ಚಿತ್ರ: ಸ್ಟಕ್ಸ್ / ಪಿಕ್ಸಾಬೇ
ಚಿತ್ರ: ಸ್ಟಕ್ಸ್ / ಪಿಕ್ಸಾಬೇ

ಸಾವಿನ ಬಗೆಗಿನ ಪ್ರಜ್ಞೆಯನ್ನು ನಾವು ಬೆಳೆಸಿಕೊಳ್ಳಲನುವಾಗುತ್ತಿದ್ದಂತೆ ಅದು ಸೂಚನೆಯನ್ನೂ ಕೊಡದೆ ನಮ್ಮನ್ನು ಆವರಿಸುತ್ತದೆ. ಪ್ರಜ್ಞಾಪೂರ್ವಕವಾಗಿ ಅದನ್ನು ಸಂಧಿಸುವಾಗಿನ ಯಮಯಾತನೆಯನ್ನು ನಾನು ಕಲ್ಪನೆಯಲ್ಲೂ ಊಹಿಸಲಾರೆ. ಕಮಲತ್ತೆ ಈಗಲೋ ಆಗಲೋ ಎನ್ನುವಂತಿದ್ದಾರೆ ಎಂದು ಮಾವಯ್ಯ ಬದಿರೋ ಕಾಗ್ದ ಈಗ ನನ್ ಕೈಲಿದೆ. ಕಮಲತ್ತೇನ ನೆನೆಸಿಕೊಂಡಾಗಲೆಲ್ಲ ಏನೋ ಎಂತದೋ ಅಳುಕು. ಅದಕ್ಕೆ ಉತ್ತರಿಸಲಿಕ್ಕಾಗದೆ ಒಂಟಿಯಾಗಿರುವಾಗೆಲ್ಲಾ ಮಮ್ಮಲ ಮರುಗುತ್ತೇನೆ. ಈ ಅಳುಕಿನ ಮೂಲ ಭಾವನೆಗಳನ್ನೆಲ್ಲ ಗುರುತಿಸುವ ನನ್ನ ಹಂಬಲ ಹಾಗೇ ಉಳಿದಿದೆ.

ನನ್ನ ಭಗ್ನಪ್ರೇಮಕ್ಕೆ ಕಾರಣಳಾದ ಹುಡುಗಿ ಕಮಲಳ ಹೆಸರೇ ಕಮಲತ್ತೆಗಿದ್ದುದರಿಂದ ನಾನು ಕಮಲತ್ತೆಯಿಂದ ವಿಲಕ್ಷಣವಾದ ಆಕರ್ಷಣೆಗೊಳಗಾಗಿದ್ದೆನೆ ಎಂಬುದು ಇಂದಿಗೂ ತೀರ್ಮಾನವಾಗದ ವಿಚಾರ. ಕಮಲಳಿಗೂ ಕಮಲತ್ತೆಗೂ ರೂಪದಲ್ಲೂ ಗುಣದಲ್ಲೂ ಒರಟು ಸಾಮ್ಯಗಳಿದ್ದುದು ನಿಜ. ಬಹುಶಃ ಆ ಸಾಮ್ಯಗಳೇ ನಾನು ಕಮಲತ್ತೇನ ಹೆಚ್ಚಿಗೆ ಹಚ್ಚಿಕೊಳ್ಳಲು ಕಾರಣವಾಗಿರಬಹುದು. ನನ್ನ ಹಾಗು ಕಮಲತ್ತೆಯ ಸಂಬಂಧ ಮನಶ್ಶಾಸ್ತದ ಯಾವ ಪಂಥದಿಂದ ಗುರುತಿಸಬಹುದೋ ನನಗೆ ಗೊತ್ತಿಲ್ಲ. ಫ್ರಾಯ್ಡ್‌ನ ಥಿಯರಿಯನ್ನು ಈ ಸಂಬಂದಕ್ಕೆ ನೀವು ಮಾತ್ರ ಹಚ್ಚದಿರಿ. ಯಾಕೇಂದ್ರೆ ಆ ಥಿಯರಿಯ ನೆರಳಿನಲ್ಲಿ ನಮ್ಮಿಬ್ಬರ ನಡುವಿನ ಸಂಬಂಧವನ್ನ ವಿಮರ್ಶಿಸಿ- ವಿಶ್ಲೇಷಿಸಲು ನಾನು ಪ್ರಯತ್ನಿಸಿ ಫ್ರಾಯ್ಡ್‌ನೊಬ್ಬ ‘ಹುಚ್ಚು ಮುಂಡೇಮಗ’ ಎಂದು ಬಯ್ದದ್ದೂ ಉಂಟು.

ಅಮ್ಮನ ಗಂಟು ಮೋರೆಯ ಸೆಡವಿನ ತಾತ್ಸಾರಕ್ಕೆ ಗುರಿಯಾಗಿದ್ದ ನಾನು ಶಾಲೆಯ ಕಾಲೇಜಿನ ಪ್ರತಿ ಬೇಸಿಗೆ ರಜೆಗೆ ಊರಿಗೆ ಹೋಗಿ ಕಮಲತ್ತೆ ಮಡಿಲಲ್ಲಿ ಮಲಗಲು ಹವಣಿಸಿದ್ದು ಉಂಟು. ಆದರೆ ಲೋಕವೇನಂದಾತು ಎಂಬ ಭೀತಿ ಪೂರ್ವಕವಾದ ಪ್ರಜ್ಞೆ ಆ ಹವಣಿಕೆಯನ್ನು ಚಿವುಟಿ ಹಾಕುತ್ತಿದ್ದುದು ಉಂಟು. ಕಮಲತ್ತೆ ಸುಟ್ಟು ಕೊಡುತ್ತಿದ್ದ ಕೆಂಡದ ರೊಟ್ಟಿ ಸವಿ ನೋಡ್ತಾ ‘ನನಗೆ ಹೀಗೆ ಪ್ರಾಮುಖ್ಯತೆ ಕೊಡೋರು ಯಾರೂ ಇಲ್ವಲ್ಲ’ ಎಂದು ಬೇಸರಿಕೆಯಿಂದ ಕಣ್ಣಲ್ಲಿ ನೀರು ತಂದು ಕೊಂಡು ಅಮ್ಮ ಅಪ್ಪಯ್ಯನ್ನ ದಿನನಿತ್ಯದ ಜಗಳಗಳ ವರದಿಯನ್ನು ಕಮಲತೆಃಗೊಪ್ಪಿಸಿ ದೂರುತ್ತಿದ್ದೆ. “ಮೊದ್ಲು ನಿಮ್ಮಪ್ಪಯ್ಯನ್ನ ಅಮ್ಮನ್ನ ದೂರೋದನ್ನ ನಿಲ್ಸು.” ಅಂತಿದ್ದ ಕಮಲತ್ತೆಯ ತಾತ್ವಿಕತೆ ನನಗೆ ಇಂದಿಗೂ ಬಿಡಿಸಲಾಗದ ಒಗಟಾಗಿದೆ. ಬ್ರಾಹ್ಮಣನಾದ ನಾನು ಗಂಡಸರು ದಿನನಿತ್ಯ ಧ್ಯಾನ – ಸಂಧ್ಯಾವಂದನೆ ಮಾಡುತ್ತಿದ್ದುದನ್ನು ಕಂಡಿದ್ದೆನೆ ಹೊರತು ಹೆಂಗಸರು ಹಾಗೆಲ್ಲ ಧ್ಯಾನ- ಸಂಧ್ಯಾವಂದನೆಗಳನ್ನು ಮಾಡುತ್ತಿದ್ದುದನ್ನು ಕಂಡಿರಲಿಲ್ಲ. ಕಮಲತ್ತೆ ಉಪನಯನ ಮಾಡಿಕೊಂಡವಳಂತೆ ಪ್ರತಿದಿನವೂ ಪಂಚಪಾತ್ರೆ ಉದ್ಧರಣೆ ನೀರು ಇಟ್ಟುಕೊಂಡು ಸಂಧ್ಯಾವಂದನೆಯಂತದು ಎಂಥದೋ ಒಂದನ್ನ ಮಾಡ್ತಿದ್ದಳು. ಅದರ ಬಗ್ಗೆ ನಾನು ಚಿಕ್ಕವನಿದ್ದಾಗ ಕೇಳಿದ್ದೆ, “ನೀನು ತಿಳ್ಕೊಂಡು ಏನ್ಮಾಡ್ತೀ? ಬಾ, ನಿನಗೆ ಕೆಂಡದ ರೊಟ್ಟಿ ಕೊಡ್ತೀನಿ” ಅಂತ ಹೇಳಿ ಏನಾದರು ಆಮಿಷ ಒಡ್ಡಿ ನನ್ನನ್ನು ಸುಮ್ಮನಾಗಿಸುತ್ತಿದ್ದಳು.” ಮದ್ದು ಮಾಟಕ್ಕೆ ಸಂಬಂಧಪಟ್ಟಿದ್ದೋ ಏನೋ? ಎಂಥದೋ ಒಂದು ಪಾಡದು. ಎಲ್ಲಿಂದ ಕಲ್ತಳೋ ಈ ಕಮಲ..” ಎಂದು ಸಾಕಷ್ಟು ಜನ ಆಡಿಕೊಂಡದ್ದನ್ನು ಕೇಳಿದ್ದೇನೆ. ಅದೆಲ್ಲಾ ಏನೇ ಇರಲಿ, ಆಕೆ ಸಂಧ್ಯಾವಂದನೆ ಮಡ್ತಿದ್ದದ್ದು, ಬಂದು ಹೋದವರ ಬಳಿಯೆಲ್ಲಾ ಮಾಸದ ನಗುವಿನಿಂದ ಬೇಕಾದ್ದಕ್ಕೆ ಬೇಡಾದ್ದಕ್ಕೆಲ್ಲಾ ಉಪಚರಿಸುತ್ತಿದ್ದುದು, ಆಕೆಯ ಇನ್ನಿತರ ನಡವಳಿಕೆಯೆಲ್ಲಾ ನನ್ನ ಮೇಲೆ ಗಟ್ಟಿ ಪ್ರಭಾವ ಬೀರಿತ್ತು. ಬಹುಶಃ ನಾನು ಅಂತಹ ಪ್ರಭಾವವನ್ನು ಸ್ವಯಂಪ್ರೇರಿತನಾಗಿ ಆಹ್ವಾನಿಸಿದವನಲ್ಲ. ಆದರೂ ಆ ಸ್ವಭಾವ ಬೆಂಗಳೂರಿನವನಾದ ನನ್ನ ವ್ಯಕ್ತಿತ್ವವನ್ನು ರೂಪುಗೊಳಿಸುವುದರಲ್ಲಿ ವಿಫಲವಾಗಿದ್ದರೂ ಪ್ರಜ್ಞೆಯ ಒಳಾಂತರ್ಯದಲ್ಲಿ ಎಲ್ಲೊ ಮಡುಗಟ್ಟಿ ಕೂತಿದೆ. ತಾರುಣ್ಯದ ಕನಸುಗಳು- ಆದರ್ಶಗಳೆಲ್ಲ ಬತ್ತಿ ಹೋಗಿಬದುಕೆಲ್ಲ ಬರಿದಾಗಿರುವಂತಾಗಲೇ ಕಮಲತ್ತೆಗೆ ಕ್ಯಾನ್ಸರ್ ಎಂಬ ಸುದ್ದಿ ನನಗೆ ಬಂದಿತ್ತು.

ದೀರ್ಘಕಾಲದಿಂದ ತನಗಿದ್ದ ಹೊಟ್ಟೆನೋವನ್ನ ಹೋಮಿಯೋಪಥಿ ಡಾಕ್ಟರನಾದ ಮಾವಯ್ಯನಿಗೂ ತಿಳಿಯದಂತೆ ಮುಚ್ಚಿಟ್ಟು, ಅದರ ಸುಳಿವೂ ಕೊಡದಂತೆ ನೋವಿನ ನರಕಕ್ಕೆ ನಗುವಿನ ಮುಖವಾಡ ಹಚ್ಚುತ್ತಿದ್ದ ಆಕೆಯ ಸಹನೆಗೆ ಮಾವಯ್ಯನಿಂದ ಎಂತಹ ವಂಚನೆ ನಡೆದಿತ್ತು! ಕಮಲತ್ತೆಯ ಅನಾರೋಗ್ಯದ ಕಾರಣ ಮನೆಯ ಉಸ್ತುವಾರಿ ನೋಡಿಕೊಳ್ಳಲು ಬಂದಿದ್ದ ಕಮಲತ್ತೆಯ ತಂಗಿಯ ಬಳಿ ಬೆಚ್ಚಗಿದ್ದ ಮಾವಯ್ಯನ ಮೋಜು ಕಮಲತ್ತೆಗೆ ಕ್ಯಾನ್ಸರ್ ಎನ್ನುವ ಸತ್ಯ ಆಸ್ಫೋಟಿಸಿದಾಗ ಕಳಚಿಬಿತ್ತು. ಸ್ವತಃ ಡಾಕ್ಟರನಾದ ಮಾವಯ್ಯನು ಸ್ವಂತ ಹೆಂಡತಿಗಿದ್ದ ರೋಗದ ಸುಳಿವು ತಿಳಿದುಕೊಳ್ಳಲು ಅಶಕ್ತನಾದುದರ ಬಗೆಗೆ ತುಂಕೂರಿನ ಡಾಕ್ಟರ್ ಆಕ್ಷೇಪವೆತ್ತಿದಾಗ “ಏನ್ಮಾಡೋದು ಡಾಕ್ಟ್ರೆ, ನನ್ನ ಹತ್ರ ಏನೂ ಹೇಳದೆ ಮುಚ್ಚಿಟ್‌ಬಿಟ್ಳು” ಎಂದು ಅಸಹಾಯಕತೆಯ ಸೋಗು ಹಚ್ಚಿದ ಮಾವಯ್ಯನು ತನ್ನ ನಾದಿನಿ ಬಳಿ ಇಟ್ಟುಕೊಂಡಿದ್ದ ಅವ್ಯವಹಾರವನ್ನು ಕಾಲದ ಗಡುವು ಆಚೆ ನೂಕಿದಾಗ ಊರವರ ಹಾಳು ಬಾಯಿ ಹಾಳುಸುರಿದಿರಲಿಲ್ಲ. ತನ್ನೆಲ್ಲ ತಾಪತ್ರಯಗಳ ಮಧ್ಯೆ ಮಾವಯ್ಯ ಕಮಲತ್ತೇನ ಬೆಂಗಳೂರಿಗೆ ಕರೆತಂದಾಗ ಕಮಲತ್ತೆ ಎಲುಬಿನ ಹಂದರವಾಗಿದ್ದಳಾದರೂ ಕಣ್ಣಲ್ಲಿಯ ಮಿಂಚನ್ನು ಕಳೆದುಕೊಂಡಿರಲಿಲ್ಲ. ಸಾವಿನ ವಿರುದ್ಧ ಹೋರಾಡುತ್ತಿದ್ದ ಆಕೆಯ ಜೀವದ ಬಗೆಗೆ ಯಾವ ದೊಡ್ಡ ಡಾಕ್ಟರೂ ಖಾತ್ರಿ ನೀಡಲು ಸಾಧ್ಯವಿರಲಿಲ್ಲವೆಂದೇ ಆಕೆಯ ಬಂಧು ಬಳಗವೆಲ್ಲ ಆಕೆಗೆ ಇಷ್ಟವಾದ್ದನ್ನೆಲ್ಲ- ಇಷ್ಟವಾಗದ್ದನ್ನೆಲ್ಲ ತಂದು ಕೇಳಲಿ ಕೇಳದಿರಲಿ ಆಕೆಯ ಮುಂದೆ ತಂದು ಸುರಿದಿದ್ದರು. ಅದರಲ್ಲಿ ನಾನೂ ಒಬ್ಬ. ಒಂದು ದಿನ ಆಕೆಗಿಷ್ಟವಾದ ತಿಂಡಿಯನ್ನು ಒಯ್ದಿದ್ದೆ. ಆಗನ್ನಿಸಿತ್ತು- “ಹೀಗೆಯೆ ಪ್ರತಿಯೊಬ್ಬರೂ ಏನಾದರೊಂದನ್ನ ತೆಗೆದುಕೊಂಡುಹೋಗಿ ಆಕೆಯನ್ನು ಸಂತೋಷವಾಗಿಡುವ ನೆಪದಲ್ಲಿ ಆಕೆ ಮರೆಯಲೆಳುಸುತ್ತಿರಬಹುದಾದ ಸಾವು ಆಕೆಯ ಪ್ರಜ್ಞೆಯನ್ನು ಸದಾ ಕುಕ್ಕುತ್ತಿರುವಂತೆ ಮಾಡಿರಬಹುದಲ್ಲವೆ” ಎಂದು. ನಮ್ಮ ಕನಿಕರಭರಿತವಾದ ಮಾತುಗಳನ್ನು ಜೊತೆಗೆ ರೋಗದ ಭಯಂಕರ ನೋವನ್ನು ತಾಳಿಕೊಳ್ಳುತ್ತಿರುವ ಆಕೆಯ ತಾಳ್ಮೆಯ ಬಗೆಗಿನ ನಮ್ಮ ಆಶ್ಚರ್ಯಸೂಚಕಗಳನ್ನು, ಅವಳನ್ನು ಸಂತೋಷವಾಗಿಡಲು ಬಲವಂತದಿಂದ ಹೊರಹೊಮ್ಮಿಸಿದಾಗ ಕೃತಕವಾಗಿ ಹೋದ ಆ ಹಾಸ್ಯ ತುಣುಕುಗಳು ಇವೆಲ್ಲ ಅವಳ ಸಾವಿನ ಪ್ರಜ್ಞೆಯನ್ನು ಗಟ್ಟಿಯಾಗಿಸಿರಲಾರದೆ? ಇದ್ದಬದ್ದ ಅಲ್ಪ ಸಂತೋಷವನ್ನು ಆ ಕಾರಣಗಳಿಂದ ತ್ಯಜಿಸಿದ ಆಕೆಯ ನಗುವು ಸಹ ಕೃತಕವಲ್ಲವೆ? ಆನಂತರ ಆಕೆ ಒಂಟಿಯಾಗಿದ್ದಾಗ ನಮ್ಮನ್ನು ಶಪಿಸಿ ತಾನೂ ನರಳಿರಲಾರಳೆ ಎಂಬೆಲ್ಲಾ ಯೋಚನೆಗಳು ನನ್ನ ಅಳುಕನ್ನು ಈಗ ಅಧಿಕಗೊಳಿಸಿವೆ.

ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಒಂಟಿಯಾಗಿರುತ್ತಿದ್ದ ಆಕೆಯ ಆಗಿನ ಭಾವನೆಗಳ ಬಗೆಗೆ ನನ್ನ ಬಾಲಿಶವಾದ ಬೌದ್ಧಿಕವಾದ ಕುತೂಹಲವನ್ನು ಅನೇಕ ಪ್ರಶ್ನೆಗಳ ರೂಪದಲ್ಲಿ ಆಕೆಯ ಮುಂದೆಯೆ ಹೊರಗೆಡಹಿದಾಗ ನಕ್ಕು ಹೇಳಿದ್ದಳು: “ಅಲ್ವೋ ಚಂದ್ರೂ, ನೀನಿನ್ನೂ ಹುಡುಗುಹುಡುಗಾಗೇ ಇದ್ದೀಯಲ್ಲೋ, ನೀನೇನು ಸಾಯ್ದೆ ಇಲ್ಲೇ ಗೂಟ ಬಡ್ಕೊಂಡಿತೀಯಾಂತ ಅಂದ್ಕೊಂಡಿದ್ದೀಯ? ಕೆಲವು ರಹಸ್ಯಗಳನ್ನ ಕೆದಕಬಾದು. ಕೆದಕುವ ಮುಖಾಂತರ ಅವುಗಳನ್ನ ಅರಿವಿಗೆಟುಕಿಸ್ಕೊಂಡ್ರೆ ಅವು ಹಿಂತಿರುಗು ಹೊಡೆಯುತ್ವೆ. ನಮ್ಮ ನಿತ್ಯ ಚಟುವಟಿಕೆಗಳ ಅನುಭವ ಆ ಏಟಿನ ಬಿರುಸನ್ನ ತಾಳಿಕೊಳ್ಳೂವಷ್ಟು ಪಕ್ವವಾಗಿರೋದೆ ಇಲ್ಲ. ಹಾಗೆ ನೋಡಿದ್ರೆ ನಿನ್ನ ಹುಡುಗುತನವೇ ಶ್ರೇಷ್ಠವಾದ್ದು. ಬದುಕಿನ ಬಗೆಗೆ ಎಂಥದೋ ಒಂದು ಕುತೂಹಲವನ್ನ ಉಳಿಸಿರುತ್ತೆ…” ಎಂದಿದ್ದಳು.

ಈ ಕಮಲತ್ತೆಗೆ ನಾನು ಅತಿಯಾದ ಪ್ರಾಮುಖ್ಯತೆ ಕೊಟ್ಟಿರೊದ್ರಿಂದ್ಲೇ ನನ್ನ ಇನ್ನೂ ಚಿಕ್ಕ ಹುಡುಗ ಅಂತಂದುಕೊಂಡಿದ್ದಾಳೆ ಎಂದಂದುಕೊಂಡು ಸುಮ್ಮನಾಗಿದ್ದೆ. ಡಾಕ್ಟರುಗಳು ಕಮಲತ್ತೆಗೆ ಚಿಕಿತ್ಸೆ ವೃಥಾ ದಂಡವೆಂದು ಅಭಿಪ್ರಾಯ ಪಟ್ಟಾಗ ಮಾವಯ್ಯ ಕಮಲತ್ತೇನ ಊರಿಗೆ ಸಾಗಿಸಿದ್ದ. [ಕಮಲತ್ತೆಗೆ ರಕ್ತ ಬೇಕಿದ್ದಾಗ ಕಮಲತ್ತೆ ಮಗ ಗೋಪಿ ರಕ್ತ ಕೊಟ್ಟಿದ್ದ. ಅದನ್ನು ಅಭಿನಂದಿಸಿ ರಾಜ್ಯಪಾಲರಿಂದ ಬಂದಿದ್ದ ಯಾಂತ್ರಿಕ ಅಚ್ಚುಪತ್ರವನ್ನು ನಮಗೆಲ್ಲ ತೋರಿಸಿ ಆನಂದಿಸಿದ್ದ] ಕಮಲತ್ತೇನ ಊರಿಗೆ ಸಾಗಿಸಿದ ಹಲವಾರು ತಿಂಗಳನಂತರ ಕಮಲತ್ತೆ ಸೀರಿಯಸ್ ಅಂತನ್ನೋ ಸುದ್ಧಿ ಪತ್ರವೆ ಈಗ ನನ್ನ ಕೈಲಿರೋದು. ಆಫೀಸಿನ ಅಡ್ರೆಸ್‌ಗೆ ಈ ಕಾಗ್ದ ಬಂದಿದೆ. ಅದು ಬಂದಾಗಿಲಿಂದಲೂ ಕುಳಿತೆಡೆ ಕುಳಿತಿರಲಾಗದ, ನಿಂತೆಡೆ ನಿಂತಿರಲಿಕ್ಕಾಗದಂತೆಹ ಪರಿಸ್ಥಿತಿ. ರಜೆ ಗೀಚಿ ಹಾಕಿ ಮನೆಗೆ ಬಂದು ನನ್ನಾಕೆ ಸೀತೆಗೆ [ಕಮಲತ್ತೆ ಮಗಳು] ಸೂಟ್‌ಕೇಸಿಗೆ ಬಟ್ಟೆ ತುಂಬಿ ಹೊರಡಲು ಸೂಚಿಸಿದೆ. ಸುದ್ಧಿ ಕೇಳಿದೊಡನೆ ಏನನ್ನೂ ಮಾಡಲಾಗದಂತೆ ಮಂಕಾಗಿ ಕೂತಳು. ಸೂಟ್‌ಕೇಸಿಗೆ ನಾನೆ ಬಟ್ಟೆ ತುಂಬಿದೆ. ಅಂತೂ ಇಂತೂ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಬಂದೆವು. ಆಗ ಜ್ಞಾಪಕಕ್ಕೆ ಬಂತು, ನಾನು ಕೆಲಸಕ್ಕೆ ಸೇರಿದಾಗಿನಿಂದಲೂ ಕಮಲತ್ತೆಗೆ ಏನೂ ಕೊಟ್ಟಿಲ್ಲವಲ್ವೆ ಎಂಬುದು. ಸೀತಳನ್ನು ಬಸ್ಸಿನಲ್ಲಿ ಕೂಡಿಸಿ ಬಸ್ಸು ಹೊರಡಲು ಇನ್ನೂ ಸಮಯವಿದ್ದರಿಂದ ನಾವೆಲ್ಟಿ ಸ್ಟೋರಿನೆಡೆ ಹೆಜ್ಜೆ ಹಾಕಿದೆ. ಸ್ಟೋರಿನಲ್ಲಿದ್ದುದೆಲ್ಲವನ್ನು ನೋಡಿದನಂತರವೂ ಕಮಲತ್ತೆಗೆ ಏನು ಕೊಡಬಹುದೆಂಬುದೇ ಹೊಳೆಯಲಿಲ್ಲ. ಪೆದ್ದು ಪೆದ್ದಾಗಿ ಅಲ್ಲಿದ್ದ ಸೇಲ್ಸ್‌ಮ್ಯಾನನ್ನು “ಉಡುಗೊರೆ ಕೊಡ್ಬೇಕು. ಏನಾದ್ರು ಇದೆಯ?” ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆಯಲ್ಲಿದ್ದ ಪೆದ್ದುತನವನ್ನು ಆತ ಗುರುತಿಸಿದರೂ ತೋರಿಸಿಕೊಳ್ಳದೆ ಮುಗುಳ್ನಗುತ್ತಲೇ “ಎನ್ಸಾರ್, ಮದ್ವೇನಾ-ಮುಂಜೀನಾ-ಬರ್ತ್‌ಡೇನಾ?” ಎಂದ್ಹು ವಿಚಾರಿಸಿದ. ಏನು ಹೇಳಲು ತೋಚದವನಂತೆ ಇದ್ದದ್ದು ಇದ್ದ ಹಾಗೆಯೆ “ಈಗ್ಲೋ ಆಗ್ಲೋ ಅಂತಿರೋ ಹೆಂಗ್ಸಿಗೆ…” ಎಂದು ಹೇಳಿದೆ. ಅವನು ಏನು ಹೇಳಲು ಸೂಚಿಸಲು ಅಶಕ್ತನಾದವನಂತೆ ಪೆಚ್ಚುಪೆಚ್ಚಾಗಿ “ನಾನು ಹೇಗೆ ಹೇಳಲಿ ಸಾರ್..” ಎಂದ. ಯಾವುದೇ ಆಯ್ಕೆಯೂ ಸಂದರ್ಭಕ್ಕೆ ಹೊಂದಾಣಿಕೆಯಾಗದಿರಲು ನಾನು ಖಾಲಿ ಕೈಯಲ್ಲೇ ಬಂದು ಬಸ್ಸಿನಲ್ಲಿ ಕುಳಿತೆ.

ಹೆಚ್ಚು ಕಡಿಮೆ ಅರ್ಧರಾತ್ರಿ ಹೊತ್ತಿಗೆ ಹೂವಿನಹಳ್ಳಿ ತಲುಪಿದೆವು. ಕಮಲತ್ತೆ ನನ್ನ ನೋಡಿ ಕಣ್ಣಲ್ಲಿ ಮಿಂಚು ತೂರಿಸಿಕೊಂಡವಳಂತೆ ನರಳುವಿಕೆಯನ್ನು ಬದಿಗಿಟ್ಟು ಅಂಪೂ ಅತ್ತಿಗೆಗೆ ಅಡಿಗೆಗಿಡಲು ಹೇಳಿ ನನ್ನ ಉದ್ಯೋಗ, ಆರೋಗ್ಯದ ಬಗೆಗೆ ವಿಚಾರಿಸಲಾರಂಭಿಸಿದಳು. ನನ್ನ ಕೈಯಲ್ಲಿ ಆ ವಿಚಾರಣೆಗಳಿಗೆ ಉತ್ತರ ನೀಡಲು ಸಾಧ್ಯಾವಾಗದೆ ಕೋಪದ ಧ್ವನಿಯಲ್ಲಿ “ನಾಳೆ ಬೆಳಿಗ್ಗೇನೆ ಬೆಂಗ್ಳೂರಿಗೆ ಹೋಗೋಣ ನಡಿ. ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ನನಗೆ ಗುರ್ತಿರೋ ಡಾಕ್ಟರಿಗೆ ಹೇಳಿದ್ದೇನೆ. ಅವರೆಲ್ಲಾ ನೋಡ್ಕೋತ್ತಾರಂತೆ..” ಎಂದೆ ಆಕೆಯನ್ನು ತರಾತುರಿಗೊಳಿಸುವಂತೆ. ನಕ್ಕಂತೆ ಮಾಡಿದ ಕಮಲತ್ತೆ “ಥೂ ಹುಡುಗುಮುಂಡೇದೆ, ಒಂದ್ಕಾಗದ ನೋಡಿ ಇಷ್ಟೊಂದು ಗಾಬರಿಯಾಗ್ತಾರೇನೊ? ಇನ್ನೂ ಏಳೆಂಟು ತಿಂಗಳು ನನಗೆ ಏನೂ ಆಗೋಲ್ಲ ಅಂತ ಡಾಕ್ಟ್ರೇ ಹೇಳಿದ್ದಾರೆ. ನಿಮ್ಮನ್ನೆಲ್ಲ ನೋಡ್ಬೇಕೂಂತನ್ನಿಸ್ತು. ಕಾಗ್ದ ಬದ್ ಹಾಕೀಂತ ನಾನೆ ನಿಮ್ಮಾವಯ್ಯಂಗೆ ಹೇಳ್ದೆ. ಅವ್ರು ಹಾಗ್ ಬದಿದಾರಷ್ಟೆ…” ಎಂದಳು. ಅದನ್ನು ಕೇಳಿದಾಗ ಮನಸ್ಸಿಗೆಷ್ಟೋ ಸಮಧಾನವಾಯ್ತು. ಆ ಅರ್ಧರಾತ್ರಿ ವೇಳೆ ಕಮಲತ್ತೆ ಕೈಲಾಗದಿದ್ದರೂ ಬಲವಂತ ಮಾಡಿ ಕೈತುತ್ತು ಹಾಕಿಸಿಕೊಂಡು ಊಟ ಮಾಡಿದೆ. ಸೀತಳಂತೂ ತಾನಂದುಕೊಂಡಂತೆ ಅಮ್ಮನಿಗೆ ಏನೂ ಆಗಿಲ್ಲವೆಂಬ ಸಮಧಾನದಲ್ಲೇ ಬಿಕ್ಕಿಬಿಕ್ಕಿ ಅಳುತ್ತಾ ನಿದ್ದೆ ಮಾಡಿದ್ದಳು. ನಾನು ಕಮಲತ್ತೆ ಕೋಣೇಲೆ ಬುಡ್ಡಿ ದೀಪದ ಮಂಕು ಬೆಳಕಲ್ಲಿ ಹಾಸಿಕೊಂಡು ಮಲಗಿದ್ದೆ. ನನಗಾಗಲಿ ಕಮಲತ್ತೆಗಾಗಲಿ ಬೆಳಗಾಗ್ತ ಬಂದಿದ್ದರೂ ನಿದ್ದೆ ಇಲ್ಲ. ಮಿಕ್ಕೆಲ್ಲರೂ ಒಂದಲ್ಲ ಒಂದು ಆಯಾಸದಿಂದ ಕಣ್ಣು ಮುಚ್ಚಿದ್ದರು. ಕಮಲತ್ತೆ ಚುಡಾಯಿಸುವ ಧ್ವನಿಯಲ್ಲಿ “ನಿನ್ನ ಕಮಲ ಈಗ ಹ್ಯಾಗಿದ್ದಾಳೋ? ಅವಳ ನೆನಪು ಈಗ ನಿಂಗೆ ಬರೋದೆ ಇಲ್ವೆ? ಎಂದು ಮಾತಿಗಾರಂಭಿಸಿದಳು. “ಅವಳಿಗೇನಾಗುತ್ತೆ. ಮೊನ್ನೆ ಒಂದ್ ಮಗು ಆಯ್ತಂತೆ. ಅವಳನ್ನೇ ನೆನೆಸ್ತಾ ಕೂತ್ಕೊಂಡ್ರೆ ನನಗೆ ಕವಳ ಹಾಕೋರು ಯಾರು?” ಎಂದೆ. ಕಮಲತ್ತೆ “ಅಲ್ವೋ, ಅವಳಿಗೆ ಮದುವೆಯಾದ ಹೊಸದರಲ್ಲಿ ಏನೂ ಬೇಡಾನಿಸಿದೆ ಎಂದಂದಿದೆಯಲ್ವೆ. ದೇವ್ರಲ್ಲಿ ನಂಬಿಕೆ ಇಡು. ನೋವನ್ನ ಮರಿಯೋ ಶಕ್ತಿ ಕೊಡ್ತಾನಂತ ನಾನ್ ಹೇಳಿದ್ದಕ್ಕೆ ದೇವರೂ ಇಲ್ಲ ಗೀವ್ರೂ ಇಲ್ಲ. ರಾಮಾ ನಾನೆ ಕೃಷ್ಣ ನಾನೇಂತ ಕೊಚ್ಕೊಂಡಿದ್ದೆ ಅಲ್ವೇ ನೀನು. ನೀನೆ ದೇವರಾದ್ರೆ ನನಗೆ ಈ ಹಾಳಾದ ರೋಗದ ನೋವೂ ಗೀವೂ ಇಲ್ಲದೆ ಕಣ್ಮುಚ್ಚೋ ವರ ಕೊಡೋ..” ಎಂದಳು. ಆಗ ಅವಳು ನೋವು ತಡೆಯಲಾಗದೆ ಅಳ್ತಿದ್ದಳೋ ಏನೊ. ನನಗೆ ಕಣ್ಣಲ್ಲಿ ನೀರು ಕಿತ್ತು ಬಂದಿತ್ತು. ಆದರೂ ಆಕೇನ ಗದರುವವನಂತೆ “ಬಾಯ್ಮುಚ್ಕೊಂಡು ಮಲಕ್ಕೋ ಅತ್ತೆ. ಬೆಳಿಗ್ಗೆ ಮಾತಾಡೋಣ..” ಎಂದು ಹೇಳಿ ಗೋಡೆ ಕಡೆಗೆ ಹೊರಳಿದ್ದೆ. ಆಗ ಕಮಲತ್ತೆಗೆ ಬೆಂಗಳೂರಿನಿಂದ ಏನು ಕೊಂಡ್ಕೊಂಡ್ ಬರೋಕ್ಕಾಗ್ದೆ ಇದ್ದದ್ದು ತಟ್ಟನೆ ಜ್ಞಾಪಕಕ್ಕೆ ಬಂತು. ಆ ಯೋಚ್ನೇಲೆ ಯಾವಾಗ ನಿದ್ದೆ ಬಂತೋ ತಿಳಿಯದು. ಇತ್ತೀಚೆಗಂತೂ ನಿದ್ದೆ ಮಾತ್ರೆ ಇಲ್ಲದೆ ಅಂತಹ ಸೊಗಸಾದ ನಿದ್ದೆ ಬಂದೇ ಇರಲಿಲ್ಲ. ಸೊಂಪಿನ ನಿದ್ದೆ.

ಮಾರನೆ ದಿನ ಸಂಜೆ ಕಮಲತ್ತೆ ಎದೆ ಹೊಟ್ಟೆ ಹಿಡಿದುಕೊಂಡು ಚೀರಲಾರಂಬಿಸಿದಳು. ಅವಳ ನೋವಿನ ಹೊರಳಾಟ ನೋಡುವುದಕ್ಕಾಗಲಿಲ್ಲ. ಪೈನ್‌ಕಿಲ್ಲರ್ ಯಾವುದೂ ಮನೆಯಲ್ಲಿರಲಿಲ್ಲ. ಮಾವಯ್ಯನಂತೂ ಗಾಬರಿಯಾಗುವುದು ಬಿಟ್ಟು ಬೇರೇನೂ ಮಾಡಿರಲಿಲ್ಲ. ನಾನು ಮಾವಯ್ಯನ ಸುವೇಗ ಹಾಕಿಕೊಂಡು ಮಧುಗಿರಿಗೆ ಬಂದು ಮಾವಯ್ಯ ಬರೆದುಕೊಟ್ಟಿದ್ದ ಮಾತ್ರೆಗಳನ್ನೂ, ನನಗೆ ನಿದ್ರೆ ಮಾತ್ರೆಯ ಬಾಟಲಿಯನ್ನು ಕೊಂಡು ಬಂದೆ. ಕಮಲತ್ತೆ ನೋವು ಸಣ್ಣ ಪುಟ್ಟ ಮಾತ್ರೆಗಳನ್ನು ಮೀರಿ ಬೆಳೆದು ಬಿಟ್ಟಿತ್ತು. “ತಡಿಯೋಕಾಗೋಲ್ವೊ ಚಂದ್ರೂ” ಎಂದು ಕಮಲತ್ತೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. “ಬೆಂಗಳೂರಿನ ಆಸ್ಪತ್ರೆಗೆ ಹೋಗೋಣೇನು?” ಎಂದು ಕೇಳಿದೆ. ಆಕೆಯ ಕಣ್ಣಲ್ಲಿದ್ದ ಮಿಂಚು ಉಡುಗಿಹೋಗಿತ್ತು.” ಬೇಡಪ್ಪಾ ಬೇಡ..ಆಸ್ಪತ್ರೆ ಸವಾಸವೇ ಬೇಡ. ಅಲ್ಲಿಗೋದ್ರೆ ಡಾಕ್ಟರುಗಳು ಮೈಕೈಗೆಲ್ಲ ಇಂಜೆಕ್ಷನ್ ತಿವಿದು, ಹೊಟ್ಟೆ ತುಂಬಾ ಬರಿ ಮಾತ್ರೆಗಳನ್ನೆ ನುಂಗ್ಸಿ, ಕರಂಟು ಕೊಟ್ಟು ಬದುಕನ್ನ ಬಲವಂತವಾಗಿ ಹೇತಾರೆ. ಆ ಬಲವಂತ ಬಂದಾಗಲೆ ನಮಗೆ ಇದೆಲ್ಲ ಏನೂ ಇಲ್ದೇನೆ ಸಾಯ್ಬೇಕೂನ್ನಿಸಿಬಿಡೋದು. ನಾವು ಸಾಯೋ ಸ್ವಾತಂತ್ರಾನೂ ಕಿತ್ಕೋತಾರೆ…” ಎಂದು ತಾತ್ಸಾರದ ಅರ್ಥ ಬರುವ ಮಾತುಗಳನ್ನ ಆಡಿದಳು. ನನಗೆ ಅವಳ ನರಳಾಟ ನೋಡಿ ನಾನೂ ನರಳುತ್ತಿರುವಂತೆಯೂ ನಾನೇ ಸಾಯುತ್ತಿರುವಂತೆಯೂ ಅನ್ನಿಸಿಬಿಟ್ಟಿತು. ನಾನು ನನಗೆಂದು ತಂದುಕೊಂಡಿದ್ದ ನಿದ್ರ ಮಾತ್ರೆಯನ್ನ ಬಲವಂತ ಮಾಡಿ ನುಂಗಿಸಿದೆ. ಒಂದೆರಡು ಹೆಚ್ಚಿಗೆ.

ಮಾರನೆ ದಿನ ಕಮಲತ್ತೆ ಏಳಲೇ ಇಲ್ಲ. ಸುಖವಾಗಿ ಕಣ್ಣು ಮುಚ್ಚಿದ್ದಳು. ಇನ್ನೂ ಏಳೆಂಟು ತಿಂಗಳು ಅವಳು ಬದುಕಿಯೇ ಇತಾಳೆ ಎಂಬ ಎಲ್ಲರ ನಂಬಿಕೆ ಹುಸಿಯಾಗಿತ್ತು. ಅವಳು ಸತ್ತು ನನ್ನನ್ನು ಆಕ್ರಮಿಸಿಕೊಂಡಳು. ಅವಳ ನೆನಪು ಬಂದಾಗಲೆಲ್ಲ ನಿದ್ದೆ ಮಾತ್ರೆಗಳು ನನ್ನ ಕಣ್ಣು ಕಟ್ಟುತ್ತವೆ. ಆತ್ಮಹತ್ಯೆ ತಪ್ಪೂನ್ನೋದು ನನಗೆ ಆಕೆ ಭಗ್ನ ಪ್ರೇಮದ ನರಳಾಟದ ಸಮಯದಲ್ಲಿ ಕಲಿಸಿಕೊಟ್ಟ ಪಾಠ. ಎಂದೇ ಇಂದಿಗೂ ನಿದ್ದೆ ಮಾತ್ರೆ ಬಾಟಲಿಯನ್ನು ಹತ್ತಿರವೇ ಇಟ್ಟುಕೊಂಡಿದ್ದರೂ ಎಷ್ಟೇ ನುಂಗಿದರೂ ನಿದ್ದೆ ಬರುತ್ತಿರಲಿಲ್ಲ. ಅಳುಕಿನ ಭಾರ ನಾನು ಹೊತ್ತಿರುವಂತೆ ಮಾವಯ್ಯನೂ ಹೊತ್ತಿರಬಹುದಲ್ಲವೆ ಎಂದು ನನಗೆ ಆಗಾಗ್ಗೆ ಅನ್ನಿಸಿದರೂ ಈಗ ಬದುಕಿದ್ದರೂ ಸತ್ತಂತಿರುವ ಆತನನ್ನು ಕೇಳಲಿಕ್ಕೆ ನಾನೆಂದೂ ಹೋಗಲಿಲ್ಲ.

ಕಮಲತ್ತೆಗೆ ಏನೂ ಉಡುಗೊರೆ ಕೊಟ್ಟಿಲ್ಲವೆಂಬ ವಿಷಯವನ್ನು ನಾನು ಜ್ಞಾಪಿಸಿಕೊಳ್ಳುವುದಕ್ಕೆ ಹೋಗುವುದೇ ಇಲ್ಲ. ಇನ್ನೊಂದು ವಿಷಯ: ಉಡುಗೊರೆ ಕೊಟ್ಟಿದ್ದೇನೆಂದು ಯಾರಲ್ಲಿಯೂ ಹೇಳಿಕೊಳ್ಳಲಾರೆ.
*****
ಅಗಸ್ಟ್, ೧೯೮೧ ರ – ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟ.