‘ಚಿಕವೀರರಾಜೇಂದ್ರ’ದ ಕೆಲವು ಪೇಚುಗಳು

‘ಚಿಕವೀರರಾಜೇಂದ್ರ’ದ ಕೆಲವು ಪೇಚುಗಳು

‘ಚಿಕವೀರರಾಜೇಂದ್ರ’ ಮಾಸ್ತಿಯವರ ಎರಡನೆಯ ಮತ್ತು ಕೊನೆಯ ಚಾರಿತ್ರಿಕ ಕಾದಂಬರಿ. ‘ಚಿಕವೀರರಾಜೇಂದ್ರ’ ಕೆಲವು ಕಾರಣಗಳಿಂದ ವಿಶಿಷ್ಟವೂ, ಬಹುಚರ್ಚಿತವೂ ಆಗಿದೆ. ಜ್ಞಾನಪೀಠ ಪ್ರಶಸ್ತಿ ಬಂದ ಕಾರಣಕ್ಕಾಗಿಯೆ ಈ ಕಾದಂಬರಿಯ ಪರಿಶೀಲನೆ ಅರ್ಥಪೂರ್ಣವೆನಿಸುವುದು. ಕಾದಂಬರಿಯ ಕಥಾವಸ್ತು, ಪಾತ್ರ ಚಿತ್ರಣ, ಚಾರಿತ್ರಿಕ ಅಂಶಗಳನ್ನು ಹೆಚ್ಚಿನ ಜಿಜ್ಞಾಸೆಗೆ ಒಳಪಡಿಸಿದಾಗ ಎದುರಾಗುವ ಸಮಸ್ಯೆಗಳು ಈ ಕಾದಂಬರಿಯ ಕುರಿತಾದ ವಿವಾದಕ್ಕೆ ಮುಖ್ಯ ಹೇತುಗಳಾಗಿವೆ. ಕನ್ನಡನಾಡಿನ ಒಂದು ರಾಜ್ಯದ ಪತನಕ್ಕೆ ರಾಜನ ದುಷ್ಟತನ ಕಾರಣವಾಗುವ ಪರಿಸ್ಥಿತಿಯನ್ನು ಚಿತ್ರಿಸುವಲ್ಲಿ ಮಾಸ್ತಿಯವರು ಯಾವ ಮನೋಧರ್ಮವನ್ನು ತೋರಿಸಿದ್ದಾರೆ ಎಂಬುದನ್ನು ತಿಳಿಯುವುದು ಅಗತ್ಯವಿದೆ. ಪ್ರಶಸ್ತಿ ಬಂದ ಮೇಲೆ ಅನೇಕ ವಿಮರ್ಶಕರು ಚಿಕವೀರರಾಜೇಂದ್ರದ ಹಲವಾರು ಮಗ್ಗಲುಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಕಾದಂಬರಿಯ ಸಫಲತೆ ವಿಫಲತೆಗಳನ್ನು ಶೋಧಿಸಿದ್ದಾರೆ. ಹೊಸ ಹೊಸ ಅನ್ವೇಷಣೆಗಳಿಂದ ಕಾದಂಬರಿಯ ಮೌಲ್ಯಮಾಪನ ಮಾಡಿದ್ದಾರೆ. ಕಟು ವಿಮರ್ಶೆಗೆ ಗುರಿಪಡಿಸಿ ಮಾಸ್ತಿಯವರ ಸಾಹಿತ್ಯನಿಷ್ಠೆ ಮತ್ತು ಪ್ರೇಮವನ್ನು ಪ್ರಶ್ನಿಸಿದ್ದಾರೆ. ‘ನಿಜಕ್ಕೂ ಮಾಸ್ತಿಯವರು ಎಷ್ಟರಮಟ್ಟಿಗೆ ಕನ್ನಡದ ಅಸಲಿ ಆಸ್ತಿ’ ಎಂದು ಸಂಶಯ ವ್ಯಕ್ತ ಪಡಿಸಿದ್ದಾರೆ. ತಮಿಳು ತಾಯಿ ಭಾಷೆಯ ಮಾಸ್ತಿ, ಕನ್ನಡದ ಅರಸನ ಕೆಟ್ಟತನವನ್ನೆಲ್ಲ ಕನ್ನಡ ಭಾಷೆಯಲ್ಲಿಯೇ ಕಾದಂಬರಿ ರೂಪದಲ್ಲಿ ಬರೆದು ಪ್ರಕಟಿಸಿರುವುದು ಅವರ ಉಂಡ ಮನೆಯ ಜಂತಿ ಎಣಿಸುವ ಮನೋವೃತ್ತಿ ಎಂಬುದಾಗಿ ಹೀನೈಸಿದ್ದಾರೆ. ಗುಣಾವಗುಣಗಳನ್ನು ಎತ್ತಿ ತೋರಿಸುವ ಸಮತೋಲ ವಿಮರ್ಶೆಗಳೊಂದಿಗೆ ಹೊಗಳಿಕೆಯ ಶಿಖರಕ್ಕೇರಿಸಿಟ್ಟ ಅಭಿಪ್ರಾಯಗಳೂ ‘ಚಿಕವೀರರಾಜೇಂದ್ರ’ದ ಕುರಿತು ಬಂದಿವೆ.

ಇಡೀ ಕೊಡಗುದೇಶದ ಪತನದ ಧ್ವನಿ ಕಾದಂಬರಿಯ ಮೊದಲ ಪುಟಗಳಿಂದಲೇ ಓದುಗನ ಗ್ರಹಣಕ್ಕೆ ಬರುವಂತೆ ಎಚ್ಚರಿಕೆಯಿಂದ ಸನ್ನಿವೇಶಗಳನ್ನು ಬೆಳೆಸಲಾಗಿದೆ. ‘Coming events cast their shadows before’ ಎಂದು ಶೇಕ್ಸ್‌ಪೀಯರನ ನಾಟಕ ಸಂವಿಧಾನದ ಕುರಿತು ಆಂಗ್ಲ ವಿಮರ್ಶಕರು ಹೇಳುವಂತೆ ಅವನ ದಟ್ಟ ಪ್ರಭಾವ ಬಿದ್ದ ಮಾಸ್ತಿಯವರ ಕಾದಂಬರಿಯಲ್ಲಿಯೂ ಈ ಎಲಿಮೆಂಟನ್ನು ನಾವು ಕಾಣಬಹುದಾಗಿದೆ. ಸ್ವಲ್ಪ ಕಿಂಗ ಲೀಯರ್ (ಲೀಯರ್ ಮಹಾರಾಜ ಎಂಬುದಾಗಿ ಕಿಂಗಲೀಯರನ್ನು ಮಾಸ್ತಿಯವರು ಅನುವಾದ ಮಾಡಿದ್ದಾರೆ.) ಸ್ವಲ್ಪ ಒಥೆಲ್ಲೊ ನಾಟಕಗಳ ವರ್ಚಸ್ಸು ಈ ಕಾದಂಬರಿಯ ಒಂದಲ್ಲ ಒಂದೆಡೆಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಕಾದಂಬರಿಯ ಅರಂಭದ ಪುಟಗಳಲ್ಲಿ ಬರುವ ಚಿಕವೀರನ ಕ್ರೌರ್ಯವನ್ನು ತೋರಿಸುವ ದೃಶ್ಯ ಮುಂದೆ ಕಥೆಯಲ್ಲಿ ಆಗಬಹುದಾದ ದುರಂತದ ಸ್ಪಷ್ಟ ಕಲ್ಪನೆಯನ್ನು ಮಾಡಿಕೊಡುತ್ತದೆ. ಅರಸ ತನ್ನ ಸ್ವಂತ ತಂಗಿ ದೇವಮ್ಮಾಜಿಯನ್ನು ಮಂತ್ರಿ ಕುಂಟಬಸವನ ತೊಡೆಯ ಮೇಲೆ ಕೂಡಲು ಆಜ್ಞಾಪಿಸಿದ್ದು. ಬಸವನು ಅರಸನ ಆಜ್ಞೆಯನ್ನು ಮನ್ನಿಸಿ ದೇವಮ್ಮಾಜಿಯನ್ನು ತನ್ನ ತೊಡೆಯ ಮೇಲೆ ಕೂಡಿಸಿ ಎದೆಯ ಮೇಲೆ ಕೈಯಾಡಿಸುವಾಗ ತಂಗಿಯ ಅವಹೇಳನಕ್ಕೆ ಸಂತೋಷಪಡುವುದು ಯಾವುದೇ ಇತಿಹಾಸದಲ್ಲಿ ಇರಲಾರದು. ಆದರೆ ಕಥೆಯ ಬೆಳವಣಿಗೆಯಲ್ಲಿ ದುರಂತದ ಛಾಯೆ ಅಡಗಿ ಕೊಂಡಿರುವುದಕ್ಕೆ ಇದು ಉದಾಹರಣೆಯಾಗಿದೆ. ಮಾಸ್ತಿಯವರು ಕಾದಂಬರಿಯ ದುರಂತದ ಸ್ವಭಾವ (nature)ವನ್ನು ಆರಂಭದಲ್ಲಿಯೆ ಸೂಚಿಸುವ ಸಲುವಾಗಿ ಈ ರೀತಿಯ ಸನ್ನಿವೇಶಗಳನ್ನು ಸೃಷ್ಟಿಸಿರಬಹುದು.

ಕಾದಂಬರಿಯ ಉದ್ದಕ್ಕೂ ಚಿತ್ರಿತವಾಗಿರುವುದು ಕೊಡಗು ಸಾಮ್ರಾಜ್ಯದ ಪತನಕ್ಕೆ ಚಿಕವೀರನ ದಾಷ್ಟ್ರ ಮತ್ತು ವಿಷಯ ಲಂಪಟತನವೆಂಬುದು ಕಾದಂಬರಿಕಾರರ ನಿಶ್ಚಿತ ಧೋರಣೆ. ಅದಕ್ಕಾಗಿಯೆ ಅರಸನ ೧೪ ವರ್ಷಗಳ ರಾಜ್ಯಭಾರದ ವಿವರಗಳನ್ನು ಕೊಡದೆ ಕೊನೆಯ ಒಂದು ವರ್ಷದ ಕಾಲದಲ್ಲಿ ಸಾಮ್ರಾಜ್ಯವು ರಭಸದಿಂದ ಆರ್ಥಿಕ, ನೈತಿಕ ಮಟ್ಟದಿಂದ ಕುಸಿಯಲು ಕಾರಣವಾದ ಸಂಗತಿಗಳನ್ನು ವಿವರಿಸಿದ್ದಾರೆ. ಭಾರತೀಯ ಸಾಮ್ರಾಜ್ಯ ಶಾಹಿಯ ಸಂದರ್ಭದಲ್ಲಿ ಆಳರಸರ ಸುಖಲೋಲುಪತೆ, ನೈತಿಕ ದೌರ್‍ಬಲ್ಯ, ಚರಿತ್ರ ಹೀನತೆ ಮತ್ತು ಅಂತಃಕಲಹಗಳಿಂದ ರಾಜ್ಯಗಳು ಬೀಳಲು ಕಾರಣವಾದುದು ಐತಿಹಾಸಿಕ ಸತ್ಯ. ಮರಾಠಿಯ ಬಾಜಿರಾವ ಮಸ್ತಾನಿ, ಸ್ವಾಮಿ ಮೊದಲಾದ ಕಾದಂಬರಿಗಳನ್ನು ನೋಡಬಹುದು. ಕರ್ನಾಟಕ ಹಾಗೂ ದಕ್ಷಿಣ ಪ್ರದೇಶಗಳ ಬಿಡಿರಾಜ್ಯಗಳು ಹೊರಗಿನ ಶಕ್ತಿಗಳಿಗೆ ವಶವಾಗಿ ತಮ್ಮ ಅಸ್ತಿತ್ವವನ್ನು ಕಳಕೊಂಡ ಇತಿಹಾಸದ ಪುಟಗಳಲ್ಲಿದೆ. ಮೈಸೂರು, ಬಿದನೂರು, ಕೊಡಗು ಮುಂತಾದವು ಟಿಪ್ಪುಸುಲ್ತಾನ ಹೈದರ್, ಬ್ರಿಟಿಷರ ವಶವಾದ ಬಗೆಯೂ ಇದುವೆ ಆಗಿದೆ. ಈಸ್ಟ್‌ ಇಂಡಿಯಾ ಕಂಪೆನಿಯವರು ಒಂದೊಂದೇ ರಾಜ್ಯಕ್ಕೆ `Doctrine of Lapse’ ತತ್ವವನ್ನು ಉಪಯೋಗಿಸಿ ತಮ್ಮ ಸತ್ತೆಯನ್ನು ಸ್ಥಾಪಿಸಲು ದೇಶದ ಅನೇಕ ದುರ್ಬಲ ದೊರೆಗಳೇ ಕಾರಣರಾದರು. ಇಂಥಾದ್ದರಲ್ಲಿ ಚಿಕವೀರ ಹಲವು ಪ್ರತಿಕೂಲ ಪರಿಸ್ಥಿತಿಯೊಂದಿಗೆ ಸಂಘರ್ಷ ಮಾಡಬೇಕಾಗಿತ್ತು. ಅಷ್ಟು ದಕ್ಷತೆ ಮತ್ತು ಅನುಕೂಲ ವಾತಾವರಣ ಸಹಜವಾಗಿ ಅವನಿಗೆ ಅನುವಾಗದ ಕಾರಣ ಅವನು ದೊರೆಯಾಗಿ ಉಳಿಯುವುದು ಸಾಧ್ಯವಿರಲಿಲ್ಲ. ಅದಕ್ಕಾಗಿ ಅವನನ್ನು ದುಷ್ಟನನ್ನಾಗಿ, ಕ್ರೂರ (Sadist) ಲಂಪಟನನ್ನಾಗಿ ಚಿತ್ರಿಸುವುದು ಬಹುಶ ಅನಿವಾರ್ಯವಾಗಿತ್ತು. ಸಾಹಿತಿಗೆ ಕಲ್ಪನಾ ಸ್ವಾತಂತ್ರ್ಯವಿದೆ. ಇತಿಹಾಸದ ವಾಸ್ತವಕ್ಕೆ ಅವನು ತನ್ನ ಕಲ್ಪನಾ ಶಕ್ತಿಯಿಂದ ಬೇರೆ ಸ್ವರೂಪವನ್ನು ಕೊಡಬಲ್ಲ. ಎಲ್ಲ ಪಾತ್ರಗಳ ಮನೋವ್ಯಾಪಾರ. ಎಲ್ಲ ಅನುಭವಗಳ ಪರಿಚಯ ತನಗಿದೆ ಎಂದು ಅವನು ತಿಳಿದಿರುತ್ತಾನೆ. ಅವನು ಕೃತಿಯಲ್ಲಿ ಬಳಸುತ್ತಾನೆ. ಚಿಕವೀರ ಹೀಗೆ ಇತಿಹಾಸದ ವ್ಯಕ್ತಿಯಾಗಿದ್ದು ಮಾಸ್ತಿಯವರ ಕಾದಂಬರಿಯ ಪಾತ್ರವಾಗಿ ಸೃಷ್ಟಿಯಾಗಿದ್ದಾನೆ. ಭಯಂಕರ ದುಷ್ಟನಾಗಿದ್ದಾನೆ. ಕೊಡಗಿನ ವಿನಾಶಕ್ಕೆ ಕಾರಣನಾಗುತ್ತಾನೆ. ಪರಿಸ್ಥಿತಿಯ ದಾಸನಾಗುವ ಬದಲು ತನ್ನ ದುಷ್ಟಮನಗಳ ವಶನಾಗುತ್ತಾನೆ. ಕ್ರೌರ್ಯ ಮನುಪ್ಯನ ಮೂಲ ಪ್ರವೃತ್ತಿಯಾಗಿದೆ. ಇದರ ಅಂಶ ವ್ಯಕ್ತಿಯ ಸಂಸ್ಕಾರ ಮತ್ತು ಪರಿಸರಕ್ಕೆ ಅನುಗುಣವಾದ ಪ್ರಮಾಣದಲ್ಲಿರುತ್ತದೆ. ಇದಕ್ಕೆ ಉತ್ತೇಜನ ಕೊಡುವ ಪರಿಸ್ಥಿತಿ. ಕ್ರಿಯೆಗಳಿಗೆ ಅನುಕೂಲವಾಗುವಂತೆ ಅದರ ಕ್ರಿಯಾಶಕ್ತಿ ಬಲಪಡೆಯುತ್ತದೆ. ಉತ್ತೇಜನ ಕೊಡುವ ಮೂರು ಅವಸ್ಥೆಗಳನ್ನು ಇಲ್ಲಿ ಗುರುತಿಸಬಹುದು.

೧. ಹುಟ್ಟು-ಅನುವಂಶಿಕ ಪ್ರವೃತ್ತಿ
೨. ಸಹವಾಸ-ಆವರಣದ ಸಂಸ್ಕಾರ
೩. ಅಧಿಕಾರ ಮತ್ತು ಸಂಪತ್ತಿನ ಮದ

ಚಿಕವೀರ ಕಾದಂಬರಿಯ ಪ್ರಧಾನ ಪಾತ್ರ ಅವನು ಒಂದು ಲೆಕ್ಕದಲ್ಲಿ ಐತಿಹಾಸಿಕ ವ್ಯಕ್ತಿಗಿಂತಲೂ ಕಾದಂಬರಿಯ ದುರಂತ ನಾಯಕನಾಗಿದ್ದಾನೆ. ಅವನು ಬ್ರಿಟಿಶರಿಗೆ ಶರಣಾಗತನಾಗುವುದು. ಮಗಳು ಕ್ರಿಶ್ಚನ್ ಆಗಿ ಇಂಗ್ಲೆಂಡಿಗೆ ಹೋಗುವುದು ಅವನ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ನಾಟಕೀಯ ಸೋಲು. ಅವನ ಅಧಃಪತನದ ಕತೆಯೇ ಕಾದಂಬರಿಯ ಕೇಂದ್ರ ಬಿಂದುವಾಗಿದೆ. ಅವನ ಕ್ರೌರ್ಯ ಕೊಡಗನ್ನು ನುಂಗುತ್ತದೆ. ಅವನು ಕ್ರೌರ್ಯಕ್ಕೆ ವಶನಾದ ಪರಿಸ್ಥಿತಿಯನ್ನು ಸ್ವಲ್ಪ ತಿಳಿದುಕೊಳ್ಳುವ ಅಗತ್ಯವಿದೆ. ಹುಟ್ಟಿನಿಂದಲೇ ಒಬ್ಬನು ಪಡೆದುಕೊಂಡು ಬರುವ ಪ್ರವೃತ್ತಿ ಅವನ ಸ್ವಭಾವವನ್ನು ರೂಪಿಸುತ್ತದೆ. ಚಿಕವೀರನ ತಂದೆ ಲಿಂಗರಾಜ ನೀಚನೂ ಲಂಪಟನೂ ಆಗಿದ್ದು ಕ್ರೂರಿಯಾಗಿದ್ದ. ಅವನ ಹಾದರಕ್ಕೆ ಹುಟ್ಟಿದ ಮಗನೇ ಕುಂಟಬಸವ. ಮಗುವಿದ್ದಾಗಲೇ ಅವನ ಕಾಲು ಮುರುಟಿ ನಾಯಿಗಳ ಜೊತೆ ಬದುಕಲು ಎಸೆದಿದ್ದ. ಲಿಂಗರಾಜನ ತಂದೆಯೂ ದುಷ್ಟನೇ ಆಗಿದ್ದ ಎಂಬ ಸೂಚನೆ ಕಾದಂಬರಿಯಲ್ಲಿ ಸಿಗುತ್ತದೆ. ಈ ಸಂಸ್ಕಾರವನ್ನು ಪಡೆದು ಹುಟ್ಟಿದ ಚಿಕವೀರನ ದುರ್ಗುಣಗಳು ಹಾಸು ಹೊಕ್ಕಿವೆ. ಅವುಗಳ ಪರಿಷ್ಕಾರ ಬಹುಶ ನಿರ್ಮಲ ಮತ್ತು ಸುಸಂಸ್ಕೃತ ಆವರಣದಲ್ಲಿ ಆಗಲು ಸಾಧ್ಯವಿತ್ತು. ಅದರೆ ಲಿಂಗರಾಜನ ಹಾದರಕ್ಕೆ ಹುಟ್ಟಿದ ಮಗನ ರೂಪದಲ್ಲಿ ಕೆಟ್ಟ ಪರಿಸರದಲ್ಲಿ ಬೆಳೆದ ಬಸವನ ಗೆಳೆತನ ಅವನಿಗೆ ಲಭಿಸಿತು. ‘ವೀರರಾಜ ಹುಟ್ಟಿನಿಂದಲೇ ದುಷ್ಟನೇನೂ ಅಲ್ಲ’ ಎಂದು ಮಾಸ್ತಿಯವರು ಹೇಳುವ ಮಾತು ಇಲ್ಲಿ ಅರ್ಥಕಳಕೊಳ್ಳುತ್ತದೆ. ರಕ್ತದಲ್ಲಿಯೆ ಹರಿಯುತ್ತಿದ್ದ ಕೇಡುಗತನದ ಪ್ರವಾಹ ಅವನ ಬಾಲ್ಯ, ಯೌವನವನ್ನು ನಿರ್ದೇಶಿಸಿರಬೇಕು. ಬಸವನ ಸಂಪರ್ಕ ಮತ್ತು ತಾನು ದೊರೆಯಾದ ನಂತರ ಪಡಕೊಂಡ ಸ್ವಾಮಿಭಕ್ತಿಯ ರೂಪದ ಸೇವೆ ಚಿಕವೀರನ ಜೀವನ ಮಾರ್ಗವನ್ನು ಸಂಪೂರ್ಣವಾಗಿ ದಿಕ್ಕುಗೆಡಿಸಿತು. ಅವನ ಹಿರಿಯರಿಂದ ಬಳುವಳಿಯಾಗಿ ಬಂದ ದಾರ್ಷ್ಟ್ಯದ ಅಂಶ ಅವನ ಹುಟ್ಟಿನ ಜೊತೆಗೆ ಇದ್ದುದರಿಂದ ಅವನು ಹುಟ್ಟಿನಿಂದಲೇ ದುಷ್ಟನಲ್ಲ ಎನ್ನುವುದು ಸರಿಕಾಣುವುದಿಲ್ಲ. ಬ್ರಾಹ್ಮಣ ಹೆಣ್ಣನ್ನು ಲಿಂಗರಾಜ ಕಾಮಿಸಿ ಶೋಷಣೆಗೆ ಒಳಪಡಿಸಿ ಅವಳಿಗೆ ಹುಟ್ಟಿದ ಮಗುವಿನ ಕಾಲನ್ನು ತಿರುಚಿ ಬಿಸಾಡಿದ ಪಾಪಕೃತ್ಯ ತನ್ನ ಭೀಕರ ಛಾಯೆಯನ್ನು ಮುಂದಕ್ಕೂ ಚಾಚಿತು. ಹಾಗೆ ನೋಡಿದರೆ ಇಲ್ಲಿಯೇ ಕೊಡಗಿನ ಪತನದ ಬೀಜ ಮೊಳೆತಿದೆ. ಒಂದು ರಾಜ್ಯದ ಅವನತಿಯ ಕತೆಯನ್ನು ಇತಿಹಾಸದ ವಾಸ್ತವದಲ್ಲಿ ಚಿತ್ರಿಸಲು ಮಾಸ್ತಿಯವರಿಗೆ ಅನುವಂಶಿಕ ಘಟನೆ ಅನುಕೂಲ ಹಿನ್ನೆಲೆಯನ್ನು ಒದಗಿಸಿದೆ.

ಎರಡನೆಯದಾಗಿ ಕುಂಟಬಸವನ ಸಾನಿಧ್ಯ. ಅವನು ಚಿಕವೀರನ ಬಾಲ್ಯಸ್ನೇಹಿತ, ಅವನಿಗೆ ಯಾವುದೇ ಪೂರ್ವಸಂಸ್ಕಾರವಿಲ್ಲ. ದುರ್ಜನರ, ಕಲುಷಿತ ವಾತಾವರಣದಲ್ಲಿ ಅವನು ಬೆಳೆದವನು. ಅರಮನೆಯಲ್ಲಿ ಚಿಕವೀರನ ರೂಪದಲ್ಲಿಯೆ ಅವನಿಗೆ ಮನುಷ್ಯನ ಸಂಪರ್ಕವಾಯಿತು. ದುಷ್ಟನನ್ನು ಆಕರ್ಷಿಸುತ್ತಾನೆ. ಇವನು ಶೂದ್ರ ಲಿಂಗಾಯತರಾಜನ ಲಂಪಟತನಕ್ಕೆ ಬ್ರಾಹ್ಮಣ ಕನ್ಯೆಗೆ ಹುಟ್ಟಿದವನು (Cross Breed) ಪ್ರತಿಲೋಮ ಪದ್ಧತಿಯ ಲೈಂಗಿಕ ಸಂಪರ್ಕದ ಪ್ರತಿಫಲ ಎಂದೂ ಉತ್ತಮವಾಗಲಾರದು. ಮತ್ತು ಅದುವೆ ಕುಲನಾಶಕ್ಕೆ ಶಾಪವಾಗಬಹುದು ಎಂದು ಮಾಸ್ತಿಯವರು ಸೃಷ್ಟಿಸಿದ ಕುಂಟನ ಪಾತ್ರ ಜೀವಂತ ಉದಾಹರಣೆಯಾಗಿದೆ. ಚಿಕವೀರ ಮತ್ತು ಬಸವನ ಗೆಳೆತನ ಸ್ವಾಮಿ-ಸೇವಕರ ಸ್ವರೂಪವನ್ನು ಪಡೆದು ಅರಸನ ಅಧೋಗತಿಗೆ ಹೆಚ್ಚು ಕಾರಣವಾಗುತ್ತದೆ. ಸ್ವಭಾವದಲ್ಲಿಯೇ ಇದ್ದ ಕೆಟ್ಟತನಕ್ಕೆ ಬಸವ ಪ್ರೋತ್ಸಾಹ ನೀಡಿ ಉತ್ತೇಜನ ಕೊಟ್ಟ. ಕಂಡ ಕಂಡ ಹೆಣ್ಣನ್ನು ಒದಗಿಸುವ, ಕ್ರೂರ ಕರ್ಮಗಳನ್ನು ಪ್ರೋತ್ಸಾಹಿಸುವ, ಪ್ರಜೆಗಳ ಸೇವಕರ ಮೇಲೆ ದಬ್ಬಾಳಿಕೆಯನ್ನು ಹೇರುವ, ದುರ್ಬಲರ ಶೋಷಣೆ ಮಾಡುವ ಕೃತ್ಯಗಳು ಚಿಕವೀರನಿಂದ ತಡೆಯಿಲ್ಲದೆ ನಡೆದುವು. ಬಸವನೇ ಅರಸನ ಚರಿತ್ರೆಯ ಪತನಕ್ಕೆ ಕಾರಣವೆಂದು, ಅವನೇ ಅರಸನ ಪಾಪಕರ್ಮಗಳಿಗೆ ಉತ್ತೇಜಿಸುವುದೆಂದು ತಿಳಿಯುವಂತಾಯಿತು. ಈ ರೀತಿಯ ಚಿತ್ರಣದಿಂದ ಈ ಎರಡು ಪಾತ್ರಗಳು ಸಾಧಿಸುವುದೇನೆಂದೇ ಗೊತ್ತಾಗುವುದಿಲ್ಲ. ಕನ್ನಡನಾಡಿನ ಒಂದು ಸ್ವತಂತ್ರ ರಾಜ್ಯವು ಬ್ರಿಟಿಶ್ ವಶವಾಗಲು ಅದನ್ನಾಳಿದ ಇಬ್ಬರು ವ್ಯಕ್ತಿಗಳ ದುಷ್ಟತನವೇ ಕಾರಣ ಎಂಬುದನ್ನು ಮಾತ್ರ ಕಾಣಬಹುದಾಗಿದೆ. ಚಿಕವೀರನ ದುರ್ವ್ಯವಹಾರಗಳಿಗೆ ಆಗಿನ ಆಂಗ್ಲ ಬದುಕಿನ ರೀತಿ. ಸುಖಾಕಾಂಕ್ಷೆ. ಹೆಣ್ಣು ಗಂಡಿನ ಮುಕ್ತ ರೀತಿಯ ಲೈಂಗಿಕ ವ್ಯವಹಾರಗಳೂ ಪುಟಕೊಡುವವು. ಮಾನವನ ಸ್ವಭಾವ ಸಂಪೂರ್ಣವಾಗಿ ಆವರಣದ ಫಲ ಅಲ್ಲದಿದ್ದರೂ ಅದರ ಪ್ರಭಾವ ಗುರುತರವಾಗಿರುತ್ತದೆ. ಮೂರನೆಯದಾಗಿ ಚಿಕವೀರನಿಗೆ ದೊರೆತ ಅಧಿಕಾರ ಮತ್ತು ಸಂಪತ್ಸುಕ ಅವನು ಅರಸನಾಗುವ ಯೋಗ್ಯತೆಯವನಲ್ಲವಾದರೂ ಅರಸನಾದ. ಸತ್ತೆ ಅವನ ಕೈಗೆ ಬಂದಿತು. ಬೊಕ್ಕಸದ ಒಡೆಯನಾದ. ತಾಯಿಯ ಮಮತೆ ಕಾಣದ, ಪ್ರಾಣಿ ಮತ್ತು ದಾಸಿಯರ ನಡುವೆ ದೊಡ್ಡವನಾದ ಅವನಲ್ಲಿ ಕ್ರೌರ್ಯ ಪ್ರಬಲವಾಗಿ ಬೆಳೆಯಿತು. ಅಧಿಕಾರ ಮದ ಅತಿಹಾನಿಕಾರಕ. ಚಿಕವೀರನ ವಿಷಯದಲ್ಲಿಯಂತೂ ಈ ಮಾತು ಅಕ್ಷರಶಃ ಸತ್ಯ. ಕೆಟ್ಟವನಿಗೆ ಕೆಟ್ಟತನದ ವಾತಾವರಣವನ್ನು ನಿರ್ಮಿಸಿ, ಅಧಿಕಾರ ಅನುಭೋಗಿಸಲು ಸಂಪತ್ತುಗಳನ್ನು ಕೊಟ್ಟು ರಾಜ್ಯದ ಪತನಕ್ಕೆ ಕಾರಣವಾಗಲು ರಚಿಸಿದ ಕಾದಂಬರಿಯ ಪಾತ್ರನಾಗಿ ಚಿಕವೀರ ಕಾಣಸುತ್ತಾನೆ. ಅವನ ಪಾತ್ರದಲ್ಲಿ ಚರಿತ್ರಣದ ಸಂಕೀರ್ಣತೆ ಬರಲು ಸಾಧ್ಯವಿತ್ತು. ಆದರೆ ಅವನು ಕೇವಲ ದುರ್ಗುಣಗಳ, ದೌರ್ಬಲ್ಯದ ಪುತ್ಥಳಿಯಾಗಿ ಒಂದೇ ಬಗೆಯ ವ್ಯಕ್ತಿಯಾಗಿ ಸರಳ ಪಾತ್ರವಾಗಿದ್ದಾನೆ. ಮಾಸ್ತಿಯವರಿಗೆ ಅವನಲ್ಲಿ ಮಾನವೀಯ ಸಂಕೀರ್ಣತೆಗಳನ್ನು ಹಾಕಿ ಓದುಗನ ಗ್ರಹಣಕ್ಕೆ ಅವನ ದುರಂತದ ಕುರಿತು ಕನಿಕರ ಹುಟ್ಟಿಸುವುದು ಬೇಕಾಗಿರಲಿಲ್ಲವೆಂದು ತೊರುತ್ತದೆ. ‘ಚಿಕವೀರನ ಬಗ್ಗೆ ಎಳ್ಳಷ್ಟು ದಯೆ, ಅನುಕಂಪ, ಕರುಣೆಗಳು ಮಾಸ್ತಿಯವರಿಗೆ ಇಲ್ಲ’ ಎಂದು ಗೀತಾ ನಾಗಭೂಷಣ್ ಹೇಳುವುದಕ್ಕೆ ಅರ್ಥವಿದೆ. ಮನುಷ್ಯ ಎಷ್ಟು ದುಷ್ಟನಾಗಿದ್ದರೂ ಒಡಹುಟ್ಟಿದ ಮದುವೆಯಾದ ತಂಗಿಯನ್ನು ಗಂಡಿನ ತೊಡೆಯ ಮೇಲೆ ಕುಳ್ಳಿರಿಸಿ ಶೀಲಹರಣ ಮಾಡಿಸುವಷ್ಟು ನೀಚನಾಗಲಾರ. ಶೂದ್ರ ರಾಜನೊಬ್ಬನ ನೈತಿಕ ಪತನ ಇಷ್ಟರ ಮಟ್ಟಿಗೂ ಇರಲು ಸಾದ್ಯವಿದೆ ಎಂಬುದನ್ನು ಮಾಸ್ತಿಯವರು ತೋರಿಸಿ ಕೊಟ್ಟಂತಿದೆ. ಇಲ್ಲಿಯ ಮತ್ತೂ ಒಂದು ತೊಡಕು ಗಮನಕ್ಕೆ ಬರುತ್ತದೆ. ತಂಗಿಯ ಮಗುವಿನ ಕೊಲೆ. ಇದು ರಾಜಕೀಯ ಸತ್ತೆಯ ಕೂಟ ನೀತಿಯೆ ಆಗಿರಬಹುದು. ಅವನು ಮಾವನಾಗಿ ತನ್ನ ಅಧಿಕಾರಕ್ಕೆ ವಾರಸುದಾರನಾಗುವ ಯಾರನ್ನಾದರೂ ಕೊಲ್ಲುವುದು ಭಾರತೀಯ ಪರಂಪರೆಗೆ ಅಷ್ಟೇನೂ ಹೊಸದು ಅನಿಸುವುದಿಲ್ಲ. ಶಿಶುವಿನ ನಿರ್ಮಮವಾದ ಕೊಲೆಗೆ ತನ್ನ ಪಟ್ಟದ ಅಭದ್ರತೆಯ ಭೀತಿಯೇ ಕಾರಣ. ಈ ಸನ್ನಿವೇಶ ಮಾತ್ರ ಕಾದಂಬರಿಯಲ್ಲಿ ಕಲಾತ್ಮಕ ಸ್ವರೂಪವನ್ನು ಪಡೆಯದೆ ಸಿನಿಮಾದಂತಹ ಕೃತ್ತಿಮ ಸ್ವರೂಪವನ್ನು ಪಡೆಯುತ್ತದೆ. ಚಿಕವೀರನ ಕೈಯಿಂದಲೇ ತಂಗಿಯ ಮಗುವಿನ ಹತ್ಯೆಯನ್ನು ಉದ್ದೇಶಪೂರ್ವಕವಾಗಿ ಮಾಡಿಸಿ ಅವನ ಪಾಪದ ಭಾರವನ್ನು ಹೆಚ್ಚಿಸುವ ಯತ್ನವೇ ಲೇಖಕರದ್ದಾಗಿದೆ. ಕುಂಟಬಸವನೂ ‘ಶಿಶುಹತ್ಯೆ’ಯ ಕರ್ಮವನ್ನು ತನಗೆ ವಿಧಿಸಲಿಲ್ಲವಲ್ಲ ವಿಧಿಸಿದ್ದರೆ ಒಡೆಯನಾಜ್ಞೆಯನ್ನು ಪಾಲಿಸಬೇಕಾಗುತ್ತಿತ್ತು ಎಂದು ಉಸಿರೆಳೆಯುತ್ತಾನೆ.

ಅರಸನ ಆಳ್ವಿಕೆಯ ಕೊನೆಯ ವರ್ಷದಲ್ಲಿಯೆ ಅವನ ಸ್ವಭಾವದಲ್ಲಿ ಎದ್ದು ತೋರಿದ ಕ್ರೌರ್ಯವನ್ನು ಪ್ರಜೆಗಳು ಹೇಗೆ ಸಹಿಸಿಕೊಂಡರು ಎಂಬ ಪ್ರಶ್ನೆ ಏಳುತ್ತದೆ. ಅರಸನ ನೀಚತನಕ್ಕೆ ಗಾಳಿ ಹಾಕಿ. ಪ್ರಜೆಗಳ ದೃಷ್ಟಿಯಲ್ಲಿ ಅವನನ್ನು ಸಂಪೂರ್ಣ ನಗ್ನಗೊಳಿಸಿ, ಅರಾಜಕತೆಯನ್ನು ನಿರ್ಮಿಸಿ ಪ್ರಜೆಗಳಿಂದಲೆ ‘ಈ ದೊರೆಬೇಡ’ ಎನ್ನುವಷ್ಟು ಅಶಾಂತಿಯನ್ನು ಹಬ್ಬಿಸಿ ಕೊಡಗನ್ನು ವಶಪಡಿಸಿಕೊಳ್ಳುವ ಹೊಂಚು ಬ್ರಿಟಿಷರದು ಆಗಲೆ ಇದ್ದಿತು. ಸಾಮಾನ್ಯ ಮಟ್ಟದ ಜನಸಮುದಾಯವನ್ನು ಬಸವ ಅಂಕಿತದಲ್ಲಿಟ್ಟಿದ್ದ. ಈ ನೆಲೆಯಲ್ಲಿ ಲಕ್ಷ್ಮಿನಾರಾಯಣಯ್ಯ, ಬೋಪಣ್ಣ, ಚಿಕ್ಕಣ್ಣ ಶೆಟ್ಟಿ, ಮೊದಲಾದವರ ಬಂಡುಕೋರತನ ಕೊಡಗಿನ ಅವನತಿಯ ಒಟ್ಟು ಸಂದರ್ಭದಲ್ಲಿ ಅರ್ಥಕೊಡುತ್ತದೆ. ‘ಮುಖ್ಯ ಅವನ ಅದೃಷ್ಟ ಒಳ್ಳೆಯದಲ್ಲ’ ಎಂದು ಮಾಸ್ತಿಯವರು ಇಂಗ್ಲಿಷ್ ದುರಂತ ನಾಟಕಗಳ ನಾಯಕರ ವಿಧಿತತ್ವ (Element of fate) ವನ್ನು ಚಿಕವೀರನಿಗೆ ಅನ್ವಯಿಸ ಹೊರಟು ಅವನನ್ನು ನೇರವಾಗಿ ವಿನಾಶದ ಒಂದೇ ದಾರಿಯಲ್ಲಿ ತಿಳಿಗೇಡಿಯಂತೆ ಕ್ರಮಿಸಲು ಬಿಟ್ಟಿದ್ದಾರೆ. ಆದ್ದರಿಂದ ಅವರು ಕೊಡುವ ಈ ಸಮರ್ಥನೆಯೂ ಔಚಿತ್ಯವನ್ನು ಕಳಕೊಳ್ಳುತ್ತದೆ.

‘ಮಾಸ್ತಿ ಗಾಢವಾದ ನ್ಯೆತಿಕ ಪ್ರಜ್ಞೆಯುಳ್ಳ ಬರಹಗಾರರು’ ಎಂದು ಟಿ.ಪಿ. ಅಶೋಕ ಹೇಳುತ್ತಾರೆ. ಮಾಸ್ತಿಯವರ ಹೆಚ್ಚಿನ ಕತೆಗಳಿಗೆ ಅನ್ವಯಿಸಿ ಹೇಳಿದರೆ ಈ ಮಾತು ಸರಿಯೆನಿಸುತ್ತದೆ. ಚಿಕವೀರರಾಜನ ಮಟ್ಟಿಗೆ ಈ ಮಾತು ಸಂಪೂರ್ಣ ಸರಿಯಲ್ಲ. ಕಾದಂಬರಿಯಲ್ಲಿ ಮಾಸ್ತಿಯವರ ನ್ಯೆತಿಕ ಪ್ರಜ್ಞೆ ಪಕ್ಷವಹಿಸಿದಂತೆ ತೋರುತ್ತದೆ. ಶ್ರೇಣೀಕೃತ ವರ್ಣವ್ಯವಸ್ಥೆಯಲ್ಲಿ ಅವರ ಆಸ್ಥೆ ಸಾಂಪ್ರದಾಯಿಕತೆಯ ಕಡೆಗೆ ವಾಲಿರುವುದು ಕಾಣುತ್ತದೆ. ಚಿಕವೀರ, ಬಸವ, ಬೋಪಣ್ಣ, ದೇವಮ್ಮಾಜಿ ಮೊದಲಾದ ಶೂದ್ರ ಪಾತ್ರಗಳನ್ನು ದೀಕ್ಷಿತ, ಲಕ್ಷ್ಮೀ ನಾರಾಯಣಯ್ಯರಂತವರಿಂದ ಬೇಕೆಂತಲೆ ಬೇರ್ಪಡಿಸಿ ಇಟ್ಟಂತೆ ಭಾಸವಾಗುತ್ತದೆ.

ಅವರ ಭಾಷೆ, ವ್ಯವಹಾರ. ಆಚಾರ-ವಿಚಾರಗಳಲ್ಲಿಯ ತಾರತಮ್ಯವು ಈ ಮಾತನ್ನು ಪುಷ್ಟೀಕರಿಸುವುದು. ರಾಣಿ ಗೌರಮ್ಮಾಜಿಯ ಆದರ್ಶದ ನೆರಳು ಕುಸಂಸ್ಕೃತ ಗಂಡನ ಮೇಲೆ ಬೀಳುವುದಿಲ್ಲ. ಅದು ಮಾಸ್ತಿ ಪರಂಪರೆಯಂತಿದ್ದರೂ ಒಮ್ಮುಖವಾಗಿದ್ದು ಶಕ್ತಿಹೀನವಾಗಿದೆ. ಸನಾತನ ಮೂಲವಾದ ನಂಬಿಕೆಗಳಿಂದಾಗಿ ಈ ರೀತಿಯ ಆದರ್ಶೀಕರಣ ಮೇಲ್ವರ್ಗದ ವ್ಯಕ್ತಿಗಳಿಗಷ್ಟೇ ಸೀಮಿತವಾಗಿ ಬಿಡುತ್ತದೆ.

ಬಸವನ ಸ್ವಾಮಿನಿಷ್ಠೆಯನ್ನು ಶಂಕಿಸುವಂತಿಲ್ಲ ‘ಕುಂಟಬಸವ ಅರಸನನ್ನು ವಿನಾಶದತ್ತ ಕರೆದೊಯ್ಯುತ್ತಾನೆ’ ಎಂದು ಎಲ್.ಎಸ್. ಶೇಷಗಿರಿರಾಯರು ಲಘುವಾಗಿ ಹೇಳಿದಂತೆ ಅನಿಸುತ್ತದೆ. ಬಸವ ಸ್ವತಃ ಎರಡು ಸಂದರ್ಭಗಳಲ್ಲಿ ಮಾತ್ರ ದುಷ್ಟನಾಗಿ ವರ್ತಿಸುತ್ತಾನೆ. ಒಂದು ತನ್ನ ಒಡೆಯನ ಆಜ್ಞೆಗೆ ಕಟ್ಟುಬಿದ್ದು ಸೆರೆಯಲ್ಲಿದ್ದ ದೇವಮ್ಮಾಜಿಯನ್ನು ತನ್ನ ತೊಡೆಯ ಮೇಲೆ ಕೂಡಿಸಿ ಕೊಂಡುದು. ಇನ್ನೊಂದು ನಾಟಕದಲ್ಲಿ ತನ್ನ ವೇಷ ಹಾಕಿಕೊಂಡು ಅಣಕಿಸಿದ ಕುಂಟ ಲಕ್ಕನನ್ನು ನಾಯಿಯಿಂದ ಕಚ್ಚಿಸಿದ್ದು. ಇವೆರಡೂ ಅನಿವಾರ್ಯ ಪ್ರಸಂಗಗಳು. ಮೊದಲನೆಯದು ತನ್ನ ಇಚ್ಛೆಗೆ ವಿರುದ್ಧವಾಗಿ (ಇದರ ಬೇಸರವನ್ನು ದೇವಮ್ಮಾಜಿಯಲ್ಲಿ ಹೇಳುತ್ತಾನೆ). ಎರಡನೆಯದು ತನ್ನ ಅಣಕಕ್ಕೆ ಸಿಟ್ಟುಗೊಂಡು ಅಮಾನುಷವಾಗಿ ವರ್ತಿಸಿದ್ದು. ಒಂದು ಸೇವಾ ಭಾವನೆಯ ಕರ್ತವ್ಯವಾದರೆ, ಇನ್ನೊಂದು ಮನೋವೈಜ್ಞಾನಿಕ ಪ್ರತಿಕ್ರಿಯೆ. ಅವನು ಹುಟ್ಟಿ ಬೆಳೆದ ಹಿನ್ನೆಲೆಯನ್ನು ಗಮನಿಸಿದರೆ ಅವನ ದುಷ್ಟತನ ಅನಿವಾರ್ಯವೆಂದೇ ತೋರುವುದು. ಅವನಲ್ಲಿರುವ ಒಳಿತಿನ ಅಂಶ ಆಗಾಗ್ಗೆ ಹೊರಬರಲು ತವಕಿಸುವುದನ್ನು ಅರಿತು ಲೇಖಕರೆ ಅಲಕ್ಷಿಸಿದಂತೆ ಅನಿಸುತ್ತದೆ. ನಾನು ಒಲಿದು ಜೀವ ಅಂತ ಒಂದು ನೋಡಿರೋದು ಈ ಲೋಕದಾಗೆ ಅವರೊಬ್ಬರೇ, ದಣಿ ಹತ್ತಿರ ನಾಯಿ ಆಗೋದು ಮಾನಕ್ಕೆ ಕಡಿಮೆಯಲ್ಲ’ (ಪು ೧೩ಂ) ಎಂಬ ಬಸವನ ಸ್ವಾಮಿನಿಷ್ಠೆಗೆ ಬೇರೆ ಪ್ರಮಾಣ ಬೇಕಾಗುವುದಿಲ್ಲ. ಬೇರೆ ಎಲ್ಲ ಪ್ರಸಂಗಗಳಲ್ಲಿಯೂ ತನ್ನ ನಡೆ-ನುಡಿಗಳ ಮೂಲಕ ಅರಸನಿಗೆ ಸೇವಕನಾಗಿ, ಮಿತ್ರನಾಗಿ, ಮಂತ್ರಿಯಾಗಿ. ರಕ್ಷಕನಾಗಿ ನಡೆದು ಕೊಳ್ಳುವುದನ್ನು ಉದ್ದಕ್ಕೂ ಕಾಣುತ್ತೇವೆ. ಮಾಸ್ತಿಯವರು ವ್ಯಾಖ್ಯಾನಿಸುವ ಭಾಗಗಳಲ್ಲಿ ಮಾತ್ರ ಅವನು ದುಷ್ಟನೆಂಬ ಅಭಿಪ್ರಾಯ ಓದುಗರಲ್ಲಿ ಮೂಡುತ್ತದೆ. ‘ಅರಸನಿಗೆ ಮಧ್ಯ, ಮಾಂಸ, ಸ್ತ್ರೀಯರನ್ನು ಒದಗಿಸಿ ಅವನ ಒಲವನ್ನು ಗಳಿಸಿದ ಕುಂಟ’ ಎಂದು ಮಾಸ್ತಿಯವರು ವ್ಯಾಖ್ಯಾನಿಸಿ ಚಿಕ್ಕಣ್ಣ ಶೆಟ್ಟಿಯ ಸೊಸೆಯ ಮೇಲೆ ರಾಜ ಕಣ್ಣು ಹಾಯಿಸಿದಾಗ, ‘ಹುಡುಗಿ ಅರಸನ ಕಣ್ಣಿಗೆ ಬೀಳದಿದ್ದರೆ ಚೆನ್ನ’ ಎಂದು ಅಂದುಕೊಂಡನೆಂದೂ ಬರೆಯುತ್ತಾರೆ. ಕುಂಟ ಬಸವನ ಪಾತ್ರವನ್ನು ಲೇಖಕರು ಉದ್ದೇಶಪೂರ್ವಕವಾಗಿ ಅಸಡ್ಡೆಯಿಂದ ಕಂಡು ಅವನನ್ನು ರಾಜನ ಅವನತಿಗೆ ಕಾರಣೀಭೂತನೆಂದು ಶಬ್ಧಗಳ ಮೂಲಕ ಓದುಗರಿಗೆ ತಿಳಿಸಿ ಅವನ ದುಷ್ಟತನದ ಪ್ರಚಾರ ಮಾಡುತ್ತಿದ್ದಾರೆ ಎಂದು ಅನಿಸುತ್ತದೆ. ‘ಕೀಳು ಕೆಲಸದಿಂದ ಅರಸನ ಸ್ನೇಹ ಸಂಪಾದಿಸಿ ಮಂತ್ರಿಯಾದ ಕುಂಟಬಸವ ರಾಜನದೌರ್ಭಾಗ್ಯದ ಶಿಲ್ಪಿಯಾದ’ ಎನ್ನುವ ವಿಮರ್ಶಕರ ಆರೋಪದಲ್ಲಿ ವಾಸ್ತವತೆ ಕಡಿಮೆ ಎಂದೆನಿಸುತ್ತದೆ. ಅದರಿಂದಾಗಿ ಅವನ ಬಗ್ಗೆ ಹುಟ್ಟುವ ಮಾನವೀಯ ಅನುಕಂಪ ಕಡಿಮೆಯಾಗುತ್ತದೆ. ಇದು ಒಂದು ರೀತಿಯಲ್ಲಿ ಬಸವನ ಪಾತ್ರಕ್ಕೆ ಉಂಟಾದ ಅನ್ಯಾಯ.

ಇನ್ನೊಂದು ಮಹತ್ವದ ಪ್ರಶ್ನೆಯೆಂದರೆ ಮಾಸ್ತಿಯವರು ಮಾಡಿಕೊಂಡಿರುವ ಐತಿಹಾಸಿಕ ಪಾಠಾಂತರ ಸಮಂಜಸವೇ ಎನ್ನುವುದು. ಚಿಕವೀರರಾಜ ಬ್ರಿಟಿಷರಿಗೆ ಶರಣಾದುದು ೧೮೩೪ರಲ್ಲಿ. ಅವನ ಸಮಕಾಲೀನ ಬ್ರಿಟಿಷ್ ಅಧಿಕಾರಿಯಾಗಿದ್ದ ವಿಲಿಯಮ್ ಜಫರ್ಸನ್‌ನ `Coorg and its Rajas’ ಎಂಬ ಗ್ರಂಥ ಪ್ರಕಟವಾದುದು ೧೮೫೫ರಲ್ಲಿ. ಈ ಗ್ರಂಥದಲ್ಲಿ ಅವನು ಚಿಕವೀರರಾಜನು ದಕ್ಷತೆಯಿಂದ ರಾಜ್ಯಭಾರ ಮಾಡಿದನೆಂದೂ, ಅರ್ಥ, ನ್ಯಾಯ, ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಂಡನೆಂದೂ, ದಿವಾನ್, ಸುಭೇದಾರ, ಮುನ್ಸಿ ಮೊದಲಾದ ಪ್ರತಿಷ್ಠಿತರು ಹೊರಡಿಸಿದ್ದ ಘೋಷಣ ಪತ್ರದಲ್ಲಿ ಈ ವಿಷಯ ಇದೆಯೆಂದೂ ಬರೆದಿದ್ದಾನೆ. ‘ನಾವು ಅವನ ಜೊತೆ ರಾಜ್ಯದೊಳಗೆ ತಿರುಗಾಡಿದಾಗೆಲ್ಲ ಪ್ರಜೆಗಳು, ಸ್ತ್ರೀ ಪುರುಷರು ವೃದ್ಧರು, ಮಕ್ಕಳು ಗುಂಪು ಗುಂಪಾಗಿ ಸೇರಿ ಬೀದಿಯಲ್ಲಿ ರಾಜನನ್ನು ಗೌರವಿಸಿದರು. ಅರಸನು ಅವರ ಐತರ ದೂರುಗಳನ್ನು ದಯೆ, ಮಾಯೆ, ಸಂಯಮದಿಂದ ಕೇಳಿದನು. ಇದರಿಂದಾಗಿ ಈ ಅರಸನ ಕುರಿತು ನನಗೆ ಅತ್ಯಂತ ಗೌರವ ಮತ್ತು ಸಮಾಧಾನವಿದೆ’ ಎಂದೂ ಉಲ್ಲೇಖಿಸಿದ್ದಾನೆ. ಇತಿಹಾಸದಲ್ಲಿಯೆ ಇಷ್ಟು ಸ್ಪಷ್ಟವಾಗಿ ದೊರೆಯುವ ಚಿಕವೀರನ ಚರಿತ್ರೆಯನ್ನು ಭಿನ್ನರೀತಿಯಲ್ಲಿ ಚಿತ್ರಿಸಲು ಮಾಸ್ತಿಯರವರನ್ನು ವಿವಶಗೊಳಿಸಿದ ಕಾರಣ ಯಾವುದು? ‘The character of Chikaveera Raja appears to have been intentionally blackened by the later historiographers of Coorg like Dr. Mongling, G Richer and Rice’ ಗೆಜೆಟರಿನ ಈ ಹೇಳಿಕೆಯ ಪ್ರಕಾರ ಚಿಕವೀರನ ವ್ಯಕ್ತಿತ್ವವನ್ನು ನಂತರದ ಇತಿಹಾಸಕಾರರು ವಿಕಾರಗೊಳಿಸಿದ ಇಂಟೆನ್ಶನ್ ಯಾವುದು? ಮಾಸ್ತಿಯವರು ಚಿಕವೀರನ ವಿಕೃತ ವ್ಯಕ್ತಿತ್ವವನ್ನೆ ಕಾದಂಬರಿಯಲ್ಲಿ ಚಿತ್ರಿಸಲು ಕಾರಣವೇನು ಮತ್ತು ಅವನ ವ್ವಕ್ತಿತ್ವದ ವಿಕೃತಿ ಎಷ್ಟು ದಟ್ಟವಾದುದು ಎನ್ನುವ ಮೂಲಭೂತ ಪ್ರಶ್ನೆಗಳು ಈ ಸಂದರ್ಭದಲ್ಲಿ ಮ.ನ.ಜವರಯ್ಯ ಅವರ ‘ತನ್ನೊಂದು ಕಲಾಕೃತಿಯ ಸೃಷ್ಟಿಗಾಗಿ ಚರಿತ್ರೆಯಿಂದ ವಸ್ತುವನ್ನಾರಿಸಿಕೊಂಡ ಕಾದಂಬರಿಕಾರ ಆ ಕಲಾಕೃತಿಯ ಕಲಾತ್ಮಕ ಯಶಸ್ಸಿನ ದೃಷ್ಟಿಯಲ್ಲಿ ಚರಿತ್ರೆಗೆ ಬದ್ಧನಾಗಿರಬೇಕೆಂದೇನೂ ಇಲ್ಲ’ ಎಂಬ ಅಭಿಪ್ರಾಯ ಗಮನಿಸಲು ಯೋಗ್ಯವಾಗಿದೆ. ಬಹುಶಃ ಮಾಸ್ತಿಯವರ ಈ ಕೃತಿ ರಚನೆಯ ಉದ್ದೇಶವೂ ಇದೇ ಆಗಿದ್ದಿರಬಹುದು. ಕರ್ನಾಟಕದ ಒಂದು ಸುಂದರ ಪ್ರದೇಶದ ಅವನತಿಗೆ ಕಾರಣವಾಗುವ ಎಲ್ಲ ಸಂಗತಿಗಳನ್ನು ಕಲೆ ಹಾಕುವುದರ ಜೊತೆಗೆ ಮುಖ್ಯ ಪಾತ್ರಗಳ ವ್ಯಕ್ತಿತ್ವಗಳು ಅದಕ್ಕೆ ಎಷ್ಟು ಪೂರಕವಾಗುತ್ತವೆ ಎನ್ನುವುದನ್ನು ತೋರಿಸಿಕೊಡುವುದೂ ಅವರ ಉದ್ದೇಶವಾಗಿರಬಹುದು. ಯಶಸ್ಸು, ಕ್ರೌರ್ಯ, ಸಂಪತ್ತು, ಸೌಂದರ್ಯಗಳಿಗೆ ಹೆಸರಾದ ಕೊಡಗು ಆವರಿಗೆ ಪ್ರಿಯವಾಗಿತ್ತು ಎಂದು ಮುನ್ನುಡಿಯಿಂದ ತಿಳಿಯುತ್ತದೆ. ಚಿಣ್ಣಪ್ಪನವರ ‘ಪಟ್ಟೋಲೆ ಪಳಮೆ’ ಈ ಕಾದಂಬರಿಗೆ ಮುಖ್ಯ ಆಕರ. ಇದಲ್ಲದೆ ರೈಸರ ಗೆಜೆಟರ್ ಮತ್ತು `Mysore and Coorg’ ಗ್ರಂಥ ಹಾಗೂ ಮುತ್ತಣ್ಣ ಇವರ ‘ಎ ಟೈನೀ ಮಾಡಲ್ ಸ್ಟೇಟ್ ಆಫ್ ಸಾವುಥ್ ಇಂಡಿಯಾ’ ಇಂಪಿರಿಯಲ್ ಗೆಜೆಟಿನ ಕೊಡಗು ಭಾಗ ಕಾದಂಬರಿಯ ಆಕರ ಸಾಮಗ್ರಿಗಳು. ಜಫರಸನ್‌ನನ್ನು ನೇರವಾಗಿ ಕಡೆಗಣಿಸಿದ್ದಾರೆ. ಯಾವುದೇ ಒಂದು ಕಲಾಕೃತಿಯ ಸಫಲತೆ, ಕೃತಿಕಾರನ ಸೃಜನಶೀಲತೆಯಲ್ಲಿರದೆ ಭವಿಷ್ಯದಲ್ಲಿ ಅದರ ಸರ್ವಾಂಗೀಣ ಸ್ವೀಕೃತಿಯಲ್ಲಿದೆ. ಆದ್ದರಿಂದ ಚೆನ್ನಬಸವ ನಾಯಕ ಕಾದಂಬರಿಗೆ ಬಂದ ಅತೃಪ್ತಿಕರ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ಅಂಥದೇ ಇನ್ನೊಂದು ಕಾದಂಬರಿಯನ್ನು ಮಾಸ್ತಿಯವರು ಯಶೋಕಾಂಕ್ಷಿಯಿಂದ ಬರೆದಿರಲಾರರು. ಜಫರಸನ್ ಚಿಕವೀರರಾಜ ಕೊಡಗನ್ನು ಬ್ರಿಟಿಶರ ವಶಗೊಳಿಸಿದ್ದಕ್ಕೆ ಸಾಕ್ಷಿ. ಸಮಕಾಲೀನ ಮಾತ್ರವಲ್ಲ ಅವನು ಕಂಪೆನಿ ಆಳ್ವಿಕೆಗೆ ಬರುವ ಸಂಭ್ರಮವನ್ನು ನೋಡಿದವನು. ಆದ್ದರಿಂದ ಅರಸನ ಕುರಿತು ಒಳ್ಳೆಯ ಮಾತುಗಳನ್ನೆ ಬರೆದಿರಬಹುದು. ಆದರೆ ಮಾಸ್ತಿಯವರಿಗೆ ಇದು ಸಮ್ಮತವಲ್ಲ. ಕನ್ನಡದ ಸಮೃದ್ಧ ನಾಡೊಂದು ಅಯೋಗ್ಯ ವ್ಯಕ್ತಿಗಳ ಆಡಳಿಕೆಯಲ್ಲಿ ಪರವಶವಾಯಿತು ಎಂಬ ಭಾವನೆಯು ಅವರ ‘ಚಿಕವೀರರಾಜೇಂದ್ರ’ದ ಪರಿವರ್ತನೆಗೆ ಕಾರಣವೆಂದು ನನಗೆ ತೋರುತ್ತದೆ. ಅದಕ್ಕಾಗಿ ಚಾರಿತ್ರಿಕ ಹಿನ್ನೆಲೆಯಿರುವ ಪಾತ್ರಗಳ ಪುನಸೃಷ್ಟಿಯನ್ನು ತನ್ನ ಮನೋಧರ್ಮಕ್ಕೆ ಒಗ್ಗುವಂತೆ ಮಾಡಿದ್ದಾರೆ. ಮುಖ್ಯ ಪಾತ್ರಗಳ ಅತಿ ಸರಳೀಕರಣದ ಬದಲು ಅವುಗಳ ವಿರೋಧಾಭಾಸ ಸ್ವಭಾವಗಳಿಗೆ ಹೆಚ್ಚು ಧ್ಯಾನ ಕೊಟ್ಟದ್ದರೆ ಕಾದಂಬರಿಯ ಕಲಾತ್ಮಕ ಗುಣ ಹೆಚ್ಚಾಗುತ್ತಿತ್ತು. ಆದರೆ ಗೀತಾನಾಗಭೂಷಣ್ ಅವರ ಸಿಟ್ಟು ಮಾಸ್ತಿಯವರ ಮನೋಧರ್ಮದ ಅಭಿವ್ಯಕ್ತಿಯ ಮಟ್ಟಿಗೆ ಸರಿಯೆನಿಸಿದರೂ ಒಂದು ಸಾಹಿತ್ಯ ಕೃತಿಯ ಸೃಷ್ಟಿಕಾರ್ಯದ ನಿಷ್ಠೆಯ ಗಣನೆಯಲ್ಲಿ ಸರಿಯಲ್ಲ.

ಕಾದಂಬರಿಯಲ್ಲಿ ಮುಖ್ಯವಾದ ಇನ್ನೊಂದು ಅಂಶ ರಾಜ ರಾಣಿಯರ ನಡುವಿನ ಸಂಬಂಧದಲ್ಲಿ ಉಳಿದುಕೊಂಡು ಅಗಾಧ ಅಂತರ. ಮೊದಲ ಪುಟಗಳಲ್ಲಿಯೆ ರಾಣಿಯ ಜೊತೆಗೆ ಅವನ ದುರ್ವ್ಯವಹಾರದ ಚಿತ್ರಣ ಸಿಗುತ್ತದೆ. ಅವನು ಕುಡಿದು ಹೊಡೆಯುತ್ತಿದ್ದನೆಂಬ ಉಲ್ಲೇಖವೂ ಬರುತ್ತದೆ. ಇಲ್ಲಿ ಲಿಂಗಾಯತ ಅರಸರಿಂದಲೆ ಆಳಲ್ಪಟ್ಟ ಕೊಡಗು ಸಾಮ್ರಾಜ್ಯದ ಲಿಂಗಾಯತ ಅರಸರ ಮನೆಗೆ ಸೊಸೆಯಾಗಿ ಬಂದ ರಾಣಿ ಗೌರಮ್ಮಾಜಿ ಹುಟ್ಟಿನಿಂದ ಲಿಂಗಾಯತಳಲ್ಲ. ಲಿಂಗ ದೀಕ್ಷೆಯ ಸಂಸ್ಕಾರದಿಂದ ಲಿಂಗಾಯತಳಾದ ಕೊಡವಳು ಎಂಬ ಅಂಶ ಮಹತ್ವದ್ದಾಗಿದೆ. ಇದರಿಂದಲೆ ಅವಳು ಒಬ್ಬ ಸನಾತನ ಸ್ತ್ರೀಯಂತೆ ಗಂಡನ ಚಿತ್ರಹಿಂಸೆಯನ್ನು ಸಹಿಸಿಕೊಂಡು ಅರಮನೆಯಲ್ಲಿ ಬದುಕುತ್ತಾಳೆ. ಲೇಖಕರು ಅವಳ ಪಾತ್ರದ ನಿಜ ಮೌಲ್ಯವನ್ನು ರೂಪಿಸಲು ಕಾಳಜಿಯನ್ನೆ ವಹಿಸಲಿಲ್ಲ. ಮೊತ್ತದಲ್ಲಿ ಕಾದಂಬರಿಯ ಯಾವುದೇ ಸ್ತ್ರೀ ಪಾತ್ರ ಮುಖ್ಯ ಗಂಡು ಪಾತ್ರದ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವಷ್ಟು ಸಮರ್ಥವಾಗಿಲ್ಲ. ಕಾದಂಬರಿಯ ಸಫಲತೆಯ ದಾರಿಯಲ್ಲಿ ಇದೊಂದು ಕೊರತೆಯೇ ಸರಿ.

ಚಾರಿತ್ರಿಕ ವಸ್ತು ವ್ಯಕ್ತಿಗಳನ್ನೊಳಗೊಂಡ ಕತೆ, ಕಾದಂಬರಿ. ನಾಟಕಗಳು ಕನ್ನಡದಲ್ಲಿ ಸಾಕಷ್ಟು ಬಂದಿವೆ. ಅದರಲ್ಲೂ ಕಾದಂಬರಿಗಳು ಗುಣಮೌಲ್ಯಗಳ ದೃಷ್ಟಿಯಿಂದಲೂ ಉತ್ತಮ ಮಟ್ಟದವು ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಬಹುದು. ಮಯೂರ (ದೇವುಡು). ಶಾಂತಲಾ (ಕೆ.ವಿ.ಅಯ್ಯರ್), ಟಿಪ್ಪು ಸುಲ್ತಾನ. ನಾಟ್ಯರಾಣಿ ಶಾಂತಲಾ (ಮ.ನ.ಮೂರ್ತಿ), ದುರ್ಗಾಸ್ತಮಾನ (ತರಾಸು). ಪಟ್ಟದರಾಣಿ ಶಾಂತಲಾ (ನಾಗರಾಜರಾವ್), ರಾಜಯೋಗಿ. ಅಶಾಂತಿ ಪರ್ವ (ಆನಂದ ಕಂದ) ದುರ್ಗಾಸ್ತಮಾನ (ತರಾಸು) ಇವು ಐತಿಹಾಸಿಕ ನಿಷ್ಠೆಯಿಂದ ಬರೆದ ರೋಚಕ ಕೃತಿಗಳು. ಶಾಂತಲಾದಲ್ಲಿ ಬರುವ ಪರಿಶುದ್ಧ ಪ್ರೇಮವರ್ಣನೆ ಅದರ ಚಾರಿತ್ರಿಕ ಸತ್ಯಗಳಿಗೆ, ಸಾಂಸ್ಕೃತಿಕ ವಿವರಗಳಿಗೆ ಅಪೂರ್‍ವ ಮೆರಗು ಕೊಟ್ಟಿದೆ. ಮಯೂರವರ್ಮ, ಟಿಪ್ಪುಸುಲ್ತಾನ, ಮದಕರಿನಾಯಕ, ಪೆದ್ದರಾಯ ರಾಜಶೇಖರರಂತಹ ಪಾತ್ರಗಳು ಕರ್ನಾಟಕದ ಇತಿಹಾಸವನ್ನು ತಾಜಾಗೊಳಿಸುತ್ತವೆ. ಅದರ ವೈಭವ; ವಿನಾಶಗಳನ್ನು ಕಣ್ಣಿಗೆ ಕಟ್ಟುತ್ತವೆ. ದುರ್ಗಾಸ್ತಮಾನ ಚಾರಿತ್ರಿಕ ಕಾದಂಬರಿಗಳಲ್ಲಿಯೆ ವಿಶಿಷ್ಟ ಸ್ಥಾನವನ್ನುಗಳಿಸುತ್ತದೆ. ತರಾಸು ಚಿತ್ರದುರ್ಗದ ಏಳು ಬೀಳುಗಳನ್ನು ರೋಮಾಂಚಕ ರೀತಿಯಲ್ಲಿ ಚಿತ್ರಿಸುವ ರಕ್ತ ರಾತ್ರಿ, ತಿರುಗುಬಾಣ, ಕಂಬನಿಯ ಕುಯಿಲು, ಹೊಸ ಹಗಲುಗಳನ್ನು ಬರೆದು ಕನ್ನಡ ಓದುಗರ ಕುತೂಹಲವನ್ನು ಕೆರಳಿಸಿದ್ದಾರೆ. ಅ.ನ.ಕೃಷ್ಣರಾಯರು ವಿಜಯ ನಗರದ ಇತಿಹಾಸವನ್ನು ವರ್ಣಿಸುವ ಕಾದಂಬರಿ ಮಾಲೆಯನ್ನೇ ರಚಿಸಿದ್ದಾರೆ. ಆದರೆ ಇವೆಲ್ಲ ಹೆಚ್ಚು ರೋಚಕತೆ ಇಲ್ಲವೆ ಹೆಚ್ಚು ಐತಿಹಾಸಿಕ ನಿಷ್ಠೆಯಿಂದ ರಚಿತವಾದ ಕಾದಂಬರಿಗಳು. ಮಾಸ್ತಿಯವರ ಚೆನ್ನಬಸವನಾಯಕ. ಚಿಕವೀರ ರಾಜೇಂದ್ರ ಅದರಲ್ಲೂ ಚಿಕವೀರರಾಜೇಂದ್ರ, ನಾನು ಈವರೆಗೆ ನಿರೂಪಿಸಿದ ಪೇಚುಗಳಿಂದಾಗಿ ಬೇರೆಯೇ ಸ್ಥಾನವನ್ನು ಪಡೆಯುತ್ತದೆ. ಅವುಗಳನ್ನು ಮತ್ತೊಮ್ಮೆ ಬಿಡಿಯಾಗಿ ಈ ಕೆಳಗಿನಂತೆ ಸಂಗ್ರಹಿಸಬಹುದು.

ಕೊಡಗಿನ ಪ್ರತಿ ಮಾಸ್ತಿಯವರ ಭಾವನೆ

ಅದರ ಅವನತಿಯ ಕ್ರಿಯೆಯಲ್ಲಿ ಲಿಂಗಾಯತ ವ್ಯಕ್ತಿಗಳ ಪಾಲು. ಚಿಕವೀರ ಮತ್ತು ಕುಂಟ ಬಸವನ ಕ್ರೌರ್ಯದ ಮೂಲ ಸ್ವರೂಪ.

ಕುಂಟ ಬಸವ ಅರಸನನ್ನು ವಿನಾಶದತ್ತ ಕರೆದೊಯ್ದುತ್ತಾನೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ. ಚಿಕವೀರ ಹುಟ್ಟಿನಿಂದಲೆ ದುಷ್ಟನೆ ಎಂಬ ಮಾತಿನ ವಿವರ.
ಮಗುವಿನ ಹತ್ಯೆಯ ಹಿಂದಿನ ಪಟ್ಟ ಅಭದ್ರತೆಯ ಭೀತಿ.
ರಾಜ ರಾಣಿಯರ ನಡುವಿನ ನೈತಿಕ ಅಂತರ
ಕಾದಂಬರಿಯ ಕಲಾತ್ಮಕ ನಿಲುವು ವಿಧಿಕರ್ಮದಲ್ಲಿ ಮಾಸ್ತಿಯವರ ನಂಬಿಕೆ (Fate element)
ಮಾಸ್ತಿಯವರ ಸನಾತನ ಮರ್ನೊಧರ್ಮ ಕಾದಂಬರಿಯಲ್ಲಿ ಇಣುಕು ಹಾಕುವ ಶ್ರೇಣೀಕೃತ ವರ್ಗ ವ್ಯವಸ್ಥೆ
ಚಿಕವೀರರಾಜನ ಜಫರಸನ್ ಚಿತ್ರಣವನ್ನು ಮಾಸ್ತಿಯವರು ಕಡೆಗಣಿಸಿದ ವಿಷಯ. ಕನ್ನಡದಲ್ಲಿ ಮಹತ್ವದ ಕೆಲವು ಐತಿಹಾಸಿಕ ಕಾದಂಬರಿಗಳು.
ಚಿಕವೀರರಾಜೇಂದ್ರದ ಕುರಿತು ಕೆಲವು ವಿಮರ್ಶೆಗಳ ವಿಚಾರ.

ಈ ಕಾದಂಬರಿಯ ಕುರಿತು ತುಂಬಾ ಹೇಳಿದ್ದು, ಬರೆದದ್ದು, ಗೋಷ್ಠಿಗಳನ್ನು ಎಲ್ಲೆಡೆಯಲ್ಲಿಯೂ ಮಾಡಿದ್ದಾಗಿದೆ. ದುರ್ಗಾಸ್ತಮಾನ, ಶಾಂತಲಾ, ಟಿಪ್ಪುಸುಲ್ತಾನದಂತಹ ಕಾದಂಬರಿಗಳ ಕುರಿತು ಹೆಚ್ಚಿನ ಜಿಜ್ಞಾಸೆಯಾಗಬೇಕು ಹಾಗೂ ಐತಿಹಾಸಿಕ ಕಾದಂಬರಿಯ ಸ್ಪಷ್ಟ ನಿಲುವೊಂದು ಖಚಿತಗೊಳ್ಳಬೇಕು.

ಈ ಪ್ರಬಂಧಕ್ಕಾಗಿ ಓದಿದ ಗ್ರಂಥ ಮತ್ತು ಲೇಖನಗಳು

೧. ಚಿಕವೀರರಾಜೇಂದ್ರ – ಶ್ರೀನಿವಾಸ
೨. ಯುಗಧರ್ಮ-ಸಾಹಿತ್ಯದರ್ಶನ-ಕೀರ್ತಿನಾಥ ಕುರ್ತಕೋಟಿ
೩. ಹೊಸಗನ್ನಡ ಸಾಹಿತ್ಯ-ಎಲ್.ಎಸ್.ಶೇಷಗಿರಿರಾವ್
೪. ಕಾದಂಬರಿ ವಸ್ತು ಮತ್ತು ತಂತ್ರ-ಗಿರಡ್ಡಿ ಗೋವಿಂದರಾಜ
೫. ಶ್ರೀನಿವಾಸ-ಸ್ಮರಣ ಸಂಚಿಕೆ
೬. ಮಾಸ್ತಿಯವರ ಸಾಹಿತ್ಯ-ಸಂ.ಶಿವರುದ್ರಪ್ಪ
೭. ಮಾಸ್ತಿಯವರ ಕತೆಗಳು-ಎ.ಎನ್.ಮೂರ್ತಿರಾವ್

ಲೇಖನಗಳು
೧. ಸಾಹಿತ್ಯ ವಿಮರ್ಶೆ – ೧೯೮೪-ಮ.ನ.ಜವರಯ್ಯ
೨. ಸಾಹಿತ್ಯ ವಿಮರ್ಶೆ – ೧೯೮೫ – ಗೀತಾ ನಾಗಭೂಷಣ
೩. ಸಾಹಿತ್ಯ ವಿಮರ್ಶೆ – ೧೯೮೬ – ಕಾ.ತ.ಚಿಕ್ಕಣ್ಣ
೪. ಸಾಹಿತ್ಯ ವಿಮರ್ಶೆ – ೧೯೮೭ – ಟಿ.ಪಿ. ಅಶೋಕ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾಕಾವ್ಯ
Next post ತಡೆಯದಿರೆ ಮನವ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys