ಬಂಡವಾಳವಾಗುತಿದೆ
ಕನ್ನಡ ಭಾಷೆ – ನಮ್ಮ
ಕನ್ನಡ ಭಾಷೆ
ಬಂಡವಾಳವಾಗುತಲಿ
ಅಳಿದು ಹೋಗುತ್ತಲಿದೆ
ಕನ್ನಡ ಭಾಷೆ – ನನ್ನ
ಕನ್ನಡ ಭಾಷೆ
ಓಟಿಗಾಗಿ ಸೀಟಿಗಾಗಿ
ಜನರ ಕುಣಿಸೊ ನೋಟಿಗಾಗಿ
ಕನ್ನಡವನೆ ನಂಬಿಹರು
ಸ್ವಾರ್ಥಭರಿತ ಧೂರ್ತರು
ಎತ್ತ ಹೋದರತ್ತ ಇವರು
ಜಯ್ ಜಯ್ ಜಯ್ ಕನ್ನಡಕೆ
ಮತ್ತೆ ಬಂದರಿತ್ತ ಇವರೆ
ಶರಣು ಅನ್ಯಭಾಷೆಗೆ
ಬಂಗಲೆಗಳ ಕಟ್ಟಿಹರು
ಗದ್ದುಗೆಗಳ ಹಿಡಿದಿಹರು
ಕನ್ನಡದ ಹೆಸರಿನಲಿ
ಆಕಾಶವ ಮುಟ್ಟಿಹರು
ಅಳಿದರೇನು? ಉಳಿದರೇನು?
ಈ ಮಣ್ಣಿನ ಕನ್ನಡ
ಇದರಿಂದಲೆ ತುಂಬುತ್ತಿದೆ
ಇವರ ಮನೆಯ ಸಿರಿಕೊಡ
* * *
ಏಳಿರಣ್ಣ ಎದ್ದೇಳಿ
ನಶಿಸುತ್ತಿದೆ ಕನ್ನಡ
ಚರಿತ್ರೆಯಲೆ ಉಳಿವುದಕೆ
ಬಿಡದಿರಿ ಈ ಕನ್ನಡ
ನಮ್ಮ ಉಸಿರು ಕನ್ನಡ
ನಾಡ ಹಸಿರು ಕನ್ನಡ
ಕನ್ನಡ ಹೆಸರಾಗುವಲ್ಲಿ
ದುಡಿಯಿರೆಲ್ಲ ಸಂಗಡ
*****