ತೇಲಿದ ಮೋಡಗಳ ನೀಲಿ
ಶಬ್ಧಗಳ ಗುಂಗುಗಳ ಹಿಡಿದು
ಹರಡಿ ಹಾಸಿದ ನೀಲಿ ಕಡಲ ಬಣ್ಣ
ಕಂಪು ಸೂಸಿ ಎಲ್ಲಾ ಹೂಗಳ ತುಂಟ
ಕಣ್ಣುಗಳ ನೋಟದಲಿ ಅರಳಿ ತೇಲಿ
ಕಂದನವನು ಅಲ್ಲಿ ಇಲ್ಲಿ ಸುಳಿದಾಡಿ
ತುಂಬು ಕಂಪನಿಲಿ ಇಂಪಿನಲಿ ಲಾಲಿರಾಗ
ಬೆನ್ನು ಬಿಡದೆ ಬೆಂಬತ್ತಿ ಬಂದಾಗ
ಎದೆಯ ತುಂಬೆಲ್ಲಾ ಅರಬೀ ಸಮುದ್ರ ಉಕ್ಕಿ ಉಕ್ಕಿ
ನಾನೀಗ ಯಶೋಧೆ.
“ವಜ್ರ ವೈಢೂರ್ಯ ಬೇಡ ನನಗೆ
ತುಪ್ಪದ ಅಪ್ಪ ಸೇರದೆ ನಗೆ
ಎತ್ತಿ ದಾರತಿ ತುಂಬಾ ಬೆಳಕು ಕಳವಳದ
ಸಂಜೆ ರಾತ್ರಿಗಳು ನಿಟ್ಟಿಸಿದ ಕಣ್ಣುಗಳ ಸಾವಿರಾರು
ಹೈರಾಣ ಮಾಡಿದೆ ಕುದಿದ ಸೆಖೆ
ಬಯಲ ತಪ್ಪಲಲ್ಲಿ ನನ್ನ ಕೊಳಲಿನ ಕರೆಗೆ
ನರ್ತಿಸಲಿ ನವಿಲು ಅಲ್ಲಿ ಆಡಲಿ, ಕುಚೇಲ
ಚನ್ನಿದಾಂಡು, ಮತ್ತೆ ಗಿಲಿ ಗಿಲಿ ಗೆಜ್ಜೆಯನಾದ
ಗೋಪಿಕೆಯರು ಜೊತೆಗೂಡಲು ಋಷಿಯಲಿ,
ಅಮ್ಮ ಎತ್ತಿಕೊಳ್ಳು ಈಗಲೇ ಈಗಿಂದೀಗಲೇ.”
ಅವನೀಗ ಯಶೋಧೆ ಕಂದ.

ಎಲ್ಲ ರಾಗಗಳು ನದಿಯಾಗಿ ಹರಿದು
ಬಯಲು ತುಂಬ ಹಸಿರು ತಂಬೆಲರು
ಬೆಳ್ಳಗೆ ಬೆಳ್ಳಿಗೆರೆಯಲಿ. ತೇಲಿದ ಬೆಳ್ಳಕ್ಕಿ ಹಿಂಡು
ನೀಲ ಬಾನ ತುಂಬ ತುಂಟರು ಹಾಸಿದ ಬಣ್ಣದ
ಗಾಳಿ ಪಟಗಳು ಅರಳಿದ ಕಣ್ಣುಗಳಲಿ
ಜಗದ ವಿಸ್ಮಯ ಬಯಲು ಸೀಮೆಯ
ಹೊಲಗಳ ಬದುಕಿನ ತುಂಬ ಇವನ
ರಾಗ ಪಲ್ಲಕ್ಕಿ ಹಕ್ಕಿ ಸಾಲು ತೇಲಿ ಜಂಗಮದಲಿ
ಮುರಳಿ ಲೋಲನ ಕಂಪನಗಳ ರಾಗಗಳು
ದೇವಕಿ ನಂದನೀಗ ಯಶೋಧೆ ಕಂದ.

ಫರ್ಮಾನುಗಳ ಹೊರಡಿಸಿವೆ ಅಷ್ಟ ಮಠಗಳು
ಅಷ್ಟದಿಕ್ಕುಗಳಿಗೆ ಎಲ್ಲ ಇಹ ಪರದ ಗೌಜು
ಗದ್ದಲಗಳ ಮಧ್ಯೆ ಬಯಲಲ್ಲಿ ಅವನೀಗ
ಸುಮ್ಮನೆ ಮಣ್ಣಿನಲಿ ಆಡಿ ಮೈಕೈಯಲ್ಲಾ
ಧೂಳು ಕೆಸರು ಬೆತ್ತಲೆ ಬಯಲಲ್ಲಿ
ನಿಲ್ಲಿಸಿ ತಣ್ಣನೆಯ ಗಾಳಿ ಹೊತ್ತ ಪಂಚನದಿಗಳ
ನೀರು ಹೊಯ್ಯುತ್ತಿರುವ ಯಶೋಧೆ.
ಅವನೀಗ ಮರೆತು ಬಿಟ್ಟಿದ್ದಾನೆ. ಉಕ್ಕುವ ಸಮುದ್ರ
ಬಣ್ಣದ ಬೋರಂಗಿ ಹಿಡಿದು ಹಾರಿಸುತ್ತಿದ್ದಾನೆ. ಸುಮ್ಮನೆ. ಝಮ್ಮನೆ.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)