ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿಗೆ
ಮಣಿಗಿಳಿಯುವ ತನಕ ಬಾಳೆ ಇಲ್ಲ;
ಬಳ್ಳಿ ಗಿಡ ಮರ ಎಲ್ಲ ಬೀಜದಲೆ ಇದ್ದರೂ
ನೆಲದೊಳಗೆ ಕೃಪೆಯಿರದೆ ಸುಳ್ಳೇ ಎಲ್ಲ.

ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿಗೆ
ಹಗಲಲ್ಲಿ ದಣಿವು ಆಲಸ್ಯ ಜೊಂಪು;
ನಡುರಾತ್ರಿಯಲಿ ಚಿತ್ತ ಬೆತ್ತಲಾಗುವ ಹೊತ್ತು
ನೆಲಕಿಳಿದು ಹಾಡುವುದು ಏನು ಇಂಪು!

ಹನಿವ ದನಿ ಎಳೆಗೂಡಿ ಎಳೆ‌ಎಳೆಯ ಹೊಕ್ಕಾಡಿ
ಏಳುವುದು ಹೊಳೆಹೊಳೆವ ಕವನವಸ್ತ್ರ ;
ಅತ್ತ ಕನಸೂ ಅಲ್ಲ ಇತ್ತ ನನಸೂ ಅಲ್ಲ
ಸಂಧಿನೆಲ ಕಾಣಿಸುವ ಸತ್ಯ ವಕ್ರ.

ಹಕ್ಕಿ ಹಾಡುವ ಹೊತ್ತು ಸೊಕ್ಕಿರುವ ಜೀವಕ್ಕೆ
ನೆಲಬಿಟ್ಟು ನಿಂತಂಥ ದೆವ್ವದಿಗಿಲು ;
ದಿಗಿಲ ಬೆನ್ನಿಗೆ ಹಗಲು ಮರೆಗಿದ್ದು ಹೊರಬಂದ
ದಿವದ ನಿಧಿ ಪೂರ್ಣ ಸಿಗದಿರುವ ಕೊರಗು.

ಹಾಡು ಕೇಳುವ ಹೊತ್ತು ಕಾಡು ಬೆಳೆಯುವ ಹೊತ್ತು
ಗುಡ್ಡ ನದಿ ಮಾತಾಡಿ ನಗುವ ಹೊತ್ತು ;
ನಕ್ಷತ್ರಗಳು ಡಿಕ್ಕಿಯಾಗಿ ಚಿತ್ರಸ್ಫೋಟ
ಬದುಕ ಬೆಳೆಸುವುದು, ನನಗಷ್ಟೆ ಗೊತ್ತು
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)