ನಾಗಣ್ಣನ ಕನ್ನಡಕ

“ಓಡಿ ಬನ್ನಿರಿ! ಕೂಡಿ ಬನ್ನಿರಿ!
ನೋಡಿ ಬನ್ನಿರಿ! ಗೆಳೆಯರೆ!
ನೋಡಿ ನಮ್ಮಯ ಕನ್ನಡಕಗಳ!
ಹಾಡಿ ಹೊಗಳಿರಿ, ಗೆಳೆಯರೆ!

“ಊರುಗನ್ನಡಿ! ಉರುಟು ಕನ್ನಡಿ!
ದೂರನೋಟದ ಕನ್ನಡಿ!
ಓರೆಕಣ್ಣಿಗೆ ನೇರು ಕನ್ನಡಿ!
ಮೂರು ಚವುಲಕೆ ಕೊಡುವೆನು.

“ಹಸುರು ಹರಳಿದು! ಹೊಸತು ಹರಳಿದು!
ಕೊಸರು ಕಾಸಿಗೆ ಕೊಡುವೆನು;
ಬಿಸಿಲು ತಾಗದು, ಬೇನೆಯಾಗದು,
ಪಿಸರು ಬಾರದು ಕಣ್ಣಿಗೆ

“ಬಿಳಿಯ ಕನ್ನಡಿ! ತಿಳಿಯ ಕನ್ನಡಿ!
ಕಳೆಯ ಬೇಡಿರಿ ಸಮಯವಾ;
ಹಲವು ಜನಕಿದು ಭೂತ ಕನ್ನಡಿ!
ಬಲವ ಕೊಡುವುದು ಕಣ್ಣಿಗೆ!

“ಹಣ್ಣುಮುದುಕಗೆ ಚಿಣ್ಣಮಕ್ಕಳ
ಕಣ್ಣು ಕೊಡುವಾ ಕನ್ನಡಿ!
ಬಣ್ಣ ಬಣ್ಣದ ಕನ್ನಡಕಗಳು
ಬೆಣ್ಣೆಯಂದದಿ ತಣ್ಣಗೆ.

“ಅರಸು ಮೂಗಿನೊಳಿದ್ದು, ರಾಜ್ಯದ
ಪರಿಯ ನೋಡುವ ಕನ್ನಡಿ!
ಎರಡು ರೂಪಾಇ ಬೆಲೆಗೆ ನಿಮ್ಮನು
ದೊರೆಯ ಮಾಡುವ ಕನ್ನಡಿ!

“ಬರಹ ಓದದ ಪರೆಯ ಕಣ್ಣನು
ತೆರೆದು ಕಲಿಸುವುದೆಲ್ಲವಾ!
ಆರಿವು, ಕನ್ನಡದಿರವು, ಇಂಗ್ಲಿಷ್
ಅರಿವು ಬರುವುದು ನಿಮಿಷದಿ!”

ಹೀಗೆ ಶ್ಯಾಮನು ಕೂಗಿ ಹೊಗಳುವ
ಸೋಗು ಮಾತನು ಕೇಳುತಾ,
ನಾಗನಪ್ಪನು ತೂಗಿ ತಲೆಯನು,
ಮೇಗೆ ಬಂದನು ಅಂಗಡಿಗೆ.

“ಒಳ್ಳೆ ಕನ್ನಡಿ ಬೇಕು ರಾಯರೆ,
ಕೊಳ್ಳಿರೈ ಸರಿ ಬೆಲೆಯನು !
ಹಳ್ಳಿ ಮಂದಿಗೆ ಕೊಡಲು ಬಾರದು
ಸುಳ್ಳು ಕನ್ನಡಿ” ಎಂದನು.

ಆಗ ಶ್ಯಾಮನು ನಾಗನಪ್ಪನ
ಮೂಗಿಗಿಟ್ಟನು ಕನ್ನಡಿ;
ಕಾಗದಗಳನು ಕೈಗೆ ಕೊಟ್ಟು,
“ಹೇಗೆ ಕಾಂಬುದು?” ಎಂದನು.

“ಆಗಲಾರದು, ತಾಗಲಾರದು”
ನಾಗನಪ್ಪನು ನುಡಿದನು;
ಬೇಗ ತೆಗೆದನು; ಬೇರೆ ಕನ್ನಡಿ
ಬಾಗಿಸಿಟ್ಟನು ಶ್ಯಾಮನು.

“ತೋರಲಾರದು, ಸೇರಲಾರದು;
ನೀರು ಹನಿವುದು ಕಣ್ಣಿಲಿ,
ಬೇರೆ ಕನ್ನಡಿ ಬೇಗನೇ ಕೊಡಿ,
ಜಾರಿ ಬೀಳ್ವುದು” ಎಂದನು.

ಮೂರು ಕನ್ನಡಿ, ಆರು ಕನ್ನಡಿ,
ನೂರು ಕನ್ನಡಿ ತೋರಿದಾ,
ಬಾರಿಬಾರಿಗೂ ನಾಗನೆಂದನು
“ತೋರದೈ ಕನ್ನಡಿಗಳು”.

ಅದನು ತೆಗೆದನು, ಇದನು ತೆಗೆದನು,
ಮುದುಕ ಗ್ರಹಕನ ಮೂಗಿನಾ
ತುದಿಯೊಳಿಟ್ಟನು; ಒಡನೆ ಮುದುಕನು
“ಮೊದಲಿನಂತೆಯ” ಎಂದನು.

“ಅರಿಕೆ ಮಾಡುವೆ, ಹಿರಿಯ ಅಯ್ಯಾ,
ಧರಿಸಬಾರದು ಕೋಪವಾ;
ಸರಿಯ ಕನ್ನಡಿ ದೊರೆವುದಿಲ್ಲ;
……ಅ….ಕುರುಡು
ಉಂಟೇ ಕಣ್ಣಿಲಿ?”

ಉರಿದು ಬಿದ್ದನು, ಮುದುಕನೆದ್ದನು-
“ಹರಳು ಕಲ್ಲನು ಮಾರುವಾ
ಕುರುಡು ರಾಯರ ನೋಳ್ಪ
ನಮ್ಮಯ ಎರಡು ಕಣ್ಣಳು ಸರಿ ಇವೆ!”

ಸಿಟ್ಟು ನುಡಿಯನು ಕೇಳಿ ಶ್ಯಾಮನು
ದಟ್ಟ ಹರಳುಗಳೆರಡನು
ಇಟ್ಟು ಗ್ರಹಕನ ಕಣ್ಣ ಮುಂಗಡೆ,
ಕೊಟ್ಟ ಕಾಗದ ಕೈಯಲಿ.

ಗುಡ್ಡ ಕುಂಬಳದಂತೆ ಬರೆದಿಹ
ದೊಡ್ಡ ಅಕ್ಷರ ಪತ್ರವಾ
ಅಡ್ಡ ಹಿಡಿದನು,-
“ಓದಿ, ಸ್ವಾಮೀ, ಅಡ್ಡಿಯಿಲ್ಲದೆ” ಎಂದನು.

“ಎಲೆಲೆ ರಾಯರೆ! ತೆಲಗು ಕನ್ನಡ
ಕಲಿಪ ಕನ್ನಡಿ ಬೇಕಲೈ!
ಬೆಲೆಯ ಕೊಡುವೆನು; ಬೇಗ ತನ್ನಿರಿ,
ಚೆಲುವ ಇಂಗ್ಲಿಷ್ ಕನ್ನಡಿ.

“ಓದು ಬರಹಗಳೆಮಗೆ ತಿಳಿಯದು,
ಓದು ಬರಹವ ತೋರುವಾ
ಬೂದು ಕನ್ನಡಿ ಬೇಕು ರಾಯರೆ,
ಬೀದಿಗೆಸೆವುದು ಮಿಕ್ಕವಾ”.

ಒರೆದ ಮಾತಿಗೆ ಮತ್ತೆ ಶ್ಯಾಮನು,
“ಬರಹ ಕಲಿಸುವ ಕನ್ನಡಿ
ಹರಳು ನಮ್ಮಲ್ಲಿಲ್ಲ, ಸ್ವಾಮೀ,
ತೆರಳಿ ಹಳ್ಳಿಯ ಸಾಲೆಗೆ!”

ಎಂದು ಶ್ಯಾಮನು ನುಡಿಯಲು ಮುಂದೆ
ನಾಗನು “ಸಾಲೆಯೋಳ್
ಚೆಂದ ಕನ್ನಡಿ ಯಾವುದೆನೆ,”
ನಗುತೆಂದನಾಗಲೆ ಶ್ಯಾಮನು-

“ಅಲ್ಲಿ ಕನ್ನಡಿ ದೊರಕುದಿಲ್ಲವು:
ಅಲ್ಲಿ ’ಕನ್ನಡ’ ದೊರೆವುದು!
ಮೆಲ್ಲನಿದ ನೀವ್ ಕಲಿತುಕೊಂಡರೆ,
ಎಲ್ಲ ತಾನೇ ಕಾಂಬುದು.”

ಹೀಗೆ ಶ್ಯಾಮನು ನುಡಿದ ಮಾತನು
ನಾಗನಪ್ಪನು ಕೇಳುತಾ
ಬೇಗ ತನ್ನಯ ಮಕ್ಕಳನು
ಲೇಸಾಗೆ ಕಳುಹಿದ ಸಾಲೆಗೆ
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಸಿನ ಬಿಸಿಗೆ ಕರಗುವ ಮೌಲ್ಯವುಳಿವುದೆಂತು?
Next post ಚಳವಳಿಗಳು ಮತ್ತು ಸೃಜನಶೀಲ ಸ್ವಾತಂತ್ರ್ಯ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…