ಯಾವ ಜನ್ಮದ ಪುಣ್ಯವೊ ಏನೊ
ನಾನಾಗಿಹೆನು ಕನ್ನಡಿಗ
ಕವಿ ಕಲ್ಪನೆಯ ಚೆಲುವಿಗು-ಮೀರಿದ
ಕಾಣುತಲಿಹೆನೀ ಸಿರಿಸಗ್ಗ
ಹನಿಯುತಲಿದೆಯೊ ನವ ಸ್ಫೂರ್ತಿಯ ಮಳೆ
ಅಮೃತ ಸಲೆಯಾಗಿ
ಹರಿಯುತಲಿದೆಯೊ ಸಾಹಿತ್ಯದ ಹೊಳೆ
ಕಲಕಲ ದನಿಯಾಗಿ
ಹಾಡುತಲಿದೆಯೊ ಕೋಗಿಲೆಯಾ ಮನ
ಸಪ್ತ ಸ್ವರವಾಗಿ
ಆಲಿಸಿ ಅರಳಿದೆ ರಸಿಕರ ಹೃನ್ಮನ
ಚೈತ್ರದ ಸುಮವಾಗಿ
ಸಹ್ಯಾದ್ರಿಯ ಸಲೆ ಮಲೆನಾಡಿನ ಮಲೆ
ನಂದನ ವನವಾಗಿ
ಬೇಲೂರಿನ ಕಲೆ ಗೊಮ್ಮಟನಾ ನೆಲೆ
ಶಿಲ್ಪದ ಬೀಡಾಗಿ
ವಿಶ್ವದ ಕಣ್ಮನ ಸೂರೆಗೊಂಡಿದೆ
ಚೆಲುವಿನ ಬಲೆಯಾಗಿ
ಕಲೆಯಿಂದಲಿ ಈ ಕನ್ನಡನಾಡು
ಬೆಳಗಿದೆ ಬೆಳಕಾಗಿ
*****