ಅನುವಾದದ ಕ್ರಿಯಾಶೀಲತೆ

ಅನುವಾದದ ಕ್ರಿಯಾಶೀಲತೆ

ಕನ್ನಡದ ಆಧುನಿಕ ಸಾಹಿತ್ಯ ಅನುವಾದ ಕಾರ್ಯದಿಂದಲೇ ಆರಂಭಗೊಂಡು ಮುಂದೆ ಸ್ವತಂತ್ರ ಸಾಹಿತ್ಯ ಬೆಳೆಯಲು ಕಾರಣವಾಗಿದೆ. ಸಂಸ್ಕೃತ ಮತ್ತು ಆಂಗ್ಲ ಸಾಹಿತ್ಯ ಕನ್ನಡದಲ್ಲಿ ಅನುವಾದ ಕ್ರಿಯೆಯನ್ನು ವಿಶೇಷವಾಗಿ ಆಕರ್ಷಿಸಿದ್ದನ್ನು ನಾವು ಸಾಹಿತ್ಯ ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆ. ಬಸವಪ್ಪ ಶಾಸ್ತ್ರಿಗಳು ಶೇಕ್ಸ್‌ಪಿಯರ್ ಮತ್ತು ಕಾಳಿದಾಸನ ನಾಟಕಗಳನ್ನು ಒಡೆಯರ ಕಾಲದ ರಂಗಪ್ರಯೋಗದ ಅಗತ್ಯಕ್ಕಾಗಿ ಅನುವಾದಿಸಿದ್ದಾರೆ. ಅವರ ಸಂಸ್ಕೃತ ನಾಟಕಗಳ ಅನುವಾದದಷ್ಟು ಸಮರ್ಥ ಇಂಗ್ಲಿಷಿನ ನಾಟಕಗಳ ಅನುವಾದಗಳಿಲ್ಲ. ಅವರ ಇಂಗ್ಲಿಷ್‌ನ ಮೇಲಿನ ಪ್ರಭುತ್ವದ ಕೊರತೆಯೇ ಇದಕ್ಕೆ ಕಾರಣ. ಮಾಸ್ತಿಯವರು ಶೇಕ್ಸ್‌ಪೀಯರ್‌ನ ಅನೇಕ ನಾಟಕಗಳನ್ನು ಅನುವಾದಿಸಿದ್ದಾರೆ. ಗೋಲ್ಡಸ್ಮಿತ್‌, ಮೋಫಾಸಾ, ಪ್ಕೊಟ್, ಬಾಣಭಟ್ಟ ಮುಂತಾದ ಅನೇಕ ಪ್ರಖ್ಯಾತ ಕೃತಿಕಾರರು ಕನ್ನಡದ ಅನುವಾದಕರನ್ನು ಕಾರ್ಯಪ್ರವೃತ್ತರನ್ನಾಗಿ ಮಾಡಿದ್ದಾರೆ. ಹಳೆಗನ್ನಡ ಕಾವ್ಯವನ್ನು ಈ ನಿಟ್ಟಿನಲ್ಲಿ ಗಮನಿಸಿದರೆ ಅಲ್ಲಿಯೂ ಮಹಾಭಾರತ, ರಾಮಾಯಣದಂತಹ ಮಹಾಕೃತಿಗಳು ಕನ್ನಡದಲ್ಲಿ ಪ್ರತಿಕೃತಿಗೊಂಡದ್ದನ್ನು ನಾವು ಕಾಣುತ್ತೇವೆ. ಶ್ರೀಯವರು ಅನುಕೃತಿಯ ಮೂಲಕವೇ ಆದುನಿಕ ನವೋದಯ ಸಾಹಿತ್ಯಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಒಡೆಯರ ಕಾಲದ ಸಾಹಿತ್ಯಾನುವಾದ ಪರಂಪರೆ ನವೋದಯ ಕಾಲದಲ್ಲಿ ಮುಂದುವರಿದು ಈಚಿನ ದಶಕಗಳಲ್ಲಿ ಅನುವಾದ ಕಾರ್ಯ ಸಹೋದರ ಭಾಷೆಗಳ ಉತ್ತಮ ಸಾಹಿತ್ಯದ ಆದಾನ ಪ್ರದಾನವೆಂಬ ರಾಷ್ಟ್ರೀಯ ಭಾವೈಕ್ಯದ ದೃಷ್ಟಿಯನ್ನು ತಾಳಿ ನಿಂತಿದೆ. ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳು ಅನುವಾದ ಕಾರ್ಯಶಾಲೆ (Translation workshop)ಗಳ ಮೂಲಕ ಈ ಕೆಲಸಕ್ಕೆ ಉತ್ತೇಜನವನ್ನು ನೀಡಿ ಪ್ರಶಸ್ತಿ ಪ್ರಾಪ್ತ ಕೃತಿಗಳು ಅನುವಾದಗೊಂಡು ಭಾರತದ ಎಲ್ಲಾ ಭಾಷೆಗಳ ಓದುಗರಿಗೆ ಲಭ್ಯವಾಗುವಂತೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿಯೆ ಅನೇಕರು ಸ್ವತಂತ್ರವಾಗಿ ಸಾಹಿತ್ಯಾಸಕ್ತಿಯಿಂದ ಹಿಂದಿ, ಮರಾಠಿ, ತೆಲಗು, ಮಲಯಾಳಿ, ತಮಿಳುಗಳ ಹಲವಾರು ಕೃತಿಗಳನ್ನು ಕನ್ನಡಕ್ಕೆ ಹಾಗೂ ಕನ್ನಡದಿಂದ ಇಂಗ್ಲಿಷ್, ಹಿಂದಿ ಮರಾಠಿ ಭಾಷೆಗಳಿಗೆ ಅನುವಾದ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಮುಂಬಾಯಿಯಲ್ಲಿ ಕೊರತೆಯಿಲ್ಲದೆ ನಡೆದಿದೆ. ಭಾಷಾಂತರಕಾರನಿಗೆ ಇರಬಹುದಾದ ಮುಖ್ಯ ಪ್ರೇರಣೆಗಳು ಎರಡು. ವೈಯಕ್ತಿಕ ಮತ್ತು ಸಾಮಾಜಿಕ. ವೈಯಕ್ತಿಕ ಹೊಸ ಬರಹಗಾರ ತನ್ನ ಸಾಹಿತ್ಯ ಶಕ್ತಿಯನ್ನು ಪರೀಕ್ಷಿಸಿಕೊಂಡು ಶೈಲಿಯನ್ನು ಹದಗೊಳಿಸುವುದಕ್ಕಾಗಿ ಭಾಷಾಂತರ ಗಾರನಾಗುತ್ತಾನೆ. ಮುಂದೆ ಇವನು ತನ್ನ ಸಾಹಿತ್ಯ ಪ್ರೀತಿಯನ್ನು ತನ್ನ ಸ್ವತಂತ್ರ ಬರವಣಿಗೆಯಲ್ಲಿ ಪಳಗಿಸಿಕೊಳ್ಳಲು ಸಾಧ್ಯವಿದೆ. ಸ್ವಾತಂತ್ರ ಲೇಖಕನಾಗುವುದು ತನಗೆ ಸಾಧ್ಯವಿಲ್ಲವೆಂದು ಮನವರಿಕೆಯಾದಾಗ ಈ ಕಲಾಪ್ರಿಯನು ಸಾಹಿತ್ಯಲೋಕಕ್ಕೆ ತನ್ನ ಕಾಣಿಕೆಗಳನ್ನು ಸಲ್ಲಿಸಬೇಕೆಂಬ ಒತ್ತಾಸೆಯಿಂದ ಭಾಷಾಂತರಕ್ಕೆ ಕೈಹಾಕುತ್ತಾನೆ ಮತ್ತು ಕೇವಲ ಅನುವಾದಕನಾಗಿಯೆ ಉಳಿಯುತ್ತಾನೆ. ಇನ್ನು ಸಾಮಾಜಿಕ ಸೇವೆಯಲ್ಲಿ ನೋಡಿದರೆ ಒಂದು ಭಾಷೆಯ ಸಾಹಿತ್ಯದ ಉತ್ತಮಿಕೆಯು ಅನುವಾದಕನಿಗೆ ಸ್ಫೂರ್ತಿಯಾಗಬಹುದು. ಉತ್ತಮ ಕೃತಿಗಳ ಅನುವಾದದಿಂದ ತನ್ನ ಸಾಹಿತ್ಯದ ಭಂಡಾರವನ್ನು ತುಂಬಿಕೊಳ್ಳುವ ಆತುರ ಈ ಕೆಲಸಕ್ಕೆ ಅವನನ್ನು ತೊಡಗಿಸುತ್ತದೆ. ಶರತ್‌ಚಂದ್ರ ಚಟರ್ಜಿ. ಪ್ರೇಮ್‌ಚಂದ್, ಮ್ಯಾಕ್ಸಿಂ ಗಾರ್ಕಿ ಮುಂತಾದವರ ಸಾಹಿತ್ಯ ಕೃತಿಗಳು ಸಾಮಾಜಿಕ ನೆಲೆಯಲ್ಲಿಯೆ ಅನುವಾದಗೊಂಡವು ಆಗಿವೆ.

ಭಾಷಾಂತರ ಕೀಳು ಕೆಲಸವಲ್ಲ. ಸುಲಭವಾದ ಕೆಲಸವೂ ಅಲ್ಲ. ನಿರರ್ಥಕವಾದ ಕೆಲಸವೂ ಸ್ವತಂತ್ರ ಕಲಾವಿದನಲ್ಲಿ ಇರಬೇಕಾದ ಪ್ರತಿಭೆ, ತಿಳುವಳಿಕೆ, ನುಡಿಬಲ್ಮೆ ಒಳ್ಳೆಯ ಭಾಷಾಂತರಕಾರನಲ್ಲಿಯೂ ಇರಬೇಕಾಗುತ್ತದೆ. ‘ಮ್ಯಾಕ್‌ಬೆತ್’ ಅನುವಾದದ ಸಂದರ್ಭದಲ್ಲಿ ಡಿವಿಜಿಯವರು ಹೇಳಿದ ಈ ಮಾತು ಗಮನಾರ್ಹವಾಗಿದೆ. ತೃಪ್ತಿಕರವೂ, ಕಲಾತ್ಮಕವೂ ಆದ ಭಾಷಾಂತರ ಸ್ವತಂತ್ರ ಕೃತಿಯಷ್ಟೆ ಗುಣಮೊತ್ತದಿಂದ ಕೂಡಿರುತ್ತದೆ. ಈಡಿಪಸ್, ಹೆಮಲೆಟ್, ಮ್ಯಾಕ್‌ಬೆತ್, ಮಿಡಸಮ್ಮರ್‌ನೈಟ್, ಪಿಗ್ಮಿಲಿಯನ್, ಶಾಕುಂತಲಾ, ಊರುಭಂಗ, ಭಾಣಭಟ್ಟನ ಕಾದಂಬರಿ ಮುಂತಾದ ಕೃತಿಗಳು ಮತ್ತೆ ಮತ್ತೆ ಭಾಷಾಂತರ. ರೂಪಾಂತರಗೊಂಡು ತಮ್ಮಲ್ಲಿಯ ನ್ಯೂನತೆಯನ್ನು ನಮಗೆ ತೋರಿಸುತ್ತವೆ. ಭಾಷಾಂತರವು ಒಂದು ವಿಶಿಷ್ಟ ಕಲೆ. ಈ ಕ್ಷೇತ್ರದಲ್ಲಿಯೆ ತನ್ನ ಕಾಣಿಕೆಗಳನ್ನು ಕೊಡಬಯಸುವ ಅನುವಾದಕ ತುಂಬಾ ಎಚ್ಚರ ವಹಿಸಬೇಕಾಗುತ್ತದೆ. ಅವನು ತನ್ನಲ್ಲಿ ಕೆಲವು ಮುಖ್ಯ ಅಂಶಗಳನ್ನು ಬೆಳೆಸಿಕೊಳ್ಳಬೇಕು.

ಕೃತಿಯ ಆಯ್ಕೆ ಬಹಳ ಸೂಕ್ಷ್ಮಗ್ರಾಹಿಯಾದ ವಿಷಯ. ಯಾವುದೇ ಕಾರಣಕ್ಕಾಗಿ ಆಯ್ಕೆಯಲ್ಲಿ ಪಕ್ಷಪಾತವಾದಾಗ ಅನುವಾದಿತ ಕೃತಿಯಲ್ಲಿ ಸಾಹಿತ್ಯಕ ದೋಷ ಗೋಚರಿಸುವುದು.

ಪ್ರತಿಭೆ, ಆಸಕ್ತಿ ಹಾಗೂ ಸಾಹಿತ್ಯೋದ್ದೇಶ ಭಾಷಾಂತರಕಾರನಲ್ಲಿ ಒಳ್ಳೆಯ ಪ್ರಮಾಣದಲ್ಲಿರಬೇಕಾದುದು ಅಗತ್ಯವಿದೆ.

ನುಡಿಬಲ್ಮೆ-ಎರಡೂ ಭಾಷೆ, ಶಬ್ದಗಳ ಜ್ಞಾನ ಮಾತ್ರವಲ್ಲದೆ ಮರ್ಮವನ್ನು ತಿಳಿಯುವ ಯೋಗ್ಯತೆಯನ್ನು ಅನುವಾದಕ ಸತತ ಅಭ್ಯಾಸದಿಂದ ಬೆಳೆಸಿಕೊಳ್ಳಬೇಕು.

ಭಾಷಾಂತರಕಲೆಯ ಜೀವಾಳವೆಂದರೆ ತಾದಾತ್ಮ್ಯ ಎಂದು ಮ್ಯಾಥ್ಯೂ ಅರ್ನಾಲ್ಡ ಹೇಳಿದ್ದಾನೆ. (union of the translator with the original) ‘ಭಾಷಾಂತರಕಾರ ಮತ್ತು ಮೂಲ ಲೇಖಕ ಇಬ್ಬರೂ ಭಿನ್ನವ್ಯಕ್ತಿಗಳು ಅವನ ಅನುಭವ, ಭಾವನೆ, ವಿಚಾರ, ಶೈಲಿಯಲ್ಲಿ ಹೊಂದಾಣಿಕೆ ಎಷ್ಟು ಹೆಚ್ಚು ಇರಲು ಸಾಧ್ಯವೋ ಅಷ್ಟು ಭಾಷಾಂತರದ ಕೆಲಸ ಫಲಕಾರಿಯಾಗುವುದು. ಭಾಷಾಂತರಕಾರನ ಸಹೃದಯತೆ ಎಷ್ಟು ಹೆಚ್ಚುವುದೋ ಅಷ್ಟು ಅವನ ತಾದಾತ್ಮ್ಯವು ಸಫಲವಾಗುವುದು’ ಎಂಬ ಮುಗಳಿಯವರ ಮಾತು ತುಂಬ ಅರ್ಥಪೂರ್ಣವಾಗಿದೆ.

ಸಾಮಾನ್ಯವಾಗಿ ಭಾಷಾಂತರಕಾರ ತನಗೆ ಸರಿಹೋಗುವ ಕೃತಿಯನ್ನೇ ಅನುವಾದಕ್ಕೆ ಆರಿಸಿಕೊಳ್ಳುತ್ತಾನೆ. ಆದರೆ ಎಷ್ಟೋ ಸಾರಿ ಪತ್ರಿಕೆಗಳ ಅಗತ್ಯಕ್ಕಾಗಿ, ಅಕಾಡೆಮಿಗಳ ಒತ್ತಾಯಕ್ಕಾಗಿ, ಮಿತ್ರ ಸ್ನೇಹಕ್ಕಾಗಿ, ಒಬ್ಬ ಕೃತಿಕಾರ ಮತ್ತು ಅವನ ಕೃತಿಗಳ ಕುರಿತಾದ ತನ್ನ ವೈಯಕ್ತಿಕ ಒಲವಿನ ಕಾರಣಕ್ಕಾಗಿ, ಅಕಾಡಮಿಕ್ ಉದ್ದೇಶಕ್ಕಾಗಿ ಭಾಷಾಂತರದ ಕೆಲಸ ನಡೆಯುತ್ತದೆ. ಇದರಿಂದ ಮಾತ್ರ ಭಾಷಾಂತರಕಲೆಯ ಸಾಮಾಜಿಕ ಸೇವೆ ಸಾಧ್ಯವಿಲ್ಲವೆಂದೇ ನನ್ನ ಅನಿಸಿಕೆ. ‘The more powerfully communicated is the transference better is the creation’ ಬೇಂದ್ರೆಯವರ ‘ನಾಕುತಂತಿ’ ನಾಗಚಂದ್ರನ ‘ಪಂಪರಾಮಾಯಣ’ ಮುದ್ದಣನ ‘ರಾಮಾಶ್ವಮೇಧ’ ಮತ್ತು ‘ಅದ್ಭುತ ರಾಮಾಯಣ’ ಬಸವಣ್ಣ ಅಥವಾ ಅಕ್ಕನ ವಚನಗಳು, ಕುವೆಂಪು ‘ರಾಮಾಯಣ ದರ್ಶನಂ’ ಇವೆಲ್ಲ ವೈಯಕ್ತಿಕ ಒಲವು, ಅಕಾಡಮಿಕ್ ಇಂಟರೆಷ್ಟಗಳ ಅಂತರ್ಗತ ಅನುವಾದಗೊಂಡ ಮಹಾಕೃತಿಗಳು. ಡಾ.ಪುತ್ರನ್, ಪ್ರಧಾನ ಗುರುದತ್ತ, ರಾಮಾನುಜಂ, ಗಣೇಶ ಮಲ್ಯ ಇವರು ಪ್ರಾಮಾಣಿಕವಾದ ಅನುವಾದಕರು ನಿಷ್ಣಾತರು. ಆದರೆ ಅನುವಾದಗೊಂಡ ಭಾಷೆಯ ಸಾಹಿತ್ಯ ಜಗತ್ತಿನಲ್ಲಿ ಈ ಕೃತಿಗಳ ಅಸ್ತಿತ್ವದ ಮಹತ್ವ ಎಷ್ಟು?

