ಕುವೆಂಪು ಕವಿತೆಗಳ ಸಾಮಾಜಿಕ ನೆಲೆ

ಕುವೆಂಪು ಕವಿತೆಗಳ ಸಾಮಾಜಿಕ ನೆಲೆ

ಕುವೆಂಪುರವರು ಸಮಕಾಲೀನ ಸಂದರ್ಭದ ಶ್ರೇಷ್ಟ ಸಾಮಾಜಿಕ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲೆಯ ಚಿಂತನೆಗಳನ್ನು ಬಿಟ್ಟುಕೊಟ್ಟಿಲ್ಲ. ಇಂತಹ ಕೆಲವೆಡೆಗಳಲ್ಲಿ ಸೃಜನಶೀಲತೆ ಸೊರಗಿದರೂ ತಮ್ಮ ವೈಚಾರಿಕತೆ ಸೊರಗಿಲ್ಲ. ಹೀಗೆ ತಮ್ಮ ಬದುಕು ಬರಹಗಳಲ್ಲಿ ಸಾವಯವ ಸಂಬಂಧವನ್ನು ಉಳಿಸಿಕೊಂಡೇ ಸಾಗಿರುವ ಕುವೆಂಪುರವರ ಸಾಹಿತ್ಯ ಗಮನಾರ್ಹ ಎನಿಸಿ, ಶ್ರೇಷ್ಟತೆಯ ನೆಲೆಯನ್ನು ತಲುಪುತ್ತದೆ. ಈ ಹಿನ್ನೆಲೆಯಲ್ಲಿ ವಚನಕಾರರೆನಿಸುವ ಕುವೆಂಪುರವರ ಸಾಮಾಜಿಕ ಕವಿತೆಗಳ ವಿವಿಧ ನೆಲೆಗಳಿಗೆ ಪ್ರವೇಶಿಸಬಹುದಾಗಿದೆ.

ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು!! ಎಂಬ ನವಯುಗವಾಣಿ ಘೂಷಿಸಿದೆ ಕೇಳಿ ಎಂದು ಆರಂಭವಾಗುವ ‘ಹೊಸ ಬಾಳಿನ ಗೀತೆ’ ಎಂಬ ಕವಿತೆ ಏಕಕಾಲಕ್ಕೆ ಸಮಾಜವಾದ, ಸಮತಾವಾದಗಳೆರಡನ್ನೂ ಹೊತ್ತು ತರುವಂಥದ್ದಾಗಿದೆ. ಸಾವಿರಾರು ವರ್ಷಗಳಿಂದ ದಾರಿದ್ರ್ಯ ಭಾರದಿಂದ ಬಾಗಿಹೋದ ಜನರೇ ಈ ದೇಶದ ಬಹುಸಂಖ್ಯಾತರು. ಇಂತಹ ಬಹುಸಂಖ್ಯಾತ ಜನರನ್ನು ಅಲ್ಪಸಂಖ್ಯಾತರು. ಇಂತಹ ಬಹುಸಂಖ್ಯಾತ ಜನರನ್ನು ಅಲ್ಪಸಂಖ್ಯಾತ ಜನರೆಂದು ಕರೆಸಿಕೊಳ್ಳುವ ಪುರೋಹಿತಶಾಹಿ ವಕ್ತಾರರು ಆಳುತ್ತಾ, ದಮನ ಮಾಡುತ್ತಾ ಬಂದದ್ದು ಭಾರತೀಯ ಇತಿಹಾಸದ ಕ್ರೂರಸತ್ಯ. ಇಂತಹ ಸತ್ಯದಿಂದ ಬಿಡುಗಡೆಗೊಳ್ಳಬೇಕಾದ ಅನುಕೂಲಕರ ಸನ್ನಿವೇಶವನ್ನು ಪ್ರಜಾಪ್ರಭುತ್ವದ ಕಾಲ ತಂದಿದೆ. ಇಂತಹ ಪ್ರಜೆಗಳೇ ‘ಅಧಿಪತಿ’ಗಳಾದ ಈ ಕಾಲದಲ್ಲಿ ಹೊಸ ಇತಿಹಾಸವನ್ನು ಬರೆಯಬೇಕಾದ ಹೊಣೆಗಾರಿಕೆ ಜನ ಸಾಮಾನ್ಯರದ್ದೇ ಆಗಿದೆ ಎಂಬ ಆಶಯವನ್ನು ಕವಿತೆಯ ಕೆಲವು ಸಾಲುಗಳು ವಾಚ್ಯವಾಗಿಯೇ ನುಡಿಯುತ್ತವೆ.

ಇಂದು ನೀವೇಳದಿರೆ ಕೆಚ್ಚೆದೆಯ ತಾಳದಿರೆ
ನಿಮ್ಮವರ ಬಾಳು ಎಂದೆಂದಿಗೂ ಹೇಡಿ!
ಇಂದು ರಕ್ತದ ಬಿಂದು ಮುಂದೆ ಸೌಖ್ಯದ ಸಿಂಧು!
ಎಂದು ಸಾಹಸ ಕೇಳಿ, ಹಿಂಜರಿಯಬೇಡಿ.
ಈ ಕವಿತೆಯ ಉದ್ದಕ್ಕೂ ಆಶಾವಾದಿಗಳಾಗಿ ಉಳಿಯುವ ಕವಿಯೂ ಭಾರತದ ಅವಾಸ್ತವ ಪ್ರಜ್ಞೆಪರಂಪರೆಯನ್ನೂ ವ್ಯಂಗ್ಯವಾಗಿಯೇ ನೆನಪಿಸುತ್ತಾರೆ.
ಇಂದು ಸಿಂಹಾಸನಕೆ ಬಂದಿಹುದು ಕೊನೆಗಾಲ!
ಕಳಚಿ ಬೀಳುವುದಿಂದು ನಂದನದ ಬೇಲಿ
ದೇವತೆಗಳಶ್ಲೀಲ ಮೋದಕ್ಕೆ ಬದಲಾಗಿ
ಗೋಚರಿಪುದಲ್ಲಿ ಮರ್ತ್ಯದ ಕೃಷಿಯ ಕೇಲಿ!

ಇಂತಹ ಅವಾಸ್ತವ ಪ್ರಜ್ಞೆಯು ವಾಸ್ತವಕ್ಕೆ ಜಾರಿ, ಒಂದು ಸೀಮಿತ ವರ್ಗವು ವಿಶೇಷವಾಗಿ ಪೋಷಿಸುತ್ತಾ ಬಂದ ಜಾತಿ, ನೀತಿ, ಪಕ್ಷಪಾತದಂತಹ ವಿಚಾರಗಳನ್ನು ಜನತೆ ಸಾಮೂಹಿಕ ಪ್ರಯತ್ನದಿಂದ ಬುಡಮೇಲು ಮಾಡಿ, ಮತ್ತೊಂದು ಸ್ವರ್ಗವನ್ನು ಇಲ್ಲಿಯೇ ಸೃಷ್ಟಿಸುತ್ತಾರೆಂಬ ತಿಳುವಳಿಕೆಯೊಂದಿಗೆ ಕವಿ ಮುಂದೆ ಸಾಗುತ್ತಾರೆ.

ಪರಂಪರೆಯು ಪೋಷಿಸಿಕೊಂಡು ಬಂದ ಹಣೆಬರಹ, ಕೀಳರಿಮೆ, ಅಸಹಾಯಕ ಮನೋಭಾವ ಮೊದಲಾದ ಮೌಢ್ಯಗಳು ಸಂಸ್ಕೃತಿಯ ಹೆಸರಿನಲ್ಲಿ ಮೇಲುವರ್ಗದ ಜನರು ವಿಶೇಷವಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಹಾಗೆ ಶತಮಾನಗಳಿಂದಲೂ ಜಡವಾದ ‘ಮನಸ್ಸು’ ಇಂದು ಕ್ರಾಂತಿಯತ್ತ ಕಾರ್ಯೋನ್ಮುಖಗೊಳ್ಳುವುದು ಸುಲಭ ಸಾಧ್ಯವಲ್ಲ. ಇದಕ್ಕೆ ಎದೆಗಾರಿಕೆ ಬೇಕು. ಅಂತಹ ಕ್ರಾಂತಿಯಿಂದಲೇ ಸಾಮಾಜಿಕ, ಆರ್ಥಿಕ ಬದಲಾವಣೆ ಸಾಧ್ಯ ಎಂಬ ನಿಲುವು ಕವಿಗಿದೆ.

ಇಂದು ನೆತ್ತರು ಚೆಲ್ಲಿ ಮುಂದೆ ಬಹ ಮಕ್ಕಳಿಗೆ
ಹೊಟ್ಟೆಗನ್ನವ, ಮೈಗೆ ಬಟ್ಟೆಯನು ನೀಡಿ
ಇಂದು ನೋವಾದರೂ ಇಂದು ಸಾವಾದರೂ
ಮುಂದೆ ಬಾಳಿಗೆ ಸೊಗಸು ನೆಮ್ಮದಿಯ ಮಾಡಿ!

