ಬಸುರಾದೆನ ತಾಯಿ ಬಸುರಾದೆನ ನನ್ನ
ಪತಿಯಾರು ಗತಿಯಾರು ತಿಳಿದಾದೆನ ||ಪಲ್ಲ||

ವಾರೀಗಿ ಗೆಳತೇರು ಗಾರೀಗಿ ನೆರತೇರು
ಬೋಳ್ಯಾರು ಹುಳು ಹುಳು ನೋಡ್ಯಾರೆ
ಗಂಡನ್ನ ಹೆಸರೇಳ ಗಣಪತಿ ತಾಯಾಗ
ಗಮ್ಮಂತ ಗುಳುಗುಳು ನಗತಾರೆ ||೧||

ಏನಂತ ಹೇಳಲೆ ಯಾರಂತ ತೋರಲೆ
ಎಲ್ಲೆಂತ ಕೈಮಾಡಿ ಕರಿಯಲೆ
ಆದದ್ದು ಗೊತ್ತಿಲ್ಲ ಹೋದದ್ದು ಗೊತ್ತಿಲ್ಲ
ಮಿಂಡೇರು ನಗಚಾಟಿ ಮಾಡ್ತಾರೆ ||೨||

ನಿಮಗಂಡ ಹುಚಮುಂಡ ನುಚಬ್ಯಾಳಿ ಕಾರ್‍ಬ್ಯಾಳಿ
ಅಂತಂದ್ರ ಮುಸಿಮುಸಿ ನಗತಾರೆ
ತುಂಬೀದ ಬಸರೊಟ್ಟಿ ಎಣಬುಟ್ಟಿ ಗುಳಬುಟ್ಟಿ
ಕಾಗ್ಯಾಗಿ ಕೌವಂತ ಕೂಗ್ತಾರೆ ||೩||

ಮುಂಡವಿಲ್ಲದ ಗಂಡ ರುಂಡ ಮಾರಿದ ಗಂಡ
ಅಯ್ಯಯ್ಯ ನನಬಾಳ ಭಂಡ ಭಂಡ
ಅಡಕೊತ್ತು ಅಡಿಕ್ಯಾದೆ ಅಗಸ್ಯಾನ ದೆವ್ವಾದೆ
ನನಗಂಡ ಮನಗಂಡ ಲಂಡ ಲಂಡ ||೪||
*****
ಬಸುರಾದೆ = ಆತ್ಮಜ್ಞಾನಿಯಾದೆ
ಗೆಳತೇರು = ಕಾಮ ಕ್ರೋಧ ಲೋಭ ಮೋಹ ಮುಂ.
ಮುಂಡವಿಲ್ಲದ ಗಂಡ = ನಿರಾಕಾರ ಪರಮಾತ್ಮ