ಪ್ರತಿ ಹಕ್ಕಿಯ ಕೊರಳ ತುಂಬಾ
ಧ್ವನಿಸುವ ಹಾಡು ನನ್ನ ನಿನ್ನ ಪ್ರೇಮ
ನಲಿಯುವ ಉಲಿಯುವ ಹಾಡಾಗಿ
ಸೂರ್ಯ ಕಿರಣ ಚೆಲ್ಲಿದ್ದಾನೆ ಶುಭ ಮುಂಜಾವಿನಲಿ.
ಅರಿಕೆಗೊಂಡ ಪ್ರೀತಿ ಪ್ರತಿ ಹನಿಹನಿ
ಚಿಮ್ಮಿ ಲಹರಿಯ ತೇಲಿ ಸಾಗಿವೆ ಸಾಕ್ಷಿ
ಬೀಜಗಳು ಚಿಗುರುವ ಮೊಳಕೆಯಾಗಿ
ಮರು ಹುಟ್ಟಿನ ಹಸಿರು ರೂಪಕಗಳಲಿ.
ಬಯಲ ಭಾಷೆಯಲಿ ಮೌನ ಮಾತು
ತೆರೆಯದಿದ್ದರು ಅರ್ಥ ಹೊಮ್ಮುವ ನಾದ
ಪ್ರತಿಮೆಗಳು ಹಣತೆಯಲ್ಲಿ ದೀಪಗಳು
ಸಂಜೆ ದೇವರು ಮನೆಯ ಬಿಂಬದಲ್ಲಿ
ಸಾವಿರಾರು ಚಿಕ್ಕೆಗಳ ಫಳಫಳ.
ನೀಲ ರಾಶಿ ನೀರ ರಾಶಿ ಒಲವರಾಶಿ
ಬೀಜ ರಾಶಿಗಳಲಿ ಎದೆಯ ಹದ
ಮುದವಾಗಿ ತೀಡಿತೀಡಿ ಎದ್ದ ಕವಿತೆಗಳು
ದಾರಿಯಲಿ ಸವೆದ ಚಂದ್ರನ ತುಂಬಾ ಬೆಳದಿಂಗಳು.
ಹಕ್ಕಿಯೊಂದು ಹಾರಿಬಂದು ಭಾವ
ಚಂದ್ರನಲಿ ಬೆಳದಿಂಗಳು ತುಂಬಿ
ಅವನ ಬೆಳಕಿಂಡಿ ಇವಳ ಕನಸುಗಳಲಿ
ಬಿಂದು ಬಿಂದು-ವಿನಿಂದು ಚಲಿಸಿದ
ಅಲ್ಲಮನ ರಂಗೋಲಿ ಕಲ್ಯಾಣದ ದಾರಿತುಂಬ.
*****