ಕಂಡೆ ಕಂಡೆನು ನಿನ್ನ ಕಂಡೆನು
ಕಡೆಗೆ ಉಳಿದು ಕೊಂಡೆನು
ನಿನ್ನ ಕಂಡಾ ಮೇಲೆ ಕಾಣಲು
ಏನು ಇಲ್ಲಾ ಎಂದೆನು
ನೀನು ಎಲ್ಲಾ ಎಂದೆನು

ಮುಗಿಲ ಮೇಘಾ ಕರಗಿ ಜಾರಿತು
ಪ್ರೇಮ ವರ್‍ಷಾ ಸುರಿಯಿತು
ನಿನ್ನ ಸ್ಪರ್‍ಶಾ ಹರ್‍ಷ ಹರ್‍ಷಾ
ಕೋಣ ಕಾಳಗ ಮುಗಿಯಿತು
ಗೂಳಿ ಹಾವಳಿ ನಿಂದಿತು

ನನ್ನ ಮೈಮನ ಹಸಿದ ನೋಟಕೆ
ಹೊಳೆಯು ತುಂಬಿ ಬಂದಿತು
ಮುಗಿಲ ಮೇಘ ತುಂಬಿ ತುಳುಕಿ
ಗುಡ್ಡ ಬೆಟ್ಟಾ ತಣಿಸಿತು
ಹೂವು ಹಸಿರು ಕುಣಿಸಿತು

ಅಂತರಾತ್ಮದ ಘೋರ ಘಾಯಾ
ಮಟಾಮಾಯವಾಯಿತು
ಇರುಳ ಭೀಕರ ಗೂಗೆ ಹಾರಿತು
ಚಂದ್ರ ಬೆಳಗು ಸುರಿಯಿತು
ಶಿವಸಮಾಗಮವಾಯಿತು
*****