಕೌರ್ಯ, ಹಿಂಸೆ ಮುಂತಾದ ಕಲ್ಪನೆಗಳಿಗೆ ಆಧಾರವೇ ಇರುವುದಿಲ್ಲ. ಈ ನಿಟ್ಟಿನಿಂದ ಕಲಿಗುಲನ ಪ್ರತಿಯೊಂದು ಕೃತ್ಯವೂ ತರ್ಕಬದ್ಧವಾದ್ದೇ; ಅವನು ನಡೆಸಿದ ಅಗಮ್ಯಗಮನವಾಗಲಿ, ಯಾವುದೇ ತರದ ಹಿಂಸಾಚಾರವಾಗಲಿ ಅಸಾಧ್ಯವಾದ್ದರ ಉಪಯೋಗವೇ ಸರಿ.
ಆದರೂ ಯಾಕೆ ಎಲ್ಲರೂ ಹೀಗೆ ಮಾಡುವುದಿಲ್ಲ? ಯಾಕೆಂದರೆ ಸಾಮಾನ್ಯ ಜನರು ಮೂರ್ಖರು ಮತ್ತು ಹೇಡಿಗಳು ಎನ್ನುತ್ತಾನೆ ಕಲಿಗುಲ. ಅವರಿಗೆ ಬುದ್ಧಿಕಲಿಸುವುದಕ್ಕೆಂದೇ ತಾನು ಹುಟ್ಟಬಂದುದು ಎಂಬ ಧಾರ್ಷ್ಟ್ಯ ಕೂಡಾ ಅವನಲ್ಲಿದೆ. ಆದ್ದರಿಂದಲೇ ತಾನು ಯಾರನ್ನು ಬಲಿಪಶುಗಳಾಗಿ ಮಾಡುತ್ತಾನೋ ಅದಕ್ಕೆ ಆಯಾ ಬಲಿಪಶುಗಳೇ ಕಾರಣವೆಂಬ ವಾದವನ್ನು ಮುಂದೊಡ್ಡುತ್ತಾನೆ. ಇದೂ ಕಮೂವಿಗೆ ಅಸ್ತಿತ್ವವಾದದಿಂದಲೇ ದೊರೆತ ತತ್ವ. ಯಾಕೆಂದರೆ, ಅಸ್ತಿತ್ವವಾದದ ಪ್ರಕಾರ ಪ್ರತಿಯೊಬ್ಬ ಮನುಷ್ಯನೂ ತನ್ನ ವಿಧಿಗೆ ತಾನೇ ಹೊಣೆಯಾಗುತ್ತಾನೆ. ‘ನೀನು ಯಾಕೆ ಬಲಿಪಶುವಾದಿ?’ ಎಂದು ನಾವು ಬಲಿಪಶುವನ್ನೇ ವಿಚಾರಿಸುವಂತೆ. ಇನ್ನೊಂದೆಡೆ ಕಮೂ, ಪ್ರತಿಯೊಬ್ಬ ಮನುಷ್ಯನೂ ತನ್ನ ಮುಖಕ್ಕೆ ತಾನೇ ಹೊಣೆಯಾಗಿರುತ್ತಾನೆ ಎಂದು ಹೇಳಿದ ಮಾತನ್ನೂ ಇಲ್ಲಿ ನೆನಪಿಸಕೊಳ್ಳಬಹುದು. ಕಲಿಗುಲನ ಸಂದರ್ಭದಲ್ಲಿ ಇದರರ್ಥ, ಬಲಿಪಶುವನ್ನೇ ಮತ್ತೆ ಬಲಿಪಶುವಾಗಿ ಮಾಡುವುದು ಎಂಬುದಾಗಿ. ಅತ್ಯಾಚಾರಕ್ಕೆ ಒಳಗಾದ ಹೆಂಗಸನ್ನು ನಾವು ಅದಕ್ಕೆ ಅವಳೇ ಹೊಣೆಯೆಂದು ದೂಷಿಸುವ ಹಾಗೆ!
ಆದರೆ ಕಮೂವಿನ ನಾಟಕವನ್ನು ಈ ರೀತಿ ಓದುವುದು ಸರಿಯಲ್ಲ. ಯಾಕೆಂದರೆ, ಮುಂದೆ ಕಲಿಗುಲನನ್ನು ಕೊಲೆಗೈಯುವಾತನ ಬಾಯಲ್ಲಿ ಕಮೂ, ‘ಪ್ರಾಣ ಕಳೆದುಕೊಳ್ಳುವುದು ದೊಡ್ದ ಸಂಗತಿಯಲ್ಲ; ಸಮಯ ಬಂದಾಗ ನಾನು ನನ್ನದನ್ನು ಕಳೆದುಕೊಳ್ಳುವ ಧ್ಯೆರ್ಯ ಮಾಡುವೆ. ಆದರೆ ಅಸಹನೀಯವಾದ್ದೆಂದರೆ, ಬದುಕಿನಿಂದ ಅದರ ಅರ್ಥವನ್ನು ಬಸಿದುಬಿಡುವುದು, ಬದುಕಿರುವುದಕ್ಕೆ ಯಾವ ಕಾರಣವೂ ಇಲ್ಲ ಎಂದು ಉಪದೇಶಿಸಲ್ಪಡುವುದು. ‘ಕಾರಣವಿಲ್ಲದೆ ಮನುಷ್ಯ ಬದುಕಲಾರ’ ಎಂದು ಹೇಳಿಸುತ್ತಾನೆ. ಸಾಯುವ ಕಾಲದಲ್ಲಿ ಕಲಿಗುಲ, ‘ಇನ್ನೊಬ್ಬರಿಗೆ ವಿರುದ್ಧವಾಗಿ ಯಾರೂ ಸ್ವತಂತ್ರನಾಗಲಾರರು,’ ಎಂಬ ಅರಿವಿನ ಮಾತನ್ನೂ ನುಡಿಯುತ್ತಾನೆ. ಅಸಂಗತ ಕಾಯಿಲೆಗೆ ಇದೊಂದು ಅಲ್ಪಪ್ರಮಾಣದ ಪತ್ಯೌಷಧ ಎನ್ನಬಹುದು. ಆದ್ದರಿಂದ, ನಾಟಕದ ಕೊನೆಯಲ್ಲಿ ಕಲಿಗುಲ ‘ನಾನಿನ್ನೂ ಬದುಕಿದ್ದೇನೆ!’ ಎಂದು ಚೀರುವುದನ್ನು ಮನುಕುಲಕ್ಕೆ ಅವನು ನೀಡುವ ಕಾಲಾತೀತ ಎಚ್ಚರಿಕೆಯೆಂಬಂತೆ ನಾವು ತೆಗೆದುಕೊಳ್ಳಬೇಕಾಗುತ್ತದೆ.
*****