ಚಳವಳಿಗಳು ಮತ್ತು ಸೃಜನಶೀಲ ಸ್ವಾತಂತ್ರ್ಯ

ಚಳವಳಿಗಳು ಮತ್ತು ಸೃಜನಶೀಲ ಸ್ವಾತಂತ್ರ್ಯ

ಕನ್ನಡ ಸಾಹಿತ್ಯ ಲೋಕದಲ್ಲಿ ಆಗಾಗ್ಗೆ ಕೇಳಿ ಬರುವ ಮಾತುಗಳು ಹೀಗಿವೆ : (೧) ಇವರು ಸದ್ದುಗದ್ದಲವಿಲ್ಲದೆ ಬರೆಯುತ್ತಿದ್ದಾರೆ; ತಮ್ಮ ಪಾಡಿಗೆ ತಾವು ಸಾಹಿತ್ಯ ಸೃಷ್ಟಿ ಮಾಡುತ್ತಿದ್ದಾರೆ. (೨) ಇವರು ಯಾವ ಪಂಥಕ್ಕೂ ಸೇರದ ಸ್ವತಂತ್ರ ಪ್ರವೃತ್ತಿಯ ಲೇಖಕರು. (೩) ಇಂದು ಯಾವುದೇ ಸಾಹಿತ್ಯ ಚಳವಳಿಗಳು ಇಲ್ಲದಿರುವುದರಿಂದ ಸಾಹಿತಿಗಳಿಗೆ ಸೃಜನಶೀಲ ಸ್ವಾತಂತ್ರ್ಯ ಸಿಕ್ಕಿದೆ.

ಮೇಲೆ ಉಲ್ಲೇಖಿಸಿದ ಮೂರು ಮಾದರಿಯ ಮಾತುಗಳು ಪರಸ್ಪರ ಸಂಬಂಧವನ್ನು ಪಡೆದಿವೆ ಮತ್ತು ತನಗೆ ತಾನೇ ಸಾಹಿತ್ಯ ಸೃಷ್ಟಿಗೆ ಸಂಬಂಧಿಸಿದ ತಿಳುವಳಿಕೆಗಳೂ ಆಗಿವೆ; ಈ ತಿಳುವಳಿಕೆಯಲ್ಲಿ ಸರಳ ತತ್ವವನ್ನೂ ಒಳಗೊಂಡಿವೆ. ಆ ತಿಳುವಳಿಕೆ ತತ್ವದ ಪ್ರಕಾರ (೧) ಸಾಹಿತಿಯು ಸಮಾಜದಲ್ಲಿ ನಡೆಯುತ್ತಿರುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುವ ಸದ್ದು ಮಾಡದೆ, ಯಾವುದೇ ಗದ್ದಲವನ್ನೂ ಎಬ್ಬಿಸದೆ ತಾನಾಯಿತು ತನ್ನ ಬರವಣಿಗೆಯಾಯಿತು ಎಂಬ ಸ್ಥಿತಿಯಲ್ಲಿ ಇರಬೇಕು; ಹಾಗೆ ಇದ್ದರೆ ಅದು ಸೃಜನಶೀಲ ಸಜ್ಜನಿಕೆಯಾದೀತು ಎಂಬ ಅಂಶ ಅಡಗಿದೆ. (೨) ಯಾವುದಾದರೂ ಪಂಥಕ್ಕೆ ಸೇರಿದರೆ ಸಾಹಿತಿಗಳು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆಂಬ ಭಾವನೆಯ ಜೊತೆಗೆ ಪಂಥಾತೀತ ಮನೋಧರ್ಮವೇ ಆದರ್ಶದ ಮಾದರಿ ಎಂಬ ತಿಳುವಳಿಕೆಯೂ ಇದೆ. (೩) ಮೂರನೆಯ ಅಂಶದಲ್ಲಿ – ಈಗ ದಲಿತ – ಬಂಡಾಯ ಸಾಹಿತ್ಯ ಚಳವಳಿಯ ಪ್ರಖರತೆ ಕಡಿಮೆಯಾಗಿರುವುದರ ಬಗ್ಗೆ ಆಳದಲ್ಲಿ ಆನಂದ ಮತ್ತು ಚಳವಳಿಗಳು ಸೃಜನಶೀಲ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆಯೆಂಬ ತಿಳುವಳಿಕೆಯಿದೆ.

ಸದ್ದುಗದ್ದಲವಿಲ್ಲದೆ ಬರೆಯುವವರು ಯಾವುದೇ ಪಂಥಗಳಿಗೆ ಸೇರಿರುವುದಿಲ್ಲವೆಂದು ಸಾಮಾನೀಕರಿಸಲಾಗದು. ಯಾಕೆಂದರೆ ನಿರ್ದಿಷ್ಟ ಪಂಥವೊಂದನ್ನು ಒಪ್ಪಿಕೊಂಡಿದ್ದರೂ ಸಾರ್ವಜನಿಕ ಕ್ರಿಯೆ – ಪ್ರತಿಕ್ರಿಯೆಗಳಲ್ಲಿ ಭಾಗವಹಿಸದೆ ಇರುವ ಬರಹಗಾರರೂ ನಮ್ಮಲ್ಲಿದ್ದಾರೆ. ಇದು ಅವರ ಸ್ವಭಾವಕ್ಕೆ ಸಂಬಂಧಿಸಿದ ಸಂಗತಿಯೂ ಹೌದು. ಇನ್ನು, ‘ಯಾವುದೇ ಪಂಥಕ್ಕೆ ಸೇರದೆ ಇರುವವರು’ – ಎಂಬ ಪ್ರಮಾಣ ಪತ್ರದ ಪ್ರಶಂಸೆಯನ್ನು ವಿಮರ್ಶಾ ಪರಿಭಾಷೆಯೆಂಬಂತೆ ಕೆಲವರು ಬಳಸುತ್ತಾ ಬಂದಿದ್ದಾರೆ. ಯಾವುದಾದರೂ ಪಂಥವೊಂದಕ್ಕೆ ಬದ್ಧರಾದರೆ ಅದು ಸೃಜನಶೀಲತೆಯನ್ನು ನಿಯಂತ್ರಿಸಿ ಏಕಮುಖವಾಗಿಸುತ್ತದೆಯೆಂಬ ತಿಳುವಳಿಕೆಯಿಂದ, ಯಾವುದೇ ಪಂಥಕ್ಕೆ ಸೇರದೇ ಇರುವುದೇ ಒಂದು ಆದರ್ಶ ಮಾದರಿ ಎನ್ನಿಸಿರಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ – ಶಕ್ತಿಶಾಲಿ ಸೃಜನಶೀಲತೆಯು ಪಂಥದೊಳಗಿದ್ದೂ ಪಂಥವನ್ನು ಮೀರುವ ಜಿಗಿತವನ್ನು ಪಡೆದಿರುತ್ತದೆ. ಯಾವುದೇ ವಾಚ್ಯದಲ್ಲಿ ಪಂಥವೊಂದನ್ನು ನಾವು ಅರಿಯುವ ಹಾಗೂ ಅರಗಿಸಿಕೊಳ್ಳುವ ಸಾಮರ್ಥ್ಯದಲ್ಲಿ ಸೃಜನಶೀಲತೆಯ ಸ್ವರೂಪ ನಿರ್ಧಾರವಾಗುತ್ತದೆ. ಆದ್ದರಿಂದ ಸಾಹಿತಿಯು ಪಂಥವೊಂದನ್ನು ಒಪ್ಪುವುದು ನಕಾರಾತ್ಮಕವಾಗ ಬೇಕಿಲ್ಲ. ಹಾಗೆ ನೋಡಿದರೆ ‘ಪಂಥ’ವೆನ್ನುವುದು ಯಾವ ನೆಲೆಗೆ ಸಂಬಂಧಪಟ್ಟದ್ದೆಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ ‘ಪಂಥ’ಗಳೂ ಇವೆ. ಸಾಮಾಜಿಕ – ರಾಜಕೀಯ ಪಂಥಗಳೂ ಇವೆ. ಸಾಹಿತ್ಯಕ್ಕೆ ಬಂದರೆ, ‘ನವೋದಯ’ವೂ ಒಂದು ಪಂಥ ‘ನವ್ಯ’ವೂ ಒಂದು ಪಂಥ. ಆದರೆ ‘ಯಾವ ಪಂಥಕ್ಕೂ ಸೇರದೆ ಬರೆಯುವ ಪ್ರವೃತ್ತಿ’ಯನ್ನು ಕುರಿತ ಪ್ರಶಂಸಾ ಪರಿಭಾಷೆಯು ಹೆಚ್ಚು ಬಳಕೆಗೆ ಬಂದದ್ದು ಪ್ರಗತಿಶೀಲ ಮತ್ತು ದಲಿತ – ಬಂಡಾಯ ಸಾಹಿತ್ಯ ಚಳವಳಿಗಳ ಸಂದರ್ಭದಲ್ಲಿ ಎಂಬುದನ್ನಿಲ್ಲಿ ಗಮನಿಸಬೇಕು. ‘ಶುದ್ಧಸಾಹಿತ್ಯ’ ಕಲ್ಪನೆಯನ್ನು ಉಲ್ಲಂಘಿಸಿ ಸಾಮಾಜಿಕ, ಆರ್ಥಿಕ ಸನ್ನಿವೇಶದ ರಾಜಕಾರಣವನ್ನು ಮುನ್ನೆಲೆಗೆ ತಂದ ಈ ಚಳವಳಿಗಳು ಸಾಹಿತ್ಯ ಸೃಷ್ಟಿಗಷ್ಟೇ ಸೀಮಿತವಾಗಿರಲಿಲ್ಲ. ಸಾಹಿತ್ಯವನ್ನು ಕಲಾ ಲೋಲುಪತೆಯೆಂದು ಭಾವಿಸಲಿಲ್ಲ; ಬದುಕೆನ್ನುವುದು ಸಾಮಾಜಿಕ-ಆರ್ಥಿಕ ಆಯಾಮಗಳಿಂದ ಹೊರತಾದದ್ದೆಂದು ತಿಳಿಯಲಿಲ್ಲ. ಬದುಕೆಂಬ ರೂಪಕದೊಳಗಿದ್ದ ಸಾಮಾಜಿಕ-ಆರ್ಥಿಕ ರೂಪಗಳನ್ನು ಅನಾವರಣಗೊಳಿಸುತ್ತಲೆ ಏಕಕಾಲಕ್ಕೆ ಬದುಕನ್ನೂ ಹೊಸದಾಗಿ ವಿವರಿಸಿದ ಮತ್ತು ಸಾಹಿತ್ಯವನ್ನೂ ಸಾಮಾಜಿಕಗೊಳಿಸಿದ ಕ್ರಿಯೆಯು ಇಂತಹ ಪ್ರಗತಿಪರ ಚಳವಳಿಗಳಿಂದ ಆಯಿತು. ಯಾವುದೇ ಚಳವಳಿಗೆ ಒಂದು ತಾತ್ವಿಕತೆ ಇರುತ್ತದೆ. ಈ ತಾತ್ವಿಕತೆಯನ್ನೇ ‘ಪಂಥೀಯತೆ’ ಎಂದೂ ಕರೆಯಬಹುದು. ಈ ಹಿನ್ನೆಲೆಯಲ್ಲಿ ನೋಡಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ; ‘ಯಾವ ಪಂಥಕ್ಕೂ ಸೇರದ’ ಎಂಬ ಪ್ರಶಂಸೆಯು ‘ಪ್ರಧಾನವಾಗಿ’ ಪ್ರಗತಿಪರ ಹಾಗೂ ಎಡ ಪಂಥೀಯತೆಗೆ ವಿರುದ್ಧವಾದ ನೆಲೆಯಿಂದ ಹುಟ್ಟಿದೆ. ಪಂಥೀಯತೆಯನ್ನು ಕುರಿತ ಪರ-ವಿರೋಧಗಳು ಕಾಣಿಸಿಕೊಂಡಿದ್ದು ಎಡ ಹಾಗೂ ಪ್ರಗತಿಪರ ಚಳವಳಿಗಳು ಪ್ರಖರವಾದಾಗ ಎಂಬ ಅಂಶವು ನನ್ನ ಈ ಗ್ರಹಿಕೆಗೆ ಒಂದು ಆಧಾರವಾಗಿದೆ. ಕನ್ನಡ ಸಾಹಿತ್ಯ ಪರಂಪರೆಯು ಪಂಥೀಯ ಪ್ರೇರಣೆಗಳಿಂದ ಹೊರತಾಗಿರಲಿಲ್ಲವೆಂಬ ಅಂಶವನ್ನು ಗಮನಿಸಿದಾಗ ನನ್ನ ಗ್ರಹಿಕೆಗೆ ಮತ್ತೊಂದು ಸಮರ್ಥನೆ ಸಿಗುತ್ತದೆ.

ಈಗ ನೋಡಿ : ಕನ್ನಡ ಸಾಹಿತ್ಯ ಪರಂಪರೆಯಲ್ಲಿ ‘ಧರ್ಮಪಂಥ’ಗಳಿಗೆ ಬದ್ಧವಾಗದ ಕವಿ-ಕಾವ್ಯಗಳು ಇವೆಯೇ ಎಂದು ಒಮ್ಮೆ ಅವಲೋಕಿಸೋಣ. ಪಂಪನಿಂದ ಪ್ರಾರಂಭಿಸಿ ರನ್ನ, ಜನ್ನ, ಪೊನ್ನ, ಕುಮಾರವ್ಯಾಸ, ಲಕ್ಷ್ಮೀಶ, ವಚನ ಸಾಹಿತ್ಯ, ದಾಸ ಸಾಹಿತ್ಯ – ಹೀಗೆ ಯಾವ ಕಡೆ ನೋಡಿದರೂ ತಂತಮ್ಮ ನಂಬಿಕೆಯ ಧರ್ಮ ಪಂಥದ ಪ್ರೇರಣೆ ಹಾಗೂ ಬದ್ಧತೆಯನ್ನು ಕಾಣಬಹುದಾಗಿದೆ. ವಚನ ಸಾಹಿತ್ಯವು ಹೊಸ ಧಾರ್ಮಿಕ ಚಳವಳಿಯ ಉಪ ಉತ್ಪನ್ನವಾಗಿ ಅಭಿವ್ಯಕ್ತಗೊಂಡಿದ್ದರೂ ಸಾಹಿತ್ಯಕ ಮೌಲ್ಯ ಮುಕ್ಕಾಗದ ಪ್ರಯೋಗವಾಗಿ ಪ್ರಸಿದ್ದಿಗೆ ಬಂದಿದೆ. ದಾಸ ಸಾಹಿತ್ಯವೂ ತನ್ನ ಧರ್ಮನಿಷ್ಠತೆಯನ್ನು ಮೆರೆದಿದೆ. ಹತ್ತನೇ ಶತಮಾನದಲ್ಲೇ ಪಂಪನು ಬದ್ಧತೆ ಮತ್ತು ಸೃಜನಶೀಲ ಸ್ವಾತಂತ್ರ್ಯದ ಸಮಸ್ಯೆಗಳಿಗೆ ಮುಖಾಮುಖಿಯಾದ ಮಹಾಕವಿಯಾಗಿ ಹೊರ ಹೊಮ್ಮಿದ್ದಾನೆ. ಜೈನಧರ್ಮಕ್ಕೆ ಬದ್ಧನಾಗಿದ್ದೂ ಅದನ್ನು ಮೀರಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಸಾಮಾಜಿಕ ಸತ್ಯವನ್ನು ಕಂಡುಕೊಂಡ ಈ ಮಹಾಕವಿಯು ರಾಜನ ಆಸ್ಥಾನದಲ್ಲಿದ್ದು ರಾಜನನ್ನೇ ತನ್ನ ಕಥಾನಾಯಕ ಅರ್ಜುನನಿಗೆ ಹೋಲಿಸುತ್ತಾನಾದರೂ ಪ್ರತಿನಾಯಕ ಕರ್ಣನಿಗೆ ಅಸಾಧಾರಣ ಮಹತ್ವ ನೀಡಿ ಪ್ರಭುತ್ವಕ್ಕೆ ಪ್ರತಿರೋಧ ಒಡ್ಡುತ್ತಾನೆ. ‘ಕರ್ಣ ರಸಾಯನಮಲ್ತೆ ಭಾರತಂ’ ಎಂದು ಘೋಷಿಸುತ್ತಾನೆ. ಪ್ರತಿ ನಾಯಕನ ಮೂಲಕ ಕಾವ್ಯವನ್ನು ಕಟ್ಟಿ ಕೊಡುವ ಪ್ರಯೋಗದಲ್ಲಿ ‘ಪ್ರಭುತ್ವ’ಕ್ಕೆ ಪರೋಕ್ಷ ಪ್ರತಿರೋಧವೂ ಇದೆಯೆಂಬುದನ್ನು ಗಮನಿಸಬೇಕು. ಕಾವ್ಯದಲ್ಲಿ ಮಾತ್ರವಲ್ಲದೆ ನೇರವಾಗಿಯೂ ಪ್ರಭುತ್ವ ವಿರೋಧಿ ಮಾತುಗಳನ್ನಾಡುತ್ತಾನೆ. ಪಂಥಬದ್ಧತೆಯಿದ್ದೂ ಅದನ್ನು ಮೀರುವ ಪ್ರಕ್ರಿಯೆಯಲ್ಲಿ ಸೃಜನಶೀಲತೆಯ ಶಕ್ತಿ ಸ್ವರೂಪವನ್ನು ಸಾದರಪಡಿಸಿದ ಪಂಪ ಇವತ್ತೂ ಮಾನ್ಯನಾಗಿದ್ದಾನೆ.

ಕುಮಾರವ್ಯಾಸನ ಕಾವ್ಯವ ಧರ್ಮಕ್ಕೆ ಹೊಸ ವ್ಯಾಖ್ಯಾನವನ್ನು ಬರೆಯುತ್ತದೆ; ವ್ಯಾಧನೊಬ್ಬನನ್ನು ‘ಧರ್ಮವ್ಯಾಧ’ನನ್ನಾಗಿಸುತ್ತದೆ. ಜೊತೆಗೆ ರಾಜಪ್ರಭುತ್ವದ ರಾಜಕಾರಣವನ್ನು ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸುತ್ತದೆ. ಇಡೀ ಕಾವ್ಯದ ಆಶಯವನ್ನು ಗಮನಿಸಿದಾಗ ವೈದಿಕ ಧರ್ಮವನ್ನು ನಂಬಿಯೂ ವೈದಿಕವಾಗದ ಕವಿಯನ್ನು ಕಾಣುತ್ತೇವೆ. ರಾಜಪ್ರಭುತ್ವವನ್ನು ಗೌರವಿಸಿಯೂ, ಅದಕ್ಕೆ ಶರಣಾಗದ ಕವಿಶಕ್ತಿಯನ್ನು ನೋಡುತ್ತೇವೆ.

ಮೊದಲೇ ಹೇಳಿದಂತೆ, ಶಿವಶ್ರೇಷ್ಠತೆ, ಶಿವಬದ್ಧತೆಗಳಿಂದ ಕೂಡಿದ ವಚನ ಸಾಹಿತ್ಯದ ಸೃಜನಶೀಲಶಕ್ತಿಯು ವಿಮರ್ಶಕರಿಂದ ಸರ್ವಮಾನ್ಯತೆ ಪಡೆದಿದೆಯೆಂಬುದನ್ನೂ ಇಲ್ಲಿ ಗಮನಿಸಬೇಕು. ದಾಸ ಸಾಹಿತ್ಯವನ್ನು ಧರ್ಮಬದ್ಧತೆಯ ಕಾರಣಕ್ಕಾಗಿ ಕಡೆಗಣಿಸಿಲ್ಲ ಎಂಬುದನ್ನೂ ನೆನೆಯಬೇಕು. ಈ ಕೆಲವು ಉದಾಹರಣೆಗಳಿಂದ ನಾನು ಪ್ರತಿಪಾದಿಸುತ್ತಿರುವುದು ಏನೆಂದರೆ ‘ಯಾವುದೇ ಪಂಥಕ್ಕೆ ಸೇರದ’ ಎಂಬುದು ಸಕಾರಾತ್ಮಕವಾಗಿಯೂ ಒಂದು ಪಂಥಕ್ಕೆ ಸೇರಿದ’ ಎಂಬುದು ನಕಾರಾತ್ಮಕವಾಗಿಯೂ ಆಗಬೇಕಾದ ಅಗತ್ಯವಿಲ್ಲ – ಎಂಬ ಅಂಶ. ಜೈನಧರ್ಮ ಪಂಥಕ್ಕೆ ಬದ್ಧನಾಗಿದ್ದೂ ಅದನ್ನು ಮೀರಿದ ಪಂಪ, ಹೊಸ ಧರ್ಮಕ್ಕೆ ಬದ್ಧರಾಗಿ ಅದನ್ನು ಮೀರದೆಯೇ ಸೃಜನಶೀಲರಾದ ವಚನಕಾರರು ಪಂಥೀಯತೆ, ಬದ್ಧತೆ ಮತ್ತು ಸೃಜನಶೀಲತೆಗಳ ಚರ್ಚೆಗೆ ಅತ್ಯುತ್ತಮ ಆಕರಗಳಾಗಿದ್ದಾರೆ; ಅಷ್ಟೇ ಅಲ್ಲ, ಮಾರ್ಗದರ್ಶಿಯಾಗಿದ್ದಾರೆ. ಪಂಪನದು ವೈಯಕ್ತಿಕ ಮಟ್ಟದಲ್ಲಿ ಮೀರಿದ ಮನೋಧರ್ಮ, ವಚನಕಾರರದು ಚಳವಳಿಯ ಮಟ್ಟದಲ್ಲಿ ಹುಟ್ಟಿದ ಪ್ರತಿರೋಧ ಮನೋಧರ್ಮ; ಒಂದು ವೈಯಕ್ತಿಕ ಇನ್ನೊಂದು ಸಾಮುದಾಯಿಕ. ಆದರೆ, ಎರಡು ಮನೋಧರ್ಮಗಳೂ ಸಾಮಾಜಿಕವಾಗಿರುವುದು ಮಹತ್ವದ ಸಂಗತಿಯಾಗಿದೆ.

ಈ ನಿದರ್ಶನಗಳಿಂದ ಸ್ಪಷ್ಟವಾಗುವ ಅಂಶವೆಂದರೆ ಪಂಥಬದ್ಧತೆಯು ಮಾರಕವಲ್ಲ: ಪ್ರೇರಕ, ಪಂಥವೊಂದನ್ನು ಅಕ್ಷರಸ್ಥ ವಾಚ್ಯದಲ್ಲಿ ಅನುಸರಿಸಿದರೆ ಸೃಜನಶೀಲತೆಗೆ ಊನವಾದೀತೆ ಹೊರತು, ಅದರ ಆಶಯವನ್ನು ಪ್ರೇರಣೆಯಾಗಿ ಪಡೆದರೆ ಸೃಜನಶೀಲತೆಗೆ ಹೊಸ ಆಯಾಮ ಲಭ್ಯವಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ – ಅದರಲ್ಲೂ ದಲಿತ – ಬಂಡಾಯ ಚಳವಳಿಗಳ ಸಂದರ್ಭದಲ್ಲಿ ‘ಯಾವ ಪಂಥಕ್ಕೂ ಸೇರದ’ ‘ಅನನ್ಯತೆ’ಯನ್ನು ಗುರುತಿಸಹೊರಟದ್ದು ಪ್ರಗತಿ ಪಂಥಗಳಿಗೆ ಪ್ರತಿಕ್ರಿಯೆಯಾದ ಪ್ರತಿಗಾಮಿ ಪಂಥವೂ ಎಡಪಂಥೀಯತೆಗೆ ಎದುರಾದ ಬಲಪಂಥೀಯತೆಯೂ ಆಗಿರುವ ಸಾಧ್ಯತೆಯಿದೆ. ಈ ದೃಷ್ಟಿಯಿಂದ ‘ಯಾವ ಪಂಥಕ್ಕೂ ಸೇರದ’ ಎಂಬುದೇ ನಿರ್ದಿಷ್ಟ ಪಂಥವಾಗಿರುತ್ತದೆ! ಇದೇ ಅದರ ವಿಪರ್ಯಾಸ!

ಹಾಗೆಂದು, ಬರಹಗಾರರೆಲ್ಲರೂ ಪ್ರಜ್ಞಾಪೂರ್ವಕವಾಗಿ ಒಂದು ಪಂಥಕ್ಕೆ ಬದ್ಧರಾಗಿಯೇ ಬರೆಯಬೇಕೆಂದಾಗಲಿ, ಬರೆಯುತ್ತಿದ್ದಾರೆಂದಾಗಲಿ ನಾನು ‘ಪರಮಾನು’ ಹೊರಡಿಸುತ್ತಿಲ್ಲ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನೆಲೆಗಳು ನಿರ್ದಿಷ್ಟ ಸಮಾಜದ ಬದುಕನ್ನು ರೂಪಿಸುವ ಒಳಶಕ್ತಿಗಳಾಗಿರುವುದರಿಂದ ಬರಹಗಾರರ ಒಳಗೆ ನಿರ್ದಿಷ್ಟ ದೃಷ್ಟಿ ದರ್ಶನಗಳು ರೂಪುಗೊಳ್ಳುತ್ತವೆಯೆಂದು ಪ್ರತಿಪಾದಿಸುತ್ತಿದ್ದೇನೆ. ಈ ನಿರ್ದಿಷ್ಟ ದೃಷ್ಟಿ ದರ್ಶನಗಳು ಪ್ರಚಲಿತವಾಗಿರುವ ಪಂಥಗಳಿಗೆ ಹೊಂದಬಹುದು; ಪಂಥಗಳಿಂದ ಪ್ರೇರಣೆ ಪಡೆಯಬಹುದು; ಅದೇ ಪಂಥವಾಗಬಹುದು; ಹೊಸ ಪಂಥೀಯತೆಯೊಂದು ಬೆಳಗಬಹುದು. ಹೀಗೆ ವಿವಿಧ ವಿಧಾನಗಳಲ್ಲಿ ಅಭಿವ್ಯಕ್ತವಾಗಬಹುದು. ಬದುಕನ್ನು ಕುರಿತ ನಿರ್ದಿಷ್ಟ ದೃಷ್ಟಿದರ್ಶನಗಳೇ ಪಂಥೀಯ ತಾತ್ವಿಕ ನೆಲೆಗಳೆಂದು ನಾನು ತಿಳಿದಿದ್ದೇನೆ. ಸೂಕ್ಷ್ಮಗ್ರಾಹಿ ಸೃಜನಶೀಲರಿಗೆ ಬದುಕಿನ ಶೋಧದಲ್ಲಿ ನಿರ್ದಿಷ್ಟ ನಿಲುವಿಗೆ ಬರಲಾಗದ ಬರಡುತನವಿದ್ದರೆ ಅದಕ್ಕೆ ಏನುತಾನೆ ಹೇಳಲಾದೀತು? ಸಾಹಿತ್ಯ ಮತ್ತು ಸಂಸ್ಕೃತಿಗಳ ಬಹುಮುಖತೆಯನ್ನು ಒಪ್ಪುವ ಯಾರೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪ್ರೇರಣೆಗಳನ್ನು ನಿರಾಕರಿಸುವುದಿಲ್ಲ ಎಂದು ಭಾವಿಸುತ್ತೇನೆ. ನನ್ನ ಅಭಿಪ್ರಾಯದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳು ಕೇವಲ ವೈಯಕ್ತಿತ್ವವಲ್ಲ: ಸಾಮಾಜಿಕ.

ನವ್ಯ ಸಾಹಿತ್ಯ ಸಂದರ್ಭವನ್ನು ಹೊರತುಪಡಿಸಿದರೆ, ಕನ್ನಡ ಸಾಹಿತ್ಯವು ‘ಬಹುಪಾಲು’ ಸಾಮಾಜಿಕ ನೆಲೆಗಳನ್ನು ಒಳಗೊಂಡಿದೆ ಅಥವಾ ಪ್ರತಿಪಾದಿಸಿಕೊಂಡು ಬಂದಿದೆ. ವೈಯಕ್ತಿಕ ಹಾಗೂ ಸಾಮಾಜಿಕ ನೆಲೆಗಳನ್ನು ಕರಾರುವಾಕ್ಕಾಗಿ ಬೇರ್ಪಡಿಸಲಾಗದ ಕಾರಣಕ್ಕಾಗಿ ನವ್ಯ ಸಾಹಿತ್ಯದಲ್ಲೂ ಸಾಮಾಜಿಕತೆ ಇದೆಯಾದರೂ ವೈಯಕ್ತಿಕ ಅನುಭವ ಪ್ರಾಮಾಣ್ಯವೇ ಮುಖ್ಯವೆಂದು ನವ್ಯದ ನೇತಾರರು ಪ್ರತಿಪಾದಿಸಿದರು. ನವೋದಯ ಸಾಹಿತ್ಯದಲ್ಲಿ ಪ್ರಮುಖವಾಗಿದ್ದ ಭಾವ ಗೀತೆಯ ಪ್ರಕಾಶವು ವೈಯಕ್ತಿಕತೆಯನ್ನು ಒಳಗೊಂಡಿದ್ದರೂ ಸ್ವಾತಂತ್ರ್ಯ ಚಳವಳಿಯ ಆದರ್ಶ, ರಾಷ್ಟ್ರೀಯತೆ – ಪ್ರಾದೇಶಿಕತೆಗಳ ಮಹತ್ವ, ಸಮಾನತೆಯ ಆಶಯ – ಇತ್ಯಾದಿಗಳನ್ನು ಪಂಥ ಪ್ರಣಾಲಿಯಂತೆ ಪ್ರತಿಪಾದಿಸಿದ್ದು ಈಗ ಇತಿಹಾಸ. ಅಂದರೆ ನವೋದಯ ಸಾಹಿತ್ಯವು ಯಾವತ್ತೂ ವೈಯಕ್ತಿಕತೆಯ ಹೆಸರಿನಲ್ಲಿ ಸಾಮಾಜಿಕ ವಿಮುಖತೆಯನ್ನು ತೋರಲಿಲ್ಲ. ಆದರೆ ನವೋದಯ ಕಾವ್ಯ ‘ಸ್ಥಗಿತಸ್ಥಿತಿ’ ತಲುಪಿದೆಯೆಂದು ‘ನವ್ಯಕಾವ್ಯ’ದ ಹುಟ್ಟಿಗೆ ಸಮರ್ಥನೆ ನೀಡಲಾಯಿತು. “ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ತನಕ ಇದ್ದ ವಾತಾವರಣ ಈಗ ಸಮೂಲ ಪರಿವರ್ತನೆ ಗೊಂಡಿದೆ. ಸ್ವಾತಂತ್ರ್ಯ ಸಂಗ್ರಾಮದ ಉದ್ವೇಗ ಪರವಶತೆಯ ಹಾರಾಟ ಮುಗಿದು ಈಗ ನಮ್ಮ ಮನಸ್ಸು ಮತ್ತೆ ನೆಲಕ್ಕೆ ಇಳಿದಿದೆ…. ಹೊಸ ಆದರ್ಶ, ಹೊಸ ಕನಸಿಗಾಗಿ ದೇಶದ ಮನಸ್ಸು ಹಸಿದು ಕಾಯುತ್ತಿದೆ. ಇಂಥ ವಾತಾವರಣ ಸುತ್ತಮುತ್ತಲ್ಲಿ ಇರುವಾಗ ಜೀವನಾವಲಂಬಿಯಾದ ಕಾವ್ಯವೂ ಪರಿವರ್ತನೆಗೊಳ್ಳುವುದು ಸಹಜ” ಎನ್ನುವುದು ನವ್ಯಕಾವ್ಯದ ಹುಟ್ಟಿಗೆ ಗೋಪಾಲಕೃಷ್ಣ ಅಡಿಗರ ಸಮರ್ಥನೆ (ನಡೆದು ಬಂದ ದಾರಿ – ಕವನ ಸಂಕಲನದ ಮುನ್ನುಡಿ). ಇದಕ್ಕೂ ಮುಂಚೆ ನವ್ಯಕಾವ್ಯದ ಹುಟ್ಟನ್ನು ಸಮರ್ಥಿಸಿ, ಪ್ರತಿಪಾದಿಸಿದ ವಿ.ಕೃ. ಗೋಕಾಕರು ಹೇಳಿದ್ದು ಹೀಗೆ : “ಅಲಂಕಾರಿಕ ಮಾನಸಿಕ ನಿರ್ಮಿತಿಗಳಿಂದ ದೂರ ಸರಿಯುವ ಮಾರ್ಗ ಇದು. ವಸ್ತುಗಳ ನೈಜ ಸತ್ಯದ ಸಹಜ ಅಭಿವ್ಯಕ್ತಿಯೆಡೆಗೆ ಈ ಮಾರ್ಗವು ನಮ್ಮನ್ನು ಕರೆದೊಯ್ಯಲಿದೆ. ವ್ಯಕ್ತಿನಿಷ್ಠವಾಗಿ ಅದು ರೂಪಿತವಾಗಿದ್ದರೆ ಕಾವ್ಯವು ನವ್ಯವಾಗುತ್ತದೆ’ (‘ನವ್ಯತೆ ಹಾಗೂ ಕಾವ್ಯಜೀವನ’ ಕೃತಿಯಲ್ಲಿ).

ನವ್ಯಕಾವ್ಯ ವ್ಯಕ್ತಿನಿಷ್ಠವಾಗಿದ್ದು ಮಾತ್ರವಲ್ಲ, ಸಾಹಿತ್ಯದಲ್ಲಿ ವ್ಯಕ್ತಿನಿಷ್ಠತೆಯನ್ನು ಪ್ರತಿಪಾದಿಸಿತು; ಸಾಮಾಜಿಕ ನಿಷ್ಠತೆಗೆ ದೂರವಾಗುತ್ತ ಬಂತು. ಸಾಹಿತ್ಯದಲ್ಲಿ ಭಾಷೆಯ ಸೂಕ್ತ ಬಳಕೆ, ಶಿಲ್ಪದ ಮಹತ್ವ, ಮಡಿವಂತಿಕೆ ಮುಕ್ತ ಅಭಿವ್ಯಕ್ತಿ – ಮುಂತಾದ ಅಂಶಗಳಿಂದ ನವ್ಯ ಸಾಹಿತ್ಯವು ಹೊಸ ಸಂಚಲನಕ್ಕೆ ಕಾರಣವಾಯಿತು. ವಿಮರ್ಶೆಯ ನಿಷ್ಟುರತೆಯನ್ನು ಮುನ್ನೆಲೆಗೆ ತಂದಿತು. ಆದರೆ ವೈಯಕ್ತಿಕ ಅನುಭವ ಪ್ರಾಮಾಣ್ಯವೇ ಮುಖ್ಯವೆಂಬ ತತ್ವವನ್ನು ವೈಪರೀತ್ಯದ ಅಂಚಿಗೆ ಕೊಂಡೊಯ್ದ ಪರಿಣಾಮವಾಗಿ ಸಾಮಾಜಿಕ ಕಾಳಜಿಯ ತಾತ್ವಿಕತೆಗೆ ಬೆನ್ನು ಮಾಡಿ ಬೆಳೆಯಿತು. ವೈಯಕ್ತಿಕ ವೈಪರೀತ್ಯವೇ ತತ್ವಪ್ರಣಾಲಿಯಾದಾಗ ಸಾಮಾಜಿಕ ತತ್ವ ಪ್ರಣಾಲಿಯು ಪ್ರತಿರೋಧಾತ್ಮಕ ವಾಗಬೇಕಾಗುತ್ತದೆ. ಇಂಥ ಪ್ರತಿರೋಧವೂ ಒಂದು ಕಾರಣವಾಗಿ, ಸಾಮಾಜಿಕ – ಆರ್ಥಿಕ ವಿಷಮತೆಗೆ ವಿರುದ್ಧವಾದ ಸಮಾನತೆಗಾಗಿ, ಸಾಮಾಜಿಕ ಜವಾಬ್ದಾರಿಯಿಂದ ಜನ್ಮತಾಳಿದ್ದು ದಲಿತ ಸಾಹಿತ್ಯ – ಬಂಡಾಯ ಸಾಹಿತ್ಯ.

ನಾನು ಲೇಖನದ ಆರಂಭದಲ್ಲೇ ಪ್ರಸ್ತಾಪಿಸಿದ ‘ಸದ್ದುಗದ್ದಲ’ ‘ಪಂಥ’ ಮತ್ತು ‘ಚಳವಳಿ’ ಪದಗಳು ಒಂದು ಪರಿಕಲ್ಪನೆಯಾಗಿ ಪರಸ್ಪರ ಸಂಬಂಧ ಪಡೆದಿವೆ. ಈ ವಿಷಯವನ್ನೂ ಮೊದಲೇ ಹೇಳಿದ್ದೇನೆ. ಈಗ ‘ಚಳವಳಿ’ಯನ್ನು ಪ್ರಧಾನವಾಗಿ ಪ್ರಸ್ತಾಪಿಸಬಯಸುತ್ತೇನೆ. ಚಳವಳಿಯೆಂದರೆ ಅದೊಂದು ಪಂಥ ಪ್ರೇರಣೆಯಿಂದ ರೂಪುಗೊಂಡದ್ದು: ಸದ್ದುಗದ್ದಲವನ್ನೂ ಮಾಡುವಂಥದ್ದು. ಸಾಮಾಜಿಕ ಕ್ರಿಯಾಶೀಲತೆಯು ಸದ್ದುಗದ್ದಲವಿಲ್ಲದೆ ಇರುವುದಿಲ್ಲ. ಆದರೆ ಉದ್ದೇಶರಹಿತ ಒಣ ಸದ್ದುಗದ್ದಲಗಳು ಅರ್ಥಹೀನ. ನಿಜವಾದ ಚಳವಳಿಯು ಪಂಥವೂ ಆಗಿರುತ್ತದೆ; ಸದ್ದುಗದ್ದಲವನ್ನೂ ಮಾಡುತ್ತದೆ. (ಕೆಲವರು ಸದ್ದುಗದ್ದಲ ಮಾಡದೆ ಚಳವಳಿಗೆ ಸಹಾನುಭೂತಿ ಉಳ್ಳವರಾಗಿರುತ್ತಾರೆ.)

ಈಗ ಚಳವಳಿಗಳಿಲ್ಲದಿರುವುದೇ ಸೃಜನಶೀಲ ಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶ ಕಲ್ಪಿಸಿದೆಯೆಂದು ಪ್ರತಿಪಾದಿಸುವವರು ಏಕಕಾಲಕ್ಕೆ ಪಂಥೀಯತೆ, ಚಳವಳಿ ಮತ್ತು ಇದರ ಫಲವಾದ ಸದ್ದುಗದ್ದಲಗಳನ್ನು ನಕಾರಾತ್ಮಕವಾಗಿ ನೋಡುತ್ತಿದ್ದಾರೆಂದೇ ಅರ್ಥ. ಹಾಗಾದರೆ ವಚನ ಚಳವಳಿಗೆ ಇಂಥವರ ಪ್ರತಿಕ್ರಿಯೆ ಏನು? ಸ್ವಾತಂತ್ರ್ಯ ಚಳವಳಿ ಮತ್ತು ಸಾಹಿತ್ಯದ ಸಂಬಂಧಕ್ಕೆ ಇಂಥವರು ಏನು ಹೇಳುತ್ತಾರೆ, ಚಳವಳಿಗಳು ಇಲ್ಲದ್ದರಿಂದ ಸೃಜನಶೀಲ ಸ್ವಾತಂತ್ರ್ಯ ಹೆಚ್ಚಾಗಿದೆಯೆಂದು ಭಾವಿಸುವವರು ವಿಷಯವನ್ನು ಸಾಮಾನ್ಯಕೃತಗೊಳಿಸುತ್ತಿದ್ದಾರೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಹುಮುಖತೆಗೆ ವಿಮುಖರಾಗುತ್ತಿದ್ದಾರೆ. (ಚಳವಳಿಗಳನ್ನು ಕುರಿತ ಈ ನಿಟ್ಟಿನ ಚರ್ಚೆಯು ಬೆಂಗಳೂರಲ್ಲಿ ಜಿ. ವೆಂಕಟಸುಬ್ಬಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾದ ಗೋಷ್ಠಿಯಲ್ಲಿ ನಡೆದದ್ದನ್ನು ಇಲ್ಲಿ ನೆನೆಯಬಹುದು) ದಲಿತ-ಬಂಡಾಯ ಸಾಹಿತ್ಯ ಚಳವಳಿಗಳ ತೀಕ್ಷ್ಣತೆ ಕಡಿಮೆಯಾಗಿರುವುದನ್ನು ಸಂಭ್ರಮಿಸುವ ಅಭಿಪ್ರಾಯ ಇದೆಂದು ನಾನು ಭಾವಿಸುತ್ತೇನೆ. ಅಷ್ಟೇ ಅಲ್ಲ; ನವ್ಯ ಸಾಹಿತ್ಯ ಸಂದರ್ಭದ ಆಶಯ ಹಾಗೂ ಅಭಿಪ್ರಾಯಗಳು ಮರುಹುಟ್ಟು ಪಡೆದು ನೆಲೆಗೊಳ್ಳಲು ಪ್ರಯತ್ನಿಸುತ್ತಿರುವ ಪ್ರವೃತ್ತಿಗೆ ಸಂಕೇತವೆಂದೂ ನನಗನ್ನಿಸಿದೆ. ಯಾಕೆಂದರೆ, ನವ್ಯಸಾಹಿತ್ಯ ಸಂದರ್ಭವು ಚಳವಳಿ ಹಾಗೂ ಪಂಥ ಬದ್ಧತೆಗಳಿಗೆ ತೀವ್ರ ವಿರೋಧಿಯೂ ‘ಸಾಹಿತ್ಯ ಶಿಲ್ಪಬದ್ಧತೆಗೆ’ ಪ್ರಬಲ ಪೂರಕವೂ ಆಗಿದ್ದನ್ನು ನೆನೆಯಬಹುದು. ನವ್ಯಸಾಹಿತ್ಯವು ವ್ಯಕ್ತಿನಿಷ್ಟತೆ ಮತ್ತು ಕೃತಿ ಶ್ರೇಷ್ಠತೆಗಳನ್ನು ಮುನ್ನೆಲೆಗೆ ತಂದದ್ದು ಈಗ ಇತಿಹಾಸದ ಭಾಗವೂ ಹೌದು.

ಏಕವ್ಯಕ್ತಿ, ಏಕಕೃತಿಗಳ ಪರಿಭಾವನೆಯಲ್ಲೇ ಶ್ರೇಷ್ಠತೆಯನ್ನು ಹುಡುಕುವ ‘ನವ್ಯ’ದ ಮಾನದಂಡಗಳು ಸಾಮಾಜಿಕ ಸನ್ನಿವೇಶದ ಮೂಲಕವೂ ಸೃಜನಶೀಲತೆಯನ್ನು ಪರಿಗಣಿಸಬೇಕಾಗುತ್ತದೆಯೆಂದು ಭಾವಿಸಲಿಲ್ಲ. ಶ್ರೇಷ್ಠತೆ ಎನ್ನುವುದು ಕೇವಲ ಒಂದು ಕೃತಿ, ಒಬ್ಬ ವ್ಯಕ್ತಿಯ ನೆಲೆಯಲ್ಲಿ ನಿರ್ಧಾರವಾಗುವ ಅಂಶವಲ್ಲ. ವ್ಯಕ್ತಿ ಮತ್ತು ಕೃತಿಯು ನಿಮಿತ್ತ ಮಾತ್ರವಾಗಿ ನಿರ್ದಿಷ್ಟ ಸಾಮಾಜಿಕ – ಸಾಂಸ್ಕೃತಿಕ ಪರಂಪರೆಯನ್ನು ಪರಿಗಣಿಸಬೇಕಾಗುತ್ತದೆ. ಇಷ್ಟಕ್ಕೂ ಶ್ರೇಷ್ಠತೆ ಎನ್ನುವುದು ಒಂದು ನಿರಂತರ ಶೋಧವಾದೀತೇ ಹೊರತು ಮುಕ್ತಾಯಗೊಂಡ ನೆಲೆಯಾಗಲಾರದು. ವೈಯಕ್ತಿಕ ಅನುಭವ ಪ್ರಾಮಾಣ್ಯದ ಅಸಲಿ ಅಭಿವ್ಯಕ್ತಿಯೊಂದೇ ಶ್ರೇಷ್ಠತೆಯ ಮಾನದಂಡವಾಗಲಾರದು.

ಕನ್ನಡ ಸಾಹಿತ್ಯದ ಇವತ್ತಿನ ಸಂದರ್ಭವು ದಲಿತ-ಬಂಡಾಯ ಸಾಹಿತ್ಯದ ಪ್ರಭಾವ, ಪ್ರೇರಣೆಗಳಿಂದ ತಪ್ಪಿಸಿಕೊಂಡಿಲ್ಲ ಎಂಬುದು ವಾಸ್ತವ. ವಿವಿಧ ನಿರ್ಲಕ್ಷಿತ ಸಾಮಾಜಿಕ ವಲಯಗಳಲ್ಲಿ ಅಭಿವ್ಯಕ್ತಿಯ ಆತ್ಮವಿಶ್ವಾಸವನ್ನು ಮೂಡಿಸಿದ ದಲಿತ-ಬಂಡಾಯ ಸಾಹಿತ್ಯ-ಚಳವಳಿಗಳ ಫಲವಾಗಿ ಹೊಸ ಪೀಳಿಗೆಯ ಅನೇಕರಲ್ಲಿ ಪ್ರಗತಿಪರ ಆಶಯಗಳು ತಾನೇತಾನಾಗಿ ಅಂತರ್ಗತವಾಗಿವೆ. ರಾಜಧಾನಿಯಾಚೆಗೆ ಅನೇಕ ಪ್ರಗತಿಪರ ಪ್ರತಿಭಾವಂತರು ಕ್ರಿಯಾಶೀಲರಾಗಿದ್ದಾರೆ. ಆದರೆ ನವ್ಯಸಾಹಿತ್ಯ ಸಂದರ್ಭದ ಆಶಯಗಳ ಮರುಪ್ರತಿಪಾದನೆಗೆ ಮುಂದಾದವರ ಮಾತುಗಳು ಮುಂಚೂಣಿಗೆ ಬರುತ್ತಿವೆ. ವಿವಿಧ ಮಾಧ್ಯಮಗಳಲ್ಲಿ ಪ್ರಾಮುಖ್ಯ ಪಡೆಯುತ್ತಿವೆ. ಚಳವಳಿಗಳ ಪ್ರಭಾವವಿದ್ದರೂ ಸಂಘಟನಾತ್ಮಕ ಕ್ರಿಯೆ ಕಡಿಮೆಯಾದದ್ದರ ಫಲವಾಗಿ ವ್ಯಕ್ತಿನಿಷ್ಠ ಆಶಯಗಳು ಪ್ರಾಮುಖ್ಯ ಪಡೆಯುತ್ತಿವೆ; ಸಾಮಾಜಿಕ ಆಶಯಗಳು ಹಿನ್ನಡೆ ಅನುಭವಿಸುತ್ತಿವೆ.

ನಮ್ಮ ದೇಶದಲ್ಲಿ ಜಾರಿಗೆ ಬಂದ ಜಾಗತೀಕರಣ ನಾಮಾಂಕಿತ ಮುಕ್ತ ಆರ್ಥಿಕ ನೀತಿಯ ಫಲಿತಗಳನ್ನು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಕಾಣಬಹುದಾಗಿದೆ. ಮುಕ್ತ ಆರ್ಥಿಕ ನೀತಿಯ ಗುಣಲಕ್ಷಣಗಳನ್ನು ಹರ್‍ಬರ್‍ಟ್ ಅಪ್ತೇಕರ್ ಅವರು ಹೀಗೆ ಪಟ್ಟಿ ಮಾಡುತ್ತಾರೆ. (೧) ಮುಕ್ತ ಆರ್ಥಿಕ ನೀತಿಯಲ್ಲಿ ಸರ್ಕಾರವನ್ನು ಬಂಡವಾಳಶಾಹಿಗಳು ನಿಯಂತ್ರಿಸುತ್ತಾರೆ; ಬಂಡವಾಳಶಾಹಿಗಳನ್ನು ಸರ್ಕಾರವು ನಿಯಂತ್ರಿಸುವುದಿಲ್ಲ.
(೨) ಇಲ್ಲಿ ರಾಜಕೀಯ ಸ್ವಾತಂತ್ರ್ಯ ಮಾತ್ರ ಇರುತ್ತದೆ; ಆರ್ಥಿಕ ಸ್ವಾತಂತ್ರ್ಯ ಇರುವುದಿಲ್ಲ. (೩) ಅಸಮಾನತೆ ಎನ್ನುವುದು ಒಂದು ಸ್ವಾಭಾವಿಕ ಸ್ಥಿತಿ.

ಪ್ರಗತಿಪರ ಚಳವಳಿಗಳು ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯವನ್ನೂ ಸಮಾನತೆಯನ್ನೂ ಬಯಸುತ್ತವೆ. ಈ ಕಾರಣದಿಂದ ಸ್ವಾತಂತ್ರ್ಯದ ಪರಿಕಲ್ಪನೆಗೆ ಸಾಮುದಾಯಿಕ ಸ್ವರೂಪ ನೀಡುತ್ತವೆ. ಬಂಡವಾಳಶಾಹಿ ಮುಕ್ತ ಆರ್ಥಿಕ ನೀತಿಯು ಸಾಮುದಾಯಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಪರವಾಗಿರುವುದಿಲ್ಲ; ಬದಲಾಗಿ ವೈಯಕ್ತಿಕ ಲಾಭವನ್ನಷ್ಟೇ ಪರಿಗಣಿಸುತ್ತದೆ. ಹೀಗಾಗಿ ಮುಕ್ತ ಆರ್ಥಿಕ ನೀತಿಯು ಸಾಮಾಜಿಕ ಕಾಳಜಿಯನ್ನು ಗೌಣವಾಗಿಸಿ, ವ್ಯಕ್ತಿಕೇಂದ್ರಿತ ‘ಮಾರುಕಟ್ಟೆ ಮನೋಧರ್ಮ’ವನ್ನು ಬೆಳೆಸುತ್ತದೆ. ಇಂದು ನಮ್ಮ ಸಂದರ್ಭದಲ್ಲಿ ರೂಪುಗೊಳ್ಳುತ್ತಿರುವುದು ಇದೇ ಮನೋಧರ್ಮ. ಇದರ ಫಲವಾಗಿ ವೈಯಕ್ತಿಕ ಲಾಭನಷ್ಟಗಳು ಮುಖ್ಯವಾಗುತ್ತವೆ. ಸಾಮಾಜಿಕ ಆಶಯಗಳು ಅಮುಖ್ಯವಾಗುತ್ತವೆ.

ಇಂದು ಮುನ್ನೆಲೆಯಲ್ಲಿ ‘ಪ್ರಚಾರಕ್ಕೆ ಬರುತ್ತಿರುವ’ ಸಾಹಿತ್ಯಕೃತಿ ಮತ್ತು ಕೃತಿಕಾರರನ್ನು ಗಮನಿಸಿ, ಸಾಹಿತ್ಯಕ್ಕೆ ಸಾಮಾಜಿಕ ಜವಾಬ್ದಾರಿ ಮುಖ್ಯವಲ್ಲವೆಂದು ಭಾವಿಸಿದ ಕೃತಿ ಮತ್ತು ಕೃತಿಕಾರರು ಹೆಚ್ಚು ಪ್ರಚಾರದಲ್ಲಿರಲು, ಪ್ರಚಲಿತವಾಗಲು ಮತ್ತು ಪ್ರಸ್ತುತವಾಗಲು ಪ್ರಯತ್ನಿಸುತ್ತಿದ್ದ ‘ಪ್ರಸಿದ್ಧರೂ’ ಆಗುತ್ತಿದ್ದಾರೆ. ಪ್ರಸಿದ್ಧರಾಗುವುದಕ್ಕೆ ನಾವ್ಯಾರೂ ಹೊಟ್ಟೆಕಿಚ್ಚು ಪಡಬೇಕಾಗಿಲ್ಲ. ಅದು ಸರಿಯೂ ಅಲ್ಲ. ಆದರೆ ಸಾಹಿತ್ಯ ಚಳವಳಿಗಳು ಪ್ರತಿಪಾದಿಸಿದ ಸಾಮಾಜಿಕ ಜವಾಬ್ದಾರಿಯ ಕಲ್ಪನೆಗೆ ಹಿನ್ನಡೆಯಾಗುತ್ತಿರುವುದು ಮತ್ತು ಚಳವಳಿಗಳ ತೀಕ್ಷ್ಣತೆ ಕಡಿಮೆಯಾಗಿದೆಯೆಂದು ಸಂಭ್ರಮಿಸುವುದು ಸರಿಯಲ್ಲ. ಸಾಹಿತ್ಯ ಚಳವಳಿಗಳಾಗಲಿ, ಸಾಮಾಜಿಕ ಜವಾಬ್ದಾರಿಯ ಪರಿಕಲ್ಪನೆಯಾಗಲಿ ಯಾವತ್ತೂ ಸೃಜನಶೀಲ ಸ್ವಾತಂತ್ರಕ್ಕೆ ವಿರೋಧಿಗಳಲ್ಲ. ವಿಮರ್ಶಕ ಮಾಕ್ಸ್‌ಅಡೆರತ್ ಪ್ರತಿಪಾದಿಸಿದಂತೆ ‘ಸೃಜನಶೀಲ ಸ್ವಾತಂತ್ರ್ಯದ ಪರಿಕಲ್ಪನೆಯು ಸಾಮಾಜಿಕ ಜವಾಬ್ದಾರಿಯ ಭಾವನೆಯಿಂದ ಪ್ರತ್ಯೇಕವಾದುದಲ್ಲ, ಅವೆರಡೂ ಅವಿಭಾಜ್ಯ ಅಂಗಗಳು.’

ಇವತ್ತು ಆತಂಕಕಾರಿಯಾದ ಇನ್ನೊಂದು ಬೆಳವಣಿಗೆಯನ್ನು ಕಾಣಬಹುದು. ಬಂಡವಾಳ ಶಾಹಿ ಮುಕ್ತ ಆರ್ಥಿಕ ನೀತಿಯಲ್ಲಿ ಶೀಘ್ರ ಲಾಭ ಮಾಡುವ ಪ್ರವೃತ್ತಿ ಪ್ರಮುಖವಾಗಿರುವಂತೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಅದರ ಛಾಯೆ ಕಾಣುತ್ತಿದೆ. ವ್ಯಕ್ತಿ ಮಾತ್ರ ಮುಖ್ಯವಾಗುವ ಮನೋ ವೃತ್ತಿಯು ಸಮಾಜಕ್ಕಿಂತ ಸ್ವಂತದ್ದನ್ನು ಪ್ರಚುರಪಡಿಸಿಕೊಳ್ಳುತ್ತದೆ; ಸ್ವಂತ ಲಾಭಕ್ಕಾಗಿ ದುಡಿಯುತ್ತದೆ; ಅದಕ್ಕಾಗಿ ಹಪಹಪಿಸುತ್ತದೆ. ಬಂಡವಾಳಶಾಹಿಗೆ ಆರ್ಥಿಕ ಲಾಭ ಮುಖ್ಯವಾದರೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಶೀಘ್ರ ಪ್ರಸಿದ್ಧಿ ಮತ್ತು ಲಾಭ ಮುಖ್ಯವಾಗುತ್ತದೆ. ಇಂಥ ಕಡೆ ವ್ಯಕ್ತಿನಿಷ್ಠ ಬಂಡವಾಳಶಾಹಿ ಮತ್ತು ವ್ಯಕ್ತಿನಿಷ್ಠ ಸಾಂಸ್ಕೃತಿಕ ಕ್ಷೇತ್ರ ಪ್ರಜ್ಞಾಪೂರ್ವಕವಾಗಿಯೊ ಅಪ್ರಜ್ಞಾಪೂರ್ವಕವಾಗಿಯೋ ಪೂರಕವಾಗುವ ಅಪಾಯವಿರುತ್ತದೆ. ಇದರ ಫಲವಾಗಿ ಸಾಂಸ್ಕೃತಿಕ ಕ್ಷೇತ್ರವು ಬಂಡವಾಳಶಾಹಿಯ ಆರ್ಥಿಕ ಶಕ್ತಿಯ ಫಲಿತಗಳನ್ನು ಒಪ್ಪುತ್ತಾ ವ್ಯಕ್ತಿ ವಿಶಿಷ್ಟತೆಯನ್ನು ಪ್ರತಿ ಪಾದಿಸುತ್ತಾ ಸಾಮಾಜಿಕ ಹೊಣೆಗಾರಿಕೆಗೂ ಸಾಂಸ್ಕೃತಿಕ ಸೃಜನಶೀಲತೆಗೂ ಸಂಬಂಧವಿಲ್ಲವೆನ್ನುತ್ತಾ ಸ್ವಂತ ಸುಖದಲ್ಲಿ ಲೀನವಾಗುತ್ತದೆ. ಪ್ರಸಿದ್ಧಿಗಾಗಿ ಬಂಡವಾಳಶಾಹಿಯ ತಾಂತ್ರಿಕ ವಿಧಾನಗಳನ್ನೇ ಬಳಸಲಾಗುತ್ತದೆ.

ಜಾಗತೀಕರಣದ ಸಂದರ್ಭದಲ್ಲಿ ಪ್ರಾಮುಖ್ಯ ಪಡೆದುಕೊಳ್ಳುತ್ತಿರುವ ಇನ್ನೊಂದು ನೆಲೆಯೆಂದರೆ – ‘ಜಾಹಿರಾತೀಕರಣ’, ಜಾಹೀರಾತು ಕೊಡುವುದು ತಪ್ಪಲ್ಲ. ಆದರೆ ಅದು ಜೀವನದ ಅವಿಭಾಜ್ಯ ಅಂಗವಾಗುವಂತೆ ಮಾಡಿಕೊಂಡರೆ ಹುಸಿ ಪ್ರಸಿದ್ಧಿ, ಹುಸಿ ಪ್ರತಿಷ್ಠೆ ಮತ್ತು ಶೀಘ್ರ ಫಲಾಪೇಕ್ಷೆಯ ಪ್ರವೃತ್ತಿಯನ್ನು ಬೆಳೆಸುತ್ತದೆ ಮತ್ತು ಜಾಹೀರಾತು ಎನ್ನುವುದು ನಿರಂತರ ಪ್ರಕ್ರಿಯೆಯಾಗಿ ಜಾಹಿರಾತೀಕರಣವಾಗುತ್ತದೆ. ಜಾಗತೀಕರಣವು ಬೆಳೆಸುತ್ತಿರುವ ವ್ಯಕ್ತಿಕೇಂದ್ರಿತ, ಸ್ವಾರ್ಥ ಕೇಂದ್ರಿತ, ಭೋಗಕೇಂದ್ರಿತ ಮನೋವೃತ್ತಿಯು ಜಾಹಿರಾತೀಕರಣವನ್ನೂ ಒಳಗೊಂಡಂತೆ ಸಾಂಸ್ಕೃತಿಕ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ಇದರ ಫಲವಾಗಿ ಏನಾಗಬಹುದು? ಚಿಂತಕ ಎ. ಕುಕಾರ್ಕಿನ್ ಹೇಳುವುದು ಹೀಗೆ : “ಜಾಹಿರಾತು ಬೂರ್ಶ್ವಾ ಸಂಸ್ಕೃತಿಯ ಶೈಲಿಯನ್ನು ಸ್ಥಾಪಿಸುತ್ತದೆ; ಅದರ ನೀತಿಗಳನ್ನು ರೂಪಿಸುತ್ತದೆ. ಬಂಡವಾಳಶಾಹಿ ರಾಷ್ಟ್ರಗಳ ಸಂಸ್ಕೃತಿಯನ್ನು ಪ್ರಮುಖ ಅಂಶವಾಗಿಸುತ್ತದೆ; ಸಾಮಾಜಿಕ ಪ್ರಜ್ಞೆಯನ್ನು ನಿಯಂತ್ರಿಸುತ್ತದೆ.” – ಈಗ ನಮ್ಮಲ್ಲಿ ಪ್ರಾರಂಭವಾಗಿರುವುದು ಇದೇ ಪ್ರಕ್ರಿಯೆ. ಬಂಡವಾಳಶಾಹಿ ರಾಷ್ಟ್ರಗಳ ಸಂಸ್ಕೃತಿಯ ಮಾದರಿ ಮುನ್ನೆಲೆಗೆ ಬರುತ್ತಿದೆ. ಸಾಮಾಜಿಕ ಪ್ರಜ್ಞೆಯು ಹಿನ್ನೆಲೆಗೆ ಸರಿಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಹಿಂದೆಂದಿಗಿಂತ ಹೆಚ್ಚು ಪ್ರಗತಿಪರ ಚಳವಳಿಗಳ ಅಗತ್ಯ ಕಾಣುತ್ತಿದೆ.

ಪ್ರಗತಿಪರ ಚಳವಳಿಗಳು ಯಾವತ್ತೂ ‘ಸ್ವಾತಂತ್ರ್ಯ’ದ ವಿರೋಧಿಗಳಲ್ಲ; ವ್ಯಕ್ತಿ ಸ್ವಾತಂತ್ರ್ಯ ಮಾತ್ರವೇ ಸ್ವಾತಂತ್ರ್ಯವೆಂದು ನಂಬಿರುವುದೂ ಇಲ್ಲ. ಶತಶತಮಾನಗಳಿಂದ ಸಮಕಾಲೀನ ಸಂದರ್ಭದವರೆಗೆ ಸ್ವಾತಂತ್ರ್ಯದ ಅನುಭವವೇ ಇಲ್ಲದೆ ಜೀವನ ಸಾಗಿಸುತ್ತ ಬಂದವರ ‘ಬಿಡುಗಡೆ’ ಯಲ್ಲಿ ಸ್ವಾತಂತ್ರ್ಯಕ್ಕೆ ಸಾರ್ಥಕತೆ ತರುವುದು ಪ್ರಗತಿಪರ ಚಳವಳಿಗಳ ಆಶಯವಾಗಿದೆ. ವ್ಯಕ್ತಿ ಮತ್ತು ಸಮುದಾಯವನ್ನು ಒಂದಾಗಿ ಗ್ರಹಿಸುವ ಕ್ರಮದಲ್ಲಿ ಸ್ವಾತಂತ್ರ್ಯವನ್ನು ಅರ್ಥೈಸುವುದು ಮತ್ತು ಅನುಷ್ಠಾನಗೊಳಿಸುವುದು ಇಂತಹ ಚಳವಳಿಗಳ ಮೂಲ ಆಶಯವಾಗಿರುತ್ತದೆ. ಸಮೂಹ ಚಳವಳಿಗಳು ಸಂಪೂರ್ಣ ಕ್ರಿಯಾಶೀಲವಾಗಿದ್ದರೆ ಸಾಂಸ್ಕೃತಿಕ ಚಳವಳಿಗಳು ಪೂರಕವಾಗಿರುತ್ತವೆ; ತಮ್ಮ ಕ್ಷೇತ್ರದಲ್ಲಿ ಪ್ರಗತಿಪರ ಆಶಯಗಳನ್ನು ಜೀವಂತವಾಗಿಡುತ್ತವೆ; ಈ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಬದುಕುವ, ಬದುಕಿಸುವ, ಜನಸಮುದಾಯಕ್ಕೆ ಗೌರವ ಸಲ್ಲಿಸುತ್ತವೆ; ಈ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತವೆ.

ಸೃಜನಶೀಲರ ಸಾಮಾಜಿಕ ಜವಾಬ್ದಾರಿಯನ್ನು ಕುರಿತು ರಷ್ಯಾದ ಲೇಖಕ ಪ್ಲಖನೋವ್ ಹೇಳಿದ ಮಾತು ನನ್ನನ್ನು ಸದಾ ಕಾಡಿಸುತ್ತದೆ; ಆತ ತನ್ನ `Art and Social Life’ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ : “ಕಲಾಕಾರರು ಜನಗಳಿಂದ ಮನ್ನಣೆ ಮತ್ತು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಜನರು ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ.”

ಹೌದು; ನಾವು ಜನಗಳಿಗೆ ಜವಾಬ್ದಾರರಾಗಬೇಕು. ಜನರಿಗೆ ಜವಾಬ್ದಾರರಾಗುವ ಪ್ರಾಮಾಣಿಕ ಚಳವಳಿಗಳು ಬೇಕು. ಈ ದಿಕ್ಕಿನಲ್ಲಿ ದಲಿತ-ಬಂಡಾಯ ಸಾಹಿತ್ಯ ಚಳವಳಿಯು ತನ್ನ ಅನುಭವದ ಪಾಠದಿಂದ ಮತ್ತಷ್ಟು ಪಕ್ವತೆಯನ್ನು ಪಡೆದು ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಜಾತಿವಾದ, ಕೋಮುವಾದಗಳು ವಿಷಬೀಜ ಬಿತ್ತುತ್ತಿರುವ ವಿಷಮ ಸನ್ನಿವೇಶದಲ್ಲಿ ಸಾಂಸ್ಕೃತಿಕ ಕ್ಷೇತ್ರವು ಸಹನೆ ಮತ್ತು ಸಮಾನತೆಗಳ ಆಶಯವನ್ನು ವಿಸ್ತರಿಸಬೇಕು. ವ್ಯಕ್ತಿ ಮತ್ತು ಸಮುದಾಯಗಳ ಅನುಸಂಧಾನದಲ್ಲಿ ಸ್ವಾತಂತ್ರ್ಯದ ಕಲ್ಪನೆಯನ್ನು ಕಟ್ಟಿಕೊಳ್ಳಬೇಕು. ಇದಿಷ್ಟು ನನ್ನ ನಮ್ರ ತಿಳುವಳಿಕೆ ಮತ್ತು ಅಂತಃಕರಣದ ಆಶಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಗಣ್ಣನ ಕನ್ನಡಕ
Next post ಸಹಜ ಧ್ಯಾನ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys