ಪ್ರಗತಿಶೀಲ ಸಾಹಿತ್ಯದ ತೂಫಾನಿ ದಶಕ

ಪ್ರಗತಿಶೀಲ ಸಾಹಿತ್ಯದ ತೂಫಾನಿ ದಶಕ

ಪ್ರಗತಿಶೀಲ ಸಾಹಿತ್ಯದ ಹರವು ತುಂಬ ಇಲ್ಲ. ಇದು ಸ್ವಾತಂತ್ರ್ಯ ಸಿಗುವ ಕಾಲದಿಂದ ಹಿಡಿದು ಸುಮಾರು ಒಂದು ದಶಕ ಅಂದರೆ ೧೯೫೬ರ ವರೆಗೂ ಉಳಿಯಲಿಲ್ಲ. ಇದು ಕನ್ನಡದ ಡೆಕೆಡೆನ್ಸ್ ಲಿಟರೇಚರ್. ಇದನ್ನು ಪ್ರೊಗ್ರೆಸಿವ್ ಲಿಟರೇಚರ್ ಎಂದು ನಂತರದವರು ಹೇಳಿದರು. ಹಾಮಾ ನಾಯಕರ ಪ್ರಕಾರ ‘ಯಾವುದೇ ಒಂದು ಕೃತಿ ಒಬ್ಬ ಕೃತಿಕಾರ ಇತಿಹಾಸದ ಸತ್ಯವಾಗಿ ಉಳಿಯಲು ಸಾಧ್ಯವಾಗಲಿಲ್ಲ. ನಿಜವಾದ ಸಮಸ್ಯೆಗಳ ಆಳಕ್ಕಿಳಿಯದೆ ಸಾಹಿತ್ಯ ಸೃಷ್ಟಿಯನ್ನು ಒಂದು ಚಳುವಳಿಗೆ ಸಾಧನವನ್ನಾಗಿ ಬಳಸಿಕೊಂಡದ್ದು ಪ್ರಗತಿಶೀಲರ ದೊಡ್ಡ ಸೋಲು’.

ಈ ಅಭಿಪ್ರಾಯದ ಮರುಚಿಂತನೆ ಅಗತ್ಯ. ಪ್ರಗತಿಶೀಲ ಸಾಹಿತ್ಯದ ಸೃಷ್ಟಿ ಒಂದು ಚಳುವಳಿಯಾದರೆ ಅದಕ್ಕೆ ಸೋಲಿಲ್ಲ. ಯಾವುದೇ ರೀತಿಯ ಚಳುವಳಿ, ಕ್ರಾಂತಿ ಐತಿಹಾಸಿಕವಾಗಿ ಉಳಿಯುತ್ತದೆ. ಆ ಚಳುವಳಿಯ ಉದ್ದೇಶ, ಗುರಿ, ಸಾಧನೆಗಳು ಎಷ್ಟರ ಮಟ್ಟಿಗೆ ಸಫಲವಾಗಿವೆ ಎನ್ನುವುದನ್ನು ಕಾಲ ನಿರ್ಣಯಿಸುತ್ತದೆ. ಸ್ವಾತಂತ್ರ್ಯದ ಚಳುವಳಿ ಒಂದು ಧ್ಯೇಯವನ್ನಿಟ್ಟುಕೊಂಡು ಹುಟ್ಟಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಆ ಉದ್ದೇಶ ಪೂರ್ತಿಯಾಯಿತು. ಅಷ್ಟರಮಟ್ಟಿಗೆ ಅದರ ಸಾಧನೆಯನ್ನು ವ್ಯರ್ಥವೆನ್ನಲಾಗುವುದಿಲ್ಲ. ಗಾಂಧೀಜಿ, ಲೋಹಿಯಾ ಪ್ರಕಾರದ ಸಾಮಾಜಿಕ ಚಳುವಳಿ ಇನ್ನೂ ಈ ದೇಶದಲ್ಲಿ ಆಗಬೇಕಾಗಿದೆ. ಈ ನೆಲೆಯಲ್ಲಿ ನೋಡಿದಾಗ ಪ್ರಗತಿಶೀಲ ಸಾಹಿತ್ಯ ಬಹುಶಃ ಒಂದು ಕಾಲಮಿತಿಯನ್ನು ಹಾಕಿಕೊಂಡು, ಕಾಲಧರ್ಮದ ಅನುಮತಿ ಪಡೆದು ಸೃಷ್ಟಿಯಾಯಿತು. ಈ ಸೃಷ್ಟಿಕಾರ್ಯದ ಮೂರು ಮುಖ್ಯ ಉದ್ದೇಶಗಳನ್ನು ಗುರುತಿಸ ಬಹುದು.

೧. ನವೋದಯ ಕಾಲದವರೆಗಿನ ಸಾಹಿತ್ಯದ ಗುರಿರಹಿತ ಮಾರ್ಗದಿಂದ ಹೊರಬಂದು ಹೊಸ ಸುಲಭ ಸಾಹಿತ್ಯವನ್ನು ರಚಿಸಿ ಜನಪ್ರಿಯಗೊಳಿಸುವುದು. ಸರಳ ಮಾತಿನಲ್ಲಿ ಕನ್ನಡ ಸಾಹಿತ್ಯದ ಪ್ರಚಾರ.

೨. ರಷ್ಯಾದಲ್ಲಿ ಪಕ್ಷ ಧೋರಣೆಯಿಂದ ಸ್ಥಾಪನೆಯಾದ ಕಾರ್ಲ್ ಮಾರ್ಕ್ಸ್, ಲೆನಿನ್ ತತ್ವಗಳನ್ನು ಭಾರತೀಯ ಸಮಾಜ ವ್ಯವಸ್ಥೆಗೆ ಅನ್ವಯಿಸುವಂತೆ ಆಕಾರವುಳ್ಳ ಸಾಹಿತ್ಯವನ್ನು ರಚಿಸುವುದು.

೩. ಸ್ವಾತಂತ್ರ್ಯ ಸಿಕ್ಕ ನಂತರದ ಅಸಮಾಧಾನಕರ ಸಾಮಾಜಿಕ ಅವನತಿಯನ್ನು ಚಿತ್ರಿಸಿ, ಆದರ್ಶಪಾತ್ರಗಳ ಮೂಲಕ ಆಸ್ತಿ ಇಲ್ಲದೆ, ಎಲ್ಲರ ಸ್ವಾತಂತ್ರ್ಯವಿದ್ದು ಎಲ್ಲಾ ನಾಗರಿಕರು ದುಡಿಯಲು ಹೊಣೆ ಹೊತ್ತ, ಎಲ್ಲರ ದುಡಿಮೆಯ ಫಲ ಸಮಾಜಕ್ಕೆ ಸಲ್ಲುವ, ಅದರ ಭಂಡಾರದಿಂದ ಎಲ್ಲರಿಗೆ ಅವರವರ ಬೇಡಿಕೆಯಂತೆ ಹಂಚುವ, ಎಲ್ಲವೂ ಎಲ್ಲರಿಗೂ ಸೇರುವ ಆದರ್ಶ ಸಮಾಜ (utopian society)ವನ್ನು ಕಟ್ಟುವ ಕನಸನ್ನು ಕಾಣುವುದು.

ಇದು ಅಂದಿನ ಬರಹಗಾರರಿಗೆ ಅಗತ್ಯವಿತ್ತು. ಕಾಲದ ಬೇಡಿಕೆಯನ್ನು ಪೂರೈಸುವ ಶಕ್ತಿ ಪಡೆದ ಸಾಹಿತ್ಯ ವ್ಯರ್ಥವಲ್ಲ. ನಿಜವಾದ ಸಮಸ್ಯೆಯ ಆಳಕ್ಕಿಳಿಯುವುದು ಬಹುಶಃ ಸಾಹಿತಿಯ ಕೆಲಸವಲ್ಲ. ಸಾಹಿತಿ ನಿಜವಾದ ಸಮಸ್ಯೆಗಳನ್ನು ದರ್ಶಿಸಬಲ್ಲ. ಅವುಗಳ ಕುರಿತು ಚಿಂತೆ ಮಾಡುವ, ತ್ಯಾಗ ಮಾಡುವ ಪಾತ್ರಗಳನ್ನು ಸೃಷ್ಟಿಸಬಲ್ಲ. ಆದರ್ಶದ ಕನಸನ್ನು ಕಾಣಬಲ್ಲ. ಸಮಸ್ಯೆಗಳ ಆಳಕ್ಕೆ ಹೊಕ್ಕು ಕಾರಣ ಪರಿಹಾರಗಳ ವಿಶ್ಲೇಷಣೆಯನ್ನು ಕೊಡುವ ಕಾಲ ಅದಾಗಿರಲಿಲ್ಲ. ಹೊಸದಾಗಿ ಸಿಕ್ಕಿದ ಸ್ವಾತಂತ್ರ್ಯದ, ಅಧಿಕಾರದ ಅಮಲಿನಲ್ಲಿ ಸಮಾಜದ ವ್ಯಕ್ತಿಯ ಪ್ರಗತಿಪರ, ಜನಪದ ಕಾರ್ಯಗಳನ್ನು ಮರೆತ ವ್ಯವಸ್ಥೆಗೆ ಕನ್ನಡಿ ಹಿಡಿಯುವ, ಸಂಬಂಧಪಟ್ಟ ಸಮಸ್ತರೂ ಓದುವ, ಮೆಚ್ಚುವ ಒಂದು ಸಾಹಿತ್ಯ ಪ್ರಕಾರವೇ ಪ್ರಗತಿಶೀಲ ಸಾಹಿತ್ಯ – ಜನಪರ ಸಾಹಿತ್ಯ, ಆದರ್ಶವಾದೀ ಸಾಹಿತ್ಯ. ‘ಮಾರ್ಕ್ಸ್‌ ಲೆನಿನರ ಸಾಮ್ಯವಾದದ ಪ್ರಭಾವದಿಂದ ಮತ್ತು ಸಮಕಾಲೀನ ಸಮಾಜದ ಆರ್ಥಿಕ, ರಾಜಕೀಯ ಅವ್ಯವಸ್ಥೆಯ ದಾರುಣತೆಯ ಪ್ರಚೋದನೆಯಿಂದ ಹುಟ್ಟಿದ ಆವೇಶ ಪೂರ್ಣವೂ, ಸುಧಾರಣಾತ್ಮಕವೂ, ಸಮಸ್ಯಾ ಪ್ರಧಾನವೂ, ಸಂವಾದ ಶೋಭೀತವೂ, ಪ್ರತಿಕ್ರಿಯಾಶೀಲವೂ, ಅತಿಶಯೋಕ್ತಿರಂಜಿತವೂ ಆಗಿದೆ ಪ್ರಗತಿಶೀಲ ಮಾರ್ಗ’. ಇದು ಬಸವರಾಜ ಕಟ್ಟೀಮನಿಯವರ ವಿಚಾರ.

ಮೊದಲಿನದು ನವೋದಯದ ಸಾಹಿತ್ಯ, ಅದು ದೀನ-ದಲಿತರ ಬಗ್ಗೆ, ರೈತರ ಕೂಲಿಗಳ ಬಗ್ಗೆ ಕತೆ-ಕಾದಂಬರಿಗಳನ್ನು ಸೃಷ್ಟಿಸಲಿಲ್ಲ. ಮಾಸ್ತಿ, ಕುವೆಂಪು, ಬೇಂದ್ರೆ ಇವರು ಶಿಷ್ಟ ಪ್ರಕಾರದ ಪ್ರೇಮ, ದಾಂಪತ್ಯಗಳ ಬಗ್ಗೆ, ಭಾಷೆಯ ಸಮೃದ್ಧಿ, ಕಲ್ಪನೆಯ ದುಂದುಗಾರಿಕೆಗಾಗಿ ಬರೆದರು. ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತದ ಸಮಾಜ ಎಂತಿತ್ತು ಎಂಬ ಪ್ರೇಮಚಂದರ ಜೀವನದೃಷ್ಟಿ ಅವರಲ್ಲಿರಲಿಲ್ಲ. ಒಂದು ಪ್ರತಿಕ್ರಿಯೆ ಎನ್ನುವಂತೆ ಪ್ರಗತಿಶೀಲರು ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದರು. ಹಳೆಯದನ್ನು ಬೂರ್ಜ್ವಾ ಎಂದರು. ಹೊಸದೊಂದು ಅಲೆಯು ರಭಸದಿಂದ ಹಬ್ಬಬೇಕಾದರೆ ಯಾವ ರೀತಿಯ ಚೇತನೋತ್ಸಾಹ ಬೇಕೋ ಅದೇ ರೀತಿಯಿಂದ ಹೊಸದೊಂದು ಗುಂಪು ಕಾರ್ಯಗತವಾಯಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಹೊಸದರಲ್ಲೆ ತಮ್ಮ ಅನುಭವಕ್ಕೆ ಬಂದ ಸಮಾಜದ ಅವನತಿಯ ದರ್ಶನ. ಅಬ್ಬಾಸ, ಮುಲ್ಕರಾಜ ಆನಂದ, ವಂಗ ಸಾಹಿತ್ಯ ಹಾಗೂ ತಮ್ಮ ನಗರವಾಸದ ಮೂಲಕ ದೊರೆತ ಮಾರ್ಕ್ಸ್ ಸಿದ್ಧಾಂತಗಳ ಪರಿಚಯ ಇದಕ್ಕೆ ಮೂಲ ಕಾರಣವಾಯಿತು. ಒಂದು ಪರಂಪರೆಯ ಬದಲಾವಣೆಗೆಂದು ಹೂಡಿದ ಆಂದೋಲನವೆಂದೇ ಮೊದಲ ನೋಟಕ್ಕೆ ಕಂಡರೂ ಪ್ರಗತಿಶೀಲ ಸಾಹಿತ್ಯ ಚಳುವಳಿ ಉದ್ದೇಶ ಪೂರ್ಣವಾಗಿತ್ತು. ೧೯೪೬ ರಲ್ಲಿ ಅನಕೃಷ್ಣರಾಯರು ಮಾಡಿದ ಭಾಷಣದಲ್ಲಿ ಪ್ರಗತಿಶೀಲಧೋರಣೆಯ ಸ್ಪಷ್ಟಚಿತ್ರ ಕಾಣುತ್ತದೆ. ‘ಎಲ್ಲಾ ಸಾಹಿತ್ಯ ಕಲೆಗಳ ಉಗಮಕ್ಕೂ ಸಾಮಾನ್ಯ ಜನತೆಯೇ ಮೂಲ. ಉತ್ತಮ ಕಲೆಯ ತಾಯಿಬೇರು ಸಾಮಾನ್ಯರ ಜೀವನದಲ್ಲಿ ಅಡಗಿದೆ. ನವೋದಯ ಕಾಲದ ಕನ್ನಡ ಸಾಹಿತ್ಯದಲ್ಲಿ ಜನಪದದೊಂದಿಗೆ ಪೂರ್ಣ ಬೆರೆಯುವ ಮನೋಭಾವವಿರಲಿಲ್ಲ. ಆದ್ದರಿಂದಲೇ ಅದರಿಂದ ಅತೃಪ್ತಿ ಹುಟ್ಟಿತು. ಸಾಹಿತ್ಯ ದುರ್ಬಲರ, ದಲಿತರ, ಬಡವರ ರಕ್ಷಾ ಕವಚವಾಗಬೇಕು’. ಕಲೆ ಜೀವನಕ್ಕಾಗಿ ಎಂಬ ವಾದವನ್ನು ಅವರು ಪುಷ್ಟೀಕರಿಸಿದರು. ಪ್ರಗತಿಶೀಲರು ನಾಸ್ತಿಕರಲ್ಲ. ಕಮ್ಯೂನಿಷ್ಟ ರಶ್ಯಾದ ಪುರೋಹಿತರಲ್ಲ. ಅಶ್ಲೀಲೋಪಾಸಕರೂ ಅಲ್ಲವೆಂಬ ಮಾತನ್ನು ಅವರು ಸ್ಪಷ್ಟ ಮಾಡಿದರು.

ಹಾಗೆ ಜನಪರ ನಿಲುವಿನಿಂದ ಕೂಡಿದ ಪ್ರಗತಿಪರ ಮೂರು ಆಸಕ್ತಿಗಳನ್ನು ಎತ್ತಿಕೊಂಡು ಪ್ರಗತಿಶೀಲರು ಸಾಹಿತ್ಯ ರಚನೆ ಮಾಡಿದರು. ಇದೊಂದು ಚಳುವಳಿಯಾಗಿ ಪರಿಣಮಿಸುವುದಕ್ಕೆ ಅವರ ಪ್ರತಿಭಟನೆ, ಹಟ, ಭಾಷೆಯ ಮೋಹ, ಉತ್ಸಾಹ ಮತ್ತು ಸ್ವಲ್ಪ ಮಟ್ಟಿಗೆ ವೈಚಾರಿಕತೆ ಕಾರಣವಾಯಿತು. ಹೊರಗಿನಿಂದ ಬಂದ ಹೊಸ ವಿಚಾರದ ಹಿನ್ನೆಲೆಯಲ್ಲಿ ತಾವು ಕಂಡ ಸಾಮಾಜಿಕ ಅವನತಿಯ ವಾಸ್ತವದರ್ಶನ ಮಾಡಿಸುವ ಹಟ ಪ್ರಚಾರಶಕ್ತಿಯಾಯಿತೆಂದೇ ಹೇಳಬಹುದು. ಸಮಾಜ ಪರಿವರ್ತನೆಯ ಆದರ್ಶದ ಕಲ್ಪನೆಯೇ ಪ್ರಗತಿಶೀಲ ಸಾಹಿತ್ಯ ಸೃಷ್ಟಿಯ ಕೇಂದ್ರ ಬಿಂದುವಾಯಿತು.

ಒಂದನೆಯೆ ಆಸಕ್ತಿ: ಮಾರ್ಕ್ಸ ಲೆನಿನ್ ಸಾಮ್ಯವಾದ ಸಿದ್ಧಾಂತಗಳ ಪ್ರಭಾವ. ಇದನ್ನು ಕಮ್ಯುನಿಷ್ಟ ಒಲವು ಎಂದು ಲೇಖಕರು ಎತ್ತಿಕೊಂಡ ವಿಷಯವನ್ನು ವ್ಯಕ್ತಪಡಿಸುವ ತೀವ್ರ ಗುಣಕ್ಕಾಗಿ ಹೇಳಬಹುದು. ೧೮೮೪ ರಲ್ಲಿ ಹುಟ್ಟಿದ ಮಾರ್ಕ್ಸವಾದ ಇಂಗಲ್ಸ್ – ಲೆನಿನರ ಮೂಲಕ ರಷ್ಯಾದ ಝಾರ ಸುಲ್ತಾನ ಶಾಹಿಯನ್ನು ಉರುಳಿಸಿ ಸಾಮ್ಯವಾದದ ರಾಷ್ಟ್ರಕಟ್ಟುವ ಪಕ್ಷವಾಗಿ ಪರಿಣಮಿಸಿತು. ಉತ್ಪಾದನೆ, ಸಂಪತ್ತು, ದುಡಿಮೆ, ಮೌಲ್ಯ, ವರ್ಗಹೋರಾಟಗಳ ಚಿಂತನೆ ಹೊಸ ರೀತಿಯ ಸಮಾಜವನ್ನು ರಚಿಸುವುದಕ್ಕೆ ಪ್ರೇರಕ ಶಕ್ತಿಯಾಯಿತು. ಜನಸಾಮಾನ್ಯನನ್ನು ಬಿಟ್ಟು ಬರೆದ ಸಾಹಿತ್ಯಕ್ಕೆ ಬೆಲೆಯಿಲ್ಲ ಎಂಬ ಧೋರಣೆಗೆ ಚಾಲನೆ ಸಿಕ್ಕಿತು. ಇದ್ದವರು, ಇಲ್ಲದವರು ಎಂಬ ಎರಡು ವಿಷಮ ವರ್ಗ ಸಾಮಾಜಿಕ ಅವನತಿಗೆ ಕಾರಣ.

ದುರ್ಬಲರು, ದಲಿತರು, ಬಡವರು, ಕಾರ್ಮಿಕರು ಕತೆ ಕಾದಂಬರಿಗಳ ಪಾತ್ರಗಳಾಗಿ ಬಂದರು. ಕ್ರೌರ್ಯ, ಶೋಷಣೆ, ಅನ್ಯಾಯ, ಜಾತಿ ವೈಷಮ್ಯ, ದಬ್ದಾಳಿಕೆಗಳ ವಿವರ ಕಥಾಮಾಧ್ಯಮವಾಯಿತು. ವಾಸ್ತವ ಚಿತ್ರಣ, ಆದರ್ಶದ ಕಲ್ಪನೆ, ಲೇಖಕರ ಹಟ ಮತ್ತು ಕನಸಾಯಿತು. ಶ್ರೀಮಂತರು, ಒಡೆಯರು, ಕುಲೀನರು, ಬಲಾಢ್ಯರು ಸಮಾಜ ಮತ್ತು ಶ್ರೀಸಾಮಾನ್ಯನ ಅವನತಿಯ ಹೇತುಗಳಾದರು. ಈ ನಿಲುವನ್ನು ನಿರೂಪಿಸುವ ಅನೇಕ ಕೃತಿಗಳು ರಚಿತವಾದುವು. ಅನಕೃ ಕನ್ನಡದ ಪ್ರಗತಿಶೀಲ ಲೇಖಕರ ಸಂಘದ ಅಧ್ಯಕ್ಷರಾಗಿ ನಾಡೆಲ್ಲ ಸಂಚರಿಸಿ ಭಾಷಣಗಳ ಮೂಲಕ ಜನರನ್ನು ಎಚ್ಚರಿಸಿದರು. ಪತ್ರಿಕೆಯನ್ನು ಸಂಪಾದಿಸಿದರು. ಲೇಖನ, ಕತೆ, ಕಾದಂಬರಿಗಳಿಂದ ಓದುಗರ ಮನಸ್ಸನ್ನು ಪ್ರಚೋದಿಸಿದರು. ವಾಸ್ತವಿಕತೆ; ಅಶ್ಲೀಲ, ಮಾರ್ಕ್ಸ್‌ತತ್ವ ಮೊದಲಾದ ಶಬ್ದಗಳ ಸುತ್ತ ವಾದ-ವಿವಾದಗಳನ್ನು ನಡೆಸಿದರು. ಅನಕೃರನ್ನು ತೀವ್ರ ಮತ್ತು ಸಾಮ್ಯವಾದೀ ಗುಂಪುಗಳು ಅನುಕರಿಸಿದವು. ಅನಕೃ ರ ‘ಸಾಹಿತ್ಯ ರತ್ನ’, ‘ಕನ್ನಡಮ್ಮನ ಗುಡಿಯಲ್ಲಿ’ಯ ಲೇಖಕ ಮತ್ತು ಪತ್ರಿಕೋದ್ಯಮಿ ನಾಯಕರು ಕಾದಂಬರಿಕಾರರಲ್ಲಿ ತಾದಾತ್ಮ್ಯವನ್ನು ಕಂಡರು. ತರಾಸು ಅವರ ‘ಮುಂಜಾವಿನಿಂದ ಮುಂಜಾವು’ ‘ಬಿಡುಗಡೆಯ ಬೇಡಿ’, ಕಟ್ಟೀಮನಿಯವರ ‘ಜ್ವಾಲಾಮುಖಿಯ ಮೇಲೆ’ ‘ನಾನು ಪೋಲೀಸನಾಗಿದ್ದೆ’ ನಿರಂಜನರ ‘ವಿಮೋಚನೆ’ ‘ಚಿರಸ್ಮರಣೆ’ಗಳಲ್ಲಿ ಸಮಕಾಲೀನ ತುರ್ತು ಸಮಸ್ಯೆಗಳ ವಿವರಗಳನ್ನು ಕಾಣಬಹುದು. ‘ನೀ ನನ್ನ ಮುಟ್ಟಬೇಡ’, ‘ಹೊಲೆಯರ ಬಾಳಿನ ದುರಂತ’ ‘ಜನಿವಾರ ಮತ್ತು ಶಿವದಾರ’ದಲ್ಲಿ ಪ್ರೀತಿಗೆ ಜಾತಿಯಿಲ್ಲವೆಂಬ ವಿಚಾರವು ಮೂಡಿ ಬಂತು. ಹೀಗೆ ಸಾಹಿತಿಯ ಸಾಮಾಜಿಕ ಎಚ್ಚರ ಕಾದಂಬರಿಯ ಪಾತ್ರಗಳ ದೃಷ್ಟಿಕೋನ. ಸಮಾಜಿಕ ಸಂದರ್ಭ, ಸಾಮಾಜಿಕ ಸ್ಥಿತ್ಯಂತರದಿಂದ ವ್ಯಕ್ತಿಯ ಮೇಲಾದ ಪರಿಣಾಮ ಲೇಖಕರಿಗೆ ವಾಸ್ತವತೆಯ ಅರಿವು ಎಷ್ಟಿದೆ ಎಂಬ ಅನೇಕ ಪ್ರಶ್ನೆಗಳನ್ನು ಮಾರ್ಕ್ಸ್‌ವಾದ ಎತ್ತಿತು. ಲೇಖಕನಿಂದ ವ್ಯಕ್ತಿ ಮತ್ತು ಸಮಾಜದ ಪರಸ್ಪರ ಸಂಬಂಧದ ತಿಳುವಳಿಕೆಯನ್ನು ಮಾರ್ಕ್ಸ್‌ವಾದ ಅಪೇಕ್ಷೆ ಮಾಡಿತು.

ಎರಡನೆಯ ಆಸಕ್ತಿ : ಸಾಂಪ್ರದಾಯಿಕ ಸಮರ್ಥನೆಯ ವಿರೋಧ ಮತ್ತು ಖಂಡನೆ, ಪ್ರಗತಿಶೀಲರ ಈ ಆಸಕ್ತಿಯನ್ನು ‘ನಾಸ್ತಿಕವಾದ’ವೆಂದು ಆಕ್ಷೇಪಿಸಿದರು. ಸಮಕಾಲೀನ ಸಮಾಜದಲ್ಲಿ ಹರಡಿಕೊಂಡಿರುವ ಸಾಂಪ್ರದಾಯಿಕ ಶೋಷಣೆಯ, ಅನ್ಯಾಯದ ಕೇಂದ್ರವಾದ ಮಠ- ಮಂದಿರಗಳು ಖಂಡನೆಗೆ ಒಳಗಾದವು. ಅಲ್ಲಿಯ ಧರ್ಮಾಧಿಕಾರಿಗಳು ಆಡಳಿತೆಯನ್ನು ನಗ್ನಗೊಳಿಸುವ ಚಿತ್ರಣ ಕಾದಂಬರಿಗಳಲ್ಲಿ ನಿಬಿಢವಾಗಿ ಬಂದಿತು. ಅನಕೃ ಬ್ರಾಹ್ಮಣ ಸಮಾಜದಲ್ಲಿರುವ ಅನೀತಿ, ಮಡಿಪ್ರಜ್ಞೆಯಂಥ ವಿಷಯಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿ ಬಯಲು ಮಾಡಿದಂತೆ ಕಟ್ಟೀಮನಿಯವರು ವೀರಶೈವ ಸಮಾಜದ ಮಠಾಧಿಪತಿಗಳ, ಅವರ ಬೆಂಬಲಿಗರ ಕಾಮುಕ ಪ್ರವೃತ್ತಿ, ಅನೈತಿಕತೆಗಳನ್ನು ನಿರ್ಭಿಡೆಯಿಂದ ಚಿತ್ರಿಸಿದರು. ಅವರ ‘ಜರತಾರಿ ಜಗದ್ಗುರು’ ‘ಮೋಹದ ಬಲೆಯಲ್ಲಿ’ ಈ ನಿಟ್ಟಿನಲ್ಲಿ ಮಹತ್ವದ ಕೃತಿಗಳು. ಅಧಿಕಾರ ಯಾವುದೇ ಆಗಲಿ, ಮನುಷ್ಯನನ್ನು ಭ್ರಷ್ಟಗೊಳಿಸುತ್ತದೆ. ಇದನ್ನು ಅನಾವರಣಗೊಳಿಸುವ ಕಾರ್ಯವನ್ನು ಪ್ರಗತಿಶೀಲ ಲೇಖಕರು ಧ್ಯೆರ್ಯದಿಂದ ಮಾಡಿದರು.

ಮೂರನೆಯ ಆಸಕ್ತಿ: ಉಪಾಸನೆಯಲ್ಲದ ಅಶ್ಲೀಲ ಸಾಹಿತ್ಯದ ರಚನೆ. ದೈಹಿಕ ಮೂಲವಾದ ಕಾಮಜೀವನದ ವಿಷಯಗಳು. ಬಿಡಿಬಿಡಿಯಾಗಿ ಚಿತ್ರಣಗೊಂಡ ಕಾದಂಬರಿಗಳು ಅನೇಕ ಸಂಖ್ಯೆಯಲ್ಲಿ ಬಂದವು. ಅನಕೃ ನಾಯಕ ಪಟ್ಟವಹಿಸಿ. ಮನುಷ್ಯನ ಕಾಮಜೀವನವನ್ನು ಎಕ್ಸ್‌ಪೋಸ್ ಮಾಡುವ ಕೃತಿಗಳನ್ನು ರಚಿಸಿದರು. ಶನಿ ಸಂತಾನ, ನಗ್ನ ಸತ್ಯ, ಸಂಜೆಗತ್ತಲು, ಕಬ್ಬಿಣದ ಕಾಗೆ ಮೊದಲಾದ ಕಾದಂಬರಿಗಳು ಅಮೋಘ, ಸುಗಮ ಶೈಲಿಯಲ್ಲಿ ಓದುಗನ ಮನಮೋಹಿಸಿದವು. ಅವರ ಸಾಹಿತ್ಯ ಅಶ್ಲೀಲವೆಂಬ ಟ್ಯಾಗ್ ಪಡೆದು ಸಮಾಜದ ತೀವ್ರ ಟೀಕೆಗೆ ಗುರಿಯಾಯಿತು. ತನ್ನ ಬರವಣಿಗೆಯ ಸ್ವರೂಪ ಮತ್ತು ವಿಚಾರಗಳನ್ನು ಸಮರ್ಥಿಸಿ ಅನಕೃ ‘ಸಾಹಿತ್ಯ ಮತ್ತು ಕಾಮಪ್ರಚೋದನೆ’ ಎಂಬ ವೈಚಾರಿಕ ಗ್ರಂಥವನ್ನು ಬರೆದರು. ಕಟ್ಟೀಮನಿಯವರ ‘ಬೀದಿಯಲ್ಲಿ ಬಿದ್ದವಳು’, ‘ಹೆಣ್ಣು ಮತ್ತು ಮಣ್ಣು’, ‘ಖಾನಾವಳಿಯ ನೀಲ’, ‘ಸಾಕ್ಷಾತ್ಕಾರ’, ತರಾಸು ಅವರ ‘ಮಸಣದ ಹೂ’ ‘ಬನಶಂಕರಿ’ ಮುಂತಾದ ಕಾದಂಬರಿಗಳಲ್ಲಿ ಲೈಂಗಿಕತೆಯ ವಿಕೃತರೂಪವನ್ನು ಕಾಣಲು ಸಾಧ್ಯವಾಯಿತು. ‘ನೀ ನನ್ನ ಮುಟ್ಟಬೇಡ’ದಲ್ಲಿ ಹರಿಜನ ಕುಟುಂಬದ ಹೆಣ್ಣುಗಳು ಊರ ಪ್ರತಿಷ್ಠಿತರ ಕಾಮಕ್ಕೆ ಬಲಿಯಾಗುವ ದಾರುಣ ಚಿತ್ರವಿದೆ. ಒಟ್ಟಿನಲ್ಲಿ ಸಮಾಜ ಹೆಣ್ಣಿನ ಶೋಷಣೆಗೆ ಹಿಂದುಳಿಕೆ ಹೊಣೆ ಎಂಬುದನ್ನು ಕಟ್ಟೀಮನಿಯವರು ಉಳಿದವರಿಗಿಂತ ಹೆಚ್ಚು ಕೆಣಕಿ ಹೇಳಿದರು.

ಹೆಣ್ಣು ಗಂಡಿನ ಸಂಬಂಧ ಇಂದಿಗೂ ಕತೆ-ಕಾದಂಬರಿಯ ಪ್ರಧಾನ ವಸ್ತುವಾಗಿದೆ. ಲೈಂಗಿಕ ಆಸಕ್ತಿಗಳು ಅತಿಶಯ ಬಿಕ್ಕಟ್ಟಿನದ್ದಾಗಿ ನವ್ಯ, ಬಂಡಾಯ, ದಲಿತ ಸಾಹಿತ್ಯದಲ್ಲಿ ಪರಿಪರಿಯಾಗಿ ನುಸುಳಿಕೊಂಡಿದೆ. ೧೯೪೫ ರಲಿ ಕಾರಂತರು ವ್ಯಕ್ತಪಡಿಸಿದ ವಿಚಾರವನ್ನು ಗಮನಿಸಬಹುದು.

‘ಲೈಂಗಿಕ ಪ್ರಶ್ನೆ ಅನಾದಿಯ ಪ್ರಶ್ನೆ. ಅನಾದಿಕಾಲದ ನರನಾರಿಯರೂ ಅದರ ಭೀತಿಯಿಂದ ಮುಕ್ತರಾಗಲಿಲ್ಲ. ಗ್ರಂಥಸ್ಥ ನೀತಿಗೂ, ಶರೀರದ ನೀತಿಗೂ ನಾವು ಮೇಳ ಕಾಣುತ್ತಲಿಲ್ಲ. ಮುಚ್ಚು ಮರೆಯ ತೆರೆಯನ್ನು ಕಲ್ಪಿಸುತ್ತಿದ್ದೇವೆ. ‘ಲೈಂಗಿಕ ಪ್ರಶ್ನೆ ಕಾದಂಬರಿಯಲ್ಲಿ ಬರಬಾರದೆ…. ಜೀವನವನ್ನು ಕಾಡುವ ಎಲ್ಲ ಪ್ರಶ್ನೆಗಳೂ ಬರಬೇಕು. ಯಾವುವು ತೀರ ಸೂಕ್ಷ್ಮವಾದ ತೀರ ಗಹನವಾದ ವಿಷಯವೊ ಅವನ್ನು ಅಲ್ಲಗಳೆಯುವುದರಿಂದಲೂ ಹಿತವಿಲ್ಲ. ಬೇತಾಳವಾಗಿ ತೋರಿಸಿದರೂ ಹಿತವಿಲ್ಲ. ಒಂದೆಡೆ ಅದು ಆಧುನಿಕ ಸ್ವಯಂಕೃತ ಮನುಗಳ ತಂಡದೆದುರು ನಿಂತಿದೆ. ಇನ್ನೊಂದೆಡೆ ನಿರಂಕುಶ ವಿಲಾಸಪ್ರಿಯರ ಆರಾಧನೆಗೆ ಒಳಗಾಗಿದೆ. ಇವೆರಡೂ ಅನೀತಿಗಳೇ. ಶೀಲ ಅಶ್ಲೀಲಗಳ ಭೂತ ಹುಟ್ಟುವುದು ವಾಸ್ತವ ಸ್ಥಿತಿಯ ತುಚ್ಚೀಕಾರ ಇಲ್ಲವೆ ಪೂಜೆಗಳಿಂದ. ನಾನು ನನ್ನ ಬರಹದಲ್ಲಿ ಲೈಂಗಿಕ ಸಮಸ್ಯೆಯನ್ನು ತುಚ್ಚೀಕರಿಸಲಾರೆ. ಪೂಜಿಸಲೂ ಆರೆ, ಕಾರಂತರ ಈ ಸಮತೋಲ ದೃಷ್ಟಿಯ ಫಲವೆ ‘ಮೈಮನಗಳ ಸುಳಿಯಲ್ಲಿ’. ಕಾದಂಬರಿಕಾರ, ನೀತಿಯ ಪ್ರಚಾರಕನೂ ಅಲ್ಲ, ಅನೀತಿಯ ಸಮರ್ಥಕನೂ ಅಲ್ಲ. ಆತನದು ಕೇವಲ ಕಲಾವಿದನ ಸಹಾನೂಭೂತಿಯ ದೃಷ್ಟಿ’ ಎನ್ನುವ ಕಟ್ಟೀಮನಿ ಲೈಂಗಿಕ ವಸ್ತುವನ್ನು ಸಂಯಮದಿಂದ ಬರೆದರೂ ರಂಜಕತೆ ಅವರನ್ನೂ ಬಿಡಲಿಲ್ಲ. ಅನಕೃ ಭಾವಾವೇಶ ಮತ್ತು ಅತಿರಂಜಕತೆಯ ಕಲೆಯಲ್ಲಿ ವಿವಶರಾದರು. ಜನಪ್ರಿಯತೆ ಮತ್ತು ಸಂಪಾದನೆಯ ಮಾಧ್ಯಮವಾಯಿತು ಅವರ ಸಾಹಿತ್ಯ. ತರಾಸು, ನಿರಂಜನ ಹೆಣ್ಣು ಪಾತ್ರಗಳನ್ನು ಕಾಳಜಿ, ಗೌರವದಿಂದಲೆ ಚಿತ್ರಿಸಿದರು. ಅನಕೃ ‘ಸಂಧ್ಯಾ ರಾಗ’ದ ಜಯ ಮೀನಾಕ್ಷಮ್ಮ, ‘ಕಣ್ಣೀರಿನ’ ಗೌರಿ ಕಾಮಾಕ್ಷಿಯವರಂತಹ ಪಾತ್ರಗಳನ್ನೂ ಸೃಷ್ಟಿಸಿರುವುದು ಅವರ ಪ್ರಗತಿಶೀಲ ಆದರ್ಶವೆ ಆಗಿದೆ.

ನಾಲ್ಕನೆಯ ಆಸಕ್ತಿಯಾಗಬಹುದಾಗಿದ್ದ ರೈತರ ಬದುಕಿನ ಆಶೆ-ಆಕಾಂಕ್ಷೆಗಳನ್ನು ಚಿತ್ರಿಸುವ ಕತೆ-ಕಾದಂಬರಿಗಳು ಪ್ರಗತಿಶೀಲರಿಂದ ದೂರ ಉಳಿದದ್ದು ಅಶ್ಚರ್ಯ. ಕಾರಂತರ ‘ಚೋಮನ ದುಡಿ’. ಕೋ.ಚೆನ್ನಬಸಪ್ಪ ಆವರ ‘ಮುಕ್ಕಣ್ಣನ ಮುಕ್ತಿ’, ಅಣ್ಣಾರಾಯರ ‘ನಿಸರ್ಗ’ಗಳು ಗ್ರಾಮೀಣ ಒಲವನ್ನು ತೋರಿಸಿದರೂ ಪ್ರಗತಿಶೀಲ ಮನೋಭಾವ ಈ ದಿಕ್ಕಿನಲ್ಲಿ ಪರವಾಗಿರಲಿಲ್ಲವೆಂದು ತೋರುತ್ತದೆ.

ನಿರಂಜನರದು ಹೆಚ್ಚು ಪ್ರಗತಿಶೀಲತೆಯ ದಾರಿ, ಸಮಾಜ ಸುಧಾರಣೆಯ ಕಡೆಗಿನ ಒಲವಿನಿಂದ, ಸಾಮಾಜಿಕ ಅನ್ಯಾಯಗಳನ್ನು ಬಯಲಿಗೆಳೆಯುವ ಉತ್ಸಾಹದಿಂದ ಕಮ್ಯುನಿಷ್ಟ ಧೋರಣೆ ಅವರ ಬರವಣಿಗೆಯ ಶಕ್ತಿಯಾಗಿ ‘ಚಿರಸ್ಮರಣೆ’, ‘ವಿಮೋಚನೆ’ ಕಾದಂಬರಿಗಳು ಹೊರಬಂದವು. ‘ನಿರಂಜನರು ಅನಕೃ ಸಂಪ್ರದಾಯದ ಎಲ್ಲ ಒಳ್ಳೆಯ ಗುಣಗಳನ್ನು ಪ್ರತಿನಿಧೀಕರಿಸುವ ಲೇಖಕರಾಗಿದ್ದಾರೆ’ – ಕುರ್ತುರ್ಕೊಟಿ

ಬಸವರಾಜ ಕಟ್ಟೀಮನಿಯವರ ಕಾದಂಬರಿಗಳಲ್ಲಿ ಸ್ವಾನುಭವದಿಂದ ಪಡೆದ ಸಾಮಾಜಿಕ ಸಮಸ್ಯೆ ಹೆಚ್ಚಿನ ವ್ಯಾಪ್ತಿಯನ್ನು ಪಡೆಯಿತು. ಬಡತನ, ಹಳ್ಳಿಯ ಜೀವನದ ಅವನತಿ, ಧಾರ್ಮಿಕ ಅನೀತಿ, ಹೆಣ್ಣಿನ ಶೋಷಣೆ, ಅಸ್ಪಶೃತೆ ಮೊದಲಾದ ಸಾಮಾಜಿಕ ದೋಷಗಳನ್ನು ಅವರು ತಮ್ಮ ಕೃತಿಗಳಲ್ಲಿ ಸಿಟ್ಟಿನಿಂದಲೆ ವ್ಯಕ್ತಿಪಡಿಸಿದರು. ಅವರ ಪ್ರಕಾರ ‘ಯಾವುದು ಮನುಷ್ಯನನ್ನು ಪರಿಪೂರ್ಣತೆಯ ಕಡೆಗೆ ಸಾಗಿಸಿಕೊಂಡೊಯ್ಯುವುದೋ ಅದೆಲ್ಲವೂ ಪ್ರಗತಿಶೀಲ’.

ಮುಂಬಯಿಯಲ್ಲಿ ವ್ಯಾಸರಾಯ ಬಲ್ಲಾಳರು ಪ್ರಗತಿಶೀಲದ ಮುಖ್ಯ ಪ್ರವಾಹದೊಂದಿಗೆ ಅನಾಯಾಸ ಸೇರಿಕೊಂಡದ್ದನ್ನು ಅವರ ಅನುರಕ್ತೆ, ಹೇಮಂತಗಾನ ಕಾದಂಬರಿಗಳಿಂದ ತಿಳಿಯಬಹುದು. ನಗರ ಜೀವನದ ವಿಶೇಷ ಅನುಭವಗಳು ಬಲ್ಲಾಳರ ಅನುಕಂಪ, ಕಾಳಜಿಗಳಿಗೆ ಒಳಗಾಗಿ ಪಾತ್ರಗಳು ವಾಸ್ತವ, ಅಸಹಾಯ ಬಗೆಯದಾಗಿ ಕಂಡವು.

ಪ್ರಗತಿಶೀಲ ಮನೋಧರ್ಮ ಅಥವಾ ಕಾಳಜಿಯನ್ನು ಕಾರಂತರ ವಿಡಂಬನೆಯಲ್ಲಿ. ಮುಗಳಿ, ಗೋಕಾಕರ ಕಾದಂಬರಿಗಳಲ್ಲಿ ಕಾಣಬಹುದು. ಬೇಂದ್ರೆಯವರ ‘ಹುಬ್ಬಳ್ಳಿಯಾಂವಾ’ದ ಯಜಮಾನಶಾಹೀ ರೀತಿಯಲ್ಲಿ ಹೆಣ್ಣಿನ ಶೋಷಣೆಯ ಚಿತ್ರಣ. ಅಡಿಗರ ಸಮಾಜ ಭೈರವ, ಕಟ್ಟುವೆವು ನಾವುಗಳಲ್ಲಿ ವಾಸ್ತವ ಮತ್ತು ಕನಸುಗಳ ಚಿತ್ರಣದಲ್ಲಿ ಈ ಅಂಶ ಸಶಕ್ತವಾಗಿ ಬರುತ್ತದೆ. ಆದರೆ ಈ ಎಲ್ಲ ಲೇಖಕರ ಪ್ರಮುಖ ಆಸಕ್ತಿ ಪ್ರಗತಿಶೀಲ ಸಾಹಿತ್ಯ ರಚನೆಯಾಗಿರಲಿಲ್ಲ.

ಪ್ರಗತಿಶೀಲ ಸಾಹಿತ್ಯ ಹುಟ್ಟಿದ್ದೆ ಸಣ್ಣಕತೆಗಳಿಂದ. ಪ್ರಗತಿಪರ ದೃಷ್ಟಿಯನ್ನು ಹರಡಲು ಸಣ್ಣಕತೆಯ ವ್ಯಾಪ್ತಿ ಸಾಲದೆಂದು ಕಂಡಾಗ ಹೆಚ್ಚು ವಿಸ್ತಾರದಲ್ಲಿ ಹೇಳಬಹುದಾದ ಕಾದಂಬರಿ ಪ್ರಕಾರ ಲೇಖಕರಿಗೆ ಅನುಕೂಲವಾಯಿತು. ಅನಕೃ ಕಥಾಂಜಲಿಯ ಸಂಪಾದಕರಾಗಿ ‘ಮಿಂಚು’ ‘ಅಗ್ನಿಕನ್ಯೆ’ ‘ಕಣ್ಣು ಮುಚ್ಚಾಲೆ’ಯಂಥ ಕಥಾಸಂಗ್ರಹಗಳನ್ನು ಪ್ರಕಟಿಸಿದರು. ಕತೆಗಾರರಲ್ಲಿ ನಿರಂಜನ, ಕಟ್ಟಿಮನಿ, ಆನಂದ, ಕೊ. ಚೆನ್ನಬಸಪ್ಪ, ತರಾಸು, ವ್ಯಾಸರಾಯ ಬಲ್ಲಾಳ ಒಳ್ಳೆಯ ಕತೆಗಳನ್ನು ಬರೆದರು. ನಿರಂಜನರ ‘ಕೊನೆಯ ಗಿರಾಕಿ’, ಆನಂದರ ‘ನಾನು ಕೊಂದ ಹುಡುಗಿ’ ಕಟ್ಟೀಮನಿಯವರ ‘ಜೀವನ ಕಲೆ’ ಬಲ್ಲಾಳರ ‘ಕಾಡುಮಲ್ಲಿಗೆ’ ಅನಕೃರ ‘ಅಗ್ನಿಕನ್ಯೆ’ ಪ್ರಗತಿಶೀಲ ದಶಮಾನದ ಉತ್ತಮ ಕತೆಗಳು. ‘ಇವು ಆದರ್ಶ ಶೈಲಿ, ಭಾಷೆ, ತುರ್ತು ಸಮಸ್ಯೆಗಳಿಂದಾಗಿ ಅನೇಕ ಓದುಗರನ್ನುಗಳಿಸಿಕೊಂಡರೂ ಕತೆಯಾಗಿ ಹೆಚ್ಚು ಸಾರ್ಥಕವಾಗಲಿಲ್ಲ’ ಎಂಬ ಲಂಕೇಶರ ವಿಮರ್ಶೆಗೆ ನನ್ನ ಕೆಲವು ಅನಿಸಿಕೆಗಳು.

ಪ್ರಗತಿಶೀಲ ಸಾಹಿತ್ಯ ಸಂಪನ್ನವಾಗಿತ್ತು. ಅದು ಕೇವಲ ಮಾರ್ಕ್ಸ್‌ನ ಮೆನಿಫೆಸ್ಟೋದ ಪ್ರತಿಕೃತಿಯಾಗಿರದೆ ಸಹೃದಯ ಸಾಹಿತಿಯ ಸಮಕಾಲೀನ ಸಂವೇದನೆಗಳಿಂದ ಹುಟ್ಟಿದ ಸಾಮ್ಯವಾದೀ ಸಮಾಜದ ಸುಂದರ ಕಲ್ಪನೆಯಾಗಿತ್ತು.

ಸಾಹಿತ್ಯದ ಪ್ರಚಾರದ ಆತುರ. ಈ ಏಳೆಂಟು ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪ್ರಚಾರಗೊಂಡಷ್ಟು. ಜನಪ್ರಿಯವಾದಷ್ಟು ಬೇರೆ ಯಾವ ಕಾಲದಲ್ಲೂ ಆಗಿಲ್ಲ. ಪರಿಷತ್ತು, ಅಕಾಡಮಿ, ವಿಮರ್ಶೆ, ಪ್ರಶಸ್ತಿ, ಮಾಧ್ಯಮಗಳಿಲ್ಲದೆಯೆ ಓದುಗರ ಆಸಕ್ತಿಯಿಂದಲೆ ಪ್ರಗತಿಶೀಲ ಸಾಹಿತ್ಯ ಲೋಕಪ್ರಿಯವಾಯಿತು.

ಪ್ರಗತಿಶೀಲ ಸಾಹಿತ್ಯದ ದೋಷಗಳು ಅನೇಕವಾದರೂ ವಿಮರ್ಶಕರು ಅದರ ಗುಣಗಳನ್ನು ಎತ್ತಿ ಹಿಡಿಯುವ ಔದಾರ್ಯವನ್ನು ತೋರಿಸಲಿಲ್ಲ.

ಓದುವ ಚಟ, ಭಾಷೆಯ ಅಭಿಮಾನ, ಸಾಹಿತ್ಯಾಸಕ್ತಿಗಳು ಕರ್ನಾಟಕ ಮತ್ತು ಹೊರನಾಡಿನಲ್ಲಿಯು ವೃದ್ಧಿಯಾಯಿತು.

ಪ್ರಗತಿಶೀಲದಿಂದ ಭಾಷೆಗೆ ಹೊಸ ಕಸುವು ಬಂದಿತು. ಅನಕೃ, ತರಾಸು ಅವರ ಭಾಷೆಯ ಮೋಡಿಗೆ ಅನೇಕರು ವಶವಾದರು.

ಇಂಗ್ಲೆಂಡಿನ ಆಚೆಗೆ ಕಣ್ಣು ಹಾಯಿಸಿ ಯುರೋಪಿಯನ್ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟುವಂತೆ ಈ ದಶಕದ ಲೇಖಕರು ಮಾಡಿದರು. ಬರಹಗಾರದಲ್ಲಿ ಬರವಣಿಗೆಯ ಸ್ಪರ್ಧೆಯೆ ನಡೆಯವಂತೆ ಬರೆದರು. ಕತೆಗಳಿಗೆ ಪತ್ರಿಕೆಯ, ಕಾದಂಬರಿಗೆ ಪ್ರಕಾಶಕರ ಬೇಡಿಕೆಗಳು ದೊರೆತವು. ಕಠಿಣವಾಗಿದ್ದ ಸಾಹಿತ್ಯ ಸರಳವಾಯಿತು. ಸಾಮಾಜಿಕ ಬದುಕಿನ ಅನೇಕ ಮುಖಗಳ ಪರಿಚಯವಾಗಿ, ಸಾಮಾಜಿಕ ಪ್ರಜ್ಞೆಯ ಅರಿವು ಉಂಟಾಗುವಂತಾಯ್ತು.

ಒಟ್ಟಿನಲ್ಲಿ ಇದೊಂದು ಅವಸರದ ಚಳುವಳಿಯಾಗಿ ಅವಸರದಲ್ಲಿಯೆ ಮುಗಿದು ಭವಿಷ್ಯದಲ್ಲಿ ವಿದ್ವಾಂಸರಿಗೆ ಚಿಂತನೆಯ ವಿಷಯವಾಗಿ ಪರಿಣಮಿಸಿತು.

ಪ್ರಗತಿಶೀಲ ಸಾಹಿತ್ಯದ ಸ್ತರ ಇಳಿಕೆಗೆ ಕೆಲವು ಕಾರಣಗಳನ್ನು ಕೊಡಬಹುದು. ಪ್ರಗತಿಶೀಲ ಹೆಚ್ಚಿನ ಲೇಖಕರು ಬರವಣಿಗೆಯನ್ನು ಸಂಪಾದನೆಯ ಮಾಧ್ಯಮವನ್ನಾಗಿ ಮಾಡಿಕೊಂಡುದರಿಂದ ಕ್ವಾಲಿಟಿಯನ್ನು ಕಳಕೊಂಡರು.

ಪ್ರಗತಿಶೀಲ ಸಾಹಿತ್ಯ ಪ್ರಚಾರ ಸಾಧನವಾದುದು ಒಂದು ದುರ್ದೆಸೆ. ಹೊಸ ಕನಸಿನ ಆದರ್ಶದ ಆಕಾಂಕ್ಷೆಗಳು ಲೇಖಕರ ಉತ್ಸಾಹದ ವೇಗವನ್ನು ಸಹಿಸದಾದವು.

ಲೇಖಕನ ಕನಸುಗಳೆಂದೂ ಸಾಕಾರಗೊಳ್ಳಲಾರವು. ಜಾತಿ-ಮತ ವೈಷಮ್ಯ, ಶೋಷಣೆ ವರ್ಗಕಲಹ, ಕ್ರೌರ್ಯ, ಲಾಲಸೆ, ಭೃಷ್ಟಚಾರ ಇವು ಮಾನವ ಸಮಾಜಕ್ಕೆ ಹಿಡಿದ ಗ್ರಹಣ. ಇದರ ನಿವಾರಣೆ ಲೇಖಕನ ಹೊಣೆಯಲ್ಲ. ಅದರ ಭಯಾನಕತೆಯನ್ನು ಲೇಖಕ ತೋರಿಸಿಕೊಡಬಲ್ಲ. ಪ್ರಗತಿಶೀಲರು ಈ ಸತ್ಯವನ್ನು ತಿಳಿಯದೆ ಭಾವವಶರಾದರು.

ಜನಪ್ರಿಯತೆ ಅವರ ಹೊಣೆಗಾರಿಕೆಯನ್ನು ಕಲುಷಿತಗೊಳಿಸಿತು.

ಇಂದಿನ ರೀತಿಯ ವಿಮರ್ಶೆಯ ಕಡಿವಾಣಕ್ಕೆ ಅವರು ಒಳಗಾಗಲಿಲ್ಲ.

ಒಟ್ಟಿನಲ್ಲಿ ಪ್ರಗತಿಶೀಲ ಸಾಹಿತ್ಯ ಜನಪರವೂ, ಜೀವನ ಪರವೂ ಆಗಿತ್ತು. ಅರ್ಥಪೂರ್ಣ ಆಸಕ್ತಿಗಳಿಂದ ಕೂಡಿದ ಉತ್ಸಾಹ, ತುರ್ತು ಲೇಖಕರಲ್ಲಿತ್ತು. ಕನಸಿನ ಆದರ್ಶಗಳ ಬೆಂಬಲವಿತ್ತು. ಅಂದಿನ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಉಜ್ವಲ ಭವಿಷ್ಯಕ್ಕೆ ಅದು ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ಪ್ರಗತಿಶೀಲ ಒಂದು ತುಫಾನೀ ದಶಕದಂತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿ
Next post ಅಪರಂಜಿ

ಸಣ್ಣ ಕತೆ

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…