ಕರ್ಕ ಮತ್ತು ಮಕರ ಅಕ್ಷಾಂಶಗಳ ನಡುವಿನ ವಲಯದಲ್ಲಿ ಹವಾಮಾನ ಅಧ್ಯಯನ ಹಾಗೂ ಜಗತ್ತಿನಾದ್ಯಂತವಾಗುವ ಹವಾಮಾನ ವೈಪರಿತ್ಯಗಳನ್ನು ಅಳೆಯಲು ಮೊದಲ ಬಾರಿಗೆ ಭಾರತ ಮತ್ತು ಫ್ರಾನ್ಸ್ ಜತೆಗೂಡಿ ಹವಾಮಾನ ಮಾಪನ ಉಪಗ್ರಹವನ್ನು ಆಕಾಶಕ್ಕೆ ಬಿಡಲು ಮುಂದೆ ಬಂದಿದೆ. ಭೂಮಿಯಿಂದ ೮೬೭ ಕಿ.ಮೀ. ಎತ್ತರದಲ್ಲಿ ಭೂಮಧ್ಯ ರೇಖೆಯ ಗುಂಟ ಸುತ್ತುಹಾಕಲಿರುವ ಈ ಉಪಗ್ರಹವು ಒಂದು ದಿನದಲ್ಲಿ ತನಗೆ ಸೂಚಿಸಲಾದ ಪ್ರದೇಶವನ್ನು ಎರಡರಿಂದ ಆರು ಭಾರಿಯವರೆಗೂ ಸೂಕ್ಷ್ಮವಾಗಿ ಗಮನಿಸಲಿದೆ.

ಈ ಉಪಗ್ರಹಕ್ಕೆ ‘ಮೇಘಾ ಟ್ರೋಫಿಕಸ್’ ಎಂದು ಸೂಕ್ತವಾಗಿ ಹೆಸರಿಡಲಾಗಿದೆ. ಉಷ್ಣವಲಯದಲ್ಲಿಯ ವಾತಾವರಣದಲ್ಲಿ ಸಂಶೋಧನೆಗಾಗಿ ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲಾದ ಈ ಕೃತಕ ಉಪಗ್ರಹವು ವಿಶ್ವದಲ್ಲಿಯೇ ಮೊದಲನೇಯದ್ದಾಗಿದೆ. ಭಾರತದ ಐ. ಎಸ್. ಎಲ್.ವಿ. ಯ ಮುಖಾಂತರ ೨೦೦೫ ರೊಳಗಾಗಿ ಈ ಉಪಗ್ರಹಗಳನ್ನು ಹಾರಿಬಿಡಲಾಗುವುದು. ಇದರ ಅಂದಾಜು ವೆಚ್ಚ ೩೦ ರಿಂದ ೪೦ ಕೋಟಿ, ಈ ಯೋಜನೆಯಲ್ಲಿ ಹವಾಮಾನ ಜಾಗತಿಯ ಮಟ್ಟದ ಅಧ್ಯಯನ ನಡೆಸುವಂಥಹ ಅಂತರರಾಷ್ಟ್ರೀಯ ವಿಜ್ಞಾನಿಗಳು ಆಸಕ್ತಿ ಮತ್ತು ಕುತೂಹಲವನ್ನು ವ್ಯಕ್ತಿಪಡಿಸಿದ್ದಾರೆ. ಇಲ್ಲಿನ ಇಸ್ರೋ ಉಪಗ್ರಹ ಕೇಂದ್ರದಲ್ಲಿ ೫೦೦ ಕೆ.ಜಿ. ತೂಕದ ಈ ಉಪಗ್ರಹವನ್ನು ಇಸ್ರೋ ಮತ್ತು ಫ್ರಾನ್ಸ್ ಸಂಸ್ಥೆ ಪರಸ್ಪರ ‌ಸಹಕರಿಸಿ ರಚಿಸಲಿದೆ. ಇದರ ಕಾರ್ಯಯೋಜನೆಯಲ್ಲಿ Indian Institute of Science ಮತ್ತು I.I.T.ಗಳು ದೇಶದಾದ್ಯಂತ ಹಾಗೂ ಹಲವಾರು ಶೈಕ್ಷಣಿಕ ಸಂಸ್ಥೆಗಳೂ ಪಾಲ್ಗೊಳ್ಳಲಿವೆ.

ಪಶ್ಚಿಮಘಟ್ಟದ ಹವಾಮಾನದ ಏರುಪೇರುಗಳ ವೈಪರಿತ್ಯದಲ್ಲಿ ಮತ್ತು ಉತ್ತರ ಗೋಲಾರ್ಧದಲ್ಲಿ ಆಗುವ ಬದಲಾವಣೆಗಳಲ್ಲಿ ಉಷ್ಣವಲಯದ ಪಾತ್ರವನ್ನು ಗುರುತಿಸಬೇಕೆಂಬ ಹೊಸ ಚಿಂತನೆಯ ಫಲವಾಗಿ ಈ ಉಪಗ್ರಹವು ರಚಿತವಾಗಿದೆ. ಉಷ್ಣವಲಯದ ಹವೆಯಲ್ಲಾಗುವ ಬದಲಾವಣೆಗಳಿಂದಾಗಿ ಜಗತ್ತಿನ ವಿವಿಧ ಭಾಗಗಳಲ್ಲಿ ಚಂಡಮಾರುತದ ಬೀಸುವಿಕೆ ಅಥವಾ ಕ್ಷಾಮ ಉಂಟಾಗುವಿಕೆಗಳು ಮತ್ತು ಇತ್ಯಾದಿ ಹವಾಮಾನದ ಮಹತ್ವಪೂರ್ಣ ಮಾಹಿತಿಗಳು ಇದರಿಂದ ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಉಷ್ಣವಲಯ ಕುರಿತು ಹೆಚ್ಚಿನ ಆಸಕ್ತಿ ಈಗ ಯುರೋಪ್ ಮತ್ತು ಅಮೇರಿಕದಲ್ಲಿ ಬೆಳೆಯುತ್ತಿದೆ.
*****