ಅನುವಾದಕರು ಅನುವಾದ ಕ್ರಿಯೆಯಲ್ಲಿ ಎದುರಿಸಬೇಕಾಗಿ ಬರುವ ಕೆಲವು ಸಹಜ ಸಮಸ್ಯೆಗಳಿವೆ. ಸಂಕ್ಷಿಪ್ತವಾಗಿ ಅವುಗಳು ಹೀಗಿವೆ-ಪ್ರಾದೇಶಿಕ ಭಿನ್ನದೆ ಉದಾ : ಮಹಾರಾಷ್ಟ್ರದ ಸಂಸ್ಕೃತಿ, ವ್ಯಕ್ತಿಗಳ ಸ್ವಭಾವ (behaviour) ಭಾಷಾ ರೀತಿಯಲ್ಲಿ ಭಿನ್ನವಾಗಿದೆ. ಅವರ ಕುಟುಂಬ ಜೀವನದ ಕಲ್ಪನೆ. ನಂಬಿಕೆ ಆಚರಣೆಗಳು ಭಿನ್ನವಾಗಿವೆ. ನಗರ ಪ್ರಜ್ಞೆಯಲ್ಲಿಯೂ ವ್ಯತ್ಯಾಸವಿದೆ. ಈ ಕಾರಣದಿಂದ ಅವರ ಬದುಕಿನ ಒಟ್ಟು ಸ್ವರೂಪ ಬೇರೆಯಾಗುತ್ತದೆ. ಅಂತೆಯೆ ಇತರ ಪ್ರಾಂತ ಭೇದವೂ ಕೃತಿಯಲ್ಲಿ ಗೋಚರಿಸುವುದರ ಸೂಕ್ಷ್ಮಗಳನ್ನು ಅನುವಾದಕ ಅರಿತು ಕೊಳ್ಳಬೇಕಾಗುತ್ತದೆ. ಇದು ಸರಳವಿಲ್ಲ. ಭಾಷೆ, ಶೈಲಿ, ನಿರೂಪಣೆಯ ಪದ್ಧತಿಯು ಅನುವಾದಕನಿಗೆ ಸಮಸ್ಯೆಯನ್ನು ಒಡ್ಡುತ್ತವೆ. ಕೃತಿಯ ತರ್ಜುಮೆ ಅನುವಾದಿತ ಭಾಷೆಯ ಓದುಗರನ್ನು ಸೆರೆಹಿಡಿಯಲು ಈ ಸಮಸ್ಯೆಯನ್ನು ಬಹಳ ಎಚ್ಚರದಿಂದ ಎದುರಿಸಬೇಕಾಗುತ್ತದೆ. ಇಲಿಯಡ್, ಡಿಕೇಮರನ್, ವೇಷ್ಟಲ್ಯಾಂಡ್, ಪೆರಡಾಯಿಸ್ ಲೋಸ್ಟ, ಯುಲಿಸೀಸ್ ಮುಂತಾದ ವಿಶ್ವಮಾನ್ಸ ಕೃತಿಗಳ ಅನುವಾದ ಕೇವಲ ಸಾಹಿತ್ಯಾಸಕ್ತಿಯನ್ನು ಪೂರೈಸಿಕೊಳ್ಳಲು ಮಾಡುವ ಪ್ರಯತ್ನ ಮಾತ್ರ. ಪ್ರಧಾನ ಗುರುದತ್ತರು ಮಾಡಿದ ಕುವೆಂಪುರ “ಶ್ರೀ ರಾಮಾಯಣದರ್ಶನಂ”ದ ಹಿಂದಿ ಅನುವಾದವನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ.

ಪಾತ್ರಗಳ ಹೆಸರುಗಳನ್ನು ಅನುವಾದಕ ತನ್ನ ಅನುಕೂಲಕ್ಕಾಗಿ ಬದಲಿಸಿಕೊಳ್ಳಬಹುದೆ? ಕೆಲವು ಪ್ರಾದೇಶಿಕ ಸೊಗಸಿನಿಂದ ಕೂಡಿದ ಉಪನಾಮ. ಪ್ರಿಯನಾಮ (petnames)ಗಳನ್ನು ಖಂಡಿತಾ ಬದಲಿಸಬಾರದು. ಭಾಷಾಂತರಕಾರನಿಗೆ ಈ ಅಧಿಕಾರವಿಲ್ಲ. ಅವನು ಅನುಸೃಷ್ಟಿಯನ್ನು ಬರೆಯಲು ಹೂರಟಾಗ (Transcreation) ಅನುವಾದದ (Translation) ಕೈಬಿಡುತ್ತಾನೆ. ಅನುಸೃಷ್ಟಿಯಲ್ಲಿ ಸ್ವಂತದ ಅನುಭೂತಿ, ಕಲ್ಪನೆ (Fantasy) ಶೈಲಿ, ಸೃಜನ ಗುಣಗಳು ಸಾಕಷ್ಟು ಪ್ರಮಾಣದಲ್ಲಿದ್ದು ಇದು ಅನುವಾದ ಕೃತಿಯಿಂದ ಗುಣಮಟ್ಟದಲ್ಲಿ ಹೆಚ್ಚು ಗಣನೀಯವಾಗಿರುತ್ತದೆ ಆದರೆ ಮೂಲಕೃತಿಯ ಮೌಲ್ಯಕ್ಕೆ ನ್ಯಾಯ ಮಾಡಿದಂತಾಗ ಬಹುದೆ ಎನ್ನುವುದು ವಿವಾದಾಸ್ಪದವಾಗಿದೆ.

ಅನುಭವ ಭಿನ್ನತೆಗಳು ಅನುವಾದಕನನ್ನು ಹೆಚ್ಚು ಕಾಡುಕ್ತವೆ. ಉದಾ. ಅವಿಭಕ್ತ ಕುಟುಂಬದಲ್ಲಿ ಜೀವಿಸುವ ಮರಾಠಿ ಮುಪ್ಪಿನ ಮನುಷ್ಯನ ಸಂವೇದನೆ, ನೋವುಗಳು ಕನ್ನಡದ ಮುಪ್ಪಿನ ಮನುಷ್ಯನ ಅನುಭವವಾಗಲಾರದು. ‘ಕಫನ್’ನ ಗೀಸುನ ಮುಗ್ಧ ಮನಸ್ಸಿನ ಅವಿವೇಕ ಚೋಮನ ಸ್ಫುಟ ಮನಸ್ಸಿನ ಆಕಾಂಕ್ಷೆ ಒಂದೇ ಸಮವಾದ ನೋವು ಆಗಲಾರದು. ಹಾಗೆಯೇ ಇತರ ಅನುಭವಗಳು. ಈ ಕಾರಣವೇ ಬಹುಶ ಯಾವುದೇ ಪ್ರಾಂತೀಯ ಸಾಹಿತ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದು ಅನುವಾದಗೊಂಡಾಗ ಅನುವಾದಿತ ಭಾಷೆಯ ಶ್ರೇಷ್ಠ ಇಲ್ಲವೆ ಜನಪ್ರಿಯ ಕೃತಿಯಾಗಲಿಲ್ಲ. ಉದಾ. ‘ಮರಳಿ ಮಣ್ಣಿಗೆ’ ಇಂಗ್ಲೀಷ್, ಹಿಂದಿ, ಮರಾಠಿಯಲ್ಲಿ; ‘ನಾಕುತಂತಿ’ ಹಿಂದಿ, ಇಂಗ್ಲೀಷ್‌ನಲ್ಲಿ: ‘ರಾಮಾಶ್ವಮೇಧ’ ಇಂಗ್ಲೀಷ್‌ನಲ್ಲಿ, ಡಿಕಾಮರೋನ್ ಕನ್ನಡದಲ್ಲಿ; ಬಲ್ಲಾಳ, ಚಿತ್ತಾಲ ಕಾದಂಬರಿಗಳು ಮರಾಠಿಯಲ್ಲಿ – ಹೀಗೆ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಭೈರಪ್ಪ ಕಾದಂಬರಿಗಳು ಹಿಂದಿ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿರುವುದು ಒಂದು ಅಪವಾದ ಮಾತ್ರ.

ಇನ್ನು ಒಂದು-ಅನುವಾದಿತ ಕೃತಿಯ ಯಶಸ್ಸು ಮೂಲಕೃತಿಯ ಕೃತಿಗಾರನಿಗೆ ಸಲ್ಲುತ್ತದೆಯೆ ಹೊರತು ಅನುವಾದಕನಿಗಲ್ಲ. ಇದು ತುಂಬಾ ವಿಶಾದಕರ. ಅನುವಾದಕ ವ್ಯರ್ಥ ಕೈಂಕರ್ಯದ ನಿರುತ್ಸಾಹ ಭಾವವನ್ನು ತಾಳುತ್ತಾನೆ. ಕನ್ನಡದಲ್ಲಿ ಅನುವಾದ ಸಾಹಿತ್ಯ- ಕನ್ನಡ ಸಾಹಿತ್ಯದ ಗದ್ಯ ಪ್ರಕಾರಗಳು ಬೆಳೆದು ಪ್ರಚಲಿತವಾಗುವುದಕ್ಕೆ ಮೊದಲ ದಶಕಗಳಲ್ಲಿ ಅನುವಾದದ ಕೃತಿಗಳು ಪ್ರಕಟವಾಗುವುದು ಅನಿವಾರ್ಯವಾಗಿತ್ತು. ಆದ್ದರಿಂದಲೇ ಸಂಸ್ಕೃತ, ಇಂಗ್ಲೀಷ್, ಬಂಗಾಲಿಗಳಿಂದ ಕತೆ, ಕಾದಂಬರಿ, ನಾಟಕಗಳು ಅನುವಾದಗೊಂಡವು. ಅನುವಾದ ಕಲೆಯ ದೃಷ್ಟಿಯಿಂದ ಇವುಗಳು ಅಥೆಂಟಿಕ್ ಆಗಿರದಿದ್ದರೂ ಕನ್ನಡದಲ್ಲಿ ಸಾಹಿತ್ಯಾರುಚಿಗೆ ಒಂದು ದೃಢ ನೆಲೆಯನ್ನು ರೂಪಿಸುವಲ್ಲಿ ಅವುಗಳ ಪಾತ್ರವನ್ನು ನಿರ್ಲಕ್ಷಿಸಲಾಗುವುದಿಲ್ಲ. ಶರತ್‌ಚಂದ್ರರ ಅನೇಕ ಕಾದಂಬರಿಗಳನ್ನು ಗುರುನಾಥ ಜೋಷಿಯವರು ಅನುವಾದಿಸಿದರು. ಅಧಿಕಾರ, ದೇವದಾಸ, ಶೇಷ ಪ್ರಶ್ನೆ, ಚರಿತ್ರ ಹೀನ ಇವುಗಳ ಭಾಷಾಂತರವನ್ನು ಈಗ ಅಕಾಡೆಮಿಕ್ ಆಸಕ್ತಿಯಿಂದ ಪರಿಶೀಲಿಸಿದರೆ ಲೋಪ ದೋಷಗಳು ಕಂಡುಬರುವವು. ಆದರೆ ಶರತ್ ಸಾಹಿತ್ಯ ಕನ್ನಡದಲ್ಲಿ ಜನಪ್ರಿಯವಾಗಲು ಅವರ ದೇವದಾಸ ಒಂದು ವಿಫಲ ಪ್ರೇಮಕತೆಯೇ ಕಾರಣವಾಗಿದೆ. ಅಹೋಬಲ ಶಂಕರ ಸಾಹೇಬ ಬೀಬಿ ಗುಲಾಮ ಎಂಬ ಬೃಹತ್ ಕಾದಂಬರಿಯನ್ನು ನೇರ ಬಂಗಾಲಯಿಂದ ಕನ್ನಡಕ್ಕೆ ತಂದರು. ಆದರೆ ಅದು ಶರತ್ ಇಲ್ಲವೆ ಠಾಗೋರರ ಶ್ರೀಕಾಂತ, ಮುಳುಗಿದ ದೋಣಿ, ಮನೆ-ಜಗತ್ತುಗಳಷ್ಟು ಜನಪ್ರಿಯವಾಗಲಿಲ್ಲ. ಹಾಗೆಯೇ ಶೇಕ್ಸ್‌ಪಫಿಯರ್, ಓ ಹೆನ್ರಿ, ಜೇಮ್ಸಜೋಯ್ಸ, ಹಾರ್ಡಿ ಮುಂತಾದವರ ಕೃತಿಗಳ ಅನುವಾದಗಳು, ಕನ್ನಡದಲ್ಲಿ ಸಾಹಿತ್ಯದ ಒಂದು ರಂಜಕ ವಾತಾವರಣವನ್ನು ನಿರ್ಮಿಸಲು ಮುಖ್ಯವಾಗಿ ಉಪಯುಕ್ತವಾದವು. ಕನ್ನಡದಲ್ಲಿ ಸ್ವತಂತ್ರ ಗದ್ಯ-ಪದ್ಯ ಪ್ರಕಾರ ವಿರಾಜಿಸಿದಾಗ ಸಹಜವಾಗಿಯೆ ಭಾಷಾಂತರದ ಕೆಲಸ ಕಡಿಮೆಯಾಯಿತು. ಆದರೆ ಈಚಿನ ಕಾಲದಲ್ಲಿ ಇಂಗ್ಲೀಷ್ ಪ್ರಾಧ್ಯಾಕರನೇಕರು ಕನ್ನಡದ ವಿಶಿಷ್ಟ ಲೇಖಕರಾಗಿ ಯಶಸ್ಸು ಗಳಿಸುತ್ತಿರುವಾಗ ಅವರ ಬರವಣಿಗೆಯ ಅಂತರ್‌ಪ್ರೇರಣೆಗಳನ್ನು ಹೊರಗಿನ ಸಾಹಿತ್ಯದಲ್ಲಿ ಹುಡುಕುವುದು ಅನಿವಾರ್ಯವಾಯಿತು. ಇಂತಹ ಪರಿಸ್ಥಿತಿಯಲ್ಲಿ ಮತ್ತಿತರ ಭಾಷೆಯ ಉತ್ತಮ ಕೃತಿಗಳು ಇತರ ಭಾಷೆಗಳಿಗೂ ಅನುವಾದಗೊಳ್ಳಬೇಕು ಎಂಬುದರ ಅಗತ್ಯ ಕಾಣಿಸಿಕೊಂಡಿತು.

ಶಿವರಾಮ ಕಾರಂತರ ಕಾದಂಬರಿಗಳು ಮರಾಠಿಗೆ; ಗಿರೀಶ ಕಾರ್ನಾಡ್, ಕಂಬಾರರ ನಾಟಕಗಳು ಹಿಂದಿ, ಮರಾಠಿಗೆ; ಅನಂತಮೂರ್ತಿಯವರ ಕಾದಂಬರಿ ‘ಸಂಸ್ಕಾರ’ ಇಂಗ್ಲೀಷ್ ಹಾಗೂ ಇತರ ಭಾಷೆಗಳಿಗೆ; ಬಾದಲ ಸರ್ಕಾರ, ಮೋಹನ ರಾಕೇಶ, ಶಂಕರ ಶೇಸ ನಾಟಕಗಳು ಕನ್ನಡಕ್ಕೆ ಭಾಷಾಂತರಗೊಂಡು ಪ್ರಕಟವಾಗಿವೆ. ಭೈರಪ್ಪ, ಜಯವಂತ ದಳ್ವಿ, ಭಕ್ಷಿ, ಕಮಲೇಶ್ವರ ಪ್ರೇಮಚಂದ ಮುಂತಾದವರ ಕೃತಿಗಳ ಅನುವಾದ ಬೇರೆ ಭಾಷೆಗಳಲ್ಲಿ ಅವುಗಳು ಪ್ರಸಿದ್ಧವಾಗಲಿ ಎನ್ನುವುದೇ ಆಗಿದೆ. ಇನ್ನೊಂದು ಬಗೆ ಅಕಾಡಮಿ ಪ್ರಶಸ್ತಿ ಗ್ರಂಥಗಳ ಅನುವಾದ ಅಕಾಡಮಿಯವರೇ ಅನುವಾದಕರನ್ನು ನೇಮಿಸಿ ಅವರಿಂದ ಅನುವಾದ ಮಾಡಿಸುವುದು. ಈ ರೀತಿಯ ಭಾಷಾಂತರ ಕ್ರಿಯೆಯಲ್ಲಿ ಅಸಡ್ಡೆ ಮತ್ತು ಅಕ್ಷಮತೆಯೆ ಹೆಚ್ಚಾಗಿ ಗಮನಕ್ಕೆ ಬಂದಿದೆ. ಇದಕ್ಕೆ ಬಹುಶಃ ಅಕಾಡಮಿಯವರ ಕ್ರಮ ನಿಬಂಧನೆ ಹಾಗೂ ಸಂಭಾವನೆಯ ನಿಯಮವೇ ಕಾರಣವಾಗಿರಬಹುದು. ಅಲ್ಲದೆ ಒಂದು ಭಾಷೆಯ ಉತ್ತಮ ಕೃತಿ ಅನುವಾದಗೊಂಡ ಭಾಪೆಯ ಉತ್ತಮ ಕೃತಿಯಾಗಲಾರದು. ಇಂತಹ ಭಾಷಾಂತರ ಸಾಹಿತ್ಯ ಅಕಾಡಮಿಕ್ ಆಸಕ್ತಿಯದು ಮತ್ತು ರಾಷ್ಟ್ರೀಯ ಸಮನ್ವಯದ ಭಾವನೆಯಿಂದ ಕೂಡಿದ್ದು ಮಾತ್ರವಾಗಿರುತ್ತದೆ. ಸಾಹಿತ್ಯ ಅಕಾಡಮಿಯ ಪ್ರಕಟನೆಗಳ ರಾಶಿಯನ್ನು ದಿಲ್ಲಿಯ ಗೋದಾಮಿನಲ್ಲಿ ಹೋಗಿ ಪ್ರತ್ಯಕ್ಷ ನೋಡಿದರೆ ಇಲ್ಲವೆ ಅಕಾಡಮಿಯವರು ಪ್ರತಿವರ್ಷವೂ ಅಲ್ಲಲ್ಲಿ ಏರ್ಪಡಿಸುವ ರಿಯಾಯತಿ ಬೆಲೆಯ ಪ್ರದರ್ಶನ, ಮಾರಾಟವನ್ನು ಕಂಡರೆ ಈ ವಿಷಯ ಮನೆದಟ್ಟಾಗುವುದು. ಯುಗಾಂತರ, ಸಿರಿಸಂಪಿಗೆ, ಪರ್ವ, ತುಘಲಕ್, ಯಯಾತಿಗಳ ಜನಪ್ರಿಯತೆ, ಬೇಡಿಕೆಗಳ ವಿಷಯವನ್ನು ಬೇರೆಯೇ ಕಾರಣಗಳಿಗಾಗಿ ಸದ್ಯ ಬಿಡಬಹುದು. ನಾಲ್ಕನೆಯ ಬಗೆ ಪತ್ರಿಕೆಗಳ ಅನುವಾದ ಸಾಹಿತ್ಯ; ಪತ್ರಿಕೆಗಳು ಒಂದು ಭಾಷೆಯ ಸಾಹಿತ್ಯ ಸಂಸ್ಕೃತಿಯ ಪ್ರಚಾರಕಾರ್ಯವನ್ನು ಸಮರ್ಥವಾಗಿ ಮಾಡಬಲ್ಲವು. ಎಲ್ಲಾ ಕಾಲಮಿತಿಯ (periodicals) ಪತ್ರಿಕೆಗಳು ಹಲವಾರು ಬಗೆಯ ಸಾಹಿತ್ಯ ರಚನೆಗಳಿಗೆ ಅವಕಾಶ ನೀಡುತ್ತವೆ. ಕತೆ, ಕವಿತೆ, ಧಾರಾವಾಹಿ ಕಾದಂಬರಿಗಳಿಗೆ ಹೆಚ್ಚಿನ ಬೇಡಿಕೆ ಬರುವುದು ಈ ಸಂದರ್ಭದಲ್ಲಿಯೆ. ಕನ್ನಡದಲ್ಲಿ ಈ ಬಗೆಯ ಬೇಡಿಕೆಯನ್ನು ಅನುವಾದ ಕೃತಿಗಳು ಪೂರೈಸುತ್ತವೆ. ಅನೇಕ ಅಸಮರ್ಥ ಅನುವಾದಕರು ಯಂಡಮೂರಿ, ಅಖಿಲನ್, ಅಮೃತಾ ಪ್ರೀತಮ, ಗುಲ್ಮನ ನಂದಾ ಮೊದಲಾದವರ ಕತೆ ಕಾದಂಬರಿಗಳನ್ನು ಭಾಷಾಂತರಿಸಿ ಕೊಟ್ಟ ಪತ್ರಿಕಾ ಸಾಹಿತ್ಯ ಓದುವವರ ತಾತ್ಕಾಲಿಕ ಹಂಬಲವನ್ನು ಗಮನಿಸುತ್ತಾರೆ. ಈಗಿನ ಬಹುತೇಕ ಎಲ್ಲಾ ಕನ್ನಡ ಪತ್ರಿಕೆಗಳಲ್ಲಿ ಕಾಣಸಿಗುವ ಅನುವಾದ ಕತೆ, ಅನುವಾದ ಧಾರಾವಾಹಿ ಕಾದಂಬರಿಗಳು ನನ್ನ ಹೇಳಿಕೆಗೆ ಪೂರಕವಾಗಿವೆ. ಅನುವಾದ ನಾಟಕಗಳ ವಿಷಯ ಮಾತ್ರ ಹಾಗಲ್ಲ. ಕನ್ನಡ ರಂಗ ಮಂಚಕ್ಕೆ ಮತ್ತೆ ಮತ್ತೆ ಹೊಸ ನಾಟಕಗಳು ಬೇಕಾಗಿರುವುದರಿಂದ ಮತ್ತು ಕನ್ನಡದಲ್ಲಿ ಒಳ್ಳೆಯ ನಾಟಕಗಳ ಕೊರತೆಯಿರುವುದರಿಂದ ಮರಾಠಿ, ಹಿಂದಿ ನಾಟಕಗಳನ್ನು ನೋಡಿ ತಮ್ಮ ರಂಗಮಂಚಕ್ಕೆ ತರುವ ಆತ್ಮವಿಶ್ಚಾಸ ಉಂಟಾದಾಗ ಅವುಗಳ ಅನುವಾದವಾಗುತ್ತದೆ. ಅಧ್ಯಯನದ ಸಲುವಾಗಿ ಎಲಿಯಟ್, ಅರ್ನಾಲ್ಡ, ಹೆಜಲಿಟ್ ಮುಂತಾದ ಆಂಗ್ಲ ವಿದ್ವಾಂಸರ ವಿಮರ್ಶನ, ಆಲೋಚನ ಗ್ರಂಥಗಳನ್ನು ಇನಾಂದಾರ ಕೃಷ್ಣ ಕುಮಾರ, ಸುಬ್ಬಣ್ಣ ಮೊದಲಾದ ವಿದ್ವಾಂಸರು ಅದ್ಭುತವಾಗಿ ಅನುವಾದಿಸಿದ್ದಾರೆ. ಪೀಟರ್ ಕ್ಲಾಸ್‌ರ ‘ತುಳುವ ದರ್ಶನ’ವೂ ಅವುಗಳಲ್ಲಿ ಒಂದು. ಮುಂಬಯಿಯಲ್ಲಿ ಹಲವಾರು ಲೇಖಕರು ಅನುವಾದದ ಕೆಲಸವನ್ನು ಮಾಡಿದ್ದಾರೆ. ಅತ್ಯಂತ ಸಮರ್ಥವಾಗಿ ಕೆಲವರು, ಇನ್ನು ಕೆಲವರು ಅನುವಾದ ಮಾಡಿಯಾದರೂ ‘ಸಾಹಿತಿ’ಯಾಗೋಣ ಎಂಬ ಆಸೆಯಿಂದ. ಮುಂಬಯಿಯ ಡಾ. ವಾಸು ಪುತ್ರನ್, ಹಿಂದಿಯ ವಿದ್ವಾಂಸರು, ಕನ್ನಡದ ಉತ್ತಮ ಕೃತಿಗಳನ್ನು ಮುಖ್ಯವಾಗಿ ಭೈರಪ್ಪ ಕಾದಂಬರಿಗಳನ್ನು ನಿಷ್ಠೆಯಿಂದ, ಲವಲವಿಕೆಯಿಂದ ಹಿಂದಿಗೆ ಅನುವಾದ ಮಾಡಿ ಹಿಂದಿ ಓದುಗರಲ್ಲಿ ಕನ್ನಡ ಕಾದಂಬರಿಗಳನ್ನು ಲೋಕಪ್ರಿಯ ಗೊಳಿಸಿದ್ದಾರೆ. ಅನಂತಮೂರ್ತಿಯವರ ‘ಸಂಸ್ಕಾರ’ ಭಾರತೀಯ ಸಾಹಿತ್ಯಾಸಕ್ತರನ್ನೇ ಕುತೂಹಲಗೊಳಿಸಿದ ಕೃತಿಯಾಗಿದೆ. ಕಾರ್ನಾಡ ನಾಟಕಗಳು ರಂಗಭೂಮಿಯಲ್ಲಿ ಅಚ್ಚರಿ ಮೂಡಿಸಿದಂತೆ ಓದುಗರಲ್ಲಿಯೂ ಭ್ರಮೆ ಮೂಡಿಸಿವೆ. ಡಾ. ಪುತ್ರನ್ ಹಿಂದಿಗೆ ಅನುವಾದ ಮಾಡಿದ ಸಮರ್ಥರಲ್ಲಿ ಅಗ್ರಗಣ್ಯರು. ಅವರು ತಮ್ಮ ಜೀವನದ ಗುರಿಯನ್ನಾಗಿಯೆ ಈ ವೃತ್ತಿಯನ್ನು ಎದೆಗೆ ಹಚ್ಚಿಕೊಂಡರು. ಬಿ.ಆರ್.ನಾರಾಯಣ ೩೦ ರಷ್ಟೂ ಕನ್ನಡ ಕೃತಿಗಳನ್ನು ಹಿಂದಿಗೆ ಅನುವಾದ ಮಾಡಿದರು. ಆದರೆ ಈ ಇಬ್ಬರಿಗೆ ಪ್ರಶಸ್ತಿ ಸನ್ಮಾನ, ಅಕಾಡಮಿ ಮಾನ್ಯತೆಗಳು ಎಷ್ಟು ದೊರಕಿವೆ? ಒಂದು ‘ಕುಸುಮಬಾಲೆ’ಯನ್ನು ಬರೆದು ಚರ್ಚಿತರಾದ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಸಾಹಿತಿ ನಮ್ಮಲ್ಲಿದ್ದಾರೆ. ಇಷ್ಟೊಂದು ಅನುವಾದಗಳನ್ನು ಮಾಡಿದ ಲೇಖಕರು ಸಾಹಿತಿಗಳಾಗಿಲ್ಲ. ಅನುವಾದ ಕ್ರಿಯೇಟಿವ್ ‘ಸೃಜನಶೀಲ’ ಎಂಬ ಚೀಟಿಯನ್ನು ಹಚ್ಚಲು ಯಾರೂ ಮುಂದೆ ಬರುವುದಿಲ್ಲ. ಕೆಲವು ಪ್ರಕಾಶಕರು ಬೇಡಿ ಅನುವಾದಗೊಳಿಸಿದ ಕೃತಿಗಳು ಪೆಂಗ್ವಿನ್‌ಗೆ ತೇಜಸ್ವಿಯವರ ‘ಕರ್ವಾಲೊ’. ಕೆಲವೊಮ್ಮೆ ಅನುವಾದಕರ ಖರ್ಚಿನ ಭಾರವನ್ನು ಇಳಿಸಬಹುದು ಆದರೆ ಅನುವಾದವನ್ನು creation ಎಂದು ಮಾನ್ಯತೆ ಕೊಡುವ ಹೊತ್ತು ಇನ್ನೂ ಬಂದಿಲ್ಲವೆನ್ನಬಹದು. ಶೇಕ್ಸ್‌ಪಿಯರ್ ನಾಟಕಗಳು-ಒಥಲೊ, ಹೇಮಲೆಟ್, ಮೆಕಬೆತ್ ಇತ್ಯಾದಿ ರಂಗ ಪರಿಷ್ಕರಣಗೊಂಡು ಇಂಗ್ಲೀಷ್, ಹಿಂದಿಗಳಲ್ಲಿ, ನಾಸಿರುದ್ದೀನ ಶಾರಂಥ ಕಲಾವಿದರು ಪ್ರಯೋಗ ಮಾಡುತ್ತಾರೆ. ಇವುಗಳ ಸಫಲತೆ ಕಲಾತ್ಮಕವಾಗಿ ಹೃದಯಂಗಮವಾಗಿದೆ. ಹಾಗೆಯೇ ಕಾರ್ನಾಡರ, ಕಂಬಾರರ, ಶ್ರೀರಂಗರ ನಾಟಕಗಳೂ ಕಲಾತ್ಮಕವಾಗಿ ಹಿಂದಿ, ಮರಾಠಿಯಲ್ಲಿ ಪರಿಣಾಮಕಾರಿಯಾಗಿವೆ. ಇದೇ ಮಾತನ್ನು ಕತೆ ಕಾದಂಬರಿಗಳ ಅನುವಾದ ಕೃತಿಗಳ ಕುರಿತು ಹೇಳಲಾಗುವುದಿಲ್ಲ. ಇವುಗಳನ್ನು ಕಲಾತ್ಮಕ, ಸೃಜನಶೀಲ ಎಂದು ಪರಿಗಣಿಸಿ ಅನುವಾದಕನನ್ನು ಮನ್ನಿಸುವ, ಕ್ರಿಯಾಶೀಲಗೊಳಿಸುವ ಸಾಂಸ್ಕೃತಿಕ ಸಂಸ್ಥೆಗಳು, ಸಹೃದಯವಿಮರ್ಶಕರು ಇಂದು ಹೆಚ್ಚಾಗ ಬೇಕಾಗಿದೆ. ಕನ್ನಡದಲ್ಲಿ ಅನುವಾದ ಸಾಹಿತ್ಯದ ಒಂದು ಮಹತ್ವದ ಸಶಕ್ತ ಪರಂಪರೆ ಇದೆ. ಅದೇ ಒಂದು ಸ್ವಯಂ ಸಾಮರ್ಥ್ಯದಿಂದ ಸೃಜನಶೀಲ ಸಾಹಿತ್ಯವಾಗಿ ಬೆಳೆದಿದೆಯೆ ಎಂಬ ಪ್ರಶ್ನೆ ಸಹಜವಾಗಿಯೆ ವಿವಾದಾಸ್ಪದವಾಗಿದೆ. ಸವಾಲಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯತದ ಪ್ರಭಾವ
Next post ಯಾವಾಗಲೂ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys