ಪತಂಗಗಳು ತಮ್ಮ ಮೈಬಣ್ಣದ ಮರದ ಕೊಂಬೆಗಳ ಮೇಲೆ ಅಥವಾ ಶಿವನಕುದುರೆ ಹಸಿರು ಹುಲ್ಲಿನ ಮೇಲೆ ಕುಳಿತಾಗ ಗುರುತಿಸಲು ಕಷ್ಟವಾಗುತ್ತದೆ. ಅಲ್ಲವೇ? ಕೆಲವು ಪತಂಗಗಳು ತಮ್ಮ ಮೈ ಮೇಲೆ ಇತರ ಪ್ರಾಣಿಗಳನ್ನು ಹೋಲುವಂತಹ ಚಿತ್ರ ಸೃಷ್ಟಿಸಿಕೊಂಡಿರುತ್ತವೆ. ಅದನ್ನು ಕಂಡು ಎಂಥ ಪ್ರಾಣಿ, ಪಕ್ಷಿಗಳಿಗೂ ದಿಗಿಲು ಹುಟ್ಟಿಸುತ್ತವೆ. ವೈರಿಯಿಂದ ರಕ್ಷಣೆ ಪಡೆಯಲು ನಿಸರ್‍ಗವು ದಯಪಾಲಿಸಿದ ಸಾಮರ್‍ಥ್ಯ ಇದು. ಇದು ಕೇವಲ ಪ್ರಾಣಿಗಳಿಗಷ್ಟೇ ಮೀಸಲು ಎಂದು ತಿಳಿದರೆ ತಪ್ಪಾದೀತು. ಕೆಲವು ಸಸ್ಯಗಳು ಇನ್ನೊಂದು ಸಸ್ಯ ಅಥವಾ ಪ್ರಾಣಿಗಳಿಗೆ ಹೋಲುವಂತಹ ಬಣ್ಣ, ರೂಪಗಳ ಛದ್ಮವೇಶ ಧರಿಸಿ ವೈರಿಯಿಂದ ಬಚಾವಾಗುತ್ತವೆ. ಅಂತಹ ಸಸ್ಯಗಳಿಗೆ ಅಣಕ ಸಸ್ಯಗಳೆನ್ನುವರು.

ದಕ್ಷಿಣ ಅಮೇರಿಕೆಯಲ್ಲಿ ಬೆಳೆಯುವ ಕ್ಯಾಲಾಡಿಯಮ್ ಜಾತಿಯ ಸಸ್ಯಗಳ ಎಲೆಗಳು ಬಹುವರ್‍ಣವುಳ್ಳದಾಗಿದ್ದು, ಹಾವಿನಂತೆ ಹೋಲುವ, ನಾನಾ ಬಗೆಯ ಚುಕ್ಕೆಗಳನ್ನು ಹೊಂದಿರುತ್ತವೆ. ಅದನ್ನು ತಿನ್ನಲು ಬರುವ ಪ್ರಾಣಿಗಳು ಎಲೆಗಳನ್ನು ಕಂಡೊಡನೆ ಹಾವು ಅಥವಾ ಇನ್ನಿತರ ವಿಷಕಾರಿ ಜಂತುವಿರಬಹುದೆಂದು ಮೋಸಹೋಗಿ ದೂರಸರಿಯುತ್ತವೆ.

ಸುವರ್‍ಣಗಡ್ಡೆ, ಕಂದಗಡ್ಡೆ ಜಾತಿಗೆ ಸೇರುವ ಅಮೋರ್‍ ಫೋಫ್ಯಾಲಸ್ ಬಲ್ಬಿಫೆರ್‍ ಸಸ್ಯದ ಪುಷ್ಪಮಂಜರಿ (Inflorescence) ಯನ್ನು ನೋಡಿದರೆ ನೆಲದಿಂದ ಹಾವಿನ ಹೆಡೆಯೇ ಮೇಲೇಳುತ್ತಿದೆಯೋ ಏನೋ ಎಂದು ಭಾಸವಾಗಿ ನಡುಕ ಹುಟ್ಟಿಸುತ್ತದೆ.

ಮಳೆಗಾಲದ ದಿನಗಳಲ್ಲಿ ಶಿಲ್ಲಾಂಗ್ ಮತ್ತು ಡಾರ್‍ಜಿಲಿಂಗ್‌ಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಕಾಡು ಸುವರ್‍ಣಗಡ್ಡೆಯ ಆವರಣ ಪತ್ರಕ (Spathe)ವು ನೀಲಿ-ಊದಾ ಬಣ್ಣದಾಗಿದ್ದು, ಲಾಳಗುಚ್ಛ (Spadix) ದವರೆಗೂ ಹರಡಿಕೊಂಡಿರುತ್ತದೆ. ಅದು ಹಾವಿನ ಹೆಡೆಯಂತೆ ಭಾಸವಾಗುತ್ತದೆ. ಹಾಗಾಗಿ ಈ ಸಸ್ಯವನ್ನು ‘ಕೋಬ್ರಾ ಗಿಡ’ ಎಂಥಲೇ ಕರೆಯಲಾಗುತ್ತದೆ.

ಅತ್ಯಂತ ಕುತೂಹಲಕಾರಿಯಾದ ಅಣಕ ಸಸ್ಯಗಳ ಕುರಿತು ತಿಳಿಯೋಣ. ಆಫ್ರಿಸ್ ಸ್ಪಕುಲಮ್ ಎಂಬ ಆರ್‍ಕಿಡ್ ಸಸ್ಯದ ಹೂವಿನ ಪುಷ್ಪಗಳ ವಲಯದ ತುಟಿಯು ನೀಲಿ ಬಣ್ಣದಾಗಿದ್ದು, ಹಳದಿ ಪಟ್ಟಿ ಮತ್ತು ಅದರ ಅಂಚು ಕೆಂಪು ಕೂದಲುಗಳಿಂದ ಆವರಿಸಿದೆ. ಈ ಹೂವು ಕ್ಯಾಂಪ್ ಸೋಕೋಲಿಯ ಸಿಲಿಯೇಟ ಎಂಬ ಪ್ರಭೇದದ ಹೆಣ್ಣು ಕಣಜವನ್ನು ಹೋಲುತ್ತದೆ. ಅಲ್ಲದೇ ಹೆಣ್ಣು ಕಣಜ ಗಂಡು ಕಣಜವನ್ನು ಆಕರ್‍ಷಿಸುವಾಗ ಸೂಸುವ ವಾಸನೆಯನ್ನು ಈ ಹೂವು ಸೂಸುತ್ತದೆ! ಹೂವಿನ ಆಕೃತಿ, ಸುವಾಸನೆಗಳಿಗೆ ಆಕರ್‍ಷಿತವಾಗಿ (ಮೋಸ ಹೋಗಿ) ಗಂಡು ಕಣಜವು ಹೂವನ್ನು ಹೆಣ್ಣು ಕಣಜವೆಂದೇ ಭಾವಿಸಿ, ಅದರ ಮೇಲೆ ಕುಳಿತು ಸಣ್ಣಕೊಕ್ಕಿನ ಕೆಳಗೆ ತಲೆಮಾಡಿ, ಹೂವಿನೊಂದಿಗೆ ಹಲವು ಬಾರಿ ಸಂಭೋಗಿಸುತ್ತದೆ! ಕಾರಣ ಹೂವಿನ ಪರಾಗ ರಾಶಿಯು (ಪೊಲನ್ ಗ್ರೇನ್ಸ್) ಕೀಟದ ತಲೆಗೆ ಅಂಟಿಕೊಳ್ಳುತ್ತದೆ. ಕಣಜ ಅಲ್ಲಿಂದ ಹಾರಿ ಅದೇ ಪ್ರಭೇದದ ಇನ್ನೊಂದು ಹೂವನ್ನು ಸಂಧಿಸಿ ಹೀಗೆಯೇ ವರ್‍ತಿಸಿದಾಗ ಆ ಹೂವಿನ ಶಲಾಕಾಗ್ರದಲ್ಲಿ (Stigma) ಪರಾಗ ಕೋಶಗಳ ವಿಲೀನವಾಗುತ್ತದೆ, ಪರಾಗಸ್ಪರ್‍ಶವಾಗುತ್ತದೆ. ಪರಪಾರಾಗಣ ಕ್ರಿಯೆಗಾಗಿ ಈ ಸಸ್ಯ ಕಂಡೊಕೊಂಡ ಉಪಾಯ ಇದು.

ಹಲವು ಜಾತಿಯ ಆರ್‍ಕಿಡ್ ಸಸ್ಯಗಳು ಮಕರಂದದಿಂದ ಕೀಟವನ್ನು ಪರಾಗಸ್ಪರ್‍ಶ ಕ್ರಿಯೆಗೆ ಆಕರ್‍ಷಿಸುತ್ತವೆ. ಆದರೆ ಸುಮಾರು ೩೦ ಪ್ರತಿಶತ ಆರ್‍ಕಿಡ್ ಹೂಗಳು ಮಕರಂದವೇ ಹೊಂದಿರುವುದಿಲ್ಲ. ಆದರೂ ಅವು ಕೀಟವನ್ನು ಅಣಕಿಸುವುದರ ಮೂಲಕ ಆಕರ್‍ಷಿಸುತ್ತವೆ. ಕೋರಿಯಾಂಥಸ್ ಮ್ಯಾಕ್ರಂಥಾ ಎಂಬ ಆರ್‍ಕಿಡ್ ಸಸ್ಯದ ಹೂವಿನ ಪುಷ್ಪದಳವಲಯದ ತುಟಿಯು ಪಾತ್ರೆಯಂತಿದ್ದು, ಅದರಲ್ಲಿ ವಿಷಪೂರಿತ ದ್ರವ ಶೇಖರವಾಗಿರುತ್ತದೆ. ಹೆಣ್ಣು ದುಂಬಿಗಳು ಸೂಸುವಂತೆ ಸುಗಂಧವೂ ಸೂಸುತ್ತವೆ. ಇದರಿಂದ ಗಂಡು ದುಂಬಿ ಆಕರ್‍ಷಿತಗಾಗಿ ಹೂವನ್ನು ಹೆಣ್ಣು ದುಂಬಿಯೆಂದೇ ತಿಳಿದು, ಪುಷ್ಪದಳವಲಯದ ತುಟಿಯ ಕೆಳಭಾಗದಲ್ಲಿ ಕುಳಿತಾಗ ಅದು ದ್ರವದಲ್ಲಿ ಬಿದ್ದುಬಿಡುತ್ತದೆ. ದುಂಬಿ ಅಲ್ಲಿರುವ ಒಂದೇ ಒಂದು ಕಿರಿದಾಗ ದಾರಿಯಿಂದ ಪರಾಗರಾಶಿಯಿಂದಲೇ ಹೊರಬರಬೇಕಗಾಗುತ್ತದೆ. ಅದೇ ಜಾತಿಯ ಇನ್ನೊಂದು ಹೂವಿನಲ್ಲಿಗೆ ಹೋದಾಗ ಪರಾಗಣವಾಗುತ್ತದೆ. ಇಂತಹ ಅನೇಕ ಉದಾಹರಣೆಗಳಿಗೆ ಸಸ್ಯ ಪ್ರಪಂಚದಲ್ಲಿ ಕೊರತೆಯಿಲ್ಲ.
*****