ಎಂದು ಎಚ್ಚರಿಸುವ ಕವಿ, ಈ ಕವಿತೆಯಲ್ಲಿ ತಮ್ಮ ವೈಚಾರಿಕತೆಯ ಒಟ್ಟು ಆಶಯವನ್ನು ವ್ಯಕ್ತಪಡಿಸುತ್ತಾರೆ. ಈ ನಡುವೆ ಪರಂಪರೆಯನ್ನು ಕುರಿತ ವಾಸ್ತವವಾದಿ ಪ್ರಜ್ಞೆ ಇಲ್ಲಿ ಪ್ರಖರವಾಗಿ ಕಾಣುತ್ತದೆ. ಈ ನೆಲೆಯಲ್ಲಿ ಧರ್ಮ, ದೈವ, ಸಂಸ್ಕೃತಿ ಎಂದೆಂಬ ಹೆಸರುಗಳಿಂದ ನಡೆದ ಶೋಷಣೆಯ ಇತಿಹಾಸವನ್ನು ಅರಿವಿಗೆ ತರುತ್ತಾರೆ. ಈ ನೆಲೆಯಲ್ಲಿ ಬಂಡಾಯ ಧೋರಣೆ ಸ್ಫುಟವಾಗಿದೆ. ಆರೋಗ್ಯಕರವಾದ ಸಮಾಜ ನಿರ್ಮಾಣದ ಕನಸು ಸ್ಪಷ್ಟವಾಗಿದೆ.

ಇದೇ ಆಶಯವನ್ನು ಕುವೆಂಪುರವರು ತಮ್ಮ ‘ಕಲ್ಕಿ’ ಪದ್ಯದಲ್ಲಿಯೂ ವ್ಯಕ್ತಪಡಿಸುತ್ತಾರೆ. ಆದರೆ ಅಲ್ಲಿ ತಂತ್ರಗಾರಿಕೆ ವಿಭಿನ್ನವಾದುದು. ಅದು ಕಥನದ ಧಾಟಿಯಲ್ಲಿದೆ. ಅಂತಹ ಕಥನ ಕವನದ ಮೂಲಕವಾಗಿ ಇಂದಿನ ಅಸಮಾನತೆಯ ಸಮಾಜವು ಸಮಾನತೆಯ ನೆಲೆಯಲ್ಲಿ ಕ್ರಾಂತಿಕಾರಕವಾಗಿ ಮಾರ್ಪಡುತ್ತದೆಂಬ ಕನಸುಗಾರಿಕೆಯನ್ನು ಕವಿ ಇಟ್ಟುಕೊಂಡಿದ್ದಾರೆ. ಇಂತಹ ಆಶಯವನ್ನು ಪ್ರತಿಮಾತ್ಮಕ ನೆಲೆಯಲ್ಲಿ ಮೂಡಿಸಲೆತ್ನಿಸುತ್ತಾರೆ.

ಪುರಾಣ ಪ್ರಪಂಚ ಕಟ್ಟಿಕೊಡುವ ‘ಕಲ್ಕಿ’ ಎಂಬ ಕಲ್ಪನೆಗೆ ಕುವೆಂಪು ಅವರು ಈ ಪದ್ಯದಲ್ಲಿ ಹೊಸ ಸ್ವರೂಪವನ್ನು ನೀಡುತ್ತಾರೆ. ಅದರಂತೆ ಅಲ್ಲಿಯ ಕಲ್ಕಿ ಇಲ್ಲಿಯ ಬಡವನೊಂದಿಗೆ ರೂಪಕವಾಗಿ, ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಪ್ರತಿಮೆಯಾಗಿ ಕಾಣಬರುತ್ತಾನೆ. ಇಂತಹ ಅವತಾರ ಮೂಡುವುದು ಬಡಹೊಟ್ಟೆಗಳ ಗರ್ಭದಲ್ಲಿ ಅಡಗಿರುವ ಬಡಬಾಗ್ನಿಯಿಂದ ಎಂಬ ವಾಸ್ತವದ ಕಟ್ಟೆಚ್ಚರವನ್ನು ಕವಿ ನೀಡುತ್ತಾರೆ. ರೊಟ್ಟಿ ಮೂಲದ ಫ್ರಾನ್ಸಿನ ಕ್ರಾಂತಿ ನೆನಪಾಗುವುದು ನಮಗೆ ಇಲ್ಲಿಯೇ. ಸಮುದ್ರದಾಳದ ಈ ಬಡಬಾಗ್ನಿ ಎಂಬ ಬೆಂಕಿ ಹೊರಕ್ಕೆ ಚಿಮ್ಮಿದಾಗ ಸಂಸ್ಕೃತಿ ನಾಶವಾಗುವಂತೆ, ಬಡವನ ಜಠರಾಗ್ನಿಯು ಬಡಬಾಗ್ನಿಯಾಗಿ ಹೊರ ಚಿಮ್ಮಿದಾಗ ಸಮಾಜದ ಎಲ್ಲ ವರ್ಗದ ಜನರೂ ಅಪಾಯಕ್ಕೀಡಾಗುತ್ತಾರೆ. ಅಂತಹ ಸಮಾಜವೇ ಮಹಾ ಸ್ಮಶಾನವಾಗಿ ಮಾರ್ಪಡುತ್ತದೆ! ಅಲ್ಲಿಯೇ ನಿಜದ ಸಮಾಜವಾದ ಮೂಡುತ್ತದೆ. ಈ ಮೂಲಕ ಇಂಡಿಯಾದ ಶತಶತಮಾನಗಳ ಸಮಾನತೆಯ ಕನಸು ಇಲ್ಲಿ ನನಸಾಗುತ್ತದೆ. ಇದನ್ನು ಊಹಿಸಿ, ಎದುರಿಸುವ ಎದೆಗಾರಿಕೆಯು ವಾಸ್ತವವಾಗಿ ಯಾರಿಗೂ ಇಲ್ಲ ಎಂಬುದನ್ನು ಕವಿ ಕಡೆಯ ಸಾಲುಗಳಲ್ಲಿ ಧ್ವನಿಪೂರ್ಣವಾಗಿ ಅಭಿವ್ಯಕ್ತಿಸುತ್ತಾರೆ.

ಕಲ್ಕಿ! ಕಲ್ಕಿ! ಎನ್ನುತ ಚೀರಿ
ಕನಸೊಡೆದೆದ್ದೆ-
ಇನ್ನೆಲ್ಲಿಯ ನಿದ್ದೆ?

ಸಾಮಾಜಿಕ ಚಿಂತಕರು, ಶ್ರೇಷ್ಟ ಬರಹಗಾರರು ಯಾವಾಗಲೂ ಮೇಲು ವರ್ಗಕ್ಕೆ ಪ್ರತಿಯಾದ ಕೆಳವರ್ಗದ ಕಡೆಗೇ ಇರುತ್ತಾರೆಂಬ ತತ್ವ ಇಲ್ಲಿಯೂ ಸ್ಪಷ್ಟವಾಗಿದೆ. ಜ್ಯೋತಿಯ ಮಣಿದೀಪಗಳಲ್ಲಿ, ಕತ್ತಲು, ಕಗ್ಗತ್ತಲು ಇಲ್ಲಿ…..ಆ ಕಡೆ ಉದ್ಯಾನ ಈ ಕಡೆ ಶ್ಮಶಾನ ಎನ್ನುವಲ್ಲಿ ಕವಿ ಇಲ್ಲಿ, ಈ ಕಡೆಗೇ ಎಂಬ ಬಡವರ ಎಡೆಯತ್ತ ನಿಂತಿರುವುದನ್ನು ಗಮನಿಸಬಹುದು. ಇದರ ಮೂಲಕವೂ ಕವಿಯು ಯಾರ ಪರವೆಂಬುದನ್ನು ಊಹಿಸಬಹುದು. ಇದಕ್ಕೆ ಪೂರಕವಾದ ಮತ್ತೊಂದು ಸ್ಪಷ್ಟ ಉದಾಹರಣೆ ‘ರಾಮಧಾನ್ಯ ಚರಿತೆ’.

ಬಡತನವೇ ಭಯೋತ್ಪಾದಕ ಲೌಕಿಕ ಚಟುವಟಿಕೆಗಳ ಮೂಲ. ಇಂತಹ ಚಿತ್ರಣಗಳನ್ನು ಇಂದು ಆಂಧ್ರದಂತಹ ಪ್ರದೇಶಗಳಲ್ಲಿ ವಿಶೇಷವಾಗಿ ಗಮನಿಸಬಹುದಾಗಿದೆ. ಅನಕ್ಷರತೆ, ಮೌಢ್ಯತೆ, ನಿರುದ್ಯೋಗ, ಬಡತನ ಮೊದಲಾದವುಗಳ ಆವಾಸಸ್ಥಾನವಾದ ಕಲ್ಕಿ ಅವತಾರವಾಗುವುದು ಈ ಹಿನ್ನೆಲೆಯಲ್ಲಿಯೇ.

ಒಟ್ಟಾರೆಯಾಗಿ ಸಮಾಜವು ಆರೋಗ್ಯಕರವಾಗಿ ಬದಲಾಗುತ್ತದೆಂಬ ಆಶಯವನ್ನು ಹೊತ್ತ ಕವಿ ತಮ್ಮ ಪಾದಗಳನ್ನು ನವೋದಯದ ನೆಲೆಯಲ್ಲಿ ಊರಿ ನಿಲ್ಲುತ್ತಾರೆ.

ಸೌಂದರ್ಯೋಪಾಸನೆಯ ನೆಲೆಯಲ್ಲಿಯೆ ಬಹಳವಾಗಿ ನಿಲ್ಲುವ ಭಾರತದ ನವೋದಯ ಮನಸ್ಸು ಕನ್ನಡದ ಕವಿಗಳಲ್ಲಿಯೂ ಕ್ರಿಯಾತ್ಮಕವಾಗಿ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕಂಡು ಬರುವ ಕುವೆಂಪು ಅವರು ಬದ್ಧತೆ ಮತ್ತು ಮೀರುವಿಕೆಯ ನೆಲೆಯಲ್ಲಿ ಮುಖ್ಯರಾಗುತ್ತಾರೆ. ಆದ್ದರಿಂದ ಕವಿಗೆ ಸಾಮಾಜಿಕ ಪ್ರಜ್ಞೆ ಬೇಕು ಎಂಬ ಆಶಯವನ್ನು ಮತ್ತೆ ಮತ್ತೆ ಒತ್ತಿಹೇಳುತ್ತಾರೆ. ಇದರೊಂದಿಗೆ ಶ್ರಮ ಸಂಸ್ಕೃತಿಯ ನೆಲೆಗಳು ಸಾಂಪ್ರದಾಯಿಕ ಕಾವ್ಯದ ಕಟ್ಟನ್ನು ಒಡೆಯಬೇಕೆಂದು ಸಾಹಿತ್ಯದ ನಿರ್ಮಾಪಕರಿಗೆ ನೇರವಾಗಿಯೂ ಮಾರ್ಗದರ್ಶನ ನೀಡಿಬಿಡುತ್ತಾರೆ. ಪ್ಯಾಬ್ಲೊನೆರೂಡ ಅಪೇಕ್ಷಿಸುವಂತೆ ಸಾರಿನ ಕಲೆ ಅಂಟಿದ ಬಟ್ಟೆ, ನಿರ್ಲಜ್ಜ ನಡವಳಿಕೆಗಳಿಂದ ಕೊಳಕಾದ ಶರೀರ, ಚರ್ಮದ ಸುಕ್ಕುಗಳು, ಪ್ರಜ್ಞೆ ಮತ್ತು ಕನಸುಗಳು, ನಮ್ಮ ಕಾಣ್ಕೆ ಮತ್ತು ಮುನ್ನೋಟಗಳು, ಜನಪದ ಕಥಾ ವಿಷಯ, ಆಘಾತ, ರಾಜಕೀಯ ನಿಷ್ಟೆ, ನಿರಾಕರಣೆ, ಸಂದೇಹ, ಸಮರ್ಥನೆ ಮತ್ತು ಆರೋಪ-ಇಂಥ ಮಲಿನವಾದೊಂದು ಕಾವ್ಯ ನಮ್ಮದಾಗಲಿ. ಇದೇ ಆಶಯವನ್ನು ಕುವೆಂಪು ಅವರು ‘ಕ್ರಾಂತಿಕಾಳಿ’ ಪದ್ಯದಲ್ಲಿ ಪ್ರಕಟಿಸುವಾಗ, ಸಾಹಿತ್ಯವು ವೈಚಾರಿಕತೆಯನ್ನು ಮೈಗೂಡಿಸಿಕೊಡು ಸಮಾಜದ ಬದಲಾವಣೆಗೆ ಮಾರ್ಗದರ್ಶನ ನೀಡಬೇಕೆಂದು ಒತ್ತಾಯಿಸುತ್ತಾರೆ.

ಇದಕ್ಕೆ ಪೂರಕವಾಗಿ ‘ಗೊಬ್ಬರ’ ಗಮನಾರ್ಹವೆನಿಸುತ್ತದೆ.
ಆಧುನಿಕ ಸಂದರ್ಭದಲ್ಲಿ ಕನ್ನಡ ಸಾಹಿತ್ಯವು ಹಲವು ಸ್ಥಿತ್ಯಂತರಗಳಿಗೆ ಒಳಗಾಗಿದೆ. ಅದಕ್ಕೆ ಹಿನ್ನೆಲೆಯಾಗಿ ವಸಾಹತು ಮತ್ತು ನವ ವಸಾಹತುಗಳಾದ ನಮ್ಮ ಸಾಂಸ್ಕೃತಿಕ ಸಂದರ್ಭವನ್ನು ಗಮನಿಸಬೇಕು. ಈ ಸಂದರ್ಭದಲ್ಲಿ ವಿವಿಧ ಮೂಲಗಳ ಹಲವು ಬೌದ್ಧಿಕ ಸಂಘರ್ಷಗಳು ಜರುಗಿವೆ. ಸಾಹಿತ್ಯವನ್ನು ತನ್ನ ಸ್ವತ್ತನ್ನಾಗಿಸಿಕೊಂಡು ಸೀಮಿತ ಪುರೋಹಿತಶಾಹಿ ವರ್ಗ ಮತ್ತು ಆ ಸಾಹಿತ್ಯದ ಪರಿಧಿಯೊಳಕ್ಕೆ ತನ್ನ ಸಾಚಾ ಸಂವೇದನೆಗಳೊಂದಿಗೆ ಪ್ರವೇಶಿಸಲೆತ್ನಿಸುತ್ತಿದ್ದ ಶೂದ್ರ ವರ್ಗ-ಇವುಗಳ ನಡುವಣ ಉಂಟಾದ ಸಂಘರ್ಷವೇ ಈ ಕವಿತೆಯ ವಸ್ತು. ಹೀಗೆ ಎರಡು ಭಿನ್ನ ಬೌದ್ಧಿಕತೆಗಳ ನಡುವಣ ಸಂಘರ್ಷದ ಪ್ರಕಟಿತ ರೂಪವಾಗಿ ‘ಗೊಬ್ಬರ’ ಮೈತಾಳುತ್ತದೆ. ಆದರೆ ಪದ್ಯದ ಉತ್ತರಾರ್ಧದಲ್ಲಿ ನಿಂತು ಮಾತನಾಡುವಂತೆ ಕೇಳುತ್ತದೆ. ಇದೇ ಕವಿಯ ಆಶಯವೂ ಹೌದು. ಈ ಮೂಲಕ ಹೊಸ ಸಾಹಿತ್ಯ ಮೀಮಾಂಸೆಯನ್ನು ಮಂಡಿಸವ ಈ ಪದ್ಯ ಏಕಕಾಲಕ್ಕೆ ಪದ್ಯ ಕೃತಿಯೂ, ನೂತನ ಕಾವ್ಯ ಮೀಮಾಂಸೆಯ ಕೃತಿಯೂ ಆಗಿ ಮಾರ್ಪಡುತ್ತದೆ.

ಪ್ರಸ್ತುತ ಕವಿತೆ ನಾಟಕೀಯವಾದ ಬೆಳವಣಿಗೆಯನ್ನು ಪಡೆದಿದೆ. ಇಲ್ಲಿ ಮೊದಲಿಗೆ ಪುರೋಹಿತಶಾಹಿಯ ವಕ್ತಾರರು ಸಾಹಿತ್ಯದ ಮೀಮಾಂಸೆಯನ್ನು ಸುದೀರ್ಘವಾಗಿ ಮಂಡಿಸುತ್ತಾರೆ. ಆನಂತರದಲ್ಲಿ ಶ್ರಮ ಸಂಸ್ಕೃತಿಯ ವಕ್ತಾರನಾದ ಕವಿ ಅದಕ್ಕೆ ಪ್ರತಿಯಾಗಿ ಮತ್ತು ಪ್ರತಿಕ್ರಿಯೆಯಾಗಿ ಅದೇ ಸಾಹಿತ್ಯಕ್ಕೆ ಹೊಸ ಮೀಮಾಂಸೆಯನ್ನು ನೀಡುತ್ತಾರೆ. ಅದರ ಮೂಲಕ ಸಾಂಪ್ರದಾಯಿಕ ಕಾವ್ಯಕ್ಕೆ ಹೊಸ ಆಯಾಮವನ್ನು ನೀಡುವುದಲ್ಲದೆ ಸಮಾಜವಾದಕ್ಕೆ ಸಹ ಪಕ್ಕಾಗುತ್ತಾರೆ.
ಹೀಗೆ ಈ ಶತಮಾನಕ್ಕೊಗ್ಗುವ ಹೊಸ ಸಾಹಿತ್ಯ ಮೀಮಾಂಸೆಯನ್ನು ಮಂಡಿಸಿದ ಕುವೆಂಪು ಅವರು ಕನ್ನಡ ಕಾವ್ಯಕ್ಕೆ ಹೊಸ ದಿಕ್ಕನ್ನು ತೋರಿದವರಾಗುತ್ತಾರೆ.
* * *
ನಾವು ನಮ್ಮ ಇತಿಹಾಸ-ಸಂಸ್ಕೃತಿಗಳನ್ನು ಪರಿಶೀಲಿಸಲು ಸಾಮಾನ್ಯವಾಗಿ ಎರಡು ಕ್ರಮಗಳನ್ನು ಅನುಸರಿಸುತ್ತೇವೆ. ಅವುಗಳಲ್ಲಿ ಮೊದಲನೆಯದು, ಪ್ರಧಾನ ನೆಲೆಗಳ ಮೂಲಕ ಇತಿಹಾಸ, ಸಂಸ್ಕೃತಿಗಳನ್ನು ಅರಿಯುವ ಆಕಾಶದ ಕಣ್ಣಿನ ದೃಷ್ಟಿ. ಎರಡನೆಯದು ಅಲಕ್ಷಿತ ನೆಲೆಗಳ ಮೂಲಕ ಅದನ್ನೇ ಅರಿಯುವ ನೆಲದ ಕಣ್ಣಿನ ದೃಷ್ಟಿ. ಒಂದು ಆಕಾಶದಲ್ಲಿ ಹಾರಾಡಿ ಭೂಮಿಯ ವಿವಿಧ ವಿವರಗಳನ್ನು ನೋಡುವ ಹಕ್ಕಿಯ (ವಿಹಂಗಮ) ಆಕಾಶದ ಕಣ್ಣಿನ ದೃಷ್ಟಿಯಾದರೆ ಮತ್ತೊಂದು ಹಾವಿನಂತೆ ನೆಲದಲ್ಲಿ ಹರಿದಾಡಿ ಎಲ್ಲಾ ಚರಾಚರಗಳನ್ನೂ ಗ್ರಹಿಕೆಗೆ ತಂದುಕೊಳ್ಳುವ ನೆಲದ ಕಣ್ಣಿನ ದೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಇತಿಹಾಸವನ್ನು ನೈತಿಕ ಪುರಾಣ ಎಂದೇ ಭಾವಿಸಿದ್ದೇವೆ. ಇದು ನಮಗೆ ವಸಾಹತುಶಾಹಿ ಸಂಸ್ಕೃತಿ ಕಲಿಸಿದ ಪಾಠ. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಕರ್ನಾಟಕದ ಇತಿಹಾಸಕಾರನಿಗೆ ಕಾಣುವುದು ಕೇವಲ ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಮೊದಲಾದ ಪ್ರಭುತ್ವಗಳು ಮಾತ್ರ. ಇವರ ಕಥನಗಳ ಒಟ್ಟು ರೂಪವೇ ಕರ್ನಾಟಕದ ಪ್ರಭುತ್ವದ ಇತಿಹಾಸ ಎಂಬುದು ಆಕಾಶದ ಕಣ್ಣಿಗೆ ವೇದ್ಯಗೊಳ್ಳುವ ಸಂಗತಿ. ಆದರೆ ಕರ್ನಾಟಕದ ಪ್ರಭುತ್ವ ಎಂಬುದು ಇಷ್ಟೇ ಅಲ್ಲ. ಇದನ್ನೂ ಒಳಗೊಂಡ ಹಲವು ಸ್ಥಳೀಯ ಪ್ರಭುತ್ವಗಳು ಸೇರಿದಾಗ ಮಾತ್ರ ಅದು ಪೂರ್ಣತೆಯನ್ನು ಪಡೆದುಕೊಳ್ಳುತ್ತದೆ. ಮತ್ತು ಇವುಗಳನ್ನು ಕುರಿತಾದ ‘ನೈತಿಕ ಪುರಾಣ’ದ ಧೋರಣೆಗೆ ಹೊರತಾಗಿ ಗುಣಾತ್ಮಕ ಮತ್ತು ನಕಾರಾತ್ಮಕವಾದ ಅಂಶಗಳು ಸೇರ್ಪಡೆಗೊಂಡಿರುವ ಒಟ್ಟು ಚರ್ಚೆಯೇ ಕರ್ನಾಟಕದ ಸಮಗ್ರ ನೈಜ ಇತಿಹಾಸ ಎಂಬುದು ನೆಲದ ಕಣ್ಣಿಗೆ ಗೋಚರವಾಗುವ ವಸ್ತು ಸತ್ಯ. ಇದರೊಂದಿಗೆ ಪ್ರಭುಗಳು ಎಂಬುವರು ಅತಿಮಾನುಷರಲ್ಲ. ವಾಸ್ತವವಾಗಿ ಅವರೂ ಶ್ರೀಸಾಮಾನ್ಯರೆ ಎಂಬುದು ಈ ತಾರ್ಕಿಕತೆಯ ಮುಖ್ಯ ಭಾಗ.

ಈ ಹಿನ್ನೆಲೆಯಲ್ಲಿ ಪ್ರಭುತ್ವಗಳನ್ನು ವೈಭವೀಕರಿಸದೆ, ಸಾಂಪ್ರದಾಯಿಕ ಇತಿಹಾಸಕ್ಕೆ ಪರ್ಯಾಯವಾದ ನೆಲೆಯಲ್ಲಿ ನಿಂತು ಸಿದ್ಧಲಿಂಗಯ್ಯ ಅವರು ಕನ್ನಡತ್ವ ಪದ್ಯದಲ್ಲಿ ಮಾತನಾಡುತ್ತಾರೆ. ಇದೇ ನಿಟ್ಟಿನಲ್ಲಿ ರೈತ ಪರವಾದ ನೆಲೆಯಲ್ಲಿ ನಿಂತು ಕುವೆಂಪುರವರು ‘ರೈತನ ದೃಷ್ಟಿ’ ಪದ್ಯದಲ್ಲಿ ಮಾತಾಡಿದ್ದಾರೆ.

ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ!
ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲೀಷರೊ?
ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ!
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದಹಾಕಿ ತಿವಿದರದು ಹೂವೆ?

ಎನ್ನುವ ಕವಿ, ಸಾಮ್ರಾಜ್ಯ ಸುಖವು ಭೂರ್ಜ್ವಾಗಳಿಗೆ ಮಾತ್ರ ಎಂಬ ವಿಚಾರವನ್ನು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ಕಾಲದವರೆಗಿನ ಇತಿಹಾಸದ ಅವಧಿಯ ಹಿನ್ನೆಲೆಯಲ್ಲಿ ಸೂಚಿಸುತ್ತಾರೆ. ಇಂತಹ ವೈಟ್‌ಕಾಲರ್‌ಗಳ ಸಂಸ್ಕೃತಿಯನ್ನು ಪ್ರತಿರೋಧಿಸುತ್ತ, ಶ್ರಮಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ. ಇದಕ್ಕಾಗಿ ಶ್ರಮಸಂಸ್ಕೃತಿಯ ಪ್ರತೀಕಗಳಾದ ನೇಗಿಲು, ಬಸವಗಳ ಮೇಲಾಣೆ ಮಡಗುತ್ತಾರೆ.

ಹೀಗೆ ಪ್ರಖರೆ ವೈಚಾರಿಕತೆಯನ್ನು ಹರಿತವಾದ ಭಾಷೆಯಲ್ಲಿ ಹರಿಯಿಸುವಾಗ ಕಾವ್ಯಾತ್ಮಕತೆ ಕೆಲವಡೆ ಸೊರಗಿದೆ ಎಂದೆನಿಸಿದರೂ ಎಲ್ಲಿಯೂ ತಮ್ಮ ಸಾಮಾಜಿಕ ಕಳಕಳಿ ಮಂಕಾಗಿಲ್ಲವೆನ್ನುವುದು ಮುಖ್ಯ ಸಂಗತಿಯಾಗಿ ನಿಲ್ಲುತ್ತದೆ.
*****
ಅಕ್ಟೋಬರ್ ೨೦೦೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಂದರ ಶಿವ
Next post ಉದ್ಧಾರಕ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys